
ಮತ್ತೆ ಬರುತ್ತಿದೆ ಕನ್ನಡ ರಾಜ್ಯೋತ್ಸವ.ಸರಕಾರವು ಎಂದಿನಂತೆ ಭರವಸೆಗಳನ್ನು ಹೇಳಲಿದೆ. ಈ ನಡುವೆ ಮಾಮೂಲಿನಂತೆ ಹಾಗೂ ಅದಕ್ಕಿಂತ ಹೆಚ್ಚಾಗಿ ಪ್ರಶಸ್ತಿಯನ್ನು ಘೋಷಿಸಿದೆ. ಸಹಜವಾಗಿಯೇ ಪ್ರಶಸ್ತಿ ಪ್ರಕಟವಾದ ಸುದ್ದಿ ಕೇಳಿದೊಡನೆಯೇ ಟಿ ವಿ ಲೋಗೋಗಳು ಪ್ರಶಸ್ತಿ ಪುರಸ್ಕೃತರ ಮುಂದೆ ಬಂದಾಗ ಅವರಲ್ಲೊಬ್ಬರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಇಂಗ್ಲಿಷ್ ನಲ್ಲಿ..!!!. ಇದು ಕನ್ನಡ ರಾಜ್ಯೋತ್ಸವಕ್ಕೆ ಸಿಕ್ಕ ಗೌರವವೇ ಎಂಬ ಪ್ರಶ್ನೆ ಮನದಾಳದಲ್ಲಿ ಎದ್ದೇಳುತ್ತಿದೆ.ಆದರೆ ಇದನ್ನು ಕೇಳುವುದು ಯಾರಲ್ಲಿ??..
ಪ್ರತೀ ಬಾರಿಯೂ ಈ ಪ್ರಶಸ್ತಿಗಾಗಿ ಲಾಬಿ ನಡೆಯುತ್ತದೆ ಎನ್ನುವುದು ನಮಗೆಲ್ಲಾ ಗೊತ್ತಿದ್ದ ವಿಚಾರ.ಆದರೆ ಪ್ರಶಸ್ತಿಗಳು ನಿಜವಾದ ಅರ್ಹತೆಯಿದ್ದವರಿಗೆ ಸಿಗಬೇಕು ಎನ್ನುವ ಚಿಂತನೆ ನಮ್ಮೆಲ್ಲರಲ್ಲಿದ್ದರೂ ಹಾಗೆ ಆಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಸಾಮಾನ್ಯ ಜ್ಞಾನ ಈಗ ಬರತೊಡಗಿದೆ.ದು:ಖದ ಸಂಗತಿಯೆಂದರೆ ಅರ್ಹರಿಗೆ ಪ್ರಶಸ್ತಿ ಸಿಗುತ್ತಿಲ್ಲ ಬಿಡಿ. ಪ್ರಶಸ್ತಿ ಬಂದವರಾದರೂ ಒಂದೆರದು ದಿನವಾದರೂ ಕನ್ನಡದಲ್ಲಿ ಮಾತನಾಡಬಾರದೇ?.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎನ್ನುವ ಸಾಮಾನ್ಯ ಜ್ಞಾನವಾದರೂ ಬೇಡವೇ?. ಎಂಥಾ ಅವಸ್ಥೆ ಬಂತು.!!. ಬೇರೆ ಜನ ಸಿಕ್ಕಿಲ್ಲವೇ ಇವರಿಗೆ. ಇಂಗ್ಲಿಷ್ ನಲ್ಲಿ ಮಾತನಾಡಲಿ ಯಾರು ಬೇಡ ಅನ್ನುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಬಂತಲ್ಲಾ ಸಮಸ್ತ ಕನ್ನಡಿಗರ ಪರವಾಗಿ,ಕನ್ನಡಿಗರ ಸರಕಾರದ ಪರವಾಗಿ ಅದಕ್ಕಾದರೂ ಗೌರವ ಕೊಡಬೇಕಲ್ಲಾ....
ಅದಿರಲಿ ರಾಜ್ಯೋತ್ಸವ ಎಂದಾಗ ಗಡಿನಾಡು ನೆನಪಾಗುತ್ತದೆ. ಇತ್ತ ಕಾಸರಗೋಡು ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಯಾವುದೇ ಮಾಧ್ಯಮಗಳಲ್ಲಿ ಬರಲಿ ಸರಕಾರ ಈ ಬಗ್ಗೆ ಗಮನ ಹರಿಸಿದೆಯಾ?. ಕಾಸರಗೋಡಿನಲ್ಲಿ ಇತ್ತೀಚೆಗೆ ಕನ್ನಡ ಶಾಲೆ ,ಕಾಲೇಜುಗಳಲ್ಲಿ ಕನ್ನಡದ ಬಗ್ಗೆ ಅವಹೇಳನ ಮಾಡಲಾಗಿತ್ತು. ಆದರೆ ಧ್ವನಿ ಎತ್ತಿದವರಿಲ್ಲ. ಗಡಿನಾಡಿನ ಕೆಲವು ಸಾಹಿತಿಗಳು ಮಾತನಾಡಿದ್ದರು. ಆದರೆ ಫಲ ಶೂನ್ಯ. ಈ ಬಗ್ಗೆ ರಸ್ತೆ ಬದಿಯಲ್ಲಿ ಹೋಗುವ ಜನರನ್ನು ಮಾತನಾಡಿಸಿದರೆ " ಏ ನಮಗೆ ಯಾವುದಾದರೇನು.." ಅಂತಾರೆ. ಇನ್ನೂ ಒಳ ಹೋದರೆ ಕೇರಳವೇ ಸರಿ ಅಂತಾರೆ. ಇಲ್ಲಿ ಕೆಲ ಬಂದ್ ಗಳು ಬಿಟ್ಟರೆ ಉಳಿದೆಲ್ಲಾ ಸೌಲಭ್ಯ ಚೆನ್ನಾಗಿಯೇ ಇದೆ ಅಂತಾರೆ. ಇಲ್ಲಿ ಎರಡು ರೀತಿಯಲ್ಲಿ ಜನ ಬದುಕುತ್ತಾರೆ. ಸಾಂಸ್ಕೃತಿಕವಾಗಿ ಕರ್ನಾಟಕವನ್ನು ಅವಲಂಬಿಸಿದರೆ ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕೇರಳವನ್ನು ಅವಲಂಬಿಸುತ್ತಾರೆ. ಅತ್ತ ಕರ್ನಾಟಕವನ್ನೂ ಬಿಡಲಾಗದೆ ಇತ್ತ ಕೇರಳವನ್ನೂ ಅವಲಂಬಿಸಲಾಗದ ಸ್ಥಿತಿಯಲ್ಲಿ ಇಲ್ಲಿನ ಜನರಿದ್ದಾರೆ.ಇಂತಹ ಕೆಲ ತಾಂತ್ರಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು.....