26 ಜುಲೈ 2010

ಇದೊಂದು ಅಚ್ಚರಿ . . . . .

ಅಲ್ಲೊಂದು ವಿಶೇಷ ಕಂಡಿದ್ದೇನೆ ನಾನು.

ನನ್ನ ಪರಿಚಿತರೊಬ್ಬರು ಫೋನ್ ಮಾಡಿ ಈ ವಿಶೇಷವನ್ನು ಹೇಳಿದ್ದರು. ಕ್ಯಾಮಾರಾ ಬಗಲಿಗೆ ಹಾಕಿಕೊಂಡು ಹೋಗಿ ನೋಡಿದಾಗ ಈ ಅಚ್ಚರಿ ಸಿಕ್ಕಿದೆ. ಅದೇನು ಅಂತ ನೋಡಿ . . . .
ಇದು ಮೂರು ಕೊಂಬಿನ ಹಸು. ಎರಡು ತಲೆಯಲ್ಲಾದರೆ. ಇನ್ನೊಂದು ಹಸುವಿನ ದೇಹದ ಹಿಂಭಾಗದಲ್ಲಿ ಮೂಡುತ್ತಿದೆ.

25 ಜುಲೈ 2010

ಮಳೆಗಾಲದ ಅತಿಥಿ ಬಂದಿದ್ದಾನೆ. . . . ..

ನಮ್ಮಲ್ಲೀಗ ಆಟಿ ತಿಂಗಳು.ಮಳೆ ಜೋರಾಗೇ ಬರಬೇಕಿತ್ತು.ಆದ್ರೆ ಕಾಲ ಬದ್ಲಾಗಿದೆ ಅಲ್ವಾ. ಅಷ್ಟೊಂದು ಜೋರಾದ ಮಳೆ ಇಲ್ಲ.ಮಳೆ ಆದ್ರೂ ನೀರ ವರತೆ ಇನ್ನೂ ಆಗಿಲ್ಲ.ಈ ನಡುವೆ ಆಟಿ ತಿಂಗಳ ಕೆಲ ಸಂಪ್ರದಾಯಗಳು ಮಳೆ ಹಾಗೇನೇ ಕಟಿಮೆ ಆಗ್ತಾ ಇದೆ.ಅಂತಹದ್ದರಲ್ಲಿ ಆಟಿ ಕಳೆಂಜವೂ ಒಂದು.ಅದೀಗ ನಮ್ಮೂರಲ್ಲೇನೋ ನಡೀತಾ ಇದೆ.ಅದರ ಸುತ್ತ ಕೆಲ ಹೊತ್ತು. . .


ಅಲ್ಲೆಲ್ಲಾ ಹೇಳುವ ಆಷಾಡ ಮಾಸವನ್ನು ನಮ್ಮೂರಲ್ಲಿ ಆಟಿ ತಿಂಗಳು ಅಂತ ಕರೀತಾರೆ. ಆಟಿ ತಿಂಗಳು ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ.ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲಲಿ ಸಿಗೋ ವಸ್ತುಗಳ್ಲಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ.ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.

ಆಟಿ ತಿಂಗಳಲ್ಲಿ ಕಾಡೋ ಆ ಭಯವನ್ನು ನಿವಾರಿಸಲು ಊರ ಮಾರಿ ಓಡಿಸುವ ಪದ್ದತಿ ಇತ್ತಂತೆ. ಊರ ಜನರೆಲ್ಲಾ ಒಂದೆಡೆ ಸೇರಿ ಊರಿಗೆ ಬಂದ ಮಾರಿಯನ್ನು ಓಡಿಸಲು ಒಂದು ದಿನ ನಿಗದಿ ಮಾಡುತ್ತಾರೆ. ಅಂದು ರಾತ್ರಿ ವೇಳೆ ಊರಿನ ಪ್ರತೀ ಮನೆಯಿಂದ ಒಬ್ಬೊಬ್ಬರಂತೆ ತೆಂಗಿನ ಗರಿಗಳಿಂದ ಮಾಡಿದ ಬಲಿಯನ್ನು ತರುತ್ತಾರೆ. ಹೀಗೆ ಮನೆಯಿಂದ ಬರುವ ಜನರೆಲ್ಲಾ ಊರ ರಸ್ತೆಯಲ್ಲಿ ರಾತ್ರಿ ವೇಳೆ ಜೊತೆಯಾಗಿ ಮಾರಿಯನ್ನು ಓಡಿಸಿ ಎಂದು ಬೊಬ್ಬಿಡುತ್ತಾ ಡಾಮರು ರಸ್ತೆಯಲ್ಲಿ ಸಾಗಿ ನಿಗದಿತ ಸ್ಥಳದಲ್ಲಿ ಅಂದರೆ ಊರಿನ ಗಡಿಯಲ್ಲಿ ಎಲ್ಲರೂ ತೆಂಗಿನ ಬಲಿಯಲ್ಲಿಟ್ಟು ಅಲ್ಲಿ ಪೂಜೆ ಮಾಡಲಾಗುತ್ತದೆ.ಇದೇ ವೇಳೆ ಕೆಲ ಜನ ತರುವ ಕೋಳಿಯನ್ನು ಅಲ್ಲೇ ಬಲಿ ನೀಡಲಾಗುತ್ತದೆ.. ನಂತರ ಈ ಊರಿನಿಂದ ಮುಂದಿನ ಊರಿಗೆ ಮಾರಿಯನ್ನು ಓಡಿಸಲಾಗುತ್ತದೆ.


ಇದು ಮಾತ್ರಾ ಅಲ್ಲ ಇದರ ಜೊತೆಗೆ ಊರಿನ ಮಾರಿಯನ್ನು ಕಳೆಯಲು ಆಟಿ ಕಳೆಂಜನೂ ಬರುತ್ತಾನೆ.ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ.ಹೀಗೇ ಬೆಳೆದು ಬಂದ ಒಂದು ಆಚರಣೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.ಆದ್ರೆ ಆಧುನಿಕವಾದ ಈ ಕಾಲದಲ್ಲಿ ಅದೆಲ್ಲಾ ಮೂಲೆಗುಂಪಾಗುತ್ತಿರುವುದು ಒಪ್ಪಲೇ ಬೇಕಾದ ಸತ್ಯ.

ಅದರಲ್ಲೂ ನಮ್ಮೂರಲ್ಲಿ ಇನ್ನೂ ಈ ಆಟಿ ಕಳೆಂಜ ಉಳಿದುಕೊಂಡಿದೆ ಅನ್ನೋದೇ ನನಗೆ ಸಂತಸ.

24 ಜುಲೈ 2010

ಕಲ್ಲುಗಳು ತುಂಬಿದ ಆತ್ಮವಿಶ್ವಾಸ. . .
ಆ ಕಲ್ಲುಗಳಿಗೆ ಎಂಥಾ ಶಕ್ತಿರೀ . . ಆ ಕಲ್ಲುಗಳು ಕೈಯೊಳಗಿದ್ರೆ ಮುಸ್ಸಂಜೆಯಿಂದ ತೊಡಗಿ ರಾತ್ರಿವರೆಗೂ ಎಲ್ಲಿದೆಂಲ್ಲಿಗೂ ಹೋಗೋವಾಗ್ಲೂ ಭಯಾನೇ ಆಗಲ್ಲ. ಯಾವುದೇ ಕ್ಷುದ್ರ ಶಕ್ತಿಯೂ ನಮ್ಮತ್ರ ಬರೋದಿಲ್ಲ , ಗುಮ್ಮನ ಕಾಟವೂ ಇರೋದಿಲ್ಲ. ಹಾಗೊಂದು ನಂಬಿಕೆ ಇತ್ತು.ನಾವು ಚಿಕ್ಕವರಿರುವಾಗ. . .

ನಿಜಕ್ಕೂ ಆಗ ಅದೊಂದು ಅಚ್ಚರಿ ಸಂಗತಿ. ನನ್ನನ್ನೂ ಸೇರಿಸಿ ನಾವೆಲ್ಲಾ ಚಿಕ್ಕವರಿದ್ದಾಗ ಹೆದರು ಪುಕ್ಕಲ.ಆಗ ನಾವಿನ್ನೂ ಎರಡೋ ಮೂರೋ ಕ್ಲಾಸ್. ಅಲ್ಲಿ , ಇಲ್ಲಿ ಕತೆ ಪುಸ್ತಕ ಓದಿದಾಗ ಕಾಣೋ ಈ ಭೂತಗಳ , ಗುಮ್ಮನ ಚಿತ್ರಗಳು. ಅದರ ಸುತ್ತಲೂ ಮನಸ್ಸಿನೊಳಗೆ ಹೆಣೆದುಕೊಳ್ಳೋ ಇನ್ನಷ್ಟು ಕತೆಗಳು.ಆಗ ಮನಸ್ಸಿನೊಳಗೆ ಅದೇನೋ ಭಯ.ಹೀಗಾಗಿ ಸಂಜೆ ಕತ್ತಲು ಆವರಿಸಿದ್ರೆ ಸಾಕು. ನಾವೆಲ್ಲಾ ಗೂಡು ಸೇರಿ ಗುಬ್ಬಚ್ಚಿಯಂತೆ ಸುರುಟಿ ಬಿಡುತ್ತಿದ್ದೆವು.ಇನ್ನು ಮನೆಯ ಹೊರಗೆ ಬರಬೇಕಾದ್ರೆ ಇಬ್ಬಿಬ್ರು ಬಾಡಿ ಗಾರ್ಡ್ ಬೇಕೇ ಬೇಕು.ರಾತ್ರಿ ಬಹಿರ್ದೆಸೆಗೆ ಹೋಗೂ ಸುದ್ದಿನೇ ಇಲ್ಲ.ಎಲ್ಲಾನೂ ಬೆಳಗ್ಗೆ ಎದ್ದ ಮೇಲೇನೇ. ಇಂತಹ ಹೆದರು ಪುಕ್ಕಲು ಸಮಯ ಅದು.ಆದ್ರೆ ಅಂತಹ ಭಯಕ್ಕೆ ಒಂದು ಮದ್ದಿತ್ತು. ಕೇವಲ ಮೂರೇ ಮೂರು ಕಲ್ಲು.ಅದೆರಲ್ಲೇ ಧೈರ್ಯ ತುಂಬುತ್ತಿತ್ತು.ಅದಕ್ಕೆ ನನ್ನ ಅಮ್ಮ ಕಾರಣರಾಗಿದ್ದರು.ಆ ಕಲ್ಲಲ್ಲಿ ಬೇರೇನೂ ಇಲ್ಲ.ಕೇವಲ ಕಲ್ಲು‌ಅದು.ಆದ್ರೂ ಒಂದು ಶಕ್ತಿ ನಮ್ಮ ಮನಸ್ಸಿಗೆ ಬರುತ್ತಿತ್ತು.

ಸಂಜೆಯ ವೇಳೆಗೆ ಅಂದರೆ ಸೂರ್ಯ ಕಡಲು ಸೇರುವ ಸಮಯವದು.ನನಗೆ ಅನಿವಾರ್ಯವಾಗಿ ಆಚೆ ಮನೆಗೆ ಹೋಗಲೇ ಬೇಕು.ಬಾಡಿ ಗಾರ್ಡ್‌ಗಳು ಯಾರೂ ಇಲ್ಲ. ಅಮ್ಮನಿಗೆ ಮನೆಯಲ್ಲಿ ಕೆಲಸವಿದೆ.ಬೇರಾರೂ ಬರೋರಿಲ್ಲ.ತೋಟ ದಾಟಿ ಆಚೆ ಮನೆಗೆ ಹೋಗ್ಬೇಕು.ಮತ್ತೆ ಬರ‍ಬೇಕು.ಅಬ್ಬಾ . . . ಭಯ ಮೈಯನ್ನೇ ಆಗ್ಲೇ ಸುತ್ತಿಕೊಂಡಿತ್ತು.ಆಗ ಅಮ್ಮ ಒಂದು ಮಂತ್ರ ಹೇಳಿಕೊಟ್ಟರು. ನೆಲದಿಂದ ಮೂರು ದೇವರ ಹೆಸರು ಹೇಳಿ ಕಲ್ಲು ಹಿಡ್ಕೋ. ಅದನ್ನು ಗಟ್ಟಿಯಾಗಿ ಹಿಡ್ಕೋ. .ಎಲ್ಲೂ ಬೀಳಿಸಬೇಡ.ಆಚೆ ಮನೆ ಬಂದಾಗ ಅಲ್ಲೇ ಎಲ್ಲಾದ್ರೂ ಇಡು.ಮತ್ತೆ ಬರೋವಾಗ್ಲೂ ಹಾಗೇ ಮಾಡು.ಏನೂ ಆಗಲ್ಲ ಅಂತ ಅಂದ್ರು. ಓಕೆ. ಹಾಗೇನೇ ಮಾಡಿಯಾಯ್ತು. 3 ಕಲ್ಲು. ರಾಮ , ಲಕ್ಷ್ಮಣ , ಸೀತೆ. . ಕಲ್ಲು ಕೈಯೊಳಗೆ ಗಟ್ಟಿಯಾಯ್ತು.ನಡು ತೋಟದಲ್ಲಿ ಕುಯ್ . . ಅನ್ನೋ ಸದ್ದು . . ಕೈ ಗಟ್ಟಿಯಾಯ್ತು. . 3 ದೇವರ ನೆನಪಾಯ್ತು. . ಸದ್ದು ಮಾಯವಾಯ್ತು. . ಮತ್ತೆ ಮುಂದೆ ಹೋದಾಗ ಇನ್ನೊಂದು ಸದ್ದು . . ಮತ್ತೆ ಕೈಸುತ್ತಿಕೊಂಡಿತು.ಕಲ್ಲು ನೆನಪಾಯ್ತು ಜೊತೆಗೆ 3 ದೇವರು ಕೂಡಾ.. . . ಆ ಹೊತ್ತಿಗೆ ಮನೆ ಬಂತು. ಮತ್ತೆ ಅಲ್ಲಿಂದ ಹೊರಡೋವಾಗ್ಲೂ 3 ಕಲ್ಲು, ಅದೇ ದೇವರು . . ಅದೇ ಕಲ್ಲು . . ಯಾವುದೇ ಸದ್ದಿಲ್ಲ.ಸೀದಾ ಸೀದಾ ಮನೆಗೆ. ಅಬ್ಬಾ ಆ 3 ಕಲ್ಲಿಗೆ ಅದೆಂತಹಾ ಶಕ್ತಿ.. ಅಂತ ದೇವರನ್ನೂ ಜೊತೆಗೆ ನೆನೆದುಕೊಂಡು 3 ಕಲ್ಲನ್ನೂ ಎಸೆದಾಯ್ತು.ಮತ್ತೆಲ್ಲಿಗೂ ಹೋಗೋವಾಗ್ಲೂ ಅದೇ ಕಲ್ಲು . . ಅದೇ ದೇವರು . ಅದೇ ಶಕ್ತಿ. .. ಹಾಗಿದ್ರೆ ಅದ್ಯಾವ ಶಕ್ತಿ . . ಅಂತ ಆಗ ನನ್ನನ್ನು ಕಾಡ್ತಾ ಇತ್ತು.

ಮನಸ್ಸಿಗೆ ಧೈರ್ಯ ತುಂಬೋ ಒಂದೇ ಒಂದು ಎಳೆ ಸಿಕ್ರೂ ಸಾಕು ನಾವು ಏನು ಬೇಕಾದ್ರೂ ಮಾಡಬಹುದು.ಒಂದು ಕ್ಷಣ ಇದು ಸಾಧ್ಯವಿಲ್ಲ ಅಂತ ನಾವೇನಾದ್ರೂ ಯೋಚ್ನೆ ಮಾಡಿದ್ರೂ ಸಾಕು ಅದು ಸಾಧ್ಯನೇ ಇಲ್ಲ.ನಮ್ಗೂ ಹಾಗೆ.ಆ ಮೂರು ಕಲ್ಲು ಅಂದು ಶಕ್ತಿ ತುಂಬಿತ್ತು.ಇಂದಿಗೂ ಅಮ್ಮ ಹೇಳುವ ಸಂಗತಿ ಇರಬಹುದು , ಮಿತ್ರರು ಹೇಳೋ ಸಂಗತಿಗಳು ಇರಬಹುದು , ಅಥವಾ ಮನಸ್ಸು ಹೇಳೋ ಸಂಗತಿಗಳು ಕೂಡಾ ಅದೇ ಕಲ್ಲಿನಂತೆ.ಮನಸ್ಸಿಗೆ , ಕೈಗಳಿಗೆ , ಕಾಲುಗಳಿಗೆ , ದೇಹಕ್ಕೆ ಅದೊಂದು ಟಾನಿಕ್‌ನಂತೆ.ಕೆಲಸ ಮಾಡಿಸಿ ಬಿಡುತ್ತದೆ.ಅದೇ ನೀನು ದಡ್ಡ , ನಿನಗೇನು ಸಾಧ್ಯವಿಲ್ಲ ಅಂತ ಒಂದು ಮಾತು ಹೇಳಿದ್ರೆ , ಅದೇ ಮನಸ್ಸು ಸೋತು ಬಿಡುತ್ತದೆ.ಮಾತ್ರವಲ್ಲ ಮನಸ್ಸಿಗೂ ಇದು ಸಾಧ್ಯವಿಲ್ಲ ಅಂತ ಅನ್ಸಿದ್ರೂ ಕೂಡಾ. ಅದರ ಜೊತೆಗೆ ಮಾಡೋ ಕೆಲಸಕ್ಕೆ ಒಂದೇ ಒಂದು ಗುಟುಕು ಒಳ್ಳೇ ಮಾತು ಸಿಕ್ರೂ ಸಾಕು ಅದೂ ಕೂಡಾ ಡಬಲ್ ಶಕ್ತಿ ಕೊಡುತ್ತೆ.

ಹಾಗಾಗಿ ಆ ಮೂರು ಕಲ್ಲುಗಳು ನನಗೆ ಯಾವಾಗಲೂ ನೆನಪಾಗುತ್ತಲೇ ಇರುತ್ತದೆ.ಮೂರು ಕಲ್ಲುಗಳ “ಶಕ್ತಿ” ಇಡೀ ನನ್ನ ಕೆಲಸದಲ್ಲಿ ಯಾವಾಗಲೂ ನೆನಪಾಗುತ್ತದೆ.

16 ಜುಲೈ 2010

ಜಲಪಾತವಿದೆ , . . ಬನ್ನಿ . . .ನಮ್ಮೂರಲ್ಲೊಂದು ಚಂದದ ಜಲಪಾತವಿದೆ. ನೋಡುತ್ತಾ ನಿಂತರೆ ಮನಸ್ಸು ತಣಿಯುತ್ತದೆ. ಒಂದೇ ಕಡೆ ಎರಡು ಜಲಪಾತ ಧುಮುಕುತ್ತದೆ. ಇದುವರೆಗೆ ದೊಡ್ಡ ಪ್ರಚಾರ ಈ ಜಲಪಾತಕ್ಕೆ ಸಿಕ್ಕಿಲ್ಲ. ಈ ಫಾಲ್ಸ್ ಗೆ ಹೆಸರಿಲ್ಲ. ಹಾಗಾಗಿ ನಾವೇ ಇದನ್ನು ಕಲ್ಲಾಜೆ ಜಲಪಾತ ಅಂತ ಕರೀತಾ ಇದೀವಿ. ಜೂನ್ ನಿಂದ ಸುಮಾರು ನವೆಂವರ್ ವರೆಗೆ ಈ ಜಲಪಾತದಲ್ಲಿ ನೀರು ಇರುತ್ತದೆ.

- ಇಲ್ಲಿಗೆ ಹೋಗಬೇಕೆಂದರೆ , ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಸುಳ್ಯ ಮಾರ್ಗವಾಗಿ ಸುಮಾರು 12 ಕಿಲೋ ಮೀಟರ್ ಬಂದಾಗ ನಡುಗಲ್ಲು ಎಂಬೊಂದು ಊರು ಸಿಗುತ್ತದೆ. ಅಲ್ಲಿಂದ ತಿರುಗಿ ಕಲ್ಲಾಜೆ ಎಂಬ ಹಳ್ಳಿಗೆ ಸುಮಾರು 2 ಕಿಲೋ ಮೀಟರ್ ಮಡ್ ರೋಡ್ನಲ್ಲಿ ಹೋಗಬೇಕು.ಮತ್ತೆ ಸ್ವಲ್ಪ ಕಾಲ್ನಡಿಗೆ. ಹಾಗೆ ಈ ಊರಲ್ಲಿ ಕಲ್ಲಾಜೆ ಜಲಪಾತ ಎಲ್ಲಿ ಅಂದ್ರೆ ಯಾರೂ ಬೇಕಾದ್ರೂ ಹೇಳ್ತಾರೆ. ಆದ್ರೆ ಒಂದು ಎಚ್ಚರ ಇಲ್ಲಿ ತಿನ್ನೋದಕ್ಕೆ ಏನಾದ್ರೂ ನೀವು ತರ್ಲೇ ಬೇಕು. ಯಾಕಂದ್ರೆ ಇಲ್ಲಿ ಏನೂ ಸಿಗೋದೇ ಇಲ್ಲ. ಎಲ್ಲಾ ರೆಡಿಯಾಗಿ ಬನ್ನಿ. . . .

15 ಜುಲೈ 2010

ಒಂದು ರಹಸ್ಯದ ಸುತ್ತ . . . .

ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಎಂಬ ಪುಟ್ಟ ಊರು. ಅಡಿಕೆ, ರಬ್ಬರ್ ಕೃಷಿಯಿಂದ ಬದುಕೋ ಜನ ಇಲ್ಲಿಯವ್ರು. ಕೊಲೆ ದರೋಡೆ ಅಂದ್ರೆ ಅಬ್ಬಾ . . !!. ಅಂತ ಹುಬ್ಬೇರಿಸುವ ಮುಗ್ದರು. ಅಂತಹ ಹಳ್ಳಿಯಿಂದ ಅದೇನೋ ಒಂದು ಭಯಾನಕ ಸುದ್ದಿಯೊಂದು ಹೊರಬಂತು.7 ವರ್ಷಗಳ ಕಾಲ ಊರೊಳಗೇ ಸುತ್ತಾಡುತ್ತಿದ್ದ ವ್ಯಕ್ತಿಗಳು ಈಗ ಕೊಲೆಗಾರರಾಗಿ ಕಂಡುಬಂದಿದ್ದಾರೆ.ನಿಜಕ್ಕೂ ಅದೊಂದು ರೋಚಕ ಕತೆ. . . .

ಮೊನ್ನೆ ಆ ಕಮಿಲದ ಹಳ್ಳಿಯಿಂದ ಭಯಾನಕ ಸುದ್ದಿಯೊಂದು ಕೇಳಿಬರುತ್ತಲೇ ಇತ್ತು ಅಲ್ಲಿನ ಜನ ಹಾಗಂತೆ. . ಹೀಗಂತೆ ಅಂತ ಮಾತಾಡ್ತಾ ಇದ್ರು.ಅದು ನಿಜವೂ ಆಯ್ತು. ಆ ಸುದ್ದಿ ಮಾತ್ರಾ ಕಮಿಲದ ಜನ್ರನ್ನು ಬೆಚ್ಚಿ ಬೀಳಿಸಿತ್ತು. ಯಾಕೆ ಗೊತ್ತಾ. . .? .ಅದು ಹಂತಕರ ಕತೆ. ಅವರಿಬ್ಬರು ಕೊಲೆ ಮಾಡಿದ್ದು ಇಂದಲ್ಲ , ನಿನ್ನೆಯಲ್ಲ. . . ಬರೋಬ್ಬರಿ 7 ವರ್ಷಗಳ ಹಿಂದೆ. ಕೊಂದ ಸುಳಿವು ಕೂಡಾ ಸಿಗದಂತೆ ಬಾಡಿಯನ್ನು ಫಿನಿಶ್ ಮಾಡಿದ್ದರು. ಅವರು ಆ ಕೊಲೆ ಮಾಡಿ ರಾಜಾರೋಷವಾಗಿ ಊರಿಡೀ ಸುತ್ತಾಡುತ್ತಿದ್ದರು. ಒಂದೇ ಒಂದು ಸಣ್ಣ ಕ್ಲೂ . . . ಕೂಡಾ ಅವರತ್ತ ಇದ್ದಿರಲಿಲ್ಲ. ಹಿಂದೊಮ್ಮೆ ಇವರೇ ಕೊಲೆಗಾರರು ಎಂಬ ಅನುಮಾನದಿಂದ ಪೊಲೀಸರು ಟಾಯ್ಲೆಟ್ ಗುಂಡಿ ತೆರೆದಿದ್ದರು , ಅದರಿಂದ ವಾಸನೆ ಬಂದದ್ದು ಬಿಟ್ಟರೆ ಬೇರೇನೂ ಸಾಕ್ಷಿ ಅಲ್ಲಿ ಸಿಕ್ಕಿರಲಿಲ್ಲ. ಆದರೆ ಆ ಕೊಲೆಗಾರರು ಮತ್ತೆ ಹೇಗೆ ಪೊಲೀಸರ ಬಲೆಗೆ ಬಿದ್ದರು ಎನ್ನುವುದೇ ಇಂಟೆರೆಸ್ಟಿಂಗ್. ಕೊಲೆಗೆ ಕಾರಣವೂ ಹಾಗೆ ಕೇವಲ ಒಂದು ಎಕ್ರೆ ಜಾಗದ ವಿಷಯ. ಅದೊಂದೇ ವಿಷ್ಯ ಹೌದೇ. . ? ಅಥವಾ ಇನ್ನೇನಾದರೂ ಕಾರಣ ಇತ್ತೇ ಎನ್ನುವುದು ಕೂಡಾ ಗೊತ್ತಿಲ್ಲ. ಅಂತೂ ಕೊಲೆಗಾರರು ಈಗ ಪೊಲೀಸರ ಅತಿಥಿಯಾಗಿದ್ದಾರೆ ಅನ್ನೋದು ಊರ ಜನ್ರಿಗೆ ಸಮಾಧಾನ.ಇಷ್ಠೇ ಅಲ್ಲ ಕೊಲೆಗಡುಕರಿಗೆ ಶಿಕ್ಷೆಯೂ ಆಗ್ಬೇಕು ಅಂತಾರೆ ಆ ಜನ.

* * * * * * * * * * * * * * *

ಅಂದು 2003 ಮೇ 2 ಅದೆಲ್ಲಿಗೋ ಹೋದ ಆ ಮನೆಯ "ಯಜಮಾನ" ಇದ್ದಕ್ಕಿದ್ದಂತೆ ನಾಪತ್ತೆಯಾಗ್ತಾನೆ.ಎಲ್ಲಿಗೆ ಹೋದ . . ಏನಾದ . . ?ಅನ್ನೋದೇ ನಿಗೂಢವಾಗುತ್ತದೆ. ಯಾರಿಗೂ ಗೊತ್ತಿಲ್ಲ. . . ಆ "ಯಜಮಾನನ" ಜೊತೆಗೆ ಹೋದ ಆತನ ಹೆಂಡತಿಯ "ಅಕ್ಕನ ಗಂಡ"ನೂ ನನಗೆ ಗೊತ್ತಿಲ್ಲ ಅಂತಾನೆ.ಆದ್ರೆ ಒಂದು ಕ್ಲೂ ಇದೆ.ಸಮೀಪದ ಗುತ್ತಿಗಾರಿನಿಂದ ಅವರಿಬ್ಬರೂ ಜೊತೆಯಾಗೇ ಅಟೋದಲ್ಲಿ ಬಂದಿದ್ದಾರೆ.ಆದ್ರೆ ಇಲ್ಲಿ ನೋಡಿದ್ರೆ ನನಗೆ ಗೊತ್ತಿಲ್ಲ ಅಂತಾನೆ "ಅಕ್ಕನ ಗಂಡ".ಸಂಶಯಗೊಂಡ "ಯಜಮಾನನ ಪತ್ನಿ " ಪೊಲೀಸರಿಗೆ ದೂರು ನೀಡಿ "ಪತಿ" ನಾಪತ್ತೆಯಾಗಿದ್ದಾರೆ. "ಭಾವ"ನ ಜತೆ ಗುತ್ತಿಗಾರಿನಿಂದ ಅವರ ಮನೆಗೆ ಹೋಗಿದ್ದಾರೆ ಎಂಬ ಸುದ್ದಿ ಇದೆ ಹಾಗಾಗಿ "ಭಾವ"ನನ್ನು ವಿಚಾರಣೆಯಾಗಬೇಕು ಎನ್ನುತ್ತಾರೆ. ಪೊಲೀಸ್ರೂ ಈ ಕುರಿತು "ಭಾವ"ನನ್ನು ಓರಲ್ ಆಗಿ ವಿಚಾರಣೆ ಮಾಡುವಾಗ ನನಗೆ ಏನೂ ಗೊತ್ತಿಲ್ಲ, ನನ್ನ ಮನೆಗೆ ಆತ ಆತ ಬಂದೇ ಇಲ್ಲ. ಕಮಿಲ ಪೇಟೆಗೆ ಹೋಗಲಿದೆ ಎಂದು ಹೋಗಿದ್ದಾರೆ ಎಂದು ಪೊಲೀಸರಿಗೆ ಹೇಳಿದ. ಇನ್ನು ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿಲ್ಲ. ಇದೊಂದು ಫ್ಯಾಮಿಲಿ ಮ್ಯಾಟರ್ ಅಂತ ಅವರೂ ಸುಮ್ಮನಾದ್ರು. ದಿನ ಕಳೆದು ದಿನವಾಯಿತು .. . ಇದೂ ನಾಪತ್ತೆ ಪ್ರಕರಣದಡಿಗೆ ಸೇರಿಹೋಯಿತು.ವರ್ಷಗಳು ಉರುಳಿತು .. ಇನ್ನೊಂದು ವರ್ಷ ಕಳೆಯಿತು. . . "ಯಜಮಾನ"ನ ಸುದ್ದಿಯೇ ಇಲ್ಲ. .ಸುಳಿವೇ ಇಲ್ಲ. . ಹುಡುಕಾಟದ ಶಕ್ತಿಯೂ ಕುಂದಿತು. ಮಂತ್ರ, ದೇವರು , ಜ್ಯೋತಿಷ್ಯ ಹೀಗೆ ಎಲ್ಲವೂ ಮುಗಿಯಿತು.

ಈ ನಡುವೆ ನಾಪತ್ತೆಯಾದ 4 ವರ್ಷದ ಬಳಿಕ ಮತ್ತೊಂದು ಸುದ್ದಿ ಊರ ತುಂಬೆಲ್ಲಾ ಹರಡಿಕೊಂಡಿತು."ಭಾವ" ಮತ್ತು "ಇನ್ನೊಬ್ಬ" ಸೇರಿಕೊಂಡು "ಯಜಮಾನ"ನನ್ನು ಕೊಲೆ ಮಾಡಿ "ಭಾವ"ನ ಶೌಚಾಲಯ ಗುಂಡಿಗೆ ಹಾಕಿದ್ದಾರೆ ಎಂಬ ಸುದ್ದಿ ಹರಡಿಕೊಂಡಿದ್ದ ಕಾರಣ "ಯಜಮಾನನ ಪತ್ನಿ " ಮತ್ತೆ ಪೊಲೀಸರಿಗೆ ದೂರು ನೀಡಿ ತನ್ನ ಅನುಮಾನ ಪರಿಹರಿಸಬೇಕೆಂದು ಒತ್ತಾಯಿಸಿದರು.ಇದಕ್ಕೂ ಪೊಲೀಸರು ಮುಂದಾದರು. ಅಂದು 2007 ಜೂನ್ 25. . . . ಸುಳ್ಯದ ಆಗಿನ ತಹಶಿಲ್ದಾರ್ ಸಹಿತ ಊರ ಜನರ ಸಮ್ಮುಖದಲ್ಲಿ "ಭಾವ"ನ ಟಾಯ್ಲೆಟ್ ಪಿಟ್ ಅಗೆತವೂ ಶುರುವಾಯಿತು.ಆಗಲೂ "ಭಾವ"ನ ಮುಖದಲ್ಲಿ ಯಾವೊಂದು ಭಾವನೆಯೂ ಇರದೆ ತಾನೊಬ್ಬ ಕೊಲೆಗಾರ ಎಂಬ ಸಂಶಯ ಅಲ್ಲಿ ಸೇರಿದ್ದ ಯಾರಿಗೂ ಅರಿವಾಗದಂತೆ ಚೆನ್ನಾಗೇ ಫೋಸು ಕೊಟ್ಟ.ಒಳಗೊಳಗೆ ನಗುತ್ತಲೂ ಇದ್ದ.ಇನ್ನು ಪೊಲೀಸ್ನೋರು ಹಾಗೆ , ವಿಶೇಷ ವಿಚಾರಣೆ ಮಾಡಿಯೂ ಇಲ್ಲ. ಅಂತೂ ಟಾಯ್ಲೆಟ್ ಪಿಟ್ ಅಗೆತದ ಬಳಿಕ ಯಾವೊಂದು ಕುರುಹೂ ಸಿಗದ ಕಾರಣ ಮಣ್ಣು ಪರೀಕ್ಷೆಗೆ ಒಳಪಡಿಸಲಾಯಿತಾದರೂ ಫಲಿತಾಂಶ ಶೂನ್ಯ.

ಹೀಗೇ ಆಗ ಸುದ್ದಿಯಾಗಿದ್ದ ಈ ನಾಪತ್ತೆ ಪ್ರಕರಣ ಮತ್ತೆ ಹಾಗೇ ಸದ್ದಿಲ್ಲದೇ ಇತ್ತು. ಆರ್ಥಿಕವಾಗಿ ಅಷ್ಟೊಂದು ಗಟ್ಟಿಯಿಲ್ಲದ "ಯಜಮಾನನ ಪತ್ನಿ"ಗೆ ಈ ಪ್ರಕರಣ ಬೆನ್ನು ಹತ್ತಲು ಅಷ್ಟೊಂದು ಸುಲಭವೂ ಇದ್ದಿರಲಿಲ್ಲ. ಹಾಗಾಗಿ ಈ ನಾಪತ್ತೆ ಪ್ರಕರಣ ಹಾಗೆಯೇ ಉಳಿದುಕೊಂಡಿತು. ಫೈಲ್ ಕ್ಲೋಸ್ ಅಂತ ಊರ ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

2003 ರ ನಾಪತ್ತೆ ಪ್ರಕರಣ 2007 ರಲ್ಲಿ ಜೀವಪಡೆದು ಸತ್ತಿತು ಎಂದು ಅಂದುಕೊಂಡಿರುವಾಗಲೇ ಕೊನೆಯ ಪ್ರಯತ್ನ ನಡೆಯಿತು. ಅವರು ನೇರವಾಗಿ ಈ ಕೇಸನ್ನು ಮಂಗಳೂರು ಅಪರಾಧ ಪತ್ತೆ ದಳಕ್ಕೆ ದೂರು ನೀಡಿ ತನ್ನ ಅನುಮಾನಗಳನ್ನೆಲ್ಲಾ ಪತ್ತೆದಳಕ್ಕೆ ತಿಳಿಸಿದರು. ಇದಾಗಿ ಕೆಲ ದಿನಗಳ ಬಳಿಕ ಮೊನ್ನೆ ಇದ್ದಕ್ಕಿದ್ದಂತೆ ಬಯಲಾಯಿತು.ನೈಜ ಆರೋಪಿ ಅದೇ "ಭಾವ "ಎಲ್ಲವನ್ನೂ ಪೊಲೀಸರಿಗೆ ತಿಳಿಸಿದ.ಕೊಲೆ ಮಾಡಿದ್ದು ಒಪ್ಪಿಕೊಂಡ.

* * * * * * * * * * * * * * *


ಅಂದ ಹಾಗೆ ಅವ್ರು ಕೊಲೆ ಮಾಡಿದ್ದು ಹೇಗೆ ಅನ್ನೋದೇ ಒಂದು ಇಂಟೆರೆಸ್ಟಿಂಗ್ .. .

ಪೊಲೀಸ್ ಠಾಣೆಯಿಂದ ಗುತ್ತಿಗಾರಿಗೆ ಆ "ಭಾವ " ಬಂದಾಗ ಅಲ್ಲಿ "ಇನ್ನೊಬ್ಬ" ಸಂಬಂಧಿ ಸಿಗ್ತಾನೆ. ಕುಶಲೋಪರಿ ಮಾತನಾಡಿ ಆ ದಿನದ ಘಟನೆಯನ್ನು ವಿವರಿಸುತ್ತಾ ಇಬ್ಬರೂ ಒಂದು ಸ್ಕೆಚ್ ರೂಪಿಸಿದರು. ಆಗಲೇ ಗುತ್ತಿಗಾರಿಗೆ ಬಂದಿದ್ದ "ಯಜಮಾನ"ನೂ ಸಿಗ್ತಾನೆ. ತಡ ಮಾಡದೆ 3 ಜನ ರಿಕ್ಷಾದಲ್ಲಿ "ಭಾವ"ನ ಮನೆಗೆ ಬಂದಾಗ ಸಂಜೆ ಗಂಟೆ ಸುಮಾರು 6.30. ಆ ಬಳಿಕ ಜೊತೆಯಾಗೇ ಟೀ ಕುಡಿದು "ಯಜಮಾನ"ನ ತಲೆಗೆ ಹೊಡೆದಾಗ ಆತ ಕೆಳಗುರುಳಿದ. ಸಾವು ಖಚಿತ ಪಡಿಸಿದ ಬಳಿಕ ಬೆಡ್ ಶೀಟ್‌ನಲ್ಲಿ ಮೃತ ದೇಹವನ್ನು ಸುತ್ತಿ ಮನೆಯ ಪಕ್ಕದ ಗುಡ್ಡದಲ್ಲಿಟ್ಟರು. ಸಮಯ ಉರುಳಿತು.. . . . ಆಗ ಗಂಟೆ ರಾತ್ರಿ ಸುಮಾರು 10 ಗಂಟೆ. ಮೃತ ದೇಹವನ್ನು ಉದ್ದದ ಮರದ ತುಂಡಲ್ಲಿ ಕಟ್ಟಿಕೊಂಡು ಇಬ್ರೂ ಹೊತ್ತುಕೊಂಡು ಮನೆಯ ಹಿಂಬದಿ ನಡೆದುಕೊಂಡು ನಿರ್ಜನ ರಕ್ಷಿತಾರಣ್ಯಕ್ಕೆ ಸುಮಾರು 4-5 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ಹೊತ್ತುಕೊಂಡು ಸಾಗಿದರು. ಹೀಗೆ ಅರಣ್ಯಕ್ಕೆ ತಲುಪಿದಾಗ ಗಂಟೆ ರಾತ್ರಿ ಸುಮಾರು 12. ಅಲ್ಲಿ ಮೊದಲೇ ನೋಡಿದ್ದ ಕಾಡು ಹಂದಿ ವಾಸ ಮಾಡುವ ಗುಹೆಯೊಳಗೆ ದೇಹವನ್ನು ತುರುಕಿದರು. ಅಲ್ಲೇ ಇದ್ದ ಓಟೆಯ ಹಿಂಡಿನಿಂದ ಕೆಲ ಮರದ ತುಂಡುಗಳನ್ನು ಸೇರಿಸಿಕೊಂಡು "ಯಜಮಾನ"ನ ಚಪ್ಪಲಿ , ಬಟ್ಟೆ ಇತ್ಯಾದಿಗಳ ಜೊತೆಗೆ ದೇಹವನ್ನು ಕರಕಲು ಮಾಡಿ ಮಣ್ಣು ಸುರಿದು ಹಿಂತಿರುಗುವಾಗ ಮುಂಜಾನೆಯಾಗಿತ್ತು. ಆ ನಂತರ ಸುಮಾರು 10-15 ದಿನಗಳ ಬಳಿಕ ಮತ್ತೆ ಅದೇ ಗುಹೆಯ ಬಳಿಗೆ ಇಬ್ಬರೂ ರಾತ್ರಿ ಹೋಗಿ ಕೊಳೆತ ಶವದಿಂದ ಎಲ್ಲಾ ಎಲುಬುಗಳನ್ನು ಹೆಕ್ಕಿ ತೆಗೆದು ಗುಹೆಯಿಂದ ಸುಮಾರು 2 ಕಿಲೋ ಮೀಟರ್ ದೂರದ ಇನ್ನಷ್ಟು ದುರ್ಗಮ ಹಾದಿಯಲ್ಲಿ ಸಾಗಿ ನಿರ್ಜನ ಕಾಡಿನಲ್ಲಿ ಮರವೊಂದನ್ನು ಬೀಳಿಸಿ ಕಟ್ಟಿಗೆ ಮಾಡಿ ಶವದಿಂದ ಹೆಕ್ಕಿದ ಎಲುಬುಗಳನ್ನು ರಾಶಿ ಹಾಕಿ ಕಟ್ಟಿಗೆ ಇಟ್ಟು ಸೀಮೆಣ್ಣೆ ಸುರಿದು ಬೆಂಕಿ ಹಾಕಿದರು. ಹೀಗೇ ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸ್ತಿದ್ದ ಅವ್ರು ಮುಂದುವರಿಸ್ತಾ ಇದ್ರು . . . ಇಡೀ ಎಲುಬು ಹೊತ್ತಿ ಉರಿಯುವವರೆಗೆ ಕಾದು ಕುಳಿತರಂತೆ.ಆಗ ಕೋಳಿ ಕೂಗುವ ಹೊತ್ತಾಗ್ತಾ ಬಂತು.ಬೆಂಕಿಯ ಉರಿಯೂ ಕಡಿಮೆಯಾಗ್ತಾ ಬಂತು.ಈ ಆರೋಪಿಗಳು ಮನೆಗೆ ಹೋಗಿ ಮಲಕ್ಕೊಂಡ್ರು.ಎಲ್ಲಾ ಮುಗೀತು ಅಂತ ನೆಮ್ಮದಿಯಿಂದ 7 ವರ್ಷ ಕಾಲ ಕಳೆದ್ರು.ಯಾವೊಂದು ಪಾಪಪ್ರಜ್ಞೆ ಇಲ್ಲದೆಯೇ.. . .!!!

ಆದರೆ ಕಾಲ ಹಾಗೇ ಉಳಿಯೋದಿಲ್ಲ ಅಲ್ವಾ. . ?. ಕಾಲ ಕೂಡಿಬಂತು ಆರೋಪಿಗಳು ಅತಿಥಿಗಳಾದ್ರು. ಒಳ್ಳೆಯ ಸತ್ಕಾರ ಸ್ವೀಕರಿಸಿದ್ರು.ಕೊನೆಗೂ ಸತ್ಯ ಗೆದ್ದಿತು . . . ರಹಸ್ಯ ಹೊರಬಂತು

09 ಜುಲೈ 2010

ಮಿಸ್-ಕಾಲ್ ಮದುವೆ . . . .!!

.. ಈ ಮದುವೆ ಅನ್ನೋದು ಜನ್ಮಾಂತರದ ಅನುಬಂಧ ಅಂತ ದೇವ್ರರನ್ನ ನಂಬೋ ಜನ ಹೇಳ್ತಾರೆ. ಜನ್ಮಾಂತರದ ಅನುಬಂಧವೂ ಅಲ್ಲ ಏನೂ ಅಲ್ಲ . . . ಅದೊಂದು ಅಚಾನಕ್ ಕ್ರಿಯೆ, ಮನಸ್ಸುಗಳ ಪೂರ್ಣ ಒಪ್ಪಿಗೆ ,.. ಅಂತಾರೆ ದೇವ್ರನ್ನ ನಂಬದೇ ಇರೋ ಜನ.ಅದೇನೇ ಇರ್ಲಿ. ಇಲ್ಲೊಂದು ಮದುವೆ ಪ್ರಸಂಗ ನಡೆದಿದೆ.ಅದು ಮಿಸ್‌ಕಾಲ್ ಮದುವೆ. . .

(ನೆಟ್ ಫೋಟೋ).
. . . ಆತ ಕಾರುಗಳ ತಯಾರಿಕಾ ಕಂಪನಿಯಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್. ಪ್ರತಿದಿನ ಒಂದೊಂದು ಹೊಸ ಕಾರಿನಲ್ಲಿ ತಿರುಗಾಡುತ್ತಾನೆ.ಹೊಸ ಹೊಸ ಕಸ್ಟಮರ್ ಗಳನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಾನೆ.ಹಾಗೇ ದಿನವೂ ಹೊಸ ಕಾರಿನಲ್ಲಿ ಹೋಗುತ್ತಿರುವ ಆ ಚಂದದ ಹುಡುಗನ ನೋಡಿದ ಆ ಕಾಲೇಜಿನ ಹುಡುಗಿ. . ಎಂಥಾ . . ಶ್ರೀಮಂತ ಹುಡುಗ ಆತ . . ! ಅಂತ ಯೋಚ್ನೆ ಮಾಡ್ತಾ . . ಮಾಡ್ತಾ .. ಆತನೊಡನೆ ಅನುರಕ್ತಳಾಗ್ತಾಳೆ. ಆತನ ಸಂಚಾರಿ ದೂರವಾಣಿಯನ್ನು ಪಡೆದುಕೊಳ್ಳುತ್ತಾಳೆ. ಪ್ರತಿದಿನ ಮಿಸ್‌ಕಾಲ್ ಹೊಡೀತಾಳೆ. ಆತನೂ, ಅಬ್ಬಾ ಇವತ್ತೊಂದು ಹೊಸ ಪಾರ್ಟಿ ಸಿಕ್ತು ಅಂತ ಖುಷಿ ಪಡ್ತಾ ರಿಟರ್ನ್ ಕಾಲ್ ಮಾಡ್ತಾನೆ.ಆ ಕಡೆಯಿಂದ ಉತ್ತರವೇ ಇಲ್ಲ. ಛೇ. . ., ಅಂತ ಕಾಲ್ ಕಟ್ ಮಾಡ್ದ. ಮುಂದೆ ಹೋದ. ಯಾವಾಗ್ಲೂ ಅದೇ ನಂಬರ್‌ನಿಂದ ಬ್ಲ್ಯಾಂಕ್ ಕಾಲ್ ಬರ್‍ತಿತ್ತು.ಕೊನೆಗೊಂದು ದಿನ ಆ ಕಡೆಯಿಂದ ಹೆಣ್ಣು ಧ್ವನಿ ಕೇಳಿಸಿತು. ಆ ಧ್ವನಿ ಮತ್ತೆ ಯಾವಾಗ್ಲೂ ಕೇಳ್ತು. ಪ್ರೀತಿ , ಪ್ರೇಮ ಎಲ್ಲವೂ ಆಯ್ತು. ಪ್ರಪೋಸ್ ಕೂಡಾ ಆಯ್ತು.ಮನೆಗೂ ಗೊತ್ತಾಯ್ತು. ಮದುವೆನೂ ಮುಗೀತು. ಎಂಗೇಜ್‌ಮೆಂಟ್ ಆದ್ ಮೇಲೆ ಆಕೆಗೆ ಗೊತ್ತಾಗಿತ್ತು ನನ್ಗೆ ದಾರಿ ತಪ್ಪಿತ್ತು ಅಂತ.ಆದ್ರೆ ಅವ್ಳು ಹೇಳ್ತಾಳೆ.ನಂಗೆ ಇಷ್ಟವಾಯ್ತು ಹಾಗೆ ಮದುವೆ ಆದೆ ಅಂತ ಸುಧಾರಿಸಿ ಕೊಳ್ತಾಳೆ.

ಅದಿರ್ಲಿ. ಅವ್ರವ್ರ ಇಷ್ಟಕ್ಕೆ ಬಿಟ್ಟ ವಿಚಾರ.ಮದುವೆ ಅನ್ನೋದು ಸ್ವಂತ ವಿಚಾರ ಅಲ್ವೇ. .?.ನೋಡಿ ಮೊನ್ನೆ ಮೊನ್ನೆ ಸ್ವಾಮೀಜಿ ಅಂತಿದ್ದವರೇ ಮದ್ವೇ ಆಗಿಲ್ವೇ. .?.ಅದೂ ಅಲ್ಲ , ಅದೇ ಸ್ವಾಮೀಜಿಗೆ ಸಾಷ್ಟಾಂಗ ಬೀಳುತತಿದ್ದವರೇ ಇಂದು ಮನೆ ಮಗಳು ಅಂತ ಹೇಳ್ಲೇಬೇಕಲ್ವಾ. .?.
ಆದ್ರೂ ಒಂದು ವಿಷ್ಯ ಕೆಲವೊಮ್ಮೆ ಮದುವೆ ವಿಚಾರದಲ್ಲಿ ಸತ್ಯ ನುಡಿದ್ರೂ ಆಗಲ್ಲ. ಸುಳ್ಳು ಹೇಳಿ ನಂತ್ರ ಛೇ. . . ಅನ್ಸುಕೊಂಡ್ರೇ ಒಳ್ಳೇದು. ಅಂತಹವ್ರೇ ನಮ್ ಜನಕ್ಕೆ ಇಷ್ಟ ಆಗೋದು ಅಲ್ವಾ. .?.

ನಾವೂ ರಾಂಗ್ ಸೈಡಿಗೆ ಹೋಗ್ತಾ ಇದೀವಿ. ವಿಷ್ಯಕ್ಕೆ ಬರೋಣ.

ಈ ಮೊಬೈಲ್ ಮಿಸ್‌ಕಾಲ್ ಪುರಾಣ ಹೀಗೇ.ಅದೆಷ್ಟೋ ಕತೆಗಳನ್ನು ಜನ ಹೇಳ್ತಾನೇ ಇರ್ತಾರೆ. ಇನ್ಯಾರಿಗೋ ಅಂತ ಫೋನು ಮಾಡೋದು. ಆ ಕಡೆಯಿಂದ ಹೆಣ್ಣು ಧ್ವನಿ ಕೇಳ್ತು ಅಂದ್ರೆ ಮತ್ತೆ ಮತ್ತೆ ಕಾಲ್ ಮಾಡಿ ಆ ಮನಸ್ಸನ್ನು ಟರ್ನ್ ಮಾಡೋಕೆ ಟ್ರೈ ಮಾಡೋ ಉದಾಹರಣೆ ಇದೆ.ಮೊನ್ನೆ ಮೊನ್ನೆ ನಂಗೂ ಒಂದು ಪ್ರಾಬ್ಲಂ ಆಗಿತ್ತು.ಅದ್ಯಾರೋ ನಂಗೆ ಕೆಟ್‌ಕೆಟ್ಟದಾಗಿ ಮೆಸೇಜ್ ಕಳಿಸ್ತಾ ಇದ್ದಾ. ಆ ಕಡೆ ಫೋನು ಮಾಡಿದ್ರೆ ನೋ ಆನ್ಸರ್ . ಆದ್ರೆ “ಮೇಘ” ಸಂದೇಶ ಬರ್ತಾನೇ ಇತ್ತು. ಕಲಿಸ್ತೀನಿ ಅಂತ ಆ ಫೋನು ನಂಬರ್ನ ಎಡ್ರೆಸ್ ಕಲೆಕ್ಟ್ ಮಾಡಿ ನೋಡಿದ್ರೆ , ಮಿಸ್ . . . . ಅಂತ ಇದೆ.ಅದೆಲ್ಲೋ ರಾಜಧಾನಿಯದ್ದಂತೆ. ಇದ್ಯಾಕೆ ಹೀಗೆ ಅಂತ ನೋಡಿದ್ರೆ.. ? ಆ ನಂಬರನ್ನು ಇನ್ಯಾರೋ ಪಡ್ಕೊಂಡು ಈಗ ಕೀಟಲೆ ಮಾಡ್ತಾ ಇದ್ದಾರೆ. ಅವ್ರಿಗೆ ಈಗ ಎಚ್ಚರಿಕೆ ಸಿಕ್ಕಿದೆ. ಮುಂದೇನೋ ನೋಡ್ಬೇಕು. ಆದ್ರೆ ಈ ಮೊಬೈಲ್‌ಗಳು . . ಆ ಸಂದೇಶಗಳು . . ಆ “ಮಿಸ್-ಕಾಲ್” ಗಳು , . . . . ನೋ ಆನ್ಸರ್ ಕಾಲ್‌ಗಳು . . ಅಯ್ಯೋ . . ಎಚ್ರ ಸ್ವಾಮೀ ಎಚ್ಚರ . . ಎನ್‌ಬೇಕಾದ್ರೂ ಆಗ್ಬಹುದು . . . !!!. ನಮ್ “ಕಾಲೇ-ಮಿಸ್” ಆಗ್ಬಹುದು.

04 ಜುಲೈ 2010

ಇವರಿಗೆ ಇಲ್ಲಿ ಮಣ್ಣಿನ ಪಾಠ . . . . .

ಈ ಶಾಲೆ ಅದ್ಯಾಕೋ ಢಿಫರೆಂಟ್ . . ಅಲ್ಲಿ ಆಟ ಪಾಠದ ಜೊತೆಗೆ ಮಣ್ಣಿನ ಪಾಠವೂ ಇದೆ.ಅಲ್ಲಿ ಅನ್ನದಾತನೂ ಟೀಚರ್ ಆಗ್ತಾನೆ.ಮಕ್ಳು, ಅವ್ರ ಶಿಕ್ಷಕರೆಲ್ಲರೂ ಅಂದು ವಿದ್ಯಾರ್ಥಿಗಳಾಗುತ್ತಾರೆ.ನೇಗಿಲಯೋಗಿಯ ಪಾಠ ಕೇಳ್ತಾರೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ - ಕೊಡಗು ಗಡಿಭಾಗದ ಪೆರಾಜೆ ಕುಂಬಳಚೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಎಲ್ಲಾ ಶಾಲೆಗಳಲ್ಲಿ ಆಟ-ಪಾಠಗಳಂತೆ ಇಲ್ಲೂ ಅದರ ಜೊತೆಗೆ ಮಣ್ಣಿನ ಪಾಠವೂ ಇದೆ.ಆದ್ರೆ ಈ ಪಾಠ ಮಾಡುವುದಕ್ಕೆ ಶಿಕ್ಷಕನಾದ್ದು ಮಾತ್ರಾ ನೇಗಿಲಯೋಗಿ. ಬಹುಶ: ಇಡೀ ರಾಜ್ಯದಲ್ಲೇ ಇದೊಂದು ವಿಶೇಷ ಪ್ರಯೋಗ.ಈ ಮಕ್ಕಳಿಗೆ ಇದು ಸ್ಪೆಶಲ್ ಪ್ರಾಕ್ಟಿಕಲ್ ಶಿಬಿರ.ಬೆಳಗಿನಿಂದಲೇ ಶಾಲಾ ಮಕ್ಕಳು ಹೊಲಕ್ಕೆ ಆಗಮಿಸಿ ಭತ್ತದ ಪೈರನ್ನು ನೆಡುವ ಎಲ್ಲಾ ವಿವಿದ ಹಂತಗಳನ್ನು ತಿಳಿದುಕೊಂಡರು.ಇದ್ಯಾಕೆ ಅಂತ ಶಾಲಾ ಶಿಕ್ಷಕರಲ್ಲಿ ಕೇಳಿದ್ರೆ ಮಕ್ಳಿಗೆ ಈ ಮಣ್ಣಿನ ಪಾಠ ಕೂಡಾ ಬೇಕು ಅಂತಾರೆ.ಸ್ಥಳೀಯ ಜನ್ರೂ ಕೂಡಾ ಇದೊಳ್ಳೆಯ ಪಾಠ ಅಂತಾರೆ.ಎಲ್ಲಾ ಕಡೆಯೂ ಇದು ಬೇಕು ಅಂತಾನೂ ಹೇಳ್ತಾರೆ.

ಈ ಮಕ್ಳು ಹೊಲವನ್ನು ಊಳುವ ಟಿಲ್ಲರ್ ಹಿಂದೆಯೇ ಓಡುತ್ತಾ ರೈತನ ಒಡಲಿನಿಂದ ಮಾಹಿತಿ ಪಡೀತಾರೆ.ಹೇಗೆ ಹೊಲವನ್ನು ಹದ ಮಾಡುತ್ತಾರೆ ಅಂತ ಮಳೆಯಲ್ಲೂ ಖುಷಿಯಿಂದ ತಿಳೀತಾರೆ.ಅಷ್ಟಕ್ಕೆ ಮುಗಿದಿಲ್ಲ.ನಾಟಿ ಮಾಡೋದನ್ನೂ ನೋಡ್ತಾರೆ. ನೇಗಿಲಯೋಗಿಯ ಜೊತೆಗೆ ಹೆಜ್ಜೆ ಹಾಕುತ್ತಾ ಗದ್ದೆಯ ಒಳಗಡೆ ಇಳಿದು ಕೆಸರನ್ನು ಮೆತ್ತಿಕೊಂಡು ನಾಟಿನೂ ಮಾಡ್ತಾರೆ.ಅದೂ ಅಲ್ಲ ಪೈರನ್ನು ಕಿತ್ತು ಅದನ್ನು ಮತ್ತೆ ಹೇಗೆ ನಾಟಿ ಮಾಡ್ತಾರೆ ಅಂತನೂ ತಿಳ್ಕೋತಾರೆ ಈ ಶಾಲಾ ಮಕ್ಕಳು.ಇದಿಷ್ಟೇ ಆದ್ರೆ ಪರವಾಗಿಲ್ಲ.ಆ ಗದ್ದೆಯ ಕಿರುದಾದ ಓಣಿಯಲ್ಲಿ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಹೋಗ್ತಾರೆ ಈ ಮಕ್ಳು.ಈ ಎಲ್ಲಾ ತರಬೇತಿ ಮಕ್ಕಳಿಗಂತೂ ಖುಷಿ ನೀಡಿದೆ.ಹಳ್ಳಿ ಮಕ್ಳು ಇವ್ರಾದ್ರೂ ಇದುವರೆಗೆ ಗದ್ದೆಗೆ ಇಳಿಯದ ಈ ಮಕ್ಕಳು ಮೊದಲ ಬಾರಿ ಗದ್ದೆಗೆ ಇಳಿದು ನೇಗಿಲಯೋಗಿಯ ಪಾಠ ಕೇಳಿ ಸಂಭ್ರಮಿಸಿದರು.

ಶಾಲಾ ಮಕ್ಕಳು ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಗದ್ದೆಗೆ ಇಳಿದು ಸಂಭ್ರಮಿಸಿ ನೇಗಿಲಯೋಗಿಯಿಂದ ಮಣ್ಣಿನ ಪಾಠ ಕೇಳಿದ ಮಕ್ಕಳ ಕುರಿತು ರೈತ ಖುಷಿಪಟ್ಟ. ಈ ಮಕ್ಳಾದ್ರೂ ಮಣ್ಣಿನ ಪಾಠ ಕೇಳೋದಿಕ್ಕೆ ಬಂದ್ರಲ್ಲಾ ಅಂತ ನಿಟ್ಟುಸಿರು ಬಿಟ್ಟ.ಯಾಕ್ ಗೊತ್ತಾ. .? ಇವ್ರೆಲ್ಲಾ ಹಳ್ಳಿ ಮಕ್ಳಾದ್ರೂ ಹೊಲ ಎಂದ್ರೇನೂ ಅಂತಾನೇ ಗೊತ್ತಿರೋದೇ ಇಲ್ಲ. ಮಾತ್ರವಲ್ಲ ಇಂದಿನ ಯಾವ ಮಕ್ಳಿಗೂ ಅಕ್ಕಿ ಎಲ್ಲಿ ಬೆಳೆಯುವುದು ಎಂತಾನೇ ಗೊತ್ತಿಲ್ಲದ ಈ ಸಮಯದಲ್ಲಿ ಇದೊಂದು ವಿಶೇಷವಾದ ಪಾಠ.ಭತ್ತ ಬೆಳೆಯುವ ಎಲ್ಲಾ ಹಂತಗಳನ್ನು ಮಕ್ಕಳಿಗೆ ಈ ರೈತ ತಿಳಿಸಿಕೊಟ್ಟ.ಹೀಗಾಗಿ ಇದೊಂದು ಅಪೂರ್ವವಾದ ಕೆಲಸ ಎಲ್ಲಾ ಮಕ್ಳಿಗೂ ಇದೊಂದು ನಿತ್ಯ ಪಾಠವಾಗಲಿ ಅಂತಾನೆ ರೈತ.

ಅಂತೂ ಈಗ್ಲಾದ್ರೂ ಶಾಲಾ ಮಕ್ಳಿಗೆ ಮಣ್ಣಿನ ಪಾಠ ಹೇಳೋದಿಕ್ಕೆ ಮೇಷ್ಟ್ರಾದ್ರೂ ಮುಂದಾದ್ರಲ್ಲಾ ಅನ್ನೋದೇ ಒಂದು ಖುಷಿ.ಇದೇ ದೊಡ್ಡ ಸಾಧನೆ ಅಂತಲ್ಲ.ಇದ್ರಿಂದಲ್ಲೇ ಜಗವೆಲ್ಲಾ ಬದಲಾಗುತ್ತೆ ಅಂತಲ್ಲ.ಅಂತೂ ಮಕ್ಳಿಗೆ ಇಷ್ಟಾದ್ರೂ ತಿಳಿತಲ್ಲಾ ಅನ್ನೋದೇ ಸಮಾಧಾನ. .

03 ಜುಲೈ 2010

ಬಸ್ಸಿನ ಜೊತೆಗೆ ಮೊಬೈಲ್ ಕೂಡಾ ನದಿಗೆ ಬಿತ್ತು. . . . . .!!
ಅಲ್ಲಿ ಸರಕಾರಿ ಬಸ್ಸೊಂದು ನದಿಗೆ ಉರುಳಿ ಬಿತ್ತು.ಒಬ್ಬ ಸತ್ತ , 12 ಮಂದಿಗೆ ಪೆಟ್ಟಾಯ್ತು. ಅದಾದ ಸ್ವಲ್ಪ ಹೊತ್ತಿನ ನಂತ್ರ ಒಂದು ಮೊಬೈಲ್ ಕೂಡಾ ಅಲ್ಲೇ ನದಿಗೆ ಬಿತ್ತು.ಆಗ ಏನು ಟೆನ್ಷನ್ . . ಅಂತೂ ಕೊನೆಗೆ ಮುಳುಗು ತಜ್ಞರು ಬಂದ್ರು . . ನೀರಲ್ಲಿ ಮುಳುಗಿ ಮೊಬೈಲ್ ತಂದ್ರು. . .!!. ಆದ್ರೆ ಬಸ್ಸು ಮಾತ್ರಾ ಅಲ್ಲೇ ಇತ್ತು. . .!!

ಮೊಬೈಲ್ ಅಂದ್ರೆ ಈಗ ಅದೊಂದು ಜೀವವಾಗಿ ಬಿಟ್ಟಿದೆ.ಎಲ್ಲಾದ್ರೂ ಮೊಬೈಲ್ ಬಿಟ್ಟೋಯ್ತು ಅಂದ್ರೆ ಅಂದಿನ ದಿನ ಅದು ದಿನವೇ ಅಲ್ಲ.ಅದೇನೋ ಟೆನ್ಷನ್.ಮೊಬೈಲ್‌ನಿಂದ ಜೀವಕ್ಕೆ ಅದ್ಯಾವ ಹಾನಿ ಆದ್ರೂ ಪರವಾಗಿಲ್ಲ ಮೊಬೈಲ್ ಮಾತ್ರಾ ಬಿಡೋಕೇ ಸಾಧ್ಯವೇ ಆಗಲ್ಲ.ಅದು ಮಾತ್ರವಲ್ಲ ಅದೊಂದು ಮಾಹಿತಿಯ ಕೈಪಿಡಿಯೂ ಹೌದು.ಅದೊಂದು ಕಳೆದೋಯ್ತು ಅಂತಂದ್ರೆ ಎಷ್ಟೋ ಜನ್ರ ಸಂಪರ್ಕವೇ ಕಡಿದು ಹೋದಂತೆ.ಬೇರೇನಾದ್ರೂ ಕಳೆದುಹೋದ್ರೂ ಚಿಂತೆ ಇಲ್ಲ. ಮೊಬೈಲ್ ಮಾತ್ರಾ ಕಳೆದುಹೋಗಬಾರ್‍ದು . .

ಅಂದು ಮುಂಜಾನೆ ಉಪ್ಪಿನಂಗಡಿ ಬಳಿ ಬಸ್ಸೊಂದು ಸೇತುವೆ ಕೆಳಗೆ ಉರುಳಿ ಬಿತ್ತು.ನಾನಾಗ ಅಲ್ಲಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿದ್ದೆ.ಆದ್ರೂ ಸುದ್ದಿಗೆ ಬೇಕಾದ ವ್ಯವಸ್ಥೆ ಮಾಡಿಕೊಂಡು ಸುಮಾರು 9 ಗಂಟೆ ಹೊತ್ತಿಗೆ ನಾವು ಸ್ಪಾಟ್‌ನಲ್ಲಿದ್ದೆವು.ಆಗ್ಲೇ ಜನ ಜಮಾಯಿಸಿ ಎಲ್ರೂ ಬಸ್ಸು ಬಿದ್ದದ್ದನ್ನು ನೋಡ್ತಲೇ ಇದ್ರು.ಆದ್ರೆ ಎಚ್ಚರಿಕೆಯೂ ಅಷ್ಟೇ ಬೇಕಿತ್ತು.ಕೆಳಗೆ ಬಿದ್ರೆ ನದಿ. . ಹಾಗೇ ನಾವು ಕೂಡಾ ಅಲ್ಲಿ ನೋಡ್ತಾ ಇದ್ದಾಗ ಶರ್ಟ್‌ನ ಎದುರು ಪೋಕೆಟ್‌ನಲ್ಲಿದ್ದ ಮೊಬೈಲ್ ಕೂಡಾ ಬಸ್ಸಿನ ಹಾದಿ ಹಿಡಿಯಿತು.ಎಲ್ಲೋಯ್ತು ಗೊತ್ತಿಲ್ಲ. . .!. ಹತ್ತಿರದಲ್ಲಿದ್ದವರಿಗೆ ಹೇಳಿದೆ.ಒಂದಿಬ್ರು ಹೇಳಿದ್ರು ಅದು ಇನ್ನು ಸಿಗೋದಿಲ್ಲ ನದಿಯಲ್ಲಿ ಕೊಚ್ಚಿ ಹೋಯ್ತು ಅಂತ. ಏನು ಮಾಡೋದು .. . . ? ಏನು ಮಾಡೋದು. . .?. ಅಂತ ಚಿಂತೆ ಆರಂಭವಾಯ್ತು.ಆಗ ತಾನೆ ಪರಿಚಯವಾದರೊಬ್ರು ನಾನ್ ನೋಡ್ತನಿ ಅಂತ ಜಾರೋ ಕಲ್ಲಿನ ಮೇಲಿನಿಂದ ಇಳಿದು ಮೊಬೈಲ್ ಬ್ಯಾಟರಿ ಇದೆ ಅಂತ ಹೇಳಿ ತಂದು ಕೊಟ್ರು. ಅದಲ್ಲ ನಂಗೆ ಮೊಬೈಲ್ ಸಿಗದಿದ್ರೂ ಪರವಾಗಿಲ್ಲ ಸಿಮ್ ಸಿಗ್ಲಿ ಅಂದೆ. . ಏನ್ ಮಾಡೋದು, ಅದು ನೀರಲ್ಲಿ ಕೊಚ್ಚಿ ಹೋಗಿದೆ ಅಂತ ಆತ ಹೇಳ್ದ. . ಛೇ .. ಛೇ ಅಂತ ಅಲ್ಲಿದ್ದವರೆಲ್ಲಾ ನನ್ನೊಂದಿಗೆ ಗೊಣಗ್ತಾ ಇದ್ರೂ.ಸ್ವಲ್ಪ ಸಮಯದ ನಂತ್ರ ನಂಗೆ ಟೆನ್ಷನ್ ಇನ್ನು ಹೆಚ್ಚಿತು.ಯಾಕ್ ಗೊತ್ತಾ ಆ ಮೊಬೈಲ್‌ನಲ್ಲಿ ಇಂಪೋರ‍ಟೆಂಟ್ 500 ಕಾಂಟಾಕ್ಟ್ ನಂಬರ್‌ಗಳಿತ್ತು.ಹಾಗಾಗಿ ನಂಗೆ ಇನ್ನಷ್ಟು ಟೆನ್ಷನ್ ಆಗುತ್ತಲೇ ಇತ್ತು.ಆಗ ಬಸ್ ಬಿದ್ದ ಅದೇ ಸ್ಥಳ್ಕಕೆ ಎಂಪಿ ಬಂದರು. . ನನ್ನ ಮೊಬೈಲ್ ಟೆನ್ಷನ್ ಜೊತೆ ಎಂಪಿ ಬಂದ ಸುದ್ದಿಯೂ ಮುಖ್ಯವಾಗಿತ್ತು.ಆ ಟೆನ್ಷನ್ ನಡುವೆಯೇ ಎಂಪಿ ಯವರೊಂದಿಗೆ ಮಾತುಕತೆ ಮಾಡುತ್ತಿದ್ದಂತೆಯೇ ಒಬ್ಬ ಬಂದು ಹೇಳಿದ ಮೊಬೈಲ್ ಸಿಕ್ಕಿತು ಅಂತ. ಅಬ್ಬಾ. . ಅಂತ ನಿಟ್ಟುಸಿರು ಬಿಟ್ಟೆ. ನಂತರ ಆತ ಹೇಳಿದ ನಾನು ನದಿಯ ಆ ಕಡೆಯಾಗಿ ಹೋಗಿ ನೀರಲ್ಲಿ ಮುಳುಗಿ ನೋಡಿದಾಗ ಬಸ್ಸಿನ ಎದುರು ಭಾಗದಲ್ಲಿ ಮೊಬೈಲ್ ಇತ್ತು ಅಂದ. ಓಹೋ. . ಥ್ಯಾಂಕ್ಸ್ ಎಂದವರೇ ಅಲ್ಲಿಂದ ಮೊಬೈಲ್ ಸಹಿತ ಬಂದೆ.ಆದ್ರೆ ಆನ್ ಮಾಡುವ ಹಾಗಿಲ್ಲ.ಸಿಮ್ ತೆಗೆದು ಇಷ್ಟಾದ್ರೂ ಸಿಕ್ತಲ್ಲಾ ಅಂತ ಬಂದು ಮೊಬೈಲ್ ಬಿಸಿ ಮಾಡಿದಾಗ ಅಬ್ಬಾ. . . ಪುಣ್ಯ, ಮೊಬೈಲ್ ಆನ್ ಆಗುತ್ತೆ. ಕಾಂಟಾಕ್ಟ್ ನಂಬರ್ರುಗಳೂ ಇವೆ. ಆದ್ರೆ ಪ್ಯಾನೆಲ್ ಹುಡಿಯಾಗಿದೆ.ಪರವಾಗಿಲ್ಲ.ಇಷ್ಟಾದ್ರೂ ಸಿಕ್ತಲ್ಲ. ಆ ಪುಣ್ಯಾತ್ಮರಿಗೆ ಆಭಾರಿ ಅಂತ ಅವರ ನೆನೆ ನೆನೆದು ಕೃತಜ್ಞತೆ ಸಲ್ಲಿಸಿದೆ.

ಅಲ್ಲಾ ನಂಗೆ ಅನ್ನಿಸಿದ್ದು ಮೊಬೈಲ್ ಅಂದ್ರೆ ಇಷ್ಟು ಟೆನ್ಷನ್ ಅಲ್ವಾ. . .?.ಅದು ಇದ್ರೆ ಎಲ್ಲವೂ ಇದೆ.. ಇಲ್ಲಾಂದ್ರೆ ಏನೂ ಇಲ್ಲ ಅನ್ನೋ ಮಟ್ಟದಲ್ಲಿ ನಾವಿದ್ದೀವಾ ಅಂತ..?.ಆವತ್ತೊಂದು ದಿನ ಇತ್ತಲ್ಲಾ ಮೊಬೈಲ್ ಇಲ್ದೇ ಇದ್ದ ಆ ಕಾಲದಲ್ಲಿ ಜನ ಏನು ಮಾಡ್ತಾ ಇದ್ರು..?.ಇಗ್ಯಾಕೆ ಎಲ್ಲದಕ್ಕೂ ಮೊಬೈಲೇ ಆಶ್ರಯ..?.ಇದ್ಕೆಲ್ಲಾ ಉತ್ತರ ಇಲ್ವೇ ಇಲ್ಲ ಅಲ್ವೇ. .?. ಅದೆಲ್ಲಾ ಬಿಡಿ ಮೊಬೈಲ್ ಹೆಚ್ಚಾಗಿ ಯೂಸ್ ಮಾಡಿದ್ರೆ ದೇಹಕ್ಕೆ ಹಾಳು, ಆರೋಗ್ಯ ಕೆಡುತ್ತೆ ಅಂತ ಡಾಕ್ಟ್ರು ಹೇಳಿದ್ರೂ ನಾವ್ ಮೊಬೈಲ್ ಬಿಡ್ತೀವಾ ಹೇಳಿ. . . ಹಾಗಿದ್ರೆ ಆ ಮೊಬೈಲ್ ಅಂದ್ರೆ ಅದು ಇನ್ನೊಂದು ಹೆಂಡ್ತಿ ಅಂತ ಕರೀಬಹುದಾ. . .??.