04 ಮಾರ್ಚ್ 2018

ಹಳ್ಳಿಯಲ್ಲೇ ಆರಂಭವಾದ ಕೃಷಿ ವಸ್ತುಗಳ ಮೌಲ್ಯವರ್ಧನೆ.....


ಇತ್ತೀಚೆಗೆ ದಕ್ಷಿಣ ಕನ್ನಡ ಸೇರಿದಂತೆ ಸುಮಾರು 5 ಜಿಲ್ಲೆಗಳಲ್ಲಿ ಸಂಚಲನ ಮೂಡಿತು. ಕಾರಣ ಇಷ್ಟೇ, ಅಡಿಕೆಯನ್ನು ನಿಷೇಧ ಮಾಡಲಾಗುತ್ತದೆ ಎಂಬ ಗುಲ್ಲು. ಬಹುತೇಕ ಅಡಿಕೆ ಬೆಳೆಗಾರರು ಇದೇ ಸತ್ಯ ಎಂದು ನಂಬಿದರು. ಅದರಾಚೆಗೆ ಎಲ್ಲೂ ನೋಡಿಲ್ಲ. ವಾಸ್ತವವಾಗಿ ಅಡಿಕೆ ಬೆಳೆಯನ್ನು ನಿಷೇಧ ಮಾಡುವುದಕ್ಕೆ ಅಷ್ಟು ಸುಲಭ ಇಲ್ಲ. ಹಾಗೆಂದು ಸುಮ್ಮನೆ ಕೂರುವ ಸ್ಥಿತಿಯೂ ಇಲ್ಲ. ಆದರೆ ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಇಂದಿಗೂ ಹೆಚ್ಚಾಗಿ ಯೋಚನೆ ನಡೆಯಬೇಕಿದೆ. ಅಡಿಕೆ ಪರ್ಯಾಯ ಬಳಕೆಯತ್ತ ಚಿತ್ತ ಮಾಡಬೇಕಿದೆ. ಅದರ ಜೊತೆಗೆ ಉಪಬೆಳೆಯತ್ತಲೂ ಗಮನಹರಿಸಬೇಕಿದೆ.

ಹಾಗೆ ನೋಡಿದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇದೇ ಸಮಸ್ಯೆ. ಅಡಿಕೆಗೆ ನಿಷೇಧದ ಭೀತಿಯಾದರೆ ಉಳಿದ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗೆ ಧಾರಣೆ ಕುಸಿತ. ಇದೇ ಕಾರಣದಿಂದ ಮಾನಸಿಕ ಧೈರ್ಯ ಕಳೆದುಕೊಂಡು ರೈತರು ಕಾಣದ ಲೋಕಕ್ಕೆ ಸಾಗುತ್ತಿದ್ದಾರೆ. ಸುಮಾರು 3000 ಕ್ಕೂ ಅಧಿಕ ಸಂಖ್ಯೆಯ ಪಟ್ಟಿ ಈಗ ಇದೆ. ಇದಕ್ಕೆಲ್ಲಾ ಕಾರಣ ಕೇಳಿದರೆ ಹತ್ತಾರು ಪಟ್ಟಿ. ಇದೆಲ್ಲಾ ಸರಕಾರಗಳಿಗೆ ಅರ್ಥವೇ ಆಗುವುದಿಲ್ಲ. ರಾಜಕೀಯವೇ ಮೇಳೈಸುವ ಈ ಕಾಲದಲ್ಲಿ ರೈತನ ಭಾಷೆ ಅರ್ಥವಾಗದು.ರೈತನ ಬೆಳೆಗೆ ಧಾರಣೆಯೂ ಏರದು, ಆತನ ಸ್ಥಿತಿಯೂ ಉತ್ತಮವಾಗದು. ಅನ್ನ ನೀಡುವ ಮಣ್ಣು ಕೈಕೊಟ್ಟಾಗ ರೈತನಿಗೆ ನಿರಾಸೆ ಸಹಜ. ಬೆಳೆಸಿದ ಬೆಳೆಗೆ ಧಾರಣೆ ಸಿಗದೇ ಇದ್ದಾಗ, ಬೆಳೆದ ಬೆಳೆಯೇ ನಿಷೇಧವಾಗುವ ಸಂದರ್ಭ ಬಂದಾಗ ಆಕ್ರೋಶ, ಅಸಮಾಧಾನ ಸಹಜ. ಹಾಗಾಗಿ ಈಗ ನಡೆಯಬೇಕಿರುವುದು ಸಮಾಧಾನದಿಂದ ಭವಿಷ್ಯದ ಚಿಂತನೆ. ಪರ್ಯಾಯದ ಆಲೋಚನೆ, ಮೌಲ್ಯವರ್ಧನೆಯ ಯೋಚನೆ. ಅನೇಕ ವರ್ಷಗಳಿಂದ ಬೆಳೆದ ಬೆಳೆಯನ್ನು ಏಕಾಏಕಿ ಬದಲಾಯಿಸುವುದು ಕಷ್ಟದ ಮಾತು. ಹಾಗಿದ್ದರೂ ಮಾನಸಿಕ ಸ್ಥಿತಿ ಬದಲಾಯಿಸಬೇಕಿದೆ. ಆ ಮಣ್ಣಿಗೆ ಹೊಂದುವ ಬೆಳೆಯತ್ತ ಮನಸ್ಸು ಮಾಡಬೇಕಾಗುತ್ತದೆ. ಈ ಬಗ್ಗೆ ಯೋಚನೆ ಮಾಡಿ ಕಾರ್ಯಗತ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರೊಬ್ಬರ ಕತೆ ಇಲ್ಲಿದೆ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯೇ ಪ್ರಮುಖ.ಅದರಲ್ಲೂ ಅಡಿಕೆ ,ರಬ್ಬರ್, ಕಾಳುಮೆಣಸು ಕೃಷಿಯ ಭರಾಟೆ.ಆದರೆ ಧಾರಣೆಯಲ್ಲಿ  ಸದಾ ಏರುಪೇರು  ಮಾಮೂಲು.ಈ ಹಂತದಲ್ಲಿ ಪುತ್ತೂರಿನ ಬಲ್ನಾಡಿನ ಕೃಷಿಕ ವೆಂಕಟಕೃಷ್ಣ ಮನಸ್ಸು ಮಾಡಿದ್ದು ಗೇರುಕೃಷಿಯತ್ತ.ಈಗ ಇಳುವರಿ ಆರಂಭವಾಗಿದೆ.ಯಶಸ್ಸು ನೋಡಿ ಈಗ ಗೇರುಕೃಷಿಯನ್ನು ವಿಸ್ತರಣೆಯೂ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕಾವಿನಲ್ಲಿರುವ ಮಧುಮಲ್ಟಿಪಲ್ಸ್ ಎಂಬ ಸಂಸ್ಥೆಯ ಮಾಲಕರೂ ಆಗಿರುವ ವೆಂಕಟಕೃಷ್ಣ ಅವರು ಪುತ್ತೂರಿನ ಬಲ್ನಾಡಿನಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಸುಮಾರು 600 ಗೇರು ಗಿಡಗಳನ್ನು  ನೆಟ್ಟಿದ್ದರು.ಮನೆಯ ಹಿಂಬದಿಯ ಗುಡ್ಡದಲ್ಲಿ  ರಬ್ಬರ್ ಮಾತ್ರವೇ ಬೆಳೆಯಬಹುದಾದ ಪ್ರದೇಶ ಅದಾಗಿತ್ತು. ಒಂದಷ್ಟು ಭಾಗದಲ್ಲಿ  ರಬ್ಬರ್ ಕೂಡಾ ನಾಟಿ ಮಾಡಿದ್ದರು. ಅದರ ಜೊತೆಗೆ ಗೇರು ಗಿಡಗಳನ್ನೂ ಆಸಕ್ತಿಯಿಂದ ಕೃಷಿ ಮಾಡಿದ್ದರು. ಮಿಶ್ರ ಬೆಳೆಯ ಕಲ್ಪನೆಯನ್ನು  ಹೊಂದಿದ್ದ ವೆಂಕಟಕೃಷ್ಣ ಆರಂಭದಲ್ಲಿ  600 ಗೇರುಗಿಡಗಳನ್ನು  ಆಧುನಿಕ ರೀತಿಯಲ್ಲಿ 10 ಅಡಿ ಅಂತರದಲ್ಲಿ ಅಂದರೆ ಅಲ್ಟ್ರಾ ಡೆನ್ಸಿಟಿಯಲ್ಲಿ  ಗಿಡ ನೆಟ್ಟಿದ್ದರು. ಗಿಡದ ಬೆಳವಣಿಗೆ ನೋಡಿ ಖುಷಿಯಾದ ಬಳಿಕ ಮುಂದಿನ ವರ್ಷ ಮತ್ತೆ 300 ಗೇರು ಗಿಡಗಳನ್ನು  ಈ ವರ್ಷ 200 ಗೇರು ಗಿಡಗಳನ್ನು  ನೆಟ್ಟಿದ್ದಾರೆ.ಅಂದರೆ ಈಗ ಒಟ್ಟು 1100 ಗೇರು ಗಿಡಗಳು ಅವರ ತೋಟದಲ್ಲಿ  ಇದೆ. ಇಳುವರಿ ಆರಂಭವಾಗಿದೆ. ರಬ್ಬರ್, ಅಡಿಕೆ ಧಾರಣೆ ಕುಸಿತವಾದಾಗಲೂ ವೆಂಕಟಕೃಷ್ಣ ಅವರಿಗೆ ಕೃಷಿ ನಷ್ಟ ಎಂದೆನಿಸಲಿಲ್ಲ. ಗೇರು ಅವರಿಗೆ ಆಧಾರವಾಯಿತು.
ಇಲ್ಲಿ ಗಮನಿಸಬೇಕಾದ್ದು ಎಂದರೆ ವೆಂಕಟಕೃಷ್ಣ ಅವರು ತಮ್ಮದೇ ಉದ್ಯಮ ಹೊಂದಿದ್ದಾರೆ. ಅಲ್ಲಿ ಅವರು ಹೊಸ ಪ್ರಯೋಗ ಮಾಡಿದರು. ಗೇರು ಹಣ್ಣಿನ ಸೋಡಾ ತಯಾರು ಮಾಡಿದರು. ಗೇರು ಹಣ್ಣನ್ನು ಸಂಸ್ಕರಣೆ ಮಾಡಿ ಅದನ್ನು ಪೇಯವಾಗಿ ಬಳಸಿದರು.  ಈಗಾಗಲೇ ರಾಜ್ಯದ ವಿವಿದೆಡೆಯಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.ಕಳೆದ ವರ್ಷ ಆಸುಪಾಸಿನ ತೋಟಗಳಿಂದ ಗೇರು ಹಣ್ಣುಗಳನ್ನು ಖರೀದಿ ಮಾಡುತ್ತಿದ್ದರು.ಈ ವರ್ಷವೂ ತಮ್ಮದೇ ಜಮೀನಿನ ಗೇರು ಹಣ್ಣನ್ನು  ಬಳಕೆ ಮಾಡುವುದರ ಜೊತೆಗೆ ಖರೀದಿ ಕೂಡಾ ಮಾಡಿದ್ದಾರೆ. ಈಗ ಗೇರು ಹಣ್ಣು ಕೂಡಾ ಮೌಲ್ಯವರ್ಧನೆಯಾಗುತ್ತಿದೆ. ಈ ಮೂಲಕ ರೈತನಿಗೆ ಆದಾಯವೂ ಹೆಚ್ಚಾಗುತ್ತದೆ.
ಒಂದು ಪುಟ್ಟ ಹಳ್ಳಿಯನ್ನು ಗೇರುಹಣ್ಣಿನ ಸೋಡಾ ತಯಾರು ಆದಾಗ ಆ ಊರಿನ ಒಂದಷ್ಟು ಕೃಷಿಕರ ತೋಟದ ಹಣ್ಣುಗಳೂ ಖರೀದಿಯಾದವು. ಮಾರುಕಟ್ಟೆಯೂ ಉತ್ತಮವಾಯಿತು. ರೈತನ ಬದುಕಿಗೆ ಆಧಾರವಾಯಿತು.
ಬಿಜಾಪುರ ಜಿಲ್ಲೆಗೆ ಪ್ರವಾಸ ಹೋಗಿದ್ದಾಗ ಕೃಷಿಕರೊಬ್ಬರು ತಮ್ಮ ಅನುಭವ ಬಿಚ್ಚಿಡುತ್ತಾ ಅಲ್ಲಿನ 5 ಎಕರೆ ಜಾಗದಲ್ಲಿ ನಿಂಬೆ, ಮಾವು, ಚಿಕ್ಕು, ಬೆಟ್ಟದ ನೆಲ್ಲಿ, ತೆಂಗು, ಅಂಜೂರ, ಬಳವಕಾಯಿ, ಹಲಸು, ಸರ್ವಋತು ಮಾವು, ಜೋಳ ಮೊದಲಾದ ಕೃಷಿ ವೈವಿಧ್ಯಗಳಿವೆ. ಎಪ್ಪತ್ತು ನಿಂಬೆ ಮರಗಳಲ್ಲಿ ನಿರಂತರ ಇಳುವರಿಯೂ ಇದೆ ಅಂದರೆ ಆದಾಯವೂ ನಿರಂತರ.
ಇಂದು ಬಹುಪಾಲು ಕಡೆಯೂ ಆಗಬೇಕಾಗಿರುವುದು, ರೈತನ ಬದುಕಿಗೆ ಆಧಾರವಾಗಬೇಕಾದ್ದು ಇಂತಹ ಪುಟ್ಟ ಪುಟ್ಟ ದಾರಿಯ ಮೌಲ್ಯವರ್ಧನೆಗಳು, ಉಪಬೆಳೆಗಳು.  ಇತ್ತೀಚೆಗೆ ದಕ್ಷಿಣ ಕನ್ನಡ ಸೇರಿದಂತೆ ಸುಮಾರು 5 ಜಿಲ್ಲೆಗಳ ಕೃಷಿಕರ ಆತಂಕಕ್ಕೂ ಪರಿಹಾರವೂ ಇದೆ. ಅಡಿಕೆಯ ಮೌಲ್ಯವರ್ಧನೆಯ ಜೊತೆಗೆ ಉಪಬೆಳೆಯತ್ತ ದೃಷ್ಟಿ. ಈ ಕ್ಷಣವೇ ಬರುವ ಪ್ರಶ್ನೆ ಅಡಿಕೆ ಮೌಲ್ಯವರ್ಧನೆ ಹೇಗೆ?. ಇದಕ್ಕೆ ವಿಟ್ಲ ಬಳಿಯ ಬದನಾಜೆ ಶಂಕರ ಭಟ್ ಅವರು ದಾರಿ ತೋರುತ್ತಾರೆ, ಶಿವಮೊಗ್ಗದ ನಿವೇದನ್ ಪರಿಹಾರ ಸೂಚಿಸುತ್ತಾರೆ. ಬೆಳ್ತಂಗಡಿಯಲ್ಲಿ ತಯಾರಾಗುವ ಅಡಿಕೆ ಸಿಪ್ಪೆಯ ಹೊಗೆಬತ್ತಿ ಮಾದರಿಯಾಗುತ್ತದೆ. ಹೀಗಾಗಿ ದಾರಿ ಕಾಣದೇ ಇರುವ ಪ್ರಮೇಯ ಈಗಿಲ್ಲ. ಹಾಗೆಂದು ಅಡಿಕೆ ಏಕಾಏಕಿ ನಿಷೇಧವಾಗದು, ನಿಷೇಧದ ಭೀತಿಯೂ ಇಲ್ಲ. ಸರಕಾರವೂ ನಿಷೇಧ ಮಾಡುತ್ತದೆ ಎಂದೂ ಹೇಳಿಲ್ಲ ಎಂದು ಸುಮ್ಮನೆ ಕೂರುವ ಹಾಗಿಲ್ಲ. ಹುಡುಕಾಟ, ಪರ್ಯಾಯದ ಬಗ್ಗೆ ನಿರಂತರ ಚರ್ಚೆಯಾಗಲೇಬೇಕಿದೆ.


( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )ಕಾಮೆಂಟ್‌ಗಳಿಲ್ಲ: