24 ಫೆಬ್ರವರಿ 2009

ಮನಿ... ಮನಿ...
“ನಾವು ಸಾಲ ಕೊಡುವುದಿಲ್ಲ ಆಗ ನಿಮಗೆ ಹುಚ್ಚು ಹಿಡಿಯುತ್ತದೆ ; ನಾವು ಸಾಲ ಕೊಟ್ಟೆವೆನ್ನಿ ನೀವು ಹಿಂದಿರುಗಿಸುವುದಿಲ್ಲ ಆಗ ನಮಗೆ ಹುಚ್ಚು ಹಿಡಿಯುತ್ತದೆ ; ಹಾಗಾಗಿ ಯಾರಿಗೂ ಹುಚ್ಚು ಹಿಡಿಯುವುದು ಬೇಡ...”

ಇದು ಅಂಗಡಿಯೊಂದರಲ್ಲಿ ಕಂಡು ಬಂದ “ನುಡಿ ಮುತ್ತು”. ಅಂಗಡಿಯಾತ ಈ ವಾಕ್ಯವನ್ನು ಎದುಗಡೆಯಲ್ಲಿ ದೊಡ್ಡದಾಗಿ ಹಾಕಿದ್ದಾನೆ. ಎಲ್ಲರೂ ನೋಡುತ್ತಾರೆ. ಮತ್ತೆ ಆ ಕಡೆ ಈ ಕಡೆ ನೋಡಿ ಸರ್, 1 ಸಾವಿರ ಕಡಿಮೆ ಇದೆ ನಾಳೆ ಕೊಡುತ್ತೇನೆ ಎಂದಾಗ ಅಂಗಡಿಯಾತ ಕಸಿವಿಸಿ ಮಾಡಿ ಸರಿ ಅಂತಾನೆ..

ಇಂತಹ ಅದೆಷ್ಟೋ ವಾಕ್ಯಗಳು ಅಲ್ಲಲ್ಲಿ ರಾರಾಜಿಸುತ್ತಿರುತ್ತದೆ. ಸರಕಾರಿ ಬಸ್ಸುಗಳಲ್ಲಂತೂ ಇಂತಹ ವಾಕ್ಯಗಳು ಬಸ್ಸಿನಲ್ಲಿಡೀ ಕಾಣಿಸುತ್ತದೆ. “ ಸತ್ಯ ಮೇವ ಜಯತೆ “ ಅಂತ ಒಂದೆಡೆ ಇದ್ದರೆ , ಟಿಕೆಟ್ ಕೇಳಿ ಪಡೆಯಿರಿ ಅಂತ ಇನ್ನೊಂದು ಕಡೆ ಇರುತ್ತದೆ. ಇಷ್ಟೆಲ್ಲಾ ಇದ್ದರೂ ಬಸ್ಸಿನಿಂದ ಇಳಿಯುವಾಗ ಕಂಡಕ್ಟರ್ ಚಿಲ್ಲರೆ ಕೊಟ್ಟಿಲ್ಲ ಅಂತ ಜಗಳ ಮಾಡಿಯೇ ಇಳಿಯ ಬೇಕಾಗುತ್ತದೆ. ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ಆಸನ ಇರುತ್ತದೆ, ಅಂಗವಿಕಲರಿಗಾಗಿ, ಹಿರಿಯ ನಾಗರಿಕರಾಗಿ ಅಂತೆಲ್ಲ ಬೋರ್ಡ್‌ಗಳು ಆದರೆ ಕಂಡಕ್ಟರ್ ಬಂದು ಸರ್ ಆ ಬೋರ್ಡ್ ನೋಡಿ, ಅಂತ ನಮಗೆ ಹೇಳಬೇಕಾಗುತ್ತದೆ.

ತಪ್ಪಲ್ಲ ಇಂದಿನ ವ್ಯವಸ್ಥೆಯೇ ಹಾಗೆ.ನಾವು ಹೇಳುವ ಮಾತು, ವಿಚಾರಗಳು ನಮಗಲ್ಲ , ಅದು ಅವನಿಗೆ.ಅವನು ಅನುಸರಿಸಿದರೆ ಸರಿ, ಇಲ್ಲಾಂದ್ರೆ ನಮ್ಮಂತೆ ಅವನು ಕೂಡಾ. ಇತ್ತೀಚೆಗೆ ಒಬ್ರು ಹೇಳಿದ್ರು. ನಾವು ಎಲ್ಲವನ್ನೂ ಅವನಿಗಾಗಿ ಬಿಟ್ಟರೆ , ಬಸ್ಸಲ್ಲಿ ಸೀಟೇ ಸಿಗಲ್ಲ, ಮಾತ್ರವಲ್ಲ ಯಾರು ಕೂಡಾ ಬಸ್ಸೇರಲು ಸಾಧ್ಯವೇ ಇಲ್ಲ.ಬಸ್ಸು ಬಂದಾಕ್ಷಣ ಮೇಲೇರಲೆ ಬೇಕು...ರಷ್ ಮಾಡಲ್ ಬೇಕು. . ಸೀಟು ಸಿಗಲೇಬೇಕು.ಸಿಕ್ಕಿಲ್ಲಾಂದ್ರೆ ಇನ್ನೊಂದು ಬಸ್ಸಿನವರೆಗೆ ಕಾಯಬೇಕು.ಹಾಗಾಗಿ ಇಂತಹ "ನ್ಯಾಯ ಬದ್ದ "ಸಲಹೆಗಳು ಮೊದಲು ಅವನಿಗೆ, ಆಮೇಲೆ ನನಗೆ... ಅನ್ನುವುದೇ ಜಗದ ನಿಯಮ.ಏಕೆಂದ್ರೆ ಇದು ಹಣದಿಂದಲೇ ಅಳೆಯುವ ಸಮಾಜ ಸ್ವಾಮಿ. ನಿಮ್ಮಲ್ಲಿ ದುಡ್ಡಿದ್ರೆ ನೀವು ದೊಡ್ಡಪ್ಪ ಇಲ್ಲಾಂದ್ರೆ ಚಿಕ್ಕಪ್ಪ...!!??


ಆ ಒಂದು ವಾಕ್ಯ ಇಷ್ಟು ದೂರಕ್ಕೆ ಕರೆತಂದಿತು.


ಸತ್ಯ ಹೌದಲ್ವಾ..???

22 ಫೆಬ್ರವರಿ 2009

ದಿಕ್ಕಿಲ್ಲದ ಪರಿಹಾರ....
ಏನು ಪರಿಹಾರ....?????

ರೈತ ಪರ ಸರಕಾರ ಎಂದು ಹೇಳಿಕೊಳ್ಳುವ ಯಾವುದೇ ಸರಕಾರಗಳು ರೈತ ಪರ ಇರುವುದು ಸ್ಪಲ್ಪ ಕಡಿಮೆಯೇ.ಇರಲಿ ಈಗ ಆ ಬಗ್ಗೆ ಯೋಚಿಸುವ ,ದಾಖಲಿಸುವುದಕ್ಕೆ ಹೋಗುವುದಿಲ್ಲ.ಕಾರಣ ನಾನು ಹೇಳಬೇಕೆಂದಿದ್ದು ,ದಾಖಲಿಸಬೇಕೆಂದಿದ್ದು ಅದಲ್ಲ.ಆದರೂ ಮೊದಲಿಗೆ ಈ ಅಕ್ಷರ ದಾಖಲಿಸಬೇಕಾಗಿ ಬಂದಿದೆ ಕಾರಣ ಕೊನೆಗೆ ತಿಳಿಸುವೆ.

ನಾನು ಅಡಿಕೆ ಬೇರುಹುಳಕ್ಕೆ ಸಂಬಂಧಿಸಿದ ವಿಚಾರ ಸಂಕಿರಣವೊಂದಕ್ಕೆ ಹೋಗಿದೆ. ಅಲ್ಲಿ ರಾಜ್ಯದ ಪ್ರತಿಷ್ಠಿತ ಕೃಷಿ ವಿವಿಯ ವಿಜ್ಞಾನಿಗಳು ಕರಾವಳಿಯ ಪ್ರಮುಖ ಸಂಶೋಧನಾ ಕೇಂದ್ರದ "ಪ್ರಮುಖ" ವಿಜ್ಞಾನಿಗಳು ಬಂದಿದ್ದರು.ನಾವು ಯಾವಾಗಲೂ ಇಂತಹ ಕಾರ್ಯಕ್ರಮಕ್ಕೆ ಹೋಗುವಾಗ ಒಂದು ರೀತಿಯ ಪೂರ್ವಾಗ್ರಹ ಪೀಡಿತರಂತೆ ಭಾಗವಹಿಸುವುದು ಸಾಮಾನ್ಯ ಏಕೆಂದರೆ ಇಲ್ಲಿ ವಿಜ್ಞಾನಿಗಳ ಹೆಚ್ಚಿನವರು ವಿವರಿಸುವುದು ಪುಸ್ತಕದ ಒಳಗಿನ ಮತ್ತು ಹಳೆಯ ಕತೆಗಳನ್ನೇ.ಪ್ರಶ್ನೆ ಕೇಳಿದರೆ ನೀವು ಹಾಗೆಲ್ಲಾ ಮಾಡಿದರೆ ಆಗದು ಎಂದು ಗದರಿಸಿ ಸುಮ್ಮನಿರಿಸಿ ಬಿಡುತ್ತಾರೆ. ಆದರೆ ಇಂದು ನಾವು ಹೋದಾಗ ಪೂರ್ವಾಗ್ರಹ ಪೀಡಿತರಂತೆ ಹೋಗಲಿಲ್ಲ. ಬದಲಾಗಿ ಬ್ಲಾಂಕ್ ಆಗಿ ಹೋದೆವು. ಅದಕ್ಕೂ ಒಂದು ಕಾರಣವಿತ್ತು. ಅಲ್ಲಿ ಕಾರ್ಯಕ್ರಮ ಸಂಯೋಜಿಸುವವರು ಮಾಜಿ ರಾಷ್ಡ್ರಪತಿ ಎಜಿಜೆ ಕಲಾಂ ಅವರಿಗೆ ಇ ಮೈಲ್ ಬರೆದು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದರು.ಹಾಗಾಗಿ ಈ ವಿಜ್ಞಾನಿಗಳಿಗೆ ಅನೇಕ ವರ್ಷದ ಹಿಂದಿನ ಸಮಸ್ಯೆ ಕೂಡಾ ಹೊಸದಾಗಿ ಕಂಡಿತು.ಅದೆಷ್ಟೋ ಮಾಧ್ಯಮಗಳು ಈ ಬಗ್ಗೆ ಗಮನಸೆಳೆದಿದ್ದರೂ ಎಚ್ಚರವಾಗಿರಲಿಲ್ಲ. ಈಗ ಕಲಾಂ ಅವರ ನಿರ್ದೇಶನದಂತೆ ಆ ವಿಜ್ಞಾನಿಗಳು ಬಂದಿದ್ದಾರೆ ಎಂಬ ದೃಷ್ಠಿ ಬೆಳೆಸಿಕೊಂಡು ನಾವು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಒಬ್ಬರಾದೆವು.ಅಲ್ಲಿ ಆ ವಿಜ್ಞಾನಿ ವಿವರಿಸುತ್ತಿದ್ದರು , ನೂರಾರು ಬೆಳೆಗಾರರು , ಬೇರು ಹುಳದ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಬಂದಿದ್ದರು. ಕಾರ್ಯಕ್ರಮದ ಅರ್ಧದಲ್ಲಿ ನಮಗೂ ಅರಿವಾಗತೊಡಗಿತು ಇದು ಹಳೆಯ ಕ್ಯಾಸೆಟ್.ಹೊಸ ಟೋನ್...ಹೊಸತೇನೂ ಇಲ್ಲ.ಒಂದು ವಿಚಾರ ಮಾತ್ರಾ ಇಲ್ಲಿ ಖುಷಿ ಕೊಟ್ಟಿದ್ದೇನೆಂದರೆ ಈ ವಿಜ್ಞಾನಿ ರೈತರ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಆದರೆ ಕೊನೆಯ ರಿಸಲ್ಟ್ ಮಾತ್ರಾ ಅದೇ ರಾಗ ಅದೇ ಹಾಡು.

ಈ ಮಾಹಿತಿಯ ಬಳಿಕ ನಾವು ಆ ವಿಜ್ಞಾನಿಯೊಂದಿಗೆ ಮಾತನಾಡಿದೆವು.ಅವರು ಮಾತನಾಡುವ ಆರಂಭದಲ್ಲಿ ನೀವು ಏನೇನಾದರೂ ಕೇಳಬೇಡಿ ಎಂದೇ ಮಾತು ಆರಂಭಿಸಿದರು. ಮೊನ್ನೆ ನಿಮ್ಮ ಚಾನೆಲ್‌ನವರು ಕೇಳಿದರು, ರೋಗ ಶುರುವಾಗಿ 10 ವರ್ಷವಾಯಿತು ನೀವೇನು ಮಾಡುತ್ತೀರಿ, ಎಂದು ಪ್ರಶ್ನೆ ಹಾಕಿದರು. ಅವರಿಗೆ ಏನು ಗೊತ್ತು ನಾವು ಅಧ್ಯಯನ ಮಾಡುತ್ತಲೇ ಇದ್ದೇವೆ, ಎಂದು ಹೇಳುತ್ತಾ ಮಾತು ಆರಂಭಿಸಿದರು. ತಕ್ಷಣ ನಾವು ಕೇಳಿದೆವು ಹಾಗಾದ್ರೆ ಈ ಬೇರು ಹುಳ ಶುರುವಾಗಿ ನಿಜಕ್ಕೂಎಷ್ಟು ವರ್ಷವಾಯಿತು ಸರ್ ಎಂದಾಗ, ಅದು ಅಡಿಕೆ ಬೆಳೆ ಶುರುವಾದಾಗಲೇ ಇದೆ ಅಂತಾರೆ. ಹಾಗಾದ್ರೆ ಅವರು ಕೇಳಿದ ಪ್ರಶ್ನೆಯಲ್ಲಿ ತಪ್ಪೇನಿದೆ ಎಂದಾಗ, ಇನ್ನೇನೋ ಉತ್ತರ. ಕೊನೆಗೆ ಈ ರೋಗಕ್ಕೆ , ಕೀಟಕ್ಕೆ ಪರಿಹಾರ ಏನು ಅಂದರೆ, ಇಂತದ್ದೇ ಅಂತ ಪರಿಹಾರ ಇಲ್ಲ.ತೋಟಗಳನ್ನು ಅಗೆದು, ಅಥವಾ ರಾತ್ರಿ ವೇಳೆ ಹುಳುಗಳನ್ನು ತೋಟಗಳಲ್ಲಿ ಹಿಡಿದು ಕೊಲ್ಲುವುದು ಒಂದೇ ದಾರಿ ಎಂದರು. [ ತಿಗಣೆ ಕೊಲ್ಲುವ ಜೋಕ್‌ನಂತೆ]..

ಇನ್ನು ಮಾತನಾಡಿ ಪ್ರಯೋಜನವಿಲ್ಲ ಅಂತ ನಾನು ಮಾತು ನಿಲ್ಲಿಸಿದೆ. ವಿಜ್ಞಾನ ಸೋತಿದೆಯೇ ಅಂತ ಮನದೊಳಗೆ ಹೇಳಿಕೊಂಡೆ.ಯಾಕೆಂದರೆ ಬೇರುಹುಳ ಶುರುವಾಗಿ ಅದೆಷ್ಟೋ ವರ್ಷವಾಯಿತು ಅಂತ ಹೇಳುತ್ತಾರೆ, ನಾವು ಕೆಲಸ ಮಾಡುತ್ತಿದ್ದೇವೆ ಅಂತಾರೆ. ಪರಿಹಾರ ಕೇಳಿದ್ರೆ ಹಿಡಿದು ಕೊಲ್ಲಿ ಅಂತಾರೆ.ಇದನ್ನು ಹೇಳು ಅವರು ಬೇಕಾ..?.ನಮ್ಮ ತೋಟದಲ್ಲೇ ಕೆಲಸ ಮಾಡುವ ಸೀನಪ್ಪನೂ ಹೇಳುತ್ತಾನೆ...!!. ಆದರೂ ಗೌರವ ...

ನನ್ನ ಮಿತ್ರ ಬಿಟ್ಟಿಲ್ಲ .ಆ ವಿಜ್ಞಾನಿಯನ್ನು ಕೇಳಿದ, ನೀವು ಈಗ ಇಲ್ಲಿನ ತೋಟಕ್ಕೆ ಬರುವುದಕ್ಕೆ ಏನು ಕಾರಣ ಅಂತ ಕೇಳಿದ. ಆಗ ,ನೀವು ಕಲಾಂ ಹೆಸರು ಹೇಳಬೇಕೆಂದರೆ ಆಗಲ್ಲ.ನಾವು ಈ ಕಡೆ ಹಿಂದೆಯೇ ಬಂದಿದ್ದೇವೆ ಆದರೆ "ಕಾಂಟ್ಯಾಂಕ್ಟ್‌"ಗೆ ಯಾರೂ ಸಿಕ್ಕಿರಲಿಲ್ಲ ಅಂತಾರೆ. ಮತ್ತೆ ಕಲಾಂ ಕಾರಣರಲ್ವಾ ಅಂದಾಗ , ಇಲ್ಲ.. ಇಲ್ಲ ಅಂದ್ರು.ಹಾಗಾದ್ರೆ ನೀವು ಇಷ್ಟು ಸಮಯ ಏನು ಮಾಡ್ತಿದ್ರಿ ಅಂತ ಕೇಳಿದಾಗ ,ಆ ವಿಜ್ಞಾನಿ ಸಿಡಿಮಿಡಿಯಾದ್ದು ಮಾತ್ರಾ ಅವರ ಮನಸ್ಥಿತಿಯನ್ನು ತಿಳಿಸಿತು.ಹೆಚ್ಚು ಬೇಡ ಅಂತ ಪ್ಯಾಕ್ ಮಾಡಿದೆವು.

ಇಲ್ಲಿ ಗಮನಿಸಬೇಕಾದ್ದು ಅಂದರೆ ಬಹುತೇಕ ಎಲ್ಲಾ ಇಂತಹ ಕೃಷಿ ಸಂಬಂಧಿ ವಿಚಾರ ಸಂಕಿರಣಗಳಲ್ಲಿ ವಿಜ್ಞಾನಿಗಳಿಗೆ ರೈತರ ಅನುಭವ ಮುಖ್ಯವಾಗುವುದಿಲ್ಲ.ವಿಜ್ಞಾನಿಗಳು ಏನು ಓದಿದ್ದಾರೆ ಅದನ್ನು ಹೇಳುತ್ತಾರೆ. ಆ ಬಗ್ಗೆ ಪ್ರಾಕ್ಟಿಕಲ್ ಆದ ವಿಶ್ಲೇಷಣೆ ಇರುವುದಿಲ್ಲ. ಅವರು ಏನಿದ್ರೂ ಆ ಕೆಮಿಕಲ್ ಇಷ್ಟು ಹಾಕಿ.. ಅಷ್ಟು ಹಾಕಿ ಎನ್ನುವ ಗಿಳಿ ಪಾಠ ಹೇಳಿಹೋಗುತ್ತಾರೆ. ನೋಡಿ ಅವರು ಹೇಳಿದ ಪರಿಹಾರ ಎಷ್ಟು ಪ್ರಾಕ್ಟಿಕಲ್ ಅಂತ ನಾವೇ ಆಲೋಚಿಸಬೇಕು.. ಬೇರು ಹುಳ ಕಾಣಿಸಿಕೊಂಡು ಅದೆಷ್ಟೋ ವರ್ಷವಾಯಿತು ಅಂತಾರೆ... ಕೃಷಿಭೂಮಿಯಲ್ಲಿ ಆ ಬಗ್ಗೆ ಅಧ್ಯಯನ ನಡೆದಿಲ್ಲ ಹಾಗಾಗಿಯೇ ಅದಕ್ಕೆ ಪರಿಹಾರವೂ ಸಿಕ್ಕಿಲ್ಲ. ಆದರೆ ಒಂದಂತೂ ಸತ್ಯ ಇಂತಹ ಸಂಕಿರಣಗಳಿಂದ ಒಂದಷ್ಟು ಎಚ್ಚರವಾಗುತ್ತದೆ.ಸರಕಾರಕ್ಕೂ ಅರಿವಾಗುತ್ತದೆ. ರೈತರೊಬ್ಬರ ಆ ಒಂದು ಸಂದೇಶ ಒಂದು ಹೊಸ ದಿಕ್ಕನ್ನು ತೋರಿಸಿದೆ ಅಂದರೆ ತಪ್ಪಾಗಲಾರದು.

ಇನ್ನು ರೈತ ಪರ ಸರಕಾರಗಳಿಗೆ ಇಂತಹ ಸಮಸ್ಯೆಗಳ ಅರಿವಾಗುವುದಿಲ್ಲ.ಸರಕಾರದ ಅಲ್ಲಿನ ಪ್ರತಿನಿಧಿಗಳಿಗೆ 10 ವರ್ಷಗಳಿಂದ ರೋಗವಿದ್ದರೂ ಸರಕಾರದ ಗಮನಸೆಳೆಯಲಾಗಲಿಲ್ಲ.ಇನ್ನು ಹಳದಿ ರೋಗ ಕೂಡಾ ಬಂದು ಸಂವತ್ಸರಗಳೇ ಉರುಳಿತು.ಹಲವಾರು ಮಂದಿ ಭೂಮಿ ಮಾರಿ ಹೋದರು. ಆದರೂ ಸರಕಾರದ ಗಮನವನ್ನು ಆ ಪ್ರತಿನಿಧಿ ಸೆಳೆಯಲೇ ಇಲ್ಲ.ಈಗ ಬಂದು ನಾಡಿದ್ದು ಅಧಿವೇಶನ ವೇಳೆಗೆ ಮಾತನಾಡುತ್ತೇನೆ ಅಂತಾರೆ.ಈ ರೋಗ ಶುರುವಾಗಿ ಇಷ್ಟು ವರ್ಷವಾಯಿತಲ್ಲಾ ತಾವ್ಯಾಕೆ ಮಾತನಾಡಿಲ್ಲ ಅಂದರೆ ಅದು ರೈತರದ್ದೂ ತಪ್ಪಿದೆ...ನಾನೂ ಕೃಷಿಕ ತೋಟಕ್ಕೆ ಸಾವಯವವೇ ಹಾಕಬೇಕು,.. ರಾಸಾಯನಿಕ ಹಾಕಬಾರದು .. ಎಂದು ಪೀಠಿಕೆ ಹಾಕಯತ್ತಾರೆ... ಹಾಗಾದ್ರೆ ಕೃಷಿಕರು ಯಾರತ್ರ ಮಾತನಾಡಬೇಕು... ಸಮಸ್ಯೆ ಯಾರಲ್ಲಿ ಹೇಳಬೇಕು..

ನಮ್ಮ ತಲೆಗೆ ನಮ್ಮದೇ ಕೈ ಅಂತಾರೆ ಹಾಗೆನಾ ಇದು...???


13 ಫೆಬ್ರವರಿ 2009

ಪ್ರೀತಿಗಾಗಿ..

ಪ್ರೀತಿಗಾಗಿ ಒಂದು ದಿನ.. ಇದು ಸಾಕಾ.. ಕೇವಲ ಒಂದು ದಿನದಲ್ಲಿ ಮುಗಿಯುವ ಪ್ರೀತಿ ನಮಗೆ ಬೇಕಾ ಎನ್ನುವ ನನ್ನ ವೈಯಕ್ತಿಕ ಪ್ರಶ್ನೆಗಳೊಂದಿಗೆ ಯೋಚಿಸುತ್ತಾ ಸಾಗುವಾಗ ದಾರಿ ಸಾಗಿದ್ದು ಹೀಗೆ...

ಪ್ರೀತಿ ಅದೊಂದು ಜೀವ ಸೆಲೆ.ಅದು ಯಾರೆಲ್ಲೇ ಸ್ಫುರಿಸಬಹುದು.ಹಾಗಾಗಿ ಅದು ನಿತ್ಯದ ಜೀವನದ ಜೊತೆಗೆ ಸಾಗುವ ಜೊತೆಗಾರ.ಹಾಗಾಗಿ ಅದನ್ನು ಬಿಟ್ಟಿರಲು ಯಾವುದೇ ಜೀವಕ್ಕೆ, ಹೃದಯಕ್ಕೆ ಸಾಧ್ಯವಿದೆಯೇ?.ಆದರೆ ಇಂದು ಅದೇ ಪ್ರೀತಿಯ ವಿರುದ್ಧ ಅಲೆಗಳು ಎದ್ದಿವೆ.ಅದು ಕೇವಲ ವಿರೋಧಕ್ಕಾಗಿ ಅಲ್ಲ. ನೈಜ ಪ್ರೀತಿಗೆ ಬೆಂಬಲವಿದೆ ಅಂತಲೂ ಮಾತು ಕೇಳಿಬರುತ್ತಿದೆ.ಅಂದರೆ ಇಲ್ಲಿ ನೈಜ ಹಾಗೂ ಕಪಟ ಪ್ರೀತಿ ಇದೆ ಎನ್ನುವುದು ಬಹಿರಂಗವಾದಂತಾಯಿತು. ಬಹುಶ: ಸಮಾಜ , ಅದರೊಳಗಿರುವ ,ಮನಸ್ಸುಗಳು ಇಂದು ಇಂತಹ ೨ ಮುಖಗಳನ್ನು ಹೊಂದಿರುವ ಕಾರಣದಿಂದಾಗಿಯೇ ಅರಳುವ ಕೆಂಗುಲಾಬಿಗಳು ಮುದುಡುವ ಹಂತಕ್ಕೆ ಬಂದಿದೆ.ಎಲ್ಲೆಲ್ಲೂ ದೊಂಬಿ, ಗಲಭೆ.. ದ್ವೇಷದ ಹೊಗೆ ಎದ್ದೇಳುತ್ತಿದೆ.ಒಂದಷ್ಡು ಹೊತ್ತು ಪ್ರೀತಿಯಿಂದ ಗೆಳೆಯಲ್ಲಿ ಮುಗ್ದವಾಗಿ ನಿಷ್ಕಲ್ಮಶವಾಗಿ ಮಾತನಾಡಲು ಸಮಯವೇ ಇಲ್ಲದಾಗಿದೆ.

ಮೊನ್ನೆ ದಾಳಿ ಮಾಡಿದ ಜನರಿಗೆ ಮೊದಲು ಪ್ರೀತಿ ಅಂದರೆ ಏನು?. ಅದರ ಮೂಲಕ ಏನನ್ನು ವಿವರಿಸಬಹುದು.. ಹೇಗೆ ಮನಸ್ಸನ್ನು ಬದಲಾಯಿಸಬಹುದು ಎನ್ನುವ ಪಾಠವನ್ನು ಇಂದು ವಿವರಿಸಬೇಕಾಗಿದೆ ಎಂದರೆ ತಪ್ಪಾಗಲಾರದು ಅಂತ ಮಿತ್ರನೊಬ್ಬ ಹೇಳುತ್ತಿದ್ದುದು ಸರಿ ಅಂತ ಅನ್ನಿಸಿತು.

ಪ್ರೀತಿ ಎಂದಾಕ್ಷಣ ಅದು ಯುವ ಮನಸ್ಸುಗಳ ನಡುವಣ ಭಾವನೆಗಳ ಕೊಂಡಿ ಎನ್ನುವ ಪರಿಭಾಷೆ ಬಂದುಬಿಡುತ್ತದೆ. ಈಗ ಪ್ರೀತಿಗೆ ಅದೊಂದೇ ಅರ್ಥವೇ ಎಂದು ನಂಬಬೇಕಾಗುತ್ತದೆ. ಗೆಳೆಯರ ನಡುವೆ, ಮಗುವಿನ ನಡುವೆ, ಅಮ್ಮನ ನಡುವೆ ಇರುವುದು ಏನು?.ಅದನ್ನು ಹೇಳಬೇಕಾದುದು ಏನು.? ಅಂತಹ ಪ್ರೀತಿಯನ್ನು ವ್ಯಕ್ತಪಡಿಸಲು ನಮಗೆ ದಿನವೊಂದು ಬೇಕೇ?. ಅನುದಿನವೂ ಅದೇ ಭಾವ ... ಅದೇ ಪ್ರೀತಿ.... ಹಾಗಾಗಿ ಅಂತಹ ಅಮರ ಪ್ರೀತಿಯನ್ನು ವ್ಯಕ್ತಪಡಿಸುಚುದಕ್ಕಾಗಿ ಮತ್ತು ಅದನ್ನು ಸಂಭ್ರಮಿಸಲು ದಿನ ಬೇಕು ಅಂತ ನನಗನ್ನಿಸುವುದಿಲ್ಲ. ನಮ್ಮ ಹಿಂದೆ ನೋಡಿದರೆ ದೇವತೆಗಳ ಕಾಲದಿಂದಲೂ ಪ್ರೀತಿಯ ದಾರಿಗಳೇ ಕಾಣುತ್ತವೆ. ಅದಕ್ಕಾಗಿ ಸ್ಮಾರಕಗಳೇ ಕಾಣುತ್ತವೆ. ದೇವತೆಗಳ ನಡುವೆ ಯುದ್ದ ನಡೆದ್ದನ್ನು ಕಾಣುತ್ತೇವೆ.ಆದರೂ ಅವರಾರು ಅದಕ್ಕೊಂದು ದಿನ ಅಂತ ಮಾಡಿಲ್ಲ. ಆದರೆ ಇದು ಈಗಿನ ಫ್ಯಾಷನ್. ಇತ್ತೀಚೆಗೆ ಅದು ಇನ್ನೂ ಫ್ಯಾಷನ್ ಆಗಿದೆ.
ಇತ್ತೀಚೆಗಿನ ಪ್ರೀತಿಗಳೆಲ್ಲವೂ ಕಾಲೇಜಿನಲ್ಲಿ ಹುಟ್ಟಿ ಅಲ್ಲಿಗೇ ಕೊನೆಗೊಳ್ಳುವ ಉದಾರಣೆಗಳೇ ಹೆಚ್ಚು.ಅಂದರೆ ಅಲ್ಲಿ ಪ್ರೀತಿ ಅಂದರೆ ಕಾಮದ ಅರ್ಥ ಬರುತ್ತದೆ, ಟೈಂಪಾಸ್ ರೂಪ ಸಿಗುತ್ತದೆ.. ಖರ್ಚು ಮಾಡಲು ಮತ್ತು ಮಾಡಿಸಲು ವೇದಿಕೆಯಾಗಿ ಬಿಡುತ್ತದೆ.ಹಾಗಾಗಿ ಅದಕ್ಕೊಂದು ದಿನ ಅಂತ ಇದ್ದರೆ ಇನ್ನೂ ಚೆನ್ನಾಗಿರುತ್ತದೆ ಹಾಗಾಗಿ ಈ ದಿನಕ್ಕೆ ಬಂತು ಬೇಡಿಕೆ.

ಆದರೆ ನಿಜವಾದ ನಿಷ್ಕಲ್ಮಶ ಪ್ರೀತಿಗೆ ದಿನವೊಂದು ಬೇಕಾ?.ಅದು ಸಹೃದಯದ ನಡುವಣ ಕೊಂಡಿಯಾಗಿರುವಾಗ ಅದಕ್ಕೊಂದು ದಿನ, ಆ ದಿನವೊಂದರಲ್ಲಿ ಸಂಭ್ರಮಿಸಿದರೆ ಸಾಕಾ?.ನಿತ್ಯ ಹಸಿರಾಗಿರುವ ಆ ಪ್ರೀತಿಯಲ್ಲಿ ದ್ವೇಷದ ಕಿಡಿ ಹೊತ್ತಿಸಬೇಕಾ ಎನ್ನುವ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ.... ಅದು ಪ್ರೀತಿಯ ಹುಡುಕಾಟ..

11 ಫೆಬ್ರವರಿ 2009

ಒಂದೇ ದಿನದಲ್ಲಿ

ಇಂದು ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಅವರು ನಾರಿಯರಿಗೆ ಸೀರೆ ಕೊಡ್ತಾರಂತೆ , ನಾರಿಯರು ಒಳ ಉಡುಪನ್ನು ನೀಡುತ್ತಾರಂತೆ.ಅವರು ಮಾನ ಮುಚ್ಚಿದರೆ ಇವರು ಮಾನ ತೆಗೀತಾರಂತೆ.... ಇದು ಚರ್ಚೆಯಾಗುವ ಸಂಗತಿ. ಅಸಲಿಗೆ ಇದು ಪ್ರತಿಭಟನೆಯೋ ಅಲ್ಲ ಮನರಂಜನೆಯೋ ಗೊತ್ತಿಲ್ಲ.ಆದರೂ ಸುದ್ದಿಯಾಗುತ್ತಿದೆ.

ಒಂದು ವರ್ಷದ ಹಿಂದೆ ಇದೇ ಸೇನೆಯಿಂದ ಫೆ.14 ಸುಮಾರಿಗೆ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು.ಈ ಬಾರಿಯೂ ಅದೇ ಹೇಳಿಕೆ.. ಆದರೆ ಈಗಿನ ಹೇಳಿಕೆಯಲ್ಲಿ ಕೊಂಚ ಬದಲಾವಣೆಯಿತ್ತು ಪ್ರೇಮಿಗಳು ನಮಗೆ ಸಿಕ್ಕರೆ ತಾಳಿ ಕಟ್ಟಿಸುತ್ತೇವೆ ಅಂತಾರೆ.. ಹಾಗಾಗಿ ಸುದ್ದಿಯಾಯಿತು ಅಂತ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವರ ಅಂತಹ ಹೇಳಿಕೆಗಳಿಗೆ ಅಂದು ಅಷ್ಟು ಮಹತ್ವವೇ ಇದ್ದಿರಲಿಲ್ಲ ಮಾತ್ರವಲ್ಲ ಸುದ್ದಿಯಾಗುತ್ತಿರಲಿಲ್ಲ. ಯಾವಾಗ ಅದೇ ಸೇನೆಯ ಮುಖ್ಯಸ್ಥರು ಎರಡೆರಡು ಬಾರಿ ಬಂಧನವಾಗಿ ಮೂರ್‍ನಾಕು ಘಟನೆಗಳು ದೇಶ ಮಟ್ಟದಲ್ಲಿ ಪ್ರಚಾರ ಪಡೆದ ನಂತರ ಆ ಸೇನೆಯು ದೇಶದ ಗಮನ ಸೆಳೆಯಿತು.ಅಷ್ಟು ದೊಡ್ಡ ಮಟ್ಟದ ಪ್ರಚಾರ ಈ ಸೇನೆಗೆ ಸಿಕ್ಕಿದೆ.ಹಾಗಾಗಿ ಇಂದು ಆ ಸಂಘಟನೆಯ ಹೇಳಿಕೆಯೂ ಅಷ್ಟೇ ಸೀರಿಯಸ್ಸಾಗಿ ಕಂಡಿದೆ. ಆದುದರಿಂದ ಮಂಗಳೂರಿನಲ್ಲಿ ಜೈಲಿನಿಂದ ಹೊರಬಂದ ಸಂಘಟನೆಯ ನಾಯಕನೊಬ್ಬ ಹೇಳಿದ್ದು ಮಾಧ್ಯಮಗಳಿಗೆ ಕೃತಜ್ಞತೆ ಎಂದು.ಆದರೆ ಅದು ಎಂತಹ ಪ್ರಚಾರ ಎಂದು ಎಲ್ಲರಿಗೂ ತಿಳಿದಿದೆ. ಅದಲ್ಲ ಪ್ರಚಾರ ಎಂತಹುದೇ ಇರಲಿ ಇಂದು ಆ ಸಂಘಟನೆ ಪತ್ರಿಕಾಗೋಷ್ಠಿ ಕರೆದು ಪ್ರೇಮಿಗಳ ದಿನಾಚರಣೆಗೆ ನಮ್ಮ ವಿರೋಧವಿದೆ ಎಂದ ಹೇಳಿಕೆಗೆ ದೇಶದ ಮಧ್ಯ ಭಾಗದಿಂದಲೇ ಪ್ರತಿಕ್ರಿಯೆ ಬರುತ್ತದೆ ಎಂದಾದರೆ ಆ ಸಂಘಟನೆಗೆ ಸಿಕ್ಕ ಪ್ರಚಾರದ ಮತ್ತು ಪವರ್ ಬಗ್ಗೆ ಆಲೋಚನೆ ಮಾಡಬೇಕು. ಕಳೆದ ವರ್ಷ ಇದೇ ಸಮಯದಲ್ಲಿ ಹಾಗೆಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತು ಆಚರಣೆ ಬಂದಿರಲಿಲ್ಲ.ಸಿಂಗಲ್ ಕಾಲಂನಲ್ಲಿ ಮುಗಿದಿತ್ತು. ಆದರೆ ಈಗಂತೂ ಭಾರೀ ಸುದ್ದಿಯಾಗಿದೆ.ಇದರ ಅರ್ಥ 2 ರೀತಿಯಲ್ಲಿದೆ.ಒಂದು ಅದೇ ಸೇನೆ ಮಂಗಳೂರಿನಲ್ಲಿ ಮಾಡಿದ ದಾಳಿಯಿಂದ ಜನ ಹೆದರಿ ಹೋಗಿದ್ದಾರೆ. ಅಥವಾ ಆ ಸೇನೆಯ ಹೇಳಿಕೆಗಳಿಗೆ ಈಗ ಮಹತ್ವ ಬಂದಿದೆ, ಬೆಲೆ ಬಂದಿದೆ ಅದರ ಹಿಂದೆ ಜನ ಬೆಂಬಲವಿದೆ.... ಇದರಲ್ಲಿ ಯಾವುದು ಸರಿ ಎಂಬುದನ್ನು ನಾವು ವಿಮರ್ಶಿಸಿಕೊಂಡರಾಯಿತು.

ಅದು ಮಾತ್ರವಲ್ಲ ಈ ಎಲ್ಲಾ ಘಟನೆಗಳಿಂದ ಪ್ರೇಮಿಗಳಂತೂ ಹೆದರಿದ್ದು ನಿಜ.ಅವರು ಈ ದಿನವನ್ನು ಬೇರೆ ದಿನಕ್ಕೆ ವರ್ಗಾಯಿಸಿದರೆ ಹೇಗೆ ಅಂತ ಯೋಚಿಸುತ್ತಿದ್ದಾರಂತೆ. ಈ ಗಲಾಟೆಯ ಉಸಾಬರಿಯೇ ಬೇಡ ಮೌನವಗಿ ಬೇರೆ ದಿನ ನಿಗದಿ ಮಾಡೋಣ ಅಂತ ಗುಸುಗುಸು ಶುರುವಾಗಿದೆ.

ಈಗ ನೋಡಿ ಅಂದು ಅದು ನಮ್ಮ ಸಂಘಟನೆ ಅಂತಿದ್ದವರೆಲ್ಲಾ ಈಗ ಅದು ನಮ್ಮದಲ್ಲ... ನಮ್ಮದಲ್ಲ ಅಂತಾರೆ. ಅದು ಬಿಡಿ ಮಂಗಳೂರು ತಾಲಿಬಾನ್ ಆಗಿದೆ ಎಂದು ಸಚಿವೆ ನೀಡಿದ ಹೇಳಿಕೆಗೆ ಪ್ರತಿಭಟನೆ ಮಾಡಲೂ “ಹಿಂದು” ಮುಂದು ನೋಡುತ್ತಿದ್ದಾರೆ. ಒಂದು ವೇಳೆ ಪ್ರತಿಭಟನೆ ಮಾಡಿದರೆ ನಾವು ಸೇನೆ ಸಪೋರ್ಟ್ ಇದ್ದೇವೆ ಎಂದಾಗುತ್ತದೆ... ಅವರವರಿಗೆ ಸ್ವಾತಂತ್ರ್ಯವಿದೆ ಎಂಬ ರಾಗ, ಸೇನೆಯ ಸಹ ಸಂಘಟನೆಗಳಿಂದ ಈಗ ಬರುತ್ತಿದೆ.

10 ಫೆಬ್ರವರಿ 2009

ಭೂಮಿ ಋತುಮತಿಯಾಗಿದ್ದಾಳೆ........

ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ಎಲ್ಲೆಂದರಲ್ಲಿ ಕಂಡರು ನಮ್ಮ ಪೂರ್ವಜರು.ಕಾರಣ ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ ಇರಲೇಬೇಕು.ಪ್ರಕೃತಿ, ಭೂಮಿಯೂ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಪ್ರಕೃತಿ ಬೇಕೇ ಬೇಕು.ಹಾಗಾಗಿ ಇಂದಿಗೂ ತುಳುನಾಡಿನಲ್ಲಿ ಕೆಡ್ಡಸದ ಆಚರಣೆಗಳು ಮಹತ್ವ ಪಡೆದಿದೆ. ಭೂಮಿಯನ್ನು ಕೂಡಾ ಹೆಣ್ಣೆಂಬ ಭಾವನೆಯಿಂದ ಕಾಣಲಾಗುತ್ತದೆ. ಈಗ ಅವಳು ಋತುಮತಿಯಾಗಿದ್ದಾಳೆ. ಅಂದರೆ ಸೃಷ್ಠಿಗೆ ಸಿದ್ಧಳಾಗಿದ್ದಾಳೆ ಎಂದರ್ಥ.ಮುಂದಿನ ತಿಂಗಳು ಬೆಳೆಗಳೆಲ್ಲಾ ಕಟಾವಿಗೆ ಸಿದ್ಧವಾಗುತ್ತದೆ. ಈ ಸಂಭ್ರಮವನ್ನು ತುಳು ನಾಡಿನ ಜನ ಕೆಡ್ಡಾಸ ಎಂದು ಕರೆಯುತ್ತಾರೆ. ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆ.

ತುಳು ನಾಡು ವಿವಿಧ ಆಚರಣೆಗಳ ಮೂಲಕ ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತು ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದ.ಇಂದು ಈ ಆಚರಣೆಗೆಳು ಯುವ ಪೀಳೆಗೆಗೆ ಅರಿವಿಲ್ಲದೇ ದೂರ ಸಾಗುತ್ತಿದೆ.ತುಳುವಿನ ಪೊನ್ನಿ ತಿಂಗಳಲ್ಲಿ ಅಂದರೆ ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.

ಸಾಮಾನ್ಯವಾಗಿ ಈ ಕೆಡ್ಡಸ ಆಚರಣೆಯು 3 ಅಥವಾ 4 ದಿನಗಳ ಕಾಲ ನಡೆಯುತ್ತದೆ. ಈ ದಿನವನ್ನು ಹೇಳಲು ಸ್ಥಳಿಯ ಭೂತನರ್ತಕರು ಮನೆ ಮನೆಗೆ ಹೋಗಿ ಕೆಡ್ಡಾಸದ ಆಚರಣೆಗಳನ್ನು ಹೇಳುತ್ತಾರೆ.ಅವರು ವಿವರಿಸುತ್ತಾ ಭೂಮಿ ಈ ದಿನಗಳಲ್ಲಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು, ಭೂಮಿ ಅದುರಬಾರದು ಎಂದು ವಿವರಿಸುತ್ತಾರೆ ..ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಈ ಸಂದರ್ಭದಲ್ಲಿ ಮನೆಯೊಡತಿ ಆತನಿಗೆ ಎಣ್ಣೆ, ಉಪ್ಪು, ಮೆಣಸು,ಹುಳಿ ಇತ್ಯಾದಿಗಳನ್ನು ನೀಡುತ್ತಾಳೆ. ಭೂತನರ್ತಕ ತನಗೆ ಸಿಕ್ಕ ಎಣ್ಣೆಯಲ್ಲಿ ಒಂದು ಚೂರು ಭೂಮಿಗೆ ಬಿಟ್ಟುಮನೆಯಲ್ಲಿ ನೀಡಿದ ಸಾಮಾಗ್ರಿಗಳನ್ನು ಪಡೆದು ಮುಂದೆ ಸಾಗುತ್ತಾನೆ. ಇದಾದ ಬಳಿಕ ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು. ತುಳಸಿ ಕಟ್ಟೆಯ ಬಳಿ ಭೂಮಿತಾಯಿಯ ಆರಾಧನೆಗೆ ಪ್ರತ್ಯೇಕ ಜಾಗವನ್ನು ವರ್ತುಲಾಕಾರದಲ್ಲಿ ನಿಗದಿಗೊಳಿಸುತ್ತಾರೆ.ಇಲ್ಲಿ ಭೂದೇವಿಗೆ ವಸ್ತ್ರ, ಗೆಜ್ಜೆ,ಕತ್ತಿ,ಕಲಶ, ಇತ್ಯಾದಿಗಳ ಸಹಿತ, ಅರಶಿನ, ಕುಂಕುಮಗಳನ್ನೂ ಇರಿಸಲಾಗುತ್ತದೆ.ಆ ಬಳಿಕ ಬಾಳೆ ಎಲೆಯಲ್ಲಿ ಭೂಮಿತಾಯಿಗೆ ತಿಂಡಿಯನು ಇರಿಸಲಾಗುತ್ತದೆ.ನಂತರ 2 ನೇ ದಿನ ಮಹಿಳೆಯರು ಬೇಟೆಗೆ ಹೋಗುವ ಪದ್ಧತಿ ಇದೆ ಎಂಬ ವಾಡಿಕೆಯಿದೆ.ಪುರುಷರು ಕೂಡಾ ಬೇಟೆ ಇನ್ನಿತರ ಕಾರ್ಯಗಳಿಗೆ ಹೋಗುತ್ತಾರೆ.ಇದೇ ದಿನ ಕೋಳಿ ಅಂಕವೂ ನಡೆಯುವ ಸಂಪ್ರದಾಯವಿದೆ.ಕೋಲಿ ಅಂಕಕ್ಕೆ ಹೋಗದೇ ಇರುವವರು ಒಟ್ಟು ಸೇರಿ ಇತರ ಆಟಗಳನ್ನಾಡುವ ನಿಯಮವಿದೆ.ಕೆಡ್ಡಸದ 3 ಅಥವಾ 4 ನೇದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ ೭ ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.

ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುಮಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆಹಸಿರು ಜೀವ..ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ. ಹಳ್ಳಿಯ ಒಳ ಹೋದಂತೆ ಇನ್ನೊಂದು ಕೊಟ್ಟಾಯಂಗೆ ಹೋದಂತೆ ಅನಿಸಿದರೂ ತಪ್ಪಲ್ಲ.

05 ಫೆಬ್ರವರಿ 2009

ಕೃಷಿ - ಋಷಿ

ಮೊನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಸ್ವಾಮಿಜಿಯೊಬ್ಬರು ಹೇಳಿದರು ಇಂದು ಕೃಷಿ ಹಾಗೂ ಋಷಿಯನ್ನು ಅವಗಣನೆ ಮಾಡಿದ್ದೇ ದೇಶ ಅಧ:ಪತನಕ್ಕೆ ಹೋಗಲು ಕಾರಣ ಎಂದರು.

ಆ ನಂತರ ಇದೇ ಮಾತನ್ನು ರಾಜಕಾರಣಿಗಳು ಪುನರಾವರ್ತನೆ ಮಾಡುತ್ತಾ ಎಳೆದು ಎಳೆದು ಸಾಗಿದರು.

ನನ್ನೊಳಗೆ ಹುಟ್ಟಿದ ಪ್ರಶ್ನೆ‌ಈ ದೇಶ ಅದ:ಪತನಕ್ಕೆ ಹೋಗಲು ಕಾರಣ ಯಾರು..? ರಾಜಕಾರಣಿಗಳಾ ... ಮಠಗಳಾ... ಧಾರ್ಮಿಕ ಕೇಂದ್ರಗಳಾ... ಮರೆವೇ.....?????

ಆದರೆ ಪಕ್ಕನೆ ಕಾಣುವುದು ರಾಜಕಾರಣಿಗಳು.ಇಲ್ಲಿ ಕೃಷಿಕರಿಗೆ ಪ್ರಯೋಜನವಾಗುವ ಯಾವುದಾದರೂ ಯೋಜನೆಗಳನ್ನು ಹಮ್ಮಿಕೊಂಡಿದ್ದಾರಾ?. ಇಂದು ಅಕ್ಕಿಯ ಬೆಲೆ ಗಗನಕ್ಕೇರುತ್ತಿದೆ. ಆದರೆ ಅಕ್ಕಿಯ ಉತ್ಪಾದನೆಗೆ ಬೇಕಾದ ಯೋಜನೆಗಳನ್ನು, ಆ ರೈತರಿಗೆ ಬೇಕಾಗುವ ಸವಲತ್ತುಗಳನ್ನು ಏನು ನೀಡಿದ್ದಾರೆ?. ರೈತರಿಗೆ ಟ್ರ್ಯಾಕ್ಡರಿಗೆ ಹಣ ನೀಡಿ ಅದಕ್ಕೆ ನಂತರ 2 ಪಟ್ಟು ಬಡ್ಡಿ ತೆಗೆಯುವ ಪ್ರಯತ್ನ ಸರಕಾರ ಮಾಡುತ್ತಿದೆ.ಮತ್ತೆ ಹೇಗೆ ಕೃಷಿ ಬೆಳೆಯಲು ಸಾಧ್ಯ.?

ಇನ್ನು ಋಷಿಯ ಅವಗಣನೆ ಬಹುಶ: ಆಗಿಲ್ಲ. ಏಕೆಂದರೆ ಇಂದು ನಾಯಿ ಕೊಡೆಗಳಂತೆ ಮಠಗಳು ಹುಟ್ಟಿಕೊಳ್ಳುತ್ತಿವೆ. ಅದೇ ಪ್ರಮಾಣದಲ್ಲಿ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಿದ್ದಾರೆ , ಅಲ್ಲಲ್ಲಿ ಹೊಸಹೊಸ ಪೀಠಗಳು ಕಾಣಿಸುತ್ತಿವೆ.ಅಲ್ಲೆಲ್ಲಾ ಜನ ಸಾಗರವೇ ಬರುತ್ತಿದೆ.ಹಾಗಾಗಿ ಅಲ್ಲಿ ಹಣದ ಹೊಳೆಯೇ ಹರಿದು ಬರುತ್ತಿದೆ. ಆದರೆ ಅದೇ ಸ್ವಾಮೀಜಿಗಳು ,ಮಠಗಳು ರೈತರಿಗೆ ಅಗತ್ಯವಾದ ಹೋರಾಟಗಳಲ್ಲಿ, ಅಥವಾ ಅನುಕೂಲವಾಗುವ ಯೋಜನೆಗಳನ್ನು ಹಮ್ಮಿಕೊಳ್ಳುವುದಿಲ್ಲ ಸರಕಾರವನ್ನು ಎಚ್ಚರಿಸುವುದೂ ಇಲ್ಲ.ಹಾಗಾದರೆ ದೇಶ ಅಧ:ಪತನಕ್ಕೆ ಹೋದುದು ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಇಲ್ಲಿಯವರೆಗೆ ಬಂದಿದ್ದೇನೆ ಮುಂದೆ ನೋಡಬೇಕು....

02 ಫೆಬ್ರವರಿ 2009

Love U ಸುತ್ತ.. ..ಅದು ಕಾಲೇಜು.ಈಗ ವಿವಾದದ ಕೇಂದ್ರ ಬಿಂದು.ಇದೇನು ಹೊಸದು ಅಂತ ಯೋಚಿಸುವ ಮುನ್ನವೇ ಒಂದು ಪೀಠಿಕೆ...

I Love You ಎನ್ನುವ 3 ಅಕ್ಷರ ಇಂದು 12 ಜನರ ಬಂಧನಕ್ಕೆ ಕಾರಣವಾಗಿದೆ.ಇನ್ನೂ 5 ಜನರ ಬಂಧನಕ್ಕೆ ರೆಡಿಯಾಗಿದೆ.ಅಬ್ಬಾ ಅದೇನು ಶಕ್ತಿಯೋ ಆ ಶಬ್ದಕ್ಕೆ. ಸುಮಾರು 20 ಜನರ ಬಂಧನಕ್ಕೆ ಕಾರಣವಾದ್ದು ಲವ್ ಯು ಶಬ್ದ... ಅಂತ ಕೇಳುತ್ತಿರುವಂತೆಯೇ ತಿಳಿದದ್ದು ಅವನು ಇವಳಿಗೆ ಹೇಳಿದ್ದು... ಮುಂದೆ ಕೇಳಿದರೆ , ಅವನು ಬೇರೆ... ಇವಳು ಬೇರೆ.. ಜಾತಿಯಲ್ಲ... ಮುಂದೆ ಬನ್ನಿ ಅದು ಕೋಮು.... ಈಗ ಅರಿವಾಗಬಹುದು ಮೊದಲಿನ 3 ಅಕ್ಷರಗಳು ಇವರಿಬ್ಬರೊಳಗೆ ಹರಿದಾಡಿದರೆ ಏನಾಗಬಹುದೆಂದು... ಅದೇ ಆಗಿದೆ ಈ ಶಾಲೆ ಕಂ ಕಾಲೇಜಿನಲ್ಲಿ.... ಇಂದು ಇಡೀ ತಾಲೂಕಿನಲ್ಲಿ ರಾದ್ದಾಂತಕ್ಕೆ ಕಾರಣವಾಗಿದೆ... ಅಶಾಂತಿ ಭೀತಿ ಎದುರಾಗಿದೆ...

ಒಂದು ಕಾಲೇಜು ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರೌಢಶಾಲೆ. ಅವನು PUC . ಇವಳು 9 ನೇತರಗತಿ. ಸಹಜವಾಗಿಯೇ ಮಕ್ಕಳೊಂದಿಗೆ ಊಟ ಮಾಡಿ ತಟ್ಟೆ ತೊಳೆಯಲು ನೀರಿನ ಟ್ಯಾಂಕ್ ಬಳಿ ಬರುತ್ತಾರೆ ಅಲ್ಲಿ ಅವನು I Love You ಅಂತಾನೆ ಇವಳು ಇಲ್ಲ ಅಂತಾಳೆ... ವಿಷಯ ಶಾಲಾ , ಕಾಲೇಜು ಮಕ್ಕಳಿಗೆ ತಲಪುತ್ತದೆ , ಅವನು ಬೇರೆ .... ಇವಳು ಬೇರೆ ಕೋಮು.. ಹಾಗಾಗಿ ಶಾಲೆಯ ಮಕ್ಕಳೊಳಗೆ ಜಗಳವಾಗುತ್ತದೆ. ವಿಷಯ ಹೊರಗೆ ಹೋಗುತ್ತದೆ.ಮರುದಿನ ಕಾಲೇಜಿನಲ್ಲಿ ಜನ ಸೇರುತ್ತಾರೆ.. ಹೊಡೆದಾಟ ಆಗುತ್ತದೆ.. ರಾಜಕೀಯ ಬಣ್ಣ ಪಡೆಯುತ್ತದೆ ತಾಲೂಕಿಗೆ ಪ್ರಸಾರವಾಗುತ್ತದೆ.. ಒಂದು ದೊಡ್ಡ ಪ್ರಕರಣವಾಗುತ್ತದೆ... ಆದರೆ ಕಾಲೆಜಿನ ವರ್ಗ ಈ ಪ್ರಕರಣವನ್ನು ಸುಖಾಂತ್ಯಗೊಳಿಸಬಹುದಿತ್ತು ಅದು ಈ ವಿಷಯವನ್ನು ನಿರ್ಲಕ್ಷ್ಯ ಮಾಡಿತ್ತು.ಹಾಗಾಗಿ ಆ ವಿಷಯಕ್ಕೆ ಹೊರಗಿನವರು ಅಂದರೆ ಕಾಲೇಜಿಗೆ ಹೊರಗಿನವರು ಪ್ರವೇಶಿಸಿದರು... ದೊಡ್ಡ ಸುದ್ದಿಯೇ ಆಯಿತು.. ಬಂಧನವಾಯಿತು.. ಇನ್ನೂ ಬಂಧನಕ್ಕೆ ಬಾಕಿ ಉಳಿದಿದೆ....

ಈಗ ವಿಷಯದ ಹಿಂದೆ ಸೂಕ್ಷ್ಮವಾಗಿ ಹೋದಾಗ , ಇನ್ನೂ ಮೀಸೆ ಬಾರದ ಹುಡುಗರು , LOVE ಎನ್ನುವ ಪದಕ್ಕೆ ಸರಿಯಾದ ಅರ್ಥವನ್ನೇ ಕಂಡುಕೊಳ್ಳದ ಹುಡುಗಿ , ನಿರ್ಲಕ್ಷ್ಯ ವಹಿಸಿದ ಕಾಲೇಜು , ರಂಜನೆಯ ಸುದ್ದಿಯನ್ನೇ ಬಯಸುತ್ತಿದ್ದ ಮತ್ತು ಟಾರ್ಗೆಟ್ ಹಾಕಿಕೊಂಡಿದ್ದ ಮಾಧ್ಯಮಗಳು.. ಇಡೀ ವಿಷಯ ತಿರುವು ನೀಡಿತು.. ಇಂದು ನಮ್ಮ ಸರಕಾರ ಇಲಾಖೆಗಳು ಮಲಗಿ ನಿರ್ದಿಸುತ್ತಿವೆ ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಈ ಪ್ರಕರಣ ಇಡೀ ಶಾಲಾ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು ಎನ್ನುವ ಚಿಂತನೆಯನ್ನೇ ಮಾಡದೆ ಪ್ರಕರಣದ ವಿಚಾರಣೆಯನ್ನೇ ಮಾಡಿಲ್ಲ. ಸಾರ್ವಜನಿಕರಲ್ಲಿ ಮನವಿಯನ್ನೂ ಮಾಡಿಲ್ಲ .. ಅದು ಅದರ ಪಾಡಿಗೆ ಇದೆ .. ವಿದ್ಯಾರ್ಥಿಗಳು ದಿನಕ್ಕೊಂದು ಕತೆ ಹೇಳುತ್ತಾರೆ.

ಅಲ್ಲ ನಮ್ಮ ವ್ಯವಸ್ಥೆ ಏಕೆ ಹೀಗೆ ಎನ್ನುವುದಕ್ಕೆ ಉತ್ತರವೇ ಇಲ್ಲ ಬಿಡಿ.ನಮ್ಮ ನಾಯರು ಎನಿಸಿಕೊಂಡವರಿಗೂ ಅರಿವು ಬೇಡವೇ. ಒಂದು ಶಾಲೆಯಲ್ಲಿ ಕೋಮು ಭಾವನೆಯನ್ನು ಹುಟ್ಟು ಹಾಕಿದರೆ , ಅಲ್ಲಿ ಆ ಭಾವನೆಯ ಬೀಜ ಬಿತ್ತಿದರೆ ಅದು ಮುಂದೆ ಹೆಮ್ಮರವಾಗಬಹುದು ಎನ್ನುವ ಅರಿವು ಬೇಡವೇ.ಕೇವಲ ಮತಾಂಧರಾಗುವುದು ಎಷ್ಟು ಸರಿ ಅಂತ ಯಾರಲ್ಲಿ ಕೇಳುವುದು?. ಬಹುಶ; ನಾಯಕರುಗಳಿಗೆ ಪಕ್ಷಗಳಿಗೆ ಇಂದು ಓಟು ಬೇಕು ಅದಕ್ಕಾಗಿ ಶಾಲೆಯೊಳಗೂ ಹೊಕ್ಕಿ ಅಲ್ಲಿ ಹುಳಿ ಹಿಂಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ,ತಾಲೂಕಿನಲ್ಲಿ ವಿಷಯ ಹರಡುತ್ತಾರೆ , ಎನ್ನುವುದಕ್ಕೆ ಇದು ಒಂದು ಸಾಕ್ಷಿ ಅಂತ ಅನಿಸುತ್ತದೆ.

ಅಲ್ಲ ಆ ಮಕ್ಕಳ ಮನಸ್ಸಿನಲ್ಲಿ ವಿಷಬೀಜವ ಬಿತ್ತುವ ಪ್ರಯತ್ನ 2 ಕಡೆಯಿಂದಲೂ ಆಗುತ್ತದೆ ಇಂದು Love you ಒಂದು ಕಾರಣವಾದರೆ ಅದರ ಹಿಂದೆಯೇ ಹೋದರೆ ಅಂತಹ ಹಲವು ಸಂಗತಿಗಳು ಹೊಸ ಹೊಸತು ಸಿಗುತ್ತದೆ. ಹಾಗಾಗಿ ಇಂದು Love You ಅಲ್ಲ Love Allಎಂಬುದನ್ನು ಹೇಳಿಕೊಡುವ ಪ್ರಯತ್ನ ಮಾಡೋಣ....