28 ನವೆಂಬರ್ 2010

ದೇವಸ್ಥಾನವೂ ಉದ್ಯೋಗವೂ. . !

ಮೊನ್ನೆ ಯಾವುದೋ ಕೆಲಸದ ನಿಮಿತ್ತ ಪ್ರಮುಖ ದೇವಸ್ಥಾನಕ್ಕೆ ಹೋಗಿದ್ದೆ. ಹೀಗೇ ರಥಬೀದಿಯಲ್ಲಿ ನನ್ನ ಒಂದೆರಡು ಪರಿಚಿತರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಬೈಕ್‌ನಲ್ಲೊಬ್ಬ ಬಂದು ಅದೇನು ಅಂಗಡಿಯಿಂದ ಖರೀದಿಸುತ್ತಿದ್ದ. ಆತನನ್ನು ನಾನು ಮೊದಲೇ ನೋಡಿದ್ದೆ ಆತನ ಪರಿಚಯವೂ ಇತ್ತು. ನನ್ನ ಪರಿಚಿತರಲ್ಲಿ ಆತನ ಕೆಲಸ ಏನು ಎಂದಾಗ ಅವರು ಈಗ ಆತ ಬ್ಯಸಿನೆಸ್ ಮ್ಯಾನ್ ಅಂದ್ರ.ಅಲ್ಲಾ ಇದೊಂದು ದೊಡ್ಡ ಬ್ಯುಸಿನೆಸ್ ಸೆಂಟರ್ ಮಾರಾಯ ಅಂದ್ರು.

ಹೌದು.ದೇವಸ್ಥಾನವೊಂದು ನಂಬಿಕೆಯ ತಾಣವೂ ಹೌದು ಜೊತೆಗೆ ಉದ್ಯೋಗ ನೀಡೋ ಕಂಪನಿಯೂ ಆಗಿದೆ !.

ಆ ವ್ಯಕ್ತಿ ಈ ಊರವನೇ ಅಲ್ಲ.ದೂರದ ಅದ್ಯಾವುದೋ ಊರಿನಿಂದ ಖಾಲಿ ಕೈಯಲ್ಲಿ ಬಂದವನು. ದೇವಸ್ಥಾನದ ಈ ವಠಾರಕ್ಕೆ ಬಂದು ಹತ್ತಿಪ್ಪತ್ತು ವರ್ಷ ಆಗಿರಬಹುದು.ಈಗ ಆತನಿಗೆ ಸ್ವಂತದ್ದೊದು ಸೈಟು ಅಲ್ಲಿದೆ ,ಒಳ್ಳೆಯ ಮನೆ ಕಟ್ಟಿದ್ದಾನೆ ,ಎರಡು ಬೈಕ್ ಇದೆ.ನೆಮ್ಮದಿಯ ಬದುಕು. ಹಿಂದೆ ಪೇಪರ್ ಹಾಕಲೆಂದು ಆತ ಈ ದೇವಸ್ಥಾನದ ಊರಲ್ಲಿರೋ ಅಂಗಡಿಗೆ ಬಂದದ್ದು.ಇವತ್ತು ಈ ಮಟ್ಟಕ್ಕೆ ಬಂದಿದ್ದಾನೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸುತ್ತಾ ಹೋಗ್ತಿದ್ದರು ನನ್ನ ಪರಿಚಯಸ್ಥರು. ಎಂತ ಮಾರಾಯ ಇವತ್ತು ಇಲ್ಲಿನ ಅರ್ಚಕರು ತಿಂಗಳಿಗೆ ಲಕ್ಷ ಎಣಿಸುತ್ತಾರೆ , ಇನ್ನು ರೂಂ ಕರೆಯುವವರೂ ಕೂಡಾ ಕನಿಷ್ಠ 3 ಸಾವಿರ ಎಣಿಸುತ್ತಾರೆ ಅಂದ್ರು ಅವರು . . ಇದು ಹತಾಶೆಯಲ್ಲ.ಸತ್ಯದ ಮಾತು.

ಅದೊಂದು ಪ್ರಸಿದ್ದ ದೇವಸ್ಥಾನ ಅಂತಂದ್ರೆ ಅಲ್ಲಿ ಎಷ್ಟು ಜನರಿಗೆ ಉದ್ಯೋಗವಾಗುತ್ತೆ ಅಂತ ಲೆಕ್ಕ ಹಾಕಿ. ಒಂದು ಹತ್ತು ಐವತ್ತು ಜನ ಬ್ರಾಹ್ಮಣರಿಗೆ ಕೆಲಸ. ಇನ್ನು ಒಂದು ಐವತ್ತು ನೂರು ಜನರಿಗೆ ಕ್ಲೀನಿಂಗ್ , ರಶೀದಿ ಕೊಡಲು , ಆಫೀಸು ಕೆಲಸ , ಚಪ್ಪಲು ಸ್ಟಾಂಡ್ , ಅದೂ ಇದೂ ಅಂತ ದೇವಸ್ಥಾನದಲ್ಲಿ ಕೆಲಸ. ಇನ್ನು ಒಂದಷ್ಟು ಜನರಿಗೆ ಅಲ್ಲೇ ಎಲ್ಲಾದರೂ ಅಂಗಡಿ ಇರಿಸಿದರೆ ಅಲ್ಲೂ ಕೆಲಸ , ಆ ಅಂಗಡಿಯಲ್ಲಿ ಕೆಲಸ ಮಾಡೋರು ಇನ್ನೂ ಅನೇಕ ಮಂದಿ.ಇನ್ನು ವಸತಿ ವ್ಯವಸ್ಥೆಗೆ ಬಂದರೆ ರೂಂ ಕಟ್ಟಿದರೆ ಅಲ್ಲೂ ಕೆಲಸ , ಇನ್ನು ರೂಂಗೆ ಜನ ಮಾಡೋ ಕೆಲಸ ಮಾಡಿಕೊಂಡರೂ ಅಲ್ಲೂ ಉದ್ಯೋಗ . . .ಹೀಗೇ ಮುಂದುವರಿಯುತ್ತಲೇ ಹೋಗುತ್ತದೆ ಕೆಲಸಗಳ ಪಟ್ಟಿ.ಇದೆಲ್ಲವೂ ಒಂದು ದೇವಸ್ಥಾನದಲ್ಲಿ ಸಿಗೋ ಉದ್ಯೋಗಾವಕಾಶ..!.

ಆವತ್ತೊಂದು ದಿನ ಹಾಗೇ ಆಗಿತ್ತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ನಿವಾರಣೆಗೆ ಹೆಚ್ಚಿನ ಮಹತ್ವ. ಹೀಗಾಗಿ ಮಾತು ಮಾತಿಗೂ ನಾಗದೋಷ, ಎಲ್ಲಾ ಜಾತಕದಲ್ಲೂ ನಾಗದೋಷ. ಇದನ್ನೇ ಒಂದು ಬ್ಯುಸಿನೆಸ್ ಮಾಡಿಕೊಂಡವರು ಹಲವಾರು ಜನ. ಕೊನೆ ಕೊನೆಗೆ ನದಿ ಪಕ್ಕದಲ್ಲಿ ಅದ್ಯಾರೋ ಎಲ್ಲಾ ನಗರದಿಂದ ಭಕ್ತರನ್ನು ಕರಕೊಂಡು ಬಂದು ಹದಿನೈದೋ ಇಪ್ಪತ್ತೋ ಸಾವಿರ ಪಡೆದು ಅದೇನೋ ಹೋಮ ಶಾಂತಿ ಅಂತ ಮಾಡಿಸಿದರು. ಹೀಗೆಲ್ಲಾ ದುಡ್ಡು ಮಾಡೋದು ದೇವರಿಗೂ ಸರಿಕಂಡಿಲ್ಲ ಅಂತ ಅನಿಸುತ್ತೆ.ಊರ ಜನರೆಲ್ಲಾ ಇದಕ್ಕೆ ಆಕ್ಷೇಪಿಸಿದರು. ನಂತರ ಈ ಪದ್ದತಿ ನಿಂತೇ ಹೋಯಿತು.ಮತ್ತೆ ಇನ್ನೊಂದು ಹೊಸ ಅವತಾರ ಪಡಕೊಂಡರು. ಹೀಗೇ ಒಂದಲ್ಲ. . ಇನ್ನೊಂದು . .!. ಯಾಕಂದ್ರೆ ಅದೆಲ್ಲಾ ನಾಗದೋಷದ ಎಫೆಕ್ಟ್ . .!.

ಹೀಗೇ ಇಂತಹದ್ದೆಲ್ಲಾ ಕಾರಣಕ್ಕೆ ದೇವಸ್ಥಾನದಲ್ಲಿ ಇದೆಲ್ಲಾ ಸ್ಟ್ರಿಕ್ಟ್ ಆಯಿತು.ಆಗ ಗೊತ್ತಾಯಿತು ಅಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿತ್ತು ಅಂತ. ಈಗ ಸರಿಸುಮಾರು 130 ಜನ ಬ್ರಾಹ್ಮಣರಿಗೆ ಈ ನಾಗದೋಷ ನಿವಾರಣೆಯ ವಿಧಿವಿಧಾನ ಮಾಡೋ ಕೆಲಸ ಇದೆ. ಹತ್ತು ಐವತ್ತು ಜನರಿಗೆ ಅಲ್ಲಿ ಕ್ಲೀನಿಂಗ್ ಮಾಡುವ ಐದಾರು ಜನರಿಗೆ ಮಾರ್ಗದರ್ಶನ ಮಾಡೋ ಕೆಲಸ ಇದೆಯಂತೆ ಈಗ. ಇನ್ನು ಇನ್‌ಕಂ ಲೆಕ್ಕಾಚಾರ ಬೇಡ.


ದೇವರೆಂದರೆ ಬಹುಶ: ಇದೆ. ಜನರಿಗೆ ಒಳ್ಳೆಯದು ಮಾಡುವುದೇ ಅವನ ದಿನಿತ್ಯದ ಕೆಲಸ. ಪಾಪ ತೊಳೆಯೋದು , ಪುಣ್ಯ ಕೊಡೋದೇ ಅವನ ಕೆಲಸ. ಅಂದರೆ ದಾನ ಮಾಡುವುದೇ ದೇವರ ಸಮೀಪಕ್ಕೆ ಹೋಗೋ ದಾರಿ. ಹಾಗಾಗಿಯೇ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅಂಗಡಿಗಳಿಂದ ಏನಾದರೊಂದು ನಾವು ಖರೀದಿಸದೇ ಹೋಗೋದಿಲ್ಲ. ಅಲ್ಲಿ ಖರೀದಿಸುವ ವಸ್ತುಗಳಿಗೆ ಚರ್ಚೆಯೂ ಮಾಡೋಲ್ಲ.ಹೇಳಿದಷ್ಟು ರೇಟು ಕೊಟ್ಟು ರೈಟ್ ಹೇಳೋದೇ. ಅದಕ್ಕೊಂದು ಎಕ್ಸಾಂಪಲ್ , ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರು ದೇವಸ್ಥಾನದ ಅಂಗಡಿಯಿಂದ ಆಟಿಕೆ ಖರೀದಿಸಿದ್ದರು.ಅದರಲ್ಲಿ ಎಂಆರ್ಪಿ ರೇಟ್ 40 ರುಪಾಯಿ ಇತ್ತು. ಆದರೆ ಅವರು ಕೊಟ್ಟ ರೇಟು ಬರೋಬ್ಬರಿ 170 ರುಪಾಯಿ. ನೋ ಚರ್ಚೆ. ದೇವಸ್ಥಾನದಲ್ಲಲ್ಲಾ ಹೋಗಲಿ , ದೇವರಿದ್ದಾನಲ್ಲ, ಎಲ್ಲಾದ್ರೂ ಕೊಡ್ತಾನೆ ,ಅಂತಾರೆ ಅವರು. ಅಂದರೆ ಆ ವಠಾರದಲ್ಲಿ ಇರೋವರಿಗೆ ಅದೆಲ್ಲಾ ದೇವರ ವರ ಅಷ್ಟೆ. ತಪ್ಪೇನಿಲ್ಲ. ಅಧರ್ಮದ ದುಡ್ಡು ಅದಲ್ಲ. ಯಾಕೆಂದರೆ ದೇವಸ್ಥಾನಕ್ಕೆ ಬರೋದು ಪಾಪ ಕಳೆಯೋದಿಕ್ಕಲ್ಲಾ , ಹಾಗಾಗಿ ದುಡ್ಡಿಗೆ ಲೆಕ್ಕ ಮಾಡೋದಿಲ್ಲ ಅಂದ್ರು ನನ್ನ ಆ ಸಂಬಂಧಿಕರು.


ಅಬ್ಬಾ . !. ದೇವಸ್ಥಾನ ಊರಿಗೊಂದು ಇದ್ದರೆ ಆ ಊರು ಎಷ್ಟು ಡೆವಲೆಪ್‌ಮೆಂಟ್ ಆಗಬಹುದಲ್ಲಾ . !. ಊರಿನ ಜನರೆಲ್ಲಾ ಈ ಕೃಷಿ , ಈ ಆಫೀಸು ಅಂತೆಲ್ಲಾ ಓಡಾಡ್ಬೇಕಾ?. ಅದಕ್ಕೇ ಹೇಳಿರಬೇಕು ಊರಿಗೊಂದು ದೇವಸ್ಥಾನವಿದ್ದರೆ ಅದೊಂದು ನಂದನವನ ಅಂತ . .!.

ಓ ದೇವರೇ ನೀನೆಷ್ಟು ಕರುಣಾಮಯಿ . . ನೀನೆಷ್ಟು ಬುದ್ದಿವಂತ . . ಅದಕ್ಕೇ ನೀನು ದೊಡ್ಡವನು . .

24 ನವೆಂಬರ್ 2010

"ಜಾತೀ"ಯತೆ. . !

* ಒಳಗೆ ಬನ್ನಿ . ., ಆದರೆ . . ನಿಮ್ಮ ಜಾತಿ ಯಾವುದು . .?,

* ಅದೊಂದು ಸರಕಾರೀ ಅರ್ಜಿ ಫಾರ್ಮ್.ಅದರಲ್ಲಿ ನಿಮ್ಮ ಹೆಸರು , ನಿಮ್ಮ ಭಾಷೆ , ನಿಮ್ ರಾಜ್ಯ, ನಿಮ್ಮ ದೇಶ , ನಿಮ್ಮ ರಾಷ್ಟ್ರೀಯತೆ .. . ಇದೆಲ್ಲಾ ಜಾತಕದ ಬಳಿಕ ಕಟ್ಟ ಕಡೆಯ ಪ್ರಶ್ನೆ ನಿಮ್ಮ “ಜಾತಿ . . .”?.

* ಅಬ್ಬಾ . . !. ಅವ ನಮ್ಮವ.. . ! ಇವನ್ಯಾರವ. . ?. ಅವನೇತಕೆ ಇಲ್ಲಿ . . ?

ನಿಮ್ಮದು ಬ್ರಾಹ್ಮಣ ಸಮಾಜವಾದರೆ ಅದಕ್ಕೊಬ್ಬ ಸ್ವಾಮೀಜಿ , ಲಿಂಗಾಯತರಾದರೆ ಅದಕ್ಕೆ ಇನ್ನೊಬ್ಬ , ಗೌಡರಾದರೆ ಅಲ್ಲಿ ಮತ್ತೊಬ್ಬರು . . . . . ಹೀಗೇ ಜಾತಿಗೊಬ್ಬ ಸ್ವಾಮೀಜಿ. ಆ ಜಾತಿಯನ್ನು ಹಿಡಿದಿಟ್ಟುಕೊಳ್ಳುವುದೇ ಆ ಸ್ವಾಮೀಜಿಯ ಕಾಯಕ. ಅಷ್ಟೇ ಅಲ್ಲ , ಆ ಜಾತಿಯೊಳಗೆ ಇನ್ನೂ ಹಲವಾರು ವಿಘಟನೆ. ಯಾವುದರಲ್ಲಿ ಇಲ್ಲ ನೋಡಿ , ಬ್ರಾಹ್ಮಣರೊಳಗೆ ಒಂದಷ್ಟು , ಲಿಂಗಾಯತರಲ್ಲಿ ಇನ್ನೂ ಹಲವಾರು, ಗೌಡರಲ್ಲಿ ಹಲವು ಬಗೆ , ಶೆಟ್ಟರಲ್ಲಿ ಇನ್ನೂ ಒಂದೆರಡು ಪಂಗಡ , ಅದೂ ಅಲ್ಲ ಮುಸಲ್ಮಾನರಲ್ಲಿ , ಕ್ರೈಸ್ತರಲ್ಲೂ ಬಗೆ ಬಗೆ . . !.ಇದೆಕ್ಕೆಲ್ಲಾ ಒಬ್ಬೊಬ್ಬ , ಎರಡೆರಡು ಸ್ವಾಮೀಜಿಗಳು.ಅವರೊಳಗೆ ಪ್ಯಪೋಟಿ . .!. ಒಂದು ಜಾತಿಯನ್ನು ನೋಡಿದರೆ ಇನ್ನೊಂದಕ್ಕೆ ಕಸಿವಿಸಿ , ಆ ಜಾತಿಯೊಳಗೆ ಡಿಶುಂ ಡಿಶುಂ. ಜಾತಿಯ ಹುದ್ದೆಯಲ್ಲಿ ಮೇಲೇರಿದರೆ ಇನ್ನೊಬ್ಬನಿಗೆ ಕೆಂಗಣ್ಣು , ಆಗ ಅಲ್ಲೊಂದು ಹಾವು ಏಟಿ ಆಟ ಶುರು.

ಅಬ್ಬಾ. . . . ! ಏನೆಲ್ಲಾ ಇದೆ,ಇಲ್ಲಿ . . .!

ಹಾಗೊಂದು ವೇಳೆ ನಾವೇನಾದರೂ ಈ ಜಾತಿ ಸಂಘಟನೆಯ ಒತ್ತಡಕ್ಕೆ ಮಣಿಯದೇ ಅಥವಾ ಅವರ ನಿಲುವಿನ ವಿರೋಧ ಹೋದೆವೆಂದರೆ ಇನ್ನು ಕತೆಯೇ ಬೇರೆ. ಆಗ ನಾವು ಮಾತಾಡಿದ್ದೆಲ್ಲಾ ಇಶ್ಯು. ಹೇಳಿದ್ದೆಲ್ಲಾ ಸುದ್ದಿ. ಕೊನೆಗೆ ಆ ಜಾತಿ ಸಂಘಟನೆಯ ಸ್ವಾಮೀಜಿಗೇ ವಿರೋಧ ಎನ್ನುವಷ್ಟು ದೊಡ್ಡ ಸುದ್ದಿಯಾಗುತ್ತದೆ.ಒಂದರ್ಥದಲ್ಲಿ ಆ ಸಂಘಟನೆಯ ಅಡಿಯಾಳಾಗಿರಬೇಕೆಂಬುದು ಅದರ ಒಟ್ಟಾರೆ ಔಟ್‌ಲೈನ್. ಆದರೆ ಕೆಲವೊಮ್ಮೆ ಈ ಜಾತಿ ಸಂಘಟನೆಗಳೇ ಕೆಲವರಿಗೆ ಆಧಾರವಾಗುತ್ತದೆ.ಮೊನ್ನೆ ನೋಡಿ ಮುಖ್ಯಮಂತ್ರಿಗಳಿಗೆ ಆಧಾರವಾದ್ದು ಯಾವುದು?. ಹಾಗೆಯೇ ಅನೇಕರಿಗೆ ಇದೊಂದು ವರವೂ ಆಗಿಬಿಡುತ್ತದೆ.

ನಿಜಾರ್ಥದಲ್ಲಿ ಮನೆಯ ನಾಲ್ಕು ಗೋಡೆಯ ಹೊರಗೆ ಈ ಜಾತಿಯ ಗೋಡೆಯನ್ನು ಕೆಡವಿ ಹಾಕಬೇಕಾಗಿದೆ. ಯಾಕೆಂದರೆ ಈ ಜಾತಿ ಸಂಘಟನೆಗಳು ನಾಲ್ಕು ಗೋಡೆಯ ಹೊರಗಡೆ ಮಾಡಿದ್ದೇನೂ ಇಲ್ಲ. ಮಾಡೋದು ಇಲ್ಲ. ಅದಕ್ಕೊಂದು ಉದಾರಣೆ ಇದೆ. ನಮ್ಮೂರ ಪಕ್ಕದಲ್ಲಿ ಒಬ್ಬ ಯುವಕ ಇತ್ತೀಚೆಗೆ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ಈಗ ಪ್ರತಿದಿನ ಬೆಳಗ್ಗೆ ೭ ಗಂಟೆಗೆ ಪೇಟೆಗೆ ಬರುತ್ತಾನೆ.ದಿನವಿಡೀ ಪೇಟೆಯಲ್ಲಿ ಮೇಲೆ ಕೆಳಗೆ ಹೋಗುತ್ತಲೇ ಇರುತ್ತಾನೆ.ಸಿಕ್ಕಸಿಕ್ಕವರಲ್ಲಿ ಬೀಡಿ ಕೇಳುತ್ತಾನೆ.ರಾತ್ರಿಯಾದರೆ ಮತ್ತೆ ಮನೆಗೆ ಹೋಗುತ್ತಾನೆ ಇಲ್ಲವಾದರೆ ಅಲ್ಲೇ ಎಲ್ಲಾದರೂ ಇರುತ್ತಾನೆ.ಪೇಟೆಗೆ ಬರೋವರೆಲ್ಲಾ ಆತನನ್ನು ನೋಡಿಕೊಂಡು ಛೇ . . ! ಅಂತ ಮರುಕಪಡುತ್ತಾರೆ. ಇತ್ತೀಚೆಗೊಬ್ಬರು ಹೇಳಿದರು , ನಿಮ್ಮ ಜಾತಿಯವರು ಯಾರೂ ಇಲ್ಲವಾ?. ಅಂತ. ಆದರೂ ಜಾತಿ ಮುಖಂಡರು ನೋಡಿಲ್ಲ. ಪಾಪ ಆ ಯುವಕನ ಮನೆಯಲ್ಲಿರೋ ಆತನ ಹೆಂಡತಿಗೆ ವಿವಿದ ಜವಾಬ್ದಾರಿಗಳು. ನಾನೇನು ಮಾಡಲಿ ಅಂತ ಆ ಹೆಂಗಸು ಗೋಗರೆಯುತ್ತದೆ. ಆದರೆ ಯಾವೊಬ್ಬ ಜಾತಿ ಲೀಡರ್ ಆ ಮನೆಗೆ ಬೇಟಿ ಕೊಟ್ಟು ಪರಿಸ್ಥಿತಿ ಹೇಗಿದೆ, ನಾವೇನು ಮಾಡ್ಬೇಕು ಅಂತ ವಿಚಾರಿಸಿಲ್ಲ. ಆತ ದಿನವೂ ಹಾಗೆ ಪೇಟೆಗೆ ಬರುತ್ತಿದ್ದಾನೆ.ಇತ್ತೀಚೆಗೆ ನಾನೊಬ್ಬ ಕ್ರೈಸ್ತ ಮುಖಂಡರನ್ನು ಭೇಟಿಯಾಗಿ ನಮ್ಮೂರಿನ ಈ ಯುವಕನ ಬಗ್ಗೆ ಹೇಳಿದ್ದೆ.ಅವರು ತಕ್ಷಣವೇ ಒಪ್ಪಿಕೊಂಡರು. ಆ ನಂತರ ಹೇಳಿದರು , ನಮ್ಮ ಜಾತಿ ಬೇರೆ ಆ ಹುಡುಗನ ಜಾತಿ ಬೇರೆ.ಒಂದು ವೇಳೆ ನಾವೆಲ್ಲಾದರೂ ಚಿಕಿತ್ಸೆ ಕೊಡಿಸಿದರೆ ಅದೇ ಒಂದು ಇಶ್ಯು ಆದ್ರೆ..? ಸ್ವಲ್ಪ ದಿನ ನೋಡೋಣ ಅಂದ್ರು. ಹೀಗಾಗಿ ನಮ್ಮ ಪ್ರಯತ್ನ ಠುಸ್. ಆದ್ರೂ ನಿರೀಕ್ಷೆ ಠುಸ್ ಆಗಿಲ್ಲ.ಕಾದು ನೋಡಬೇಕು.ಇನ್ನು ನಾನೊಬ್ಬನೇ ಚಿಕಿತ್ಸೆ ನೀಡುವಷ್ಟು ಶ್ರೀಮಂತನಲ್ಲ.

ಹಾಗಾಗಲ್ಲ ಎಂದು ಧೈರ್ಯವಾಗಿ ಹೇಳಲು ನನಗೆ ಆಗಿಲ್ಲ.ಯಾಕೆಂದರೆ ನಾಳೆ ಇಡೀ ಜಾತಿ ಎದ್ದು ನಿಂತರೆ?. ಆ ಹುಡುಗನಿಗೆ ಚಿಕಿತ್ಸೆ ಆರಂಭವಾದ ಮೇಲೆ ಲಬೋ ಲಬೋ ಎಂದು ಈ ಮೌನವಾಗಿದ್ದವರೆಲ್ಲಾ ಎದ್ದು ನಿಂತರೆ?. ಹೀಗಾಗಿ ಸದ್ಯ ಸುಮ್ಮನಿದ್ದಾರೆ. ಹೀಗೇ ಮುಂದುವರಿದು ಆ ಹುಡುಗನ ಭವಿಷ್ಯವೇ ಕಮರಿ ಹೋಗಲಿರುವುದಂತೂ ಸತ್ಯ. ಇದು ಜಾತಿ ಎಫೆಕ್ಟ್ . . !.ಮನೆ ಮನೆಯಿಂದ ಚಂದಾ , ವಿವಿದ ರೀತಿಯ ಕಲೆಕ್ಷನ್ ಮಾಡುವ ಈ ಜಾತಿ ಸಂಘಟನೆಗಳು ಆ ಮನೆಗೆ ಸಂಕಷ್ಠ ಬಂದಾಗ ಸ್ಪಂದಿಸಬೇಡವೇ?.

ಇದೆಲ್ಲಾ ಜಾತಿ ಎಫೆಕ್ಟ್ . . . .!.

16 ನವೆಂಬರ್ 2010

ಶುರುವಾಗಿದೆಯಂತೆ ಪ್ರಳಯ - 2012

ಪ್ರಳಯ ಶುರುವಾಗಿದೆಯಂತೆ . .!.

2012 ಕ್ಕೆ ಪ್ರಳಯವಾಗುತ್ತದೆ ಅಂತ ಕಳೆದ ವರ್ಷದಿಂದಲೇ ಸುದ್ದಿ ಶುರುವಾಗಿತ್ತು. ಅದಲ್ಲ ಆಗೋದಿಲ್ಲ ಅಂತ ಕೆಲವರು , ಆಗುತ್ತೆ ಅಂತ ಇನ್ನೂ ಕೆಲವರು ವಾದಿಸಿದ್ದರು. ಈ ನಡುವೆ ಇದಕ್ಕಾಗಿಯೇ ಒಂದು ಸಮ್ಮೇಳನವು ಕೂಡಾ ನಡೆಯುವುದರಲ್ಲಿತ್ತು.ಆದರೆ ಅದೇಕೋ ಏನೋ ಆ ಸಮ್ಮೇಳನ ಕೂಡಾ ಪ್ರಳಯವಾಗೋ ಮುನ್ನವೇ ಸದ್ದಿಲ್ಲದೆ ನಿಂತೇ ಹೋಯಿತು. ಆದರೆ ಈಗಂತೂ ಪ್ರಳಯ ಶುರುವಾಗಿದೆಯಂತೆ , ಹಾಗಂತ ಹಳ್ಳಿ ಜನ ಮಾತನಾಡುತ್ತಿದ್ದಾರೆ. ಯಾಕೆ ಗೊತ್ತಾ?. ಕಾರಣವಿದೆ.ಅವರು ಹೇಳುವುದರಲ್ಲೂ ಹುರುಳಿದೆ.

ಎಂತ ಮಾರಾಯ್ರೆ ಮಳೆಯೇ ನಿಲ್ಲುತ್ತಿಲ್ಲ , ಏನು ಅವಸ್ಥೆ ಈ ವರ್ಷದ್ದು , ಮಳೆ ನಿಲ್ಲದೇ ಇದ್ದರೆ ಹೇಗೆ?.ಇರುವ ಭತ್ತ ನೆಲಕ್ಕೆ ಬಿದ್ದು , ನಾಟಿ ಕೊಳೆಯುತ್ತಿದೆ , ಊಟಕ್ಕೆ ಏನು ಮಾಡೋದು? ಎಂದು ರೈತ ಕೇಳುತ್ತಿದ್ದಾನೆ.

ಅಲ್ಲಾ ಮಾರಾಯ್ರೆ , ಮಳೆ ಬರ್ತಾ ಇದೆ, ಅಡಿಕೆ ಬೀಳುತ್ತಾ ಇದೆ , ಅಂಗಳದಲ್ಲಿ ಹಾಕಿದ ಅಡಿಕೆ ಕೊಳೆಯುತ್ತಿದೆ , ಕೆಲವು ಕಡೆ ಅಂಗಳದಲ್ಲೇ ಅಡಿಕೆ ಹುಟ್ಟಿದೆ.ಏನು ಮಾಡೋದೇ ಗೊತ್ತಾಗ್ತಾ ಇಲ್ಲ , ರೋಗವೂ ಮತ್ತೆ ಶುರುವಾಗಿದೆ ಅಂತಾನೆ ಅಡಿಕೆ ಬೆಳೆಗಾರ.

ಅಲ್ಲಾ ಸ್ವಾಮಿ , ಹೀಗೆ ಮಳೆ ಬಂದ್ರೆ ಹೇಗೆ , ರಬ್ಬರ್‌ಗೆ 200 ರುಪಾಯಿ ದಾಟಿದೆ.ಆದ್ರೆ ಏನು ಟ್ಯಾಪಿಂಗ್ ಮಾಡೋದಾದ್ರೂ ಹೇಗೆ.ರೇಟಿದೆ ನಮ್ಗೆ ಮಾತ್ರಾ ಸಿಕ್ತಾ ಇಲ್ಲ ಅಂತಾನೆ ರಬ್ಬರ್ ಬೆಳೆಗಾರ.

ಅಯ್ಯೋ ಏನು ಮಳೆ. ಕೆಲಸ ಮಡೋದಾದ್ರೂ ಹೇಗೆ ಅಂತಾನೆ ಕೂಲಿ ಕಾರ್ಮಿಕ.

ಇದೆಲ್ಲಾ ಪ್ರತಿದಿನವೂ ಹಳ್ಳಿಯಲ್ಲಿ ಕೇಳೋ ಮಾತು.ಹಿಂದೆಲ್ಲಾ ದೀಪಾವಳಿಯ ಹೊತ್ತಿಗೆ ಮಳೆ ಕಡಿಮೆಯಾಗಿ ಚಳಿ ಶುರುವಾಗುವ ಹೊತ್ತು.ಅಂತಹದ್ದರಲ್ಲಿ ಇಂದು ಕೂಡಾ ಸಂಜೆ ಭಾರೀ ಮಳೆ ಬರುತ್ತಿದೆ.

ಬೆಳಗ್ಗೆ ಹಿಮ ಬಿದ್ದರೆ , ಇನ್ನು ಮಳೆ ದೂರ ಹೋಯಿತು ಅನ್ನೋ ವಾಡಿಕೆ ಹಿಂದೆಲ್ಲಾ ಇತ್ತು.ಆದರೆ ಈಗ ಆ ವಾಡಿಕೆ ಇಲ್ಲವೇ ಇಲ್ಲ.ಬೆಳಗ್ಗೆ ಹಿಮ , ಮಧ್ಯಾಹ್ನ ಸುಡುಬಿಸಿಲು , ಸಂಜೆ ಭಾರೀ ಮಳೆ.ಒಂದೇ ದಿನ 3 ಕಾಲ.ಮನುಷ್ಯನಿಗೆ ಈಗ ಅರ್ಜೆಂಟಲ್ವಾ ಹಾಗೇ ಈ ಕಾಲಗಳಿಗೂ ತುರ್ತು ಶುರುವಾಗಿದೆ. ಇನ್ನು ಈ ಕಾಲ ಮಾನ ಬದಲಾಗೋ ಹಾಗೆ ಕಾಣುತ್ತಿಲ್ಲ. ಇದು ಬದಲಾದ ಕಾಲಮಾನ.ಇನ್ನು ಬದಲಾಗೋ ಲಕ್ಷಣ ಇಲ್ಲ.ಪ್ರಕೃತಿಗೆ ಘಾಸಿಯಾಗಿದೆ.ಇನ್ನು ಪ್ರತೀ ವರ್ಷ ಹೀಗೇನೆ ಅಂತಾರೆ ಹಿರಿಯರು. ಯಾಕಂದ್ರೆ ಇದುವೇ ಒಂದು ಪ್ರಳಯ.ಕಲಿ ಕಾಲದಲ್ಲಿ ಮಾತ್ರಾ ಹೀಗಾಗುತ್ತೆ.ಈ ರೀತಿಯಾಗಿ ನಾಶವಾಗುತ್ತೆ.ಇದನ್ನ ಪ್ರಳಯ ಅಂತಾರೆ ಹಳ್ಳಿ ಜನ.

ಆಗ ಯಾರೋ ಒಬ್ಬರು ಹೇಳಿದರು , ಮುಂದಿನ ವರ್ಷ ಹೀಗೇ 10 ತಿಂಗಳು ಮಳೆ ಇರುತ್ತಂತೆ ಅಂತ. ಹೀಗೆ 10 ತಿಂಗಳು ಮಳೆ ಬಂದ್ರೆ ಕೃಷಿಯೆಲ್ಲಾ ನೀರು ಪಾಲು. ಅಡಿಕೆ ಸಿಂಗಾರವೇ ಕರಟುತ್ತೆ , ಭತ್ತದ ನಾಟಿಯೇ ಅಸಾಧ್ಯ. ಅದೇ ಒಂದು ನಾಶ. ಅದನ್ನೇ ಪ್ರಳಯ ಅಂತ ಕರೆಯೋದು ಅಲ್ವಾ?. ಈ ರೀತಿ ಮಳೆ ಬಂದ್ರೆ ಕೃಷಿ ನಾಶ. ಕೃಷಿ ನಾಶವಾದ್ರೆ ಅನ್ನ ನಾಶ. ಅನ್ನ ನಾಶವಾದ್ರೆ ?. ಸ್ಟಾಕ್ ತೆಗೆಯೋದು . . . ಇದು ಎಷ್ಟು ದಿನ. . ?. ಆಗ ಬೆಲೆ ಏರಿಕೆ ಕಾಡುತ್ತೆ. ಇದರ ನಿಯಂತ್ರಣ ಹೇಗೆ?. ಇದುವೇ ಪ್ರಳಯ ಅಂತಾರೆ ಆ ಜನ.

ಏನೇ ಇರಲಿ.ಇಂದು ಕಾಲ ಮಾನ ಬದಲಾಗಿದೆ.ಮಳೆ ಬರೋ ಕಾಲಕ್ಕೆ ಮಳೆ ಬರೋದಿಲ್ಲ.ಮಳೆ ನಿಲ್ಲೋ ಸಮಯದಲ್ಲಿ ಮಳೆ ನಿಲ್ಲೋದಿಲ್ಲ , ಚಳಿ ಕಾಲದಲ್ಲಿ ಚಳಿಯೇ ಮಾಯ.ಬಿಸಿಲು ಎಂದರೆ ಸುಡು ಬಿಸಿಲು. ಹೀಗೆ ಈ ಬದಲಾದ ಕಾಲವನ್ನು ಸಹಿಸಿಕೊಳ್ಳಬೇಕಾಗಿದೆ.ಎದುರಿಸಬೇಕಾಗಿದೆ.ಅದಕ್ಕಾಗಿ ಮಾನಸಿಕವಾಗಿ ಸಿದ್ದವಾಗಬೇಕಾಗಿದೆ.ಅದೊಂದೇ ದಾರಿ.ಸವಾಲುಗಳಿಗೆ ಎದೆಯೊಡ್ಡಿ ನಡೆಯಲೇಬೇಕಾಗಿದೆ ಅಷ್ಟೇ.

ಪ್ರಕೃತಿಯ ಮುಂದೆ ನಾವೆಲ್ಲಾ ಏನು . .?. ತಂತ್ರಜ್ಞಾನಗಳಿಂದ ಇದನ್ನೇನಾದರೂ ತಡೆಯಲು ಸಾಧ್ಯವೇ. .?. ಏನಾದರೂ ಪ್ರಯೋಗ ಮಾಡಲು ಆದೀತೇ . .?.ಕಾಲವೇ ಉತ್ತರ ಹೇಳಬೇಕು. . . .

ಜಗವು ನಿನ್ನ ಪ್ರೀತಿಸದು . !

“ಜಗವು ನಿನ್ನ ಪ್ರೀತಿಸಲಿಲ್ಲವೆಂದು ಹಳಿಯಬೇಡ , ನೀನು ಹೆತ್ತವರಿಗೆ ಮಗುವಾಗಿರಬಹುದು , ಆದರೆ ಜಗಕೆ ನೀನೂ ಒಬ್ಬ ಸ್ಪರ್ಧಿಯೇ. .!”.

ಮೊನ್ನೆ ಮನೆಯ ಕವಾಟಿನಲ್ಲಿ ಅದ್ಯಾವುದೋ ಪುಸ್ತಕ ಹುಡುಕುತ್ತಿದ್ದೆ , ಆಗ ಮಂಕುತಿಮ್ಮನ ಕಗ್ಗದ ಪುಸ್ತಕ ಕೈಗೆ ಸಿಕ್ತು. ಆವತ್ತು ಯಾವಾಗಲೋ ಅದನ್ನು ಖರೀದಿಸಿ ಅರ್ಧ ಓದಿ ಹಾಗೆಯೇ ಇರಿಸಿದ್ದೆ.ಮೊನ್ನೆ ಕೈಗೆ ಪುಸ್ತಕ ಸಿಕ್ಕಿದಾಗ ಸುಮ್ಮನೆ ನಿರಾಯಾಸವಾಗಿ ಓದುತ್ತಾ ಹೋದೆ.ನಿಜಕ್ಕೂ ಇಂದಿಗೆ ಮಂಕುತಿಮ್ಮನ ಕಗ್ಗ ಪ್ರಸ್ತುಕ ಅಂತ ಅನ್ನಿಸಿತು , ಮತ್ತೆ ಓದುತ್ತಾ ಹೋದಾಗ ಇದು ಸಾರ್ವಕಾಲಿಕ ಸತ್ಯ ಅಂತ ನಿರ್ಧರಿಸಿದೆ.


ನಿಮಿಷ ನಿಮಿಷಕ್ಕೆ ಬದಲಾಗುವ ಈ ಸಮಾಜದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲವೇ ,

ಮೊನ್ನೆ ಮಿತ್ರನೊಬ್ಬ ಹೇಳುತ್ತಲಿದ್ದ , ಆತ ಒಂದು ಉದ್ಯೋಗದಲ್ಲಿದ್ದ. ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಆ ಯೋಚಿಸುತ್ತದ್ದ. ಅದರ ಬೆನ್ನಿಗೇ ಇನ್ನೊಬ್ಬ ಆತನ ಸಹೋದ್ಯೋಗಿ ರಾಜೀನಾಮೆ ನೀಡಿದ. ಸಂಸ್ಥೆಯು ಖಾಲಿಯಾದ ಹುದ್ದೆಗೆ ಅರ್ಜಿ ಆಹ್ವಾನಿಸಿತು. ಆ ಒಂದು ಹುದ್ದೆಗೆ ಬಂದ ಅರ್ಜಿ ಬರೋಬ್ಬರಿ 280 . .!. ನನ್ನ ಮಿತ್ರನಿಗೇ ಅಚ್ಚರಿಯಾಯಿತಂತೆ. ನನ್ನ ಹುದ್ದೆಯ ಮೇಲೆ 280 ಜನರ ಕಣ್ಣು ಇದೆ. .!. ಹಾಗಿದ್ದರೆ ಈ ಹುದ್ದೆ ಬಿಟ್ಟರೆ ಹೇಗೆ .?. ಸ್ಪರ್ಧಿಸಬೇಕು . . ಗೆಲ್ಲಬೇಕು. ಎಂದು ಆತ ರಾಜೀನಾಮೆ ನಿರ್ಧಾರವನ್ನು ಬಿಟ್ಟನಂತೆ . !. ಹಾಗಾಗಿ ಈ ಜಗದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲದೆ ಮತ್ತಿನ್ನೇನು .?. ನಾವೊಬ್ಬನಲ್ಲ ನಮ್ಮಂತೆ ಇನ್ನೂ ಹಲವರಿದ್ದಾರೆ. ನಾವೇನೂ ಅಲ್ಲ.

ಇಂತಹದ್ದೇ ನನಗೆ ಖುಷಿಕೊಟ್ಟ ಕಗ್ಗಗಳು ;

“ಅಕ್ಕಿಯಿಂದ ಅನ್ನವನ್ನು ಮಾಡಲು ಮೊದಲು ಕಂಡವನು ಯಾರು ?,ಅಕ್ಷರದಿಂದ ಬರಹವನ್ನು ಆರಂಭಿಸಿದವನು ಯಾರು . .? ಆದರೂ ಎಲ್ಲವೂ ನಾನು ಮಾಡಿದ್ದು ಎನ್ನುವುದರಲ್ಲಿ ಅರ್ಥವೇನಿದೆ . .?”

“ನೀನು ಉದ್ದಾರವಾಗಬೇಕಾದರೆ ಹೆಸರಿನ ಹುಚ್ಚು ಬಿಡು , ಲೋಕದಲ್ಲಿ ಮಗುವಾಗು, ಹಸುವಾಗು, ಗಿಡವಾಗು, ಪೊರಕೆಯಾಗು ಆಗ ನೀನು ಉದ್ದಾರವಾಗುತ್ತಿ.”

“ಭಾವಾವೇಶಕ್ಕೆ ಒಳಗಾಗುವಾಗ ಮನಸ್ಸು ಕುದುರೆಯಾಗಲಿ , ಬುದ್ದಿ ಅದರ ಸವಾರನಾಗಲಿ.ಮನಸ್ಸು - ಬುದ್ದಿ ಎರಡೂ ಸತಿಪತಿಗಳಾಗಲಿ ಆಗ ಜೀವನವು ವಿಜಯಯಾತ್ರೆಯಂತಾಗುತ್ತದೆ”

15 ನವೆಂಬರ್ 2010

ಕೆಂಪು ಸಂಕ -6

. . . . ಆದರೆ ಸೋಮಪ್ಪ ಗೌಡರು ಮನೆಯಿಂದ ಕಮಿಲಕ್ಕೆ ಬರೋವಾಗ ಸ್ವಲ್ಪ ತಡವೇ ಆಗಿತ್ತು.ಗೌಡರು ಬಂದ ತಕ್ಷಣವೇ ಅಂಗಡಿ ಬಳಿ ಸೇರಿದ್ದ ಎಲ್ಲರೂ “ಗೌಡ್ರು ಬಂದ್ರು . . ಗೌಡ್ರು ಬಂದ್ರು”ಅಂತ ಎದ್ದು ನಿಂತರು. ಹಾಗೇ ಅಂಗಡಿ ಬಳಿ ಬಂದ ಗೌಡ್ರಿಗೆ ಎದುರು ಸಿಕ್ಕವನು ವಾಡ್ಯಪ್ಪ. “ಹ್ಹಾ. . , ಏನು ವಾಡ್ಯಪ್ಪ , ಏನ್ ಸಮಾಚಾರ “, ಎಂದುಕೊಂಡು ನೇರವಾಗಿ ಅಂಗಡಿಯೊಳಗೆ ಹೋಗಿ “ಏ , ಚನ್ನ ಒಂದು ಬೀಡ ಕೊಡು”, ಎಂದು ಬೀಡ ತೆಗೆದುಕೊಂಡು ಬಾಯಿಗೆ ಹಾಕಿ ಮೆಲ್ಲುತ್ತಾ , ಬಸ್ ಸ್ಟ್ಯಾಂಡ್ ಕಡೆಗೆ ಬಂದರು.ಆಗಲೇ ಸಮಯ ರಾತ್ರಿ ಎಂಟಾಗುತ್ತಾ ಬಂದಿತ್ತು.ಕಮಿಲ ಪೇಟೆಯಲ್ಲಿ ಅಷ್ಟಮಿ ಕಾರ್ಯಕ್ರಮಕ್ಕೆ ಜನಸೇರುವಂತೆ ಜನ ಸೇರಿದ್ದರು.ಎಲ್ಲರಿಗೂ ಒಂದೇ ಕುತೂಹಲ, ಕೆಂಪು ಸಂಕದ್ದು ಏನು ಕತೆ?.

* * * * * * * * * * * * * * * * * * * * *

ಸಭೆ ಶುರುವಾಯಿತು.

ಗೌಡ್ರು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಒಂದು ಚೆಯರ್ ಹಾಕಿ ಕುಳಿತಿದ್ದರು. ಮುಂದುಗಡೆ ಎಲ್ಲರೂ ಕುತೂಹಲದಿಂದ ಕುಳಿತಿದ್ದರು. ಇನ್ನು ಸ್ವಾಗತ , ಪ್ರಸ್ತಾವನೆ ಎಲ್ಲಾ ಆಲ್ಲಿಲ್ಲ.ಊರಿನ ಮುಖಂಡರೂ , ಪ್ರಮುಖರೂ ಆದ್ದರಿಂದ ಅವರ ಮುಂದೆ ಮಾತನಾಡುವ ಧೈರ್ಯ ಇರೋರೇ ಸ್ವಲ್ಪ ಕಡಿಮೆ. ಅವರು ಹೇಳಿದ ಕೆಲಸ ಅಚ್ಚುಕಟ್ಟಾಗಿ ಮುಗಿಸೋರೇ ಅಲ್ಲಿದ್ದರು.ಹಾಗಾಗಿ ಗೌಡ್ರೇ ನೇರವಾಗಿ ಮಾತಿಗೆ ಶುರುವಿಟ್ಟರು.

“ ನಿಮಗೆಲ್ಲಾ ಗೊತ್ತಿರಬಹುದು , ನಾನು ಆಗ ಜೋಯಿಸರಲ್ಲಿಗೆ ಹೋಗಿ ಕೆಂಪುಸಂಕದ ಬಗ್ಗೆ ಕೇಳಿದ್ದೇನೆ.ಜೋಯಿಸರು ಹೇಳಿದ್ದಾರೆ , ಅಲ್ಲೊಂದು ಸಂಚಾರವಿದೆ , ಇದಕ್ಕೆ ನಿವೃತ್ತಿಯಾಗಬೇಕಂತೆ , ಅದಕ್ಕಾಗಿ ಶಾಂತಿ ಹೋಮ ಆಗಬೇಕಂತೆ, ಇಲ್ಲವಾದರೆ ಇಡೀ ಊರಿಗೆ ಅಪಾಯ ಉಂಟಂತೆ , ಈ ಶಾಂತಿ ಹೋಮ ಮಾಡಿಸದೇ ಇದ್ದರೆ , ಇನ್ನೂ ಒಂದೆರಡು ಜೀವಗಳು ಹೋಗಬಹುದೆಂದು ಜೋಯಿಸರು ಹೇಳಿದ್ದಾರೆ” ಎಂದು ಮಾತು ಮುಗಿಸುವ ಮುನ್ನವೇ , ಜಯರಾಮ ಕೇಳಿದ, “ ಅಲ್ಲ ಅದು ಯಾವುದರ ಸಂಚಾರವಂತೆ ?”.

“ಹ್ಹಾ. . , ಅದು ಸಂಚಾರ ಯಾವುದು ಅಂತ ಸ್ಪಷ್ಠ ಇಲ್ಲ , ಒಂದು ಭೂತ ಇದೆಯಂತೆ ಜೊತೆಗೆ ಒಬ್ಬ ಸತ್ತ ವ್ಯಕ್ತಿಯ ಪ್ರೇತವೂ ಇದೆಯಂತೆ ಹೀಗಾಗಿ ಸಮಸ್ಯೆಯಾಗಿದೆ ಎಂದಿದ್ದಾರೆ ಜೋಯಿಸರು” ಎಂದರು ಗೌಡ್ರು.

ಅಷ್ಟೊತ್ತಿಗೆ ಸುಂದರ ಕೇಳಿದ , “ಅಲ್ಲ ಈಗ ಈ ಹೋಮ ಮಾಡುವುದಾದರೆ ಎಲ್ಲಿ..?.”

“ಹೌದು , ಅದು ಎಲ್ಲಿ . . ಎಲ್ಲಿ ..” , ಎಂದು ಎಲ್ಲರೂ ಧ್ವನಿಗೂಡಿಸಿದರು ,

ಅದನ್ನೂ ಜೋಯಿಸರು ಹೇಳಿದ್ದಾರೆ , ಅದೇ ಕೆಂಪುಸಂಕದ ಬಳಿಯಲ್ಲಿ ಊರಿನ ಎಲ್ಲರೂ ಸೇರಿಕೊಂಡು ಮಾಡಬೇಕಂತೆ , ಇನ್ನು ಊರಿನ ಒಬ್ಬನಾದರೂ ಇದರಲ್ಲಿ ಪಾಲ್ಗೊಳ್ಳದೇ ಹೋದರೆ ಪ್ರಯೋಜನವಿಲ್ಲ ಅಂತ ಹೇಳಿದ್ದಾರೆ ಜೋಯಿಸರು ,ಅಂದ್ರು ಗೌಡ್ರು.

ಎಲ್ಲರೂ ಅವರ ಮಾತಿಗೆ ತಲೆದೂಗುತ್ತಿದ್ದರು. ಹೌದು ಆ ಶಾಂತಿ ಹೋಮ ಆಗಲೇಬೇಕು ಅಂತ ಎಲ್ಲರೂ ಮಾತನಾಡಿಕೊಂಡರು.

“ಹಾಗಿದ್ರೆ ಯಾವಾಗ ದಿನ ಇಂದೇ ನಿಶ್ಚಯ ಮಾಡುವ” ಎಂದು ಗಿರಿಯಪ್ಪ ಹೇಳಿದ.

“ಹೇಳಿ .. ನೀವೇ ಹೇಳಿ” ಅಂದ್ರು ಗೌಡ್ರು.

ತಕ್ಷಣ ವಿಜಯೇಶ ಹೇಳಿದ, “ಅಲ್ಲಾ ಅದು ಫಾರೆಸ್ಟ್ ಲ್ಯಾಂಡ್ ಅಲ್ವಾ. ?, ಅವರು ಬಿಡ್ತಾರ.? ಅಲ್ಲಿ ಹೋಮ ಮಾಡೋದಿಕ್ಕೆ?”. ,

ಗೌಡ್ರಿಗೆ ಸಿಟ್ಟು ಬಂತು , “ನಾನು ಕೇಳಿದ್ದು ಫಾರೆಸ್ಟ್‌ನವರು ಬಿಡ್ತಾರ ಅಂತ ಅಲ್ಲ , ಹೋಮಕ್ಕೆ ದಿನ ಹೇಳಿ ಅಂತ , ಅದೆಲ್ಲಾ ನಾನು ನೋಡ್ಕೊಳ್ಳುತ್ತೇನೆ ನಿಮಗೇನು ತಲೆಬಿಸಿ” ಅಂತ ಜೋರಾಗೇ ಹೇಳಿದರು.

ಸೋಮಪ್ಪ ಗೌಡರ ಈ ಮಾತಿಗೆ ಸಭೆಯಲ್ಲಿ ಸ್ವಲ್ಪ ವಿರೋಧ ಬಂತು. ವಿಜಯೇಶ ಜೊತೆಗಾರರಿಗೂ ಬಿಸಿಯಾಯಿತು.

“ಅಲ್ಲಾ ನೀವು ಹಾಗೆ ಹೇಳಿದರೆ ಹೇಗೆ ಗೌಡ್ರೆ , ನಾಳೆ ಹೋಮಕ್ಕೆ ಶುರುವ ಮಾಡಿದಾಗ ಫಾರೆಸ್ಟ್‌ನವನ್ರು ಬಂದು ಕಿರಿಕಿರಿ ಮಾಡಿದರೆ ಮತ್ತೆ ಏನು ಮಾಡುವುದು , ಅದಕ್ಕೆ ಈಗಲೇ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ” ಅಂದ ಕುಶಾಲಪ್ಪ ,

ಗೌಡ್ರ ಸಿಟ್ಟೂ ಕಡಿಮೆಯಾಯಿತು. “ ಆಯಿತು . . ಆಯಿತು. . . ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ , ನಮ್ಮ ಪಾರೆಸ್ಟ್‌ವನರು ಏನೂ ಮಾಡ್ಲಿಕ್ಕಿಲ್ಲ. ಮಾತಾಡ್ತೇನೆ” . “ಈಗ ಹೋಮಕ್ಕೆ ದಿನ ಹೇಳಿ ಅಂದ್ರು”.

ಸೀನಪ್ಪ ಎದ್ದು ನಿಂತು ಹೇಳಿದ , “ಹೆಚ್ಚು ದಿನ ಹೋಗೋದು ಬೇಡ , ಮುಂದಿನ ತಿಂಗಳ 12 ರಂದೇ ಆದರೆ ಹೇಗೆ ?. ಮರುದಿನ ಅಮವಾಸ್ಯೆ ಬೇರೆ. ಅಮವಾಸ್ಯೆ ಹತ್ತಿರವಾಗೋವಾಗ ಈ ಪ್ರೇತಗಳೆಲ್ಲಾ ಹೆಚ್ಚು ಓಡಾಡ್ತವಲ್ಲಾ , ಹಾಗಾಗಿ ಆವತ್ತೇ ಆದರೆ ಹೇಗೆ ?”.

“ಹೇಗೆ . .” ಎಂದು ಸೋಮಪ್ಪ ಗೌಡ್ರು ಸಭೆಯ ಅಭಿಪ್ರಾಯ ಕೇಳಿದ್ರು.

ಸೂರಪ್ಪ ಹೇಳಿದ , “ಅಲ್ಲ ಅಮವಾಸ್ಯೆಯಂದೇ ಆದರೆ ಹೇಗೆ?.

“ಹೇಗೆ .. ಹೇಗೆ . . ಹೇಳಿ. . ಹೇಳಿ. . ” ಎಂದು ಗೌಡ್ರು ಸಭೆಯ ಮುಂದೆ ಕೇಳಿದ್ರು.

“ಅಮವಾಸ್ಯೆಯವತ್ತು ಬೇಡ . ಮುಂದಿನ ತಿಂಗಳು 12 ರಂದೇ ಆಗಬಹುದು” ಎಂದು ಸಭೆಯ ಎಲ್ಲರೂ ಹೇಳಿದರು.
“ ಹ್ಹಾ. . ಸರಿ ಹಾಗದ್ರೆ ಮುಂದಿನ ತಿಂಗಳು 12 ರಂದು ಕೆಂಪುಸಂಕದ ಬಳಿಯಲ್ಲಿ ಶಾಂತಿ ಹೋಮ”.

“ಇನ್ನು ದಿನ ಹೆಚ್ಚಿಲ್ಲ ಇವತ್ತು ತಾರೀಕು 28 ಆಯಿತು.13 ದಿನ ಇದೆ , ಸಾಕಲ್ಲ”ಅಂದ್ರು ಗೌಡ್ರು.

“ಹೋ. . ಅದು ಸಾಕು”. ಅಂದಿತು ಸಭೆ.

“ಹೋಮದ ಖರ್ಚು ಹೇಗೆ. . ?” ಎಂದು ಕೇಳಿದ ಸೂರಪ್ಪ ,

“ಹ್ಹಾ . ಅದಕ್ಕೆ ಊರಿನ ಎಲ್ಲರಿಂದಲೂ 20 ರುಪಾಯಿ ಪಡೆದರೆ ಹೇಗೆ”. ಕೇಳಿದ್ರು ಗೌಡ್ರು.

ಅಂದಿನ ಕಾಲದಲ್ಲಿ 20 ರುಪಾಯಿಯೆಂದರೆ ಅದೇ ದೊಡ್ಡದು.

ಅದಕ್ಕೆ “ಅದು ಜಾಸ್ತಿಯಾಯಿತು. 15 ರುಪಾಯಿ ಸಾಕು” ಎಂದ ಸೂರಪ್ಪ ,

ಸಭೆಯೂ ಸೂರಪ್ಪನ ಮಾತಿಗೆ ಧ್ವನಿಗೂಡಿಸಿತು.

“ಆಯಿತು ಹಾಗಾದ್ರೆ 15 ರುಪಾಯಿ ಸಂಗ್ರಹಿಸೋಣ” ಎಂದರು ಸೋಮಪ್ಪ ಗೌಡರು.

“ಸರಿ . . , ಹೋಮ ಮಾಡುವುದಕ್ಕೆ ಪುರೋಹಿತರು ಯಾರು ಆಗಬಹುದು” ಎಂದು ಮತ್ತೆ ಗೌಡ್ರು ಪ್ರಶ್ನೆ ಮಾಡಿದರು.

ಆಗ ಅಲ್ಲಿದ್ದವರು ಯಾರೋ ಹೇಳಿದರು , “ನೋಡಿ ಇಲ್ಲಿ ಸಭೆಯ ಪಕ್ಕದಲ್ಲೇ ಇದ್ದಾರಲ್ಲ ನಮ್ಮ ಬರ್ಲಾಯಬೆಟ್ಟು ಭಟ್ಟರು , ಅವರೇ ಆಹಬಹುದು. ಊರಿನ ಪ್ರಯುಕ್ತ ಶಾಂತಿ ಹೋಮ ಅಲ್ವಾ ಅವರೂ ಒಪ್ಪಬಹುದು” ಅಂದರು.

ಆಗ ಸಭೆಯಲ್ಲಿದ್ದ ಅವರ ಮಗ ಅನಂತ ಭಟ್ಟ ಹೇಳಿದ “ಆಗಬಹುದು ಅವರಿಗೆ ಪುರುಸೊತ್ತು ಉಂಟಾ ಇಲ್ವಾ ಗೊತ್ತಿಲ್ಲ , ಅವರು ಮಡಿಕೇರಿಯಲ್ಲೂ ಪೂಜೆಗೆ ಹೋಗ್ತಾರೆ , ಕೇಳಬೇಕಷ್ಟೆ”. ಎಂದರು.

“ಹ್ಹಾ. . ಸರಿ ಕೇಳಲು ನಾನು ಬ‍ರ್ತೇನೆ” ಅಂದರು ಸೋಮಪ್ಪ ಗೌಡರು.

“ಸರಿ ಹಾಗಾದ್ರೆ ಇನ್ನೇನಾದ್ರೂ ಕೇಳಲು ಉಂಟಾ ?” ಅಂತ ಕೇಳಿದ್ರು ಗೌಡ್ರು.

“ ಇಲ್ಲ . . ಇಲ್ಲ ..” ಅಂದ್ರು ಸಭೆಯ ಮಂದಿ.

ಆಗಲೇ ಗಂಟೆ ಒಂಭತ್ತಾಗಿತ್ತು.ಮೊದಲೇ ಕೆಂಪುಸಂಕದ ಹೆದರಿಕೆ , ಹಾಗಗಿ ಎಲ್ಲರೂ ಸಭೆಯ ಮುಗಿತಾಯಕ್ಕೆ ಬಂದರು.ಸಭೆ ಮುಗಿಯಿತು ಗೌಡ್ರು ಎದ್ದರು ಎಲ್ಲರೂ ಹೊರಟರು.

ಈ ವಿಜಯೇಶ ಮತ್ತು ಆತನ ಸಂಗಡಿಗರಿಗೆ ಮಾತ್ರಾ ಸ್ವಲ್ಪ ಅಸಮಾಧಾನವಿತ್ತು.ಅವರು ಎಲ್ಲರೂ ಹೋದ ಮೇಲೆ ಚರ್ಚೆ ಮಾಡಿದರು ,
“ ಇವತ್ತು ಸಭೆ ಕರೆದದ್ದು ಯಾಕೆ ?, ಎಲ್ಲರ ಸಂಶಯ ನಿವಾರಣೆ ಮಾಡಬೇಕು ಅಂತ ತಾನೆ?.ಆದರೆ ಇವರೇನು ಹಿಟ್ಲರ್ ಹಾಗೆ ವರ್ತನೆ ಮಾಡುತ್ತಾರೆ.ಅವರು ಹೇಳಿದ್ದು ಮಾತ್ರಾ ಕೇಳಬೇಕು ಅಂತ ಅವರದ್ದು ಯೋಚನೆಯಾ ?. ಸೋಮಪ್ಪ ಗೌಡ್ರು ಮುಖಂಡರು ಆಗಿರಬಹುದು , ಆದರೆ ಅವರ ಸರ್ವಾಧಿಕಾರಿ ಧೋರಣೆಗೆ ಎಲ್ಲಾ ಬೇಡ” ಎಂದು ಮಾತನಾಡುತ್ತಿದ್ದರು.

ಅಷ್ಟೊತ್ತಿಗೆ ದೂರದೆಲ್ಲೆಲ್ಲೋ ಒಂದು ವಿಕಾರದಲ್ಲಿ ಕೂಗಿದಂತೆ ಕೇಳತೊಡಗಿತು.

“ಅದೇನೋ ಸದ್ದು. .” ಅಂತ ವಿಜಯೇಶ ಕೇಳಿದ , ಒಂದು ಕ್ಷಣ ಮೌನ.

“ಹೌದು. . ಹೌದು. .” ಎಲ್ಲಿಂದ ಅದು . . ಮತ್ತೆ ಮೌನ. .

ಅದು “ಅದೇ ಬಳ್ಪ ಕಾಡಿನಿಂದ . .” ಅಂದ ಆ ಗುಂಪಿನ ಒಬ್ಬ.

“ಅದ್ಯಾವುದಾದರೂ ಹಕ್ಕಿ ಆಗಿರಬಹುದು. . .” ಅಂತ ಮತ್ತೆ ಟೀಕೆ ಮುಂದುವರಿಸಿದರು.

ವಿಕಾರ ಸದ್ದು ಮತ್ತೆ ಹತ್ತಿರ ಹತ್ತಿರವಾದಂತೆ ಕೇಳಿಸಿತು. ಗುಂಪಿನಲ್ಲಿದ್ದವರಿಗೂ ಸ್ವಲ್ಪ ತಳಮಳ ಶುರುವಾಯಿತು.

“ಸರಿ. . ನಾಳೆ ಮಾತಾಡೋಣ. .” ಎಂದು ಮಾತಾನಾಡುತ್ತಾ ಮುಂದೆ ಹೊರಟರು.

ಆಗಲೇ ಈ ಶಾಂತಿ ಹೋಮದ ವಿರುದ್ದ ಒಂದು ಅಪಸ್ವರ ಕಾಣಿಸಿಕೊಂಡಿತು.

* ** * * * * * * * * * * * * * * * * * * * * *

14 ನವೆಂಬರ್ 2010

ನಿನ್ನೆಯೂ ಹೀಗೆ . ನಾಳೆಯೂ ಹಾಗೇ. .

ಸುತ್ತಲ ಹಸಿರು ತೋರಣದ ನಡುವಿನಿಂದ ಭಾಸ್ಕರ ಏಳುತ್ತಲಿದ್ದ , ದೂರದ ಕಾಡಿನಿಂದ ಹನಿ ಹನಿ ಬಿಂದುಗಳು ಸೇರಿಕೊಂಡು ತೊರೆಯಾಗಿ, ಹಳ್ಳವಾಗಿ,ನದಿಯಾಗಿ ಓಡೋಡುತ್ತಾ ಕಡಲು ಸೇರಲು ತವಕದಿಂದ ಸಾಗಿ ಬರುತ್ತಿತ್ತು, ಈ ಎಲ್ಲದರ ನಡುವೆ ಮೆತ್ತನೆಯ ಗಾಳಿಯು ಮನಸ್ಸಿಗೆ ಹಿತ ಕೊಡುವಂತಿತ್ತು.ಇವೆಲ್ಲವೂ ಅನುದಿನವೂ ತನ್ನ ಕಾಯಕವನ್ನು ಮಾಡೇ ಇರುತ್ತದೆ.ಇದಕ್ಕೇನು ಆಜ್ಞೆ ಬೇಕಾಗಿಲ್ಲ, ಇದಕ್ಕಾಗಿ ಯಾರನ್ನೂ ಕಾಯುವುದೂ ಇಲ್ಲ.ಆಜ್ಞೆ ಮಾಡಿದಂತೆ ಮಾಡೋದೂ ಇಲ್ಲ ,ಹಗಲಿರಲಿ ರಾತ್ರಿ ಇರಲಿ ನಿರಂತರ ಕಾಯಕ. ನಿನ್ನೆಯೂ ಹೀಗೇ ನಾಳೆಯೂ ಹಾಗೆಯೇ.

ಈಗ ನನ್ನ ಸುತ್ತ ಇದೇ ನಿನ್ನೆ . . . ನಾಳೆಗಳು.!.

ನಾನೆಂಬ ಈ ಜೀವಗಳು ಹೇಗೆ?.

ನಿನ್ನೆ . . ಮತ್ತು . . ನಾಳೆಗಳ ಮಧ್ಯೆ ವ್ಯತ್ಯಸ್ಥ ಮನಸ್ಸುಗಳು.!. ನಿನ್ನೆ ನಾನಾಗಿದ್ದರೆ ನಾಳೆ ನಾವು. ನಾಳೆ ನಾವಾಗಬೇಕಾದರೆ ನಿನ್ನೆ ನಾನು.

ಯಾಕಂದ್ರೆ,
ನಾನು ಮಾಡಿದ ಕೆಲಸ ಎಂಬ ಭಾವ ಅಲ್ಲಿ ಕಾಣಿಸುತ್ತಿದ್ದರೆ , ಅದರ ಹಿಂದೆ ಅನೇಕ “ನಾವು”ಸೇರಿಕೊಂಡಿರುತ್ತದೆ.ಆದರೆ ಜಗದ ಕಣ್ಣಿಗೆ ಅಲ್ಲಿ ಕಾಣಿಸೋದು ಮತ್ತು ಪ್ರಕಾಶಿಸೋದು “ನಾನು” ಮಾತ್ರಾ.

ಇನ್ನೊಂದು ನೋಡಿ , ನಾಳೆ “ನಾವು”ಗಳಿಂದ ಕೆಲಸವಾಗಬೇಕಾದರೆ ಇಂದು “ನಾನು” ಎಂಬೊಂದು ಭಾವವು ಕೆಲಸ ಮಾಡಿ ನಾವುಗಳ ಮುಂದೆ ದೇನ್ಯ ಭಾವದಿಂದ ಕೆಲಸ ಮಾಡುತ್ತದೆ.ನಾಳೆಯ ನಂತರ ಮತ್ತೆ ಅದೇ ನಾನು. . !.

ಇದು ನಿನ್ನೆಯಲ್ಲ ನಾಳೆಯೂ ನಡೆಯುತ್ತದೆ.

ಬೇಕಿದ್ದರೆ ಗಮನಿಸಿ,
ನಾನು ಎಂಬುದು ಎಷ್ಟಿರುತ್ತದೆಂದರೆ , ಇನ್ನೊಬ್ಬನ ಮೇಲೆ ಹೇರುವಿಕೆಯವರೆಗೆ. ಅದೊಂದು ಪ್ರಭುತ್ವವೂ ಆಗಿರುತ್ತದೆ. ಹಾಗಾಗಿ ಅಲ್ಲಿ ವಿನಂತಿಯಿಲ್ಲ ಆಜ್ಞೆ ಇರುತ್ತದೆ. ಪೀತಿ ಇರೋದಿಲ್ಲ ದರ್ಪ ಕಾಣಿಸುತ್ತದೆ.ಹಾಗಾಗಿ ಎಷ್ಟೋ ಸಾರಿ ಈ ಆಜ್ಞೆಗಳಿಗೆ ಬೆಲೆ ಸಿಗೋದಿಲ್ಲ. ಅಲ್ಲೊಂದು ಶೀತಲ ಸಮರವಿರುತ್ತದೆ. ಆದರೆ ಈ ನಾವು ಎಂಬಲ್ಲಿ ಈ ಆಜ್ಞೆಗಳು ಇರೋದಿಲ್ಲ.ಎಲ್ಲವೂ ಪ್ರೀತಿಯಿಂದ ಮಾಡಿದ ಕೆಲಸವಾಗಿರುತ್ತದೆ. ಇನ್ನು ನಿಮ್ಮಲ್ಲೊಂದು ಶಕ್ತಿ ಇದ್ದರೆ ಅದಕ್ಕೆ ಬೆಂಬಲವಿಲ್ಲ , ಅದಕ್ಕೊಂದು ವ್ಯಂಗ್ಯವಿರುತ್ತದೆ. “ನಾನು”ವಿಗೆ ಲಾಭವಿದ್ದರೆ ಮುಖಸ್ತುತಿ ಇರುತ್ತದೆ.ಇಲ್ಲದಿದ್ದರೆ ಕುಹಕವಿರುತ್ತದೆ.

ಇದ್ಯಾಕೆ ಎಂದರೆ,
ಮೊನ್ನೆ ಒಂದು ಘಟನೆಯಾಗಿತ್ತು. ಇದೇ ನಾನೆಂಬ ಭಾವದಲ್ಲಿ ಇನ್ನೊಬ್ಬರು ಹೇರಿದ ಸಂಗತಿಯದು. ಆದರೆ ಅದಕ್ಕೆ ರೆಸ್ಪಾನ್ಸ್ ಕೊಟ್ಟಿರಲಿಲ್ಲ.ಹಾಗಾಗಿ ಅಪಪ್ರಚಾರದ ಬಾಣಕ್ಕೆ ತುತ್ತಾಗಬೇಕಾಯಿತು. ಆದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.ಹೀಗಾಗಿ ಬಿಟ್ಟ ಬಾಣಗಳೆಲ್ಲವನ್ನೂ ಸಹಿಸಿಕೊಂಡಾಗ ಬಾಣ ಬೀಡೋರಿಗೂ ಸಾಕಾಯಿತು.ಸುಮ್ಮನಾದರು.ಇದೆಲ್ಲಾ ಮನಸ್ಸಿನೊಳಗೇ ಸುಳಿದಾಡುತ್ತಿತ್ತು. ಈ ಪ್ರಕೃತಿಯ ಒಳಗೇ ಇರೋ ನಾವು , ಪ್ರಕೃತಿ ಸೇರುವಾಗ ಏನೊಂದೂ ಇಲ್ಲದೆ , ಆ ನಂತರ ಎಲ್ಲವನ್ನೂ ಮೈಗೂಡಿಸಿಕೊಂಡ ನಾವುಗಳು ಮೆತ್ತಿಕೊಂಡ ಈ ದರ್ಪವಿದು. ನಾನೆಂಬ ಭಾವವನ್ನು ಈ ಪ್ರಕೃತಿ ಕೂಡಾ ಮಾಡಿದರೆ ಹೇಗೆ?. ಪ್ರಕೃತಿಯ ಮೇಲೆ ಏನೆಲ್ಲಾ ನಡೆಯೋದಿಲ್ಲಾ ಹೇಳಿ.

ಒಂದಂತೂ ಸತ್ಯ ಇತ್ತೀಚೆಗೆ ಪ್ರಕೃತಿಗೂ ಸಿಟ್ಟಾಗಿದೆ.ಮಳೆ ಬರಬಾರದ ಸಮಯಕ್ಕೆ ಮಳೆ ,ಒಮ್ಮಿಂದೊಮ್ಮೆಲೇ ಪ್ರವಾಹ, ಗಾಳಿ ಬಂದು ಇಡೀ ಸರ್ವನಾಶ , ಬೆಂಕಿಯ ಕೆನ್ನಾಲಿಗೆಗೆ ಇಡೀ ಭಸ್ಮವಾಗೋದು ಇದೆಲ್ಲಾ ಕೇಳಿದ್ದೇವೆ.ಇದೆಲ್ಲಾ ತಡೆಯೋದು “ನಾನು” ಎಂಬುದಕ್ಕೆ ಸಾಧ್ಯವಾಗಿದೆಯಾ?. ಸಾಧ್ಯವಾಗೋದೂ ಇಲ್ಲ. ಅಲ್ವಾ..?. ಇದು ಇಂದಲ್ಲ , ನಿನ್ನೆಯೂ ಹೀಗೆಯೇ ಇತ್ತು , ನಾಳೆಯೂ ಹೀಗೆಯೇ ಇರುತ್ತದೆ ಬಿಡಿ. ಯಾಕಂದ್ರೆ ನಾವು “ ನಾನು”ಗಳು. . !!.