27 ಜುಲೈ 2009

ಬಂದೇ ಬರುತಾನ ಅವ..ಅಂದು ಸಂಜೆಯಿಂದ ಇಡೀ ಸಂಚಲನ... ಸಚಿನ್ ಬರ್ತಾರಾ.... ಸಚಿನ್ ತೆಂಡೂಲ್ಕರ್ ಬರ್ತಾರಾ..ಅಂತ ಫೋನಿನ ಮೇಲೆ ಫೋನು.. ನಂಗೂ ಅದೇ ಕೆಲ್ಸ ಅಲ್ಲಿ - ಇಲ್ಲಿ ಫೋನ್ ಮಾಡಿ ಮಾಹಿತಿ ಸಂಗ್ರಹಿಸುವುದೇ ಕೆಲಸವಾಗಿತ್ತು. ಅಂತೂ ರಾತ್ರಿ ೧೧ ರ ವರೆಗ ಅದೇ ಕೆಲಸ. ಏಕೆಂದರೆ ... ಅವರು.. ಇವರು.. ಆಗಲೇ ಸುಬ್ರಹ್ಮಣ್ಯ ತಲಪಿಯಾಗಿತ್ತು. ಆಧರೆ ಕೊನೆಯ ಮಾಹಿತಿಯೊಂದು ಸಿಕ್ಕಿತ್ತು. ಅದೆಲ್ಲಾ ಸುಳ್ಳೇ... ಸುಳ್ಳು ಅಂತ. ಆದರೂ ಒಂದು ಸಂಶಯ...

ಬೆಳಗ್ಗೆ 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಡಬೇಕು ಅಂದು ಕೊಂಡವನಿಗೆ ಎಚ್ಚರವಾದ್ದೇ 6 ಗಂಟೆಗೆ. ಏಕೆಂದರೆ ಮುಂಜಾನೆ 4 ಗಂಟೆಗೆ ಅದೇ ವಿಚಾರದಲ್ಲಿ ಬಂದ ಮಿತ್ರನ ಕರೆಯನ್ನು ಸ್ವೀಕರಿಸಿ ಮಲಗಿದ ಕಾರಣ ಎಚ್ಚರವಾಗುವಾಗ ತಡವಾಗಿತ್ತು. ಅಂತೂ 6.30 ಕ್ಕೆ ಕುಕ್ಕೆಗೆ ಹೊರಟು ವೇಗದಲ್ಲಿ ಸಾಗಿ 6.45 ಕ್ಕೆ ತಲಪಿಯಾಗಿತ್ತು. ಅಲ್ಲಿ ಅದಾಗಲೇ ಒಂದಷ್ಟು ಜನ ಮಿತ್ರರು ಸೇರಿದ್ದರು. ಕಾಯುತ್ತಾ ಕುಳಿತಿದ್ದರು. ಯಾರಿಗೆ ...? ಅದೇ ಸಚಿನ್‌ಗೆ..!!!. ಸರಿ ಎಲ್ಲರೂ ಅವರವರ ಕತೆ ಹೇಳುತ್ತಿದ್ದರು.. ಬೆಳಗ್ಗೆ 3 ಗಂಟೆಗೆ ಎದ್ದು ಹೊರಟವರಿದ್ದರು ಅಲ್ಲಿ...!!! . ಕಾಫಿ ತಿಂಡಿಯಾಗದವರೂ ಇದ್ದರು.. ಎಲ್ಲರೂ ದೇವಸ್ಥಾನದ ಗೋಪುರದ ಎದುರು ಕುಳಿತದ್ದೇ ಕುಳಿತದ್ದು... ಕುಕ್ಕೆಯಲ್ಲಿರುವ ಪರಿಚಯದವರೆಲ್ಲಾ ಏನು ಎಲ್ಲಾ ಇದ್ದೀರಿ ಅಂಥ ಸಣ್ಣಗೆ ಕೇಳುತ್ತಿದ್ದರು. ಹಾಗೆ 8 ಕಳೆಯಿತು... ಒಂದು ಕಾರು ಬಂದರೂ ಎಲ್ಲರ ಕ್ಯಾಮಾರ ರೆಡಿಯಾಗುತ್ತಿತ್ತು... ಎಲ್ಲರೂ ಎಲರ್ಟ್...!!. ಅಂತೂ ಗಂಟೆ 9 ಕಳೆಯಿತು... ಸುದ್ದಿಯಿಲ್ಲ.. ಸ್ಪಷ್ಟ ಮಾಹಿತಿಯೂ ಇಲ್ಲ..!! ಆದರೂ ಕುಳಿತಿತು... ಒಬ್ಬೊಬ್ಬರು ಒಂದೊಂದು ಅಭಿಪ್ರಾಯಕ್ಕೆ ಬರತೊಡಗಿದರು.. 9.15 ರ ನಂತರ ಇನ್ನು ಹೋಗೋಣ ಅಂತ ಮಾತನಾಡಲು ತೊಡಗಿದರು.. ಆಧ್ರೆ ಯಾರೂ ಕದಲುವುದಿಲ್ಲ.. ಏಕೆಂದರೆ ಎಲ್ಲಾದರೂ ಆತ ಬಂದರೆ...!!!.. ಸರಿ 9.30 ಕ್ಕೆ ದೇವಸ್ಥಾನದ ಒಳಗೆ ಹೋಗಿ ಪೂಜೆಯ ಚಿತ್ರ ತೆಗೆದು ಹೊರಬಂದು ಎಲ್ಲರೂ ಹಿಂತಿರುಗುವ ಯೋಚನೆ ಮಾಡಿದರು. ಮತ್ತೆ ಒಬ್ಬೊಬ್ಬರು ವಿಚಾರಣೆಗೆ ತೊಡಗಿದರು. ಆತ ನೇರವಾಗಿ ಮುಂಬೈಗೆ ಹೋಗ್ತಾನಂತೆ 11 ಗಂಟೆಗೆ ಫ್ಲೈಟಂತೆ.. ಹಾಗಾಗಿ ಸುಬ್ರಹ್ಮಣ್ಯಕ್ಕೆ ಬರುವುದಿಲ್ಲ ಎಂಬ ಮಾಹಿತಿ ಬಂತು.. ಎಲ್ಲರೂ ಅತ್ತಿತ್ತ ಹೋಗಿ ಮಾಯವಾದರು.

ಆದರೂ ಮತ್ತೆಮತ್ತೆ ಕರೆ ಬರುತ್ತಿತ್ತು.. ಇಲ್ಲ ಶೇ.99 ಅವರು ಬಂದೇ ಬರ್ತಾರೆ... ಮಾತ್ರಾ, ಗುಪ್ತವಾಗಿದೆ ಅಂತ..!! ಆದರೆ ಸಚಿನ್ ಅದಾಗಲೇ ಬಜ್ಪೆ ವಿಮಾನ ನಿಲ್ದಾಣದಲ್ಲಿದ್ದನ್ನು ಖಚಿತ ಪಡಿಸಿಕೊಂಡ ನಾವು ..ಸರಿ ಬಂದ್ರೆ ಹೇಳಿ ನಾವಿಲ್ಲೇ ಇದ್ದೇವೆ ಅಂತ ಹೇಳಿ ನಾವೂ ಮಾಯವಾದೆವು...

ಕೊನೆಗೂ ಸಚಿನ್ ಬರಲಿಲ್ಲ...!!.. ಇದೆಲ್ಲಾ ಗೊಂದಲ ಆದ್ದು ಯಾರಿಂದ ಸುದ್ದಿ ಮಾಡಿದ್ದು ಯಾರು.. ಎಂಬ ಕಣ್ಣ ಎದುರಿನ ಪ್ರಶ್ನೆಗೆ ಉತ್ತರ ಅಲ್ಲೇ ಇತ್ತು....!!!..

ನಮಗೆ ಮಾತ್ರಾ ಅಲ್ಲಿ ಕಾದದ್ದು ಒಂದು ಅನುಭವವಾಗಿತ್ತು..

10 ಜುಲೈ 2009

ಮಾತು...ಮುಗಿದ ಮೇಲೆ...


ಮಾತೆಲ್ಲಾ ಮುಗಿದ ಮೇಲೆ.. ಮನದೊಳಗೆ ಮೌನದ ಕೋಣೆ....

ಹೋದಲ್ಲೆಲ್ಲಾ ಮಾತು-ಕತೆ.. ಅದರಲ್ಲಿ ಹುರುಳೆಷ್ಟು..? ಪುಕ್ಕಟೆ ಎಷ್ಟು...? ಬಡಾಯಿ ಎಷ್ಟು...? ಮಾತಿಗಾಗಿ ಮಾತೆಷ್ಟು...? ಅಂತ ಒಂದು ಕ್ಷಣ ಯೋಚಿಸಿದರೆ, ಹುರುಳು ಎಷ್ಟು ಸಿಕ್ಕಾವು ಹೇಳಿ...? ಸುಮ್ಮನೆ ದಿನವಿಡೀ .. ಮಾತು.. ಮಾತು ... ಮಾತು... ಹಾಗೆ ಮಾತನಾಡುವಾಗ ನಾವು ಕೆಲವೊಮ್ಮೆ ನೇರವಾಗಿ[ ಕಣ್ಣಿಗೆ ಕೈ ಹಾಕಿದ ಹಾಗೆ] ಹೇಳಿ ಬಿಡುತ್ತೇವೆ... ಎದುರಿನಾತನಿಗೆ ಏನಾಗುತ್ತದೆ... ಅದರ ಪರಿಣಾಮ ಏನು ಎನ್ನವುದರ ಬಗ್ಗೆ ಆ ಕ್ಷಣ ಯೋಚಿಸುವುದಿಲ್ಲ ಮಾತು ಮಾತಾಗಿ ಹೋಗುತ್ತದೆ.. ಪರಿಣಾಮ ನಂತರ.... ಆದರೆ ಅದು ತಪ್ಪಾಗಿದ್ದರೂ ಮತ್ತೆ ಉಳಿಯುವುದು ಸಮರ್ಥನೆಯೊಂದೇ ದಾರಿ.. ಹೀಗಾಗಿ ಅದೆಷ್ಟೂ ಸಂಬಂಧಗಳೂ ಕಡಿದುಹೋಗಿವೆ.

ಇದ್ಯಾಕೆ ನೆನಪಾಯಿತೀಗ.. ??

ಮೊನ್ನೆ ನಾವು ಸುದ್ದಿಯೊಂದನ್ನು ಮಾಡುವುದಕ್ಕಾಗಿ 3 ಜನ ಮಿತ್ರರು ಒಂದು ಪ್ರತಿಷ್ಠಿತ ಶಾಲೆಗೆ ಹೋಗಿದ್ದೆವು. ಅಲ್ಲಿನ ಪ್ರಮುಖ ಅಧ್ಯಾಪಕರೊಬ್ಬರು 2 ವಾರದಿಂದ ದೂರವಾಣಿ ಮೂಲಕ ಹೇಳುತ್ತಲೇ ಇದ್ದರು. ಹಾಗಾಗಿ ಬಿಡುವು ಮಾಡಿ ಅಲ್ಲಿಗೆ ತೆರಳಿದ್ದಾಯಿತು. ಮೊದಲು ಹೋದವರೇ ಪ್ರಾಂಶುಪಾಲರ ಕೊಠಡಿಗೆ ಹೋಗಿ ಮಾತನಾಡಲು ಆರಂಭಿಸಿದೆವು. ಅಲ್ಲಿನ ವಿಚಾರ “ಲೋಕ”ದ ವಿಚಾರವೂ ಮಾತಿನ ನಡುವೆ ಬಂತು. ಆಗ ಅಲ್ಲಿಗೆ ನಮಗೆ ದೂರವಾಣಿ ಮೂಲಕ ಸುದ್ದಿ ಹೇಳಿದ ಅಧ್ಯಾಪಕರೂ ಬಂದರು. ನಮ್ಮ ಪರಿಚಯವನ್ನೂ ನಾವು ಹೇಳಿದೆವು. ಅವರು ಮತ್ತೆ ನನ್ನಲ್ಲಿ ಕೇಳಿದರು.... ನಿಮ್ಗೆ ಈ ವಿಷ್ಯ ಹೇಗೆ ಗೊತ್ತಯ್ತಾ ಅಂತ.. ನಾನಂದೆ ನೀವೇ 2 ವಾರದಿಂದ ಫೋನು ಮಾಡ್ತಿದ್ದೀರಲ್ಲಾ ಅಂತ.. ಆಗ ಅವರಂದ್ರು .. ನಿಮ್ಗೆ ಫೋನು ಮಾಡಿಲ್ಲ .. ನಾನು ಇವರಿಗೆ [ ನನ್ನೊಂದಿಗೆ ಬಂದ ನನ್ನ ಮಿತ್ರ] ಮಾತ್ರಾ ಫೋನು ಮಾಡಿದ್ದು ಎಂದು ಹೇಳಿದ್ರು. ಆಗ ನಂಗಂತೂ ಒಮ್ಮೆ ಶಾಕ.. ಮೌನ... ಮತ್ತೆ ಸಡನ್ ಆಗಿ ಕೇಳಿದೆ.. “ ಹಾಗಿದ್ರೆ ನಾನು ಬಂದಿದ್ದು ತಪ್ಪಾಯ್ತು ಅಂತೀರಾ” ಅಂತ ಹೇಳಿ ಬಿಟ್ಟೆ.. ಮತ್ತೆ ಒಮ್ಮೆ ಮೌನ.. ಕೂಡಲೇ ಪ್ರಾಂಶುಪಾಲರು ಹೇಳಿದ್ರು ಅಲ್ಲ ನಿಮ್ಗೆ ಹೇಗೆ ಗೊತ್ತಾಯ್ತು ಅಂತ ಕ್ಯೂರಿಯಾಸಿಟಿ ಅಂತ..... ಸರಿ ಸಂತ ನಾವು ಸುದ್ದಿಯತ್ತ ಹೋದೆವು.. ಆ ವಿಷಯ ಅಲ್ಲಿಗೇ ಬಿಟ್ಟು.. ಆದ್ರೆ ಮತ್ತೆ ಆ ಅಧ್ಯಾಪರು ಹೇಳಿದ್ರು .. ಅಲ್ಲ ನಿಮ್ಗೆ ಆಗ ನಾನು ಹಾಗೆ ಹೇಳಿದ್ದು ಬೇಸರ ಆಯ್ತಾ ಅಂತ ಕೇಳಿದ್ರು.. ಇಲ್ಲ ಇಲ್ಲ ಅಂತ ನಾನು ಆಗಲೇ ಆ ವಿಷಯ ಬಿಟ್ಟಾಯ್ತು ಅಂತ ಹೇಳಿದೆ.......

ಇದೊಂದು ಚಿಕ್ಕ ಘಟನೆ...

ಆದ್ರೆ ನಂಗೆ ಮತ್ತೆ .. ಮತ್ತೆ ಆ ವಿಷಯ ದಿನವಿಡೀ ಕಾಡುತ್ತಲೇ ಇತ್ತ... ನಾನು ಹಾಗೆ ಅಲ್ಲಿ ಹೇಳಿದ್ದು ಸರಿಯಾ .. ತಪ್ಪಾ... ನನ್ನನ್ನು ನಾನು ಸಮರ್ಥಿಸಿಕೊಳ್ಳುವುದು ಇದ್ದದ್ದೇ ... ಹಾಗಾಗಿ ಆ ಬಗ್ಗೆ 3 ನೇ ವ್ಯಕ್ತಿಯಾಗಿ ಚರ್ಚಿಸಿದೆ.. ಮಿತ್ರರೊಂದಿಗೆ ಆ ಬಗ್ಗೆ ಮಾತಾಡಿದೆ... 2 ರೀತಿಯ ಅಭಿಪ್ರಾಯ ಬಂತು.... ಆದರೂ ನನಗೆ ಸಮಾಧಾನ ತಾರದ ವಿಷಯ ಅದಾಯಿತು.

ಆ ಬಳಿಕ ಆದರೆ ನಂಗನಿಸಿತು .. ನನ್ನೊಳಗೆ ಅದೆಲ್ಲೋ ಅಹಂ ಆಗ ಕುಳಿತಿತ್ತಾ..?? ನಿಜಕ್ಕೂ ಅಧ್ಯಾಪಕ ಹೇಳಿದ ರೀತಿ ಯಾವುದು ಎಂಬುದರ ಬಗ್ಗೆ ನಾನು ಯಾಚಿಸದೆ ಆ ಕ್ಷಣದ ನನ್ನ ಪ್ರತಿಕ್ರಿಯಿಂದ ಅವರಿಗೂ ನೋವಾಗಿದೆ. ಅಂತ ನನಗೆ ಅನಿಸಿತು.. ನನಗೂ ಅವರ ಮಾತು ಆ ಕ್ಷಣಕ್ಕ ನೋವು ತಂದದ್ದೂ ಅಷ್ಟೇ ಸತ್ಯ. ಯಾಕೆಂದರೆ ನಾನು ಕೆಲಸ ಮಾಡುವ ಸಂಸ್ಥೆ ನನಗೆ ದೊಡ್ಡದೇ.... ಹಾಗಾಗಿ ಮತ್ತೊಮ್ಮೆ ನನ್ನೊಳಗೆ ನಾನು ಸಮರ್ಥಿಸಿಕೊಂಡೆ...

ಆದರೆ ಅನೇಕ ಸಲ ನನಗೆ ಅನಿಸಿದ್ದಿದೆ.. ಅದೆಲ್ಲೋ ಅಹಂ ಎನ್ನುವುದು ನನ್ನೊಳಗೆ ಸೇರಿಕೊಂಡಿದೆಯಾ..? ಹಾಗಾಗಿ ನನ್ನೊಳಗಿನಿಂದ ಕೆಲ ಮಾತುಗಳು ಹಾಗೆ ಹೇಳಿಸಿದೆಯಾ..? ಇಲ್ಲ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು...

ಏಕೆಂದರೆ ಮಾತು ಅನ್ನುವುದು ಆಡಿದರೆ ಮುಗಿಯಿತು... ಅದು ದಾಖಲಾಗಿ ಬಿಡುತ್ತದೆ... ಮತ್ತೆ ಹಿಂದೆ ಸರಿಯಬಾರದು.... ಸರಿಯಲೂ ಆಗದು... ಅದು ನೇರವಾಗಿ ಇರಬೇಕು... ಮಾತಿಗೆ ಇಷ್ಟವಿಲ್ಲದಿದ್ದೆ ಮೌನವೇ ಉತ್ತರವಾಗಬೇಕು... ಹಾಗಾಗಿಯೇ ಅಂದು ನಾನು ಮೌನಿಯಾದ್ದು....

ಹಾಗಾಗಿ... ಮಾತು ಮುತ್ತು .. ಮೌನ ಬಂಗಾರ....!!!

06 ಜುಲೈ 2009

ಇಲ್ಲಿ ಡಿಗ್ರಿ ಓದಿದವರು ಇಬ್ಬರೇ....!!
ಒಂದು ಕಡೆ ನಾಗಾಲೋಟದಿಂದ ಓಡುವ ನಗರಗಳು.ಇನ್ನೊಂದು ಕಡೆ ಅಭಿವೃದ್ದಿಯ ಹೆಸರಿನಲ್ಲಿ ಬದಲಾವಣೆಯನ್ನು ಕಾಣುವ ಸಮಾಜ.ಇದೆಲ್ಲದರ ಭ್ರಮೆಯಲ್ಲಿ ಇಡೀ ಜಗತ್ತು ಬದಲಾಗಿದೆ ಎನ್ನುವ ತಲೆಭಾರ... ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ.?.

ಅದರಾಚೆಗೆ ಬಂದು ನೋಡಿದಾಗಲೂ ಕಾಣುವುದು ಅದೇ ಬದಲಾವಣೆ..ಅದೇ ಅಭಿವೃದ್ದಿಯ ಮಂತ್ರ.

ಇತ್ತೀಚೆಗೆ ಹಿರಿಯ ಅಧಿಕಾರಿಗಳೊಬ್ಬರ ಜೊತೆ ಮಾತನಾಡುತ್ತಿದ್ದಾಗ ಇದೇ ಅಭಿವೃದ್ದಿಯ ಅದರಲ್ಲೂ ನಗರದ ಸುಂದರ ಕಲ್ಪನೆ ಮತ್ತು ಅದರ ಬದಲಾವಣೆಯ ಬಗ್ಗೆ ಕೇಳುತ್ತಿದ್ದಾಗ ಅವರು ಇನ್ನೊಂದು ಮಗ್ಗುಲಲ್ಲಿ ಅದನ್ನು ಯೋಚಿಸುವ ದಾರಿ ತೋರಿಸಿದರು.ನಂತರ ಅವರು ವಿವರಿಸಿದರು ನಗರವೊಂದರ ರಸ್ತೆ ಅಗಲೀಕರಣ ಉದಾಹರಣೆಯನ್ನು ಕೊಡುತ್ತಾ ನಗರದ ರಸ್ತೆ ಅಗಲೀಕರಣದಿಂದಾಗಿ ಸಲ್ಲಿರುವ ಹತ್ತಾರು ಗೂಡಂಗಡಿಗಳು ಮಾಯವಾಗುತ್ತದೆ. ರಸ್ತೆ ಅಗಲವಾತ್ತದೆ. ಪಾರ್ಕಿಂಗ್‌ಗೆ ಜಾಗವಾಗುತ್ತದೆ. ವಾಹನಗಳ ಸುಲಭ ಸಂಚಾರವಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರಿಗೆ, ಹಳ್ಳಿ ಜನರಿಗೆ ಏನು ಪ್ರಯೋಜನ..?. ಅಲ್ಲಿ ಮತ್ತೆ ದುಪ್ಪಟ್ಟು ವ್ಯಾಪಾರವಾಗುವುದು ಅದೇ ಶ್ರೀಮಂತ ವ್ಯಾಪಾರಿಗೆ. ಬಡ ಗೂಡಂಗಡಿ ವ್ಯಾಪಾರಿಗೆ ಏನು ಗತಿ..? ಹಾಗೆಂದು ರಸ್ತೆ ಅಗಲೀಕರಣವಾಗಲಿ, ನಗರ ಅಭಿವೃದ್ದಿ ಆಗಬಾರದು ಎನ್ನುವ ಧೋರಣೆ ಇದಲ್ಲ. ನಿಜಕ್ಕೂ ನಗರದ ಅಭಿವೃದ್ದಿ ಇಂದು ಅಗತ್ಯಕ್ಕಿಂತ ಹೆಚ್ಚಾಗಿ ನಡೆದರೆ ಅದೇ ಒಂದು ಹಳ್ಳಿಯ , ಒಂದು ಗ್ರಾಮದ ಅಭಿವೃದ್ದಿ ಅದೇ ವೇಗದಲ್ಲಿ ನಡೆಯುತ್ತಿಲ್ಲ. ಆದರೂ ನಾವು ಅದೇ ನಗರದ ಅಭಿವೃದ್ದಿ ನೋಡಿ ಭಾರತ ಅಭಿವೃದ್ದಿಯ ಪಥದಲ್ಲಿದೆ ಅಂತ ಕರೀತೇವೆ. ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ..?

ಅದಕ್ಕೆ ಒಂದು ಹಳ್ಳಿಯ ಕಡೆಗೆ ಹೋಗ ಬೇಕು. ಆಗ ಅಲ್ಲಿನ ಸತ್ಯ ದರ್ಶನವಾಗುತ್ತದೆ. ಇಂದಿಗೂ ಅದೆಷ್ಟೂ ಹಳ್ಳಿಗಳು ಬೆಳಕನ್ನೇ ಕಂಡಿಲ್ಲ.ಅಂತಹ ಹಳ್ಳಿಯೊಂದರ ಕತೆ ಇಲ್ಲಿದೆ.

ಅದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮ.ಪುತ್ತೂರಿನಿಂದ ಸರಿಸುಮಾರು 60 ರಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಹಾಗೆ ನೋಡಿದರೆ ಈ ಗ್ರಾಮಗಳು ಸೌಲಭ್ಯಗಳಿಂದಲೂ ದೂರವೇ ಇದೆ. ಈ ಗ್ರಾಮದಲ್ಲಿನ ಬಾರ್ಯ, ಬೊಟ್ಟಡ್ಕ ಪ್ರದೇಶದಲ್ಲಿ 30 ಮನೆಗಳಿವೆ. ಇವರಿಗೆ ಅಭಿವೃದ್ದಿ ಎಂಬುದು ಮರೀಚಿಕಯೇ ಸರಿ.ಸ್ವಾತಂತ್ರ್ಯ ಬಂದು ೬ ದಶಕಗಳೇ ಕಳೆದರೂ ಈ ಭಾಗ ಇನ್ನೂ ಬೆಳಕು ಕಂಡಿಲ್ಲ. ಅದು ಮಾತ್ರವಲ್ಲ ವ್ಯವಸ್ಥಿತವದ ರಸ್ತೆ ಸಂಪರ್ಕ, ಸೇತುವೆಗಳೂ ಈ ಗ್ರಾಮಕ್ಕಿಲ್ಲ.ಇಲ್ಲಿನ ಜನರ ಬದುಕೇ ಒಂದು ಸರ್ಕಸ್.ಇವರು ಅರ್ಜೆಂಟಾಗಿ ಪೇಟೆಗೆ ಹೋಗಬೇಕು ಅಂದ್ರೆ ಇಲ್ಲಿನ ಜನ ಐದಾರು ಕಿಲೋಮೀಟರ್‌ಗಳಷ್ಟು ದೂರ ನಡೆದೇ ಸಾಗಬೇಕು. ಮೊಬೈಲ್ ಸಂಪರ್ಕವಂತೂ ಇಲ್ವೇ ಇಲ್ಲ.ದೂರವಾಣಿಯೂ ಇಲ್ಲಿಗೆ ದೂರವಾಗಿದೆ. ಅದು ಬಿಡಿ ಮಳೆಗಾಲವಂತೂ ಇವರ ಬದುಕು ದ್ವೀಪದಂತಾಗುತ್ತದೆ. ಬಾರ್ಯವನ್ನು ಸಂಪರ್ಕಿಸುವ ನಿಡ್ಯಮೇರು ಎಂಬ ಹೊಳೆ ತುಂಬಿ ಹರಿಯುವ ಕಾರಣದಿಂದ ಇರುವ ರಸ್ತೆ ಸಂಪರ್ಕವೇ ಕಡಿದುಹೋಗುತ್ತದೆ. ಆಗ ತಾತ್ಕಾಲಿಕವಾಗಿ ನಿರ್ಮಿಸಿದ ಕಾಲುಸಂಕದಲ್ಲಿ “ಸರ್ಕಸ್” ಮಾಡಿ ಅನಿವಾರ್ಯವಾಗಿ ಸಾಗಬೇಕು. ಹೀಗಾಗಿ ಹೊರ ಜಗತ್ತಿನ ಸಂಪರ್ಕವೇ ಅವರಿಗಿಲ್ಲ.ಇನ್ನು ಜೀಪು ಹೊರತು ಪಡಿಸಿ ಬೇರಾವ ವಾಹನಗಳು ಇಲ್ಲಿ ಓಡಾಡಲ್ಲ. ಹಾಗಾಗಿ ಜೀಪಿನ ಹೊರತಾಗಿ ಬೇರೆ ವಾಹನದ ಪ್ರಯಾಣ ಇಲ್ಲಿ ಇವರಿಗೆ ಕನಸೇ ಸರಿ.ಅದು ಬಿಡಿ ನಗರದಲ್ಲಿರುವಂತೆ ಮನೆಗೆರಡರಂತೆ ಇಲ್ಲಿ ವಾಹನವೇ ಇಲ್ಲ.ಈ ಬಾಗದಲ್ಲಿ ಸ್ವಂತ ವಾಹನ ಇರುವವರೇ ಇಲ್ಲ. ಎಲ್ಲರಿಗೂ ಕಾಲುಗಳೇ ಆಧಾರ.ಅಲ್ಲಿಂದ ನಂತರ ಗ್ರಾಮಕ್ಕೆ ಬರುವ ಒಂದೆರಡು ಸರಕಾರಿ ಬಸ್ಸು....!!. ಇನ್ನು ಇಲ್ಲಿನ 30 ಮನೆಗಳಲ್ಲಿ ಪದವಿ ಶಿಕ್ಷಣ ಪಡೆದವರು ಕೇವಲ ಇಬ್ಬರು. .4ಮಂದಿ ಪಿಯುಸಿ ಶಿಕ್ಷಣ ಪಡೆದರೆ ಇನ್ನು ಬಹುತೇಕರು ಎಸ್.ಎಸ್.ಎಲ್.ಸಿಯಲ್ಲಿ ಶಾಲೆ ಬಿಡಬೇಕಾದ ಸಂದರ್ಭವೇ ಹೆಚ್ಚು.


ಬೌಗೋಳಿಕವಾಗಿ ನೋಡಿದರೆ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮವು ಒಟ್ಟು 17,118 ವಿಸ್ತೀರ್ಣವಿದೆ.ಇದರಲ್ಲಿ ಬಹುಪಾಲು ಅರಣ್ಯ ಪ್ರದೇಶ. ಹಾಗಾಗಿ ಈ ಗ್ರಾಮ ವಿಸ್ತಾರವಾಗಿದ್ದರೂ ಗ್ರಾಮ ಪಂಚಾಯತ್‌ಗೆ ಆದಾಯ ಕಡಿಮೆಯೇ. ಹಾಗೆಂದು ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಯನ್ನು ವಿವರಿಸಿದರೆ ಅರ್ಥವೂ ಆಗುತ್ತಿಲ್ಲ. ಇದುವರೆಗೆ ಒಬ್ಬ ಜನಪ್ರತಿನಿಧಿ ಮಾತ್ರಾ ಈ ಭಾಗಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದ್ದು ಬಿಟ್ಟರೆ ಬೇರಾವ ಜನನಾಯಕರೂ ಇತ್ತ ಬೇಟಿ ಕೊಟ್ಟಿಲ್ಲ. ಅಧಿಕಾರಿಗಳಂತೂ ತಲೆಹಾಕಿಲ್ಲ. ಅಭಿವೃದ್ದಿಯ ಕೆಲಸವೂ ಆಗಿಲ್ಲ. ಗ್ರಾಮ ಪಂಚಾಯತ್ ಕೂಡಾ ಇಲ್ಲಿನ ಅಭಿವೃದ್ದಿಯ ಬಗ್ಗೆ ಯೋಚಿಸುತ್ತದೆ ಆದರೆ ಶಕ್ತಿ ಇಲ್ಲದೆ ದಿಕ್ಕೆಟ್ಟು ಕೂತಿದೆ.


ಒಟ್ಟಿನಲ್ಲಿ ಹಳ್ಳಿಯೊಂದರ ಕತೆ ಹೀಗಿರುವಾಗ ಅಭಿವೃದ್ದಿಯ ಮಂತ್ರ ಪಠಿಸುವ ಜನನಾಯಕರಿಗೆ ಇದೆಲ್ಲವೂ ಅರ್ಥವಾಗುತ್ತಿಲ್ಲವೇ ಅಥವಾ ಅಭಿವೃದ್ದಿಯ ನಾಟಕವಾಡುತ್ತಿದ್ದಾರೆಯೇ ಎಂದು ಸಂಶಯ ಹುಟ್ಟಿಸುತ್ತದೆ.ಗ್ರಾಮೀಣ ಭಾಗದ ಅದೆಷ್ಟೂ ಹಳ್ಳಿಗಳು ಇಂದು ಇದೇ ರೀತಿಯಾಗಿ ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ.ಕೆಲವು ಕಡೆ ಸರಿಯಾದ ಬಸ್ಸುಗಳ ವ್ಯವಸ್ಥೆಯಿಲ್ಲ. ಶಾಲಾ ಮಕ್ಕಳು ಸಂಜೆ ಮನೆಗೆ ತಲಪುವಾಗ ದೀಪ ಉರಿಸುವ ಹೊತ್ತಾಗಿರುತ್ತದೆ. ಮರಿದಿನ ಬೆಳಗ್ಗೆ ಮತ್ತೆ ದೀಪ ಆರುವ ಮುನ್ನವೇ ಮನೆಯಿಂದ ಹೊರಬೀಳಬೇಕು ಇಲ್ಲವಾದ್ರೆ ಶಿಕ್ಷಣವೂ ಇಲ್ಲದೆ ಕತ್ತಲಲ್ಲಿರಬೇಕಾಗುತ್ತದೆ. ಎಂತಹ ಅಜಗಜಾಂತರ ...!!. ಒಂದೆಡೆ ಮನೆಬಾಗಿಲಿಗೆ ಮಕ್ಕಳನ್ನು ತಂದು ಬಿಡುವ ಶಿಕ್ಷಣ ಇನ್ನೊಂದು ಕಡೆ ಶಾಲೆಯ ಬಾಗಿಲನ್ನು ಅರಸಿಕೊಂಡು ಹೋಗುವ ಶಿಕ್ಷಣ. ಇಂತಹ ಸಂದಿಗ್ದ ಪರಿಸ್ಥಿತಿ ಇಲ್ಲಿದೆ. ಆದರೂ ಭಾರತ ಶ್ರೀಮಂತ ದೇಶ. ಸುಖೀ ದೇಶ.ನೆಮ್ಮದಿ ಇಲ್ಲಿದೆ.ಏಕೆಂದರೆ ಇದ್ದುದರಲ್ಲೇ ಸಂತೋಷ ಪಡುವ ಸಮಾಜ ನಮ್ಮದು. ಇರುವ ಸಮಸ್ಯೆಯನ್ನು ಹಾಗೆಯೇ ಸ್ವೀಕರಿಸುವ ಗುಣ ನಮ್ಮದು. ಹಾಗಾಗಿ ಸಮಸ್ಯೆಗಳು ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಅದುವೇ ಒಂದು ಅಭ್ಯಾಸವಾಗಿಬಿಡುತ್ತದೆ.