28 ಡಿಸೆಂಬರ್ 2012

ಊಟದಲ್ಲಿದೆ ಪ್ರೀತಿಯ ಬೆಸುಗೆ. . .! ಅನೇಕ ದಿನಗಳಾಯಿತು , ಈ ಕಡೆ ಬರದೆ. ಅದ್ಯಾಕೋ ಏನೋ ಮನಸ್ಸು ಕಳೆದ ಕೆಲವು ದಿನಗಳಿಂದ ಸುಮ್ಮನೆ ಯೋಚಿಸುತ್ತಲೇ ಇತ್ತು. ಅಬ್ಬಾ ಇಮ್ದು ಬಿಡುವು ಸಿಕ್ಕಿತು.

                 * * * * * *

 ಮೊನ್ನೆ ತಡವಾಗಿತ್ತು ಊಟ ಮಾಡುವಾಗ. ಕಾರಣ ಇಷ್ಟೇ , ನನ್ನ ಬಾಲ್ಯ ಸ್ನೇಹಿತನೊಬ್ಬ ದೂರವಾಣಿಯಲ್ಲಿ  ಈಗ ಬಂದೆ ಜೊತೆಯಲ್ಲೇ ಊಟ ಮಾಡೋಣ ಅಂದಿದ್ದ. ಆಗಲೇ ಸಮಯ ಒಂದೂವರೆ ಕಳೆದಿತ್ತು.ನನಗೆ ಹಸಿವು  ಜೋರಾಗಿದ್ದರೂ , ಆ ಕ್ಷಣಕ್ಕೆ ಹಸಿವು  ನಿಂತೇ ಹೋಗಿತ್ತು , ಬಾಲ್ಯದ ಆ ಕ್ಷಣಗಳು ನೆನೆಪಾಗಿತ್ತು. ಅಂತೂ   ಎರಡು ಗಂಟೆಯ ಹೊತ್ತಿಗೆ ಬಾಲ್ಯದ ದಿನಗಳ ನೆನಪಿಸುತ್ತಾ , ಊಟದ ಹೊತ್ತಲ್ಲಿ  ಕಾಲ ಕಳೆದೆವು. ಅಂದಿನ ಊಟದ ಹೊತ್ತು , ಮಧುರವಾದ ನೆನಪಿಗೆ ನಾಂದಿಯಾಯಿತು.

                             * *

 ಅಂದು  ರಾತ್ರಿ ಮೆನೆಗೆ ಬರುವಾಗ ತಡವಾಗಿತ್ತು , ರಾತ್ರಿ ೧೦ ಕಳೆದಿತ್ತು. ಅಮ್ಮ ಮತ್ತು ಪತ್ನಿ ಆಗಲೂ ಕಾಯುತ್ತಿದ್ದರೂ ಒಂದಷ್ಟು ದೂರವಾಣಿ ಕರೆ ಮಾಡುತ್ತಾ, "ಎಲ್ಲಿದ್ದೀರಿ . . . ಎಷ್ಟೊತ್ತಿಗೆ ಬರುತ್ತೀರಿ " ಎಂದು ಕೇಳುತ್ತಾ , ಕಾದು ಕುಳಿತಿದ್ದರು , ಊಟಕ್ಕೆ. ಅಂತೂ ರಾತ್ರಿ ೧೦.೩೦ ಕ್ಕೆ ಜೊತೆಯಲ್ಲೇ ಊಟ , ಆ ದಿನದ ಖುಷಿಯ ಸಂದರ್ಭ ಮೆಲುಕು ಹಾಕುತ್ತಾ ,  ಆ ಕ್ಷಣಕ್ಕೆ ನಾಂದಿಯಾದ್ದು ಊಟ.

                                 * *

ಇಂದು ಮಧ್ಯಾಹ್ನ ಭಾವ ಪೋನು ಮಾಡಿ, ಎಲ್ಲಿದ್ದೀರಿ , ಊಟ ಮಾಡೋಣವೇ ಅಂತ ಕೇಳಿದರು , ಇಲ್ಲ, ನನಗೆ ಊಟ ಆಯಿತು ಎಂದಾಗ, ಸರಿ  ಹಾಗಾದರೆ ನಾನೂ ಮನೆಗೆ ಹೋಗುತ್ತೇನೆ , ಎನ್ನುವಾಗ , ಅಲ್ಲಿ ಒಂಟಿತನ ಕಂಡಿತ್ತು.

                                         * *

ಅಂತೆಯೇ ಯಾವಾಗಲಾದರೂ ಜೊತೆಯಾಗುವಾಗ , ಅಚಾನಕ್ ಆಗಿ ಸಿಗುವ ಗೆಳೆಯರು , ಆತ್ಮಿಯರೋ ಸಿಕ್ಕಾಗ, ಬನ್ನಿ ಟೀ ಕುಡಿಯೋಣ , ತಿನ್ನೋಣ ಅಂತಲೂ ಹೇಳುವಾಗ ಅಲ್ಲೊಂದು ಸಂಬಂಧ ಇರುತ್ತದೆ. ಅದಕ್ಕೆ ಆಗ ಜೊತೆಯಾಗುವುದು  ಊಟವೋ  . ಚಹಾವೋ , ಕಾಫಿಯೋ. ಹಾಗಾದರೆ ಆ ಊಟಕ್ಕೆ ಎಷ್ಟೊಂದು ಶಕ್ತಿ ಇದೆ. ಸಂಬಂಧವನ್ನು ಉಳಿಸುವ , ಬೆಳೆಸುವ  ಆ ಮಧುರ  ಕ್ಷಣ ನೆನಪಿಸುವ ಸಂದರ್ಭ ಈಗ ಅಪರೂಪವೇ ಅಂತ ಕೆಲವೊಮ್ಮೆ ಅನಿಸಿದ್ದಿದೆ. ಹಾಗೆಯೇ ಕೆಲವೊಮ್ಮೆ ಏಕಾಂಗಿಯಾದಾಗ ಉಪವಾಸ ಇದ್ದ ಸಂದರ್ಭವೂ ಇದೆ. ಇದು  ಅನೇಕರ ಅನುಭವವೂ ಹೌದು.


ಅಂತಹ ಊಟದಲ್ಲಿ ,ಉಣ್ಣುವ ಸಂದರ್ಭದಲ್ಲಿ ನಮಗಾಗಿ  ಅಲ್ಲಿ ಮನೆಯಲ್ಲಿ ಪತ್ನಿಯೋ , ಅಮ್ಮನೋ , ಗೆಳೆಯನೋ ಅಥವಾ ಇನ್ಯಾರೋ ಕಾಯುತ್ತಾರಲ್ಲಾ , ನಾವು ಅಣ್ಣ , ತಮ್ಮ, ಭಾವ, ಗೆಳೆಯ ಅಂತ ಯಾರಿಗೋ ಕಾಯುತ್ತೇವಲ್ಲಾ ಆ ಕಾಯುವಿಕೆಯ ಹಿಂದೆ ನಮಗರಿವಿಲ್ಲದ ಸ್ನೇಹ , ಪ್ರೀತಿ ಇರುತ್ತದೆ. ಅದು ಇಡೀ ಬದುಕಿನುದ್ದಕ್ಕೂ ನಮಗೆ ಸಿಗುತ್ತಲೇ ಇರುತ್ತದೆ.
11 ಅಕ್ಟೋಬರ್ 2012

ಇಲ್ಲಿ ರೇಖೆಯೇ ಚಿತ್ರವಾಗುತ್ತದೆ . . .. . .!
 ‘ಒಮ್ಮೆಯೂ ರಬ್ಬರ್ ಬಳಸದೆ ಮಕ್ಕಳು ಚಿತ್ರ ಬಿಡಿಸುತ್ತಾರೆ’ ಅಂತ  ಕಲಾವಿದ ಮೋಹನ್ ಸೋನಾ, ಮಕ್ಕಳು ಬಿಡಿಸಿದ್ದ ಒಂದಷ್ಟು  ಚಿತ್ರಗಳನ್ನು  ಅತಿಥಿಗಳಿಗೆ ವಿವರಿಸುತ್ತಾ  ಸಾಗುತ್ತಿದ್ದರು. ಒಂದರಿಂದ  ಮತ್ತೊಂದು ಚಿತ್ರ ಅತ್ಯಂತ ವಿಶಿಷ್ಠವಾಗಿತ್ತು. ಇದೆಲ್ಲಾ ಎಳೆಯ ಮಕ್ಕಳು ಬಿಡಿಸಿದ ಚಿತ್ರ, ಎನ್ನುವಾಗ ಆ ಮಕ್ಕಳ ಒಳಗೆ ಇರುವ ಮುಗ್ದತೆ ತರೆದು ಕಾಣುತ್ತಿತ್ತು. ಇದೆಲ್ಲಾ ಕಂಡ್ಡದ್ದು  ಬಾಲವನದಲ್ಲಿ.

ಪುತ್ತೂರಿನ ಬಾಲವನದಲ್ಲಿ  ಡಾ.ಶಿವರಾಮ ಕಾರಂತರ ಜನ್ಮದಿನವನ್ನು  ಆಚರಿಸಲಾಗುತ್ತಿತ್ತು. ಅದೇ ಹೊತ್ತಿಗೆ ಕಾರಂತ ಪ್ರೀತಿಯ ಮಕ್ಕಳಿಗೂ ಚೂರು ಜಾಗ ಕಲ್ಪಿಸಲಾಗಿತ್ತು. ಇದುವರೆಗೆ ಇಲ್ಲದ ಚಿತ್ರಪ್ರದರ್ಶನ ಇಂದು  ಕಂಡುಬಂದಿತು. ನೋಡುವಾಗ ಸಾಮಾನ್ಯ ಎನಿಸಿದರೂ , ಆ ಚಿತ್ರದಲ್ಲಿ ಅಭಿವ್ಯಕ್ತಗೊಳ್ಳುವ ಸಂಗತಿಗಳು  ನಿಜಕ್ಕೂ  ಅಚ್ಚರಿ ಮೂಡಿಸುತ್ತಿತ್ತು. ಕಾರಣ ಅಲ್ಲಿ  ಇದ್ದ ಮಕ್ಕಳು  5 ವರ್ಷದಿಂದ 14 ವಯಸ್ಸಿನ ಪುಟಾಣಿಗಳು.  ಕಳೆದ ಸುಮಾರು  ಎರಡು ವರ್ಷದಿಂದ ಬಾಲವನದಲ್ಲಿ  ಕಲಾವಿದ ಮೋಹನ ಸೋನಾ ಹಾಗೂ  ಚಂದ್ರ ಸೌಗಂಧಿಕಾ ಇವರ ನೇತೃತ್ವದಲ್ಲಿ  ಮಕ್ಕಳಿಗಾಗಿ ಚಿತ್ರ ತರಬೇತಿ ಪ್ರತೀ  ಭಾನುವಾರ    ನಡೆಯುತ್ತಲೇ ಇದೆ. ಕಳೆದ 2 ವರ್ಷದಿಂದ ಭಾನುವಾ ರದಂದು  ಬೆಳಗ್ಗೆ 9 ರಿಂದ ಮಧ್ಯಾಹ್ನದ ವರೆಗೆ   ತರಬೇತಿ ನಡೆಯುತ್ತಿತ್ತು. ಈಗ 26 ಪುಟಾಣಿಗಳು ಇಲ್ಲಿದ್ದಾರೆ.

ಕಾನ್ಸೆಪ್ಟ್ ಮಾತ್ರಾ ; ಚಿತ್ರ ರಚನೆಯೇ ಅಚ್ಚರಿ . .! :

 ಸಾಮಾನ್ಯವಾಗಿ  ಚಿತ್ರ ರಚಿಸುವ ವೇಳೆ ಹತ್ತಾರು ಬಾರಿ ಉಜ್ಜಿ , ತಿದ್ದಿ ತೀಡಿ ಬರೆಯಬೇಕಾಗುತ್ತದೆ. ಆದರೆ ಇಲ್ಲಿ  ಹಾಗಿಲ್ಲ. ಒಮ್ಮೆ ಬರೆದ ಗೆರೆಯನ್ನು  ಅಳಿಸುವ ಹಾಗಿಲ್ಲ,. ಏಕೆಂದರೆ ಪ್ರಕೃತಿಯಲ್ಲಿ ನೇರ ಸರಿಯಾದ ರೇಖ್ಹೆಯೇ ಇಲ್ಲ , ಇನ್ನು ರಬ್ಬರ್ ಬಳಕೆ ಇಲ್ಲವೇ ಇಲ್ಲ , ಏಕೆಂದರೆ ಪರಿಸರ ಎಂದಿಗೂ ತನ್ನ ಸೃಷ್ಠಿಯನ್ನು ಅಳಿಸುವುದಿಲ್ಲ , ನಿಲ್ಲಿಸುವುದಿಲ್ಲ. ಇನ್ನು
ಪ್ರತಿಯೊಂದು ಮಗುವಿನಲ್ಲೂ ಅದರದ್ದೇ   ಆದ ಸಾಮರ್ಥ್ಯ ಇರುತ್ತದೆ , ಮತ್ತು ಅದರ ಮನಸ್ಸಿನ ಒಳಗೆ ಅನೇಕ ವಿಚಾರಗಳೂ   ಇರುತ್ತದೆ , ಇದು  ತಾನಾಗಿಯೇ ಹೊರಬರಬೇಕು ಎಂಬುದು  ಮೋಹನ್ ಸೋನಾ ಹಾಗೂ ತಂಡದ ಉದ್ದೇಶ.  . ಹೀಗಾಗಿ  ಒಂದು ರೇಖೆ ಮತ್ತೊಂದಕ್ಕೆ ಸಹಕಾರಿ ಆಗುತ್ತದೆ.


ಮಕ್ಕಳೇ 57 ಬಗೆಯ ಬಣ್ಣ ತಯಾರಿಸಿದರು.  ..! :ಇದಂತೂ ಅಚ್ಚರಿಯ ಸಂಗತಿ. ಇಲ್ಲಿ  ಮಕ್ಕಳು ಬಿಡಿಸುವ ಯಾವ ಚಿತ್ರಕ್ಕೂ ಪೇಟೆಯಿಂದ ಬಣ್ಣ ತರುವ ಹಾಗಿಲ್ಲ.ಪರಿಸರದಲ್ಲಿ ಲ‘ವಾಗುವ ಬಣ್ಣಗಳೇ ಚಿತ್ರದ ಬಣ್ಣಗಳು. ಇದಕ್ಕಾಗಿ  ಗ್ರಾಮೀಣ ಪ್ರದೇಶಕ್ಕೆ ವಿದ್ಯಾರ್ಥಿಗಳು ಹೋದಾಗ  ಬೇಂಗ ಮರದ ತೊಗಟೆಯಲ್ಲಿ  ಬರುವ ಕೆಂಪು ಬಣ್ಣ , ತೇಗದ ಮರದ ಎಲೆಯಲ್ಲಿ  ಬರುವ ಕೆಂಪು ಬಣ್ಣ ಇದನ್ನೆಲ್ಲಾ ಪ್ರಾತ್ಯಕ್ಷಿಕೆ ರೂಪದಲ್ಲಿ  ತೋರಿಸಿ ,  ಚಿತ್ರಕ್ಕೆ ಹೊಂದಿಕೆಯಾಗುವ ಬಣ್ಣವನ್ನು  ರಚನೆ ಮಾಡುವಂತೆ ಮಕ್ಕಳಿಗೆ ತಿಳಿಸಲಾಗಿತ್ತು. ಹೀಗಾಗಿ ಮಕ್ಕಳು  ಚಿತ್ರಕ್ಕಾಗಿ ಪೆನ್ನು , ಪೆನ್ಸಿಲ್ ಜೊತೆಗೆ ವಿವಿಧ  ಗಿಡಗಳ ಎಲೆಗಳು , ಸುಣ್ಣ , ಕಾಡಿಗೆ , ಹುಲ್ಲು , ಸೊಪ್ಪು  ಇತ್ಯಾದಿಗಳ ರಸ ತೆಗೆದು ಚಿತ್ರಕ್ಕೆ ಹಚ್ಚುತ್ತಿದ್ದಾರೆ. ಈಗ ಸುಮಾರು  ೫೭ ಬಗೆಯ  ಬಣ್ಣವನ್ನು  ಇದೇ ರೀತಿ  ಗಿಡಗಳ ಎಲೆಗಳಿಂದಲೇ ತಯಾರು ಮಾಡುತ್ತಿದ್ದಾರೆ.ಇದೆಲ್ಲಾ ಮಕ್ಕಳ ಮನಸ್ಸಿನ ಒಳಗೆ ಅಡಗಿರುವ ಸಂಶೋಧಕ ಗುಣ , ಇಡೀ ಚಿತ್ರದ ಮೂಲಕ ಮಕ್ಕಳ ವಯಸ್ಸು  ಹಾಗೂ ಮನಸ್ಸನ್ನು ಅರ್ಥ ಮಾಡಿಕೊಳ್ಳು ಸಾಧ್ಯವಿದೆ ಅಂತಾರೆ ಮೋಹನ ಸೋನಾ.

ಏನೆಲ್ಲಾ ಚಿತ್ರ ಬಿಡಿಸಿದರು ಮಕ್ಕಳು . . :

ಇದು ಇನ್ನೊಂದು ಅಚ್ಚರಿ. ಸಾಮಾನ್ಯವಾಗಿ ಮಕ್ಕಳ ಮನಸ್ಸಿನ ಒಳಗಿನ ಚಿಂತನಾ ಚಟುವಟಿಕೆ ಇಲ್ಲಿ  ಅನಾವರಣಗೊಂಡಿದೆ. ಕಲಾವಿದರ ತಂಡ ಕೇವಲ ಗ್ರಾಮೀಣ ಪ್ರದೇಶಕ್ಕೆ ತೆರಳಿ ಮಕ್ಕಳಿಗೆ ವಿಚಾರ ತಿಳಿಸಿ ನಂತರ ಚಿತ್ರ ಬರೆಯುವುದಕ್ಕೆ ಹೇಳುತ್ತದೆ. ಈ ಸಂದರ್ಭದಲ್ಲಿ  ಮಕ್ಕಳು  ಬಿಡಿಸಿದ ಚಿತ್ರ ಅಚ್ಚರಿಯಾಗುತ್ತದೆ. ಮನೆಯಲ್ಲಿ  ಅಮ್ಮ  ಅಕ್ಕಿ  ಕಡೆಯುವ ಚಿತ್ರ , ಆ ಬೀಸುವ ಕಲ್ಲಿನ ಪಕ್ಕ  ಕುಳಿತಿರುವ ಬೆಕ್ಕು , ಅಲ್ಲೇ ನೀರಿನ ಪಾತ್ರೆ. ಅದಾದ ನಂತರ ಇನ್ನೊಂದು ಚಿತ್ರ ರಬ್ಬರ್ ಟ್ಯಾಪಿಂಗ್ , ತಲೆಯಿಂದ ಹೇನು ಹೆಕ್ಕುವುದು , ಲಗೋರಿ ಆಟ , ಹಟ್ಟಿ , ಸೈಕಲ್ ರಿಪೇರಿ , ಮದುಮಗಳ ಸಿಂಗಾರ , ಅಡುಗೆ. . ಹೀಗೇ ಒಂದಕ್ಕಿಂತ ಮತ್ತೊಂದು ಭಿನ್ನ.

ತಂಡದಲ್ಲಿ  ಯಾರೆಲ್ಲಾ ಇದ್ದಾರೆ :

ಈ ಕಲಾವಿದ ತಂಡದಲ್ಲಿ  ಯಾವುದೇ ಶುಲ್ಕ ಇಲ್ಲದೆ , ಕಲಾವಿದರು ಭಾಗವಹಿಸುತ್ತಾರೆ. ಮೋಹನ್ ಸೋನಾ , ಚಂದ್ರ ಸೌಗಂಧಿಕ , ಎಂ.ಜಿ.ಕಜೆ , ಕುಸುಮಾಧರ ಸೋನಾ , ಗಂಗಾಧರ ನಾಯ್ಕ್  ಕೆಲಸ ಮಾಡುತ್ತಿದ್ದಾರೆ.
12 ಜೂನ್ 2012

ಇಲ್ಲಿ ಅಡಿಕೆ ಮರ ಇದ್ದಕ್ಕಿದ್ದಂತೆ ಸಾಯುತ್ತಿದೆ . . .!

 ಅಡಿಕೆ ಧಾರಣೆ ಏರುಪೇರಿನ ನಡುವೆಯೇ ಈಗ ಸವಣೂರಿನ ಅಡಿಕೆ ಬೆಳೆಗಾರನಿಗೆ ಈಗ ಮತ್ತೊಂದು ಆತಂಕ ಎದುರುರಾಗಿದೆ. ಇಲ್ಲಿ  ಅಡಿಕೆ ಮರಗಳು ಇದ್ದಕ್ಕಿದ್ದಂತೆ ಸಾಯುವುದು  ಈ ಹೊಸ ರೋಗ.

ಪುತ್ತೂರು ತಾಲೂಕಿನ ಸವಣೂರು ಬಳಿಯ ಸೋಂಪಾಡಿಯ ಅಡಿಕೆ ಬೆಳೆಗಾರ ಸಂಪತ್ ಕುಮಾರ್ ತೋಟದಲ್ಲಿ  ಈ ಹೊಸ ರೋಗ ಪತ್ತೆಯಾಗಿದೆ. ಇಲ್ಲಿ  ತೋಟದಲ್ಲಿ  ಅಡಿಕೆ ಮರವೊಂದು ಒಣಗಿದ ರೀತಿಯಲ್ಲಿ ಕಂಡುಬಂದಿತ್ತು. ಅದಾದ ಬಳಿಕ ಎರಡು ದಿನಗಳ ನಂತರ ಆಸುಪಾಸಿನ ಕೆಲವು ಮರಗಳು ಅದೇ ರೀತಿ ಒಣಗಿದೆ. ಅದರಲ್ಲಿ  ಗಿಡ ಹಾಗೂ ದೊಡ್ಡ ಅಡಿಕೆ ಮರ ಕೂಡಾ ಸೇರಿರುವುದು ಆತಂಕದ ವಿಚಾರವಾಗಿದೆ ಎನ್ನುತ್ತಾರೆ ಸಂಪತ್. ಈಗ ಸುಮಾರು ೨೫ ಅಡಿಕೆ ಮರಗಳಲ್ಲಿ  ಈ ಲಕ್ಷಣ ಕಂಡುಬಂದಿದೆ.  ಈ ಒಣಗಿದ ಅಡಿಕೆ ಮರವನ್ನು ಉರುಳಿಸಿ ನೋಡಿದಾಗ ಮರದ ತುದಿ ಅಂದರೆ ಮರದಲ್ಲಿ ಸೋಗೆ ಆರಂಭವಾಗುವ ಭಾಗದಲ್ಲಿ  ತುಂಡಾಗಿದೆ. ಆ ಭಾಗದಲ್ಲಿ  ಒಣಗಿನವರೆಗೆ ಕೊಳೆತು ಹೋಗಿರುವುದು ಕಂಡುಬಂದಿದೆ ಎಂದು ಸಂಪತ್ ವಿವರಿಸುತ್ತಾರೆ.ಆರಂಭದಲ್ಲಿ  ಸಿಡಿಲು ಬಡಿದು ಅಡಿಕೆ ಮರಕ್ಕೆ ಹಾನಿಯಾಗಿರಬಹುದು  ಎಂದು  ಅಂದಾಜಿಸಲಾಗಿತ್ತು , ಆದರೆ ಇದೀಗ ನಿಧಾನವಾಗಿ ಆಸುಪಾಸಿನ ಮರಳಿಗೂ ಹರಡುತ್ತಿರುವುದರಿಂದ ಸ್ವಲ್ಪ ಗಮನಿಸುವಂತೆ ಮಾಡಿದೆ.ಆದರೆ ಆಸುಪಾಸಿನ ಯಾವುದೇ ತೋಟಗಳಲ್ಲಿ  ಈಗ ಇಂತಹ ರೋಗ ಕಂಡುಬಂದಿಲ್ಲ.

ಕಳೆದ ವರ್ಷವೂ ಇತ್ತು :

ಸಂಪತ್ ಕುಮಾರ್ ಅವರಿಗೆ ಒಟ್ಟು  ಸುಮಾರು 1.5 ಎಕ್ರೆ ಅಡಿಕೆ ತೋಟ ಇದೆ. ಇದರಲ್ಲಿ  ಸುಮಾರು 600 ರಿಂದ 700 ಅಡಿಕೆ ಮರ ಇದೆ. ಸುಮಾರು 14 ವರ್ಷಗಳಿಂದ ಸಾವಯವ ಕೃಷಿಯನ್ನೇ ಮಾಡುತ್ತಿರುವ ಸೋಂಪಾಡಿಯಲ್ಲಿ ಈಗ ಕಾಡುತ್ತಿರುವ ರೋಗ ಅಚ್ಚರಿ ಮೂಡಿಸಿದೆ.ಕಳೆದ ವರ್ಷವೂ ಇದೇ ರೀತಿ ಅಡಿಕೆ ಮರ ಸಾಯುವುದು ಕಂಡಿತ್ತು. ಆಗಲೂ ಸಿಡಿಲು ಬಡಿದು ಹಾನಿಯಾಗಿರಬಹುದು ಎಂದು ಭಾವಿಸಿದ್ದರು. ಆಗ ಸುಮಾರು 25 ರಿಂದ 30 ಅಡಿಕೆ ಮರ ಸತ್ತಿತ್ತು. ಅದಾದ ಬಳಿಕ ಅಲ್ಲಿಗೇ ಮರ ಸಾಯುವುದು ನಿಂತಿತ್ತು. ಆದರೆ ಇದುವರೆಗೆ ಯಾವುದೇ ಇಲಾಖೆಗಳಿಗೆ ಈ ಬಗ್ಗೆ ಮನವಿ  ನೀಡಿಲ್ಲ.

ಕೊಳೆರೋಗ ಕಾರಣವೇ ?:

ಇಂತಹ ಹೊಸ ರೋಗಕ್ಕೆ ಅಡಿಕೆ ಕೊಳೆರೋಗ ಕಾರಣ ಇರಬಹುದೇ ಎಂಬ ಸಂದೇಹದ ಬಗ್ಗೆ ಪ್ರಶ್ನಿಸಿದಾಗ , ಕಳೆದ ವರ್ಷ ಈ ಪ್ರದೇಶದಲ್ಲಿ ಅಷ್ಟೊಂದು ಕೊಳೆರೋಗ ಇದ್ದಿರಲಿಲ್ಲ. ಅದರಲ್ಲೂ ದೊಡ್ಡ ಅಡಿಕೆ ಮರಕ್ಕಾದರೆ ಸರಿ ಕೊಳೆರೋಗ ಬಾಧಿಸಿತ್ತು ಎಂದು ಹೇಳಬಹುದು ಆದರೆ , ಸಣ್ಣ ಅಡಿಕೆ ಮರಗಳಿಗೂ ಕೊಳೆರೋಗ ಬಾಧಿಸಿರಲೇ ಇಲ್ಲ ಎನ್ನುತ್ತಾರೆ ಸಂಪತ್. ಅದರ ಜೊತೆಗೆ ಒಂದು ಪ್ರದೇಶದಲ್ಲೇ ಈರೀತಿ ಸಾಯುವುದಕ್ಕೆ ಕಾರಣವೇ ಗೊತ್ತಾಗುತ್ತಿಲ್ಲ ಅಂತಾರೆ ಅವರು.ಇನ್ನು  ಸುಳಿಕೊಳೆ ರೋಗವಾದರೆ ಅಡಿಕೆ ಮರದ ಸುಳಿಯೇ ಕೊಳೆಯಬೇಕಾಗಿತ್ತು , ಆದರೆ ಇಲ್ಲಿ  ಅಡಿಕೆ ಮರದ ಸುಳಿ ಕೊಳೆಯುವುದು ಗೊತ್ತಾಗುತ್ತಿಲ್ಲ , ಹಿಂಗಾರ ಬಿಡುವ ಪ್ರದೇಶ ಅಂದರೆ ಸೋಗೆ ಇರುವ ಕಡೆಯಲ್ಲೇ ಒಣಗುತ್ತದೆ ಎನ್ನುತ್ತಾರೆ ಸಂಪತ್ ಕುಮಾರ್ ತಾಯಿ  ಕಾಂಚನ.

ಒಟ್ಟಿನಲ್ಲಿ ಸವಣೂರಿನಲ್ಲಿ  ಅಡಿಕೆ ಮರಕ್ಕೆ ಕಂಡುಬಂದಿರುವ ಈ ರೋಗದ ಬಗ್ಗೆ ವಿಶೇಷವಾದ ಅಧ್ಯಯನ ಆಗಬೇಕಾಗಿದೆ.ಇದು ಹರಡುವ ರೋಗವೇ ಅಥವಾ ಮಣ್ಣಿನಿಂದ ಬರುವುದೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಯಬೇಕಾಗಿದೆ.

08 ಜೂನ್ 2012

ಬೆಟ್ಟದ ಮೇಲಿನ ಭಟ್ಟರ ಮನೆಗೆ 38 ವರ್ಷದ ಬಳಿಕ ಪ್ಲಾಸ್ಟಿಕ್ ಚಯರ್. . . !

ಅವರದು ಬೆಟ್ಟದ ಮೇಲಿನ ಬದುಕು. ಸರಿಸುಮಾರು 38  ವರ್ಷಗಳಿಂದ ಗಿರಿಗದ್ದೆಯಲ್ಲಿ ಅವರ ವಾಸ. ಈಗ ಅವರ ಮನೆಯೊಳಗೆ ಹೊಕ್ಕಿದೆ ಪ್ಲಾಸ್ಟಿಕ್ ಚಯರ್.ಹಾಂಗಂತ ಅವರು ಪ್ಲಾಸ್ಟಿಕ್ ಚಯರ್ ಕಂಡೇ ಇಲ್ಲ ಅಂತಲ್ಲ. ನಾಡಿನ ಸ್ಪರ್ಶವಿಲ್ಲದ ಪರಿಸರದ ಪ್ರೇಮಿ ಗಿರಿಗದ್ದೆ ಮನೆಗೆ ಈ ಚಯರ್    ತಲುಪಿದ್ದೇ ಒಂದು ವಿಶೇಷ ಸುದ್ದಿ.


ಇವರು ಗಿರಿಗದ್ದೆ ಮಹಾಲಿಂಗೇಶ್ವರ ಭಟ್. ಚಾರಣಪ್ರಿಯರಿಗೆ ಇವರನ್ನು ಪರಿಚಯಿಸಬೇಕಾದ್ದಿಲ್ಲ.ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿಲೋ ಮೀಟರ್ ದೂರದಲ್ಲಿ  ಕುಮಾರಪರ್ವತದ ಹಾದಿಯ ಗಿರಿಗದ್ದೆಯಲ್ಲಿ ಇವರ ಮನೆ. ಗಿರಿಗದ್ದೆ ಭಟ್ಟರು ಅಂತಲೇ ಫೇಮಸ್ಸು.ಇಂದು ಫೇಸ್‌ಬುಕ್ ಮೂಲಕವೂ ಜಗತ್ತಿನ ಸಂಪರ್ಕ ಹೊಂದಿರುವ ಬೆಟ್ಟದ ಮನುಷ್ಯ. ಈ ಕುಟುಂಬ ಗಿರಿಗದ್ದೆಗೆ ಬಂದದ್ದು 1974  ರಲ್ಲಿ. ಆರಂಭದಲ್ಲಿ ಇಲ್ಲಿಗೆ ಬಂದವರು ಪರಮೇಶ್ವರ ಭಟ್ಟರು. ಆ ಬಳಿಕ ಅಂದರೆ ೩೮ ವರ್ಷಗಳಿಂದ ಇಲ್ಲೇ ವಾಸ.ಮಣ್ಣಿನ ಗೋಡೆಯಿಂದ ನಿರ್ಮಿಸಿಕೊಂಡ ಈ ಮನೆಯಲ್ಲಿ  ಪ್ಲಾಸ್ಟಿಕ್ , ಸಿಮೆಂಟ್ ಬಳಕೆ ಇತ್ತೀಚೆಗಿನವರೆಗೆ ಇರಲಿಲ್ಲ. ಆದರೆ ಚಾರಣಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಚಾರಣಿಗರು ಇಲ್ಲಿ ತಂದು ಪ್ಲಾಸ್ಟಿಕ್ ಹಾಕುವುದು ಬಿಟ್ಟರೆ ಈ ಕುಟುಂಬ ಪ್ಲಾಸ್ಟಿಕ್ ಬಳಸುವುವುದು ತೀರಾ ಅಪರೂಪವಾಗಿತ್ತು.ಆ ಬಳಿಕ ನಾಲ್ಕೈದು ವರ್ಷದ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ  ಕಾಂಕ್ರೀಟ್ ಶೌಚಾಲಯ ನಿರ್ಮಾಣವಾಗಿದೆ. ಅದರ ಜೊತೆ ಜೊತೆಗೆ ಮನೆಯ ಹೊರ ಆವರಣದಲ್ಲಿ  ಒಂದಿಷ್ಟು ಸಿಮೆಂಟ್ ಬಳಿಯಲಾಗಿತ್ತು. ಮನೆಗೆ ಸೋಲಾರ್ ಲೈಟ್‌ಗಳು , ಜಲವಿದ್ಯುತ್ ವ್ಯವಸ್ಥೆ , ಮೊಬೈಲ್ ಹೀಗೆ ಎಲ್ಲವೂ ಬಂದಿತ್ತು.ಅದಾದ ನಂತರ ಈ ಬಾರಿ ಅಂದರೆ 38 ವರ್ಷದ ಬಳಿಕ ಈ ಪರಿಸರ ಸ್ನೇಹಿ ಮನೆಯೊಳಗೆ ಪ್ಲಾಸ್ಟಿಕ್ ಚಯರ್‌ಗಳು ಹೊಕ್ಕಿವೆ. ನಾಲ್ಕು ಚಯರ್ , ಟೀಪಾಯಿ ಎಲ್ಲವೂ ಪ್ಲಾಸ್ಟಿಕ್‌ನದ್ದೇ.ಇದನ್ನು ಮಂಗಳೂರಿನ A1ಎಂಬ ಕಂಪನಿಯೊಂದು ಗಿರಿಗದ್ದೆ ಮನೆಗೆ ಕೊಡುಗೆಯಾಗಿ ನೀಡಿದೆ. ಭಟ್ಟರು ಪ್ಲಾಸ್ಟಿಕ್ ಬಳಕೆಗೆ ಆಸಕ್ತಿ ಕಡಿಮೆ.ಹಾಗಿದ್ದರೂ ಪ್ಲಾಸ್ಟಿಕ್ ಚಯರ್ ಬೇಕು ಎನ್ನುವ ಆಕಾಂಕ್ಷೆ ಅವರಿಗಿತ್ತು. ಇದನ್ನು ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿಮೀ ಹೊತ್ತುಕೊಂಡು ಗಿರಿಗದ್ದೆಗೆ ತರಲಾಗಿದೆ.ಇದುವರೆಗೆ ಇಲ್ಲಿ  ಮರದ ಬೆಂಚು ಇತ್ತು.ಈಗ ಇದೆಲ್ಲಾ ಹೊಸ ಸೇರ್ಪಡೆ.

ಭಟ್ಟರ ಬದುಕು ಹೇಗೆ ?

ಇದೊಂದು ಅತ್ಯಂತ ಸ್ವಾರಸ್ಯಕರ ಹಾಗೂ ಅಚ್ಚರಿಯ ಸಂಗತಿಗಳು.ಭಟ್ಟರು ಈ ಬಗ್ಗೆ ತಾನಾಗಿಯೇ ಮಾತನಾಡಲಾರರು. ಕೆದಕುತ್ತಾ ಹೋದರೆ ಸಂಗತಿಗಳ ಅನಾವರಣವಾಗುತ್ತದೆ.1974 ರ ಸುಮಾರಿಗೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿದ್ದ ಪರಮೇಶ್ವರರ ಭಟ್ಟರು ಕುಮಾರ ಪರ್ವತ ಏರಿದರು. ಹಾಗೇ ಇಳಿದು ಬರುವಾಗ ಕೊಂಚ ಆಯಾಸವಾಗಿ ಗಿರಿಗದ್ದೆಯಲ್ಲಿ ಕುಳಿತುಕೊಂಡರು. ಆಗ ಅಲ್ಲಿ ಮನೆಯ ಕುರುಹುಗಳು ಇರುವುದು ಅವರಿಗೆ ಕಂಡಿತು.ತಾನು ಇಲ್ಲಿ ವಾಸ್ತವ್ಯ ಹೂಡಿದರೆ ಹೇಗೆ ಎಂಬ ಪ್ರಶ್ನೆಯೊಂದಿಗೆ ಸುಬ್ರಹ್ಮಣ್ಯಕ್ಕೆ ತೆರಳಿದ ಭಟ್ಟರು ಕೆಲವೇ ಸಮಯದಲ್ಲಿ  ಗಿರಿಗದ್ದೆ ಕಡೆಗೆ ಕುಟುಂಬ ಸಹಿತರಾಗಿ ಹೆಜ್ಜೆ ಹಾಕಿದರು. ಗಿರಿಗದ್ದೆಯಲ್ಲಿ  ಮಣ್ಣಿನ ಮನೆ , ಕೊಟ್ಟಿಗೆ , ಹಟ್ಟಿ ನಿರ್ಮಿಸಿಕೊಂಡು ಏಕಾಂತ ಬದುಕು ಸಾಗಿಸಿದರು. ಅಡಿಕೆ ತೋಟ, ತರಕಾರಿ ಕೃಷಿ ಎಲ್ಲವೂ ಅವರ ಏಕಾಂತ ಬದುಕಿಗೆ ಸ್ಫೂರ್ತಿ ನೀಡಿದವು.ಆಗ ಅವರಿಗೆ ಸಾತ್ ನೀಡಿದವರು ಚಾರಣಿಗರು , ಚಾರಣಿಗರಿಗೆ ಆಶ್ರಯದಾತರಾಗಿಯೂ ಗಿರಿಗದ್ದೆ ಪರಮೇಶ್ವರ ಭಟ್ಟರು ಹೆಚ್ಚು ಆತ್ಮೀಯರಾದರು.

ಪರಮೇಶ್ವರ ಭಟ್ಟರೊಂದಿಗೆ ಅವರ ಮಕ್ಕಳೂ ಗಿರಿಗದ್ದೆ ವಾಸ ಇಷ್ಟ ಪಟ್ಟರು.ಕಾಲಾನಂತರ ಅಂದರೆ ಪರಮೇಶ್ವರ ಭಟ್ಟರಿಗೆ ವೃದ್ಧಾಪ್ಯ ಬಂದಾಗ, ಗಿರಿಗದ್ದೆ ಮನೆಯಲ್ಲಿ  ಮಹಾಲಿಂಗೇಶ್ವರ ಭಟ್ಟರು ಹಾಗೂ ನಾರಾಯಣ ಭಟ್ಟರು ಚಾರಣಿಗರ ಅನ್ನದಾತರಾದರು.ಮಹಾಲಿಂಗೇಶ್ವರ ಭಟ್ಟರೊಂದಿಗೆ ಅವರ ಅತ್ತೆ ಪರಮೇಶ್ವರಿ ಅಮ್ಮನೂ ಗಿರಿಗದ್ದೆ ಆಗಮಿಸಿದರು. ಈಗ ಈ ಅಜ್ಜಿಗೆ 76 ವರ್ಷ.ಅವರು ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ಹೋಗದೆ 7 ವರ್ಷಗಳಾಗಿದೆ.ಉಳಿದವರೆಲ್ಲಾ ತಿಂಗಳಿಗೆ ಒಂದೆರಡು ಬಾರಿ ಸುಬ್ರಹ್ಮಣ್ಯಕ್ಕೆ ಹೋಗಿಬರುತ್ತಾರೆ. ದಿನವೂ ಹೋಗಿ ಬರಲು ಕೆಲಸದವರು ಇದ್ದಾರೆ.ಅಂದರೆ ದಿನಕ್ಕೆ ಬೆಟ್ಟದ ಕಡೆಗೆ ೮ ಕಿಲೋ ಮೀಟರ್ ನಡಿಗೆ. .!.

ಗಿರಿಗದ್ದೆಗೆ ಸುಬ್ರಹ್ಮಣ್ಯದಿಂದ ಕೆಲಸಕ್ಕೆ ಪ್ರತೀದಿನ ಈಗ ಬರುತ್ತಾರೆ. ಸುಬ್ರಹ್ಮಣ್ಯದಿಂದ ಹೊರಡುವಾಗ 25 ಕೆಜಿ ಅಕ್ಕಿ , ಬೇಳೆ ಇತ್ಯಾದಿಗಳನ್ನು ಹೊತ್ತುಕೊಂಡು 4 ಕಿಮೀ ಬೆಟ್ಟ ಏರುತ್ತಾ ಕಾಲ್ನಡಿಗೆ ಪಯಣ. ಅಲ್ಲಿ ಕೆಲಸ ಮುಗಿಸಿ ಸಂಜೆ ಮತ್ತೆ ಸುಬ್ರಹ್ಮಣ್ಯಕ್ಕೆ ಕಾಲ್ನಡಿಗೆ. ಇದರ ಜೊತೆಗೆ ಇನೊಬ್ಬರು ಸುಮಾರು 10 ಗಂಟೆ ವೇಳೆಗೆ ದನದ ಹಾಲನ್ನು ಕ್ಯಾನಲ್ಲಿ ತುಂಬಿಕೊಂಡು ಸುಬ್ರಹ್ಮಣ್ಯಕ್ಕೆ ಬರುತ್ತಾರೆ.ಈ ಹಾಲಿಗೂ ಹಾಗೇ ಒಳ್ಳೆ ಬೇಡಿಕೆ ಇದೆ.ಕೆಲವು ಆಯುರ್ವೇದ ಔಷಧಿಗಳಿಗೆ ಇಲ್ಲಿನ ಹಾಲು , ಬೆಣ್ಣೆ, ತುಪ್ಪಗಳೇ ಬೇಕು.ಏಕೆಂದರೆ ಇಲ್ಲಿರುವ ಮಲೆನಾಡು ಗಿಡ್ಡಜಾತಿಯ ಗೋವುಗಳು ಹಸಿರು ಹುಲ್ಲು ಸೇವಿಸಿ ಬಿಸಿಲಿಗೆ ಮೈಯೊಡ್ಡುವುದರಿಂದ ವಿಶೇಷ ಔಷಧಿಯುಕ್ತ ಹಾಲಿದು. ಹಾಗಾಗಿ ಈ ಹಾಲಿಗೆ ಬೇಡಿಕೆ ಇದೆ. ಇದೆಲ್ಲಾ ಇಲ್ಲಿ ನಿತ್ಯದ ಕಾಯಕ. ಇವರಿಗೆ ಹೀಗೆ ಬೆಟ್ಟ ಹತ್ತಲು ಇಳಿಯಲು ಸುಮಾರು 45 ನಿಮಿಷ ಸಾಕಾಗುತ್ತಂತೆ. . .!. ಉಳಿದವರಿಗೆ ಸುಮಾರು 1.30 ಗಂಟೆ. . !.

ಪ್ರತೀ ವರ್ಷ ಇಲ್ಲಿಗೆ ಸುಮಾರು 5 ರಿಂದ 10 ಸಾವಿರ ಚಾರಣಿಗರು ಬರುತ್ತಾರೆ ಎನ್ನುವ ಮಹಾಲಿಂಗೇಶ್ವರ ಭಟ್ಟರು , ಅತ್ಯಂತ ವಿ‌ಐಪಿಗಳು ಎನಿಸಿಕೊಂಡವರೂ ಬರುತ್ತಾರೆ. ಒಂದೊಳ್ಳೆ ಅನುಭವವಾಗುತ್ತದೆ, ಇಲ್ಲಿನ ಬದುಕು ಖುಷಿ ಕೊಡುತ್ತದೆ , ಒಂದು ರೀತಿಯ ಏಕಾಂತ ಬದುಕು , ಯಾವುದೇ ರಗಳೆ ಇಲ್ಲ ಎನ್ನುತ್ತಾರೆ.

ಕುಮಾರಪರ್ವತಕ್ಕೆ ಹೋಗುವ ಚಾರಣಿಗರು , ಹೋಗುವ ವೇಳೆ ಅಥವಾ ಬರುವ ವೇಳೆ ಭಟ್ಟರ ಮನೆಯಲ್ಲಿ ಊಟ ಮಾಡಿಯೇ ಮುಂದೆ ಹೋಗುತ್ತಾರೆ. ದಿನಮುಂದಾಗಿ ಭಟ್ಟರಿಗೆ ಮಾಹಿತಿ ನೀಡಿದರೆ ಬೆಳಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಅಡುಗೆ ಸಿದ್ದ.ಅಲ್ಲೇ ಮನೆಯ ಹೊರಗಿನ ವಠಾರದಲ್ಲಿ ಅಡುಗೆ ಇರುತ್ತದೆ , ಸ್ವಸಹಾಯ ಪದ್ಧತಿ ಮೂಲಕ ಊಟ ಮಾಡಿದರೆ ಮುಗಿಯಿತು.ಒಂದು ದಿನದ ಊಟಕ್ಕೆ 250 ರೂಪಾಯಿ ಚಾರ್ಜ್ ಮಾಡುತ್ತಾರಂತೆ ಭಟ್ಟರು. ಕೆಲವು ಚಾರಣಿಗರು ಗಿರಿಗದ್ದೆ ಮನೆಯಲ್ಲೇ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ಕುಮಾರಪರ್ವತ ಏರುವವರೂ ಇದ್ದಾರೆ.

ಒಟ್ಟಿನಲ್ಲಿ ಬೆಟ್ಟದ ಮೇಲಿನ ಈ ಭಟ್ಟರ ಬದುಕು ನಿಜಕ್ಕೂ ಸಾಹಸದ ಕೆಲಸ. ನಗರದ ಸಂಪರ್ಕವಿಲ್ಲದೆ ನಗರವಾಸಿಗಳ ಸಂಪರ್ಕದೊಂದಿಗೆ ಬದುಕುವ ಇವರದು ತಪಸ್ಸಿನ ಜೀವನ.ಈಗ ಈ ಬೆಟ್ಟದ ಮನೆಯೊಳಗೆ ಸೇರಿಕೊಂಡಿರುವ ಪ್ಲಾಸ್ಟಿಕ್ ಚಯರ್‌ಗಳು ಇಲ್ಲಿ ಸಾಂಕೇತಿಕ ಉಲ್ಲೇಖವಾದರೂ , ಇಂದು ಪ್ಲಾಸ್ಟಿಕ್ ಎಲ್ಲೆಲ್ಲಾ ಬಳಕೆಯಾಗುತ್ತದೆ ಮತ್ತು ಅದು ಎಲ್ಲಿಗೆಲ್ಲಾ  ತಪಲುತ್ತೆ ಎನ್ನುವುದೇ ನಿಗೂಢ.


-

01 ಜನವರಿ 2012

ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ ವರ್ಷ 2011ಭೂತಕಾಲದ ಅನುಭವಗಳು, ವರ್ತಮಾನದ ಕ್ರಿಯೆಗಳು ಜೊತೆ ಸೇರಿ ಭವಿಷ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆಯಂತೆ. ಈ ನಂಬಿಕೆಯನ್ನು ಇಟ್ಟುಕೊಂಡು ಬದುಕುವ ನಾವು ಈಗ 2011 ನೇ ವರ್ಷವನ್ನು ದಾಟಿ ಮುಂದೆ ಬಂದಿದ್ದೇವೆ.2012 ನೇ ಇಸವಿಗೆ ಕಾಲಿಡುವ ಈ ವೇಳೆ ಹಿಂದೆ ತಿರುಗಿ ಸಾಗಿ ಬಂದ ದಾರಿಯನೊಮ್ಮೆ ಅವಲೋಕಿಸಬೇಡವೇ ?. 2011 ರಲ್ಲಿ ಏನೇನಾಗಿದೆ ಅಂತ ಕುಂತು ಯೋಚಿಸುವ, ಎಲ್ಲವೂ ನೆನೆಪಾಗುತ್ತದೆ ಎಂದಲ್ಲ , ನೆನಪು ಮಾಡುವ ಪ್ರಯತ್ನ ಮಾಡೋಣ. .

 ಇಂದು ಇಡೀ ದೇಶದಲ್ಲಿ ಚರ್ಚೆಯಾಗುತ್ತಿರುವ ಮತ್ತು ಎಲ್ಲಾ ಜನ ಕೂಡಾ ಒಕ್ಕೊರಲಿನಿಂದ ಧ್ವನಿಗೂಡಿಸುವುದು ಭ್ರಷ್ಟಾಚಾರ ತೊಲಗಲಿ ಅಂತಲೇ. ಅಂತಹ ಭ್ರಷ್ಟಾಚಾರದ ವಿರುದ್ದ ಮೊದಲ ಕಹಳೆ ಮೊಳಗಿದ್ದು ಪುತ್ತೂರಿನಿಂದ. ಮಾರ್ಚ್ ವೇಳೆಗೆ ಪುತ್ತೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾವು ನಡೆಯಿತು. ಸಂಘಪರಿವಾರದ ಎಲ್ಲಾ ಅಂಗಸಂಸ್ಥೆಗಳು ಈ ಸಭಾದಲ್ಲಿ ಭಾಗವಹಿಸಿ ದೇಶದ ಆಗುಹೋಗುಗಳ ಬಗ್ಗೆ ಚಿಂತಿಸುತ್ತಾ ಭವಿಷ್ಯದ ಭಾರತಕ್ಕಾಗಿ ದಿಟ್ಟ ಹೆಜ್ಜೆ ಇಡುವ ಪ್ರಯತ್ನ ನಡೆಯಿತು. ಅದರ ಒಂದು ಭಾಗವಾದ ಭ್ರಷ್ಟಾಚಾರ ವಿರುದ್ದದ ಆಂದೋಲನ ಇಂದಿಗೂ ನಡೆಯುತ್ತಿದೆ. ಇದರ ಜೊತೆ ಜೊತೆಗೇ ಯೋಗಗುರು ಬಾಬಾ ರಾಂದೇವ್ ಅವರು ಕೂಡಾ ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡುತ್ತಾ ಮಂಗಳೂರಿನಲ್ಲಿ ಸಭೆಯನ್ನು ನಡೆಸಿದರು.ಈ ಮೂಲಕವೂ ಭ್ರಷ್ಟಾಚಾರ ವಿರೋಧಿ ಅಲೆಯನ್ನು ಎಬ್ಬಿಸಿದರು. ಅದಾದ ನಂತರ ದೇಶದಲ್ಲಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ದ ಸಮರ ಸಾರಿ ಉಪವಾಸ ಕುಳಿತಾಗ ಮಂಗಳೂರು ಸೇರಿದಂತೆ ಇಡೀ ಜಿಲ್ಲೆಯ ಜನತೆ ಕೂಡಾ ಉಪವಾಸಕ್ಕೆ ಬೆಂಬಲವಾಗಿ ನಿಂತರು.ಪುತ್ತೂರಿನಲ್ಲಿ ಕೂಡಾ ಈ ಉಪವಾಸಕ್ಕೆ ಬೆಂಬಲಲವಾಗಿ ಗಾಂಧಿ ಪ್ರತಿಮೆ ಬಳಿ ಕುಳಿತು ಅಣ್ಣಾಗೆ ಬೆಂಬಲ ವ್ಯಕ್ತವಾಯಿತು.ಲೋಕಪಾಲ ಜಾರಿಗೆ ಒತ್ತಾಯ ಕೇಳಿಬಂತು. ಯುವಕರಲ್ಲೂ ಈ ಜಾಗೃತಿ ಮೂಡಿತು.ಹೀಗೆಯೇ ಇದುವರೆಗಿನ ಇತಿಹಾಸದಲ್ಲಿ 2011 ಭ್ರಷ್ಟಾಚಾರದ ವಿರುದ್ದ ಸಮರ ಸಾರಿದ ವರ್ಷ ಅಂತ ಹೇಳಿಬಿಡಬಹುದು. ಈ ನಿಟ್ಟಿನಲ್ಲಿ ಇದು ಅತ್ಯಂತ ಪ್ರಮುಖ ವರ್ಷ.

 ಧರ್ಮ ಕ್ಷೇತ್ರ :

 ಇದೆಲ್ಲಾ ನಡೆಯುತ್ತಿರುವಂತೆಯೇ ಧಾರ್ಮಿಕವಾಗಿಯೂ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿ , ಟೀಕೆಗಳು ಬಂತು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ , ಇದಕ್ಕಾಗಿ ಸಾಕಷ್ಟು ತಯಾರಿ ನಡದರೆ ಇತ್ತ ಕಡೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಕೆಲಸ ಕಾರ್ಯಗಳು ಕೂಡಾ ವೇಗ ಪಡೆದುಕೊಂಡಿತು.ಈಶ್ವರಮಂಗಲದಲ್ಲಿ ಏಕಶಿಲಾ ಆಂಜನೇಯನ ವಿಗ್ರಹ ಸ್ಥಾಪನೆ , ರಾಮಾಯಣ ಹಾಗೂ ಹನುಮಾನ್ ಮಾನಸೋದ್ಯಾನ ಇನ್ನೊಂದು ಪ್ರಮುಖ ಅಂಶವಾಗಿದೆ.ಕಲ್ಲಡ್ಕದಲ್ಲಿ ನಡೆದ ವಾಜಪೇಯ ಯಾಗವು ಇಡೀ ನಾಡಿನ ಜನರ ಗಮನ ಸೆಳೆಯಿತು , ನಾಡಿನ ಹಿತ ದೃಷ್ಠಿಯಿಂದ ಆಯೋಜಿಸಿದ್ದ ಈ ಯಾಗವು ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮವಾಗಿ ದಾಖಲಾಯಿತು. ಇನ್ನೊಂದು ಕಡೆ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ವಿಧವೆಯರಿಂದ ರಥೋತ್ಸವ ಕೂಡಾ ನಡೆಯುವ ಮೂಲಕ ವಿಶೇಷ ಗಮನ ಸೆಳೆದರೆ , ರಾಜ್ಯದ ಪ್ರಮುಖ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆಮಡೆಸ್ನಾನವು ವ್ಯಾಪಕ ಚರ್ಚೆಗೆ ಕಾರಣವಾಯಿತು. ಅಂತಿಮವಾಗಿ ಸರಕಾರಕ್ಕೆ ಕೂಡಾ ಈ ಬಗ್ಗೆ ಸ್ಫಷ್ಟವಾದ ನಿಲುವು ಪಡೆಯಲು ಸಾಧ್ಯವಾಗಲಿಲ್ಲ. ಉಳಿದಂತೆ ಪ್ರತೀ ವರ್ಷದಂತೆ ಧರ್ಮಸ್ಥಳದ ಲಕ್ಷದೀಪೋತ್ಸವ, ಸುಬ್ರಹ್ಮಣ್ಯದ ಚಂಪಾಷಷ್ಟಿ ಸೇರಿದಂತೆ ದೇವಾಲಯಗಳ ಉತ್ಸವಗಳು ನೆನಪಾದವು. ಒಂದು ಹಂತದಲ್ಲಿ ರಾಜ್ಯದ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ತಿಕ್ಕಾಟವು ಆಣೆ ಭಾಷೆಗೆ ತಲುಪಿ ಧರ್ಮಸ್ಥಳಕ್ಕೆ ಆಗಮಿಸಿದ್ದು ರಾಜ್ಯದಾದ್ಯಂತ ಅತ್ಯಂತ ಕುತೂಹಲಕ್ಕೆ ಕಾರಣವಾದ ವಿದ್ಯಮಾನವಾಗಿತ್ತು.ಆ ಬಳಿಕದ ವಿದ್ಯಮಾನದಲ್ಲಿ ಮುಖ್ಯಮಂತ್ರಿ ಪಟ್ಟವನ್ನು ಯಡಿಯೂರಪ್ಪ ಬಿಡಬೇಕಾಯಿತು. ಜನರ ಅತೀ ಅಗತ್ಯದ ಮಾಣಿ - ಸಂಪಾಜೆ ತೀರಾಹದಗೆಟ್ಟು ಜನರಿಗೆ ಓಡಾಟಕ್ಕೆ ಕಷ್ಟವಾದ ಸನಿವೇಶ ಒಂದು ಕಡೆಯಾದರೆ ಮತ್ತೊಂದು ಕಡೆ ಅನಿರೀಕ್ಷಿತ ಬೆಳವಣಿಯೆಲ್ಲಿ ನಮ್ಮದೇ ಜಿಲ್ಲೆಯ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದರು.

 ಶಾಂತಿ-ಅಶಾಂತಿ: 

 ಬೆಳ್ತಂಗಡಿ ತಾಲೂಕಿನಲ್ಲಿ ಗುಂಡಿನ ಧಾಳಿಗೆ ಪೊಲೀಸ್ ಕಾನ್‌ಸ್ಟೇಬಲ್ ಮಾನೆ ಮೃತರಾದರು.ಈ ಗುಂಡಿನ ಧಾಳಿ ಪೊಲೀಸರದ್ದೂ ನಕ್ಸಲರದ್ದೋ ಎಂಬುದು ಕೊನೆಯವರೆಗೂ ಸ್ಫಷ್ಟವಾಗಿಲ್ಲ.ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲೂ ಕೂಡಾ ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕೆ ಕಬ್ಬಿನಾಲೆ ಸದಾಶಿವ ಗೌಡ ಮೃತನಾದ.ಇದೆಲ್ಲಾ ನಕ್ಸಲ್ ಘಟನೆಗೆ ಸಂಬಂಧಿಸಿದ್ದಾರೆ ,ಮತ್ತೊಂದು ಕಡೆ ಉಗ್ರಗಾಮಿಗಳ ನಂಟು ದಕ್ಷಿಣ ಕನ್ನಡ ಜಿಲ್ಲೆ , ಉಡುಪಿ ಜಿಲ್ಲೆಗಳ ಮೇಲೆ ಬಿದ್ದದ್ದು ಸ್ಫಷ್ಟವಾಗಿ ಕಂಡಿದೆ. ಕರಾವಳಿ ಜಿಲ್ಲೆಯಾದ್ಯಂತ ಈ ಜಾಲ ಇರುವುದು ತನಿಖೆಯ ವೇಳೆ ಗೊತ್ತಾಗಿದೆ ಅದರ ಒಂದು ಭಾಗವೇ ಭಟ್ಕಳದ ನಂಟು ಇರುವುದರ ಬಗ್ಗೆಯೂ ಪೊಲೀಸರು ಹೇಳಿದ್ದಾರೆ. ಇನ್ನು ಮತಾಂಧರ ಚಟುವಟಕೆ ಕಮ್ಮಿ ಏನೂ ಇದ್ದಿರಲಿಲ್ಲ. ಕಾಸರಗೋಡು ಸೇರಿದಂತೆ ಕರ್ನಾಟಕದ ಗಡಿಭಾಗಗಳಲ್ಲಿ ಇಂತಹ ಅನೇಕ ಚಟುವಟಿಕೆ ಕಂಡುಬಂದಿದೆ. ಇನ್ನು ಸುಳ್ಯದಲ್ಲಿ ಹಿಂದೂ ತರುಣರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಜಿಲ್ಲೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ ಉಳಿದುಕೊಂಡಿತು.

 ಕೃಷಿಕರಿಗೆ ಬೇವು-ಬೆಲ್ಲ :

 ಈ ಬಾರಿ ಅವಿಭಜಿತ ಜಿಲ್ಲೆಗೆ ಸಾಕಷ್ಟು ಮಳೆ ಸಿಕ್ಕಿದೆ.ಇದೆಲ್ಲದರ ನಡುವೆ 2011 ಕೃಷಿಕರ ಪಾಲಿಗೆ ಬೇವು-ಬೆಲ್ಲ ಮಿಶ್ರಣದ ವರ್ಷ. ಜಿಲ್ಲೆಯ ಪ್ರಮುಖ ಬೆಳೆ ಅಡಿಕೆಗೆ ಆರಂಭದಲ್ಲಿ ಬೆಲೆ ಕಡಿಮೆ ಇದ್ದರೂ ಆ ಬಳಿಕ ಏರುಹಾದಿಯಲ್ಲಿ ಕಂಡಿದೆ. ಅದರ ಜೊತೆಗೆ ರಬ್ಬರ್ , ತೆಂಗು, ಕಾಳುಮೆಣಸು ,ಕೂಡಾ ರೈತರಿಗೆ ಆಶಾದಾಯಕ ವಾತಾವರಣ ಸೃಷ್ಠಿ ಮಾಡಿತ್ತು. ಆದರೆ ಯಥಾ ಪ್ರಕಾರ ಕೃಷಿಕರು ಕೂಲಿ ಕಾರ್ಮಿಕರ ಸಮಸ್ಯೆಯಿಂದ ಮಾತ್ರಾ ಮುಕ್ತಿ ಪಡೆಯಲಿಲ್ಲ.ಅದರ ಬದಲಾಗಿ ಯಂತ್ರಗಳತ್ತ ಹೆಚ್ಚು ರೈತರು ಒಲವು ತೋರಿದರು. ಇದರ ಜೊತೆ ಜೊತೆಗೇ ಈ ಬಾರಿ ಅಡಿಕೆಗೆ ಕೊಳೆರೋಗ ವ್ಯಾಪಕವಾಗಿ ಕಾಡಿದ್ದು ರೈತರನ್ನು ಹೈರಾಣಾಗಿಸಿದೆ. ಆ ಹೊಡೆತದಿಂದ ಇನ್ನೂ ಅನೇಕ ಕೃಷಿಕರು ಚೇತರಿಸಿಕೊಂಡಿಲ್ಲ.

 ಸಾಹಿತ್ಯ-ಸಾಂಸ್ಕೃತಿಕ 

 ವಿಶ್ವ ತುಳು ಸಮ್ಮೇಳನದ ಬಳಿಕ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಖಿಲ ಬಾರತ ತುಳು ಸಮ್ಮೇಳನವು ಯಶಸ್ವಿಯಾಗಿ ಸಂಘಟಿಸಲಾಯಿತು , ಜೊತೆ ಜೊತೆಗೇ ಅಳಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕೂಡಾ ಯಶಸ್ವಿಯಾಯಿತು.ಇನ್ನು ಮೂಡಬಿದರೆಯಲ್ಲಿ ಆಳ್ವಾಸ್ ನುಡಿಸಿರಿ ಕೂಡಾ ಉತ್ತಮವಾಗಿ ಸಂಘಟಿಸಲಾಗಿತ್ತು.

 ------------------------------------------------------------
ಇದು ಇಂದಿನ ಹೊಸದಿಗಂತದಲ್ಲಿ ಪ್ರಕಟವಾದ ನನ್ನ ಬರಹ. ..  .
--------------------------------------------------------------