18 ಡಿಸೆಂಬರ್ 2013

ಗಿಡ ಮಾತಾಡಿತು. . !


ಅನೇಕ ದಿನಗಳ ಬಳಿಕ ಬ್ಲಾಗಿಲು ತೆಗೆಯಿತು. .!, ಹಾಗೆಯೇ ಒಳಗೆ ಹೋದಾಗ ಖುಷಿಯಾಯಿತು. .!
ಮನಸ್ಸು ಈಗ ನಿರಾಳವಾಗಿದೆ. ಮೌನ ಮಾತಾಗಿದೆ.

ಕಳೆದ ಕೆಲವು ದಿನಗಳಿಂದ ಮನಸ್ಸು ಓಡುತ್ತಲೇ ಇತ್ತು,ಯೋಚಿಸುತ್ತಲೇ ಇತ್ತು.ಆದರೆ ದೇಹ ಇದು ಯಾವುದಕ್ಕೂ ಸ್ಪಂದಿಸುತ್ತಲೇ ಇರಲಿಲ್ಲ.ಹಾಗೆಂದು  ಮನಸ್ಸು ದೇಹ ಎರಡಕ್ಕೂ ತಾಳ-ಮೇಳವೇ ಇಲ್ಲ ಎಂದಲ್ಲ, ಅನಗತ್ಯ ಯೋಚನೆ, ಓಡುವ ಮನಸ್ಸಿನ ಕಡೆಗೆ ಲಕ್ಷ್ಯ ಬೇಡ ಎನ್ನುತ್ತಿತ್ತು ಅಷ್ಟೇ.

ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಮನೆಯ ಸುತ್ತಲೂ ಇರುವ ತೋಟದ ಕಡೆಗೆ ,ಗಿಡಗಳ ಕಡೆಗೆ ಲಕ್ಷ್ಯ ಕೊಟ್ಟು ಹೋದದ್ದೇ ಕಡಿಮೆ.ಅದೇನೇ ಇದ್ದರೂ ಒಂದಷ್ಟು ಕೆಲಸ ಮಾಡಿ ಕೂಡಲೇ ಬೇರೆ ಕಡೆ ತೆರಳಬೇಕಾಗಿತ್ತು. ಅನಿವಾರ್ಯ ಕೂಡಾ ಆಗಿತ್ತು ಅದು.ಈಗ ಕೊಂಚ ಬಿಡುವು. ಇಡೀ ತೋಟದ ಕಡೆಗೆ ಹೋದಾಗ ಗಿಡಗಳೆಲ್ಲಾ ಸಿಟ್ಟಾಗಿದ್ದುವೋ ಏನೋ , ಮಾತನಾಡುತ್ತಿರಲಿಲ್ಲ , ಎಲ್ಲಾ ಗಿಡಗಳು ಕೂಡಾ ದುರುಗುಟ್ಟಿ ನೋಡಿದಂತೆ ಅನಿಸಿತೊಡಗಿತು.ಪ್ರತೀ ಗಿಡ ನನ್ನನ್ನು ಅಣಕಿಸುತ್ತಿತ್ತು, ಕೊನೆಗೂ ನಮ್ಮ ಪಾದದ ಕಡೆಗೆ ಬಂದೆಯಾ ಎಂಬಂತೆ ಭಾಸವಾಯಿತು. .!.ಮತ್ತೆ ಮತ್ತೆ ತೋಟದ ಕಡೆಗೆ ಹೆಜ್ಜೆ ಹಾಕಿದೆ , ಗಿಡಗಿಗೂ ಖಷಿಯಾಯಿತು , ಈಗ ಪ್ರೀತಿಯಿಂದ ಸ್ವಾಗತಿಸಿದೆ , ಮಾತನಾಡಿತು. . !, ಅಕ್ಕರೆಯಿಂದ ಗಾಳಿಯ ನೀಡಿ ತಂಪು ನೀಡಿತು.


ಈಗ ನನಗನಿಸಿತು ,ಒಳಗೊಳಗೇ ಪ್ರಶ್ನೆ ಮೂಡಿತು ಅಷ್ಟೂ ದಿನಗಳ ಕಾಲ ನಾನು ಓಡಡಿದ ಆ ಊರು , ಆ ಜನ ಈಗ ಎಲ್ಲಿದ್ದಾರೆ ?, ಮಾಡಿದ ಅಷ್ಟೂ ಕೆಲಸಗಳು ಏನಾದವು ?, ಇಲ್ಲ ಉತ್ತರವೇ ಇಲ್ಲ.ಆದರೆ ಒಂದಂತೂ ಸತ್ಯ ,ಒಂದಷ್ಟು ಜನ ಗುರುತಿಸಿದ್ದಾರೆ , ಎಲ್ಲೋ ಒಮ್ಮೊಮ್ಮೆ ನೆನಪಾಗುತ್ತದೆ, ಆದರೆ ಅದೆಲ್ಲಾ ಕ್ಷಣಿಕ. . !.ಹಾಗಿದ್ದರೆ ಏನು ಸಾರ್ಧಕ ? ಎಂಬ ನನ್ನ ಪ್ರಶ್ನೆಗೆ ಉತ್ತರ ಆಳದಲ್ಲಿದೆ. ಹೆಕ್ಕಿ ತೆಗೆಯಬೇಕು.

ಆದರೆ ನಾನು ಆ ನನ್ನ ಗಿಡಗಳ ಬಳಿಗೆ ಹೋಗಿ ಪ್ರೀತಿಯಿಂದ ಮಾತನಾಡಿದೇ ಹೋದರೂ ಕೂಡಾ ಇಂದು ಮತ್ತೆ ನನ್ನನ್ನು ಸ್ವಾಗತಿಸಿದೆ , ಅದೂ ಅಣಕಿಸುತ್ತಾ ಕೇಳಿದೆ ,"ಎಲ್ಲೆಲ್ಲೋ ಸುತ್ತಾಡಿದೆ, ಸುಮಾರು 10 ವರ್ಷಗಳಿಂದ ಊರು ಊರು ಅಲೆದಾಟ ಮಾಡಿದೆ , ಯಾರ್ಯಾರನ್ನೋ ಮಾತನಾಡಿಸಿದೆ , ಸಹಾಯ ಮಾಡಿದೆ, ಈಗ ಏನಾಯಿತು ?" 

ಇದಕ್ಕೆ ಮೌನವೇ ಉತ್ತರ. . !

ಗಿಡದ ಹತ್ತಿರ ಮತ್ತೆ ಮತ್ತೆ ಮಾತಾಡಿದೆ,ಸಂಜೆಯವರೆಗೆ ಗಿಡಗಳ ಬಳಿಯೇ ಓಡಾಡಿದೆ.
ಅದಕ್ಕೂ ಖುಷಿಯಾಯಿತು , ನನಗೂ ಮತ್ತೆ ಹೊಸಹುರುಪು ಬಂತು, ಮನಸ್ಸು ಉಲ್ಲಾಸದಿಂದ ಕುಣಿಯಿತು.
 ಈ ಹಿಂದೆ ಯಾರ್ಯಾರಲ್ಲೋ ನನ್ನ ಬಗ್ಗೆ ವಿಚಾರಿಸುತ್ತಾ, ದಿನವಿಡೀ ಓಡಾಡಿದರೂ ಕಚೇರಿಗೇ ಬಂದೇ ಇಲ್ಲ ಎಂಬ ಮಾತುಗಳು ಈಗ ಕೇಳಲೇ ಬೇಕಿಲ್ಲ , ಏಕೆಂದರೆ ಈಗ ಗಿಡಗಳೇ ನನ್ನ ಹಾಜರಿಯನ್ನು ಖಚಿತ ಪಡಿಸುತ್ತಿವೆ.!.

ಆದರೂ ಮತ್ತೆ ಮತ್ತೆ ಅದೇ ಕಾಡುತ್ತದೆ , 10 ವರ್ಷ ವ್ಯರ್ಥವಾಯಿತಾ ? ,ವ್ಯರ್ಥವಾದ 10 ವರ್ಷಗಳ ನಂತರ ಹೊಸತೊಂದು "ಸೇವೆ"ಗೆ ಅವಕಾಶವಾಯಿತಾ ?. 

ಈಗ ಮತ್ತೆ ಅದೇ ಸುದ್ದಿ ಬಂದಾಗ ಗಿಡಗಳು ನನ್ನನ್ನು ದುರುಗುಟ್ಟಿ ನೋಡುತ್ತಿದೆ. . ! ಏನೆಂದು  ಹೇಳಲಿ ಅವುಗಳಿಗೆ ?.
ಅವುಗಳ ಪ್ರೀತಿಯಿಂದ ಹೊರಬರಲು ಆಗುತ್ತಲೇ ಇಲ್ಲ.