30 ಸೆಪ್ಟೆಂಬರ್ 2010

ಕೃಷಿಕನ ಆತ್ಮಹತ್ಯೆ . . .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರ ಆತ್ಮಹತ್ಯೆ ಮುಂದುವರಿದೆ.ಕಳೆದ ವಾರವಷ್ಟೇ ಸುಳ್ಯದಲ್ಲಿ ಅಡಿಕೆ ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿದ ಸಂಗತಿ ಹಸಿಯಾಗಿರುವಾಗಲೇ ಸುಳ್ಯದ ಎಡಮಂಗದಲ್ಲಿ ಇನ್ನೊಬ್ಬ ಅಡಿಕೆ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುರುಡು ಸರಕಾರಕ್ಕೆ ಇದಾದರೂ ಕೇಳಿಸೀತೇ ?.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಡಮಂಗಲದಲ್ಲಿ ಮೂರು ಎಕ್ರೆ ಜಾಗ ಹೊಂದಿರೋ ಒಬ್ಬ ಸಾಮಾನ್ಯ ಕೃಷಿಕ ಶೇಷಪ್ಪ ಗೌಡ. ಇರೋ ಭೂಮಿಯಲ್ಲಿ ಒಂದೂವರೆ ಎಕರೆ ಅಡಿಕೆ ತೋಟ ಇದೆ.ತನ್ನ ಕೃಷಿ ಅಭಿವೃದ್ದಿ ಮಾಡುವುದಕ್ಕಾಗಿ 2006 - 07 ನೇ ಸಾಲಿನಲ್ಲಿ ಎಡಮಂಗಲದ ಸಹಕಾರಿ ಬ್ಯಾಂಕ್‌ನಿಂದ 4.90 ಲಕ್ಷ ಕೃಷಿ ಸಾಲ ಮಾಡಿದ್ದರು.ದುರದೃಷ್ಠವಶಾತ್ ಆ ವರ್ಷದಿಂದಲೇ ಅಡಿಕೆ ಬೆಲೆ ಕುಸಿಯಲಾರಂಭಿಸಿತು.ಸಾಲ ಮರುಪಾವತಿ ಕಷ್ಠವಾಯಿತು.ಆ ಸಾಲವನ್ನು ತೀರಿಸುವುದಕ್ಕೆ ಇನ್ನೊಂದು ಸಾಲ ಮಾಡಿದ.ಹೀಗೇ ಸಾಲ ಬೆಳೆದು 7 ಲಕ್ಷ ತಲಪಿತು.ಈಗ ಅದರ ಬಡ್ಡಿ ಸೇರಿ 11 ಲಕ್ಞ ರುಪಾಯಿ ಆಗಿದೆ. ಈ ಸಾಲವನ್ನು ಕೂಡಲೇ ಮರುಪಾವತಿ ಮಾಡಬೇಕೆಂದು ಸಹಕಾರಿ ಬ್ಯಾಂಕ್ ಶೇಷಪ್ಪ ಗೌಡರಿಗೆ ನೋಟೀಸ್ ಮಾಡಿತು.ಭೂಮಿ ಹರಾಜಿಗೂ ಮುಂದಾಯಿತು.ಡಿಕ್ರಿಯೂ ಆಯಿತು.ಈ ವರ್ಷ ಸಾಲ ಮರುಪಾವತಿ ಮಾಡಬೇಕೆಂಬ ನಿರ್ಧಾರಕ್ಕೂ ಬಂದಿದ್ದರು.ಆದ್ರೆ ಅಡಿಕೆ ಕೊಳೆ ರೋಗದಿಂದ ಬೆಳೆಯೂ ನಷ್ಠವಾಯಿತು. ಇದರಿಂದಾಗಿ ಮಾನಸಿಕವಾಗಿ ನೊಂದ ಶೇಷಪ್ಪ ಗೌಡ ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿದರು.ಈಗ ಮನೆಯಲ್ಲಿ ಪತ್ನಿ ಅವರ ಇಬ್ಬರು ಪುತ್ರರು ಶೇಷಪ್ಪ ಗೌಡರ ಸಾವಿನ ಚಿಂತೆಯಲ್ಲಿದ್ದಾರೆ.ಈಗ ಸಾಲದ ಹೊರೆ ಇವರ ಮೇಲೆ ಬಿದ್ದಿದೆ.

ಕಳೆದ ವಾರವಷ್ಟೇ ಸುಳ್ಯದ ಸಂಪಾಜೆಯಲ್ಲಿ ಅಡಿಕೆ ಬೆಳೆಗಾರನೊಬ್ಬ ಅಡಿಕೆ ಹಳದಿ ರೋಗದಿಂದ ಕೃಷಿ ನಾಶವಾಗಿ ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ.ಇದೇ ರೀತಿಯಾಗಿ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೫ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತ ಸಂಘ ಹೇಳಿದೆ. ಕಳೆದ ಎರಡು ವರ್ಷದಿಂದ ಅಡಿಕೆ ಬೆಲೆ ಕುಸಿತವೇ ಇದಕ್ಕೆಲ್ಲಾ ಕಾರಣವಾಗಿರಬಹುದಾ?. ಅಂತೂ ಕೃಷಿಕರ ಆತ್ಮಹತ್ಯೆ ಮುಂದುವರಿಯುತ್ತಿದೆ ಅನ್ನೋದು ದು:ಖದ ಸಂಗತಿ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೃಷಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದುದರಿಂದ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂದಿನ ದಿನ ಇನ್ನಷ್ಟು ಪ್ರಕರಣಗಳು ದಾಖಲಾದರೂ ಅಚ್ಚರಿ ಇಲ್ಲ.

28 ಸೆಪ್ಟೆಂಬರ್ 2010

ಕೆಂಪು ಸಂಕ -2

ಕೆಂಪುಸಂಕವು ಮಳೆಯ ಅಬ್ಬರಕ್ಕೆ ಕಾಡಿನಿಂದ ಹರಿದು ಬರೋ ನೀರಿನಿಂದಾಗಿ ತುಂಬಿ ಹರಿಯುತ್ತಿತ್ತು.ಕಾಡಿನ ನಡುವಿನ ಆ ಹಾಳು ಡಾಮರು ರಸ್ತೆಯಲ್ಲಿ ಇರೋ ಈ ಸಂಕದ ಸುತ್ತಲೂ ಜೀರುಂಡೆಗಳ ಸದ್ದು ಹಾಗೆಯೇ ಇತ್ತು.ಅದೆಷ್ಟೂ ವಾಹನಗಳು ಆ ದಾರಿಯಾಗಿ ಸಾಗುತ್ತಲೇ ಇತ್ತು. ಅದರೊಳಗಿನ ಜನ ಮಾತ್ರಾ ಯಾವಾಗಲೂ ಭಯದಿಂದ ಸಾಗುತ್ತಲೇ ಇದ್ದರು.ಒಂದೊಂದು ವಿಚಾರ ನೆನಪು ಮಾಡುತ್ತಲೇ ಹೋಗುವಾಗಲೂ ಮತ್ತ ಮತ್ತೆ ಆ ಸಂಕ ನೆನೆಪಾಗುತ್ತಲೇ ಇತ್ತು.ಅಂತೂ ಕಮಿಲದಲ್ಲಿ ಮಾತೆತ್ತಿದರೆ ಅದೇ ಕೆಂಪು ಸಂಕದ ಸುದ್ದಿ. ಮೊನ್ನೆ ಅಲ್ಲಿ ಹೋಗೋವಾಗ ಅವರಿಗೆ ಹೀಗಾಗಿದೆಯಂತೆ ಹೌದಾ. .?.

* * * * * * * * * * * * * * * *

ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರಾ ಭಟ್ಟರು ಪಂಜಕ್ಕೆ ಹೋಗುವಾಗ ಕೆಂಪು ಸಂಕದಲ್ಲಿ ನಡೆದ ಸಂಗತಿಯನ್ನು ಅವರು ಕಮಿಲದಲ್ಲಿ ಹೇಳಿರಲಿಲ್ಲ.ಆದರೆ ಅವರಿಗಾದ ಅನುಭವವನ್ನು ಅವರು ಮನೆಯಲ್ಲಿ ಬಂದು ಹೇಳಿದ್ದರು.ಮನೆಗೆ ಕೆಲಸಕ್ಕೆ ಬರೋ ಗಿರಿಯಪ್ಪ ,ಚಂದಪ್ಪನಲ್ಲೂ ಹೇಳಿದ್ದರು.ಅದು ಸಾಕಿತ್ತು,ಇಡೀ ಕಮಿಲದಲ್ಲಿ ಅದೊಂದು ಸುದ್ದಿ ಎರಡು ದಿನಗಳ ಕಾಲ ಹರಿದಾಡುತ್ತಲೇ ಇತ್ತು.

ಈ ಸುದ್ದಿಯನ್ನು ಕೇಳಿದ ನಂತರ ಆ ಕಾಡು ದಾರಿಯಾಗಿ ಕಮಿಲದ ಕೆಲ ಜನರನ್ನು ಬಿಟ್ಟು ಮತ್ಯಾರು ಅಲ್ಲಿ ಹೋಗುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಅನಿವಾರ್ಯ ಹೋಗಲೇಬೇಕು.ಮನೆಗೆ ಬೇಕಾದ ದಿನಸಿ ಸಾಮಾಗ್ರಿ ಕಮಿಲದಲ್ಲಿ ಸಿಗದು ಹಾಗಾಗಿ ಬಳ್ಪಕ್ಕೆ ಹೋಗಲೇ ಬೇಕು.ಆದ್ದರಿಂದ ಕೆಲ ಜನರು ಸೇರಿಕೊಂಡು ಜೊತೆಯಾಗಿ ಬಳ್ಪಕ್ಕೆ ಹೋಗುತ್ತಿದ್ದರು. ಅಂದು ಕಮಿಲದಿಂದ ವೆಂಕಪ್ಪ ,ನೀಲಪ್ಪ , ಲಕ್ಷ್ಮಣ ಜೊತೆಯಾಗಿ ಬಳ್ಪಕ್ಕೆ ದಿನಸಿ ಸಾಮಾಗ್ರಿಗೆ ಹೋದರು, ಕೆಲಸ ಬಿಡುವಾಗಲೇ ಅವತ್ತು ಹೊತ್ತಾಗಿತ್ತು, ಕತ್ತಲೂ ಆವರಿಸಿತ್ತು.ಅಂದು ಅಮವಾಸ್ಯೆಯೂ ಬೇರೆ.ತಿಂಗಳ ಬೆಳಕೂ ಇಲ್ಲ.ದನಿಗಳ ಕೈಯಿಂದ 100 ರುಪಾಯಿ ಪಡಕೊಂಡಿದ್ದ ಮೂವರೂ ಅಕ್ಕಿ ತರಲು ಹೊರಟಿದ್ದಾರೆ.ಆಗಂತೂ ಅಕ್ಕಿಗೆ ಇದ್ದದ್ದು 3 ರುಪಾಯಿ. ರಾತ್ರಿಯಾದರೂ ಅಂದು ಅಕ್ಕಿ ತರದೆ ಉಪಾಯವೂ ಇಲ್ಲ. ಅಂತೂ ಮೊಂಡು ಧೈರ್ಯದಲ್ಲಿ ಈ ಮೂವರು ಹೊರಟಿದ್ದರು.ಹಾಗೇ ಕಮಿಲದಿಂದ ಸಾಗಿದ ಅವರು ಕಾಡಲ್ಲಿ ಬೊಬ್ಬೆ ಹಾಕುತ್ತಾ ಹೆಜ್ಜೆ ಹಾಕಿದರು.ಕೆಂಪು ಸಂಕವೂ ಬಂತು, ದಾಟಿ ಮುಂದೆಯೂ ಹೋದರು.ಏನೂ, ಸದ್ದೂ ಇಲ್ಲ ,ಮಣ್ಣೂ ಇಲ್ಲ.ಇದೆಲ್ಲಾ ಸುಮ್ಮನೆ ಆ ಭಟ್ರು ರೈಲು ಬಿಟ್ಟದ್ದು ಅಂತ ಮಾತಾಡಿಕೊಂಡು ಮುಂದೆ ಸಾಗಿ ಬಳ್ಪ ತಲಪಿ ಅಕ್ಕಿ , ಚಾಪುಡಿ, ಸಕ್ರೆ ಹೀಗೆ ಎಲ್ಲಾ ಕಾಮತ್ತರ ಅಂಗಡಿಯಿಂದ ಪಡೆದುಕೊಂಡು ಹೊರಡಲು ಅನುವಾದರು.ಕೈಯಲ್ಲಿ ಚಿಕ್ಕದಾದ ಮಿಣಿ ಮಿಣಿ ಲೈಟು ಅಷ್ಟೆ. ಇದೆಲ್ಲಾ ಹಿಡಿದುಕೊಂಡು ಹೊರಡುವಾಗ ನೀಲಪ್ಪನಿಗೆ ಕೊಂಚ ಬಿಸಿ ಮಾಡಿದ್ರೆ ಹೇಗೆ ಅಂತ ಅನಿಸಿತು.ಉಳಿದ ಇಬ್ಬರಲ್ಲೂ ಕೇಳಿದ, ಹಾಗೇ ಮೂವರೂ ಅಲ್ಲೇ ಇದ್ದ ಗಡಂಗ್‌ಗೆ ಹೋಗಿ ಎರಡೆರಡು ತೊಟ್ಟೆ ಏರಿಸಿ ಬಳ್ಪದಿಂದ ಹೆಜ್ಜೆ ಹಾಕಿದರು.ವಾಹನ ಹೇಗೂ ವಿರಳ.ಆಗ ಕೆಲ ಶ್ರೀಮಂತರಲ್ಲಿ ಮಾತ್ರಾ ಜೀಪು ಇತ್ತು.ಅವರು ಯಾರನ್ನೂ ಹತ್ತಿಸಿಕೊಳ್ಳುತ್ತಿರಲಿಲ್ಲ.ಆದುದರಿಂದ ವಾಹನಕ್ಕಾಗಿ ಕಾದು ಪ್ರಯೋಜನವಿಲ್ಲ. ಹಾಗಾಗಿ ಮತ್ತೆ ಕಾಲ್ನಡಿಯೇ ಗತಿ. ಮೂವರೂ ಊರಿನ ಒಂದೊಂದು ಸಂಗತಿಗಳ ಬಗ್ಗೆ ಮಾತನಾಡುತ್ತಾ ಬಳ್ಪ ಕ್ರಾಸ್ ಕಳೆದು ಕಾಡಿನ ದಾರಿಯತ್ತ ಹೆಜ್ಜೆ ಹಾಕಿದವರು.ಅದರಲ್ಲಿ ವೆಂಕಪ್ಪನಿಗೆ ದೂರದಲ್ಲಿ ಏನೋ ಸುಳಿದಾಡಿದಂತೆ ಭಾಸವಾಯಿತು. ಆದ್ರೂ ಹೇಳಲಿಲ್ಲ. ಎಲ್ಲರಿಗೂ ಹೀಗೆ ಒಂದೊಂದು ಅನುಭವವಾಯಿತು.ಆದರೂ ಯಾರೂ ಯಾರಿಗೂ ಹೇಳಲಿಲ್ಲ. ಒಂದು ಕ್ಷಣ ಮಾತು ನಿಲ್ಲಿಸಿ ಹಾಗೆ ಮೌನ ಹೆಜ್ಜೆ ಬಿಟ್ಟರೆ ಏನೂ ಇಲ್ಲ.ನಿಧಾನವಾಗಿ ಹೆಜ್ಜೆ ಮುಂದಕ್ಕೆ ಮುಂದಕ್ಕೆ ಹೋಯಿತು.ಹೇಗೂ ಸ್ವಲ್ಪ ಏರಿಸಿದ್ದರ ಪವರ್ ಕೂಡಾ ಇದೆ.ಹಾಗೆ ಕೆಂಪು ಸಂಕದ ಬಳಿ ಸಾಗುತ್ತಿದ್ದಾಗ ನೀರಿ ಸದ್ದಿನ ಜೊತೆಗೆ ದೂರದಿಂದ ಅದೇನೋ ಅಳುತ್ತಿರುವ ಸದ್ದು ಕೇಳಿತು.ವೆಂಕಪ್ಪ ಅಂದ ಅದೇನೋ ಸದ್ದು . . ! , ನೀಲಪ್ಪ ಸದ್ದು ಆಲಿಸಿದ . . ! , ಲಕ್ಷ್ಮಣ ಹೌದು . . ಹೌದು . . ಅಂತ ಹೇಳಿದ. ಏನದು . ? ಏನದು . ? ಎಲ್ಲರಲ್ಲೂ ಪ್ರಶ್ನೆ ಮೂಡಿತು. ನೀಲಪ್ಪ ತಕ್ಷಣವೇ ಅದಕ್ಕಿಂತ ದೊಡ್ಡದಾದ ಒಂದು ಸದ್ದು ಮಾಡಿದ.ಅತ್ತ ಕಡೆಯಿಂದ ಆ ಸದ್ದು ಕಡಿಮೆ ಆಗಲಿಲ್ಲ.ಇನ್ನಷ್ಟು ಜೋರಾಗಿ ಕೇಳಿತು. ಮೂವರಲ್ಲಿ ಮುಖದಲ್ಲಿ ಬೆವರ ಹನಿಗಳು ಕಾಣಿಸಿಕೊಂಡಿತು. ಎರಡು ದಿನಗಳ ಹಿಂದ ಕಮಿದಲ್ಲಿ ಮಾತನಾಡಿದ ಎಲ್ಲಾ ಸಂಗತಿಗಳು ನೆನಪಾದವು.ಸದ್ದು ಕೇಳುತ್ತಲೇ ಇದೆ.ಸರಿಯಾಗಿ ಆಲಿಸಿದರೆ ಕು0ಯ್ . . ಅನ್ನೋ ಸದ್ದು ಅದು.ಲೈಟು ಬೇರೆ ಸರಿ ಇಲ್ಲ.ಮೂವರಿಗೂ ಎದೆ ಬಡಿತ ಹೆಚ್ಚಾಯಿತು.ಬಳ್ಪದಲ್ಲಿ ಏರಿಸಿದ್ದ 2 ಪ್ಯಾಕೇಟ್‌ನ ಪವರ್ ಕಡಿಮೆ ಆಯಿತೇನೋ ಅಂತ ಅನ್ನಿಸಿತು.ಆದರೂ ಬಿಡಲಿಲ್ಲ . . ಜೋರಾಗಿ ಬೊಬ್ಬೆ ಹಾಕಿದರು ಇವರು. ಲಕ್ಷ್ಮಣ ಮತ್ತು ವೆಂಕಪ್ಪ ಹೇಳಿದರು ಅದು “ರಣ”. ಬೇಡ ಬೊಬ್ಬೆ ಹಾಕೋದು ಬೇಡ ಅದೆಲ್ಲಾದರು ಇತ್ತ ಬಂದರೆ ನಮ್ಮ ರಕ್ತವನ್ನು ಹೀರೀತು,ಕೊಂದೇ ಹಾಕಿತು , ಅದು ಹಕ್ಕಿಯಂತೆ ಹಾರಾಡುತ್ತಾ ಬರುತ್ತದೆ, ಹಾಗಾಗಿ ಸದ್ದಿಲ್ಲದೆ ನಾವೊಮ್ಮೆ ಬೇಗ ಹೋಗೋಣ ಎನ್ನುತ್ತಾ ಕೆಂಪು ಸಂಕ ದಾಟಿ ಮುಂದೆ ಬಂದರು. ಬೇಗ ಬೇಗ ಕಮಿಲದತ್ತ ಹೆಜ್ಜೆ ಹಾಕಿದರು.ಅಂತೂ ಸದ್ದೂ ಕಡಿಮೆಯಾಯಿತು. ಹಾಗೆ ಅವರು ಕಮಿಲಕ್ಕೆ ತಲಪುವಾಗ ಗಂಟೆ ರಾತ್ರಿ 9.30.ಕಮಿಲಕ್ಕೆ ಬಂದಾಗ ಇದ್ದ ಅಂಗಡಿಗಳೆಲ್ಲಾ ಬಂದ್ ಆಗಿದ್ದವು. ಜನವೂ ಇರಲಿಲ್ಲ. ಹಾಗಾಗಿ ಬಸ್ ಸ್ಟ್ಯಾಂಡಲ್ಲಿ ಕುಳಿತ ಈ ಮೂವರು ಅಬ್ಬಾ ಎನ್ನುತ್ತಾ ಹಣೆಯನ್ನು ಒಮ್ಮೆ ಒರಸಿಕೊಂಡ ಅವರು ನಾಳೆ ಮಾತನಾಡೋಣ ಅಂತ ಮನೆ ಕಡೆಗೆ ಹೆಜ್ಜೆ ಹಾಕಿದರು. ಆಗಲೂ ಈ ಮೂವರಿಗೆ ಕಾಡುತ್ತಿದ್ದುದು ಅದೇನು ಕೆಂಪು ಸಂಕದ ಬಳಿಯಲ್ಲಿ ಕೇಳಿಬಂದ ಸದ್ದು. ಈ ಸುದ್ದಿಯೂ ಹಾಗೆ ಮರುದಿನ ಕಮಿಲದಲ್ಲಿ ಸುದ್ದಿಯಾಯಿತು.

ಇನ್ನಷ್ಟು ರೆಕ್ಕೆ ಪುಕ್ಕಗಳು ಅಲ್ಲಿ ಹುಟ್ಟಿಕೊಂಡವು.ಇನ್ನಷ್ಟು ಸಂಗತಿಗಳು ಕೆಂಪುಸಂಕದಲ್ಲಿ ನಡೆದವು.

22 ಸೆಪ್ಟೆಂಬರ್ 2010

ಒಂದು ಸಾಲು . .

ಒಂದು ವಿಚಾರವನ್ನು ಮಾತಾಡೋವಾಗ , ಹೇಳೋವಾಗ ಅದನ್ನು ಪರಾವರ್ಶಿಸಿ ಮಾತಾಡ್ಬೇಕಂತೆ. ಅದನ್ನು ಅನುಸರಿಸೋದು ಕೂಡಾ ಅಗತ್ಯ ಇದೆ.ಅದು ಸತ್ಯ ಅಂತ ಗೊತ್ತಿದ್ದೂ , ಹಾಗಲ್ಲ . . ಹಾಗಲ್ಲ ಅಂತ ಸಮರ್ಥಿಸೋದು ರಾಜಕಾರಣಿಗಳು ಮಾತ್ರಾ.ಈಗೀಗ ಆ ಸಾಲಿಗೆ ಎಲ್ರೂ ಸೇರಿಕೊಂಡಿದಾರೆ ಅಂತ ನನಗನ್ನಿಸಿದೆ.ಅದಕ್ಕೆ ಕಾರಣಗಳೂ ಇದೆ.

ಅಂದ ಹಾಗೆ ನಾನೊಂದು ಸಂಗತಿ ಹೇಳಬೇಕಿದೆ , ಲೋಕದ ಸಂಗತಿಯನ್ನು , ನಾನು ಹೋದಲ್ಲಿ ಕಂಡದ್ದನ್ನು ಮತ್ತು ಸ್ವತ: ಆದ ಅನುಭವವನ್ನು ಇಲ್ಲಿ ದಾಖಲಿಸಿದ್ದೆ.ಅದೆಷ್ಟೋ ಒಳ್ಳೇ ಸಂಗತಿಗಳು ಇತ್ತು ಅಂತ ನನ್ನ ಮಿತ್ರರು ಹೇಳಿದ್ದಾರೆ.ಆದ್ರೆ ಅದ್ಯಾವುದನ್ನೂ ನೋಡದೇ ಇರೋರು.ಈಗಂತೂ ನೋಡಿದ್ದಾರೆ.
ನೋಡಿದ್ದು ಮಾತ್ರವಲ್ಲ ಅಲ್ಲಿ - ಇಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೂ ಅಲ್ಲ ಅವರಲ್ಲಿ - ಇವರಲ್ಲಿ ಹೇಳಿಸಿದ್ದಾರೆ. ಪರವಾಗಿಲ್ಲ.ಹಾಗಂತೆ . . ಹೀಗಂತೆ ಅಂತಲೂ ಹೇಳಿದಾರೆ. ನಾನು ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ಯಾಕೆಂದ್ರೆ ಮಾತಾಡೋದೇ ತಪ್ಪಾ ಏನೋ . ?.ಗೊತ್ತಿಲ್ಲ. ಅಷ್ಟಕ್ಕೂ ಕುಂಬಳಕಾಯಿ ಕದ್ದವನ ಹೆಗಲಲ್ಲಿ ಬೂದಿ ಇರುತ್ತಾ. .?.

19 ಸೆಪ್ಟೆಂಬರ್ 2010

“ದೇಶದ ರೈತರೆಲ್ಲಾ ಆಹಾರದ ಬಗ್ಗೆ ಚಿಂತಿಸಿದರೆ ಪರಿಹಾರ “
ನಮ್ಮೂರಲ್ಲಿ ಕಿಸಾನ್ ಸಂಘದ ವತಿಯಿಂದ ಬಲರಾಮ ಜಯಂತಿಯನ್ನು ಆಚರಿಸಲಾಗಿತ್ತು. ಕೃಷಿಕರದ್ದೇ ಸಂಘಟನೆಯಾದ ಕಿಸಾನ್ ಸಂಘವು ವಿವಿದ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಡೀ ದೇಶದಾದ್ಯಂತ ಈ ಸಂಘಟನೆ ಇದೆ. ದತ್ತೋಪಂತ್ ಜೀ ಇದರ ಸಂಸ್ಥಾಪಕ.

ಈ ಕಾರ್ಯಕ್ರಮದ ವರದಿ . .

ಶೇಕಡಾ ೭೦ರಷ್ಟು ರೈತರೇ ಇರುವ ಭಾರತದಲ್ಲಿ ಆಹಾರದ ಸಮಸ್ಯೆಯನ್ನು ಎದುರಿಸುವುದು ದೊಡ್ಡ ಸಮಸ್ಯೆಯಾಗದು.ಆದರೆ ಎಂದೂ ಆತಂಕದಲ್ಲಿರುವ ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರದಾನ ಕಾರ್ಯದರ್ಶಿ ವೆಂಕಟೇಶ್ ಪಣಕನಹಳ್ಳಿ ಹೇಳಿದರು.

ಅವರು ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ನೇತೃತ್ವದಲ್ಲಿ ಸುಳ್ಯ ತಾಲೂಕು , ಬಾಳಿಲ-ಮುಪ್ಪೇರ್ಯ ಮತ್ತು ಎಣ್ಮೂರು ವಲಯದ ಭಾರತೀಯ ಕಿಸಾನ್ ಸಂಘದ ಸಹಭಾಗಿತ್ವದೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಬಲರಾಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಿಗೆ ಬೇಕಾದ ಪೂರ್ವ ಸಿದ್ದತೆಗಳು ನಡೆಯುತ್ತದೆ ಆದರೆ ಆಹಾರದ ಸಮಸ್ಯೆ ಎದುರಿಸಲು ಬೇಕಾದ ಪೂರ್ವ ಸಿದ್ದತೆಗಳು ನಡೆಯುವುದಿಲ್ಲ.ರೈತರನ್ನು ಕಡೆಗಣಿಸುವುದೇ ಹೊರತು ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸಗಳು ನಡೆಯುತ್ತಿಲ್ಲ, ಆದರೆ ಕಿಸಾನ್ ಸಂಘವು ಇಂದು ಈ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಕೃಷಿಕರು ಸಂಘಟಿತರಾಗಬೇಕು ಎಂದರು.ಇದೇ ವೇಳೆ ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣ ಕೋಟೆ ವೈದ್ಯನಾಥನ್ ವರದಿ ಬಗ್ಗೆ ಮಾತನಾಡಿ, ಸಹಕಾರಿ ಸಂಘಗಳ ಬಲವರ್ಧನೆಗಾಗಿ ಈ ವರದಿ ಜಾರಿಗೆ ಬಂದಿದೆ ಆದರೆ ವರದಿ ಜಾರಿ ಹಂತದಲ್ಲಿ ತಿರುಚುವಿಕೆಯ ಕೆಲಸ ನಡೆಯುತ್ತಿದೆ ಇದು ಆಗಬಾರದು ಎಂದ ಅವರು ಸಹಕಾರಿ ಬ್ಯಾಂಕ್‌ಗಳಿಗೆ ಆರ್ಥಿಕ ಬ್ಯಾಂಕ್ ಪ್ರತಿನಿಧಿಗಳ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕಾನ , ಬಾಣೆ ಮತ್ತು ಕುಮ್ಕಿ ಹಕ್ಕಿನ ಬಗ್ಗೆ ಮಾತನಾಡಿದ ರಾಮಚಂದ್ರ ಭಟ್ ನೆಕ್ಕಿಲ , ವರ್ಗ ಸ್ಥಳಕ್ಕೆ ಪೂರಕವಾಗಿ ಇರುವ ೧೦೦ ಗಜ ಸರಕಾರಿ ಸ್ಥಳವೇ ಕಾನ , ಬಾಣೆಗಳು. ಇತ್ತೀಚೆಗಿನವರೆಗೆ ಈ ಜಾಗಗಳಿಗೆ ಕೃಷಿಕರು ತೆರಿಗೆ ಕಟ್ಟುತ್ತಿದ್ದರು ಇದನ್ನು ಹಿಂದೆ ಪಡೆಯುವ ಹಕ್ಕು ಸರಕಾರಕ್ಕಿಲ್ಲ ಎಂದ ಅವರು ಕೈಗಾರಿಕೆ , ಮನೆ ನಿವೇಶನಗಳಿಗೆ ಭೂಮಿ ನೀಡುವ ಸರಕಾರವು ಕೃಷಿಕರಿಗೆ ಮಾತ್ರಾ ಭೂಮಿ ನೀಡದೇ ಇರುವುದು ವಿಪರ್ಯಾಸ ಎಂದರು.

ವೇದಿಕೆಯಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಅಧ್ಯಕ್ಷ ಕರ್ವಂಕಲ್ಲು ಗೋಪಾಲಕೃಷ್ಣ ಭಟ್ , ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯದ ಅಧ್ಯಕ್ಷ ರಮೇಶ್ ಕೋಟೆ , ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ಸ್ವಾಗತಿಸಿದರು. ತಾಲೂಕಿನ ಭಾರತೀಯ ಕಿಸಾನ್ ಸಂಘಗಳ ವರದಿಯನ್ನು ಗೋಪಾಲಕೃಷ್ಣ ಭಟ್ ,ಬಾಳಿಲದ ವರದಿಯನ್ನು ರಾಜಾರಾಮ ಸಿ.ವಿ , ಎಣ್ಮೂರು ವಲಯದ ವರದಿಯನ್ನು ಲೋಕನಾಥ ರೈ ಹಾಗೂ ಗುತ್ತಿಗಾರು ವರದಿಯನ್ನು ಕುಮಾರಸ್ವಾಮಿ ಮೇಲ್ತೋಟ ವಾಚಿಸಿದರು. ಬಿಟ್ಟಿ ನೆಡುನೀಲಂ ನಿರೂಪಿಸಿದ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಕೋಶಾಧಿಕಾರಿ ಜತ್ತಪ್ಪ ಗೌಡ ವಂದಿಸಿದರು. sಕಾರ್ಯಕ್ರಮದಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಗುತ್ತಿಗಾರು ಆರೋಗ್ಯ ವೈದ್ಯಾಧಿಕಾರಿ ಡಾ.ನಂದಕುಮಾರ್ ಅವರಿಂದ ಆರೋಗ್ಯ ಮಾಹಿತಿ ಕಾರ್ಯುಕ್ರಮ ನಡೆಯಿತು.

07 ಸೆಪ್ಟೆಂಬರ್ 2010

ಇದು ಹೆದ್ದಾರಿ . .!

ಅಯ್ಯಾ ಎಂದರೆ ಸ್ವರ್ಗ ; ಎಲವೋ ಎಂದರೆ ನರಕವಂತೆ , ಆದ್ರೆ ಈ ರಸ್ತೆಯಲ್ಲಿ ಹೋಗೋವಾಗ ಏನ್ ಹೇಳ್ಬೇಕೋ ಅಂತಾನೇ ಗೊತ್ತಾಗಲ್ಲ.ಇದು ನಮ್ಮ ಹೆದ್ದಾರಿ. ಎನ್‌ಎಚ್ 48, ಶಿರಾಡಿ ಘಾಟ್ !. ಘಾಟಿ ತುಂಬಾ ವಾಹನ ಚಾಲಕರು ಇನ್ನಿಲ್ಲದ ಪಡಿಪಾಟಲು ಅನುಭವಿಸಬೇಕಾಗಿದೆ ಈಗ.ಇಡೀ ರಸ್ತೆ ರಾಡಿ ಎದ್ದಿದೆ.ಮೊನ್ನೆ ಮೊನ್ನೆ ಕಾಮನ್‌ವೆಲ್ತ್ ಕ್ಲೀನ್ಸ್ ಬ್ಯಾಟನ್ ರಿಲೇ ಇದೇ ಮಾರ್ಗದಲ್ಲಿ ಬಂದಿತ್ತು. ಆ ಪ್ರಯುಕ್ತ ಗುಂಡ್ಯಕ್ಕೆ ಹೋಗಿದ್ದಾಗ ಶಿರಾಡಿಯತ್ತಲೂ ಹೆಜ್ಜೆ ಹಾಕಿದಾಗ ಇದೆಲ್ಲಾ ಕಂಡಿತು.


ರಾಷ್ಟ್ರೀಯ ಹೆದಾರಿ 48 ರ ಶಿರಾಡಿ ಘಾಟ್ ರಸ್ತೆಯು ಪ್ರತೀ ವರ್ಷದಂತೆ ಈ ಬಾರಿಯೂ ರಾಡಿಯಾಗಿದೆ. ಹೀಗಾಗಿ ವಾಹನ ಓಡಾಟ ತೀರಾ ತ್ರಾಸವಾಗಿದೆ. ಹಾಗಿದ್ದರೂ ತಕ್ಷಣದ ದುರಸ್ಥಿ ಇಲ್ಲಿ ನಡೆದೇ ಇಲ್ಲ. ಇದರಿಂದಾಗಿ ವಾಹನ ಪ್ರಯಾಣಿಕರು ಅಯ್ಯೋ. . ., ಅಂತ ಸೊಂಟಕ್ಕೆ ಕೈ ಹಿಡಿದರೆ ವಾಹನ ಮಾಲೀಕರು ತಲೆಗೇ ಕೈಹೊತ್ತು ಕೂರುವಂತಾಗಿದೆ


ರಾಷ್ಟ್ರೀಯ ಹೆದಾರಿ 48 ರಲ್ಲಿ ಬರೋ ಶಿರಾಡಿ ಘಾಟ್ ರಸ್ತೆ. ಹೇಳುವುದಕ್ಕೆ ಇದು ರಾಷ್ಟ್ರೀಯ ಹೆದ್ದಾರಿಯಾದರೂ ತೀರಾ ಲೋಕಲ್ ರಸ್ತೆಯ ಹಾಗಿದೆ ಇದರ ಅವಸ್ಥೆ.ಕೆಲವೊಮ್ಮೆ ಅದಕ್ಕಿಂತ ಹಳ್ಳಿ ರಸ್ತೇನಾದ್ರೂ ಪರವಾಗಿಲ್ಲ ಅಂತ ಅನಿಸುತ್ತದೆ. ಬೇಸಗೆಯಲ್ಲಿ ರಿಪೇರಿ , ಮಳೆಗಾಲದಲ್ಲಿ ಹೊಂಡ ಗುಂಡಿ ಇದು ಶಿರಾಡಿ ರಸ್ತೆಯ ಪ್ರತೀ ವರ್ಷದ ಬಯೋಡೇಟಾ. ಬದವಾಲವಣೆ ಇಲ್ಲ ಹೊಸ ಕೋರ್ಸ್‌ಗಳೂ ಇಲ್ಲ. ಏನಿದ್ದರೂ ಭರವಸೆಗಳು ಮಾತ್ರಾ. ಶಿರಾಡಿ ಮೂಲಕ ಮಂಗಳೂರು , ಬೆಂಗಳೂರು ಮಾತ್ರವಲ್ಲ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಗಳಿಗೆ ಹೋಗುವ ನೂರಾರು ಪ್ರಯಾಣಿಕರಿಗೆ ಅನ್ಯ ಮಾರ್ಗವಿಲ್ಲ. ಇದೇ ಮಾರ್ಗದಲ್ಲೇ ಸಂಚರಿಸಬೇಕಿದೆ. ಮಾತ್ರವಲ್ಲ ನೂರಾರು ಘನವಾಹನಗಳು ಇದೇ ಮಾರ್ಗವಾಗಿ ಸಂಚರಿಸಲೇ ಬೇಕಾಗಿದೆ..ಆದ್ರೂ ಕೂಡಾ ತಾತ್ಕಾಲಿಕ ದುರಸ್ಥಿ ಕಂಡಿಲ್ಲ ಎಂಬುದು ಸಾರ್ವಜನಿಕರ ದೂರು.


ಕಳೆದ ಹಲವಾರು ವರ್ಷಗಳಿಂದ ನಾದುರಸ್ಥಿಯಲ್ಲಿದ್ದ ಈ ಶಿರಾಡಿ ಘಾಟ್ ರಸ್ತೆಯಲ್ಲಿನ 13 ತಿರುವುಗಳನ್ನು 3 ವರ್ಷದ ಹಿಂದೆ 42 ಕೋಟಿ ರುಪಾಯಿ ವೆಚ್ಚದಲ್ಲಿ ಹೊಂಡ ಗುಂಡಿಗೆ ಮೋಕ್ಷ ಕಲ್ಪಿಸುವ ಕೆಲಸ ಮಾಡಲಾಗಿತ್ತಾದರೂ , ಇದು ಒಂದೇ ವರ್ಷದಲ್ಲಿ ತಿರುವು ರಸ್ತೆ ಹೊರತುಪಡಿಸಿ ಉಳಿದವೆಲ್ಲಾ ನೀರುಪಾಲಾಗಿತ್ತು. ಒಟ್ಟು 36 ಕಿಲೋ ಮೀಟರ್ ಉದ್ದ ಘಾಟಿ ರಸ್ತೆಯಲ್ಲಿ ಈಗ ಉಳಿದ 26 ಕಿಲೋ ಮೀಟರ್ ರಸ್ತ್ತೆ ದುರಸ್ಥಿಗಾಗಿ 115 ಕೋಟಿ ರುಪಾಯಿಯ ಪ್ರಾಜೆಕ್ಟ್ ತಯಾರು ಮಾಡಲಾಗಿದೆ.ಇದರಲ್ಲಿ ಕಾಂಕ್ರೀಟ್ ರಸ್ತೆಗಾಗಿ 99.84 ಕೋಟಿ ರುಪಾಯಿಯ ನೀಲನಕಾಶೆ ತಯಾರಿಸಲಾಗಿದೆ.ಉಳಿದ ಮೊತ್ತದಲ್ಲಿ ರಸ್ತೆಯ ಚರಂಡಿ ವ್ಯವಸ್ಥೆ ತಯಾರಾಗಲಿದೆ. ಆದರೆ ಪ್ರತೀ ವರ್ಷದ ಮಳೆಗಾಲ ಶಿರಾಡಿ ರಾಡಿಯಾಗುವ ಈ ರಸ್ತೆಯಿಂದಾಗಿ ವಾಹನಗಳ ಓಡಾಟವೇ ಕಷ್ಟವಾಗಿದೆ.ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುವ ಮಂದಿಗೆ ಇನ್ನೂ ಕಷ್ಟವಾಗಿದೆ ಅಂತಾರೆ ಜನ.ಹೀಗಾಗಿ ಈ ಘಾಟಿ ರಸ್ತೆಗೆ ಶಾಶ್ವತ ಪರಿಹಾರ ಶೀಘ್ರದಲ್ಲೇ ಸಿಗಬೇಕು.ವಾಹನ ಮಾಲೀಕರಂತೂ ಉಸ್ಸಪ್ಪ ಅಂತಾರೆ.ಲೋಡ್ ವಾಹನಗಳು ಒಂದು ಹೊಂಡಕ್ಕೆ ಬಿದ್ದು ಮೇಲೇಳುವಾಗ ಜೀವ ಹೋಗಿ ಬಂದಂತಾಗುತ್ತದೆ ಅಂತಾರೆ. ಲಾರಿ ಮೈಂಟೆನೆನ್ಸ್‌ಗೇ ಬಾಡಿಗೆ ಸಾಕಾಗೋಲ್ಲ ಅಂತಾರೆ ಅವ್ರು.ಒಟ್ಟಿನಲ್ಲಿ ಹಲವು ವರ್ಷಗಳ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಇನ್ನೂ ಸಿಕ್ಕಿಲ್ಲ. ನೂತನ ಕಾಂಕ್ರೀಟ್ ರಸ್ತೆಗೆ ಅನುಮೋದನೆ ಸಿಕ್ಕಿದೆ ಎಂಬ ಭರವಸೆಗಳು ಸಿಗುತ್ತದೇ ವಿನಹ ಪರಿಹಾರ ಮಾತ್ರಾ ಸಿಕ್ಕಿಲ್ಲ. ಆದಷ್ಟು ಬೇಗನೆ ಕಾರ್ಯಗತವಾಗಲಿ ಎಂಬುದೇ ಎಲ್ಲರ ಆಶಯ.

05 ಸೆಪ್ಟೆಂಬರ್ 2010

ಇಲ್ಲಿ “ಗುರು”ಬಲವಿದೆ . . .

ಅವರು ಕೇವಲ ಮೇಷ್ಟ್ರು ಅಲ್ಲ.ಬದುಕನ್ನು ರೂಪಿಸುವ ಮೇಷ್ಟ್ರು ಅವರು.ಆ ಮೇಷ್ಟ್ರು ಎಲ್ಲೇ ಸಿಕ್ಲಿ ಅವ್ರಿಗೊಂದು ಗೌರವ ಬೇರೇನೇ. ಅದಕ್ಕೇ ಹೇಳಿದ್ದು "ಮುಂದೆ ಗುರಿ ಹಿಂದೆ ಗುರು "ಅಂತ.ಗುರುವಿನ ಬಲವಿದ್ದರೆ ಗುರಿ ಸಾಧಿಸಿಂದತೆಯೇ.ಹಾಗೇ ನನ್ನ ಬದುಕಿಗೆ ದಾರಿ ತೋರಿದ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಅವರಿಗೊಂದು ಶುಭಾಶಯ.

ಅಂದ ಹಾಗೆ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಓದಿದ್ದು ಮನೆ ಪಕ್ಕದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಮಿಲದಲ್ಲಿ.ಅಲ್ಲಿಂದ ನಂತ್ರ ಐದನೇ ಕ್ಲಾಸ್‌ನಿಂದ ಏಳನೇ ಕ್ಲಾಸ್‌ವರೆಗೆ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರಿನಲ್ಲಿ. ಆ ನಂತರ ಹೈಸ್ಕೂಲಿಗೆ ಮನೆಯಿಂದ ಇಪ್ಪತ್ತು ಕಿಲೋ ಮೀಟರ್ ದೂರದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ.ಈ ಶಾಲೆಯನ್ನು ಮಾತ್ರಾ ನಾನು ಯಾವಾಗಲೂ ನೆನಪಿಸಿಕೊಳ್ಳಲೇ ಬೇಕು.ಇಲ್ಲಿನ ಎಲ್ಲಾ ಮೇಷ್ಟ್ರುಗಳನ್ನೂ ಕೂಡಾ.ಇಲ್ಲಿ ನಾಲ್ಕು ಸಾಲು ಬರೆಯುವುದಕ್ಕೆ ಕಾರಣವಾಗಿದ್ದೇ ಈ ಶಾಲೆ.ಹಾಗಂತ ಉಳಿದ ಶಾಲೆ ಅಕ್ಷರ ಕಲಿಸಿಲ್ಲ ಅಂತ ಅಲ್ಲ.ಅಲ್ಲಿನ ಮೇಷ್ಟ್ರುಗಳೂ ತಿದ್ದಿದ್ದಾರೆ.( ಈ ಬಾರಿ ಬಾಳಿಲದಲ್ಲಿ ನನಗೆ ಕಲಿಸಿದ ಮೇಷ್ಟ್ರು ಪಿ.ಎನ್.ಭಟ್ಟರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯೂ ಸಿಕ್ಕಿದೆ.)
ಸುಬ್ರಹ್ಮಣ್ಯ , ವಿವೇಕಾನಂದ ಕಾಲೇಜುಗಳ ಮೆಟ್ಟಿಲು ಹತ್ತಿ ಇಳಿದಾಗಿದೆ.ಈಗ ಇಲ್ಲಿದ್ದೇನೆ. ಅಂತೂ ಎಲ್ಲಾ ಮೇಷ್ಟ್ರುಗಳನ್ನು ನೆನಪಿಸಿಕೊಂಡು ಅವರಿಗೊಂದು ಥ್ಯಾಕ್ಸ್ ಹೇಳಿದ ನಂತ್ರ ನಮ್ಮೂರ ಕಡೆ ನೋಡಿದಾಗ ಅಲ್ಲೊಂದು ಗ್ರಾಮದಲ್ಲಿ ಹೆಚ್ಚು ಸಂಖ್ಯೆಯ ಮೇಷ್ಟ್ರು ಇದ್ದಾರೆ ಅಂತ ಗೊತ್ತಾಯ್ತು. ಅವರು ಹಳ್ಳಿ ಮೇಷ್ಟ್ರಲ್ಲ . . ಅದು ಮೇಷ್ಟ್ರ ಹಳ್ಳಿ.ಈ ಹಳ್ಳಿಯಲ್ಲಿನ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು.

* * * * * * * * * * * * * * * * * * * *


ಅದು ಏನೇಕಲ್ ಎಂಬ ಪುಟ್ಟ ಗ್ರಾಮ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ಗ್ರಾಮ ಹೇಳಿಕೊಳ್ಳುವುದಕ್ಕೆ ಪುಟ್ಟ ಗ್ರಾಮವಾದರೂ ಈ ಹಳ್ಳಿಯ ಕೊಡುಗೆ ದೊಡ್ಡದೇ.ಈ ಊರಿನಲ್ಲಿರುವ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು. ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಮತ್ತು ರಾಜ್ಯದ ವಿವಿದೆಡೆ ಶಿಕ್ಷಕರಾಗಿ ಇಂದು ದುಡಿಯುತ್ತಿದ್ದಾರೆ.ಅಷ್ಟೆ ಏಕೆ ವಿದೇಶದಲ್ಲೂ ಉಪನ್ಯಾಸಕರಾಗಿ ಕೆಲಸ ಮಾಡೋದ್ರಲ್ಲೂ ಇಲ್ಲಿನ ಜನ ಇದ್ದಾರೆ.ಈ ಊರಿಗೆ ದಿವಂಗತ ಪಿ.ಎಸ್.ರಾಮಣ್ಣ ಗೌಡರೇ ಮೊದಲ ಶಿಕ್ಷಕರು. ಆ ಬಳಿಕ ಇಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡೋಕ್ಕೆ ಇಲ್ಲಿನ ಹೈದರು ಶುರುಮಾಡಿದರು.ಹಿರಿಯರ ಮಾದರಿಯ ಹೆಜ್ಜೆ , ಮುಂದಿನವರಿಗೆಲ್ಲಾ ದಾರಿದೀಪವಾಯಿತು.ಹಾಗಾಗಿ ಶಿಕ್ಷಕರಾಗುವವರ ಸಂಖ್ಯೆ ಇಲ್ಲಿ ಬೆಳೆಯುತ್ತಲೇ ಹೋಯಿತು.ಕಳೆದ 2 ವರ್ಷದ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ ಈ ಹಳ್ಳಿಯಲ್ಲಿ 165 ಜನ ಶಿಕ್ಷಕರು ಪಟ್ಟಿಯಲ್ಲಿ ಸಿಕ್ಕಿದ್ದಾರೆ.

ಇದ್ಯಾಕೆ ಇಲ್ಲಿ “ಗುರು”ತ್ವಾಕರ್ಷಣ ಬಲ ? ಅಂತ ಕೇಳಿದ್ರೆ , ಹಿರಿಯರ ಮಾರ್ಗದರ್ಶನ ಮತ್ತು ಅವರ ಆದರ್ಶದ ಹೆಜ್ಜೆಗಳ ಪ್ರೇರೇಪಣೆ ಒಂದು ಕಡೆಯಾದ್ರೆ ಇಲ್ಲಿನ ಯುವಕ ಮಂಡಲದ ಪಾತ್ರವೂ ಮುಖ್ಯವಾಗಿದೆಯಂತೆ.ಯುವಕ ಮಂಡಲದಲ್ಲಿ ಯುವಕರು ಜೊತೆಯಾಗಿ ಸೇರಿದಾಗ ಮಾಹಿತಿ ನೀಡುವ ಕಾರ್ಯಕ್ರಮ ಹಾಗೂ ಹಿರಿಯರ ಪ್ರೋತ್ಸಾಹ ಇಲ್ಲಿನ ಯುವಕರಿಗೆ ಸ್ಫೂರ್ತಿಯಾಯಿತು ಅದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೇ ಇರುವ ಭವಿಷ್ಯ ಮನಗಂಡು ಶಿಕ್ಷರಾದರು ಅಂತಾರೆ ಇವರು.ಇದರ ಜೊತೆಗೆ ಈ ಪುಟ್ಟ ಗ್ರಾಮವು ಆರ್ಥಿಕವಾಗಿಯೂ ಹಿಂದಿತ್ತು.ಹೀಗಾಗಿ ಉನ್ನತ ಶಿಕ್ಷಣವು ಕನಸಿನ ಮಾತಾಗಿತ್ತು.ಜೊತೆಗೆ ಬಹುತೇಕ ಮನೆಯವರು ಕೂಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಓದಿದ ಮಂದಿಗೆ ಉದ್ಯೋಗವೂ ಬೇಗನೆ ಬೇಕಿತ್ತು. ಹೀಗಾಗಿ ಕಡಿಮೆ ವ್ಯಾಸಾಂಗ ಮಾಡಿ ಬೇಗನೆ ಉದ್ಯೋಗ ಗಿಟ್ಟಿಸಿಕೊಳ್ಳುವ ಅನಿವಾರ್ಯತೆಯೂ ಇತ್ತು.ಆಗ ಶಿಕ್ಷಣ ಕ್ಷೇತ್ರ ಇವರನ್ನು ಆಕರ್ಷಿಸಿದೆ.

ಈಗ ನೋಡಿದರೆ ಈ ಪುಟ್ಟ ಗ್ರಾಮ ಅಷ್ಟೊಂದು ಹಿಂದೆ ಉಳಿದಿಲ್ಲ. ಆದರೂ ಕೂಡಾ ಇಂದಿನ ಹೆಚ್ಚಿನ ಯುವಕರೂ ಶಿಕ್ಷಣ ಕ್ಷೇತ್ರದತ್ತಲೇ ಆಕರ್ಷಿತರಾಗಿದ್ದಾರೆ.ಮೊದಲಿನ ಸಮೀಕ್ಷೆಯಂತೆ 165 ಜನ ಶಿಕ್ಷಕರಿದ್ದರೆ ಆ ಬಳಿಕವೂ ಇದೇ ಕ್ಷೇತ್ರಕ್ಕೆ ಬರುವುದಕ್ಕೆ ಟ್ರೈನಿಂಗ್ ಮಾಡಿದವರು ಇದ್ದಾರೆ.ಇನ್ನು ಕಂಪ್ಯೂಟರ್ ತರಬೇತಿ ಶಿಕ್ಷಕರು ಇಲ್ಲಿದ್ದಾರೆ. ಇವರೆಲ್ಲಾ ಸೇರಿದಾಗ 250 ರ ಗಡಿ ದಾಡುತ್ತದೆ. ಇನ್ನೂ ಈ ಏನೇಕಲ್ಲಿನಲ್ಲಿ ವಿಶೇಷ ಅಂದ್ರೆ ಸುಮಾರು 50 ಕ್ಕೂ ಅಧಿಕ ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಇರೋದು ಗಮನಾರ್ಹವಾಗಿದೆ. 1984 ರ ಸುಮಾರಿಗೆ ಒಂದೇ ವರ್ಷದಲ್ಲಿ 22 ಜನರು ಶಿಕ್ಷಕರಾಗಿ ನೇಮಕವಾದದ್ದು ಇಲ್ಲಿನ ಹೆಮ್ಮೆಗೆ ಇನ್ನೊಂದು ಗರಿ.

ಹಾಗಂತ ಈ ಪುಟ್ಟ ಗ್ರಾಮದ ಜನಸಂಖ್ಯೆ ಸುಮಾರು 2000. ಇಲ್ಲಿನ ಮನೆ ಹಾಗೂ ಜನಸಂಖ್ಯೆ ಆಧಾರವನ್ನು ನೋಡಿದರೆ ಸರಾಸರಿ ಮನೆಗೊಬ್ಬರಂತೆ ಇಲ್ಲಿ ಶಿಕ್ಷಕರಿದ್ದಾರೆ. ಅದು ಮಾತ್ರ ಅಲ್ಲ, ಇನ್ನು ಸರಕಾರಿ ಕಚೇರಿಗಳಲ್ಲಿ ಉದ್ಯೋಗದಲ್ಲಿ , ಯೋಧರಾಗಿ , ಬ್ಯಾಂಕ್ ಅಧಿಕಾರಿಗಳಾಗಿ , ಪ್ರಾಂಶುಪಾಲರಾಗಿಯೂ ಸೇವೆ ಮಾಡೋವವರು ಈ ಊರಲ್ಲಿ ಇದ್ದಾರೆ.ಇನ್ನೂ ವಿಶೇಷ ಅಂದ್ರೆ ವಿದೇಶದಲ್ಲೂ ಉಪನ್ಯಾಸಕರಾಗಿ ಸೇವೆ ಮಾಡೋರು ಇದೇ ಏನೇಕಲ್ಲಿನ ಮಂದಿ ಇದ್ದಾರೆ.

ಉದ್ಯೋಗ ಅಂತ ಅಂದ್ರೆ ಸಾಫ್ಟ್‌ವೇರ್ ಅಂತ ತಿಳಿದಿರೋ ಇಂದಿನ ಕಾಲದಲ್ಲಿ ಪಾಠ ಹೇಳಲು , ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕೆ ಜನ ಸಿಗದೇ ಇರೋ ಈ ವೇಳೆಯಲ್ಲಿ ಅದರಲ್ಲೂ ಕೆಲವು ವಿಷಯಗಳನ್ನು ಬೋಧಿಸಲು ಅಧ್ಯಾಪರುಗಳೇ ಸಿಗುತ್ತಿಲ್ಲವಾಗುತ್ತಿರುವ ಇಂದಿನ ದಿನದಲ್ಲಿ ಏನೇಕಲ್ ಎಂಬ ಪುಟ್ಟ ಗ್ರಾಮದ ಜನತೆ ಇಂದಿಗೂ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಹ್ಯಾಟ್ಸ್ ಅಪ್ ಏನೇಕಲ್ ಪ್ಯೂಪಲ್ಸ್. ಶಿಕ್ಷಕರ ದಿನಾಚರಣೆಗೆ ನಿಜವಾದ ಅರ್ಥ ನೀಡುತ್ತಿರುವ ಈ ಗ್ರಾಮ ನಿಜಕ್ಕೂ ರಾಜ್ಯದ ಹೆಮ್ಮೆ.

. . . . . . . . . .

01 ಸೆಪ್ಟೆಂಬರ್ 2010

ಸಲಾಂ ಹಾಕಿದ್ರೆ ನೀವ್ ಪಾಸ್ !

ಅದೊಂದು ಕಚೇರಿ, ಅಲ್ಲೊಬ್ಬ ಅಧಿಕಾರಿ.

ಅದೊಂದು ಆಸ್ಪತ್ರೆ, ಅಲ್ಲೊಬ್ಬ ಡಾಕ್ಟರ್.

ಹೌದು ಆಸ್ಪತ್ರೆ ಇದ್ರೆ ಅಲ್ಲೊಬ್ಬ ಡಾಕ್ಟರ್ ಇಲ್ರೇ ಬೇಕು.ಇನ್ನು ಕಚೇರಿ ಅಂದಾಗ ಅಲ್ಲೊಬ್ಬ ಅಧಿಕಾರಿ ಇರಲೇ ಬೇಕು.ವಿಷಯ ಅದಲ್ಲ.ಅಲ್ಲಿ ಇನ್ನೂ ಒಬ್ಬ ಇರ್ತಾನಲ್ಲ. ಆತ ಯಾರು ಅಂತ ಎಲ್ಲರಿಗೂ ಗೊತ್ತು. ಯೋಚನೆ ಮಾಡೋದೆ ಬೇಡ.ಆತ ಗೇಟ್‌ಕೀಪರ್.ಅರ್ಥಾತ್ ಪಿ‌ಎ ಅಥವಾ ಎಟೆಂಟರ್. ಇಲ್ಲಿ ಈತನ ಪಾತ್ರ ಬಹುಮುಖ್ಯ.ಅಧಿಕಾರಿ ಆಗಿರಬಹುದು ಡಾಕ್ಟರ್ ಆಗಿರಬಹುದು ನಿಮಗೆ ಎಷ್ಟೇ ಕ್ಲೋಸ್ ಆಗಿದ್ರೂ ಇಲ್ಲಿ ಇವನ ಪಾತ್ರ ಮಾತ್ರಾ ಮುಖ್ಯ. ಇವನ ಪರ್ಮೀಶನ್ ಇದ್ರೆ ಮಾತ್ರಾ ಒಳಗೆ ಪ್ರವೇಶ , ಇಲ್ಲಾಂದ್ರೆ ಹೊರಗಿನ ಬೆಂಚ್ !.

ಹೌದು.ಒಂದು ಕಚೇರಿ ಮುಂದೆ ಇರೋ ಈತನ ಕೆಲಸವೂ ಅಷ್ಟೇ. ಯಾರನ್ನು ಒಳಗೆ ಬಿಡಬೇಕು ಯಾರನ್ನು ಬಿಡಬಾರದು, ಯಾರನ್ನು ಎಷ್ಟು ಹೊತ್ತಿಗೆ ಬಿಡಬೇಕು ಅಂತ ಆತನ ನಿರ್ಧರಿಸುತ್ತಾನೆ. ಒಬ್ಬ ಡಾಕ್ಟರ್ ಬಳಿಗೆ ನಾವು ಹೋದ್ವಿ ಅಂತ ಇಟ್ಟುಕೊಳ್ಳೋಣ.ಇಲ್ಲಿ ಕ್ಲೂ ಸಿಸ್ಟಮ್ ಇದೆ. ನಮ್ಮಿಂದ ನಂತ್ರ ಇನ್ನೊಬ್ಬ ಬರ್ತಾನೆ ಆತ ಈ ಗೇಟ್ ಕೀಪರ್ಗೆ ತೀರಾ ಪರಿಚಯಸ್ಥ ಹಾಗಾಗಿ ಆತನಿಗೆ ನಮಗಿಂತ ಮೊದಲು ಪ್ರವೇಶ. ಒಂದು ವೇಳೆ ನಾವು ಅದ್ಹೇಗೆ ಹಾಗಾಯಿತು? ಅಂದ್ರೆ ಅವರು ನಿಮಗಿಂತ ಮೊದಲೇ ಬುಕ್ ಮಾಡಿದಾರೆ ಅಂತಾನೆ. ನಾವು ಇನ್ನೂ ಗಲಾಟೆ ಮಾಡಿದ್ರೆ ಇನ್ನೂ ಇಬ್ರು ಇದ್ದಾರೆ ಅಂತಾನೆ .ನಾವು ಇನ್ನೂ ಪೆದ್ದು ಪೆದ್ದಾಗಿ ಕುಳಿತುಕೊಳ್ಳಲೇ ಬೇಕಷ್ಟೆ. ಅಬ್ಬಾ ಆತ ಏನು ಡಾಕ್ಟ್ರ ಕಚೇರಿ ಮುಂದೆ ಆ ಕಡೆ ಈ ಕಡೆ ಹೋಗ್ತಾನೆ.ನಾವು ಎಷ್ಟು ಹೊತ್ತಿಗೆ ಒಳಗೆ ಹೋಗೋದು ಅಂದ್ರೆ ನಿಲ್ಲಿ .. ನಿಲ್ಲಿ .. ಅಂತಾನೆ. ಅದೇ ನಾವು ಒಳಗಿನ ಡಾಕ್ಟರಿಗಿಂತ ಈ ಕೀಪರ್‌ಗೆ ಹೆಚ್ಚು ಮಸ್ಕಾ ಹೊಡೆದ್ರೆ , ಸಲಾಂ ಹೊಡೆದ್ರೆ ಮುಂದಿನ ಸಲ ನಾವು ಬಂದಾಗಲೇ ಒಳಗೆ ಪ್ರವೇಶ. ಈ ಉಸಾಬರಿ ಸಾಕಪ್ಪ ಡಾಕ್ಟರಿಗಿಂತ ದೊಡ್ಡ ವ್ಯಕ್ತಿ ಈ ಕೀಪರ್ ಆಗಿ ಬಿಟ್ನಾ ಅಂತ ಅನ್ಸುತ್ತೆ ಬಿಡಿ.ಅಂತಹದ್ದೇ ಒಂದು ಸಿಟ್ಟಿನಲ್ಲಿ ನಾನೊಮ್ಮೆ ಪರಿಚಯಸ್ಥ
ಡೆಂಟಿಸ್ಟ್ ಒಬ್ರಿಗೆ ನೇರವಾಗಿ ಫೋನು ಮಾಡಿ ನಂಗೆ ಅಪಾಯಿಂಟ್‌ಮೆಂಟ್ ಬೇಕು ಅಂದೆ.ಅವರು ಒಂದ್ನಿಶ ಅಂತ ಅದೇ ಕೀಪರ್‌ಗೆ ಫೋನು ಕೊಡ್ಬೇಕಾ. .?. ಅಂತೂ ಅವ್ನಿಗೇ ಸಲಾಂ ಹೋಡೀಬೇಕಾದ ಸಮಯ ಬಂತು. ಇದು ಆಸ್ಪತ್ರೆಯ ಕತೆಯಾದ್ರೆ ಇನನು ಕಚೇರಿಗಳ ಸ್ಟೈಲೇ ಬೇರೇ.


ಇವತ್ತು ಇಂತಹವರು ಬಂದ್ರೆ ಒಳಗೆ ಬಿಡಬೇಡ ಸಾಹೇಬ್ರು ಬ್ಯುಸಿ ಅಂತ ಹೇಳು ಅಂತ ಕಚೇರಿ ಒಳಗಿನಿಂದ ಕೀಪರ್‌ಗೆ ಮೆಸೇಜ್ ಬಂದ್ರೆ ಸಾಕು.ಅವತ್ತು ಅಂತಹ ಜನಗಳು ಬಂದ್ರೆ ನೋ ಎಂಟ್ರಿ. ಇನ್ನು ನೋಡಿ, ನಮ್ಮ ಕೆಲಸ ಬೇಗ ಆಗ್ಬೇಕು ಅಂದ್ರೆ ಸೀದಾ ಅಧಿಕಾರಿ ಬಳಿಗೆ ಹೋದ್ರೆ ಕೆಲಸ ಬೇಗನೆ ಆಗಲ್ಲ. ಅಲ್ಲೇ ಇರೋ ಕೀಪರ್ಗೆ ಮಸ್ಕಾ ಹಾಕಿ ಸಲಾಂ ಹೊಡೆದ್ರೆ ನೋಡಿ ಎಷ್ಟು ಬೇಕು ಕೆಲಸ ಆಗುತ್ತೆ ನೋಡಿ. ಸಾಹೇಬ್ರೇ ಇವರು ನಮ್ಮ ಜನ ಇದನ್ನೊಂದು ಮಾಡಿಕೊಡಿ ಸಾರ್.ಅಂತ ಒಳಗಡೆ ಹೋಗಿ ಅದೇನು ಬೇಕು ಅದೆಲ್ಲಾ ಮಾಡಿಕೊಂಡು ಬರ್‍ತಾನೆ.

ಆತನಿಗೆ ಲೆವೆಲ್‌ನಲ್ಲಿ ಚಿಕ್ಕ ಕೆಲಸ.ಆದ್ರೆ ನಮ್ಮ ಸಮಯ ಉಳಿಸುವಲ್ಲಿ ಆತನ ಕೆಲಸ ದೊಡ್ಡದೇ. ಹಾಗಾಗಿ ನೀವು ಎಲ್ಲೇ ಹೋಗಿ ಅಲ್ಲೊಬ್ಬ ಕೀಪರ್ ಇದ್ದಾನೆ ಅಂತದ್ರೆ ಅವನಿಗೊಂದು ಸಲಾಂ ಹಾಕಿ ನೊಡಿ ಹೇಗೆ ರಿಯಾಕ್ಟ್ ಮಾಡ್ತಾನೆ ಅಂತ.