28 ಡಿಸೆಂಬರ್ 2012

ಊಟದಲ್ಲಿದೆ ಪ್ರೀತಿಯ ಬೆಸುಗೆ. . .! ಅನೇಕ ದಿನಗಳಾಯಿತು , ಈ ಕಡೆ ಬರದೆ. ಅದ್ಯಾಕೋ ಏನೋ ಮನಸ್ಸು ಕಳೆದ ಕೆಲವು ದಿನಗಳಿಂದ ಸುಮ್ಮನೆ ಯೋಚಿಸುತ್ತಲೇ ಇತ್ತು. ಅಬ್ಬಾ ಇಮ್ದು ಬಿಡುವು ಸಿಕ್ಕಿತು.

                 * * * * * *

 ಮೊನ್ನೆ ತಡವಾಗಿತ್ತು ಊಟ ಮಾಡುವಾಗ. ಕಾರಣ ಇಷ್ಟೇ , ನನ್ನ ಬಾಲ್ಯ ಸ್ನೇಹಿತನೊಬ್ಬ ದೂರವಾಣಿಯಲ್ಲಿ  ಈಗ ಬಂದೆ ಜೊತೆಯಲ್ಲೇ ಊಟ ಮಾಡೋಣ ಅಂದಿದ್ದ. ಆಗಲೇ ಸಮಯ ಒಂದೂವರೆ ಕಳೆದಿತ್ತು.ನನಗೆ ಹಸಿವು  ಜೋರಾಗಿದ್ದರೂ , ಆ ಕ್ಷಣಕ್ಕೆ ಹಸಿವು  ನಿಂತೇ ಹೋಗಿತ್ತು , ಬಾಲ್ಯದ ಆ ಕ್ಷಣಗಳು ನೆನೆಪಾಗಿತ್ತು. ಅಂತೂ   ಎರಡು ಗಂಟೆಯ ಹೊತ್ತಿಗೆ ಬಾಲ್ಯದ ದಿನಗಳ ನೆನಪಿಸುತ್ತಾ , ಊಟದ ಹೊತ್ತಲ್ಲಿ  ಕಾಲ ಕಳೆದೆವು. ಅಂದಿನ ಊಟದ ಹೊತ್ತು , ಮಧುರವಾದ ನೆನಪಿಗೆ ನಾಂದಿಯಾಯಿತು.

                             * *

 ಅಂದು  ರಾತ್ರಿ ಮೆನೆಗೆ ಬರುವಾಗ ತಡವಾಗಿತ್ತು , ರಾತ್ರಿ ೧೦ ಕಳೆದಿತ್ತು. ಅಮ್ಮ ಮತ್ತು ಪತ್ನಿ ಆಗಲೂ ಕಾಯುತ್ತಿದ್ದರೂ ಒಂದಷ್ಟು ದೂರವಾಣಿ ಕರೆ ಮಾಡುತ್ತಾ, "ಎಲ್ಲಿದ್ದೀರಿ . . . ಎಷ್ಟೊತ್ತಿಗೆ ಬರುತ್ತೀರಿ " ಎಂದು ಕೇಳುತ್ತಾ , ಕಾದು ಕುಳಿತಿದ್ದರು , ಊಟಕ್ಕೆ. ಅಂತೂ ರಾತ್ರಿ ೧೦.೩೦ ಕ್ಕೆ ಜೊತೆಯಲ್ಲೇ ಊಟ , ಆ ದಿನದ ಖುಷಿಯ ಸಂದರ್ಭ ಮೆಲುಕು ಹಾಕುತ್ತಾ ,  ಆ ಕ್ಷಣಕ್ಕೆ ನಾಂದಿಯಾದ್ದು ಊಟ.

                                 * *

ಇಂದು ಮಧ್ಯಾಹ್ನ ಭಾವ ಪೋನು ಮಾಡಿ, ಎಲ್ಲಿದ್ದೀರಿ , ಊಟ ಮಾಡೋಣವೇ ಅಂತ ಕೇಳಿದರು , ಇಲ್ಲ, ನನಗೆ ಊಟ ಆಯಿತು ಎಂದಾಗ, ಸರಿ  ಹಾಗಾದರೆ ನಾನೂ ಮನೆಗೆ ಹೋಗುತ್ತೇನೆ , ಎನ್ನುವಾಗ , ಅಲ್ಲಿ ಒಂಟಿತನ ಕಂಡಿತ್ತು.

                                         * *

ಅಂತೆಯೇ ಯಾವಾಗಲಾದರೂ ಜೊತೆಯಾಗುವಾಗ , ಅಚಾನಕ್ ಆಗಿ ಸಿಗುವ ಗೆಳೆಯರು , ಆತ್ಮಿಯರೋ ಸಿಕ್ಕಾಗ, ಬನ್ನಿ ಟೀ ಕುಡಿಯೋಣ , ತಿನ್ನೋಣ ಅಂತಲೂ ಹೇಳುವಾಗ ಅಲ್ಲೊಂದು ಸಂಬಂಧ ಇರುತ್ತದೆ. ಅದಕ್ಕೆ ಆಗ ಜೊತೆಯಾಗುವುದು  ಊಟವೋ  . ಚಹಾವೋ , ಕಾಫಿಯೋ. ಹಾಗಾದರೆ ಆ ಊಟಕ್ಕೆ ಎಷ್ಟೊಂದು ಶಕ್ತಿ ಇದೆ. ಸಂಬಂಧವನ್ನು ಉಳಿಸುವ , ಬೆಳೆಸುವ  ಆ ಮಧುರ  ಕ್ಷಣ ನೆನಪಿಸುವ ಸಂದರ್ಭ ಈಗ ಅಪರೂಪವೇ ಅಂತ ಕೆಲವೊಮ್ಮೆ ಅನಿಸಿದ್ದಿದೆ. ಹಾಗೆಯೇ ಕೆಲವೊಮ್ಮೆ ಏಕಾಂಗಿಯಾದಾಗ ಉಪವಾಸ ಇದ್ದ ಸಂದರ್ಭವೂ ಇದೆ. ಇದು  ಅನೇಕರ ಅನುಭವವೂ ಹೌದು.


ಅಂತಹ ಊಟದಲ್ಲಿ ,ಉಣ್ಣುವ ಸಂದರ್ಭದಲ್ಲಿ ನಮಗಾಗಿ  ಅಲ್ಲಿ ಮನೆಯಲ್ಲಿ ಪತ್ನಿಯೋ , ಅಮ್ಮನೋ , ಗೆಳೆಯನೋ ಅಥವಾ ಇನ್ಯಾರೋ ಕಾಯುತ್ತಾರಲ್ಲಾ , ನಾವು ಅಣ್ಣ , ತಮ್ಮ, ಭಾವ, ಗೆಳೆಯ ಅಂತ ಯಾರಿಗೋ ಕಾಯುತ್ತೇವಲ್ಲಾ ಆ ಕಾಯುವಿಕೆಯ ಹಿಂದೆ ನಮಗರಿವಿಲ್ಲದ ಸ್ನೇಹ , ಪ್ರೀತಿ ಇರುತ್ತದೆ. ಅದು ಇಡೀ ಬದುಕಿನುದ್ದಕ್ಕೂ ನಮಗೆ ಸಿಗುತ್ತಲೇ ಇರುತ್ತದೆ.