25 ಮೇ 2009

ಇವರೆಲ್ಲಾ ಎಲ್ಲೋಗ್ತಾರೆ..??

ಇಂದು ಪ್ರಸ್ ಕ್ಲಬ್‌ನಲ್ಲಿ ಕುಳಿತು ಹರಟುತ್ತಿರುವಾಗ ನಮ್ಮ ಮಧ್ಯೆ ಪ್ರಶ್ನೆಯೊಂದು ಬಂತು.ಇದೊಂದು ಬಾಲಿಶ ಅಂತ ಅನ್ನಿಸಬಹುದು ಆದರೆ ಅದರ ಆಳ ಗಂಭೀರವಾಗಿ ಯೋಚಿಸಬೇಕಾದದ್ದು ಅಂತ ನನಗನ್ನಿಸತು. ಮಿತ್ರರೂ ಅದನ್ನೇ ಮೆಲುಕು ಹಾಕುತ್ತಿದ್ದರು.

ಮೊನ್ನೆ sslc ಫಲಿತಾಂಶ ಬಂತು.ಅದೂ ಉತ್ತಮ ಫಲಿತಾಂಶವಾಗಿತ್ತು.ಎಲ್ಲರೂ ನಿರೀಕ್ಷಿಸುವುದು ನನಗೆ "ಫಸ್ಟ್ ಕ್ಲಾಸ್" ಬರಲಿ ಅಂತನೇ. ಅದಕ್ಕಾಗಿ ದೇವರಿಗೆ ಹರಕೆ ಹೊರುವವರೂ ಇದ್ದಾರೆ ಬಿಡಿ. ಈಗಿರುವುದು ವಿಷಯ ಅದಲ್ಲ. ಹಾಗೆ ಹರಿಕೆ ಹೊತ್ತು.. ಏನೆಲ್ಲ್ಲಾ ಪರದಾಡಿ ಪಾಸಾಗ್ತಾರಲ್ಲ. ಅಷ್ಟು ಸಾಕು.

ಆದರೆ ಈಗ ನಮ್ಮ ಯೋಚನೆ ಅದಲ್ಲ. ಈ ಬಾರಿ ಏನಿಲ್ಲವೆಂದರ 1.5 ಲಕ್ಷ ವಿದ್ಯಾರ್ಥಿಗಳ SSLC ಪಾಸಾಗಿ ಪಿಯುಸಿ ಶಿಕ್ಷಣದತ್ತ ಮುಖ ಮಾಡಿದ್ದಾರೆ, ಇಂದು ರಾಜ್ಯದಲಿ ಪ್ರೌಢ ಶಿಕ್ಷಣ ಸಂಸ್ಥೆಗಳಿದ್ದಷ್ಟು ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. SSLC ಪಾಸಾದ ವಿದ್ಯಾರ್ಥಿಗಳಿಗೆಲ್ಲಾ ಪಿಯಿಸಿಯಲ್ಲಿ ಸೀಟು ಸಿಗುತ್ತಾ..? ಸಿಗದೇ ಇರುವವರೆಲ್ಲಾ ಏನಾಗುತ್ತಾರೆ..? ಅಂತಹದ್ದೊಂದು ಪ್ರಶ್ನೆಯ ಹಿಂದೆ ಹೋದಾಗ ಗಂಭೀರವಾದ ಉತ್ತರಗಳು ಸಿಗುತ್ತವೆ..

ಒಂದು ತಾಲೂಕನ್ನು ಮಾದರಿಯಾಗಿಸಿ ಈ ಅವಲೋಕನವನ್ನು ಮಾಡಿದಾಗ ಅಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳು SSLC ಬರೆದಿದ್ದಾರೆ. ಅದರಲ್ಲಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಪಾಸಾದ ವಿದ್ಯಾರ್ಥಿಗಳೆಲ್ಲಾ ಕಾಲೇಜನ್ನ ಅರಸುತ್ತಾ ಹೋಗುತ್ತಾರೆ. ತಾಲೂಕಿನ ಒಂದಷ್ಟು ಕಾಲೇಜುಗಳಿಂದ ಅರ್ಜಿ ತರುತ್ತಾರೆ. ಆ ತಾಲೂಕಿನಲ್ಲಿ ಇರುವುದು 8 ಕಾಲೇಜು. ಅದರಲ್ಲಿ ಈ 15 ಸಾವಿರ ಮಂದಿಗೆ ಅವಕಾಶ ಇರುವುದಿಲ್ಲ. ಏನಿಲ್ಲವೆಂದರೂ 4 ರಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರಾ ಅವಕಾಶ. ಎಲ್ಲಾ ಕಾಲೇಜುಗಳೂ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮೊದಲು ತೆಗೆದುಕೊಳ್ಳುತ್ತದೆ. ಅಂದರೆ "ಫಸ್ಟ್ ಕ್ಲಾಸ್" ಮಾತ್ರಾ. ಆಗಲೇ ತರಗತಿಯ ಶೇಕಡಾ 75 ಭಾಗ ಫುಲ್.. ಸರಕಾರಿ ಕಾಲೇಜುಗಳು ಮಾತ್ರಾ ಸೆಕೆಂಡ್ ಕ್ಲಾಸ್ ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದವರನು ಸೇರಿಸಿಕೊಳ್ಳುತ್ತದೆ. ಹಾಗಾದರೆ ತೃತೀಯ ಶ್ರೇಣಿಯಲ್ಲಿ ಪಾಸದ ಮತ್ತು ಜಸ್ಟ್ ಪಾಸಾದ ವಿದ್ಯಾರ್ಥಿಗಳಿಗೆ ಸೀಟು ಎಲ್ಲಿ ಸಿಗುತ್ತದೆ..? ಅವರ ಭವಿಷ್ಯ ಏನಾಗುತ್ತದೆ. ಯಾಕೆಂದರೆ ಇಂದು ಸೆಕೆಂಡ್ ಕ್ಲಾಸ್ ಮತ್ತು ಅದಕ್ಕಿಂತ ಕಡಿಮೆ ಇರುವ ಕೆಲವರು ಐಟಿ‌ಐ ಯತ್ತ ಮುಖ ಮಾಡಿದರೆ ಅಲ್ಲೂ ಭರ್ತಿಯಾಗಿರುತ್ತದೆ. ಹಾಗಿದ್ದರೆ ಅಂತಹ ವಿದ್ಯಾರ್ಥಿಗಳ ಪಾಡು ಏನು?. ಅವರು ಏನಾಗುತ್ತಾರೆ?. ಪಿಯುಸಿ ಆದ ಬಳಿ ಅವಕಾಶಗಳು ಬೇಕಾದಷ್ಟು ಇದೆ. ಆದರೆ SSLC ಆದ ತಕ್ಷಣ ಅವಕಾಶಗಳು ಇಲ್ಲವೇ ಇಲ್ಲ ಅನ್ನಬಹುದು. ಹಾಗಾಗಿ ಅಂತಹ ವಿದ್ಯಾಥಿಗಳು ಇಂದು ದಿಕ್ಕು ಕಾಣದೆ ಕುಳಿತಿರುವ ಸ್ಥಿತಿ ಇದೆ. ಇದಕ್ಕೆ ಕಾರಣವೇನು?. ಅವರಲ್ಲಿರುವ ಪ್ರತಿಭೆಯ ಕೊರತೆಯೇ..? ಅಥವಾ ವ್ಯವಸ್ಥೆಯ ಲೋಪವೋ..? ಅಥವಾ ಅವರು ದಡ್ಡರೋ..? ಎಲ್ಲರೂ ಸಮಾನರಾಗಲು ಸಾಧ್ಯವೇ ಇಲ್ಲ ಅಲ್ವೇ.......!!

ಅದಕ್ಕೇ ಹೇಳಿರ‍ಬೇಕು..

Servival Of fittest....!!!

11 ಮೇ 2009

ಬದುಕೆಂಬ ಪ್ರಯೋಗ ಶಾಲೆಯಲ್ಲಿ. . .
ಮುಂಜಾನೆಯ ಫ್ರೆಶ್ ಮೂಡ್‌ನಲ್ಲಿರುವಾಗ ಸಂದೇಶವೊಂದು ಬಂದಿತು. ಅಲ್ಲಿ ಒಂದೇ ಕುಟುಂಬದ ೩ ಜನ ಆತ್ಮಹತ್ಯೆ ಮಾಡಿದ್ದಾರಂತೆ. ಎಂಬ 2 ನಿಮಷದ ದೂರವಾಣಿ ಕರೆ. ಅದೆಲ್ಲೋ ಶುಭ ಕಾರ್ಯಕ್ಕೆ ಹೊರಟು ಸಿದ್ದವಾಗಿದ್ದಾಗ ಅದೇ ಮೂಡ್‌ನಲ್ಲಿ ಸ್ಥಳಕ್ಕೆ ಹೋದಾಗ ಘಟನೆ ಮನಕಲಕುವಂತಿತ್ತು. ಒಂದು ವರ್ಷದ ಮಗು ಕೂಡಾ ಸತ್ತು ಬಿದ್ದಿತ್ತು. ಮನೆಯಲ್ಲೆಲ್ಲಾ ಹೊರಳಾಡಿದ ದೃಶ್ಯ ಕಾಣುತ್ತಿತ್ತು.ಹಾಗೆ ಸಾಯುವುದಕ್ಕಿಂತ ಮುನ್ನ ಆತ ಫೋಟೋ ಇರಿಸಿ ಪೂಜೆ ಮಾಡಿದ್ದ ಎನ್ನುವುದಕ್ಕೂ ಅಲ್ಲಿ ಪುರಾವೆ ಇತ್ತು. ಆ ಬಳಿಕ ದಂಪತಿಗಳು ಹಸುಳೆ ಸಹಿತ ಸತ್ತು ಕೊಂಡಿದ್ದಾರೆ ಎಂಬುದು ಎಫ್‌ಐ‌ಆರ್. ಇಲ್ಲಿ ದಂಪತಿಗಳು ತೀರ್ಮಾನಿಸಿಯೇ ಈ ನಿರ್ಧಾರ ಕೈಗೊಂಡಿದ್ದಾರಾ ಅಥವಾ ಪತ್ನಿಗೆ ಬಲಾತ್ಕಾರವಾಗಿ ವಿಷ ಉಣಿಸಿದ್ದಾನಾ ಅನ್ನುವದಕ್ಕೂ ಮುನ್ನ ಆತನ ನಿರ್ಧಾರ ಮೊದಲೇ ಆಗಿತ್ತು.ಏಕೆಂದರೆ ಆತ ದಿನಕ್ಕೂ ಮುನ್ನ ಆಸುಪಾಸಿನ ಮನೆಗಳಿಗೆ ಭೇಟಿ ನೀಡಿದ್ದ , ಸಂಬಧಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ , ತನ್ನ ಸಹೋದರನ್ನು ಮರುದಿನ ಬೆಳಗ್ಗೆ ಬರಲೂ ಹೇಳಿದ್ದ. ಹಾಗಗಿ ಆತನದ್ದು ಪೂರ್ವಯೋಜಿತವೇ ಅಂತ ತಿಳಿಯುತ್ತದೆ. ಆದರೆ ಆ ಮುಗ್ದ ಮಗು..?. ಅದೃಷ್ಠವಶಾತ್ ಇನ್ನಿಬ್ಬರು ಮಕ್ಕಳು ಅಜ್ಜಿ ಮನೆಗೆ ಹೋದ ಕಾರಣ ಬದುಕುಳಿದಿದ್ದಾರೆ. ಇಂತಹ ಸಾವಿಗೆ ಕಾರಣ ಅನಾರೋಗ್ಯ..!!. ಅದು ಒಂದೇ ಕಾರಣ ಆಗಿರಲಾರದು ಬಹುಶ: ಆರ್ಥಿಕ ಮುಗ್ಗಟ್ಟು ಕೂಡಾ ಇರಬಹುದು ಅಂತ ಸ್ಥಳೀಯರು ಹೇಳಿಕೊಳ್ಳುತ್ತಾರೆ. ಆದರೆ ಆ 3 ಜೀವಗಳು ಇನ್ನಿಲ್ಲವಾಗಿದೆ. ಇದು ಒಂದು ಕುಟುಂಬದ ಆತ್ಮಹತ್ಯೆ ಪ್ರಕರಣ...

ಬದುಕು ಭಾರವಾದಾಗ ಹೀಗೂ ಅಂತ್ಯವಾಗಬಹುದು.... ಇಂತಹ ಬಹುತೇಕ ಪ್ರಕರಣಗಳಲ್ಲಿ ಅದೆಲ್ಲವೂ ಒಂದು ಕ್ಷಣದ ನಿರ್ಧಾರ. ಆದರೆ ಕೆಲವೊಮ್ಮೆ ಅದು ಪೂರ್ವಯೋಜಿತವೂ ಆಗಿರುತ್ತದೆ......... ಎಂದು ಅದೇ ಗುಂಗಿನಲ್ಲಿರುವಗ ಸುದ್ದಿಯೊಂದು ಬರುತ್ತಿತ್ತು. ಅದೆಲ್ಲೋ ನಗರದಲ್ಲಿ ದಯಾ ಮರಣಕ್ಕೆ ಅರ್ಜಿ ಹಾಕ್ತಿದ್ದಾರಂತೆ ಅದಕ್ಕಾಗಿ ಕೋರ್ಟ್‌ಗೂ ಹೋಗ್ತಾರಂತೆ. ಇದೂ ಒಂದರ್ಥದಲ್ಲಿ ಆತ್ಮಹತ್ಯೆ. ಇಲ್ಲೂ ಒಂದು ಕಾರಣವಿದೆ. “ಬದುಕು ಬೇಡ”ವೆನಿಸಿದೆ. ಕಾರಣ ವಯಸ್ಸಾಗಿದೆ..... ಯಾರಿಗೂ ಹೊರೆಯಾಗಬರದು ಎನ್ನುವುದು ಇವರ ನಿರ್ಧಾರ.. ಕೆಲ ಸಮಯದ ಹಿಂದೆ ಮತ್ತೊಂದು ಸುದ್ದಿಯಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ “ನನಗೂ ಸಾವು ಬೇಕು” ಅಂದಿದ್ದ ಆದರೆ ಆತನಿಗೂ ಇಚ್ಚಿಸಿದ ಸಾವುಸಿಕ್ಕಿಲ್ಲ.

ಈ ಜೀವ ಸಾವನ್ನು ಏಕೆ ಇಚ್ಚಿಸುತ್ತದೆ...?. “ಆತ್ಮ” ಏಕೆ “ಹತ್ಯೆ” ಮಾಡಿಕೊಳ್ಳಬೇಕು ಅಂತ ಯೋಚಿಸುತ್ತೆ. ಒಂದೋ ಸಮಾಜಕ್ಕೆ ಹೆದರಿ..... ಜೀವನಕ್ಕೆ ಹೆದರಿ.... ಸಮಸ್ಯೆಗೆ ಸೋತು..... ಇವೆಷ್ಟೇ ಕಾರಣ ಮೇಲ್ನೋಟಕ್ಕೆ ಕಾಣುತ್ತದೆ. ಇದು ನಾಳೆ ಯಾರ ಬದುಕಿನಲಿ ಬರೋದಿಲ್ಲ ಅನ್ನೋ ಗ್ಯಾರಂಟಿ ಏನು..?.ಯಾಕೆಂದ್ರೆ ಇಂದು ಅತ್ಯಂತ ಸಂತೋಷದಿಂದ ಸಮಾತನಾಡಿದ ವ್ಯಕ್ತಿ, ಧೈರ್ಯದಿಂದಿದ್ದ ವ್ಯಕ್ತಿ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಬದುಕಿಗೆ ಅಂತ್ಯ ಹಾಡುತ್ತಾನೆ. ಅಂತಹ ಅದೆಷ್ಟೋ ಘಟನೆಗಳು ಇಲ್ಲಿ ನಡೆದಿದೆ.ಅದಕ್ಕೆಲ್ಲಾ ಕಾರಣ ಮೇಲಿನ ೩ ರಲ್ಲಿ ಯಾವುದಾರೊಂದು..!!

ಬದುಕೆನ್ನುವುದು ಒಂದು ಪ್ರಯೋಗ ಶಾಲೆಯಂತೆ ಎಂದು ಹೇಳುತ್ತಿದ್ದರು ಹಿರಿಯರು.ಇಲ್ಲಿ ಎಲ್ಲ ಪ್ರಯೋಗಗಳು ನಡೆಯಬೇಕು. ಅಂತಹ ಪ್ರಯೋಗಗಳು ನಡೆಯುತ್ತಲೇ ಇರುವಾಗ ಕೆಲವೊಮ್ಮೆ “ನಮ್ಮ ಸತ್ಯ”ಗಳೂ ನಮಗೆ ಮುಳುವಾಗಬಹುದು , ವಿಶಾಲ, ತೆರೆದ ಹೃದಯವೂ ನಮ್ಮ ಹಿನ್ನಡೆಗೆ ಕಾರಣವಾಗಬಹುದು.. ಒಂದರ್ಥದಲ್ಲಿ ಶಸ್ತ್ರ ರಹಿತ ಯುದ್ದದಂತೆ..... ಆದರೆ ಈ ಪ್ರಯೋಗ ಶಾಲೆಯಲ್ಲಿ ನಡೆಯುವ ಒಂದೊಂದು ಪ್ರಯೋಗಗಳೂ ಹೊಸತೊಂದು “ರಿಸಲ್ಟ್ “ ಕೊಡುತ್ತವೆ. ಹಾಗಗಿ ಆ ರಿಸಲ್ಟ್‌ಗಳ ಆಧಾರದಲ್ಲಿ ಬದುಕನ್ನು ರೂಪಿಸುತ್ತಾ ಬೆಳೆಯಬೇಕು ಅಂತ ಎಲ್ಲೋ ಓದಿದ ಮತ್ತು ಇನ್ನೂ ಕೆಲವರ ಅನುವಭದ ಮಾತು. ಆದರೆ ಇಂದು ಈ ಪ್ರಯೋಗ ಶಾಲೆಯಲ್ಲಿ ಕ್ಷಣಿಕ ಸುಖದ ಬಗ್ಗೆ ಯೋಚಿಸುವ ಜನ ಹೆಚ್ಚಿದ್ದಾರೆ. ಹಾಗಾಗಿ ಯಾವುದೇ ಪ್ರಯೋಗಗಳಾದರೂ ಅದರ ರಿಸಲ್ಟ್ ಕೂಡಾ ಕ್ಷಣದಲ್ಲೇ ಸಿಗಬೇಕು ಮತ್ತು ಹೇಳಬೇಕು. ಮತ್ತು ಆ ರಿಸಲ್ಟ್ ಗೆಲುವೇ ಆಗಬೇಕು ಎನ್ನುವ ನಿರ್ಧಾರ ಮಾನಸಿಕವಾಗಿರುತ್ತದೆ. ಕೆಲವೊಮ್ಮೆ ಅಂತಹ ಯೋಚನೆಗಳೇ ನಮ್ಮನ್ನು ದಾರಿ ತಪ್ಪಿಸಿ ಬಿಡುತ್ತವೆ. ಆಗ ಯೋಚನೆಯ ದಾರಿಯೂ ತಪ್ಪಿಬಿಡುತ್ತದೆ. ಹಾಗಗಿ ಇಂದು ಪ್ರಯೋಗ ಶಾಲೆಯಲ್ಲಿ ಯಾವಗಲೂ ಗೆಲುವಾಗುತ್ತದೆ ಎನ್ನವ ಭ್ರಮೆಯಲ್ಲಿರದೆ ಸೋಲೂ ಇರುತ್ತದೆ ಎನ್ನುವ ವಾಸ್ತವವನ್ನು ಅರಿತು ಆ ಸೋಲೇ “ಸವಾಲಾದಾಗ” ಮುಂದೆ ಗೆಲುವು ಇದ್ದೇ ಇರುತ್ತದೆ ಎನ್ನುವ ಮನಸ್ಥಿತಿ ಬರಬೇಕು......

ಹಾಗಗಿ ಆತ್ಮಹತ್ಯೆ.. ಮತ್ತು ಸಾವಿಗಾಗಿ ಅರ್ಜಿ ಹಾಕುವುದು ಬಿಟ್ಟು ಸಾವು ಬರುವವರೆಗೆ ಸಾಧಿಸುವುದು ಒಳ್ಳೆಯದಲ್ವೇ.....?.

07 ಮೇ 2009

ಸತ್ಯವು ಕಹಿಯಂತೆ....

ನಾವು ಅಂದುಕೊಂಡಂತೆ ಜಗತ್ತು ಇರುವುದಿಲ್ಲ. ಹಾಗೆಂದು ಯೋಚಿಸುವುದು ಕೂಡಾ ತಪ್ಪು ಅಂತ ನನ್ನ ಮಿತ್ರನೊಬ್ಬ ಹೇಳುತ್ತಾ ಇರುತ್ತಿದ್ದ . ಅದು ಹೌದು ಕೂಡಾ. ಅಂತಹ ಅದೆಷ್ಟೂ ಘಟನೆಗಳು ನಮ್ಮ ಮುಂದೆಯೇ ನಡೆಯುತ್ತದೆ. ಆದರೂ ನಾವು ಆ ಬಗ್ಗೆ ಯೋಚಿಸುವುದಿಲ್ಲ . ಆದರೆ ಅದು ನಮಗೇ ಅನುಭವಾದಾಗ ಮಾತ್ರಾ ಅರಿವಾಗುತ್ತದೆ.

ಇತ್ತೀಚೆಗೆ ಒಬ್ಬ ವೈದ್ಯರೊಬ್ಬರು ನಮ್ಮನ್ನು ಹುಡುಕಿಕೊಂಡು ಬಂದಿದ್ದರು...ಬಳಿಕ ಅವರು ವಿವರಿಸಿದ ಕತೆ ಹೀಗಿದೆ. ಅದಕ್ಕೂ ಮೊದಲು ಇದರ ಸಾರಾಂಶ ಹೀಗಿದೆ. ಸತ್ಯ ಹೇಳಬಾರದು.. ಸತ್ಯ ಹೇಳಿದರೆ ಅದನು ಜಗತ್ತು ಮತ್ತು ವ್ಯಕ್ತಿಗಳು ಒಪ್ಪುವುದಿಲ್ಲ.. ಸುಳ್ಳೇ ಹೇಳಬೇಕು.. ಎನ್ನುವುದು ಇದರ ಮೊದಲ ಪ್ಯಾರಾ...

ಅವರು ಒಂದು ಪುಸ್ತಕ ಬರೆದಿದ್ದರು. ಅದರಲಿ ಕೆಲ ವಿಚಾರಗಳು ನೇರವಾಗಿದ್ದವು ಮತ್ತು ವಾಸ್ತವವನ್ನು ಬಿಂಬಿಸುತ್ತಿದ್ದವು. ಇದು ಬಿಡುಗಡೆಯಾದ್ದೇ ತಡ. ಹಿರಿಯರಿಂದ ಬಂತು ಕಿರಿ ಕಿರಿ.. ಹಾಗಾಗಿ ಕ್ಷಮೆಯನ್ನು ಕೇಳಿದರು.. ನಂತರ ಯೋಚಿಸಿದ ಅವರು ಮಾತನಾಡಿದ್ದು ಹೀಗೆ.. ಈ ಸಮಾಜ ಹೀಗೂ ಇರುತ್ತೆ.. ಆ ಪುಸ್ತಕದಲ್ಲಿ ನಾನು ಸತ್ಯವನ್ನು ಪ್ರತಿಪಾದಿಸಿದೆ.. ಜಗತ್ತು ಸತ್ಯವನ್ನು ಹೇಳಬೇಕು ಅಂತ ಹೇಳುತ್ತೆ.... ಹಾಗೆ ಒಂದು ವೇಳೆ ಸತ್ಯವನ್ನೇ ಬರೆದರೆ ಇಡೀ ಜಗತ್ತು ಒಂದಾಗಿ ಕ್ಷಮೆ ಕೇಳಬೇಕು ಅಂತಲೂ ಒತ್ತಾಯಿಸುತ್ತದೆ ಎನ್ನುತ್ತಾ ಮಾತನ್ನು ಮುಂದುವರಿಸುತ್ತಾರೆ...ಇದು ಯುವ ಸಾಹಿತಿಯೊಬ್ಬರ ಮಾತು ಕೂಡಾ ಹೌದು.. ಇದೆಂಥಾ ವಿಪರ್ಯಾಸ ಎಂದು ಅವರು ಹಲುಬುತ್ತಿದ್ದರು...

ಆದರೆ ನಿಜಕ್ಕೂ ಇಂದು ಜಗತ್ತು ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಮತ್ತು ಅದು ಕಹಿಯೂ ಆಗುತ್ತೆ.. ಅದು ಪಥ್ಯವೂ ಆಗುವುದಿಲ್ಲ.. ನಾನು ಕೂಡಾ ವೈದ್ಯರ ಆ ಮಾತನ್ನು ನನ್ನ ಇದುವರೆಗಿನ ಬದುಕಿನ ಅನಭವದ ಆಧಾರದಲ್ಲಿ ಕೊನೆಗೆ ಒಪ್ಪಿಕೊಂಡೆ... ಇಲ್ಲಿ ಅನುಭವ ಹಾಗೂ ಮುಕ್ತವಾದ ಸತ್ಯ ಮುಖ್ಯವಾಗುವುದಿಲ್ಲ... ಮುಕ್ತವಾದ ಮನ .. ಬರಹ ಮುಖ್ಯವಾಗುವುದಿಲ್ಲ... ಇಲ್ಲಿ ಮುಖ್ಯವಾಗುವುದು ಮನೆ.. ಹಣ... ಅಂತಸ್ತು... ಅಧಿಕಾರ... ಮತ್ತು.. ದರ್ಪ.. ಹಾಗಾಗಿ ವೈದ್ಯರು ಹೇಳುತ್ತಿದ್ದರು ಇಲ್ಲಿ ಸಜ್ಜನಿಕೆಗೆ.. ನಿರ್ಮಲ ಮನಸ್ಸಿಗೆ , ಬೆಳೆಯುವ ಮನಸ್ಸುಗಳಿಗೆ ಅವಕಾಶವಿಲ್ಲ ಅಂತ.ಆದರೂ ಮತ್ತೆ ಮಾತನಾಡುತ್ತಾ....... ನಾವು ಸತ್ಯದ ಪ್ರತಿಪಾದನೆಯಿಂದ ಬರುವ ಮಾತುಗಳನ್ನು ಕೇಳಿ ಸುಳ್ಳನ್ನು ಪ್ರತಿಪಾದನೆ ತೊಡಗುವುದರಿಂದ ಯಾವುದೇ ಪ್ರಯೋಜನವಿಲ್ಲ.... ನಾವು ಬೆಳೆಯುತ್ತಾ ಟೀಕಿಸುವವರಿಗೆ ಮತ್ತು ನಮ್ಮನ್ನು ಇಷ್ಟಪಡದವರಿಗೆ ಅಸೂಯೆಯಾಗುವಂತೆ ಬರೆಯಬೇಕು ಮತ್ತು ಬದುಕಬೇಕು..... ಅಂತ ಹೇಳಿದ್ದು ನಿಜಕ್ಕೂ ಹೊಸತೊಂದು ತಿರುವು ಕಂಡಿತು.. ಒಂದು ಸುದ್ದಿಯೂ ಆಯಿತು...

03 ಮೇ 2009

ಹೃದಯ ತೆರೆದಾಗ. . . .
ಅನೇಕ ದಿನಗಳಿಂದ ನಾಳೆಯ ಬಗ್ಗೆ ಮನಸ್ಸಿನೊಳಗೇ ಸುತ್ತಾಡುತ್ತಿದ್ದ ಹಲವು ಯೋಚನೆಗಳು , ಯೋಜನೆಗಳನ್ನು, ಕೇವಲ 15 ನಿಮಿಷದಲ್ಲಿ ನಿರ್ಭಯವಾಗಿ ,ನಿಸ್ಸಂಕೋಚವಾಗಿ ,ಯಾವುದೇ ಮುಜುಗರವಿಲ್ಲದೇ ಹೇಳಿಕೊಂಡಾಗ ಮನಸೆಷ್ಟು ಹಗುರವಾಗಿ ಬಿಡುತ್ತದೆ...!! ಆ ಬಳಿಕ ಮನಸ್ಸಿಗೆ ಏನೋ ಉಲ್ಲಾಸ .... ಅದರೆ ಅದು ಕೇವಲ 15 ನಿಮಿಷದಲ್ಲಿ ಮುಗಿದು ಹೋಗುವಂತದ್ದಲ್ಲ.. ಅದರ ಪ್ರೋಸೆಸ್ ದೀರ್ಘ ಕಾಲ... ಏಕೆಂದರೆ ಈ ಬದುಕು 3 ದಿನವಾದರೂ ಅದರೊಂದಿಗಿರುವ ಸಮಯ ಹೆಚ್ಚಿದೆಯಲ್ಲಾ.. ಆದರೂ ಮತ್ತೆ ಮನಸ್ಸಿನೊಳಗೆ ಒಮ್ಮೆ ಕಾಡಿತ್ತು.. ಬದುಕಿನ ಪುಟಗಳನ್ನು ತೆರೆದಿಡಬೇಕಿತ್ತಾ..? ಮನಸ್ಸು ಮತ್ತೆ ಹೇಳಿತ್ತು... ಆ ಪುಟಗಳು ಮುಂದಿನ ದಾರಿಗೆ ರಹದಾರಿಯಾಗಬಲ್ಲದು... ಹಾಗಾಗಿ
ಅದು ಅನಿವಾರ್ಯ ಮತ್ತು ಆ ಪುಟಗಳು ಮುಂದಿನ ದಾರಿಯನ್ನು ನಿರ್ಧರಿಸಬಲ್ಲುದು , ನಾಳೆ ಮನಸ್ಸು ಇನ್ನಷ್ಟು ಹಗುರವಾಗಲು ಕಾರಣವಾಗಬಹುದು ಎಂಬ ಯೋಚನೆ ನಂದು. ಹಾಗಾಗಿ ಬದುಕಿನ ಹಿಂದಿನ ಪುಟಗಳು ಎಳೆ ಎಳೆಯಾಗಿ ತೆರೆಯುತ್ತಾ ಸಾಗಿದಂತೆ ಮನಸ್ಸಿಗೆ ಖುಶಿಯಾಯಿತು. ಆ ಪುಟಗಳು ಮಾಸಿರಲಿಲ್ಲ.. ಒಂದೊಂದು ಪುಟವೂ ನನಗೆ ಮತ್ತೆ ಉತ್ಸಾಹವನ್ನು ನೀಡುವಂತಿತ್ತು.. ಮತ್ತೆ ಬಾಲ್ಯವನ್ನು ನೆನಪಿಸಿ, ಈಗಿನ ವರೆಗಿನ ಬದುಕನ್ನು ನೆನಪಿಸಿ ಬಿಟ್ಟಿತು. ಹಾಗಾಗಿ ಮನಸ್ಸು ಕೂಡಾ ಹಗುರವಾಗಿತ್ತು.

ಈ ಹೃದಯವನ್ನು ಮತ್ತು ಅದರೊಳಗಿನ ಪುಟವನ್ನು ತೆರೆಯಲೂ ಕಾರಣವಿತ್ತು..ಕಾರಣವಿಲ್ಲದೆ ಅದೆಲ್ಲವನ್ನೂ ನೆನಪಿಸಿಕೊಂಡಿರಲಿಲ್ಲ. ಬದುಕಿನ ಒಂದು ಹಂತದ ಗಡಿಯನ್ನು ದಾಟಿ ಇನ್ನಷ್ಟು "ಜವಾವ್ದಾರಿ"ಯ ಕಾಲ ಘಟ್ಟಕ್ಕೆ ಬಂದಾಗ ಹಿಂದಿನ ದಾರಿ ಮತ್ತು ಮುಂದಿನ ಗುರಿ ಮತ್ತು ಅದೆರೆಡೆಗಿನ ದಾರಿಯನ್ನು ಯೋಚಿಸಬೇಕು ಎಂಬ ಕಾರಣಕ್ಕೆ ಬದುಕಿನ ಪುಟವನ್ನು ತೆರೆಯಬೇಕಾಯಿತು.

ಆದರೆ ಆ ಪುಟಗಳಲ್ಲಿರುವ ವಿಚಾರವು ಮತ್ತು ಹೃದಯದ ಒಳಗಿನ ಸಂಗತಿಯು "ಸ್ವಗತ"ವಾಗಿಲ್ಲ... ಕೇಳುವ ಹತ್ತು ಮನಸ್ಸಿತ್ತು..... ಹಾಗಾಗಿ "ನನಗಂತೂ ಖುಷಿ"ಯಾಗಿತ್ತು.. ಮನಸ್ಸು ಹಗುರವಾಗಿತ್ತು.... ನನ್ನ ದೈನಂದಿನ ಕೆಲಸಕ್ಕೆ ಇನ್ನಷ್ಟು ಹುರುಪು ಬಂದಿದೆ... ಏಕೆಂದರೆ ತೊಳಲಾಟವಿಲ್ಲ......