26 ಫೆಬ್ರವರಿ 2018

ಕಾಡುಪ್ರಾಣಿ ಹಾವಳಿ ತಡೆಯ ಕೃಷಿಕನ ಸಂಶೋಧನೆಗೆ ಇಲಾಖೆಯ ಮನ್ನಣೆ...


ಹಂದಿಗಳ ವಿಪರೀತ ಕಾಟ, ಕಾಡುಕೋಣದಿಂದ ಕೃಷಿಯೇ ನಾಶ, ಆನೆಗಳ ಧಾಳಿಯಿಂದ ಭಯಗೊಂಡ ಕೃಷಿಕ.... ಪರಿಹಾರ ಇಲ್ಲದ ಕೃಷಿಕ...!. ಗ್ರಾಮೀಣ ಭಾಗದ ಕೃಷಿಕರ ಈ ಗೋಳಿಗೆ ಉತ್ತರ ಎಲ್ಲೂ ಇಲ್ಲ. ಇಲಾಖೆಯೂ ಕೈಚೆಲ್ಲಿ ಕುಳಿತಿರುತ್ತದೆ. ಆದರೆ ಕೃಷಿಕನೇ ಸಂಶೋಧಿಸಿದ ತಂತ್ರಜ್ಞಾನಕ್ಕೆ ಈಗ ಇಲಾಖೆಯೇ ಭೇಷ್ ಎಂದಿದೆ. ಮನ್ನಣೆ ನೀಡಿದೆ.


ಇಡೀ ದೇಶದಲ್ಲಿ ಗಮನಿಸಿದರೆ ಸುಮಾರು 400 ರಿಂದ 500 ಕೋಟಿ ರೂಪಾಯಿಯ ಕೃಷಿ ವಸ್ತುಗಳು ಕೇವಲ ಕಾಡು ಪ್ರಾಣಿಯ ಹಾವಳಿಯಿಂದ ನಾಶವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ವಿಪರೀತ. ಇಲ್ಲಿ ಕೃಷಿಗೆ ಕಾಡು ಪ್ರಾಣಿಗಳ ಹಾವಳಿಯಾದರೆ ಒಂದು ಕಡೆಯಾದರೆ ಪರಿಹಾರ ಕಾಣದೆ ಕಂಗಾಲಾದ ಕೃಷಿಕರು ಮತ್ತೊಂದು ಕಡೆ. ಹಾಗಂತ ಕಾಡು ಪ್ರಾಣಿಗಳನ್ನು ಕೃಷಿಕರು ಕೊಲ್ಲುವ ಹಾಗಿಲ್ಲ. ಅದೂ ಪರಿಸರದ ಒಂದು ಭಾಗ. ಕಾಡು ಪ್ರಾಣಿಯೂ ಉಳಿಯಬೇಕು, ಕೃಷಿಯೂ ಉಳಿಯಬೇಕು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೃಷಿಕರು ಸೋತು ಹೋದದ್ದೇ ಹೆಚ್ಚು. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿ ವಿವಿಧ ಪ್ರಯತ್ನ ಮಾಡಿ ಗೆಲುವು ಸಾಧಿಸಿದ ಕೃಷಿಕರು ಕಡಿಮೆ. ಅಂತಹ ಅಪರೂಪದ ಕೃಷಿಕ, ಸವಾಲನ್ನು ಸ್ವೀಕರಿಸಿದ ಕೃಷಿಕ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಸಮೀಪದ ಕೈಪಂಗಳ ರಾಜಗೋಪಾಲ ಭಟ್. ಈಗ ಇವರ ಪ್ರಯತ್ನ ಯಶಸ್ಸು ಕಂಡು ಕೇರಳ ಅರಣ್ಯ ಇಲಾಖೆಯೇ ಈಗ ಪುರಸ್ಕಾರ ನೀಡಿದೆ. ಇಲಾಖೆಯೇ ಈ ತಂತ್ರ ಬಳಸಿದೆ.

ಏನಿದು ಪ್ರಯತ್ನ ?
ರಾಜಗೋಪಾಲ ಕೈಪಂಗಳ ಇಲೆಕ್ಟ್ರಾನಿಕ್ಸ್ ಪದವಿಧಾರರಾಗಿದ್ದು, ಕೆಲವು ವರ್ಷ ರಾಷ್ಟ್ರದ ವಿವಿಧಡೆ ಮತ್ತು ವಿದೇಶದಲ್ಲಿ ಮಾರುಕಟ್ಟೆ ವಿಭಾಗಕ್ಕೆ ಸಂಬಂಧಿಸಿ ದುಡಿದಿದ್ದರು. ಉದ್ಯೋಗಕ್ಕೆ ತಿಲಾಂಜಲಿ ನೀಡಿ ಊರಿಗೆ ಮರಳಿ ಕೃಷಿ ಮಾಡುತ್ತಿರುವ ಇವರು ಸದಾ ಹೊಸತು ಹಾಗೂ ಸವಾಲನ್ನು ಸ್ವೀಕರಿಸುವ ಗುಣ ಉಳ್ಳವರು.
ಕೃಷಿ ಗದ್ದೆ-ತೋಟಗಳಿಗೆ ಕಾಡು ಪ್ರಾಣಿಗಳು ನುಗ್ಗಿ ಕೃಷಿ ಹಾಳುಮಾಡುವ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಎಲ್.ಇ.ಡಿ. ಬಲ್ಬ್ ಉಪಕರಣದ ಮೂಲಕ ಯಶಸ್ಸು ಕಂಡಿರುವ ರಾಜಗೋಪಾಲ ಭಟ್ ಕೈಪಂಗಳ ತಮ್ಮ ಅನುಭವವನ್ನು ಅತ್ಯಂತ ಆಸಕ್ತಿಯಿಂದ ವಿವರಣೆ ನೀಡುತ್ತಾರೆ.
ಕಾಡಿನಲ್ಲಿ ನೀರು, ಆಹಾರಗಳು ಲಭಿಸದಿರುವಾಗ ಅರಣ್ಯದಂಚಿನ ಪ್ರದೇಶದ ಕೃಷಿಭೂಮಿಗೆ ಧಾಳಿಯಿಡುವ ಪ್ರಾಣಿಗಳಿಂದ ಕೃಷಿಭೂಮಿಯನ್ನು ರಕ್ಷಿಸಲು ಅನ್ಯಮಾರ್ಗವಿಲ್ಲದೇ ಈ ಪ್ರಯೋಗವನ್ನು ನಡೆಸಬೇಕಾಯಿತು ಎನ್ನುತ್ತಾರೆ.
ಕೃಷಿ ತೋಟಗಳಿಗೆ ನುಗ್ಗುವ ಹಂದಿ, ಕಾಡಾನೆ ಮೊದಲಾದವುಗಳು ಅಧಿಕ ಪ್ರಭೆ ಬೀರುವ ಬೆಳಕಿಗೆ ಹೆದರಿ ಹಿಂದಕ್ಕೆ ಓಡುತ್ತದೆ. ಈ ಬೆಳಕಿಗೆ ತಮ್ಮ ದಾರಿಯನ್ನು ಬದಲಿಸುತ್ತದೆ. ಆದರೆ ಬೆಳಕನ್ನು ಎತ್ತರದಲ್ಲಿ ಹಾಕಿದರೆ ಅದು ಪ್ರಯೋಜನ ಸಿಗದು. ಈ ಪ್ರಖರ ಬೆಳಕು ಪ್ರಾಣಿಗಳ ಕಣ್ಣಿಗೆ ನೇರವಾಗಿ ಸಿಗುವಂತೆ ಆಗಬೇಕು. ಈ ಹಿಂದೆ ಮಂಗನ ಓಡಿಸಲು ಲೇಸರ್ ಬೆಳಕು ಉಪಯೋಗ ಮಾಡುತ್ತಿದ್ದರು. ಅದೇ ಮಾದರಿಯಲ್ಲಿ ಎಲ್‍ಇಡಿ ಕೂಡಾ ಬಳಕೆಯಾಗುತ್ತದೆ.
ಸುಮಾರು ಎರಡೂವರೆ ವರ್ಷಗಳಿಂದ ಕ್ರಿಯಾಶೀಲ ತಂತ್ರಜ್ಞಾನಗಳ ಅಳವಡಿಕೆಗೆ ಪ್ರಯತ್ನಿಸಿದ ಕೈಪಂಗಳದ ರಾಜಗೋಪಾಲ ಭಟ್ ಈಗ ಉಪಕರಣವನ್ನು ತಯಾರಿಸಿದ್ದಾರೆ.  ಕಾಡು ಹಂದಿಗಳು ಸಾಮಾನ್ಯವಾಗಿ ತಲೆಬಗ್ಗಿಸಿ ಲಕ್ಷ್ಯದತ್ತ ಮುನ್ನುಗುತ್ತಿರುವ ಕಾರಣ 29 ಸೆಂಟಿಮೀಟರ್ ಎತ್ತರದಲ್ಲಿ ನಿಲ್ಲುವಂತೆ ನಾಲ್ಕೂದಿಕ್ಕುಗಳಿಗೂ ಬೆಳಕು ಬೀಳುವ ಪೋಕಸ್ ಆಗುವ ಬಲ್ಬ್ ಇರುವಂತೆ ಈ ಬಲ್ಬ್ ಇಡಬೇಕಾಗುತ್ತದೆ. ರಾತ್ರಿ ಇಡೀ ಬೆಳಕು ಹರಿಯುತ್ತಲೇ ಇರಬೇಕು. 50 ಮೀಟರ್‍ಗಳಷ್ಟು ಪ್ರಭೆ ನೀಡುವ ಈ ಲೈಟ್‍ಗಳನ್ನು ತಮ್ಮ ಅಡಿಕೆ ತೆಂಗು, ಬಾಳೆ ಸಹಿತ ಇತರ ಕೃಷಿ ಭೂಮಿಯ ಸುತ್ತಲೂ ಕಳೆದ ಒಂದೂವರೆ ವರ್ಷಗಳಿಂದ ಅಳವಡಿಸಿ ಯಶಸ್ವಿಯಾಗುತ್ತಿದೆ. ಇಲ್ಲಿ ಪ್ರಾಣಿಗಳ ಕಣ್ಣಿನ ಅಂದಾಜು ಮೂಲಕ ಬಲ್ಭ್ ಅಳವಡಿಕೆ ಮಾಡಬೇಕು ಎನ್ನುವ ರಾಜಗೋಪಾಲ ಭಟ್ 8 ಅಡಿ ಎತ್ತರದಲ್ಲಿ ಕಾಡಾನೆಗಳಿಗೆ 7 ಅಡಿ ಎತ್ತರದಲ್ಲಿ ಕಾಡುಕೋಣಗಳ ಹಾವಳಿ ತಡೆಗೆ ಬಲ್ಬ್ ಅಳವಡಿಕೆ ಮಾಡಬೇಕಾಗುತ್ತದೆ ಎಂದು ವಿವರಣೆ ನೀಡುತ್ತಾರೆ.
ಇವರ ಈ ತಂತ್ರಜ್ಞಾನ ಪ್ರಚಾರ ಪಡೆಯುತ್ತಲೇ ಕೇರಳದ ಅರಣ್ಯ ಇಲಾಖೆಯು ಆನೆಗಳ ಹಾವಳಿ ತಡೆಗೆ ಪ್ರಯತ್ನ ಮಾಡಿತು.ಯಶಸ್ಸು ಕಂಡಿತು, ಇಂದು ಅರಣ್ಯ ಇಲಾಖೆಯೇ ಈ ಕೃಷಿಕನಿಗೆ ಭೇಷ್ ಎಂದಿದೆ. ಇದೆಲ್ಲಾ ಒಬ್ಬ ಕೃಷಿಕನಿಗೆ ಹೆಮ್ಮೆಯಾಗುವುದು  ಒಂದು ಕಡೆಯಾದರೆ ಸಮಸ್ತ ಕೃಷಿಕರಿಗೂ ಹೆಮ್ಮೆಯ ಸಂಗತಿ.
ಇಲ್ಲೊಂದು ವಿಶೇಷ ಇದೆ, ಈ ಹೊಸದಾದ ಸಂಶೋಧನೆ ತನ್ನ ಸ್ವತ್ತಲ್ಲ ಕೃಷಿಕರದ್ದೇ ಸೊತ್ತೆಂದು ಹೇಳುವ ರಾಜಗೋಪಾಲ ಭಟ್ ಯಾರಿಗೆ ಬೇಕಾದರೆ ಈ ತಂತ್ರವನ್ನು ಹೇಳಿಕೊಡುತ್ತಾರೆ. ಹೀಗಾಗಿ ಸಮಸ್ತ ಕೃಷಿಕರಿಗೂ ಮಾದರಿಯಾಗಿದ್ದಾರೆ. ಯಾರು ಬೇಕಾದರೂ ಸಂಪರ್ಕ ಮಾಡಿದರೆ ಮಾಹಿತಿ ಕೊಡುತ್ತೇನೆ ಎಂದೂ ಹೇಳುತ್ತಾರೆ.

ಅನೇಕ ಸಂದರ್ಭದಲ್ಲಿ ಕೃಷಿಕರು ಸೋಲುವುದಕ್ಕಿಂತ ವ್ಯವಸ್ಥೆ ಸೋಲುವಂತೆ ಮಾಡುತ್ತದೆ. ಸವಾಲುಗಳನ್ನು ಸ್ವೀಕರಿಸಲು ಕಷ್ಟವಾಗಿ , ಪರಿಹಾರ ಕಾಣದೇ ಕೃಷಿಯೇ ನಷ್ಟ ಎನ್ನುವುದು  ಕಾಣುತ್ತದೆ. ಯುವ ಕೃಷಿಸಮುದಾಯಕ್ಕೆ ಇದೇ ಕಾಣಿಸುತ್ತದೆ. ಆದರೆ ಸವಾಲುಗಳನ್ನು ಸ್ವೀಕರಿಸಿ ಸಂಶೋಧಿಸಿ, ಸತತ ಪ್ರಯತ್ನ ಮಾಡಿ ಇಡೀ ಕೃಷಿಕ ಸಮುದಾಯಕ್ಕೆ ಸಿಗುವ ಇಂತಹ ಕೊಡುಗೆ ಮತ್ತೆ ಭರವಸೆ ಮೂಡಿಸುತ್ತದೆ. ಹೀಗಾಗಿ ರಾಜಗೋಪಾಲ ಕೈಪಂಗಳ ಭಿನ್ನ ಕೃಷಿಕರಾಗಿ ಕಾಣುತ್ತಾರೆ. ಕೃಷಿಗೆ, ಕೃಷಿಕರಿಗೆ ಭರವಸೆ ಮೂಡಿಸುವ ಕೃಷಿರಾಗಿ ಕಾಣುತ್ತಾರೆ.
(ರಾಜಗೋಪಾಲ ಭಟ್ ಸಂಪರ್ಕ - 09061674679 )


( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

ಕಾಮೆಂಟ್‌ಗಳಿಲ್ಲ: