14 ನವೆಂಬರ್ 2009

ಬದುಕೇ ಇವರಿಗೆ ಉತ್ಸಾಹ . . . .13 ನೇ ವರ್ಷದಲ್ಲಿ ಕಣ್ಣು ಮಸುಕಾಗಿದೆ, 14 ನೇ ವರ್ಷವಾಗುತ್ತಿದ್ದಂತೆಯೇ ಹೊರಜಗತ್ತು ಕಾಣುವುದಿಲ್ಲ.. ಸೂರ್ಯನ ಬೆಳಕೂ ಕಾಣುವುದಿಲ್ಲ..ಬದುಕೆ ಅಂಧಕಾರ.. ಎಂದು ನಾವೆಲ್ಲಾ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸುತ್ತೇವೆ. ಆದರೆ ಇಲ್ಲೊಬ್ಬರನ್ನು ನಾನು ಇಂದು ಬೇಟಿಯಾಗಿದ್ದೆ. ಅವರಿಗೆ ಬದುಕು ಆರಂಭವಾಗಿದ್ದೇ 13 ವರ್ಷದಿಂದ..!!. ಹೌದು ಅವರು ನಿಜಕ್ಕೂ ಎಲ್ಲರಿಗೂ ಮಾದರಿ.. ಎಲ್ಲರಿಗೂ ಆತ್ಮವಿಶ್ವಾಸವನ್ನು ತುಂಬುತ್ತಾರೆ....

ಅದು ಕುಕ್ಕೆ ಸುಬ್ರಹ್ಮಣ್ಯದಿಂದ ಆರಂಭವಾಗುವ ಮ್ಯಾರಾಥಾನ್ ಓಟ. ಎಲ್ಲರೂ ಇದು ಸಾಮಾನ್ಯ ಅಂತ ಮಾತನಾಡಿಕೊಳ್ಳುತ್ತಿದ್ದರು.ನಾವು ಕೂಡಾ ಅದೇ ಮೂಡ್‌ನಲ್ಲಿದ್ದರೆ ಅಲ್ಲೊಬ್ಬರು ಬಂದರು. ಕಣ್ಣು ಕಾಣಿಸುವುದಿಲ್ಲ , ಅವರ ವಯಸ್ಸು 53. ಅವರ ಬನಿಯನ್‌ನಲ್ಲಿ ನಾಮ ಫಲಕ , ಕ್ರಮಸಂಖ್ಯೆಯೂ ಕಾಣುತ್ತಿರುವಾಗಲೇ ಅವರೊಬ್ಬ ಓಟಗಾರ ಎಂದು ಸಾರಿ ಹೇಳಿತ್ತು.ವಿಚಾರಿಸಿದಾಗ ಅವರು ಮುಂಬಯಿಯ ಅಮರೀಂದರ್ ಸಿಂಗ್ ಎಂಬುದು ಗೊತ್ತಾಯಿತು. ಈಗ ಅವರು 21 ಕಿಲೋ ಮೀಟರ್ ದೂರ ಮ್ಯಾರಾಥಾನ್ ಓಟಕ್ಕೆ ಸಿದ್ದವಾಗಿ ಬಂದಿದ್ದಾರೆ.ನಿಜಕ್ಕೂ ಅಚ್ಚರಿ ಅವರ ವಯೋಮಾನದ ಪ್ರಕಾರ ಅವರು 5ಕಿಲೋಮೀಟರ್ ಓಡಬೇಕಾಗಿತ್ತು.ಆದರೆ ಅವರು ತೆಗೆದುಕೊಂಡ ಸವಾಲು 21 ಕಿಲೋ ಮೀಟರ್ ಅಂದರೆ 30 ವಯೋಮಾನಕ್ಕೆ ಸರಿಸಾಟಿ. ಎಲ್ಲರೂ ಮಾತನಾಡಿದ್ದು ಅವರು ಪೂರ್ತಿಗೊಳಿಸಿಯಾರೇ..?. ಆಧರೆ ಈ ಅಂಧನಿಗೊಬ್ಬ ಜೊತೆಗಾರನಿರುತ್ತಾರೆ.ಅವರು ಒಂದು ಕೋಲನ್ನು ಸಮಾನಾಂತಾರವಾಗಿ ಹಿಡಿದುಕೊಂಡು ಓಡುತ್ತಾರೆ.ಹೀಗೆ ಜೊತೆಗಾರನೊಂದಿಗೆ ಓಡಿದ ಅಮರೀಂದರ್ ಸಿಂಗ್ ಬಹುಮಾನ ಗೆಲ್ಲಲಿಲ್ಲ. ಆದರೆ ಸವಾಲನ್ನು ಗೆದ್ದಿದ್ದಾರೆ.ಒಂದೆಡೆ ಬಿದ್ದು ಎದ್ದು ಸುಧಾರಿಸಕೊಂಡು ಓಡಿದ ಅಮರೀಂದರ್ ಸಿಂಗ್ ಈ ಹಿಂದೆಯೂ ಹೀಗೇ ಓಡಿದ್ದಾರೆ. ಹಿಮಾಲಯ ಏರಿದ ಮೊದಲ ಅಂಧ ಎಂಬ ಖ್ಯಾತಿಯೂ ಇವರಿಗಿದೆ. ಅದರಾಚೆಗೆ ಹೋದರೆ ಈಜಿನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದಾರೆ.

ಹೀಗೆ ಸಾಧನೆಗಳ ಮೇಲೆ ಸಾಧನೆಯನ್ನು ಮಾಡಿರುವ ಅಮರೀಂದರ್ ಸಿಂಗ್ ಬೆಳಕು ಕಾಣುವ ಜನರಿಗೂ ಮಾದರಿಯಾಗಿದ್ದಾರೆ.ಇಷ್ಟು ವರ್ಷ ಕಂಡ ಬೆಳಕಿಗಿಂತ ಅಮರೀಂದರ್ ಹರಿಸಿದ ಬೆಳಕು ಇಂದು ಹೆಚ್ಚು ಪ್ರಖರವಾಗಿತ್ತು.ನಮಗೆಲ್ಲಾ ಕತ್ತಲಿನಿಂದ ಹೊರಬರುವಂತೆ ಮಾಡಿತ್ತು.