17 ಫೆಬ್ರವರಿ 2010

ಆ ತಲ್ಲಣಗಳಿಗೆ ಉತ್ತರ ಹುಡುಕುತ್ತಾ . . . .
ಅಲ್ವೇನೋ. . ನೀನ್ಯಾಕೆ ಹಿಂಗೆ ಯೋಚಿಸ್ತಾ ಇದೀಯಾ.?. ನೀನೇ ಹೇಳಿದಂತೆ ಬದುಕಲ್ಲಿ ಸಂತಸ ಕಾಣೋ ಬದಲು ಇದ್ಯಾಕೆ ಚಿಂತೆಯಲ್ಲೇ ಕಾಲ ಕಳೀತೀಯಾ..? ಅಂತ ಆತ ಪದೆ ಪದೇ ಕೇಳುತ್ತಿದ್ದುದು ಮಿತ್ರನ ಕಿವಿಗೆ ಬಿತ್ತು.....

ಆತ ಮತ್ತೆ ಹೇಳಿದ,ಅಲ್ಲ ಕಣೋ ... ನೀನೇನೋ ನಗರದ ಒಳಗೆ ಅದ್ಯಾವುದೋ ಕಂಪನಿಯ ಒಳಗಡೆ “ಎಸಿ” ಕಚೇರಿಗೆ ಬೆಳಗ್ಗೆ ಶಾರ್ಪ್ 10 ಗಂಟೆಗೆ ಬರುತ್ತಿ, ಕೆಲ್ಸ ಮುಗಿಸಿ ಅದೇ ಸರಿಯಾದ ಟೈಮಿಗೆ ಮನೆಗೆ ಬರುತ್ತಿ... ಇಲ್ಲಾಂದ್ರೆ ಶಿಪ್ಟ್‌ಲ್ಲಿ ಕೆಲ್ಸ ಮಾಡ್ತಿದ್ದೀಯ.. ತಿಂಗಳ ಎಂಡ್‌ಗೆ ಸಂಬ್ಳನೂ ನಿನ್ನ ಎಕೌಂಟ್‌ಗೆ ಬಂದು ಬೀಳುತ್ತೆ ಇನ್ನೇನು ಖರ್ಚು ಮಾಡು.. ಮಜಾ ಮಾಡು...!!.

ನಾವೆಲ್ಲಾ ಹೀಂಗೆ ಖುಷಿಯಲ್ಲಿ ಕಾಲ ಕಳೀಬೇಕಾದ್ರೆ ನನ್ನ ಫ್ರೆಂಡ್ ಮೊನ್ನೆ ಒಂದು ಕತೆ ಹೇಳ್ತಾ ಇದ್ದ. ಅದನ್ನ ಕೇಳಿದ್ಮೇಲೆ ನಂಗೆ ಈ “ಪ್ರಪಂಚ”ದ ಸ್ಥಿತಿ ಬಗ್ಗೆ ಯೋಚಿಸ್ತಾ ಇದ್ದೆ..

ಹಾ..! ಅದಿರಲಿ ನನ್ ಫ್ರೆಂಡ್ ಹೇಳಿದ ಕತೇನಾ ಕೇಳು . . .,

ಅದೊಂದು ಕುಗ್ರಾಮ.... ಪ್ರಮುಖ ನಗರ ಬಿಟ್ಟು ಒಂದು ಹಳ್ಳಿ ಕಡೆಗೆ ಹೋಗಬೇಕಾದರೆ ಸುಮಾರು ಅರ್ಧಗಂಟೆ ಬೇಕು.ಅಲ್ಲಿವರೆಗೆ ಬೇಕಾದಷ್ಟು ವಾಹನ ವ್ಯವಸ್ಥೆ ಇದೆ.ಅಲ್ಲಿಂದ ನಂತರವೂ ವಾಹನ ಇದೆ... ಆದ್ರೆ ಅದು ವಾರಕ್ಕೊಮ್ಮೆ ಮಾತ್ರಾ..!!. ಪ್ರತೀ ವಾರದ ಶನಿವಾರ ಆ ಕುಗ್ರಾಮದಿಂದ ಈ ಚಿಕ್ಕಹಳ್ಳಿ ಊರಿಗೆ ವಾಹನ ಬರುತ್ತದೆ. ಊರಿನ ಜನ ಒದ್ದಾಡಿಕೊಂಡು ಆ ವಾಹನ ಏರಿ ಹಳ್ಳಿ ಊರಿಗೆ ಬರಬೇಕು.ಒಂದು ವೇಳೆ ತಾಲೂಕು ಕೇಂದ್ರಕ್ಕೆ ಹೋದರೆ ದೇವರೇ ಗತಿ.ಸಂಜೆಯಾದ್ರಂತೂ ವಾಹನದ ವ್ಯವಸ್ಥೆನೇ ಇಲ್ಲ.ಅಷ್ಟಕ್ಕೂ ಈ ಹಳ್ಳಿ‌ಊರಿನಿಂದ ಆ ಕುಗ್ರಾಮಕ್ಕೆ ಹೋಗಲು ವಾಹನಕ್ಕೆ ಕನಿಷ್ಠ 1 ಗಂಟೆ ಬೇಕು. ಸರಿ ಆ ಒಂದು ಗಂಟೆಯಲ್ಲಿ ಆ ಕುಗ್ರಾಮ ತಲುಪಿ ಬಿಟ್ಟಿತು ಎಂದು ಆಲೋಚಿಸಬೇಡಿ ಅಲ್ಲಿಂದ ಇನ್ನೂ ಒಂದು ಗಂಟೆ ಕಾಲ್ನಡಿಗೆಯಲ್ಲಿ ಸಾಗಬೇಕು.ಅದೂ ತೀರಾ ಏರುಹಾದಿ..!!. ಹಾಗೆ ಮನೆಗೆ ತಲುಪಿದರೆ ಅಬ್ಬಾ...!!.. ಉಸ್ಸಪ್ಪ..!!. ಅಂತೂ ನಗರದ ಜನಕ್ಕೆ ಒಮ್ಮೆ ಈ ಊರಿಗೆ ಹೋದ್ರೆ ಟ್ರಕ್ಕಿಂಗ್. . .!!. ಆದ್ರೆ ಈ ಜನಕ್ಕೆ ಪ್ರತಿ ದಿನ... ಪ್ರತೀ ಕ್ಷಣವೂ ಅದೇ ಬದುಕು.... ಅದೇ ಜೀವನ....!!.


ಅಂತೂ ಇದೆಲ್ಲಾ ಬಿಡಿ. ಇಲ್ಲಿ ವ್ಯವಸ್ಥೆನಾದ್ರೂ ಇದಿಯಾ..? ಅಂತ ನೋಡಿದ್ರೆ ಏನೇನೂ ಇಲ್ಲ.ಫಲವತ್ತಾದ ಕೃಷಿ . .. ಸ್ವಚ್ಚವಾದ ಗಾಳಿ . . , ಶುದ್ದವಾದ ನೀರು . . ಪ್ರೀತಿಯ ಮನಸ್ಸು . . ಇದು ಬಿಟ್ಟರೆ ಮತ್ತೇನೂ ಅಲ್ಲಿಲ್ಲ.ಕರೆಂಟ್ ಅಂದ್ರೇನೂ ಅಂತನೇ ಇವ್ರಿಗೆ ಗೊತ್ತಿಲ್ಲ. ಮೊಬೈಲ್ ಮಾತ್ರಾ ಸಿಗುತ್ತೆ.. ಸೋಲಾರ್ ಇದಕ್ಕೆ ಬ್ಯಾಟರಿ ತುಂಬಿಸುತ್ತೆ.ಅಲ್ಲಿನ ಮನೆಯಾತ ಹೇಳುತ್ತಾನೆ,.. ವಾರಕ್ಕೊಮ್ಮೆ ನಮ್ಮ ಹತ್ತಿರದ ಹಳ್ಳಿಗೆ ಹೋಗುತ್ತೇವೆ. ಬೇಕಾದ್ರೆ ನಮ್ ತಾಲೂಕು ಕೇಂದ್ರಕ್ಕೆ ತಿಂಗಳಿಗೊಮ್ಮೆ ಹೋಗ್ತೇವೆ... ಹಾಗಿದ್ರೆ ಅಸೌಖ್ಯವಾದ್ರೆ ಏನು ಮಾಡ್ತೀರಿ ಅಂತಹ ಕೇಳಿದಾಕ್ಷಣ, ಆತ ಹೇಳ್ತಾನೆ ನಮ್ಗೆ ಇದೂವರೆಗೂ ಅಂತಹ ಯಾವುದೇ ರೋಗಾನೂ ಬಂದಿಲ್ಲ, ಸೀರಿಯಸ್ ಕೇಸೂ ಇಲ್ಲ ಅಂತಾನೆ. ದೇವ್ರ ದಯದಿಂದ ಇಲ್ಲಿರೋ ಯಾರಿಗೂ ರೋಗಾನೂ ಇಲ್ಲ ಅನ್ನುವ ಆತ, ಅದಿರಲಿ ಈ ನಿಮ್ಮ ಲೋಕದಲ್ಲಿ ಎಷ್ಟು ಕುಟುಂಬವಿದೆ ಅಂತ ಕೇಳಿದ್ರೆ , 40 ಕುಟುಂಬಗಳಿವೆ ಎಂದು ವಿವರಿಸ್ತಾ ಇದು ನಮ್ ಬದುಕಿನ ಸ್ಥೂಲ ಪರಿಚಯ ಎನ್ನುವಾಗ ಆತನ ಮುಖದಲ್ಲಿ ಅದೇನೋ ಒಂದು ಅವ್ಯಕ್ತವಾದ ಭಾವ ಕಾಣಿಸುತ್ತಿತ್ತು... , ಎನ್ನುತ್ತಾ ವಿವರಿಸುತ್ತಾನೆ ನನ್ ಮಿತ್ರ.

ಅದಿರಲಿ ಈ ಊರು ಯಾವುದು ಅಂತ ನಾವು ಕೇಳ್ಬಹುದಾ. . .? ಅದೇರೀ ಇದೂ ಒಂದು ಕಾಡೋಳಗಿರುವ ಊರು.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಎಂಬ ಊರು.ಈ ಜನರೆಲ್ಲಾ ಈ ಊರಿನ ಕುದುರೆಮುಖ ಉದ್ಯಾನವನದೊಳಗೆ ಇದಾರೆ.

ಈ ಕತೆ ಕೇಳುತ್ತಿದ್ದಾಗ ,

ಆ ಜನ ಇಷ್ಟೂ ವರ್ಷಗಳಿಂದ ಅಲ್ಲಿ ಬದುಕುತ್ತಾ ಇದಾರಲ್ಲ ಅವರನ್ಯಾಕೆ ಸರಕಾರ ಈ ಕಡೆ ತಂದಿಲ್ಲ , ಆ ಊರನ್ನು ಯಾಕೆ ಅಭಿವೃದ್ದಿ ಮಾಡಿಲ್ಲ. . . . . ಹೀಗೆ .... ಮೊದಲಾದ .. ಅವರೊಳಗಿನ ತಲ್ಲಣಗಳಿಗೆ ಉತ್ತರ ಹುಡುಕುತ್ತಾ ಸಾಗುತ್ತಿದ್ದಾಗ , ನಮ್ಮೊಳಗೆ ಒಂದು ಚರ್ಚೆ ನಡೆದಿತ್ತು.ಅಲ್ಲಾರೀ ಅಷ್ಟೂ ವರ್ಷಗಳಿಂದ ಅಲ್ಲೇ ಬದುಕು ಸಾಗಿಸುವ ಮಂದಿಗೆ ಆ ಬದುಕು ಇಷ್ಟವಾಗಿದೆ.ಹಾಗಾಗಿ ಅವರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಏಕಾ‌ಏಕಿ ವರ್ಗಾಯಿಸುವುದು ಅಷ್ಟು ಸುಲಭವಲ್ಲ. ಅಭಿವೃದ್ದಿ ಮಾಡುವುದೂ ಕೂಡಾ ಸರಕಾರಕ್ಕೆ ಆಗದ ಕೆಲಸ.ಆದ್ರೆ ಅದೊಂದು ಸ್ಲೋ ಪ್ರೋಸೆಸ್.. ಅವರ ಮಕ್ಕಳನ್ನು ಈ ಕಡೆ ತರಬೇಕು.ಅವ್ರಿಗೊಂದು ವ್ಯವಸ್ಥೆ ಕಲ್ಪಿಸಬೇಕು ಆಗ ಮಾತ್ರಾ ಆ ಜನರ ಬದುಕಿಗೆ ನಿಜವಾದ ಅರ್ಥ ಸಿಗಬಹುದೇನೋ . . .??. ಆದರೂ ಒಂದು ಪ್ರಶ್ನೆ ಅವ್ರಿಗೆ ಅಲ್ಲೇ ನೆಮ್ಮದಿ ಸಿಗುವದಾದ್ರೆ ಇದೆಲ್ಲಾ ಯಾಕೆ..?. ನೆಮ್ಮದಿ ಅನ್ನೋ ಪದಕ್ಕೆ ಏನು ವ್ಯಾಖ್ಯಾನ..?. ನೆಮ್ಮದಿಯಾಗಿರಲು ಏನು ಬೇಕು....?? ಬದುಕು ಅನ್ನುವುದು ಏನು..? ಹೀಗೇ ವಿವಿದ ಪ್ರಶ್ನೆಗಳು ಚರ್ಚೆಯಲ್ಲಿ ಆಗಾಗ ಬರುತ್ತಲೇ ಇತ್ತು.ಆದ್ರೆ ಸದ್ಯಕ್ಕೆ ಅದಕ್ಕೆಲ್ಲಾ ಉತ್ತರ ಹುಡುಕಿ ತರುವ ಪ್ರಯತ್ನ ಮಾಡದೆ ಚರ್ಚೆಗೆ ಸದ್ಯಕ್ಕೆ ವಿರಾಮ ಹಾಕಲಾಗಿತ್ತು.

ಹೇಗಿತ್ತು ಫ್ರಂಡ್ ನನ್ನ ಕತೆ . . . ಈ ಕತೆನಾ ಹೇಳ್ಬೇಕು ಅಂತಾ ನಾನು ಮೊನ್ನೆಯಿಂದ ಯೋಚ್ನೆ ಮಾಡ್ತಾ ಇದ್ದೆ. ಆ ಚರ್ಚೆಯಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರ ನಾನಿಂದು ಯೋಚಿಸ್ತಿದ್ದೆ , ಆದರೆ ನೀನೇ ಕೇಳಿದೆ ಅಲ್ವಾ , ಹಾಗಾಗಿ ಅದನ್ನು ನಿನ್ ಮುಂದೆ ಹೇಳಿಕೊಂಡೆ.ನಿನ್ಗೇನಾದ್ರೂ ಆ ಚರ್ಚೆಗೆ ಉತ್ತರ ಸಿಕ್ರೆ ಹೇಳ್ತಿಯಾ.....??..