
ಚಳಿ... ಇದು ಮೌನ ಧ್ಯಾನ...
ಸೂರ್ಯ ಮೂಡಣದಿ ಕೆಂಪಾಗಿ ಕಾಣುತ್ತಲೇ ಹಾಸಿಗೆಯು ಯಥಾಸ್ಥಾನವನ್ನು ಪಡೆಯುತ್ತದೆ.ರಗ್ಗು ಕಂಬಳಿಗಳು ಮಡಚಿಕೊಳ್ಳುತ್ತವೆ.ಅಬ್ಬಾ ಏನು ಚಳಿ... ಆದರೂ ಬೆಳಗ್ಗೆ 6 ರಿಂದ 7 ರ ನಡುವೆ ಉತ್ಥಾನವಾಗದೆ ವಿಧಿಯಿಲ್ಲ.ಇನ್ನೆರಡು ತಿಂಗಳುಗಳ ಕಾಲ ಈ ಚಳಿಯು ಹೊಸ ಲೋಕವನ್ನು ಸೃಷ್ಠಿಸಿಬಿಡುತ್ತದೆ.
ಬೆಳ್ಳಂಬೆಳಗ್ಗೆ ಸೊಂಯ್ ಬೀಸುವ ಗಾಳಿ... ತೆಂಗಿನ ಗರಿಯಿಂದ ಟಪ್.. ಟಪ್ ಬೀಳುವ ಮಂಜಿನ ಹನಿ.. ಈ ಹನಿಗಳ ನಡುವೆ ಹರಿದು ಬರುವ ಸೂರ್ಯನ ಕಿರಣ... ಅಲ್ಲಲ್ಲಿ ಎಳೆಯ ಬಿಸಿಲಿಗೆ ಮೈಯೊಡ್ಡಿ ನಿಲ್ಲುತ್ತಾ ಹರಟೆಯನ್ನು ಹೊಡೆಯುವ ತಂಡಗಳು... ಹೀಗೆ ಚಳಿ ಹತ್ತು ಹಲವು ಮಜಲಿನಲ್ಲಿ ತನ್ನದೇ ಆದ ಬೇರನ್ನು ಇಳಿಗೊಳಿಸುತ್ತದೆ.ನೋಡುಗನಿಗೆ ಒಂದೊಂದು ರೂಪದಲ್ಲಿ ಕಾಣಿಸುತ್ತದೆ. ದೂರದ ಅಲ್ಲೆಲ್ಲೋ ಅನುದಿನವೂ ಏನೊಂದು ಚಳಿ.. 0 ಡಿಗ್ರಿಗಿಂತ ಕಡಿಮೆಗೆ ಕೆಲವೊಮ್ಮೆ ಇಳಿದಿರುತ್ತದೆ ಆದರೆ ಅವರು ಹೇಗಪ್ಪಾ ಸಹಿಸುತ್ತಾರೆ..?? ಇಲ್ಲಿ ಒಂದು ದಿನ ಚಳಿ ಜೋರಾದರೆ ಬೆಚ್ಚನೆ ಮಲಗಿದರೆ ಏಳುವಾಗಲೇ ತಡವಾಗಿ ಬಿಡುತ್ತದೆ. ಆದರೆ ಅವರು ಹೇಗೆ ........... ?. ನಿಜಕ್ಕೂ ಅಚ್ಚರಿ. ಆದರೆ ಅದು ಅಲ್ಲಿನ ವಾತಾವರಣ ಬಿಡಿ. ನಾವಲ್ಲಿದ್ದರೂ ಸೆಟ್ ಆಗುತ್ತಿದೆವು ಅನ್ನಿ. ಹಾ.. ಅದೆಲ್ಲಾ ಬಿಡಿ ನಮ್ಮಲ್ಲಿದ್ದಷ್ಟು ಚಳಿ ಇಲ್ಲಿನ ಆಸುಪಾಸಿನಲ್ಲೆಲ್ಲೂ ಇಲ್ಲ. ಹಾಗಾಗಿ ನಮ್ಮೂರು ಬೆಳಗಿನ ಜಾವ ಈಗ ಕೊಂಚ ಸ್ಥಬ್ಧ. ಮೊನ್ನೆ ಮೊನ್ನೆ ಹಸಿರು ಹಸಿರಾಗಿದ್ದ ಗಿಡ ಗಂಟಿಗಳು ಇನ್ನು ಒಣಗಲು ಶುರುವಾಗುತ್ತವೆ. ಹೊಸ ಜೀವನಕ್ಕೆ ಅವುಗಳೂ ನಾಂದಿಯನ್ನು ಹಾಡುತ್ತವೆ. ಹಾಗೆಯೆ ಇತ್ತ ಚಳಿಯೂ ಮುದ ನೀಡುತ್ತದೆ. ಬೆಳಗ್ಗೆ ಆಗಿನ್ನೂ ಸೊಂಯ್ ಗಾಳಿ ಸುಳಿದಾಡುತ್ತಿರುವಾಗ ಎರಡೆರಡು ರಗ್ಗು ಹೊದ್ದಲ್ಲಿಂದ ಎದ್ದು ಹಾಗೆಯೇ ಬಂದು ಇಣುಕಿದಾಗ ಮನೆಯೆದುರು ಬೊಗ್ಗ ಕುಟುರು ಹಾಕುತ್ತಿರುತ್ತದೆ. ನಮ್ಮನ್ನು ಕಂಡಾಗ ಬಾಲವನ್ನು ಅಲ್ಲಾಡಿಸಿ ಟಪ ಟಪ್ ಎಂದು ಮೈಯ ಕೊಡವಿ ಎಲ್ಲೋ ಮಾಯವಾಗಿ ಬಿಡುತ್ತದೆ. ಅಲ್ಲಿ ಹಿರಿಯಜ್ಜಂದಿರು ಆಗಲೇ ಗದ್ದೆಯ ಕಡೆಗೆ ತೆರಳಿ ಒಂದು ಸುತ್ತು ಹಾಕಿ ಗಿಡಗಳಿಗೆ ನೀರು ಹಾಕಿ ಬಂದು ಬಿಸಿ ನೀರಿನ ಸ್ನಾನದಲ್ಲಿ ತೊಡಗುತ್ತಾರೆ. ಆ ನಂತರ ಬಿಸಿ ಬಿಸಿ ಚಾ... ಅಂಗಳದಲ್ಲಿ ಅಗ್ನಿಷ್ಠಿಕೆಯ ಮಜಾ... ಮಕ್ಕಳೆಲ್ಲಾ ಸೇರಿ ಆ ಅಗ್ನಿಷ್ಠಿಕೆ ಸುತ್ತಾ ಕುಟು ಕುಟು ಎನ್ನುತ್ತಾ ಕತೆಯ ಜ್ಞಾಪನ. ಹೋ ಅದು ಕತೆ, ಕೇಳಲು ಹೇಳಲು ಎಂಥ ಸುಂದರ ಜಾಗ. ಅಜ್ಜನಿಗೆ ಬೀಡಿ ಸೇದಲು ಎಂಥ್ ಆಒಳ್ಳೆ ಸಮಯ ಅದು. ಸ್ಪಕ್ಕದ ಮಬೆಯಾತನ ಬಗ್ಗೆ ಕಮೆಂಟ್ ಹೇಳಲು ಉತ್ತಮ ಅವಕಾಶ... ಹೀಗೆ ಎಲ್ಲರಿಗೂ ಆ ಚಳಿ ಆಪ್ಯಾಯಮಾನ... ಹೊಸದಾದ ಜೋಡಿಗಂತೂ ಹೇಳಿ ಮಾಡಿಸಿದ ಸಮಯವಂತೆ... ಅಜ್ಜಂದಿಗೆ ನೆನಪುಗಳನ್ನು ಕೆದಕುವ ಸಮಯವಂತೆ... ನಮ್ಮಂಥವರಿಗೆ ಚಳಿಯನ್ನು ಆಸ್ವಾದಿಸುವ ಸುಂದರ ಸಮಯ...
ಆಹಾ ಏನು ಚಳಿ... ಏನು ಚಳಿ... ಏನು ಖುಷಿ... ಕುಟು .. ಕುಟು.. ಕುಟು...