04 ನವೆಂಬರ್ 2018

ಹಳ್ಳಿಯಲ್ಲಿದೆ "ಭಾರತ", ನೋಡಲು ಒಳಕಣ್ಣು ತೆರೆಯಿರಿ....!


ಸಮಚಿತ್ತ , ಸಮಾಧಾನದಿಂದ ಭಾರತವನ್ನು  ಅವರು ವಿವರಿಸುತ್ತಿದ್ದರು. ಭಾರತದ ಕಲ್ಪನೆಯನ್ನು  ಹೇಳುತ್ತಿದ್ದರು.
 ಪ್ರತೀ ಮಾತುಗಳ ಹಿಂದೆ ಭರವಸೆ ಕಾಣುತ್ತಿತ್ತು, ವಿಶ್ವಾಸ ಇತ್ತು.  ತದೇಕಚಿತ್ತದಿಂದ ಅಷ್ಟೂ ಜನರು ಕೇಳುತ್ತಿದ್ದವರು.
ಹೌದು, ಅವರು ಹಾಗೆ ಮಾತನಾಡುವುದರ ಹಿಂದೆ ಅನುಭವ ಇದೆ. ಇಡೀ ಭಾರತ ಸುತ್ತಾಡಿದ ಅನುಭವ ಇದೆ. ಹಿಂದೆ ಶಂಕರಾಚಾರ್ಯರು ಭಾರತ ಪರಿಕ್ರಮ ಮಾಡಿದ್ದರು ಎಂದು ಓದಿದ್ದೆ, ಆದರೆ ಇಂದು ಅಂತಹದ್ದೇ ಸಂತರ ಮುಂದೆ ಇದ್ದೇವೆ.  ಅವರು ಸೀತಾರಾಮ ಕೆದಿಲಾಯ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಸೇವೆ ಮಾಡುತ್ತಿದ್ದ ಹಾಗೂ ಈಗಲೂ ಸೇವೆ ಮಾಡುತ್ತಿರುವ ಸೀತಾರಾಮ ಕೆದಿಲಾಯ ಭಾರತ ಪರಿಕ್ರಮ ಯಾತ್ರೆ ಕೈಗೊಂಡರು. ಪಾದಯಾತ್ರೆಯ ಮೂಲಕ ಭಾರತವನ್ನು ಸುತ್ತಿದ ಸೀತಾರಾಮ ಕೆದಿಲಾಯರು ಹಳ್ಳಿಗಳ ಸ್ಥಿತಿಗತಿಯ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾರೆ. ಅವರೇ ಮಾತನಾಡಬೇಕು. ಈಗ ಅವರದ್ದು ಭಾಷಣ ಅಲ್ಲ, ಉಪದೇಶವೂ ಅಲ್ಲ. ಅನುಭವದ ಮಾತುಗಳು. ಆ ಮಾತುಗಳು ನಮಗೆ ಸ್ಫೂರ್ತಿಯಾಗಬೇಕು.

ಇತ್ತೀಚೆಗೆ ಪುತ್ತೂರಿನಲ್ಲಿ ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತು. ಮಾತು ಆರಂಭಿಸಿದ್ದೇ, ಎದುರಿನ ಆತ್ಮಕ್ಕೆ ಶಿರಬಾಗಿ. ಇಡೀ ದೇಶದ ಸುತ್ತಿದ ವ್ಯಕ್ತಿ  ಮಾತು ಆರಂಭಿಸಿದ್ದು  ಹೀಗೆ " ಹಿರಿಯರಾದ ಡಾ.ಗೌರಿ ಪೈ ಅವರು ವೇದಿಕೆಗೆ ಬಂದು ಗೌರವಿಸಿದರು, ನಾನೇ ಅಲ್ಲಿಗೆ ಬರಬೇಕಾಗಿತ್ತು, ವೇದಿಕೆ ಬರುವ ಕಷ್ಟ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ.....". ಆತ್ಮಭಾವ ಹೀಗಿರಬೇಕು ಎಂಬ ಸಂದೇಶವನ್ನೇ ಆರಂಭದಲ್ಲಿ ನೀಡುತ್ತಾ ಗ್ರಾಮ ಭಾರತದ ಬಗ್ಗೆ ಸುಮಾರು 2 ಗಂಟೆಗಳ ಕಾಲ ಮಾತನಾಡಿದರು.
ದೇಶದ ಮಾಧ್ಯಮಗಳು ಪಾದಯಾತ್ರೆಯ ಸಂದರ್ಭ ಸಿಕ್ಕಾಗ ಅನೇಕ ಬಾರಿ ಅವರು ಹೇಳಿದ್ದರಂತೆ, " ಈ ದೇಶದಲ್ಲಿ  ಶೇಕಡಾ 95 ರಷ್ಟು ಒಳ್ಳೆಯ ಅಂಶಗಳು ಇವೆ, ಕೇವಲ ಶೇ.5 ರಷ್ಟು ಕೆಟ್ಟ ಅಂಶಗಳು ಇವೆ. ಇಂದು ಈ ಶೇ.5 ರಷ್ಟು ಅಂಶಗಳೇ ಪ್ರತಿನಿಧಿಸುವಂತಾಗಲು ಮಾಧ್ಯಮಗಳೇ ಕಾರಣವಾಗುತ್ತಿವೆ. ಪರಿಸರದಲ್ಲಿ ನೊಣ ಹಾಗೂ ಜೇನು ನೊಣ ಇದೆ.  ಮಾಧ್ಯಮದಗಳು ಮೂಗು ಜೇನುನೊಣದ್ದಾಗಬೇಕು. ದೇಶಕ್ಕೆ ಒಳ್ಳೆಯದನ್ನೇ ನೀಡಬೇಕು " ಎನ್ನುತ್ತಿದ್ದರಂತೆ.

ಇದಕ್ಕೆ ಪೂರಕವಾಗಿ ಹೇಳಿದ ಕೆದಿಲಾಯರು, 5 ವರ್ಷಗಳ ಕಾಲ ಇಡೀ ದೇಶ ಸುತ್ತಾಡಿದೆ. ಒಳ್ಳೆಯದನ್ನು ನೋಡುತ್ತಾ, ಕೇಳುತ್ತಾ, ಮಾತನಾಡುತ್ತಾ ದೇಶದ ಹಳ್ಳಿಗಳಿಗೆ ತೆರಳಿದೆ. ಇದರ ಪರಿಣಾಮ 5 ವರ್ಷಗಳ ಕಾಲ ಒಂದೇ ಒಂದು ದಿನವೂ ದೇಹಕ್ಕೆ ಗ್ಯಾರೇಜ್ ಬೇಕಾಗಿರಲಿಲ್ಲ..." ಇದು ಒಳ್ಳೆಯದರ ಪರಿಣಾಮ ಎಂದರು.

ಭಾರತದ ಆತ್ಮ ಹಳ್ಳಿಯಲ್ಲಿದೆ ನಿಜ.ಇಂದಿಗೂ ಭಾರತದ ಹಳ್ಳಿಗಳಲ್ಲಿ ಜೀವಂತಿಕೆ ಇದೆ. ನೆಮ್ಮದಿ ಇದೆ. ಪರಸ್ಪರ ಸಹಕಾರ, ಸಹಬಾಳ್ವೆ ಇದೆ. ಅನೇಕ ಹಳ್ಳಿಗಳಲ್ಲಿ ನ್ಯಾಯಾಲಯವೇ ಬೇಕಾಗಿಲ್ಲ. ಅಂದರೆ ಜಗಳವೇ ಇಲ್ಲ. ಅದಕ್ಕಿಂತಲೂ ಮಿಗಿಲಾಗಿ ಪ್ರೀತಿ ಇದೆ. ಸಮೃದ್ಧ ಕೃಷಿ ಇದೆ ಎನ್ನುತ್ತಾ ವಿವಿಧ ಉದಾಹರಣೆ ನೀಡಿದರು.

ಭಾರತದ ನಗರಗಳು ಇಂಡಿಯಾ ಆಗಿವೆ. ಇದಕ್ಕೆ ಹೆಚ್ಚು ಕಾಲ ಉಳಿಗಾಲವಿಲ್ಲ. ಮತ್ತೆ ನಿಜವಾದ ಭಾರತ ಕಾಣಲಿದೆ. ಇಂಡಿಯಾ ದೂರವಾಗುತ್ತಿದೆ. ಆಂಗ್ಲರು ಕೊಟ್ಟ ಇಂಡಿಯಾದ ಪರಿಣಾಮವೇ ಇಂದು ಕುಟುಂಬ ಪದ್ಧತಿ ದೂರವಾಗುತ್ತಿದೆ, ಮನುಷ್ಯರ ನಡುವೆ ಪ್ರೀತಿ ದೂರವಾಗುತ್ತದೆ. ಸಹಕಾರ, ಸಹಬಾಳ್ವೆ ಇಲ್ಲವೇ ಇಲ್ಲವಾಗಿದೆ. ಆದರೆ ಹಳ್ಳಿಯಲ್ಲಿ ಇದೆಲ್ಲಾ ಭಿನ್ನವಾಗಿದೆ. ಇಂದು ನಗರದ ಪ್ರಭಾರ ಅಂದರೆ ಇಂಡಿಯಾದ ಪ್ರಭಾವ ದೂರವಾಗಿ ಭಾರತದ ಪ್ರಭಾವ ಹೆಚ್ಚಾಗಲು ಹೆಜ್ಜೆ ಇಡಲೇಬೇಕು ಎನ್ನುವ ಸೀತಾರಾಮ ಕೆದಿಲಾಯರು ಪ್ರತೀ ಹಳ್ಳಿಗೆ , ನಗರಕ್ಕೆ ಇಂದು ಸ್ಫೂರ್ತಿ ನೀಡುತ್ತಿದ್ದಾರೆ. ಸತ್ಯ ದರ್ಶನ ಮಾಡಿಸುತ್ತಿದ್ದಾರೆ. ಎಲ್ಲಾದರೂ ಅವರ ಮಾತುಗಳನ್ನು  ಕೇಳಲೇಬೇಕು. ಒಂದಲ್ಲ ಹತ್ತು ಬಾರಿ. ಏಕೆಂದರೆ ಭವಿಷ್ಯದ "ಭಾರತ"ಕ್ಕಾಗಿ.2 ಕಾಮೆಂಟ್‌ಗಳು:

suresh s koppal ಹೇಳಿದರು...

ನಿಜಕ್ಕೂ ಒಂದು ಅರ್ಥಪೂರ್ಣವಾದ ಆರ್ಟಿಕಲ್.
ಬಾಂಬೆ ಹೋಗಿ ಮುಂಬೈ ಆಗಬಹುದಾದರೆ,
ಇಂಡಿಯಾ ಹೋಗಿ ಭಾರತ ಯಾಕೆ ಆಗಬಾರದು?
ಇಂಡಿಯಾ ಬದಲು ಭಾರತ ಅಂಥ ಹೇಳಿಕೊಳ್ಳುಲು ಹೆಮ್ಮೆ ಆನ್ನಿಸುತ್ತೆ.

@spn3187 ಕನ್ನಡಿಗ ಶಿವಕುಮಾರ ನೇಗಿಮನಿ ಹೇಳಿದರು...

ಕನ್ನಡವನ್ನು ಆಯ್ಕೆ ಮಾಡಿ

ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ... :pray:
ಕನ್ನಡವನ್ನು ಉಳಿಸಿ, ಬೆಳೆಸಿ..
..
https://Www.spn3187.blogspot.in
(already site viewed 1,33,487+)
and
https://T.me/spn3187
(already joined to this group 487+)
Share your friends & family also subcrib (join)