18 ಸೆಪ್ಟೆಂಬರ್ 2015

ನದಿ ಮೂಲ ಸೃಷ್ಟಿಸೋಣ. . ನದಿ ತಿರುಗಿಸೋಣ. .!                                                           (ಚಿತ್ರ - ಇಂಟರ್ನೆಟ್ ))

ಮೊನ್ನೆ ಮಿತ್ರನೊಬ್ಬ ಸಿಕ್ಕಿದ, ಆತ ಕೇಳಿದ ಪ್ರಶ್ನೆ ಇಷ್ಟೇ, ಅಲ್ಲಾ ಮಾರಾಯ, ಎತ್ತಿನಹೊಳೆ ಯೋಜನೆಯಾದ್ರೆ ನಿನಗೇನು ನಷ್ಟ?, ನಮಗೂ ಬೇರೆ ಬೇರೆ ಕಡೆಯಿಂದ ನೀರು ಬರುತ್ತಲ್ಲಾ. . .

ಪರಿಚಯಸ್ಥರೊಬ್ಬರು  ಮೊನ್ನೆ ಮಾತನಾಡುತ್ತಿದ್ದರು, ಒಂದು ಹೊಸ ನದಿಯನ್ನು ನಮಗೆ ಸೃಷ್ಟಿಸಲು ಸಾಧ್ಯವಿದೆಯಾದರೆ ನದಿ ತಿರುಗಿಸಬಹುದು, ನೀರಿನ ಮೂಲವನ್ನು  ಮರುಸೃಷ್ಟಿ ಮಾಡಬಹುದಾದರೆ ಇನ್ನೊಂದು ಯೋಜನೆ ಹಾಕಿಕೊಳ್ಳಬಹುದು, ಇದೆರಡೂ ಅಸಾಧ್ಯ ಎಂದಾದರೆ ನದಿ ತಿರುವು ಅಥವಾ ಪರಿಸರದ ಇಚ್ಚೆಗೆ ವಿರುದ್ದವಾದ ಕೆಲಸ ಮಾಡಲೇಬಾರದು.

ಮತ್ತೊಬ್ಬ ಗೆಳೆಯ ಹೇಳಿದ, ಅಲ್ಲಾರೀ, ಇಷ್ಟೊಂದು ದೊಡ್ಡ ಗಲಾಟೆ ಮಾಡೋ ಅವಶ್ಯಕತೆ ಇದಿಯಾ, ಕುಡಿಯಲು ನೀರಿಲ್ಲ, ಅನೇಕ ವರ್ಷಗಳಿಂದ ನಮ್ಮ ಗಂಟಲು ಒಣಗಿದೆ, ಕಲುಷಿತ ನೀರೇ ಗತಿಯಾಗಿದೆ, ಕ್ಲೋರೈಡ್‍ಯುಕ್ತ ನೀರೇ ಗತಿ, ಕೊಳವೆ ಬಾವಿ  700 ಅಡಿ ಹೋದರೂ ಸರಿಯಾಗಿ ನೀರಿಲ್ಲ, ಕೃಷಿ ಮಾಡಿ ಬದುಕು ಸಾಗಿಸೋದೇ ಕಷ್ಟವಾಗಿದೆ, ನಮ್ಮದೇ ನಾಡಿನ ಜನ, ಅವರಿಗೆ ನೀರು ಕೊಟ್ಟರೆ ಏನಾಗುತ್ತೆ, ಅದೇಗೋ ಮಳೆ ನೀರು ತಾನೆ?. .

ಇದೆಲ್ಲಾ ಪ್ರಶ್ನೆಗಳ ಬಳಿಕ ಎತ್ತಿನಹೊಳೆ ಯೋಜನೆ ಕಡೆಗೇ ಮನಸ್ಸು ಇಳಿಯಿತು. ಮೌನದಿಂದಲೇ ಉತ್ತರ ಹುಡುಕಹೊರಟಾಗ, ಕುಡಿಯುವ ನೀರು ವಿತರಣೆಗೆ, ಅಲ್ಲಿನ ಜನರಿಗೆ ನೀರು ನೀಡುವುದಕ್ಕೆ ವಿರೋಧ ಇಲ್ಲವೇ ಇಲ್ಲ, ಅಲ್ಲಿನ ಜನರ ಸಂಕಷ್ಟ ನೋಡಿದರೆ ಖಂಡಿತವಾಗಿಯೂ ನೀರು ನೀಡಲೇಬೇಕು. ಆದರೆ ಈ ಯೋಜನೆಯ ಬಗ್ಗೆ ಮಾತ್ರವೇ ವಿರೋಧ.ಏಕೆಂದರೆ ಇದು ಯಶಸ್ಸು ಹೇಗೆ ಸಾಧ್ಯ. .?

ಈಗ ಅವರು ಹೇಳುವುದು  ಮಳೆಗಾಲದ ನೀರು ಸರಬರಾಜು ಮಾತ್ರಾ. . !, ಆದರೆ ಈ ಯೋಜನೆಯ  ಸಮಗ್ರ ವರದಿಯಲ್ಲಿ  ಅದಕ್ಕಿಂತ ಭಿನ್ನವಾಗಿದೆ. ಈ ಬಗ್ಗೆ ಅಧಿಕೃತವಾಗಿ ಮಾತನಾಡಲು ಇನ್ನೂ ಕಾಲಾವಕಾಶ ಬೇಕು, ಏಕೆಂದರೆ ಆ ವರದಿಯ ಅಧ್ಯಯನ ನಾನಿನ್ನೂ ಮಾಡಿಲ್ಲ, ಇನ್ನೂ ಕಾಲಾವಕಾಶ ಬೇಕು. ಏಕೆಂದರೆ ವರದಿಯ ಆಳಕ್ಕೆ ಇಳಿಯಲು ಸಮಯ ಬೇಕು.ಆದರೆ ಮೇಲ್ನೋಟದ ಸಂಗತಿಯೇ ಈ ಯೋಜನೆ ಯಶಸ್ಸು ಕಾಣದು ಎಂದು ಹೇಳುತ್ತದೆ.ಮಳೆಗಾಲದ ನೀರು ಎಂದು ಹೇಳುವ ಆಳುವ ಮಂದಿ, ಅಲ್ಲಿನ ಜನರಿಗೆ 24 ಟಿಎಂಸಿ ನೀರು ಕೊಡುತ್ತೇವೆ ಎನ್ನುತ್ತಾರೆ.ಮಳೆಗಾಲ ಇಲ್ಲಿನ ಪರ್ವತದಲ್ಲಿ  ಬಿದ್ದ ನೀರನ್ನು  ಪಿಲ್ಟರ್ ಮಾಡಿ ಚಿಕ್ಕ ಅಣೆಕಟ್ಟು ಕಟ್ಟಿ ರವಾನೆ ಮಾಡುತ್ತಾರೆ.ಇದೆಲ್ಲಾ ಒಪ್ಪುವ ಮಾತೇ, ಏಕೆಂದರೆ ತಾಂತ್ರಿಕವಾಗಿ ಭಾರತ ಮುಂದುವರಿದಿದೆ.

ಈಗ ಆಳುವ ಮಂದಿ ಹೇಳುವ ಉತ್ತರ ಇಷ್ಟೇ, ನದಿ ತಿರುವು  ಮಾಡುವುದಿಲ್ಲ, ಮಳೆಗಾಲದ ಬಿದ್ದ ನೀರನ್ನು  ಮಾತ್ರವೇ ಹಾಯಿಸುವುದು, ಈ ವಿರೋಧ ಅನಗತ್ಯ ಎಂದು.ಆದರೆ ನನಗೆ ಕಾಡುವ ಪ್ರಶ್ನೆ ಎಂದರೆ, ಒಂದು ವೇಳೆ ಮಳೆ ಕಡಿಮೆಯಾದರೆ ?.ನೀರು ಸರಬರಾಜು ಹೇಗೆ ?.ಆಗ ಅಲ್ಲಿನ ಜನ ಸುಮ್ಮನಿರುತ್ತಾರೆಯೇ, ಕೆಲವು ದಿನಗಳು ಮಾತ್ರವೇ ನೀರು ಸರಬರಾಜು ಮಾಡಿ ನಂತರ ನೀರಿಲ್ಲ ಎಂದರೆ ಹೇಗೆ, ಅಲ್ಲಿನ ಜನ ಎಲ್ಲಿಗೆ ಹೋಗುವುದು ?, ಆಗ ಆಳುವ ಮಂದಿ ಮಾಡುವ ಕೆಲಸ ಏನು ?. ಈಗಾಗಲೇ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ,ಇಲ್ಲಿಯೇ ನೀರು ಇಂಗುವುದು  ಸಾಕಾಗುವುದಿಲ್ಲ  ಎಂದು ಜಲತಜ್ಞರು  ಹೇಳುತ್ತಾರೆ, ಹೀಗಾಗಿ ಬೇಸಗೆಯಲ್ಲಿ  ನೀರಿಮಟ್ಟ ತೀರಾ ಕೆಳಕ್ಕೆ ಹೋಗುತ್ತದೆ ಎನ್ನುವುದು  ಇಲ್ಲಿನ ಎಲ್ಲರಿಗೂ ಈಗ ಅನುಭವಕ್ಕೆ ಬಂದಿದೆ. ಇನ್ನೂ ಒಂದು ಮುಖ್ಯವಾದ ಅಂಶ ಎಂದರೆ, ಎತ್ತಿನ ಹೊಳೆ ಅಥವಾ ಪಶ್ಚಿಮಘಟ್ಟ ಪ್ರದೇಶದಲ್ಲಿ  ಮಳೆ ನಿರಂತರವಾಗಿರುತ್ತದೆ ಎಂದು  ಆಳುವ ಮಂದಿ ಯೋಚಿಸಿದ್ದಾರೆ, ದೂರಾಲೋಚನೆ ಮಾಡಿದ್ದಾರೆ, ನಿಜ, ಅದಕ್ಕೆ ಕಾರಣ ಇಲ್ಲಿನ ಅರಣ್ಯ ಪ್ರದೇಶ ಎಂಬುದೂ ಅವರು ಒಪ್ಪಿಕೊಳ್ಳಬೇಕಾಗುತ್ತದೆ, ಇಂತಹ ಅಲ್ಲದೇ ಇದ್ದರೂ ಕೃತಕವಾಗಿ ಅಲ್ಲೂ ಅರಣ್ಯ ಬೆಳೆಸುವ ಕೆಲಸ ಏಕೆ ಮಾಡಬಾರದು ?.ಅಲ್ಲೂ ನೀರು ಇಂಗಿಸುವ, ಕೆರೆಗಳ ಅಭಿವೃಧ್ಧಿ ಏಕೆ ಮಾಡಬಾರದು ?.ಇದನ್ನೇ ನಾನು ನದಿ ಮೂಲದ ಸೃಷ್ಟಿ ಎಂದು ಕರೆಯುತ್ತೇನೆ.
ಇದೆಲ್ಲಾ ಬಿಟ್ಟು, ಇಷ್ಟು ದೊಡ್ಡ ಮಟ್ಟದ ಅಂದರೆ ಕೋಟಿ  ಕೋಟಿಗೂ ಅಧಿಕ ಮೊತ್ತದ ಈ ಯೋಜನೆಯ ಉದ್ದೇಶ ಏನು, ಮಳೆ ಕಡಿಮೆಯಾಗುವ ಇಂದಿನ ಸಂದರ್ಭ ಇಂತಹ ಯೋಜನೆ ಏಕೆ? ಎಂಬ ಪ್ರಶ್ನೆಗೆ ಉತ್ತರಿಸಲು ಯಾರಿದ್ದಾರೆ ?.

ಹೀಗಾಗಿ ಈಗ ಈ ಯೋಜನೆಗೆ ಸಮ್ಮತಿ ಇಲ್ಲ ಏಕೆಂದರೆ, ಭವಿಷ್ಯದಲ್ಲಿ  ಎತ್ತಿನಹೊಳೆ ಮಾತ್ರವಲ್ಲ, ಇತರ ನದಿಗಳ ಮೂಲಗಳೂ, ಇತರ ಬೆಟ್ಟಗಳ ಮಳೆಗಾಲದ ನೀರೂ, ಬೇಸಗೆಯಲ್ಲಿ  ನದಿ ಮೂಲದ ನೀರೂ ಬೇಕಾಗುವುದು ನಿಶ್ಚಿತ.ಹೀಗಾದರೆ, ನಮ್ಮ ಊರಿನ ಪ್ರಮುಖ ನದಿಗಳೂ ಬೇಗನೆ ಬತ್ತಿ ಹೋಗುವುದೂ ಸತ್ಯ. ಈ ನದಿಗಳೂ ಬೇಗನೆ ಬತ್ತಿದರೆ ಅದಕ್ಕೆ ಸೇರುವ ಹೊಳೆ, ನದಿ ಪಕ್ಕದ ಬಾವಿ, ಕೆರೆಗಳಲ್ಲೂ ನೀರು ಕಡಿಮೆಯಾಗುತ್ತದೆ ಎಂದು ಹೇಳಬೇಕಾಗಿಲ್ಲ. ಕೆರೆ, ಬಾವಿಗಳಲ್ಲಿ  ನೀರು ಕಡಿಮೆಯಾದಂತೆ ಕೊಳವೆ ಬಾವಿಯ ಒಳಕ್ಕೆ ಇಳಿಯಲೇ ಬೇಕಾಗುತ್ತದೆ, ಮತ್ತಷ್ಟು ಕೊಳವೆ ಬಾವಿ ಬೇಕಾಗುತ್ತದೆ.ಆಗ ಅಂತರ್ಜಲ ಮಟ್ಟ ಇಳಿಕೆಯಾಗುತ್ತದೆ, ಸಮುದ್ರಕ್ಕೆ ಸೇರುವ ನೀರೂ ಕಡಿಮೆಯಾಗುತ್ತದೆ, ಹಿನ್ನೀರು  ಬರಲಾರಂಭಿಸುತ್ತದೆ. . .  ಹೀಗೇ ಸಮಸ್ಯೆಗಳ ಮೇಲೆ ಸಮಸ್ಯೆ ಬರಲಿದೆ. . ಇದೆಲ್ಲಾ ಭವಿಷ್ಯದ ಯೋಚನೆ ಅಷ್ಟೇ.

ಇಲ್ಲಿ  ಈಗ ಮೊದಲು ಸಂಕಷ್ಟ ಅನುಭವಿಸುವವರು  ನಗರದಮಂದಿ. ಕುಡಿಯುವ ನೀರಿಗೇ ಸಂಕಷ್ಟ ಬಂದೀತು.ಅದಕ್ಕೇ ಮೊನ್ನೆ ಮಿತ್ರರೊಬ್ಬರು ಅಣಕಿಸುತ್ತಿದ್ದರು, ಈಗ ನದಿಗಾಗಿ ಹೋರಾಟ ಮಾಡುತ್ತಿದ್ದಾರೆ,ಅಂದು ಪರಿಸರದ ಹೆಸರಿನಲ್ಲಿ  ಕೃಷಿಕರಿಗೆ, ಗ್ರಾಮೀಣ ಜನರಿಗೆ ಕಸ್ತೂರಿರಂಗನ್ ಭಯ ಇದ್ದಾಗ, ನಗರದ ಮಂದಿ ದೂರವೇ ಇದ್ದರು, ಪರಿಸರ ಉಳಿಯಬೇಕು, ಕಸ್ತೂರಿರಂಗನ್ ವರದಿ ಜಾರಿಯಾಗಬೇಕು ಎಂದು ಹೇಳಿದ್ದರು.ಈಗ ಅವರಿಗೇ ಸಂಕಷ್ಟ ಬಂದಿದೆ ಎಂದು ಹೇಳುತ್ತಿದ್ದರು.  .!,

16 ಸೆಪ್ಟೆಂಬರ್ 2015

ಗಣೇಶ ಬರುತ್ತಾನೆ. . . ಸಿದ್ದವಾಗು ಮನಸ್ಸೇ. .


                                                             (ಚಿತ್ರ- ಇಂಟರ್ನೆಟ್)

ನಾಡಿನೆಲ್ಲೆಡೆಗೆ ಗಣೇಶ ಬಂದೇ ಬಿಟ್ಟ.. . . .
ಜನರೆಲ್ಲಾ ಪೂಜೆ ಮಾಡಿದರು,ಸಂಭ್ರಮದಿಂದ ಓಡಾಡಿದರು.ಸಿಹಿ ಹಂಚಿದರು. .. .
ಮತ್ತೆ ನೀರೊಳಗೆ ಸೇರಿ ಮರೆಯಾಗಿಯೇ ಬಿಟ್ಟ.  .!.
ನಮ್ಮ ಬದುಕಿನೊಳಗೆ ಆತ ಪ್ರವೇಶಿಸಲೇ ಇಲ್ಲ. . !.

ಗಣೇಶನ ಹಬ್ಬ ಬಂದಾಗ ನನಗೆ ಯಾವಾಗಲೂ ಕಾಡುತ್ತಿದ್ದ ಮತ್ತು ಕಾಡುವ ಪ್ರಶ್ನೆ ಅದೇ , ಆತ ಏಕೆ ನಮ್ಮ ಬದುಕಿನ ಒಳಗೆ ಪ್ರವೇಶಿಸಲಿಲ್ಲ ?. ಒಂದು. . ಎರಡು. . ಮೂರು. . .ನಾಲ್ಕು. . . . ,ವಾರಗಳ ಕಾಲ ಆತನಿಗೆ ಪೂಜೆ ನಡೆಯುತ್ತದೆ,  ಜನ ಓಡಾಡುತ್ತಾರೆ, ಸಂಭ್ರಮಿಸುತ್ತಾರೆ. ಆದರೆ ಆತ ಬದುಕಿನೊಳಗೆ ಪ್ರವೇಶಿಸುವುದೇ ಇಲ್ಲ..  .!.

ಅಂದು ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಗಣೇಶ ಉತ್ಸವವನ್ನು  ಸಂಘಟನೆಗಾಗಿ ಬಳಸಿಕೊಂಡರು, ಉತ್ಸವದ ಮೂಲಕ ಸಮಾಜದ ಸಾಮರಸ್ಯದ ಕಡೆಗೆ   ಗಮನಹರಿಸಿದರು, ಬದುಕಿಗೆ ಅರ್ಥ ಕೊಡುವ ರೀತಿಯಲ್ಲಿ  ಯೋಜಿಸಿದರು. ಅಂದು ಯಶಸ್ವಿಯಾಯಿತು. ಆ ಬಳಿಕವೂ  ನಡೆದು ಬಂತು. ಇತ್ತೀಚೆಗೆ ಕೆಲವು ಸಮಯಗಳಿಂದ ಅಲ್ಲಲ್ಲಿ  ಗಣೇಶ ಬರುತ್ತಾನೆ. ಪೂಜೆ ನಡೆಯುತ್ತದೆ. ನಂತರ ಅದೇ ಜಾಗದಲ್ಲಿ  ನೋಡಿದರೆ ಸಾಮರಸ್ಯವೂ ಇಲ್ಲ, ಸಂಘಟನೆಯೂ ಇಲ್ಲ. . .!. ಆತ ಏಕೆ ಹೀಗೆ ಮಾಡಿದ?.ಅಥವಾ ಆಚರಣೆಯ ಹಿಂದೆ ಲೋಪ ಇದೆಯಾ ?.

ಗಣೇಶನ ಪ್ರತಿಷ್ಟಾಪನೆಯಾದ ಬಳಿಕ ಅಲ್ಲಿ ಅನೇಕ ಪೂಜೆ, ಆಚರಣೆ, ಕಾರ್ಯಕ್ರಮಗಳು ನಡೆಯುತ್ತದೆ, ಕೊನೆಗೆ ಗಣೇಶನ ಶೋಭಾಯಾತ್ರೆ ನಡೆಯುವ ವೇಳೆ ಅಬ್ಬರ ಶುರುವಾಗುತ್ತದೆ. ಆ ಅಬ್ಬರ ಅಗತ್ಯವೂ ಸಕಾಲಿಕವೂ ಹೌದಾದರೂ ಕೆಲವೊಮ್ಮೆ ಅಲ್ಲಿಂದಲೇ ಅಶಾಂತಿ ಉಂಟಾಗುತ್ತದೆ, ಅಂದೊಂದು  ಮೆರವಣಿಗೆ ನೋಡಿದ್ದೆ, ಅಲ್ಲಿ  ಓಡಿದ ಸ್ಥಭ್ತ ಚಿತ್ರವೊಂದು ಸಮಾಜದ ನಡುವೆಯೇ ಬಿರುಕು ಮೂಡಲು ಕಾರಣವಾಯಿತು, ಮತ್ತೊಂದು ಮೆರವಣಿಗೆಯಲ್ಲಿ  ನಡೆದ ಸಣ್ಣ ವಿಚಾರ ಇಡೀ ಊರಿನಲ್ಲಿ  ಅನೇಕ ದಿನಗಳ ಕಾಲ ಚರ್ಚೆಯಾಯಿತು, ಪೊಲೀಸ್ ಠಾಣೆಯವರೆಗೂ ಸಾಗಿತು. ಹೀಗಾಗಿ ಗಣೇಶನ ಆಚರಣೆಯನ್ನು  ಈಗ ಬದುಕಿಗೆ ಸಮೀಕರಿಸುವ ಕೆಲಸ ಮಾಡಬೇಕು.

ಗಣೇಶನ ಬಗ್ಗೆ ಆತನ ಮೊಗದ ಬಗ್ಗೆ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖ ಇದೆ.ಗಣೇಶನ ದೇಹದ ಆಕಾರವೇ ಅತ್ಯಂತ ವಿಕಾರ. ನಾವು ಈಗ ನಮ್ಮ ಬದುಕಿಗೆ ಹೊಂದಿಸಿಕೊಂಡು ನೋಡಿದರೆ, ನಮ್ಮೊಳಗೂ ವಿವಿಧ ವಿಕಾರಗಳು ಇರುತ್ತವೆ, ಭಾವನೆಗಳಲ್ಲಿ  ಶುದ್ದತೆ ಇಲ್ಲ, ಮಾತುಗಳಲ್ಲಿ ವಿಶ್ವಾಸಾರ್ಹತೆ ಇಲ್ಲ, ಅಂತರಾತ್ಮದಲ್ಲಿ ಕಶ್ಮಲಗಳು ಇವೆ, ಇದೆಲ್ಲಾ ನಮ್ಮ ಆಕಾರ.ಈ ವಿಕಾರಗಳು ನಮ್ಮಿಂದ ದೂರವಾಗುವ ಹೊತ್ತಿಗೆ ಆತ್ಮಶುದ್ದತೆ, ಪರಿಪೂರ್ಣತೆ ಒದಗುತ್ತದೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಈ ಆಕಾರಕ್ಕೆ ಶಾಂತತೆಯಿಂದ ಪೂಜೆ ನಡೆದು ,ಅಂದರೆ ಇದೆಲ್ಲಾ ವಿಕಾರಗಳ ಸಂಗ್ರಹ ಮಾಡಿ ಗಣೇಶನ ಪೂಜೆಯ ಬಳಿಕ ಮೂರ್ತಿ ವಿಸರ್ಜನೆ ಕಾರ್ಯ ನಡೆದಂತೆ , ನಮ್ಮೊಳಗಿನ ಎಲ್ಲಾ ವಿಕಾರಗಳೂ ಇದರ ಜೊತೆಗೇ ತೊಲಗಬೇಕು.ಆಗ ಬದುಕು ಪರಿಪೂರ್ಣವಾಗುತ್ತದೆ ಎಂಬುದು ಇದರ ಸಂದೇಶ ಎಂದು ನಾನು ನಂಬಿದ್ದೇನೆ.ಇನ್ನು ಗಣೇಶನ ಮೂರ್ತಿಯನ್ನು ನಮ್ಮ ಶರೀರ ಎಂದು ತಿಳಿದುಕೊಂಡರೆ. ಅದಕ್ಕೆ ಪೂಜೆ ನಡೆದು  , ಆರಾಧನೆ ನಡೆದರೂ ಅದುವೇ ಶಾಶ್ವತವಲ್ಲ, ಅದರೊಳಗೆ ಇರುವ ತತ್ತ್ವ, ಉತ್ತಮ ಕಾರ್ಯಗಳೇ ಶಾಶ್ವತ ಎನ್ನುವುದು  ಮತ್ತೊಂದು ಸಂದೇಶ. ಆಧ್ಯಾತ್ಮಿಕವಾಗಿ ತೆಗೆದುಕೊಂಡರೆ, ಕಾಲ ಉರುಳಿದಂತೆ ಮನುಷ್ಯ ರೂಪ ಬದಲಾಗುತ್ತದೆ, ಹಳೆಯ ಶರೀರ ವಿಸರ್ಜನೆಯಾಗುತ್ತದೆ, ಕೊನೆಗೆ ಉಳಿಯುವುದು  ಚೇತನ, ಜೀವಾತ್ಮ ಮಾತ್ರಾ ಎಂದು ನಾನು ನಂಬಿದ್ದೇನೆ.
ಮೌನವಾಗಿ ಯೋಚಿಸಿದಾದ,ನಾನೂ ಸೇರಿದಂತೆ ಎಲ್ಲೂ ಕೂಡಾ ಶುದ್ದತೆ ಕಾಣಿಸುತ್ತಿಲ್ಲ, ಹೀಗಾಗಿ ಗಣೇಶ ಈ ಬಾರಿ ನನ್ನ ಬದುಕಿನೊಳಗೆ ಪ್ರವೇಶಿಸಲಿ, ಎಲ್ಲರಿಗೂ ಶುಭ ಸಂದೇಶವನ್ನೇ ನೀಡುವಂತಾಗಲಿ.


07 ಸೆಪ್ಟೆಂಬರ್ 2015

ಮೆಸೇಜ್ ಮಾತಿಗೆ ಜಗಳ ಏಕೆ. .?


                                                                ( Net Photo )
ಅವರಿಬ್ಬರೊಳಗೆ ಮಾತುಕತೆಯೇ ನಿಂತು ವಾರಗಳೇ ಕಳೆದುಹೋಗಿತ್ತು, ಕಾರಣ ಕೇಳಿದರೇ ಇಬ್ಬರದೂ ಉತ್ತರ ಇಲ್ಲ.  .!. ಬಳಿಕ ತಿಳಿಯಿತು, ಅದೊಂದು ಮೆಸೇಜ್‍ನಿಂದ ಮನಸ್ಸು ಒಡೆಯಿತು. . !. ಆದರೆ ಇಬ್ಬರೂ ನಂತರ ಹೇಳುತ್ತಾರೆ. ನಾನು ಹೇಳಿದ್ದು ಒಂದು ಆತ ಅರ್ಥೈಸಿದ್ದು ಇನ್ನೊಂದು. . !. ವಿಷಯ ತಿಳಿಯಾದಾಗ ಇಬ್ಬರೂ ಮತ್ತೆ ಒಂದಾದರು.
ಅಲ್ಲಿ  ಇಬ್ಬರೂ ಚರ್ಚೆ ಮಾಡುತ್ತಿದ್ದರು, ಆ ಘಟನೆಗೆ ಹೇಗೆ ಸಹಾಯ ಮಾಡುವುದು? , ಇದು ಕೂಡಾ ಒಂದು ಮೆಸೇಜ್ ಬಗ್ಗೆ ನಡದ ಚರ್ಚೆ. ಒಂದು ಗಲಾಟೆಗೆ ಕಾರಣವಾದರೆ ಮತ್ತೊಂದು ಒಂದಾಗಿ ಸಾಗುವ ಬಗ್ಗೆ ಮಾತುಕತೆ.
ಇಂದು ಹೆಚ್ಚಿನ ಸಂದರ್ಭ ನಡೆಯುವುದೇ ಇದೇ. ಒಳ್ಳೆಯ ಉದ್ದೇಶದಿಂದ ಒಂದು ಮೆಸೇಜ್ ಕಳುಹಿಸಿದರೆ ಅದು ಮತ್ತೊಂದು ರೂಪ ಪಡೆದುಕೊಳ್ಳುತ್ತದೆ. ಆಗ ಮನಸ್ಸುಗಳು ಒಡೆಯುತ್ತದೆ. ಈಗಂತೂ ವಾಟ್ಸಪ್‍ನಲ್ಲಿ ಮೆಸೇಜ್ ಫಾರ್ವರ್ಡ್ ಕೂಡಾ ಮಾಡುತ್ತೇವೆ, ಅದು ಇನ್ನೊಂದು ಅವಾಂತರವನ್ನೇ ಸೃಷ್ಟಿಸುತ್ತದೆ. ಮೊನ್ನೆ ನನ್ನ ಮಿತ್ರ ಹೇಳುತ್ತಿದ್ದ , ಅದ್ಯಾವುದೋ ಮೆಸೇಜ್ ಫಾರ್ವರ್ಡ್ ಮಾಡಿದ್ದನಂತೆ, ಅದೇ ವಿಷಯದಿಂದ ಎರಡು ಮನೆಯವರು  ಹೊಡೆದಾಟ ಮಾಡುವ ಸ್ಥಿತಿಗೆ ಬಂದಿದ್ದರಂತೆ. ವಾಸ್ತವವಾಗಿ ಈ ಮೆಸೇಜ್ ಏನು ಎಂದು  ಓದದೇ ಫಾರ್ವರ್ಡ್ ಮಾಡಿದ್ದ. .!, ಅದೇ ದೊಡ್ಡ ಗಲಾಟೆಗೂ ಕಾರಣವಾಯಿತು. ಆದರೆ ಆ ಬಳಿಕ ನೋಡಿಲ್ಲ ಎನ್ನುವುದು ಉತ್ತರವಾಗುವುದಿಲ್ಲ, ಉದ್ದೇಶಪೂರ್ವಕವಾಗಿಯೇ ಎಂಬುದು  ಗಟ್ಟಿಯಾಗುತ್ತದೆ.ಹೀಗಾಗಿ ಈಗ ಮೆಸೇಜ್ ಮಾಡುವಾಗಲೂ ಎಚ್ಚರಿಕೆ ಬೇಕು.ಕೆಲವೊಮ್ಮೆ ನಮ್ಮ ನಿಲುವಿಗೂ, ಆ ಮೆಸೇಜ್‍ಗೂ ಯಾವುದೇ ಸಂಬಂಧ ಇರುವುದೇ ಇಲ್ಲ, ಹಾಗಿದ್ದರೂ ಮೆಸೇಜ್ ಫಾರ್ವರ್ಡ್ ಮಾಡುತ್ತೇವೆ, ಅದೊಂದು ಖುಷಿ ಅಷ್ಟೇ.
ಮೊನ್ನೆ ಹೀಗೆಯೇ ಆಯಿತು, ಅದ್ಯಾವುದೋ ವಾಟ್ಸಪ್ ಗುಂಪಿನಲ್ಲಿ  ಚರ್ಚೆ ನಡೆಯುತ್ತಿತ್ತು, ಅದನ್ನು  ಮತ್ತೊಬ್ಬ ಫೋಟೊ ತೆಗೆದು ಇನ್ನೂ ಹಲವರಿಗೆ ಕಳುಹಿಸಿದ, ತಮಾಷೆಗಾಗಿ ಗುಂಪಿನಲ್ಲಿ  ಮಾಡಿದ ಚರ್ಚೆ ಗಂಭೀರ ಸ್ವರೂಪ ಪಡೆಯಿತು. ಮಿತ್ರರೊಳಗೇ ಅಪನಂಬಿಕೆ ಶುರುವಾಯಿತು.ಹೀಗಾಗಿ ಗುಂಪು ಚರ್ಚೆ ಕೂಡ ಕಷ್ಟ, ಇನ್ನೊಂದು ಕಡೆ ಗುಂಪು ಚರ್ಚೆ ನಡೆಯುವ ವೇಳೆ ಒಬ್ಬನಿಗೆ ಕಿರಿಕಿರಿಯಾಯಿತು, ಆತ ಎಲ್ಲರಿಗೂ ಕಿರಿಕಿರಿ ನೀಡಿದ, ಬೇಕಾದು ಬೇಡದ್ದು ಎಲ್ಲವನ್ನೂ ಗುಂಪಿಗೆ ಹಾಕಿದ ಅಲ್ಲೂ ಒಡಕು ಶುರುವಾಯಿತು.. .!.
ಹೀಗೇ.  . ಈಗ ಸಮಾಜದ ಎಲ್ಲೇ ಹೋಗಲಿ ಬಿರುಕುಗಳು. ಒಬ್ಬನ ತಪ್ಪುಗಳು ಬೇಡವೆನಿಸಿದರೂ ಬೇಗ ಸಿಕ್ಕಿಬಿಡುತ್ತದೆ, ಅದಕ್ಕೆ ತೀರ್ಮಾನ ಕೂಡಾ ಆಗಿ ಬಿಡುತ್ತದೆ.ಆದರೆ ವಾಸ್ತವದಲ್ಲಿ  ಆತನ ಉದ್ದೇಶವೇ ಬೇರೆಯದೇ ಇರುತ್ತದೆ, ಮಿತ್ರನೇ ಆಗಿರುತ್ತಾನೆ, ಆದರೆ ವೇಗದ ತಂತ್ರಜ್ಞಾನ ಆತನದೇ ತಪ್ಪು  ಅಂತ ಅಂತ ಹೇಳುತ್ತದೆ, ಮನಸ್ಸು ಒಪ್ಪಿಕೊಳ್ಳುತ್ತದೆ. ವಿಶ್ಲೇಷಿಸುವ ಹಾಗೂ ಮತ್ತೆ ಪರಾಮರ್ಶಿಸುವ ಬಗ್ಗೆ ಯೋಚಿಸುವುದಿಲ್ಲ ಈಗ ಮನಸ್ಸು. . .!

03 ಸೆಪ್ಟೆಂಬರ್ 2015

ಸಂದೇಶ ಕೃಷಿ ಪರವೂ ಇರಲಿ. .ಪಕ್ಕದ ಮನೆಯಲ್ಲಿ  ಈರುಳ್ಳಿ ದಾಸ್ತಾನು,ತೆರಿಗೆ ಇಲಾಖೆ ಧಾಳಿ. .  ., ಈರುಳ್ಳಿಯೇ ಸ್ಪರ್ಧೆಗೆ ಬಹುಮಾನ. . . , ಈರುಳ್ಳಿ ಮಾಲೆಗೆ ಡಿಮ್ಯಾಂಡ್ . . .. ಹೀಗೇ ವಿವಿಧ ಮೆಸೇಜ್ ನಮಗೆಲ್ಲಾ ಬಂದೇ ಇದೆ. ಮೊನ್ನೆ ಮೊನ್ನೆ ಈರುಳ್ಳಿ ರೇಟ್ ಸಿಕ್ಕಾಪಟ್ಟೆ ಏರಿಕೆಯಾಯಿತು.ಎಲ್ಲರ ಮೊಬೈಲ್‍ಗೂ ಒಂದೊಂದು ಥರದ ಮೆಸೇಜ್, ವಿವಿಧ ಕಾರ್ಟೂನ್. ಎಲ್ಲವೂ ಧಾರಣೆ ಏರಿಕೆಯಾದ ಬಗ್ಗೆಯೇ ಇತ್ತು, ಅದರೊಳಗೆ ಒಂದು ವ್ಯಂಗ್ಯ, ತಮಾಷೆ ಅಷ್ಟೇ. ಆದರೆ ಅದರಾಚೆಗೆ ಸ್ವಲ್ಪ ಇಣುಕಿ. .  ಇದೆಲ್ಲಾ ಗ್ರಾಹಕ ಪರವಾಗಿಯೇ ಇದೆ. ರೈತರ ಪರವಾದ ಒಂದೇ ಒಂದು ಮೆಸೇಜ್ ಇತ್ತಾ. . ?.ನನ್ನೊಳಗೇ ನಾನು ಪ್ರಶ್ನೆ ಮಾಡುತ್ತಾ ಸಾಗಿದಾಗ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಈರುಳ್ಳಿ ಧಾರಣೆ ಏರಿಕೆಯಾದಾಗಂತೂ ಕೆಲವರು  ಹೇಳಿದರು , ಖರೀದಿಯೇ ಮಾಡಬೇಡಿ.. ವಿದೇಶದಲ್ಲಿ  ಹೀಗೆಯೇ ಮಾಡಿ ಧಾರಣೆ ಇಳಿಕೆ ಮಾಡಿದ್ದಾರೆ ಎಂದೂ ಹೇಳಿದ್ದರು.ಒಂದು ಕಡೆ  ನಾವು ವಿದೇಶದ ವ್ಯವಸ್ಥೆಯನ್ನು ವಿರೋಧಿಸಿತ್ತೇವೆ, ಮೋದಿ ಸರ್ಕಾರದ ನಡೆಯನ್ನು  , ರಾಜ್ಯ ಸರ್ಕಾರದ ನೀರಿಉನ್ನು ಖಂಡಿಸುತ್ತೇವೆ. ಮತ್ತೊಂದು ಕಡೆ ಅದೇ ವಿದೇಶಿ ನೀತಿ ಜಾರಿ ಮಾಡೋಣ ಅನ್ನುತ್ತೇವೆ.ಒಂದು ಕಡೆ 10 ರೂಪಾಯಿಗೆ 3 ಕೆಜಿ ಟೊಮೊಟೋ ಬೇಕು ಅನ್ನುತ್ತೇವೆ, ಇನ್ನೊಂದು ಕಡೆ ನಾವು ಬೆಳೆಯುವ ಅದ್ಯಾವುದೋ ವಸ್ತುವಿಗೆ ಎಷ್ಟೇ ರೂಪಾಯಿ ಸಿಕ್ಕರೂ ಸಾಲದು ಅನ್ನುತ್ತೇವೆ. ರೈತ ಬದುಕುಬೇಕು, ಬೆಳೆಯಬೇಕು ಅಂತ ಹೇಳುತ್ತೇವೆ , ಈ ಕಡೆ ರೇಟು ಸಿಕ್ಕಾಪಟ್ಟೆ ಅನ್ನುತ್ತೇವೆ. ಹಾಗಿದ್ದರೆ ನಮ್ಮ  ಕಾಳಜಿ ಯಾವುದು ?.

ಮೊನ್ನೆ ಈರುಳ್ಳಿ ರೇಟು ಹೆಚ್ಚಾದಾಗ ಅದನ್ನು  ಬೆಳೆಯುವ ರೈತನಿಗೆ ಇದೆಲ್ಲಾ ದಕ್ಕಿರಲಾರದು , ಆದರೆ ಕೊಂಚ ರೇಟು ಹೆಚ್ಚು ಸಿಕ್ಕಿರಬಹುದು. ಇಲ್ಲಿ ಏನನ್ನೂ ಬೆಳೆಯದ , ಕೇವಲ ಮದ್ಯವರ್ತಿಯಾದ ವ್ಯಕ್ತಿ ಸಾಕಷ್ಟು ಲಾಭ ಮಾಡಿದ್ದಾನೆ. ಇದಕ್ಕೆ ನಾವು ಈರುಳ್ಳಿ ಖರೀದಿ ಮಾಡುವುದಿಲ್ಲ ಎಂದರೆ ರೈತನಿಗೆ ಈ ರೇಟೂ ದಕ್ಕದು. ಆ ಬಳಿಕ ಸರ್ಕಾರವು  ಈ ವಿಚಾರದಲ್ಲಿ ಭಾರೀ ಕ್ರಮಕೈಗೊಂಡಂತೆ ಕಾಣಲಿಲ್ಲ.ಎಲ್ಲೇ ಆದರೂ ಮದ್ಯವರ್ತಿಗಳಿಗೆ ಲಾಭ ಮಾಡುವುದು ಇರುವುದೇ. ಆದರೆ ಅದರಲ್ಲಿ ನೇರ ಮಾರಾಟದ ವ್ಯವಸ್ಥೆ ಬಂದರೆ ಇದೆಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕೀತು, ಅದುವರೆಗೆ ಕಾಯೋಣ.
ಅಂದು ನನಗೂ ಹಾಗೆಯೇ ಆಗಿತ್ತು, ನಾನು ಬಾಳೆಗೊನೆ ಮಾರಾಟ ಮಾಡುತ್ತಿದೆ, ಅದೊಂದು ವ್ಯಾಪಾರಿಗೆ, ಅದೇ ವೇಳೆಗೆ ಖರೀದಿ ಮಾಡಲು ಒಬ್ಬರು ಬಂದರು, ನನ್ನೆದುರೇ ವ್ಯಾಪಾರವೂ ನಡೆಯಿತು. ನನ್ನ  ವಾಹನದಿಂದ ಖರೀದಿ ಮಾಡಿದ ವ್ಯಕ್ತಿಯ ವಾಹನಕ್ಕೇ ನೇರವಾಗಿ ಲೋಡ್ ಮಾಡಲಾಯಿತು. ಕೊನೆಗೆ ಎಲ್ಲಾ ವ್ಯವಹಾರ ಮುಗಿದ ಬಳಿಕ ಮತ್ತೊಂದು ಕಡೆ ಆತ ಸಿಕ್ಕಾಗ ಕೇಳಿದೆ, ಆಗ ತಿಳಿಯಿತು ಅಲ್ಲಿ  ವ್ಯಾಪಾರಿಗೆ ಸಿಕ್ಕಿದ್ದು  8 ರೂಪಾಯಿ.ಆದರೆ ನನಗೆ ನಷ್ಟವಾಗಿರಲಿಲ್ಲ.ಹೀಗಾಗಿ ಸಮಧಾನವಿತ್ತು. ಹಾಗಿದ್ದರೂ ನಾವು ಬೆಳೆದು ಕಷ್ಟಪಟ್ಟದ್ದು  ,ಆತ ಮದ್ಯವರ್ತಿಯಾಗಿದ್ದಕ್ಕೆ 8 ರೂಪಾಯಿ. ಮುಂದಿನ ಬಾರಿ ನಾನು ಈ ಬಗ್ಗೆ ಕೇಳಿದಾಗ ಆತ ಹೇಳಿದ್ದು, ನನಗೆ ಬಾಳೆಗೊನೆ ಬೇಡ. . !. ಅಂದರೆ ಮದ್ಯವರ್ತಿಗಳ ಶೋಷಣೆ ಇದ್ದದ್ದೆ.ಹಾಗೆಂದು  ಕೃಷಿಕನಿಗೆ ತಾನು ಬೆಳೆದ ಉತ್ಪನ್ನದ ಖರ್ಚು ಹಾಗೂ ಲಾಭಾಂಶ ಸಿಕ್ಕರೆ ಸಾಕು ಎಂದಷ್ಟೇ ಯೋಚಿಸಬೇಕಷ್ಟೇ.

ಧಾರಣೆ ಏರಿಕೆಯಾದಾಗ ಅದರ ಪಾಲು ಕೃಷಿಕನಿಗೂ ಲಭ್ಯವಾಗುತ್ತದೆ ನಿಜ. ಗ್ರಾಹಕರಿಗೆ ತೀರಾ ಹೊರೆಯಾಗುತ್ತದೆ ನಿಜ. ಆದರೆ ಖರೀದಿಯೇ ಮಾಡದೇ ಇದ್ದರೆ ಕೃಷಿಕನಿಗೆ ಕಹಿಯೇ. ಹಾಗಾಗಿ ನಮ್ಮ  ಸಂದೇಶ ಗ್ರಾಹಕರ ಪರ ಮಾತ್ರವಲ್ಲ  ಕೃಷಿಕರ ಪರವೂ ಇರಲಿ ಅಷ್ಟೇ.

28 ಆಗಸ್ಟ್ 2015

ಸ್ವಲ್ಪ ನೆಮ್ಮದಿಯಾಗಿರೋಣ. . . ಅದಕ್ಕಾಗಿ ಪ್ರಯತ್ನಿಸೋಣ. .


                                            (Photo from net)
ಆ ವಿಡಿಯೋ ದೇಶದಲ್ಲೆಲ್ಲಾ ಹರಿದಾಡಿತು. .  ನೋಡಿದ ಜನ ಹೀಗೂ ಆಗುತ್ತಲ್ಲಾ ಅಂದರು. .  ಅದೇ ಘಟನೆಗಾಗಿ ಭಾರೀ ಚರ್ಚೆಯಾಯಿತು,. . ಆದರೆ ಯಾರೊಬ್ಬರೂ ಅದಕ್ಕೆ ಪರಿಹಾರ ಏನು ಎಂಬ ಬಗ್ಗೆ ಹೇಳಿಲ್ಲ, ಸಮಸ್ಯೆಯ ಮೂಲದ ಬಗ್ಗೆ ಮಾತಾಡಿಲ್ಲ. . ಈಗ ಬೇಕಿರುವುದು  ರೋಗಕ್ಕೆ ಮದ್ದೇ ಹೊರತು  ಬ್ಯಾಂಡೇಜ್ ಅಲ್ಲ, ರೋಗದ ಬಗ್ಗೆಯೇ ವೈಭವ ಅಲ್ಲ. .
ನಾನು ಯೋಚಿಸಿದ್ದು ಮಂಗಳೂರಿನ ಅತ್ತಾವರದ ಬಳಿ ನಡೆದ ಹಲ್ಲೆ ಪ್ರಕರಣ. ಒಂದಷ್ಟು ಹುಡುಗರು ಸೇರಿ ಇನ್ನೊಬ್ಬ ಹುಡುಗನಿಗೆ ಹೊಡೆಯುತ್ತಿದ್ದರು, ಮತ್ತೊಬ್ಬ ಹುಡುಗ ಅದನ್ನೆಲ್ಲಾ ವಿಡಿಯೋ, ಫೋಟೊ ತೆಗೆದ ವಾಟ್ಸ್‍ಪ್‍ನಲ್ಲಿ  ಶೇರ್ ಮಾಡಿದ. ಅಷ್ಟೇ ಸಾಕಾಯಿತು.. ಇಂದು ಇಡೀ ಚೆರ್ಚ ಶುರುವಾಗಿದೆ. ಈ ವಿಡಿಯೋ ದಾಖಲಾಗದೆ ಮತ್ತೆಷ್ಟೋ ಘಟನೆಗಳು ನಮ್ಮಲ್ಲಿ  ನಡೆಯುತ್ತದೆ, ಚರ್ಚೆಯಾಗೋಲ್ಲ, ದೇಶದವರೆಗೆ ಹೋಗೋಲ್ಲ. ಇದು  ವಿಡಿಯೋ ಸಹಿತ ಸಾಕ್ಷಿ ಸಿಕ್ಕಿದೆ ಎಂಬ ಕಾರಣಕ್ಕೆ ದೊಡ್ಡ ಸುದ್ದಿಯಾಯಿತು. ಸುದ್ದಿಯಾಗಿದೆ . . . ಸುದ್ದಿಯಾಗಬೇಕು, ಹಲ್ಲೆ ಮಾಡುವ ಹಕ್ಕು ಯಾರಿಯೂ ಇಲ್ಲ, ಅದಕ್ಕೇ ಕಾನೂನು ಇದೆ, ಅನುಷ್ಟಾನ ಮಾಡಲು ಪೊಲೀಸರು ಇದ್ದಾರೆ. ಆದರೆ. .  . . .?
ಈ ಎಲ್ಲಾ ಪ್ರಕರಣ ಏಕೆ ನಡೆಯುತ್ತದೆ ಎಂದು  ಸುಮ್ಮನೆ ಯೋಚಿಸಿದಾಗ, ಕಾನೂನು ಇದೆ ನಿಜ ಇದೆ , ಅದು ಪಾಲನೆಯಾಗುತ್ತಿಲ್ಲ , ಹೀಗಾಗಿಯೇ ಆಕ್ರೋಶ ಹೆಚ್ಚಾಗಿ ಇಂತಹ ಪ್ರಕರಣಗಳೂ ಹೆಚ್ಚಾಗುತ್ತಿದೆ. ಸಿಕ್ಕಿದವನು ಯಾರೇ ಇರಲಿ, ಪೆಟ್ಟು ತಿನ್ನಲು ಸಿದ್ದವಾಗಿರಬೇಕು. ಈ ಪ್ರಕರಣದಲ್ಲಿ  ಮೇಲ್ನೋಟಕ್ಕೆ ಯುವತಿಯೊಬ್ಬಳು ಅನ್ಯಧರ್ಮದ ಯುವಕನೊಬ್ಬನೊಂದಿಗೆ ಮಾತನಾಡುತ್ತಿದ್ದಳು, ಅವನದೇ ಕಾರಿನಲ್ಲಿ  ಹೋಗುತ್ತಿದ್ದಳು ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು  ಈಗ ನಾವು ಮಾತನಾಡುತ್ತೇವೆ. ಇದು  ಸಾಂಕೇತಿಕವಾಗಿರಬಹುದು , ಹುಡುಗನೊಬ್ಬ ಹುಡುಗಿಯೊಂದಿಗೆ ಮಾತನಾಡುವುದು ತಪ್ಪಲ್ಲ  ನಿಜ, ಇಬ್ಬರೂ ಒಪ್ಪಿ ಮಾತನಾಡುವ, ಸುತ್ತಾಡುವ ಅಥವಾ ಇನ್ಯಾವುದೇ ಸಂಗತಿಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ.  ಆದರೆ ಆ ನಂತರ ಮುಂದೆ ಆಗುವ ಅನಾಹುತಗಳ ಬಗ್ಗೆ ನಮ್ಮಲ್ಲಿ ಎಷ್ಟು ಪ್ರಕರಣಗಳಲ್ಲಿ ಕ್ರಮವಾಗಿದೆ ?. ಕಾನೂನು ಕ್ರಮ ಎಲ್ಲಾಗಿದೆ ?. ಎಲ್ಲೋ ಒಂದೆರಡು  ಪ್ರಕರಣದಲ್ಲಿ ಕಾನೂನು ಪ್ರಕಾರ ಶಿಕ್ಷೆ ಆಗಿರಬಹುದು , ಆದರೆ ಬಹುತೇಕ ಪ್ರಕರಣಗಳಲ್ಲಿ  ಶಿಕ್ಷೆಯಾಗಿಲ್ಲ, ದೊಡ್ಡಮಟ್ಟದಲ್ಲಿ  ಸುದ್ದ್ದಿಯಾದ ಪ್ರಕರಣಗಳಲ್ಲಿ  ಮಾತ್ರವೇ ಶಿಕ್ಷೆಯಾಗಿದೆ.
ನಮ್ಮೂರಲ್ಲೇ ನೋಡುವುದಾದರೆ ತೀರಾ ಹಳೆಯದು ಎಂದರೆ ಪುತ್ತೂರಿನ ಸೌಮ್ಯ ಭಟ್ ಕೊಲೆ ಪ್ರಕರಣದಲ್ಲಿ  ಗಮನಿಸಿ  ಆರೋಪಿಗೆ ಶಿಕ್ಷೆಯಾಗಿದೆಯೇ ,ಆ ಆರೋಪಿ ಈಗಲೂ ನಾಪತ್ತೆ. .?, ಇನ್ನೂ ಅಲ್ಲೇ ಹತ್ತಿರದ ಮತ್ತೊಬ್ಬ ವಿದ್ಯಾರ್ಥಿನಿಯ ಮೇಲೆ ನಡೆದ ಪ್ರಕರಣದಲ್ಲಿ  ಶಿಕ್ಷೆಯಾಗಿದೆಯೇ,ಉಜಿರೆಯ ವಿದ್ಯಾರ್ಥಿನಿಯ ಕತೆ ಏನಾಯಿತು.  .?, ಕೊಣಾಜೆಯಲ್ಲಿ  ನಡೆದ ಪ್ರಕರಣದಲ್ಲಿ  ಏನಾಗಿದೆ. . ?,ಮಂಗಳೂರಿನಲ್ಲಿ  ಗಾಂಜಾ ಮಾರಾಟ ಪ್ರಕರಣ ಏನಾಯಿತು ?,ಕುಂದಾಪುರದಲ್ಲಿ  ಬಾಲಕಿ ಕೊಲೆ ಪ್ರಕರಣದ ಮುಂದಿನ ಬೆಳವಣಿಗೆ ಏನು ?,  ವಿದ್ಯಾರ್ಥಿನಿಯರ ವಿಡಿಯೋ ಹರಿದಾಡಿದ ಕೇಸ್‍ಗಳು ಏನಾದವು . .?, ಮೊನ್ನೆ ಮೊನ್ನೆ ಹೇಳುವ ಪುತ್ತೂರಿನ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ  ಆರೋಪಿ ಬಾಲಾಪರಾಧಿ ಎಂದು ಹೇಳಿಲ್ಲವೇ .  .?.. .  . . . . ಹೀಗೇ ಒಂದೆರಡಲ್ಲ ಹಲವಾರು ಪ್ರರಕಣಗಳು ನಮ್ಮಲ್ಲಿದೆ. ಯಾವುದರಲ್ಲೂ ಸರಿಯಾದ ನ್ಯಾಯ ಸಿಕ್ಕಿಲ್ಲ.ಒಂದು ವೇಳೆ ಈ ಎಲ್ಲಾ ಪ್ರಕರಣಗಳಿಗೆ ನ್ಯಾಯ ಸಿಗುತ್ತಿದ್ದರೆ. ಈ ಹುಡುಗರು  ಹಲ್ಲೆ ಮಾಡುತ್ತಿದ್ದರೇ. .?, ಯೋಚಿಸಬೇಕು.
ನ್ಯಾಯ ಸಿಗದೇ ಇರುವ ಕಾರಣದಿಂದಲೇ ಇಂದು ಪೊಲೀಸ್ ಇಲಾಖೆ ಹೋಗುವ ಮೊದಲೇ ಹಲ್ಲೆ ನಡೆಯುತ್ತದೆ. ಇದನ್ನೇ ನೈತಿಕ ಪೊಲೀಸ್‍ಗಿರಿ ಎನ್ನುತ್ತೇವೆ.ಈಗ ಒಬ್ಬ ಹುಡುಗ ಇನ್ನೊಂದು ಹುಡುಗಿಯ ಜೊತೆ ಮಾತನಾಡಲಾಗದ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಜೊತೆಯಲ್ಲಿ ಹೋದರೇ ಪೆಟ್ಟು ತಿನ್ನುವ ಸಂದರ್ಭ ಒದಗಿದೆ.ಇದಕ್ಕೆ ಹೊಣೆ ಯಾರು ?, ಹೊಣೆಗಾರರನ್ನಾಗಿಸುವುದು  ಯಾರನ್ನು.  .?.
ಮೊನ್ನೆ ಪುತ್ತೂರಿನ ತಾಲೂಕು ಪಂಚಾಯತ್ ಸಭೆಯಲ್ಲಿ  ಜನಪ್ರತಿನಿಧಿಗಳು ಮಾತನಾಡಿದರು, ಯಾವುದೇ ಪ್ರರಕಣದಲ್ಲಿ  ಅನ್ಯಾಯವಾದರೆ, ನಾವು ನ್ಯಾಯದ ಪರ ನಿಲ್ಲುತ್ತೇವೆ, ಪೊಲೀಸರಿಗೆ ಒತ್ತಡ ತಾರದೆ ಸ್ವತಂತ್ರವಾಗಿ ಅವರು ತನಿಖೆ ಮಾಡುವಂತೆ ಸೂಚನೆ ನೀಡವ ಬಗ್ಗೆ ಮಾತನಾಡಿದರು.ನಿರ್ಣಯ ಮಾಡೋಣ ಎಂದೂ ಹೇಳಿದರು.ಇಂತಹ ಬೆಳವಣಿಗೆ ದೈನಂದಿನ ಜೀವನದಲ್ಲೂ ನಡೆಯಬೇಕು, ಸಭೆಗೆ ಮಾತ್ರವೇ ಸೀಮಿತವಾಗಬಾರದು, ಆಗ ನೈತಿಕ ಪೊಲೀಸ್‍ಗಿರಿ ಸಹಜವಾಗಿಯೇ ಕಡಿವಾಣ ಬೀಳುತ್ತದೆ.ನಿಜವಾದ ಆರೋಪಿಗೆ ಶಿಕ್ಷೆಯಾಗುತ್ತದೆ. ಕಾನೂನು ಸರಿಯಾಗಿ ಪಾಲನೆಯಾಗುತ್ತದೆ. ಸಮಾಜವೂ ನೆಮ್ಮದಿಯಾಗುತ್ತದೆ.

23 ಆಗಸ್ಟ್ 2015

ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ. .

                                         ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡಅಡಿಕೆ ಬೆಳೆಗಾರರು  ಕಳೆದ ಹಲವಾರು ಸಮಯಗಳಿಂದ ಸಂಕಟ ಪಡುವುದು  ಕೊಳೆರೋಗಕ್ಕೆ. ಮಳೆಗಾಲ ಶುರುವಾಯಿತು ಅಂದಾಗ ಭಯ ಶುರುವಾಗುತ್ತದೆ.ಕಾರಣ ಇಷ್ಟೇ, ಕೊಳೆರೋಗ ಬಾರದಂತೆ ಔಷಧಿ ಸಿಂಪಡಣೆಯಾಗಬೇಕು, ಆದರೆ ಇದಕ್ಕೆ ಕಾರ್ಮಿಕರ ಕೊರತೆ ಇದೆ.ಇನ್ನು ಕಾರ್ಮಿಕರು ಇದ್ದರೂ ವಿಪರೀತ ಸುಲಿಗೆ, ಕೃಷಿಕರನ್ನೇ ಶೋಷಣೆ. ಇದಕ್ಕೆಲ್ಲಾ ಪರಿಹಾರ ಬೇಕು ಅಂತಲೇ ಯೋಚನೆ ಇತ್ತು.
ಪರಿಸ್ಥಿತಿ ಹೀಗಿರುವಾಗ ನಮ್ಮ ವಾಟ್ಸ್‌ಪ್ ಗ್ರೂಪ್‌ಗೆ ಮಿತ್ರ ಚಿನ್ಮಯ ಒಂದು ಲೈನ್ ಮೆಸೇಜ್ ಪೋಸ್ಟ್ ಮಾಡಿದರು, ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ ಇದೆ ಎಂದು. ಈ ಜಾಡು ಹಿಡಿದು ಪುತ್ತೂರು ತಾಲೂಕಿನ ಪೆರ್ನೆಯ ಕಡೆಗೆ ಹೋದಾಗ ಎಲ್ಲಾ ಸಂಗತಿಯನ್ನು  ಕಾರ್ಮಿಕ ಮುಖಂಡ ಯಶೋಧರ ಬಿಚ್ಚಿಟ್ಟರು. ಆ ಬಳಿಕ ನನಗಂತೂ ದೂರವಾಣಿ ಕರೆಗಳ ಮೇಕೆ ಕರೆಗಳು. ಆಗಲೇ ನನಗೆ ಅನ್ನಿಸಿದ್ದು  ಔಷಧಿ ಸಿಂಪಡಣೆಗೆ ಕಾರ್ಮಿಕರು ಇಷ್ಟೊಂದು ರೀತಿಯಲ್ಲಿ  ಶೋಷಣೆ ಮಾಡುತ್ತಾರಾ ?, ಹೀಗೆಲ್ಲಾ ಹೇಳಲಾಗದ ಸಮಸ್ಯೆಗಳು ಇದೆಯಾ ?.

ಹೀಗಿದೆ ಆ ತಂಡದ ಪರಿಚಯ. .  ..

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆಯ ಯುವಕ ತಂಡ ಗುಂಪಿನ ಮೂಲಕ ಈಗ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದೆ.ಈ ತಂಡದ ನಾಯಕ ಯಶೋಧರ ನಾಯ್ಕ್.ಇವರು ಕಳೆದ 15 ವರ್ಷಗಳಿಂದ ತೋಟಗಳಿಗೆ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಇವರ ಜೊತೆ ಕಳೆದ ಮಾಧವ ನಾಯ್ಕ್ ಕೂಡಾ ಸಾತ್  ನೀಡುತ್ತಿದ್ದರು.ಇದೀಗ 5 ವರ್ಷಗಳಿಂದ 8 ಜನರ ಯುವಕರ ತಂಡ ಕಟ್ಟಿ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಈಗ ತಂಡದಲ್ಲಿ  ದೇವಪ್ಪ  ನಾಯ್ಕ್, ಗಂಗಾಧರ ನಾಯ್ಕ್,ರಾಜೇಶ್ ನಾಯ್ಕ್,ವಿಜಯ ನಾಯ್ಕ್,ಪದ್ಮನಾಭ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ಇದ್ದಾರೆ. ಈಗಾಗಲೇ ಪೆರ್ನೆ, ಸರಪಾಡಿ, ನೆಲ್ಯಾಡಿ,ಮಂಜೇಶ್ವರ ಸೇರಿದಂತೆ 35 ರಿಂದ 40 ತೋಟಗಳಲ್ಲಿ  ಔಷಧಿ ಸಿಂಪಡಣೆ ಹಾಗೂ ಅಡಿಕೆ ಕಟಾವು ಮಾಡುವ ಹೊಣೆಯನ್ನು  ಹೊತ್ತಿದ್ದಾರೆ. ಶನಿವಾರ ಉಪ್ಪಿನಂಗಡಿ ಬಳಿಯ ಪೆರ್ನೆ ಬಿಳಿಯೂರು ಕಟ್ಟೆಯ ಧನ್ಯಕುಮಾರ್ ಅವರ ತೋಟದಲ್ಲಿ  ಔಷಧಿ ಸಿಂಪಡಿಸುವ ಕಾರ್ಯ  ನಡೆಯುತ್ತಿದ್ದರು.
ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಯ ವೇಳೆ, ಮೋಟಾರು ಸಹಿತ 8 ಜನ ಮನೆಗೆ ಆಗಮಿಸುತ್ತಾರೆ, ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಇವರ ಜೊತೆ ಔಷಧಿ ತಯಾರಿಗೆ ಜನ ಬೇಕಾದರೆ ಕೂಡಾ ಇವರೇ ಕರೆದುಕೊಂಡು ಬರುತ್ತಾರೆ. 8 ಜನರಿಗೆ ಕನಿಷ್ಟ 3 ಜನ ಸಹಾಯಕರ ಅಗತ್ಯವಿದೆ ಎನ್ನುವ ಯಶೋಧರ , ಈ ಹೊಣೆಯನ್ನೂ ನಾವು ಹೊತ್ತುಕೊಳ್ಳುತ್ತೇವೆ ಎಂದು  ಹೇಳುತ್ತಾರೆ.ಇಷ್ಟೂ ಜನ ಒಂದು ದಿನದಲ್ಲಿ  6 ರಿಂದ 7 ಸಾವಿರ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಾರೆ.ಮೋಟಾರು ಸಹಿತ ಮನೆಗೆ ಮನೆ ಆಗಮಿಸಿ ಔಷಧಿ ಸಿಂಪಡಣೆಯ ಕಾರ್ಯದಲ್ಲಿ  ನಿರತವಾಗುತ್ತದೆ.ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಅಡಿಕೆ ಕಟಾವು ವೇಳೆ ಕೂಡಾ ಜನವನ್ನೂ ವ್ಯವಸ್ಥೆ ಮಾಡಿ ಮನೆಗೆ ಬಂದು ಕೆಲಸ ಮಾಡಿ ತೆರಳುತ್ತಾರೆ.ಇಡೀ ವರ್ಷ ಈ ತಂಡ ಇದೇ ಕೆಲಸ ಮಾಡುತ್ತದೆ.ಮೋಟಾರಿಗೆ ಬಾಡಿಗೆ 2 ಸಾವಿರ ರೂಪಾಯಿ ಪಡೆಯುವ ಈ ತಂಡ ತಮ್ಮ ಕೆಲಸ ಕಾರ್ಯಗಳಿಗೆ ದಿನ ಲೆಕ್ಕದಲ್ಲಿ  ಸಂಬಳವನ್ನು  ಪಡೆಯುತ್ತಾರೆ.ಇವರು  ದಿನಕ್ಕೆ 1200 ರೂಪಾಯಿ ಸಂಬಳ ಪಡೆಯುತ್ತಾರೆ.ಬದಲಾವಣೆ ಬೇಕು.  .
ಈಗ ಇಲ್ಲಿ  ರಚನೆಯಾದ ತಂಡ ಬಹುಶ: ಶಾಶ್ವತವಾಗಬಹುದು.ಏಕೆಂದರೆ ತಂಡದ ಸದಸ್ಯರು ಬಹುತೇಕ ಮಂದಿ ಸಂಬಂಧಿಕರು.ಒಂದೆರಡು ಮಂದಿ ಮಾತ್ರವೇ ಇತರರು. ಹೀಗಾಗಿ ತಂಡ ಒಡೆಯುವ ಸಾಧ್ಯತೆ ಕಡಿಮೆ.ಒಡೆದರೂ ಮತ್ತೊಂದು ಅಂತಹದ್ದೇ ತಂಡ ರಚನೆಯಾಗಬಹುದು.ಇದು ಕೂಡಾ ಕೃಷಿಕರಿಗೆ ಪ್ರಯೋಜನ. ಇದರ ಜೊತೆಗೇ ಸಹಕಾರಿ ಸಂಘಗಳು ಇಂತಹ ತಂಡ ರಚನೆ ಮಾಡುವ ಬಗ್ಗೆ ಯೋಚಿಸಿದರೆ ಹೆಚ್ಚು ಗಟ್ಟಿಯಾಗಬಹುದು. ಏಕೆಂದರೆ ಆಗ ಸಹಕಾರಿ ಸಂಘಕ್ಕೆ ಬದ್ದತೆ ಇರುತ್ತದೆ. ಕೃಷಿಕರಿಗೂ ಹಾಗೆಯೇ. ಇನ್ನು  ಸಂಬಳದ ಬಗ್ಗೆ ಕೃಷಿಕರು  ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಏಕೆಂದರೆ ಒಂದೇ ದಿನದಲ್ಲಿ  ತೋಟದ ಔಷಧಿ ಸಿಂಪಡಣೆ ಕೆಲಸ ಮುಗಿಯುತ್ತದೆ, ಎಷ್ಟೇ ಮಳೆ ಇದ್ದರೂ ದಿನದಲ್ಲಿ  ಒಂದೆರಡು ಗಂಟೆ ಮಳೆಗೆ ವಿರಾಮ ಇದ್ದೇ ಇರುತ್ತದೆ.ಆಗ ಬಹುಪಾಲು ಸಿಂಪಡಣೆಯೂ ಆಗುತ್ತದೆ.
ಹೊಸ ಪ್ರಕ್ರಿಯೆಗಳು ಆರಂಭವಾದಾಗ ಕೆಲವೊಂದು ಲೋಪಗಳೂ ಇರುತ್ತದೆ. ಆದರೆ ಕೃಷಿಕರು ಎಲ್ಲವೂ ನಾವು ಅಂದುಕೊಂಡತೇ ಈಗ ಆಗಬೇಕು ಎಂದರೂ ಆಗದು.ಹೀಗಾಗಿ ಬದಲಾವಣೆ ಬೇಕು, ಅದನ್ನು  ಒಪ್ಪಿಕೊಳ್ಳಬೇಕು, ತೀರಾ ನಷ್ಟವಾಗುವುದಾದರೆ ಮಾತ್ರವೇ ಯೋಚಿಸಬೇಕು. ಹೀಗಾದಾಗ ಕೃಷಿ ಉಳಿಯಲು, ಬೆಳೆಯಲು ಸಾಧ್ಯವಿದೆ.
.ಮನಸ್ಸೇ ಬೀಗ ತೆಗೆ. . .


ಅನೇಕ ದಿನಗಳಿಂದ ಈ ಕಡೆಗೆ ಬರಲು ಸಾದ್ಯವೇ ಆಗಿರಲಿಲ್ಲ.ಮನಸ್ಸು ಸದಾ ಇತ್ತ ಹೊರಳುತ್ತಲೇ ಇತ್ತು.ಆದರೆ ಸಾಧ್ಯವಾಗುತ್ತಿರಲಿಲ್ಲ, ಅದಕ್ಕೊಂದು ಬೀಗ ಇತ್ತು.ಈಗಂತೂ ಆ ಬೀಗ ಕಳಚಿ ಬಂದಿದ್ದೇನೆ. .

ಅಂದು ಒಂದು ದಿನ ನಾನು ಮನಸ್ಸಿನ ಸಂಗತಿಗಳನ್ನು  ಮೌನವಾಗಿ ಹೇಳುತ್ತಿದೆ, ಇದೆಲ್ಲವೂ ಇಲ್ಲಿ ದಾಖಲಿಸುತ್ತಲೇ ಇದ್ದೆ.ಅನೇಕ ರೀತಿಯಿಂದ ಸ್ಪೂರ್ತಿ, ಪ್ರೋತ್ಸಾಹ ಇತ್ತು. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಒತ್ತಡ ಬಂದಿತ್ತು, ಹಿತವಚನ, ಸಲಹೆ ಬಂತು. ಕೊನೆಗೆ ಈ ವೇಗಕ್ಕೆ ಕಡಿವಾಣ ಹಾಕಿದೆ.ಮನಸ್ಸಿನ ಮಾತಿಗೆ ಬೀಗ ಜಡಿದೆ. ಆದರೆ ನನಗೆ ಈಗಲೂ ನೆನಪಿದೆ, ಅಂದು ನನ್ನ ಮನಸ್ಸಿನ ಮೂಲಕ ಬಂದ ಮೌನದ ಮಾತುಗಳು ಇಂದು ದೊಡ್ಡ ಸುದ್ದಿಯಾಗಿದೆ. ಚರ್ಚೆಯಾಗುತ್ತಲೇ ಇದೆ. ಇರಲಿ ನನಗೆ ಅದು ಸಂಬಂಧಪಟ್ಟದ್ದಲ್ಲ. ನನಗೆ ಯಾರ ಬಳಿಯೂ ಬೇಸರವಿಲ್ಲ, ನೋವುಗಳೂ ಇಲ್ಲ. ಯಾರ ವಿರೋಧಿಯಂತೂ ಅಲ್ಲವೇ ಅಲ್ಲ. ಎಲ್ಲರೂ ನನ್ನವರೇ, ನಮ್ಮವರೇ. ಅಂದು ಮನಸ್ಸು ಕೊಂಚ ಮೌನವಾಗಿತ್ತು, ಮೌನಿಯಾಗಿತ್ತು. ಆದರೆ ಈಗ ಹಾಗಿಲ್ಲ. ಎಲ್ಲವೂ ರೈಟ್, ಎಲ್ಲದಕ್ಕೂ ರೈಟ್. ಹಾಗಿದ್ದರೂ ಈ ಬೀಗ ತೆರವು ಮಾಡಲು ಆಗಿರಲಿಲ್ಲ. ಈಗ ತೆರೆದಿದ್ದೇನೆ.
ಇಂದಿನಿಂದಲೇ ಇಲ್ಲಿ  ಶುರು.  ..