22 ಅಕ್ಟೋಬರ್ 2010

ಕೆಂಪು ಸಂಕ - 5

. . . . . . . . . ಒಂದು ಕ್ಷಣ ಯೋಚಿಸಿದ ಸೋಮಪ್ಪ ಗೌಡರು , ತನ್ನ ನೆನಪಿನ ಬುತ್ತಿಯನ್ನು ಬಿಚ್ಚ ತೊಡಗಿದರು. ನೋಡಿ ಜೋಯಿಸರೇ , ನನಗೆ ಗೊತ್ತಿದ್ದ ಪ್ರಕಾರ ಅಂತ ಮಾತಿಗೆ ಶುರುವಿಟ್ಟರು , ಆವತ್ತು ಸುಮಾರು ಇಪ್ಪತ್ತು ವರ್ಷದ ಹಿಂದೆ ಗುತ್ತಿಗಾರಿನಿಂದ ಬಳ್ಪಕ್ಕೆ ಟಿಂಬರ್ ರಸ್ತೆ ಅಂತ ಇತ್ತು. ಊರು ಬೆಳೆಯುತ್ತಾ ಸಾಗಿದಾಗ ಈ ರಸ್ತೆಯೇ ಊರ ಜನರಿಗೆ ರಸ್ತೆಯಾಯಿತು. ಆ ನಂತ್ರ ಇದೂ ಟಾರು ರಸ್ತೆ ಆಗಬೇಕು ಎಂದೆನಿಸಿತು , ಹಾಗಾಗಿ ಊರ ಜನರ ಪ್ರಯತ್ನದಿಂದಾಗಿ ಟಿಂಬರು ರಸ್ತೆಯು ಟಾರು ರಸ್ತಯಾಗುವ ಎಲ್ಲಾ ಹಂತಗಳಿಗೂ ಬಂತು. ಆಗ ಬಳ್ಪದ ಈ ಕಾಡಿನಲ್ಲಿ ಇರುವ ಚಿಕ್ಕ ಚಿಕ್ಕ ಹೊಳೆಗಳಿಗೆ ಸೇತುವೆ ಕಟ್ಟಲಾಗಿತ್ತು. ಆದ್ರೆ ಜೋಯಿಸ್ರೇ . . . . ಎಂದು ಸೋಮಪ್ಪ ಗೌಡರು ಮಾತು ನಿಲ್ಲಿಸಿದರು. ಹ್ಹೂಂ . . ಎಂದ ಜೋಯಿಸರು, ಹ್ಹಾ. . ಹ್ಹಾ. . ಹೇಳಿ ಅಂತದ್ರು , ಮತ್ತೆ ಮುಂದುವರಿಸಿದ ಸೋಮಪ್ಪ ಗೌಡರು , ಈ ಕಾಡಲ್ಲಿ ಸೇತುವೆ ಕಟ್ಟುವ ವೇಳೆ ಅಲ್ಲೊಂದು ಕಡೆ ಒಬ್ಬ ಕೆಲಸದವನು ಸಂಕದಿಂದ ಬಿದ್ದು ಸತ್ತನಂತೆ , ಆಗ ಅದೇನೂ ಸೌಕರ್ಯ ಇದ್ದಿರಲಿಲ್ಲ ಅಲ್ವಾ , ಹಾಗಾಗಿ ಆತ ಅಲ್ಲೇ ಸತ್ತನಂತೆ.ಇದರಿಂದಾಗಿ ಕೆಲ ದಿನ ಸೇತುವೆ ಕೆಲಸ ನಿಂತಿತು. ಆ ನಂತ್ರ ಮತ್ತೆ ಅದೇ ಸೇತುವೆ ನಿರ್ಮಾಣವಾಯಿತಂತೆ.ಆಗ ಯಾವನೋ ಒಬ್ಬ ಮೇಸ್ತ್ರಿಗೆ ಅನ್ನಿಸಿತಂತೆ ಇದಕ್ಕೊಂದು ಕೆಂಪು ಬಣ್ಣದ ಬಳಿದ್ರೆ ಹೇಗೆ. ಹೇಗೂ ಇಲ್ಲೊಬ್ಬ ಸತ್ತಿದಾನೆ ಅಂತ ಇದಕ್ಕೆ ಕೆಂಪು ಬಣ್ಣ ಕೊಟ್ರು. ಆ ಕಾಡಿನ ನಡುವೆ ಅದೊಂದೇ ಕೆಂಪು ಬಣ್ಣದ ಸೇತುವೆ. ಇಷ್ಟು ಹೇಳುವಾಗ ಸೋಮಪ್ಪ ಗೌಡರ ಬಾಯಿ ಒಣಗಿತು. ಒಂದು ಒಣ ಕೆಮ್ಮು ಹಾಕಿ ಮತ್ತೆ ಮಾತು ಮುಂದುವರಿಸಿ ಜೋಯಿಸ್ರೇ , ಈ ಸೇತುವೆಗೆ ಕೆಂಪು ಬಣ್ಣ ಬಳಿದ ಕಾರಣದಿಂದಾಗಿ ಜನ ಇದನ್ನು ಕೆಂಪು ಸಂಕ ಅಂತ ಕರೀತಾರೆ. ಸಂಕ ಅಂದ್ರೆ ನಮ್ಮ ಭಾಷೆಯಲ್ಲಿ ಸೇತುವೆ ಅಂತಲ್ವಾ ?. ಹಾಗಾಗಿ ಇದೊಂದು ಕೆಂಪು ಸಂಕ ಅಂತ ಜನ ಕರೆದ್ರು. ನೋಡಿ ಜೋಯಿಸ್ರೇ “ಬೇರೆ ಎಲ್ಲಾದ್ರೂ ಕೆಂಪು ಬಣ್ಣ ಬಳಿದ ಸಂಕ ಇದೆಯಾ” ?. “ ಅದು ಇಲ್ಲ” ಅಂದರು ಜೋಯಿಸರು , ಕವಡೆಯ ಕಡೆ ನೋಡಿದರು. ಬಳಿಕ ಹ್ಹೂಂ . . . ಎಂದರು.

ಒಂದು ಕ್ಷಣ ಮೌನ ಇತ್ತು ಆಚಳ್ಳಿಯ ಮನೆಯಲ್ಲಿ. ಆ ಮೌನದ ನಡುವಿನಲ್ಲಿ ಶಿವರಾಮ ಜೋಯಿಸರು ಶಾಂತವಾಗಿ ಹೇಳಿದರು , ಇದಕ್ಕೆ ಸದ್ಯಕ್ಕೆ ಪರಿಹಾರ ಇಲ್ಲ. ಆದರೆ ಒಂದು ಮಾಡಬಹುದು ಊರ ಜನರೆಲ್ಲಾ ಸೇರಿ ಒಂದು ಶಾಂತಿ ಹೋಮವನ್ನು ಆ ಸಂಕದ ಪಕ್ಕದಲ್ಲಿ ಮಾಡಿದರೆ ಒಳ್ಳೆಯದು. ಇದರಿಂದಾಗಿ ಮುಂದೆ ಏನಾದರೂ ತೊಂದರೆ ಆಗಬಹುದಾದ್ದನ್ನು ತಪ್ಪಿಸಬಹುದು.ಇಲ್ಲಾಂದ್ರೆ ಇನ್ನೂ ಒಂದೆರಡು ಜೀವಗಳು , ಅಥವಾ ದೇಹಗಳು ಅದೇ ಕಾಡಿನಲ್ಲಿ ಅಥವಾ ಅದೇ ಸಂಕದ ಆಸುಪಾಸಿನಲ್ಲಿ ಬಿದ್ದರೂ ಬೀಳಬಹುದು ಅಂತ ಹೇಳಿದರು.

ಜೋಯಿಸರೇ , ಹಾಗಾದ್ರೆ ಅದು ಯಾವುದರ ಕಾಟ ?, ಎಂದು ಸೋಮಪ್ಪ ಗೌಡರು ಮೆಲ್ಲನೆ ಕೇಳಿದರು. ನೋಡಿ ಗೌಡ್ರೆ , ಅದು ಯಾವುದು ಅಂತ ಸರಿಯಾಗಿ ಹೇಳುವುದು ಕಷ್ಠ. ಯಾಕೆಂದ್ರೆ ಅಲ್ಲಿ ಏನೋ ಒಂದು ಸಂಚಾರ ಇದೆ , ಅದರ ಜೊತೆಗೆ ಭೂತವೂ ಸೇರಿಕೊಂಡಿದೆ , ಒಟ್ಟಿಗೆ ಆ ಸತ್ತ ವ್ಯಕ್ತಿಯ ಪ್ರೇತವೂ ಅಲ್ಲಿದೆ. ಇನ್ನು ವನದೇವಿಯ ಪ್ರದೇಶ ಬೇರೆ. ಹಾಗಾಗಿ ಇದರಿಂದೆಲ್ಲಾ ಒಟ್ಟಾಗಿ ಕಾಟ ಶುರುವಾಗಿದೆ. ಅಂತಂದ್ರು ಜೋಯಿಸರು. ಇದಕ್ಕೆಲ್ಲಾ ಮುಕ್ತಿ ಪಡೀಬೇಕಾದ್ರೆ ಸ್ವಲ್ಪ ಕಷ್ಠ ಅಂತ ಅನಿಸುತ್ತೆ. ಅದಕ್ಕಾಗಿ ಒಂದು ಹೋಮ ಮಾಡಿ ಅಷ್ಟೆ. ಆದ್ರೆ ಒಂದು ಸಂಗತಿ ಊರ ಜನರೆಲ್ಲಾ ಸೇರಬೆಕು.ಒಬ್ಬೊಬ್ಬನೇ ಮಾಡಿದರೆ ಪ್ರಯೋಜನ ಇಲ್ಲ ಅಂತನೂ ಹೇಳಿದ್ರು.

ಸರಿ, ಅಂತ ಸೋಮಪ್ಪ ಗೌಡರು ಶಿವರಾಮ ಜೋಯಿಸರಿಗೆ ಒಂದಿಷ್ಟು ಕಾಣಿಕೆ ಹಾಕಿ , ಬರ್ತೇನೆ ಅಂದರು. ಆಗ ಜೋಯಿಸರ ಪತ್ನಿ , ಹೋ . ಗೌಡ್ರೇ , ಬನ್ನಿ ಅಪರೂಪ. ಚಾ ಕುಡಿಯಿರಿ ಅಂದ್ರು. ಆಯ್ತು ಅಂತ ಚಾ ಕುಡಿದ ಸೋಮಪ್ಪ ಗೌಡರು , ಅಲ್ಲಿಂದ ಹೊರಡುವಾಗ ಮದ್ಯಾಹ್ನ ಆಗಿತ್ತು. ಊಟ ಮಾಡಿ ಹೋಗಿ ಗೌಡ್ರೆ ಅಂದಾಗ, ಬೇಡ ಅಂದ ಸೋಮಪ್ಪ ಬೇಗನೆ ಕಮಿಲದ ಕಡೆ ಹೆಜ್ಜೆ ಹಾಕಿದ್ರು.ಇಂದು ಸಂಜೆಯೇ ಈ ವಿಚಾರವನ್ನು ಊರ ಜನರಿಗೆ ಹೇಳಬೇಕು ಎಂದು ನಿರ್ಧಾರ ಮಾಡಿಯೇ ಬಂದರು ಅವರು.ಕಮಿಲಕ್ಕೆ ಬಂದವರೇ ಸಂಜೆ ಎಲ್ಲರೂ ಅಂಗಡಿ ಬಳಿ ಬರಬೇಕು ಎಂದು ಕಮಿಲದಲ್ಲಿ ಹೇಳಿದರು.ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ಸುದ್ದಿ ಹೋಯಿತು.ಇಂದು ಸಂಜೆ ಅಂಗಡಿ ಬಳಿ ಬರಬೇಕಂತೆ , ಗೌಡ್ರು ಜೋಯಿಸರ ಬಳಿಗೆ ಹೋಗಿದ್ದಾರೆ , ಕೆಂಪುಸಂಕದ ಬಗ್ಗೆ ಏನೋ ಕೇಳಿದ್ದಾರಂತೆ ಎಂದೆಲ್ಲಾ ಸುದ್ದಿ ಹರಡಿತು. ಸಂಜೆ ಐದು ಗಂಟೆ ಆಯಿತು.ಜನ ಒಬ್ಬೊಬ್ಬರೇ ಕಮಿಲದ ಕಡೆ ಹೆಜ್ಜೆ ಹಾಕಿದರು.ಅಂಗಡಿ ಬಳಿ ಆರು ಗಂಟೆಯ ಹೊತ್ತಿಗೆ ಸುಮಾರು 300 ಜನ ಸೇರಿದ್ದರು. ಗೌಡರು ಮನೆಯಿಂದ ಬರುವಾಗ ಸ್ವಲ್ಪ ತಡವೇ ಆಗಿತ್ತು. ಅಂಗಡಿ ಬಳಿಗೆ ಬಂದ ಎಲ್ಲರೂ ಮತ್ತೆ ಅದೇ ಕೆಂಪುಸಂಕದ ಬಗ್ಗೆಯೇ ಮಾತನಾಡುತ್ತಿದ್ದರು.

12 ಅಕ್ಟೋಬರ್ 2010

ಕೆಂಪು ಸಂಕ - 4

. . . ಹೀಗೇ ಕೆಂಪುಸಂಕದ ಬಗ್ಗೆ ಕತೆಗಳು ಹುಟ್ಟಿಕೊಂಡವು.ಎಲ್ಲವು ಕೂಡಾ ಭಯ ಹುಟ್ಟಿಸುವ ಕತೆಗಳೇ ಆಗಿದ್ದವು.ಆದರೆ ಅದೆಲ್ಲವೂ ಕತೆ ಅನ್ನಲೂ ಆಗುತ್ತಿಲ್ಲ.ಯಾಕೆಂದ್ರೆ ಎಲ್ಲವೂ ಕೆಂಪುಸಂಕದ ಆಸುಪಾಸಿನಲ್ಲಿ ಒಬ್ಬೊಬ್ಬರಿಗೆ ಆದ ಅನುಭವಗಳೇ ಆಗಿದ್ದವು. ಯಾರೊಬ್ಬರೂ ಕೂಡಾ ಸತ್ಯ ಏನು ಎಂಬುದರ ಬಗ್ಗೆ ಚರ್ಚಿಸುತ್ತಿರಲಿಲ್ಲ.ನಿನ್ನೆ ನಡೆದ ಸಂಗತಿಗಳ ಬಗ್ಗೆಯೇ ಕಮಿಲದ ಪೇಟೆಯಾದ್ಯಂತ ಮಾತನಾಡುತ್ತಲೇ ಇದ್ದರು. ನಾಳೆ ಏನು? ಎಂಬುದರ ಬಗ್ಗೆ ಅಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆ ಇತ್ತು. ಕಮಿಲದಿಂದ ಬಳ್ಪಕ್ಕೆ ಹೋಗದೇ ಇರಲಾಗುವುದಿಲ್ಲ.ಏನಾದರೂ ಮನೆ ಸಾಮಾನುಗಳು , ದಿನಸಿಗಳು ಬೇಕಂದ್ರೆ ಬಳ್ಪಕ್ಕೆ ಹೋಗಲೇ ಬೇಕು. ಆಗ ಬಳ್ಪದ ಕಾಮತ್ತರ ಅಂಗಡಿಯೇ ದೊಡ್ಡ ಅಂಗಡಿ. ಹಾಗಾಗಿ ಬಳ್ಪ ಒಂದಿಲ್ಲೊಂದು ಕಾರಣಕ್ಕೆ ಅನಿವಾರ್ಯವಾಗಿತ್ತು ಕಮಿಲದ ಜನಕ್ಕೆ.ಇನ್ನು ಪುತ್ತೂರು , ಸುಬ್ರಹ್ಮಣ್ಯಕ್ಕೆ ಹೋಗಬೇಕಾದರೂ ಬಳ್ಪ ಕ್ರಾಸ್‌ವರೆಗೆ ಕಾಲ್ನಡಿಗೆ ಮಾಡಲೂ ಬೇಕಿತ್ತು. ಬಸ್ಸು , ಜೀಪುಗಳು ಇಲ್ಲವೇ ಇಲ್ಲ. ಹೀಗಾಗಿ ಕಮಿಲದ ಜನರಿಗೆ ಕೆಂಪುಸಂಕವು ಒಂದು ದೊಡ್ಡ ಸಮಸ್ಯೆಯಾಗಿತ್ತು.

* * * * * * * * * * * * * * * * * * * * * * * *

ಎಂದಿನಂತೆ ಅಂದು ಸಂಜೆ ಕೂಡಾ ಎಲ್ಲರೂ ಕಮಿಲದ ಅಂಗಡಿ ಬಳಿ ಕುಳಿತು ಇದೇ ಕೆಂಪುಸಂಕದ ಬಗ್ಗೆ ಮಾತನಾಡುತ್ತಾ ಇದ್ದರು.ಆಗ ಊರ ಗೌಡ ಸೋಮಪ್ಪ ಸೇರಿದಂತೆ ಇತರ ಕೆಲವರೂ ಅಲ್ಲಿಗೆ ಬಂದರು. ಎಲ್ಲರ ಮುಖದಲ್ಲಿ ಒಂದೇ ಚಿಂತೆ ಮುಂದೇನು ಅಂತ.?. ಅದೇ ಚಿಂತೆಯಲ್ಲಿ ಎಲ್ಲರೂ ಮೌನವಾಗಿದ್ದ ವೇಳೆ ಕಮಿಲದ ಊರ ಗೌಡ ಸೋಮಪ್ಪ ಹೇಳಿದ್ರು, ಹೀಗೆ ಕೂತರೆ ಆಗದು ಆವತ್ತು ಭಟ್ಟರಿಗೆ , ನಿನ್ನೆ ವೆಂಕಪ್ಪನಿಗೆ ಇವತ್ತು ಶಶಿಧರನಿಗೆ ನಾಳೆ ಇನ್ನೊಬ್ಬನಿಗೆ ಹೀಗೆ ಆದ್ರೆ ಹೇಗೆ ?, ಅದು ಏನಂತ ಗೊತ್ತಾಗಬೇಕು.ಹಾಗಾಗಿ ಒಂದು ನಿರ್ಧಾರ್‍ಕಕೆ ಬರೋಣ , ನಾಳೆ ನಾನು ಆಚಳ್ಳಿಗೆ ಹೋಗ್ತೇನೆ , ಎಲ್ಲರೂ ಆಯ್ತು , ನಾಳೆ ಸಂಜೆ ಮಾತನಾಡೋಣ ಎಂದು ಎಲ್ಲರೂ ಮನೆಗೆ ಹೋದರು.ಮರುದಿನ ಬೆಳಗ್ಗೆ ಸೋಮಪ್ಪ ಗೌಡರು ಆಚಳ್ಳಿ ಜೋಯಿಸರಲ್ಲಿಗೆ ಪ್ರಶ್ನೆ ಕೇಳಲು ಹೋದರು..ಏನಾದರೂ ಪ್ರಯೋಜ ಆದೀತಾ ಅಂತ ಅವರ ಭಾವನೆಯಾಗಿತ್ತು.

* * * * * * * * * * * * * * * * * * *

ಸೋಮಣ್ಣ ಗೌಡರು ಬೆಳಗ್ಗೆಯೇ ಮನೆಯಿಂದ ಆಚಳ್ಳಿ ಕಡೆಗೆ ಹೊರಟರು. ಕಮಿಲಕ್ಕೆ ಬಂದು ದೇವಸ್ಯ ಮಾರ್ಗವಾಗಿ ಆಚಳ್ಳಿಗೆ ಬಂದಾಗ ಶಿವರಾಮ ಜೋಯಿಸರು ಆಗ ತಾನೆ ಸ್ನಾನ ಮಾಡಿ ಕಾಫಿ ಕುಡಿದು ಹೊರ ಬಂದಿದ್ದರು. ಬೇರೆ ಊರಿನ ಒಂದೆರಡು ಜನ ಇದ್ದರು. ಅವರನ್ನೆಲ್ಲಾ ಬಿಟ್ಟ ನಂತರ , ಏನು ಸೋಮಪ್ಪ ಗೌಡರೇ ಬನ್ನಿ, ಅಂತ ಒಳ ಕರೆದ್ರು. ಏನಿಲ್ಲ , ಜೋಯಿಸರೇ ಒಂದು ಸಮಸ್ಯೆ ಇದೆ ಅಂತ ಹೇಳಿದರು ಸೋಮಪ್ಪ. ಬನ್ನಿ ಕುಳಿತುಕೊಳ್ಳಿ , ಅಂತ ತಮ್ಮ ಮುಂದೆ ಕುಳಿತುಕೊಳ್ಳಿಸಿ , ಸಮಸ್ಯೆ ಹೇಳಿ ಅಂತಂದ್ರು. ಅಲ್ಲಾ ಜೋಯಿಸರೇ ನಿಮಗೂ ಗೊತ್ತಿರಬಹುದು , ಕಮಿಲದಿಂದ ಮುಂದೆ ಆ ಕೆಂಪುಸಂಕ ಅಂತ ಇದೆಯಲ್ಲಾ ಅಲ್ಲಿ ಕೆಲವೊಂದು ಘಟನೆಗಳು ಆಗಿವೆ, ಅದು ಏನಂತ ಹೇಳಲು ಆಗೋದಿಲ್ಲ , ವಿಚಿತ್ರವಾದ ಘಟನೆಗಳು ಅಲ್ಲಿ ನಡೆಯುತ್ತದೆ , ಹಾಗಾಗಿ ಜನ ಬಳ್ಪದ ಕಡೆಗೆ ಹೋಗಲು ಹೆದರ್ತಾರೆ , ಅತ್ತ ಕಡೆ ಹೋಗದಿದ್ರೆ ಹೇಗೆ ? ನಮ್ ಜನರಿಗೆ ಏನಾದ್ರು ಬೇಕಾದ್ರೆ ಆ ಕಡೆಯೇ ಹೋಗ್ಬೇಕಲ್ಲಾ ?. ಈಗ ಅದಕ್ಕೇನು ಪರಿಹಾರ , ಏನದು . .?.


ಹ್ಹೂಂ. . . , ಅಂದ್ರು ಜೋಯಿಸರು.ನೋಡೋಣ , ಅದು ನನ್ನ ಪ್ರಕಾರ ಏನಾದ್ರು ಕಾಡು ಪ್ರಾಣಿ ಇರಬಹುದು. ಅಂತ ಮೇಲ್ನೋಟಕ್ಕೆ ಹೇಳಿದ್ರು. ಆದರೂ ಗೌಡರಿಗೆ ಅದು ಸಮಾಧಾನ ಆಗಲಿಲ್ಲ.ಸರಿ ಎಂದು ಕವಡೆ ತಿರುವಿದರು. ಅದೇನೋ ಮಂತ್ರ ಹೇಳುತ್ತಾ ಇನ್ನೊಮ್ಮೆ ಕವಡೆ ತಿರುವಿ ಒಂದಷ್ಟು ಕವಡೆ ತೆಗೆದು ಲೆಕ್ಕ ಹಾಕಿದರು. ಏಳನೇ ಮನೆಯಲ್ಲಿ ಶನಿ , ಎಂಟರಲ್ಲಿ ಶುಕ್ರ , ಐದರಲ್ಲಿ ಮಾಂದಿ . . . ಹೀಗೆ ಹೇಳುತ್ತಾ ಹೋದರು. ಗೌಡರಿಗೆ ಆತಂಕ ಹೆಚ್ಚಾಯಿತು. ಶನಿಯಿಂದ ದೋಷ . . . ಮಾಂದಿ ವಕ್ರ ದೃಷ್ಠಿ . . ಎಂದು ಅವರಷ್ಟಕ್ಕೇ ಹೇಳಿದರು. ಗೌಡರು ಮತ್ತೆ ಆತಂಕದಿಂದ ಜೋಯಿಸರ ಮುಖ ನೋಡುತ್ತಿದ್ದರು. ಹೂಂ . . ಹೂಂ ಹೂಂ. . ಎಂದ ಜೋಯಿಸರು, ಇಲ್ಲಾ . . ಏನೂ ಅತಹದ್ದೊಂದು ಕಾಣುತ್ತಿಲ್ಲ , ಆ. .ಆದ್ರೆ . . ಎಂದು ಮಾತು ನಿಲ್ಲಿಸಿ ಕವಡೆಯತ್ತ ನೋಡಿದ್ರು , ಗೌಡರ ಮುಖ ಬೆವರಿತು. ಹಾಗೆ ಹಣೆವರೆಸಿಕೊಂಡರು. ಸ್ವಲ್ಪ ಮೌನದ ನಂತರ ಜೋಯಿಸರು ಹೇಳಿದ್ರು , ಅಲ್ಲಿ ಒಂದು ಸಂಚಾರ ಇರುವುದು ಕಾಣುತ್ತದೆ , ಆ ಸಂಚಾರದ ಹೊತ್ತಲ್ಲಿ ಹೋಗುವಾಗ ಈ ರೀತಿಯ ಅನುಭವ ಆಗಬಹುದು , ಇದು ಹೀಗೇ ಇದ್ರೆ ಒಂದೆರಡು ಜೀವ ಹೋದೀತು , ಇಲ್ಲಾಂದ್ರೆ ಅಲ್ಲಿ ದೇಹವೊಂದು ಕಂಡೀತು. ಅದೂ ಅಲ್ಲದಿದ್ದರೆ ಮತ್ತೆ ಒಂದೆರಡು ದೇಹ ಅಲ್ಲಿ ಸಿಗ್ಬಹುದು ಅಂತಂದ್ರು ಅವರು. ಅದಕ್ಕಾಗಿ ಆ ಸಂಚಾರವನ್ನು ಬಂಧಿಸಬೇಕು.ಅದೊಂದು ಕ್ಷುದ್ರ ಶಕ್ತಿ ಅಂತ ಹೇಳಿದ್ರು ಜೋಯಿಸರು.

ಅಲ್ಲಾ ಗೌಡ್ರೇ , ಆ ಸಂಕ ಹೇಗೆ ಮಾಡಿದ್ದಾರೆ , ಯಾವಾಗ ಕಟ್ಟಿದ್ರು ಅನ್ನೋದು ನಿಮಗೆ ಗೊತ್ತಿದೆಯಾ ಎಂಬ ಪ್ರಶ್ನೆ ಹಾಕಿದ್ರು, ಜೋಯಿಸರು.

ಗೊತ್ತಿದೆ ಎಂದು ವಿವರಿಸಲು ತೊಡಗಿದರು ಸೋಮಪ್ಪ ಗೌಡರು. . . . .

* * * * * * * * * * * * * * * * * * * * * * * * * * *

11 ಅಕ್ಟೋಬರ್ 2010

ಕೆಂಪು ಸಂಕ - 3

ಅಂದು ಬೆಳಗ್ಗೆ ಮೋಡಗಳ ಸಂದಿನಿಂದ ಸೂರ್ಯ ಉದಯಿಸುತ್ತಾ ಇದ್ದ.ದೂರದ ಕುಮಾರಪರ್ವತದಲ್ಲಿ ಅದೇನೋ ಕೆಂಪು ಉಂಡೆಯ ಹಾಗೆ ಸೂರ್ಯ ಹೊಳೆಯುತ್ತಾ ಇದ್ದ. ಹಾಗಾಗಿ ಸೂರ್ಯನ ಬೆಳಕು ಹರಿಯುವಾಗಲೇ ಲೇಟಾಯಿತು.

ಯಾವಾಗಲೂ ನಸುಕಿನ ಹೊತ್ತಲ್ಲೇ ಹಾಸಿಗೆ ಬಿಡುವ ವೆಂಕಪ್ಪನಿಗೆ ಅಂದು ಮಾತ್ರಾ ಸೂರ್ಯರಶ್ಮಿ ಬಂದ್ದದ್ದು ಗೊತ್ತಾಗಲೇ ಇಲ್ಲ.ಹಾಸಿಗೆಯಿಂದ ಹಾಗೇ ಹೊರಗೆ ನೋಡುವಾಗ ಬೆಳಕು ಹರಿದಿತ್ತು. ತುರಾತುರಿಯಲ್ಲಿ ಎದ್ದ ವೆಂಕಪ್ಪನಿಗೆ ತಟ್ಟನೆ ನೆನಪಾದದ್ದು ನಿನ್ನೆ ರಾತ್ರಿ ನಡೆದ ಘಟನೆ. ಅದೇನು. . ? ಅದೇನು . .? ಎಂಬ ಭಯವಿಶ್ರಿತ ಕುತೂಹಲ. ಮತ್ತೊಮ್ಮೆ ಹಣೆ ವರೆಸಿಕೊಂಡ ವೆಂಕಪ್ಪ ಹಾಗೇ ಒಂದು ಬೀಡಿಯನ್ನೂ ಹಚ್ಚಿಕೊಂಡು ಮನೆಯ ಹೊರಗಿನ ಮಣ್ಣಿನ ಕಟ್ಟೆಯಲ್ಲಿ ಕುಳಿತುಕೊಂಡು ದೂರದ ಕಾಡಿನ ಕಡೆಗೆ ದೃಷ್ಠಿ ಹಾಯಿಸಿ ಯೋಚಿಸುತ್ತಾ ಕುಳಿತಿದ್ದ. ಸಮಯ ಹೋದದ್ದೇ ಗೊತ್ತಾಗಲಿಲ್ಲ. ವೆಂಕಪ್ಪನ ಪತ್ನಿ ಪಾರ್ವತಿ ಬಂದು, “ಏನ್ರೀ ಕೆಲಸಕ್ಕೆ ಹೋಗೋದಿಲ್ವಾ” ಅಂತ ಕೇಳಿದಾಲೇ ಸಮಯದ ಕಡೆಗೆ ಕಣ್ಣು ಹಾಯಿಸಿದ್ದು.

ಆಗ ಗಂಟೆ ಎಂಟು ಆಗುತ್ತಾ ಬಂದಿತ್ತು. ಛೆ . . ಇನ್ನು ಕೆಲಸಕ್ಕೆ ಹೋಗೋದು ಬೇಡ ಅಂತ ರಜೆ ಮಾಡಿದ.ಬೆಳಗಿನ ಕಾಫಿ ಕುಡಿದ ಮೇಲೆ ತೋಟದಲ್ಲೊಂದು ಸುತ್ತು ಹಾಕಿದ ವೆಂಕಪ್ಪ ಮನೆಗೆ ಬಂದಾಗ ಗಂಟೆ ಸುಮಾರು 10 ಆಗುತ್ತಾ ಬಂದಿತ್ತು. ಮತ್ತೆ ನಿನ್ನೆ ರಾತ್ರಿಯ ಘಟನೆಯನ್ನೇ ತಲೆಯಲ್ಲಿ ತುಂಬಿಕೊಂಡು ಕಮಿಲದ ಕಡೆಗೆ ಹೋದ.ಕಮಿಲದಲ್ಲಿ ಕೆಲಸವೇನೂ ಇದ್ದಿರಲಿಲ್ಲ.ಆದರೂ ಅತ್ತ ಕಡೆ ಹೆಜ್ಜೆ ಹಾಕಿದ.ಕಮಿಲದ ಪೇಟೆಯಲ್ಲಿ ಪೋಸ್ಟ್ ಆಫೀಸಿಗೆ ಹೋಗಿ , ಚನ್ನಣ್ಣನ ಅಂಗಡಿಯ ಬದಿಯ ಬಸ್ ಸ್ಟ್ಯಾಂಡಿನಲ್ಲಿ ಕುಳಿತಿದ್ದ.ಅಷ್ಟೊತ್ತಿಗೆ ಲಕ್ಷ್ಮಣನೂ ಬಂದ ಇನ್ನು ಸ್ವಲ್ಪ ಹೊತ್ತಿಗೆ ನೀಲಪ್ಪನೂ ಬಂದ. ಹೋ. . , ಕೆಲಸಕ್ಕೆ ಹೋಗಿಲ್ವಾ ಅಂತ ಮಾತನಾಡಿಕೊಂಡರು.ಮೂವರಿಗೂ ನಿನ್ನೆ ರಾತ್ರಿಯ ಘಟನೆಯಿಂದಾಗಿ ಬೆಳಗೆ ಏಳುವಾಗಲೇ ಲೇಟಾಗಿತ್ತು ಹಾಗಾಗಿ ಕೆಲಸಕ್ಕೆ ಹೋಗಿರಲೇ ಇಲ್ಲ.ಕಮಿಲಕ್ಕೆ ಬಂದು ಒಂದು ಪ್ಯಾಕೇಟು ಹಾಕಿ ಹೋಗೋಣ ಅಂತ ಯೋಚಿಸಿಯೇ ಎಲ್ಲರೂ ಕಮಿಲಕ್ಕೆ ಬಂದಿದ್ದರು.ಆದರೆ ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ.ಆಗ ಎಲ್ಲಾ ಮನೆಗಳಲ್ಲಿ ಫೋನುಗಳೂ ಇದ್ದಿರಲಿಲ್ಲ, ಊರಲ್ಲಿ ಒಂದೆರಡು ಮನೆಯಲ್ಲಿ ಮಾತ್ರಾ ಫೋನು ಇತ್ತು.ಊರ ಜನ ಬೇಕಾದ್ರೆ ಅರ್ಜೆಂಟ್ ಇದ್ರೆ ಅಲ್ಲಿಗೆ ಹೋಗಿ ಮಾತನಾಡಿ ಬರಬೇಕು.

ಮತ್ತೆ ಕಮಿಲದಲ್ಲಿ ಎಲ್ಲರೂ ಜೊತೆಯಾದ್ರು. ಬಸ್‌ಸ್ಟ್ಯಾಂಡಿನಲ್ಲಿ ಕುಳಿತಿದ್ದಾಗ ಅಂಗಡಿಯ ಚನ್ನಣ್ಣ ವೆಂಕಪ್ಪನಲ್ಲಿ ಕೇಳಿದ , ಏನು ಇವತ್ತು ರಜೆಯಾ ? , ಕೆಲಸಕ್ಕೆ ಹೋಗಿಲ್ವಾ . ? ಅಂತ ಪ್ರಶ್ನೆ ಮಾಡಿದರು.ಇಲ್ಲ ಇವತ್ತು ರಜೆ ಅಂದ ವೆಂಕಪ್ಪ. ಅದಲ್ಲ ಏನು ಮೂರು ಜನಾ ಇದ್ದೀರಲ್ಲ ? ಏನಾದ್ರೂ ಇರಬಹುದು, ಅಂತ ಮಾಮೂಲಿ ತಮಾಷೆ ಭಾಷೆಯಲ್ಲಿ ಕೇಳಿದ ಚನ್ನಣ್ಣ , ಯಾಕೆಂದ್ರೆ ಎಲ್ಲಿಗೇ ಹೋಗಲಿ ಈ ಮೂವರೂ ಜೊತೆಯಾಗೇ ಹೋಗೋದು ಅನ್ನೋ ಮಾತೊಂದು ಕಮಿಲದಾದ್ಯಂತ ಆವತ್ತು ಸುದ್ದಿಯಲ್ಲಿದ್ದ ಸಂಗತಿ.ಹಾಗಾಗಿ ಕುತೂಹಲದಿಂದಲೇ ಕೇಳಿದ್ದ ಚನ್ನಣ್ಣ. ಹಾಗೇನಿಲ್ಲ . . ಹಾಗೇನಿಲ್ಲ. . . ಸುಮ್ಮನೆ . . .ಸುಮ್ಮನೆ . . .ಅಂತ ಹೇಳಿದ್ರು ಈ ಮೂವರು. ಹೀಗೆ ಕುಶಲೋಪರಿ , ತಮಾಷೆ ಎಲ್ಲಾ ಮಾತನಾಡುತ್ತಿದ್ದಂತೆಯೇ ಒಂದೆರಡು ಜನ ಬಸ್ ಸ್ಟ್ಯಾಂಡಿಗೆ ಬಂದ್ರು , ಗುತ್ತಿಗಾರಿಗೆ ಹೋಗುವವರು ಅವ್ರು.ಆಗ ಬಾಳುಗೋಡು ಬಸ್ಸು ಬರುವ ಹೊತ್ತಾಗಿತ್ತು. ಸಮಯ ಇದೆ ಎಂದು ಮಾತನಾಡುತ್ತಾ ಇರುವಂತೆ ಮಾತಿನ ನಡುವೆ ಕೆಂಪುಸಂಕದ ಬಗ್ಗೆಯೂ ಪ್ರಸ್ತಾಪವಾಯಿತು. ಅಲ್ಲಿ ಹೋಗೋದಿಕ್ಕೆ ಎಲ್ಲರೂ ಹೆದರ್ತಾರೆ ಅಂತ ಚನ್ನಣ್ಣ ಹೇಳಿದ. ಅಷ್ಟೊತ್ತಿಗೆ ನಿನ್ನೆ ರಾತ್ರಿ ತಮಗಾದ ಅನುಭವವನ್ನು ಬಿಚ್ಚಿಟ್ಟ ವೆಂಕಪ್ಪ ಅದಕ್ಕೆ ಧ್ವನಿ ಸೇರಿಸಿದ ಲಕ್ಷ್ಮಣ. ನೀಲಪ್ಪ ನಾನು ಬೊಬ್ಬಿಟ್ಟೆ ಅಂತ ಮೊಂಡು ಧೈರ್ಯ ಪ್ರದರ್ಶಿಸಿದ್ದನ್ನು ಚನ್ನಣ್ಣನ ಮುಂದೆ ಹೇಳಿಕೊಂಡ.ಚನ್ನಣ್ಣನಿಗೆ ಇದೆಲ್ಲಾ ಕೇಳುತ್ತಿದ್ದಂತೆ ಹಣೆಯಲ್ಲಿ ನೀರು ಜಿನುಗುವುದಕ್ಕೆ ಶುರುವಾಯಿತು.ಒಮ್ಮೆ ಮುಖ ಒರಸಿಕೊಂಡ ಚನ್ನಣ್ಣ, ಅಲ್ಲಾ ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರ ಭಟ್ಟರು ಹೋಗುವಾಗ ನಡೆದ ಸಂಗತಿಯ ನಂತರ ಹೆದರಿಕೆಯಾಗುತ್ತಿತ್ತು ಈಗ ನಿಮಗೆ ಆದ ಅನುಭವ ಹೌದಾ ?. ಅಂತ ಆತಂಕದಿಂದಲೇ ಕೇಳಿದ. ನಿಜ . ನಿಜ .. ಅಂತ ಹೇಳುವಾಗ ಮೂವರ ಮಾತಿನಲ್ಲೂ ಆತಂಕ ಕಾಣುತ್ತಿತ್ತು. ಹಾಗಾದ್ರೆ ಅದೆಂತ ಮಾರಾಯಾ . ? ಅಂತ ಚನ್ನಣ್ಣ ಪ್ರಶ್ನೆ ಕೇಳುತ್ತಿದ್ದ , ಇದಕ್ಕೆ ಒಬ್ಬರು ಅದು “ಪ್ರೇತ” ಅಂದ್ರೆ ಇನ್ನೊಬ್ಬರು “ರಣ” ಅಂದ್ರು ಮತ್ತೊಬ್ಬರು ಅದು “ಬ್ರಹ್ಮರಾಕ್ಷಸ” ಅಂದ್ರು.ಅಂತೂ ಕೆಂಪು ಸಂಕದ ಬಗ್ಗೆ ಭಯ ಇನ್ನಷ್ಟು ಹೆಚ್ಚಾಯಿತು. ಅಷ್ಟೊತ್ತಿಗೆ ಬಾಳುಗೋಡು ಬಸ್ಸು ಬಂತು. ಬಸ್ ಸ್ಟ್ಯಾಂಡಿನಲ್ಲಿದ್ದವರೆಲ್ಲಾ ಗುತ್ತಿಗಾರಿಗೆ ಹೋದವರು.ಚನ್ನಣ್ಣನಿಗೂ ಅಂಗಡಿಗೆ ಜನ ಬಂದ್ರು. ಈ ಮೂವರು ಆಚೆ ಸೀತಣ್ಣನ ಅಂಗಡಿಗೆ ಹೋಗಿ ತೊಟ್ಟೆ ಬಿಸಿ ಏರಿಸಿ ಮನೆಗೆ ಬಂದರು. ಆದ್ರೆ ಚನ್ನಣ್ಣನಿಗೆ ಇದೊಂದು ಹೊಸ ವಿಷಯವಾಯಿತು.ಅಂಗಡಿಗೆ ಬಂದವರಿಗೆಲ್ಲಾ ಈ ಕೆಂಪುಸಂಕದ ಹೊಸ ವಿಷಯವನ್ನು ಹೇಳಿದ ಮತ್ತು ಅದು ಏನಾಗಿರಬಹುದೆಂಬ ಚರ್ಚೆ ಶುರುವಾಯಿತು.ಒಬ್ಬೊಬ್ಬರು ಒಂದೊಂದು ಉತ್ತರ ಹೇಳುತ್ತಿದ್ದರು.

* * * * * * * * * * * * * * * * * * * * * * * * * * * *

06 ಅಕ್ಟೋಬರ್ 2010

ಮಾನವಿಲ್ಲದವರು . !

ಇವರಿಗೆ ಬಳಸಬೇಕಾದ ಶಬ್ದಗಳು ಯಾವುದು ಅಂತಾನೇ ತಿಳೀತಿಲ್ಲ. ಛೀ . ಥೂ . . , ಅಂತ ಬೈದರೂ ಅವರಿಗೆ ಮಾನವಿಲ್ಲ , ಮರ್ಯಾದೆ ಮೊದಲೇ ಇಲ್ಲ. ಈ ಮಾತು ಅನ್ವಯಿಸೋದು ಯಾರಿಗೆ ಗೊತ್ತಾ ?. ನಮ್ಮ ರಾಜ್ಯದ ಕೆಟ್ಟ ರಾಜಕಾರಣಿಗಳಿಗೆ.ನಮ್ಮ ದುಡ್ಡಲ್ಲಿ ಇವರದ್ದೇನು ರೆಸಾರ್ಟ್ ರಾಜಕೀಯ, ಮಾನವಿಲ್ಲದವರು. ಇವರೇನು ನಮ್ಮ ರಾಜ್ಯವನ್ನು , ನಮ್ಮ ರೈತರನ್ನು , ನಮ್ಮ ಬಡ ಜನರನ್ನು , ನಮ್ಮ ರಾಜ್ಯದ ಮೂಲಭೂತ ಸೌಕರ್ಯವನ್ನು ಅಭಿವೃದ್ದಿ ಪಡಿಸೋರಾ?, ದರಿದ್ರರು. ಅಷ್ಟಕ್ಕೂ ಅವರಿಗೆ ಆಡಳಿತ ಕೊಟ್ಟೋರು ಯಾರು ?. ನಮಗೆ ನಾವೇ ಹೊಡೆದಂತಾಗಿದೆ ಈಗ. ಹಾಗಂತ ಎಲ್ಲರನ್ನೂ ದೂಷಿಸೋದಕ್ಕೂ ಆಗಲ್ಲ. ಕೆಲವರು ಅದರಲ್ಲಿ ಒಳ್ಳೆವರು, ಕಾಳಜಿ ಇರೋರು ಇದ್ದಾರೆ.

ಮೊನ್ನೆ ಈ ರೆಸಾರ್ಟ್ ರಾಜಕೀಯ ಶುರುವಾಗಿತ್ತು.ಭಿನ್ನಮತದ ಸದ್ದು ಮೊಳಗಿತ್ತು , ಟಿವಿಯಲ್ಲಿ ನಮ್ಮ ಮಿತ್ರರು ವಿಷುವಲ್ ಶೂಟ್ ಮಾಡಿ ಏರ್ ಮಾಡುತ್ತಿದ್ದರು. ನೋಡುತ್ತಿದ್ದಾಗ ನಮ್ಮದೇ ಸರಕಾರದ ಮಂತ್ರಿ ,ಸರಕಾರದ ಕಾರಿನಲ್ಲಿ ಕೆ‌ಎ 01 ಜಿ . .. . ನಂಬ್ರದ ಕೆಂಪು ಗೂಟದ ಕಾರು ಚೆನ್ನೈನ ರೆಸಾರ್ಟ್‌ನ ಒಳಗೆ ಹೋಗುತ್ತದೆ ಸರಕಾರದ ಕಾರು. ಆ ಬಳಿಕ ಒಂದೊಂದೇ ಸರಕಾರದ ಕಾರು ಅದರೊಳಗೆ ಹೋಗುತ್ತದೆ. ಅಲ್ಲಿಂದ ಶುರುಬಾಗುತ್ತದೆ ರಾಜಕೀಯದ , ಲಾಭದ , ಅಧಿಕಾರದ ಆಸೆಯ ಆಟಗಳು. ಇವರನ್ನೆಲ್ಲಾ ಆ ಕ್ಷೇತ್ರದ ಜನ ಗೆಲ್ಲಿಸಿ ಕಳುಹಿಸಿದ್ದು ಈ ರೀತಿ ರೆಸಾರ್ಟ್ ಕಾಯೋದಿಕ್ಕಾ, ಹೊಸಲು ರಾಜಕೀಯ ಮಾಡೋದಿಕ್ಕಾ?.

ನಮ್ಮ ದುಡ್ಡಿನ ಕಾರು ಅದು. ಹೋಗಲಿ ಬೇರೆಲ್ಲಾದರೂ ಹೋಗಲಿ, ರಾಜ್ಯದ ಹಿತಕ್ಕಾಗಿ , ಜನರ ಹಿತಕ್ಕಗಿ ಸರಕಾರದ ಕಾರು ಬಳಸಿ ಎಲ್ಲಿಗೆ ಬೇಕಾದರೂ ಹೋಗಲಿ.ಅದೆಷ್ಟೇ ಖರ್ಚಾದರೂ ಅಡ್ಡಿಯಿಲ್ಲ.ರಾಜ್ಯದ ಜನರ ಹಿತಕ್ಕಾಗಿ ಎಷ್ಟು ಬೇಕದರೂ ಆ ಕಾರನ್ನು ಓಡಿಸಲಿ.ಅದು ಬಿಟ್ಟು ಈ ಅಧಿಕಾರ ಆಸೆಗಾಗಿ , ರೆಸಾರ್ಟ್ ರಾಜಕೀಯ ಮಾಡಲು ಇವರಿಗೆ ಸರಕಾರದ ಕಾರು ಬೇಕಾ..?. ಯಾರದ್ದು ದುಡ್ಡು . .?. ನಾವೇನು ರಾಜ್ಯದ ಜನ ಪೆದ್ದರಾ.?. ಅಲ್ಲಿ ಮಾಡೋದನ್ನೆಲ್ಲಾ ಸುಮ್ಮನೆ ಕುಳಿತು ನೋಡುತ್ತೇವೆ ಅಂತ ಈ ರೀತಿಯ ವರ್ತನೆಯಾ..?. ಏನಿದು..?.ಇನ್ನು ಹಾಗಲ್ಲ ಯಾವ ಕ್ಷೇತ್ರದ ಶಾಸಕ ಈ ರೀತಿಯಾಗಿ ಮಾಡುತ್ತಾನೋ ಅವನನ್ನು ಮತ್ತೆ ಸ್ವ ಕೇತ್ರಕ್ಕೆ ಬರೋದಿಕ್ಕೆ ಜನಾನೇ ಬಿಡಬಾರದು. ಇದೂ ಅಲ್ಲ ಇನ್ನೊಂದು ಕಾನೂನು ಬರಬೇಕು ಹೀಗೆಲ್ಲಾ ರಾಜಕೀಯ ಮಾಡೋ ಶಾಸಕರನ್ನು ಅವರ ಕ್ಷೇತ್ರ ಜನರೇ ಇಳಿಸುವ ಹೊಸದಾದ ಯಾವುದಾದರೂ ಕಾನೂನು ಬೇಕು. ಒಮ್ಮೆ ಗೆಲ್ಲಿಸಿದ ಮೇಲೆ ಅವರನ್ನು ಇಳಿಸೋ ಯಾವೊಂದು ಸೂತ್ರವೂ ಆ ಕ್ಷೇತ್ರದ ಮತದಾರನಲ್ಲಿಲ್ಲ.ಹಾಗಾಗಿ ಐದು ವರ್ಷ ಆಡಿದ್ದೇ ಆಟ.ಮಾಡಿದ್ದೇ ಕೆಲಸ.ಇದಕ್ಕೆ ಎದ್ದೇಳ ಬೇಕಾದದ್ದು ಮತದಾರರೇ.

ಮೊನ್ನೆ ಮೊನ್ನೆ ಒಂದು ಇಂತಹದ್ದೇ ರೆಸಾರ್ಟ್ ರಾಜಕೀಯ ಮುಗಿದು ಅಬ್ಬ ಇನ್ನಾದರೂ ರಾಜ್ಯ ಅಭಿವೃದ್ದಿಯಾದೀತು , ರೈತರ ಬದುಕು ಹಸನಾದೀತು , ಬಡವರ ಕೆಲಸಗಳೆಲ್ಲಾ ನಡೆದೀತು ಅಂತ ಭಾವಿಸಿದ್ರೆ ಮತ್ತೆ ಶುರುವಾಯ್ತು ನೋಡಿ ಮತ್ತೆ ಅಧಿಕಾರಕ್ಕಾಗಿ ಲಾಬಿ. ಅದಕ್ಕೆ ಇಡೀ ಅಲ್ಲೋಲ ಕಲ್ಲೋಲ ಮಾಡಲು ಇವೆ ವಿಪಕ್ಷಗಳು.ಯಾರಿಗೂ ಇಲ್ಲಿ ಜನರ ಬಗ್ಗೆ ಕಾಳಜಿ ಇಲ್ಲ.ಎಲ್ಲರಿಗೂ ಅಧಿಕಾರ ಪಡೆಯೋದು , ಹಣ ಮಾಡೋದು ಬಿಟ್ಟರೆ ಇನ್ಯಾವುದೂ ಗೊತ್ತಿಲ್ಲ.ಮೊನ್ನೆ ಮೊನ್ನೆ ಕಚ್ಚಾಡಿಕೊಳ್ಳುತ್ತಿದ್ದವರು ಇಂದು ಹಸ್ತಲಾಘವ ಮಾಡುತ್ತಾರೆ. ಏನಿದು ಹೊಲಸು. ಅಧಿಕಾರ ಪಡೆದ ಮೇಲೆ ಮತ್ತೆ ಕಚ್ಚಾಡುತ್ತಾರೆ , ಜನರ ಬಳಿಗೆ ಹೋಗುತ್ತಾರೆ. ಮುಖದಲ್ಲಿ ಸಿಪ್ಪೆ ಇಲ್ಲದವರು . . ಛೀ . . ಇದೊಂದು ಉದ್ಯಮ ಅಂತ ತಿಳ್ಕೊಂಡಿದ್ದಾರೆ ಅವ್ರು. . ಥೂ . . ., ಇದೆಲ್ಲಾ ಮಾಡಿ ಮತ್ತೆ ಚುನಾವಣೆ ಆದ್ರೆ , ಅದ್ಕೆ ಖರ್ಚಾಗೋದು ಯಾರ ದುಡ್ಡು.. ?. ನಮ್ಮದೇ ಅಲ್ಲವೇ.?. ಅವರಿಗೇನು ಇಂತಹ ರಾಜಕೀಯ ಮಾಡೋದು , ಮತ್ತೆ ಚುನಾವಣೆ ನಡೆಯೋದು , ಮತ್ತೆ ಅಧಿಕಾರ ಪಡೆಯೋದು , ಅದೇ ಉದ್ಯೋಗ. ಆದ್ರೆ ಜನರ ಕತೆ. . ?. ಇದೆಲ್ಲಕ್ಕಿಂತ ಹಿಂದಿನಂತೆ ರಾಜಾಡಳಿತವೇ ಒಳ್ಳೇದು , ಅದಿಲ್ಲಾಂದ್ರೆ ರಾಜ್ಯಪಾಲರ ಆಡಳಿತವೇ ಬೆಸ್ಟ್.

ಹಾಗಂತ ಇದರಲ್ಲಿರೋರೊ ಎಲ್ಲರೂ ಕೆಟ್ಟವರು ಅಂತಲ್ಲ.ಇದ್ದಾರೆ ಒಂದು ಚೂರಾದರೂ ಜನಸೇವೆ ಮಾಡಬೇಕು ಅನ್ನೋ ತುಡಿತ ಇರೋರು , ಬಡವರ ಪರ ಕೆಲಸ ಮಾಡೋರು ಇದ್ದಾರೆ. ಆದರೆ ಅಂತಹವರ ಮಾತಿಗೆ ಬೆಲೆಯೇ ಇಲ್ಲ.ಅವರನ್ಯಾರು ಕ್ಯಾರೇ ಮಾಡಲ್ಲ.ಇದು ನಮ್ಮ ದುರಂತ.ಹಾಗಾಗೇ ಮೊನ್ನೆ ನಡೆದ ಇಲೆಕ್ಷನ್‌ನಲ್ಲಿ ಕಡಿಮೆ ಓಟಿಂಗ್ ಆಗಿದೆ.ಮುಂದೆ ಹಾಗಲ್ಲ ಇನ್ನೊಂದು ಕ್ರಾಂತಿಯಾಗಬೇಕು.

04 ಅಕ್ಟೋಬರ್ 2010

ಜಗವೇ ಬದಲಾದರೂ ?

ಅದು ಸರಕಾರಿ ಅಧಿಕಾರಿಯೊಬ್ಬರ ಕಚೇರಿ. ಅವರೊಬ್ಬ ದಕ್ಷ ಅಧಿಕಾರಿ. ಅದರಲ್ಲಿ ಎರಡು ಮಾತಿಲ್ಲ. ನೇರವಾಗಿ ಹೇಳುವ ,ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸಬೇಕೆಂಬ ತುಡಿತವಿರೋ ಒಬ್ಬ ಒಳ್ಳೆಯ ಅಧಿಕಾರಿ. ಅವರ ಮುಂದೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಕುಳಿತುಕೊಂಡಿದ್ದೆ. ಅವರು ಯಾವತ್ತೂ ಹಾಗೆ ಮಾತನಾಡಿದವರಲ್ಲ , ಮಾತನಾಡೋದೂ ಇಲ್ಲ. ಯಾವತ್ತೂ ಆಶಾವಾದಿಯಾಗಿ ಮಾತಾಡೋರು.

ಆದ್ರೆ ಇಂದ್ಯಾಕೋ ಅವರಿಗೆ ಮೀಡಿಯಾಗಳ ಬಗ್ಗೆ ಬೇಜಾರಿತ್ತು. ಹಾಗಾಗಿ ಅವರು ಹೇಳಿದ್ದು, ಯಾಕ್ರೀ ಹೀಗೆ . .? ಅಂತ .ಅದಕ್ಕೆ ಉತ್ತರ ನಮ್ಮಲ್ಲಿ ಇದ್ದಿರಲಿಲ್ಲ. ಯಾಕೆಂದ್ರೆ 'ನಾನು ಹೀಗೆ' ಅಂತ ಹೇಳಬಹುದು , 'ನಾವೆಲ್ಲಾ ಹೀಗಿರ್ತೇವೆ 'ಅಂತ ಹೇಳಲು ಸಾಧ್ಯನಾ?.ಇಲ್ಲವೇ ಇಲ್ಲ. ಹಾಗಾಗಿ ಉತ್ತರವಿಲ್ಲದೆ ಅವರ ಮುಂದೆ ಕುಳಿತಿದ್ದೆವು.ಸಮರ್ಥಿಸುವುದೂ ಆತ್ಮಸಾಕ್ಷಿಗೆ ವಿರುದ್ದವಾಗುತ್ತದೆ.ಅವರು ಹೇಳುವ ವಿಚಾರವೂ ಅರ್ಥಪೂರ್ಣವಾಗಿತ್ತು. ಕೊನೆಗೆ ಅವರು ಹೇಳಿದ್ರು ನನಗೆ ಈ ಕೆಲಸವೇ ಬೇಡವಾಗಿತ್ತು. 'ನಿಮ್ಮಿಂದಾಗಿ'.ದೊಡ್ಡ ಸಮಸ್ಯೆಯಾಗಿದೆ.ಮಾತಾಡಿದ್ರೆ ನಾಳೆ ಅದೂ ತಪ್ಪಾಗುತ್ತೆ. ಜನ ಯಾರೂ ಏನೂ ಹೇಳಲ್ಲ.ನಿಮ್ಮದೇ ತೊಂದರೆ ಅಂತ ಹೇಳಿದ್ರು.ಅದಕ್ಕೆ ಕಾರಣವೂ ಇತ್ತು.

ಮೊನ್ನೆ ಅಘೋಷಿತವಾದ ಬಂದ್ ಆದ ಬಳಿಕ ಅಲ್ಯಾವುದೋ ಪ್ರಾರ್ಥನಾ ಮಂದಿರದ ನಾಮಫಲಕಕ್ಕೆ ಇನ್ಯಾರೋ ಹಾನಿ ಮಾಡಿದ್ದರು. ಈ ಸುದ್ದಿ ಇಡೀ ಊರಿಗೆ ಹಬ್ಬಿತು. ದೂರ ಮಂಗಳೂರಿಗೂ ಈ ಸುದ್ದಿ ಹೋಯಿತು.ಅಲ್ಲಿಂದ ಒಂದೆರಡು ಮೀಡಿಯಾವೂ ಹೊರಟಿತು. ಇದೆಲ್ಲಾ ಗೊತ್ತಾದ ಕೂಡಲೇ, ಎಲ್ಲಾ ಅಧಿಕಾರಿಗಳು , ಎಲ್ಲಾ ಮೀಡಿಯಾದವರಿಗೂ ರಿಕ್ವೆಸ್ಟ್ ಮಾಡಿದರು , ಈಗ ಪ್ಲೀಸ್ . ,.ಇದನ್ನು ಮಾಡ್ಬೇಡಿ , ಊರಿಗೇ ಕೊಳ್ಳಿ ಹಚ್ಚೋ ಕೆಲಸ ಬೇಡ ಅಂತಲೂ ವಿನಂತಿ ಮಾಡಿದ್ರು. ಆದ್ರೆ ಇದ್ಯಾವುದನ್ನೂ ಕ್ಯಾರೇ ಮಾಡದೇ ಅವರು ಆ ಸ್ಪಾಟ್ ಕಡೆಗೆ ಹೊರಟ್ರು. ಆಗಲೇ ಹಾನಿಯಾದ ಫಲಕವನ್ನು ಪೊಲೀಸರೇ ದುರಸ್ಥಿ ಮಾಡಿ ಸಂಭ್ಯಾವ್ಯ ಎಲ್ಲಾ ಅಶಾಂತಿಯ್ನನೂ ತಪ್ಪಿಸಿದ್ರು. ಆದ್ರೂ ಈ ಮೀಡಿಯಾಗಳು ಅಲ್ಲಿಗೆ ಹೋಗಿ ಸುದ್ದಿಯನ್ನೂ ಮಾಡಿದವು. ಅಧಿಕಾರಿಗಳು ಮಾಡಿದ ವಿನಂತಿ ಎಲ್ಲವೂ ಗಾಳಿಗೆ ತೂರಿ ಹೋಯಿತು. ಉಳಿದೆಲ್ಲಾ ಸಂದರ್ಭಗಳಲ್ಲಿ ಮೀಡಿಯಾದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಅಧಿಕಾರಿಗಳು ಊರಿಗೆ ಕೊಳ್ಳಿ ಹಚ್ಚೋ ಕೆಲಸ ಮಾಡಬೇಡಿ ಎಂದಾಗಲೂ ಅದನ್ನು ಕ್ಯಾರೇ ಮಾಡಿಲ್ಲ. ಹಾಗಾಗಿ ಮೀಡಿಯಾಗಳಿಗೆ ಬೇಕಾದ್ದು ಏನು ಎಂಬುದು ಆ ಅಧಿಕಾರಿಗಳ ಪ್ರಶ್ನೆ. ಇದರಿಂದ ಅವರು ಸಾಧಿಸಿದ್ದಾದರೂ ಏನು?.ಅಲ್ಲಿ ನಾಮಫಲಕಕ್ಕೆ ಹಾನಿ ಮಾಡಿದ್ದು ಸರ್ವಥಾ ಒಪ್ಪುವ ಕೆಲಸವಲ್ಲ.ಆದ್ರೆ ಆ ಸಂದರ್ಭದಲ್ಲಿ ಅದು ಸುದ್ದಿಯಾಗದೇ ಇರುವುದು ಒಳಿತು ಅಷ್ಟೆ. ಇದೊಂದೇ ಅಲ್ಲ ಅಂತಹದ್ದೇ ಎಷ್ಟೋ ಉದಾಹರಣೆ ಇದ್ದೇ ಇತ್ತು. ಹಾಗಂತ ಯಾವಾಗಲೂ ಅಧಿಕಾರಿಗಳ ಪರ ಇರಬೇಕು ಅಂತಲ್ಲ. ಕೆಲವೊಂದು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಮೀಡಿಯಾಗಳಿಗೂ ಜವಾಬ್ದಾರಿ ಇಲ್ಲವೇ ಎಂಬುದು ಇದರ ಒಳನೋಟ ಅಷ್ಟೆ.

ಅವೆಲ್ಲಾ ಇಲ್ಲಿಯ ಕತೆಯಾಯಿತು.

ಈಗಂತೂ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಕಾಮನ್‌ವೆಲ್ತ್ ಕೀಡಾಕೂಟ ನಮ್ಮ ದೇಶದಲ್ಲಿ ನಡೀತಾ ಇದೆ. ಕಳೆದ ಸುಮಾರು ಆರುಮುಕ್ಕಾಲು ವರ್ಷಗಳಿಂದ ಅದಕ್ಕಾಗಿ ಕೆಲಸ ಮಾಡಿ ಈಗ ನಮ್ಮ ದೇಶದಲ್ಲಿ 19 ನೇ ಕಾಮನ್‌ವೆಲ್ತ್ ಕ್ರೀಡಾಕೂಟ ನಡೀತಾ ಇದೆ.ಇದರ ಸಿದ್ದತೆ , ವ್ಯವಸ್ಥೆ , ಅಚ್ಚುಕಟ್ಟು ಹೀಗೇ ಎಲ್ಲವನ್ನೂ ನಾವಲ್ಲ ದೇಶಕ್ಕೆ ಬಂದ ಕ್ರೀಡಾಪಟುಗಳು , ಗಣ್ಯಾತಿ ಗಣ್ಯರು ಹೇಳಿಹೊಗಳಿದ್ದಾರೆ.ಇದೆಲ್ಲವೂ ನಮ್ಮ ಕೆಲ ಪತ್ರಿಕೆಗಳಲ್ಲಿ ಬಂದಿದೆ.ಆದರೆ ನಮ್ಮವರ್ ‍ಯಾರು ಹೇಳಿಕೊಂಡಿಲ್ಲ. ಭೇಷ್ ಅನ್ನಲೇ ಇಲ್ಲ. ನಮ್ಮ ಸಿದ್ದತೆ ಹೀಗಿದೆ ಅಂತ ವಿದೇಕ್ಕೆ ಹೇಳಲೇ ಇಲ್ಲ. ನಮ್ಮ ಕ್ರೀಡಾ ಪಟುಗಳಿಗೆ ಇಂತಹದ್ದು ತಿಂದರೆ ,ಕುಡಿದರೆ ಒಳ್ಳೆತಯದಲ್ಲ ಇದು ಉದೀಪನಾ ಔಷಧಿಯಾಗುತ್ತದೆ ಅನ್ನಲೂ ಇಲ್ಲ , ಆದರೆ ವಿದೇಶದ ಒಂದು ಸಂಸ್ಥೆ ಕುಟುಕು ಕಾರ್ಯಾಚರಣೆ ನಡೆಸಿ ಎಲ್ಲವೂ ಅವ್ಯವಸ್ಥೆ ಎನ್ನುತ್ತದೆ , ನಾವೆಲ್ಲರೂ ಅದನ್ನು ಹೌದು ಎನ್ನುತ್ತೇವೆ. ಅದೇ ದೆಹಲಿಯ ಸೇತುವೆಯೊಂದು ಕೆಲವೇ ದಿನಕ್ಕೆ ಮುಂದೆ ಕುಸಿಯುತ್ತದೆ.ಆದರೆ ಮತ್ತೆ 10 ದಿನದಲ್ಲಿ ಅದು ಸಂಚಾರಕ್ಕೆ ಸಿದ್ದವಾಗುತ್ತದೆ.ನಮ್ಮ ಸೈನಿಕ ಬಳಗದ ಸಾಧನೆ ಅದು. ಆದರೆ ಯಾರೂ ಹೇಳಿಲ್ಲ.ಅಂತಹದ್ದೊಂದು ಸಾಧನೆ ಆಗಿದೆ ಅಂತ ಗೊತ್ತೇ ಇಲ್ಲ , ಲೈವ್ ಅಂತೂ ಇಲ್ಲವೇ ಇಲ್ಲ. ಇದೆಲ್ಲವೂ ನಮ್ಮಲ್ಲಿ ಮಾತ್ರಾ ಸಾಧ್ಯ.

ಹಾಗಾಗಿ ಈ ಜಗವೇ ಬದಲಾದರೂ ನಾವು ಬದಲಾಗೋದಿಕ್ಕೆ ಇದೆಯಾ?.

ಯಾಕೆಂದ್ರೆ ಇಲ್ಲಿ ಒಂದು ವಿಚಾರ ಹೇಳಿದಾಗಲೂ ಅದರ ನಡುವೆ ಜಾತಿ ಸಂಘಟನೆಗಳು , ಇನ್ನೊಂದು ಸಂಘಗಳು ಬಂದು , ಅದನ್ನು ಇನ್ನೊಂದು ರೀತಿಯಲ್ಲಿ ಪ್ರಚಾರ ಮಾಡಿ ಬಿಡುವ ಮನಸ್ಥಿತಿ ಇಲ್ಲಿಯ ಜನರದ್ದು.ಇನ್ನು ಅದೇ ಸಂಘಟನೆಯ ಅಡಿಯಲ್ಲಿ ಇನ್ನೊಬ್ಬನನ್ನು ತುಳಿದು ಸಂತಸ ಪಡೋ ಮಂದಿಯೇ ಇಲ್ಲಿದ್ದಾರೆ , ವಿಷಯವನ್ನು ಪರಾಮರ್ಶಿಸುವ ಗೋಜಿಗೇ ಹೋಗುವುದಿಲ್ಲ.ಒಳ್ಳೆಯದನ್ನು , ಸತ್ಯವನ್ನು ಒಪ್ಪಿಕೊಳ್ಳೋದೇ ಇಲ್ಲ.ಎಲ್ಲವೂ ನಮ್ಮ ಮೂಗಿನ ನೇರಕ್ಕೆ.

ಹೋ . . ಅಲ್ಲಿ ಆತ ಸರಕಾರದ ಆಸ್ಥಿ ಕಬಳಿಸಿದ ಅಂತ ಬೊಬ್ಬಿಡುತ್ತಾರೆ , ಯಾಕೆ ಗೊತ್ತಾ ?,ಇವನಿಗೆ ಮಾಡಲಾಗಿಲ್ಲವಲ್ಲಾ ಎಂಬ ಹೊಟ್ಟೆಕಿಚ್ಚಿನಿಂದ. ಇದಲ್ವಾ ನಮ್ಮಲಿ ನಡೀತಾ ಇರೋದು .?. ಆತ್ಮವಿಮರ್ಶೆಗಾಗಿ ಅಷ್ಟೆ.

02 ಅಕ್ಟೋಬರ್ 2010

"ಚೊಕ್ಕ"ಡಿಗೆ ಕೊಡುಗೆ . .

ಕೆಲವು ಸಂಘಟನೆಗಳಿವೆ ಪ್ರಚಾರವಿಲ್ಲದೆ ಕಾಯ್ರಕ್ರಮವೇ ಇಲ್ಲ. ಆ ನಂತ್ರ ಆ ಯೋಜನೆ ಬಿದ್ದು ಹೋದ್ರೂ ಪರವಾಗಿಲ್ಲ. ಅಂತೂ ಪ್ರಚಾರ ಬೇಕು. ಅಲ್ಲಿಗೆ ಕೊಡುಗೆ , ಇಲ್ಲಿಗೆ ಕೊಡುಗೆ , ಅಲ್ಲಿ ಶಾಲೆ ,ಇಲ್ಲಿ ಗೋಶಾಲೆ ಹೀಗೇ. . ಅದಕ್ಕೆಲ್ಲಾ ಪ್ರಚಾರ ಬೇಕು. ಆದ್ರೆ ಪ್ರಚಾರ ಆದ ಮೇಲೆ ಏನು ಕತೆ? ಗೊತ್ತಿಲ್ಲ. ಆದರೆ ಅಂತಹದ್ದರಲ್ಲಿ ಇವತ್ತು ನನ್ನ ಸಂಬಂಧಿಕರೊಬ್ಬರು ಒಂದು ಕಾರ್ಯಕ್ರಮವಿದೆ ನೀನು ಬಾ ಅಂದಿದ್ದರು. ಸುಮ್ಮನೆ ಹೋಗಿದ್ದೆ. .ಹೋಗಿ ನೋಡಿದಾಗ ಅಲ್ಲಿ ಒಂದಷ್ಟು ಜನ ಇದ್ರು. ಆ ಬಳಿಕ ಮಾತನಾಡಿದಾಗ ವಿಚಾರ ತಿಳೀತು.ಇಲ್ಲಿ ಯಾವೊಬ್ಬ ಮೀಡಿಯಾದವರಿಗೂ ಹೇಳಿರಲಿಲ್ಲ. ಅದರ ಪಾಠ ಇಲ್ಲಿದೆ.

* * * * * * * * * * * * * * * * * * * * * * *ರಾಜ್ಯದ ವಿವಿದ ಕಡೆ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯುತ್ತಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಳ್ಳಿ ಪ್ರದೇಶದ ಚೊಕ್ಕಾಡಿಯ ಕಾಲನಿಯೊಂದರಲ್ಲಿ ತೀರಾ ಭಿನ್ನವಾಗಿ ಗಾಂಧಿಜಯಂತಿ ನಡೆಯುತ್ತಿತ್ತು.ಆದರೆ ಇದಕ್ಕೆ ಅಂತಹದ್ದನೂ ಪ್ರಚಾರವಿರಲೇ ಇಲ್ಲ. ಅದು ಬಿಡಿ, ಆಮಂತ್ರಣ ಪತ್ರಿಕೆಯೂ ಮುದ್ರಣಗೊಂಡಿರಲಿಲ್ಲ.ಅಲ್ಲಿದ್ದವರೇ ಉದ್ಘಾಟಕರು , ಅಲ್ಲಿಗೆ ಬಂದವರೇ ಗೆಸ್ಟ್‌ಗಳು. ಆ ಕಾಲನಿ ಜನರೇ ಸಭಿಕರು.ಅದೇನು ಅಂತಹ ವಿಶಿಷ್ಠ ಕಾರ್ಯಕ್ರಮ?. ಬೇರೇನೂ ಅಲ್ಲ ಕಾಲನಿಗೆ ಉಚಿತವಾಗಿ ಶೌಚಾಲಯದ ವಿತರಣೆ.


ಅದು ಚೊಕ್ಕಾಡಿಯ ಅಕ್ಕೋಜಿಪಾಲ್ ಕಾಲನಿ.ಅಲ್ಲಿ 22 ಮನೆಗಳಿವೆ.ಇದುವರೆಗೆ ಈ ಇಡೀ ಕಾಲನಿಗೆ ಎರಡೇ ಎರಡು ಶೌಚಾಲಯ ಇತ್ತು.ಈಗ ಎಲ್ಲಾ ಮನೆಗಳಿಗೆ ಒಂದೊಂದು ಶೌಚಾಲಯ ಒದಗಿದೆ.ಇದಕ್ಕೆ ಕಾರಣವಾದ್ದು ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು.ಈ ಎಲ್ಲಾ ಶೌಚಾಲಯಗಳನ್ನು ಗಾಂಧಿಜಯಂತಿಯಂದು ಕಾಲನಿ ಜನರಿಗೆ ಹಸ್ತಾಂತರಿಸಿದರು.


ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ವತಿಯಿಂದ ಸತ್ಯಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಪ್ರಯುಕ್ತ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಅಂಗವಾಗಿ ಗ್ರಾಮೀಣ ನೈರ್ಮಲ್ಯ ಯೋಜನೆಗಾಗಿ ಸತ್ಯಸಾಯಿ ಸೇವಾ ಸಮಿತಿಯು ರಾಜ್ಯದಲ್ಲಿ ೧೦೮ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು ಅವುಗಳ ಪೈಕಿ ಚೊಕ್ಕಾಡಿಯಲ್ಲಿ ಪ್ರಥಮವಾಗಿ ಸತ್ಯಸಾಯಿ ಗ್ರಾಮೀಣ ಸಮಗ್ರತಾ ಯೋಜನೆಯಡಿಯಲ್ಲಿ ೨೨ ಶೌಚಾಲಯಗಳನ್ನು ಸುಮಾರು 2 ಲಕ್ಷ ಸಾವಿರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು. ಈ ಯೋಜನೆಗೆ ರಾಜ್ಯದ ಸತ್ಯಸಾಯಿ ಸೇವಾ ಟ್ರಸ್ಟ್ 1.5 ಲಕ್ಷ ರುಪಾಯಿ ನೀಡಿದ್ದು ಜಿಲ್ಲಾ ಹಾಗೂ ಚೊಕ್ಕಾಡಿಯ ಸತ್ಯಸಾಯಿ ಭಕ್ತರು ಉಳಿದ ವೆಚ್ಚವನ್ನು ಭರಿಸಿ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಶೌಚಾಲಯವನ್ನು ನಿರ್ಮಿಸಿದ್ದಾರೆ.ಒಂದು ಶೌಚಾಲಯಕ್ಕೆ ೯ ಸಾವಿರ ರುಪಾಯಿ ವೆಚ್ಚ ತಗಲಿದ್ದು ಇದಕ್ಕೆ ಬಳಸಿದ ಉತ್ಪನ್ನಗಳೆಲ್ಲವೂ ಪರಿಸರ ಸ್ನೇಹಿಯಾಗಿದೆ. ಈ ಯೋಜನೆಯು ಮುಂದೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಈಗಾಗಲೇ ಈ ಸೇವಾ ಸಂಸ್ಥೆಯು ಕುಡಿಯುವ ನೀರಿನ ಯೋಜನೆ , ವಸತಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಮ್ಮಿಕೊಂಡಿದೆ. ದೇಶದಾದ್ಯಂತ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.


ಸುಳ್ಯದ ಚೊಕ್ಕಾಡಿಯ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಇದುವರೆಗೆ ಶೌಚಾಲಯದ ವ್ಯವಸ್ಥೆ ಇಲ್ದದೆ ಮಹಿಳೆಯರು ಹಾಗೂ ಮಕ್ಕಳು ತೀರಾ ತೊಂದರೆ ಪಡುತ್ತಿದ್ದರು. ಸ್ಥಳೀಯ ಪಂಚಾಯತ್ ವತಿಯಿಂದಲೂ ಯಾವುದೇ ವ್ಯವಸ್ಥೆ ಆಗಿರಲಿಲ್ಲ.ಈಗ ಸತ್ಯಸಾಯಿ ಸೇವಾ ಸಂಸ್ಥೆಯು ತನ್ನ ಯೋಜನೆಯ ಮೂಲಕ ಶೌಚಾಲಯ ಹಸ್ತಾಂತರಿಸಿದ್ದು ಕಾಲನಿ ಜನರಿಗೆ ಖುಷಿ ನೀಡಿದೆ.ಮುಂದೆ ಈ ಶೌಚಾಲಯವನ್ನು ಚೆನ್ನಾಗಿ ನಿರ್ವಹಣೆ ಮಾಡುವುದಾಗಿ ಅವರು ಹೇಳುತ್ತಾರೆ.

ಸರಕಾರ ವಿವಿದ ಯೋಜನೆಗಳನ್ನು ಹಮ್ಮಿಕೊಂಡರೂ ಅದು ಜಾರಿಹಂತದಲ್ಲಿ ಅನೇಕ ಬಾರಿ ಎಡವಿಕೊಳ್ಳುತ್ತದೆ.ಆದರೆ ಇಂತಹ ಸ್ವಯಂಸೇವಾ ಸಂಸ್ಥೆಗಳು ಹಾಕಿಕೊಳ್ಳುವ ಯೋಜನೆಗಳು ಅತ್ಯಂತ ಪರಿಣಾಮಜಕಾರಿಯಾಗಿ ಯಶಸ್ವಿತಾಗಿ ಜಾರಿಗೊಳ್ಳುತ್ತವೆ ಮತ್ತು ಬಡಜನರನ್ನು ತಲಪುವುದರಲ್ಲಿ ಸಂದೇಹವೇ ಇಲ್ಲ.ಹೀಗಾಗಿ ಸರಕಾರದ ಯೋಜನೆಗಳನ್ನು ಇಂತಹ ಸಂಸ್ಥೆಗಳ ಮೂಲಕ ಜಾರಿ ಮಾಡುವಲ್ಲಿ ಚಿಂತಿಸಿದರೆ ಉತ್ತಮವಲ್ಲವೇ?. ಸತ್ಯಸಾಯಿ ಸೇವಾ ಸಂಸ್ಥೆಗಳು ,ವಿದ್ಯಾಸಂಸ್ಥೆ, ಆಧ್ಯಾತ್ಮಿಕ ಹಾಗೂ ಇನ್ನಿತರ ಸೇವೆಗಳ ಮೂಲಕ ಈಗಾಗಲೇ ಅನೇಕ ಬಡಜನರನ್ನು ತಲಪಿದೆ.ಈಗ ಮೂಲಭೂತ ವ್ಯವಸ್ಥೆಗಳ ಮೂಲಕವೂ ಜನರನ್ನು ತಲಪುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲವೇ . .?.