28 ಆಗಸ್ಟ್ 2008

ಹೆಕ್ಕಿಕೋ ಪ್ಲಾಸ್ಟಿಕ್.. ಹೆಕ್ಕಿಕೋ.!!.
ಇಂದು ಬಹುತೇಕ ಪಟ್ಟಣಗಳಲ್ಲಿ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ.ಎಲ್ಲಾ ಸಂಘಟನೆಗಳದ್ದು ಉದ್ದೇಶ ಒಂದೇ. ಸಮಾಜ ಸೇವೆ.ಆದರೆ ಅದರಲ್ಲಿ ಎಲ್ಲೋ ಒಂದು ಪ್ರಚಾರ ಗಿಟ್ಟಿಸಿಕೊಳ್ಳುವ ಅಂಶ ಕಂದುಬರುತ್ತದೆ. ಇತ್ತೀಚೆಗೆ ಅದು ಬಹಿರಂಗವಾಗಿಯೇ ಕಂಡುಬರುತ್ತದೆ.ಗಮನಿಸುತ್ತಾ ನೋಡಿ.. ಕೆಲವು ಸಂಘಟನೆಗಳು ವಿವಿಧ ಕಾರ್ಯಕಮಗಳನ್ನು ಹಮ್ಮಿಕೊಳ್ಳುತ್ತವೆ.ಅದರಿಂದ ಜನರಿಗೆ ಪರಿಸರಕ್ಕೆ ಎಷ್ಟು ಪ್ರಯೋಜನ ಅಂತ ಲೆಕ್ಕಹಾಕುವ ಗೋಜಿಗೆ ಹೋಗುವುದಿಲ್ಲ.ಕಾರ್ಯಕ್ರಮಗಳು ನಡೆಯುತ್ತಲೆ ಇರುತ್ತದೆ. ಹಳ್ಳಿಗಳಲ್ಲಿರುವ ಅನೇಕ ಸಂಘಟನೆಗಳು ಏನಿಲ್ಲವೆಂದರೂ ಜನಸಾಮಾನ್ಯರಿಗೆ ಬೇಕಾಗುವ ಕೆಲವು ಕಾರ್ಯಕ್ರಮಗಳನ್ನಾದರೂ ಮಾಡುತ್ತವೆ.ನಗರದಲ್ಲಿ ಹಾಗಲ್ಲ. ಅದಕ್ಕೊಂದು ಉದಾಹರಣೆ ಕೊಡಬಲ್ಲೆ..

ಇತ್ತೀಚೆಗೆ ಸಂಘಟನೆಯೊಂದರಿಂದ ಪ್ಲಾಸ್ಟಿಕ್ ಹೆಕ್ಕಿಕೋ ಅಭಿಯಾನ ನಡೆಯಿತು.ಅದರಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಲು ಶಾಲಾ ಮಕ್ಕಳ ಸಹಯೋಗ ಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರನ್ನೂ ಕೇಳಲಾಯಿತು. ಸರಿ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಬೇಕು ಎಂಬ ದೃಷ್ಠಿಯಿಂದ ಶಾಲಾ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲಾಯಿತು. ಅಲ್ಲಿ ಆಗಿದ್ದೇ ಬೇರೆ ಸಂಘಟನೆಯವರು ಅಲ್ಲಿ ಇಲ್ಲಿ ನಿಂತದ್ದು ಬಿಟ್ಟರೆ ಪೇಟೆಯಿಂದ ಸಂಪೂರ್ಣ ಪ್ಲಾಸ್ಟಿಕ್ ಹೆಕ್ಕಿದ್ದು ಮಕ್ಕಳು.ನಂತರ ಫೋಟೋಕ್ಕೆ ಪ್ಲಾಸ್ಟಿಕ್ ಹಿಡಿದುಕೊಂಡು ಫೋಸು ಕೊಟ್ಟದ್ದು ಸಂಘಟನೆಯ ಸದಸ್ಯರು. ಅಲ್ಲಿ ನಿಜವಾಗಲೂ ಕಾಳಜಿ ಇದ್ದದ್ದು ಯಾರಿಗೆ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.

ಹೀಗೆ ಅನೇಕ ಸಂಘಟನೆಗಳು , ಸಮಾಜ ಸುಧಾರಕರು ನಿಜವಾಗಲೂ ಕಾಳಜಿಯಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆಯೇ ಅಥವಾ ತಾವು ಪ್ರಚಾರ ಗಿಟ್ಟಿಸಿಕೊಳ್ಳಲು ತಮ್ಮ ಫೋಟೋ ಪತ್ರಿಕೆಯಲ್ಲಿ ಬರಲು ಇಂತಹ ಪುಟಗೋಸಿ ಕಾರ್ಯಕ್ರವನ್ನು ಮಾಡುತ್ತಾರೆಯೇ ಅಥವಾ ಮಕ್ಕಳಿಗೆ ಉತ್ತೇಜನ ನೀಡಲು ಇಂತಹ ಕಾರ್ಯಕ್ರವನ್ನು ಮಾಡುತ್ತಾರೆಯೇ ಎಂಬ ನನ್ನ ಪ್ರಶ್ನೆಗೆ ಉತ್ತರ ಹಲವಾರು ಸಮಯಗಳಿಂದ ಸಿಕ್ಕಿಯೇ ಇಲ್ಲ. ಹಲವು ಕಡೆ ಹಲವು ಸಮಯಗಳಿಂದ ಇಂತಹ ಕಾರ್ಯಕ್ರಮಗಳನ್ನು ನೋಡಿದ ನನಗೆ ಇಲ್ಲಿ ಅದನ್ನು ವ್ಯಕ್ತಪಡಿಸಲೇ ಬೇಕು ಎಂದು ಅನಿಸಿತು.

ನಿಜವಾದ ಕಾಳಜಿಯುಳ್ಳ ಕಾರ್ಯಕ್ರಮಗಳು ಸಂಘಟನೆಗಳಿಂದ ಬರಲಿ ಎಂಬುದು ನನ್ನ ಬಯಕೆ.

26 ಆಗಸ್ಟ್ 2008

ಇದು epsilon....ಇದೊಂದು ತರದ ವಾದ ಎನ್ನಬಹುದೋ ಅಥವಾ ನವೋಲ್ಲಾಸದ ಕಿಡಿ ಅನ್ನಬಹುದೋ ಅಂತ ಗೊತ್ತಿಲ್ಲ.ಅಂತೂ ನನಗೆ ಇಷ್ಟವಾದ ನಾಲ್ಕು ವಾಕ್ಯಗಳು.

ನಾವು ಒಂದು ತೂಗುಸೇತುವೆಯ ವರದಿಯನ್ನು ಮಾಡುವುದಕ್ಕಾಗಿ ತೆರಳಿದ್ದ ಸಂದರ್ಭ. ತೂಗು ಸೇತುವೆಗಳು ದೂರದ ನಗರದಲ್ಲಿ ನಿಂತು ನೋಡಿದರೆ ಅದೊಂದು ಸಾಮಾನ್ಯವಾದ ವ್ಯವಸ್ಥೆ. ಆದರೆ ಅದರ ಒಳಗೆ ಹೋದಾಗಲೇ ಅಲ್ಲಿನ ಸಮಸ್ಯೆಯ ಆಳ ... ಅಗಾಧತೆ ಅರಿವಾಗುವುದು. ಒಂದು ತೂಗು ಸೇತುವೆ ಏನನ್ನೆಲ್ಲಾ ಮಾಡಬಹುದು? ಕಲ್ಪಿಸಲೂ ಅಸಾಧ್ಯ!. ತುಂಬಾ ಅಗಲವಾದ ನದಿ , ಅದರಾಚೆಗೆ ಹತ್ತಾರು ಮನೆಗಳು. ಮಳೆಗಾಲದ ಅವಧಿಯಲ್ಲಿ ಅಲ್ಲಿನ ಜನ ದಡ ಸೆರುವುದು ಹೇಗೆ?. ನಗರದಿಂದ ಕೂಳನ್ನು ತರುವುದು ಹೇಗೆ? ನಗರಕ್ಕೆ ತಾವು ಬೆಳೆದ ಉತ್ಪನ್ನಗಳನ್ನು ತಲಪಿಸುವುದು ಹೇಗೆ?. ಸರಕಾರಗಳು ತುಂಬಾ ಅಗಲವಾದ ನದಿಗಳಿಗೆ ಸೇತುವೆಯನ್ನು ರಚಿಸುವುದು ಕಷ್ಟದ ಮಾತು ಮತ್ತು ಅದು ಅಷ್ಟೊಂದು ಸುಲಭದಲ್ಲಿ ಆಗುವ ಮಾತೂ ಅಲ್ಲ.ಅಂತಹ ಪರಿಸ್ಥಿತಿಯಲ್ಲಿ ತೂಗು ಸೇತುವೆಗಳು ಹಳ್ಳಿಗರಿಗೆ ವರದಾನವಾಗಿಯೇ ಕಾಣುತ್ತದೆ ಮತ್ತು ಅದು ಹೌದು ಕೂಡಾ. ಅಂತಹ ತೂಗು ಸೇತುವೆಯನ್ನು ಯಶಸ್ವಿಯಾಗಿ ನಿರ್ವಹಿಸಿದ , ನಿರ್ಮಿಸಿದ ಗಿರೀಶ್ ಭಾರಧ್ವಾಜರ ಭೇಟಿಗೆ ಹೋಗಿದ್ದೆವು. ನಮ್ಮೆಲ್ಲಾ ಕಾರ್ಯ ಮುಗಿದ ಬಳಿಕ ಕಾರಿನ ಬಳಿ ಸಾಗುವ ವೇಳೆ ಅಲ್ಲಿ ಅವರ ಕಾರಿನ ಹಿಂದೆ ಒಂದು ವಾಕ್ಯ ಕಂಡಿತು . ಅದು" epsilon.."

ಆ ಬಗ್ಗೆ ಏನು ಅಂತ ಕೇಳಿದಾಗ ಅವರು ವಿವರಿಸಿದ್ದು ಹೀಗೆ ,

"ನವಗಣಿತದಲ್ಲೊಂದು ಮೂಲಕಲ್ಪನೆಯಲ್ಲಿ ಮಧುರ ಭಾವ ಎಷ್ಟೇ ಕಿರಿದಾದರೂ ಶೂನ್ಯವಲ್ಲವಂತೆ ಇದೆಂದು ಕೋವಿದದು ನುತಿಪರು ಈ ಪುಣ್ಯ ಧನವ
ನಮ್ಮ ಕಲ್ಪನೆಗೂ ಸಿಲುಕಿದಷ್ಟು ಸಣ್ಣದಹುದಂತೆ ಆದರೂ ಅದು ಶೂನ್ಯವಲ್ಲವಂತೆ ಈ ಮಹಾಪ್ರಜ್ಞೆಯ ಆಶ್ರಯದಲ್ಲಿರುವ ನಾನು ಶೂನ್ಯವಾಗುವ ತನಕ epsilon.."

ಈ ನಾಲ್ಕು ಸಾಲಿನ ಒಳಗಿನ ಅರ್ಥ ಎಷ್ಟು ಅಗಾಧ. ನಾವು "ಶೂನ್ಯ"ವಾಗುವ ತನಕ ಎನ್ನುವ ಮಾತೇ ಒಂದು ಅಗಾಧತೆಯನ್ನು ಉಂಟುಮಾಡುತ್ತದೆ. ನಾವೆಷ್ಟೇ ದೊಡ್ಡವರಾಗಲಿ, ಹಣ ಸಂಪಾದಿಸುವವರಾಗಲಿ ನಮ್ಮಲ್ಲಿ "ಅಹಂ" ನಲಿದಾಡಿದರೆ ಅದುವೇ ದೊಡ್ಡದಾದ ಶಾಪ ನಮಗೆ. ನಾನು ಎಷ್ಟೋ ಜನರನ್ನು ವೀಕ್ಷಿಸಿದಂತೆ ಜನ ಒಂದು ಹಂತದವರೆಗೆ "ಸಾಮಾನ್ಯರಂತೆ" ,ಕೊಂಚ ಸ್ಥಾನ ಮಾನ ದೊರಕಿದ ಬಳಿಕ ನಾನೇ "ರಾಜ" ಎಂಬ ಭಾವದಲ್ಲಿ ಮೆರೆಯುತ್ತಾರೆ. ಆರಂಭದಲ್ಲಿ ಹತ್ತಾರು ಬಾರಿ ಫೋನ್ ಮಾಡುತ್ತಿದ್ದವ ಮತ್ತೆ ತಿಂಗಳಿಗೊಮ್ಮೆಗೆ ತಲಪುತ್ತದೆ ಇನ್ನೊಮ್ಮೆ ಮರೆತೇ ಹೋಗಿರುತ್ತದೆ.ಅದಕ್ಕೆ ಕಾರಣ "ಬ್ಯುಸಿ". ಇದೆಲ್ಲವೂ ಮನುಷ್ಯನ ಗುಣ.

ಇಂತಹ ಸಂದರ್ಭದಲ್ಲಿ ಗಿರೀಶರ ಕಾರಿನಲ್ಲಿದ್ದ ಆ ವಾಕ್ಯ ನನಗೆ ಇಷ್ಟವಾಯಿತು.

ನನಗೂ epsilon ಅರ್ಥದಲ್ಲೇ ಬದುಕಬೇಕು ಎಂಬ ಕಲ್ಪನೆಯಿದೆ.ಆದರೆ ನಾನೂ ಮನುಷ್ಯನಲ್ಲವ್ವೇ ಒಮ್ಮೆಮ್ಮೆ "ಹಾಗೂ" ಆಗಿಬಿಡಬಹುದು, "ಹೀಗೂ" ಆಗಬಹುದು. ಆದರೆ ಉದ್ದೇಶ "ಅಹಂ" ಇಲ್ಲದ ಬದುಕು.

22 ಆಗಸ್ಟ್ 2008

ಒಂದು Accident....


ಘಟನೆಗಳು ಹೇಗೆಲ್ಲಾ ನಡೆಯಬಹುದು.?.ಬಹುಶ: ಅದು ಕಲ್ಪನೆಗೂ ನಿಲುಕದ್ದು. ಹಾಗಾಗೆ ಅದು "ಎಕ್ಸಿಡೆಂಡ್..."

ಅಂತದ್ದೆ ಒಂದು ಘಟನೆ ಇಂದು ಬೆಳಗ್ಗೆ ನಡೆಯಿತು.ಅದು ರಾಷ್ಟ್ರೀಯ ಹೆದ್ದಾರಿ 48.ಬಹಳಷ್ಟು ವಾಹನಗಳು ಓಡಾಡುವ ಮಂಗಳೂರು- ಬೆಂಗಳೂರು ರಸ್ತೆ. ಗುಂಡ್ಯದಿಂದ ಮುಂದೆ ನೆಲ್ಯಾಡಿಯಿಂದ ಕೊಂಚ ಹಿಂದೆ ಪೆರಿಯಶಾಂತಿ ಬಳಿಯ ವಾಲ್ತಾಜೆ ಎಂಬ ಪ್ರದೇಶ. ಅಲ್ಲಿ ಒಂದು ಅಪಘಾತ ನಡೆದಿತ್ತು.ಹೇಳುವುದಕ್ಕೆ ಮಾಮೂಲು ಅಪಘಾತ.ಆದರೆ ಅದರಾಚೆಗೆ ಇರುವುದು ಗಂಭೀರದ,ಆತಂಕದ ಸಂಗತಿ.ಕಾರು ಮತ್ತು ಗ್ಯಾಸ್ ಟ್ಯಾಂಕರ ಮಧ್ಯೆ ಅಪಘಾತ ನಡೆದು ಗ್ಯಾಸ್ ಸೋರಿಕೆಯಾಗಿ ಅಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು.ಅದು ಆತಂಕಕ್ಕೆ ಕಾರಣವಾಗಿತ್ತು. ಜನ ಬಂದು ನೋಡುವ ತವಕದಲ್ಲಿದ್ದರು. ಆದರೆ ಸುರಕ್ಷತೆಗಾಗಿ ಅವರನ್ನು ಬಿಡುತ್ತಿರಲಿಲ್ಲ.

ಸುಖ ನಿದ್ರೆಯಲ್ಲಿರುವಾಗಲೇ ಮೊಬೈಲ್ ರಿಂಗಿಣಿಸಿತು.ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ತೆರಳಿದಾಗ ಘಟನೆಯ ನಿಜ ಸ್ವರೂಪ ಸಿಕ್ಕಿತು. ಅಗ್ನಿಶಾಮಕ ದಳವು ಸವಾಲನ್ನು ಕೈಗೆ ತೆಗೆದುಕೊಂಡಿತ್ತು. ಸುಮಾರು 10 ಗಂಟೆಯ ವೇಳೆಗೆ ಅಲ್ಲಿ ನಿಂತಿದ್ದ ಸಿಬ್ಬಂದಿ, ಇನ್ನು ಹೆದರಿಕೆಯಿಲ್ಲ ನೀವು ಹತ್ತಿರಕ್ಕೆ ಹೋಗಬಹುದು. ಸ್ಫೋಟ ಆಗುವ ಸಂಭವವಿಲ್ಲ. ಆದರೆ ರಿಸ್ಕ್ ಇದೆ, ನಿಮಗೆ ಧೈರ್ಯವಿದ್ದರೆ ಹೋಗಿ ಎಂದ. ಕೂಡಲೆ ನಮ್ಮ ಕೈಗೆ ರಿಸ್ಕ್ ತೆಗೆದುಕೊಂಡು ಅಪಘಾತವಾದ ಸ್ಥಳಕ್ಕೆ ಅಂದರೆ ಟ್ಯಾಂಕರ್ ಉರಿಯುತ್ತಿರುವ ಪ್ರದೇಶಕ್ಕೆ ಹೋಗಿ ಚಿತ್ರ ತೆಗೆಯಲಾಯಿತು.

ಅಗ್ನಿ ಶಾಮಕದಳದ ಸಿಬ್ಬಂದಿಗಳು ಅವಿರತವಾದ ಶ್ರಮ ಮೆಚ್ಚುಗೆಗೆ ಪಾತ್ರವಾಯಿತು. ಒಂದು ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುತ್ತಿದ್ದರೆ ಇನ್ನೂ ಹೆಚ್ಚಿನ ಅಪಘಾತ , ಆತಂಕವಾಗುತ್ತಿತ್ತು.ಏಕೆಂದರೆ ಗ್ಯಾಸ್ ಸೋರಿಕೆ ಪರಿಸರದಲ್ಲಾಗುತ್ತಿತ್ತು. ಇದರಿಂದಾಗಿ ಪರಿಸರದಲ್ಲೆಲ್ಲಾ ಗ್ಯಾಸ್ ಹರಡಿ ಎಲ್ಲೋ ಒಂದೆಡೆ ಒಂದು ಕಿಡಿ ಬೆಂಕಿ ಬಿದ್ದರೂ ಊರಿಡೀ ಬೆಂಕಿ ಹಬ್ಬುವ ಸಾಧ್ಯತೆಯಿತ್ತು. ಹಾಗಾಗಿ ಅಲ್ಲಿ ಅಗ್ನಿಶಾಮಕ ದಳದ ಕಾರ್ಯ ಉತ್ತಮವಾಗಿತ್ತು. ಮಾತ್ರವಲ್ಲ ಸಿಬ್ಬಂದಿಗಳು ಅಲ್ಲಿ ಟ್ಯಾಂಕರ್ ಗೆ ನೀರನ್ನು ಹಾಕಿ ಹೊರಗಿನಿಂದ ತಂಪಾಗಿಸುತ್ತಿದ್ದರು.ಇದರಿಂದ ಟ್ಯಾಂಕರ್ ಸ್ಫೋಟವನ್ನು ತಡೆಯಲಾಗಿತ್ತು.ಒಟ್ಟಿನಲ್ಲಿ ಅಗ್ನಿಶಾಮಕ ದಳದ ಅವಿರತ ಶ್ರಮದಿಂದಾಗಿ ಬೆಳಗ್ಗೆ 6 ಗಂಟೆಯಿಂದ ಆರಂಭಗೊಂಡ ಬೆಂಕಿಯ ಜ್ವಾಲೆ ಸಂಜೆ 6 ಗಂಟೆಯ ವೇಳೆಗೆ ಸಂಪೂರ್ಣ ಕಡಿಮೆಗೊಂಡು ಆತಂಕವನ್ನು ದೂರ ಮಾಡಿತು. ಇಂತಹ ಒಂದು ರೋಚಕ ಮತ್ತು ಅಪರೂಪವಾದ ಸುದ್ದಿ ಮಾಡಲು ಖುಷಿಯಾಗಿತ್ತು.

ಆದರೆ ಆ ಸ್ಥಳದಲ್ಲಿರುವ ಪೊಲೀಸರು ಮಾತ್ರಾ ಮನುಷ್ಯತ್ವವಿಲ್ಲದವರಂತೆ ಇರುತ್ತಾರೆ ಎನ್ನುವುದು ಇಂದು ಮತ್ತೊಮ್ಮೆ ಸಾಬೀತಾಗಿತ್ತು. ಅವರು ನಿಜಕ್ಕೂ ಶತ ಮೂರ್ಖರು ಮತ್ತು ಅಹಂ ಭಾವದ ಪರಮಾವಧಿಯ ಪ್ರತಿರೂಪವಾಗಿದ್ದರು. ಇಂತಹ ಸಂದರ್ಭದಲ್ಲಿ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಪಾಠ ಅವರಿಗೆ ಬೇಕು.


19 ಆಗಸ್ಟ್ 2008

ತೀರ್ಥಯಾತ್ರೆಯ ಹಾದಿಯಲ್ಲಿ ದೇವೇ ಗೌಡ...
ದೇವೇ ಗೌಡರು ರಾಜಕೀಯ ಚಾಣಾಕ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ.ಅವರು ಪರಿಸ್ಥಿತಿಯನ್ನು ಹೇಗೆ ಬೇಕಾದರೂ ನಿಭಾಯಿಸಬಲ್ಲರು. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ನಿದ್ದೆ ತೂಗುವಂತೆ ಮಾಡಿ ಎದುರಾಳಿಯನ್ನು ಕೆಡವಿ ಹಾಕಬಲ್ಲರು. ಅವರ ರಾಜಕೀಯ ಸಹವರ್ತಿ ರಾಮಕೃಷ್ಣ ಹೆಗಡೆಯವರಿಗೇ ತಿರುಗಿ ಮೆಟ್ಟಿಲ್ಲಲೇ?. ಈಗ ವಿಷಯ ಅದಲ್ಲ. ಅವರು ಕುಟುಂಬಿಕರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಹಾಗೆ ಬಂದವರು ದೇವಳದಲ್ಲಿ ಪೂಜೆಯನ್ನು ಸಲ್ಲಿಸಿ ದ್ರಾಕ್ಷೆಯಲ್ಲಿ ತುಲಾಭಾರವನ್ನೂ ಮಾಡಿಸಿದರು. ಆಗ ಚಿತ್ರ ತೆಗೆಯಲೂ ದೇವೇ ಗೌಡರ ಪರಮ ಪುತ್ರ ರೇವಣ್ಣ ಬಿಟ್ಟಿರಲೇ ಇಲ್ಲ.ಮಿತ್ರ ಅವರ ವಿರೋಧದ ನಡುವೆಯೂ ಒಮ್ಮೆ ಕ್ಲಿಕ್ಕಿಸಿದ್ದಾರೆ. ಆ ಚಿತ್ರವೂ ಇಲ್ಲಿದೆ. ಆ ಬಗ್ಗೆ ಅನುಭವವ ಇಲ್ಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಪ್ರದಾನಿ ದೇವೇ ಗೌಡ ಹಾಗೂ ಅವರ ಪುತ್ರ ರೇವಣ್ಣ ಮತ್ತವರ ಕುಟುಂಬ ವರ್ಗವು ಆಗಮಿಸಿದ ವೇಳೆ ವಿಶೇಷವಾಗಿ ತುಲಾಭಾರ ಸೇವೆಯನ್ನು ನಡೆಸಿದರು.ದಿನ ಮುಂದಾಗಿಯೇ ಆಗಮಿಸಿದ್ದ ಅವರ ಕುಟುಂಬವು ಅಲ್ಲೇ ವಸತಿಯನ್ನು ಮಾಡಿತ್ತು. ನಮಗೂ ಅವರು ಬರುತ್ತಿರುವ ವಿಚಾರ ಮಧ್ಯಾಹ್ನದ ವೇಳೆಗೆ ತಿಳಿದಿತ್ತು. ಹಾಗಾಗಿ ಸಂಜೆ ವೇಳೆಗೆ ಸುಬ್ರಹ್ಮಣ್ಯಕ್ಕೆ ನಮ್ಮ ತಂಡ ಪಯಣ ಬೆಳೆಸಿತ್ತು. ನಮಗೂ ರೂಂ ವ್ಯವಸ್ಥೆ ಆಗಿತ್ತು.ನನ್ನ ಮನೆ ಸಮೀಪದಲ್ಲೇ ಇದ್ದರೂ ಮಿತ್ರರೊಂದಿಗೆ ಕುಕ್ಕೆ ಯಲ್ಲಿ ವಸತಿ. ಸರಿ ಮುಂಜಾನೆ ದೇವೇ ಗೌಡ್ರ ದರ್ಶನವಾಯಿತು. ಆಗಲೇ ದೂರವಾಣಿಗೆ ಮಿತ್ರರೊಬ್ಬರ ಸೂಚನೆ ಬಂತು ಇವತ್ತು ಯಾವುದೇ ಮಾಧ್ಯಮದವರನ್ನು ಬಿಡುವುದಿಲ್ಲವಂತೆ. ನಾವು ಎಲರ್ಟ್ ಆದೆವು. ಯಾರೂ ದೇವೇಗೌಡ ಮತ್ತವರ ಸೆಕ್ಯುರಿಟಿಯವರ ಬಳಿಗೆ ಹೋಗಲಿಕ್ಕಿಲ್ಲ. ಚಿತ್ರವನ್ನು ತೆಗೆಯುವುದು ಗ್ಯಾರಂಟಿ.ಹಾಗೆಯೇ ಆಯಿತು.ಎಲ್ಲರಿಗೂ ಬೇಕಾದಷ್ಟು ವಿಷುವಲ್ಸ್ ಸಿಕ್ಕಿತು. ಕೊನೆಗೆ ತುಲಾಭಾರದ ಸಮಯ ಬಂತು. ರೇವಣ್ಣ ಬಂದು "ತೆಗಿಬೇಡ್ರಿ ತೆಗಿಬೇಡ್ರಿ" ಅಂತ ಹೇಳುತ್ತಾ ತುಲಾಭಾರದ ಅಡ್ಡವೇ ಬಂದು ನಿಂತರು. ಚಿತ್ರದ ಆಸೆ ಬಿಟ್ಟಾಯಿತು. ಆಗ ಅಲ್ಲೇ ಒಂದು ಕನ್ನಡಿಯಲ್ಲಿ ತುಲಾಭಾರದ ಚಿತ್ರದ ಪ್ರತಿಬಿಂಬ ಕಾಣುತ್ತಿತ್ತು.ನಮ್ಮ ಕ್ಯಾಮಾರಾ ಅತ್ತ ತಿರುಗಿತು. ಆಗಲೂ ಸರಿಯಾಗಿ ಸಿಗುತ್ತಿರಲಿಲ್ಲ.

ನಡುವೆ ಮಿತ್ರ ಒಮ್ಮೆ ಕ್ಲಿಕ್ಕಿಸಿಯೇ ಬಿಟ್ಟ. ಏ ... ಏ...ಅಂತ ಒಳಗಿನಿಂದ ಯಾವನೋ ಒಬ್ಬ ಸೆಕ್ಯುರಿಟಿ ಬಂದ. ಆದರೂ ನಾವು ಕದಲಿಲ್ಲ.ನಂತರ ವಿವಿಧೆಡೆ ಅವರನ್ನು ಬೆಂಬೆತ್ತಿದೆವು. ನಾವು ಚಿತ್ರವನ್ನು ತೆಗೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಆದರೆ ಯಾಕೆ ಅಷ್ಟು ಉತ್ಸಾಹ ಬಂತೆಂದರೆ ಅವರು ಚಿತ್ರ ತೆಗೀಬೇಡಿ ಅಂತ ಮಾತ್ರಾ ಹೇಳಿದರೇ ಹೊರತು.ಯಾಕೆ ತೆಗೀಬಾರದು ಅಂತ ಹೇಳಿಲ್ಲ. ಹಾಗಾಗಿ ಒಂದು ಕ್ಯೂರಿಯಾಸಿಟಿ ಬಂತು. ಕೊನೆಗೆ ಊಟವೂ ಆಯಿತು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಗುಮುಖದಿಂದಲೆ ಮಾತನಾಡಿದ ದೇವೇಗೌಡ "ಇದು ಪುಣ್ಯ ಕ್ಷೇತ್ರ ರಾಜಕೀಯವನ್ನು ಇಲ್ಲಿ ಮಾತನಾಡುವುದು ಸರಿಯಲ್ಲ ಎನ್ನುವುದು ನನಗೆ ಗೊತ್ತಿದೆ ಎನ್ನುತ್ತಲೇ ಮಾತು ಆರಂಭಿಸಿದ ಅವರು ದೇವರು ಪರಿಕ್ಷೆಯನ್ನು ಮಾಡುತ್ತಿದ್ದಾನೆ ಕೊನೆಯವರೆಗೂ ತಾಳುವುದೇ ಒಂದು ತಪಸ್ಸು ಆ ಎಲ್ಲಾ ತೊಂದರೆಗಳನ್ನು ಸಹಿಸಿಕೊಂಡು ಕೊನೆಗೆ ಸತ್ಯ ಸತ್ಯವಾಗಿಯೇ ಇರುತ್ತದೆ.ಅಸತ್ಯ ಅಸತ್ಯವಾಗಿಯೇ ಇರುತ್ತದೆ ಎಂದರಲ್ಲದೆ ವಿಶ್ವಾಮಿತ್ರ ಋಷಿಗೂ ಸೋಲು ಬಂದಿದೆ. ಆತನೂ ಫೈಲ್ ಆಗಿದ್ದಾನೆ. ಇಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದ ದೇವೇ ಗೌಡ ತನ್ನ ರಾಜಕೀಯ ಚಾಣಾಕ್ಷತನವನ್ನು ಇಲ್ಲೂ ಮೆರೆದರು. ಆಧ್ಯಾತ್ಮ ಸಾಧಕನಂತೆ ವಿವರಿಸಿದರು. ರಾಜಕೀಯ ಸನ್ಯಾಸ ತೆಗೆದುಕೊಂಡವರಂತೆಯೂ ಮಾತನಾಡಿದರು. ಆದರೆ ಅದೆಲ್ಲವೂ ನಿನ್ನೆ ಅವರ ಪಕ್ಷದಿಂದ ವಲಸೆ ಹೋದವರ ಬಗ್ಗೆ ಮಾತನಾಡದಿರಲೆಂದು ಅವರೇ ಏನಾದರೂ ಹೇಳುತ್ತಾ ಕಾರಿನತ್ತ ತೆರಳಿದರು. ಆಗ ಸಮಯವೂ ಮೀರಿತ್ತು.

ಹಾಗೆ ಅವರು ಮಾತನಾಡಿದ ವಿಷಯದ ಸುತ್ತ ನೋಡಿದರೆ ರಾಜಕೀಯದಲ್ಲಿ ಸದ್ಯ ಸೋತಿದ್ದೇನೆ ಎಂದು ಪರೋಕ್ಷವಾಗಿಯೇ ವಿಶ್ವಾಮಿತ್ರನ ಕತೆಯ ಮೂಲಕ ಹೇಳಿದ ದೇವೇಗೌಡ ದೇವರು ಪರಿಕ್ಷೆಯನ್ನು ಮಾಡುತ್ತಿದಾನೆ ಅದನ್ನು ಎದುರಿಸಿ ಮತ್ತೆ ಬರುತ್ತೇನೆ ಎಂತಲೂ ಪರೋಕ್ಷವಾಗಿ ಉತ್ತರಿಸಿದ ಗೌಡರು ಪಕ್ಷ ಸಂಘಟನೆಗಾಗಿ ಮತ್ತೆ ಹೆಚ್ಚುಕಾಲ ಕಳೆಯುತ್ತೇನೆ ಎನ್ನುತ್ತಾ ಕೇವಲ ೨ ಶಾಸಕರಿಂದ ಪಕ್ಷ ಕಟ್ಟಿಲ್ಲವೇ ಎಂದು ನೆನಪಿಸಿಕೊಂಡರು.ಒಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿದ ಗೌಡರು ಎಲ್ಲವನ್ನು ಒಗಟಾಗಿ ಆಧ್ಯಾತ್ಮದ ರೀತಿಯಲ್ಲಿ ಹೇಳಿದ್ದು ಸುಬ್ರಹ್ಮಣ್ಯ ಭೇಟಿಯ ಹೈಲೈಟ್ಸ್ ಆಗಿತ್ತು.

ಒಟ್ಟಿನಲ್ಲಿ ದಿನಮುಂದಾಗಿ ಹೋದ ಮನಗೂ ಅಷ್ಟೊಂದು ಒಳ್ಳೆಯ ಸುದ್ದಿಯೂ ಸಿಗಲಿಲ್ಲ ಮಾರಾಯ ಇಡೀ ದಿನ ವೇಷ್ಟ್ ಅಂತ ಮಿತ್ರ ಹೇಳಿದ ನನಗೂ ಹೌದು ಎನಿಸಿತು.

ಇನ್ನೊಂದು ಸುದ್ದಿ - ಈ ತುಲಾಭಾರ ಸೇವೆಯನ್ನು ರೇವಣ್ಣ ಹೇಳಿಕೊಂಡದ್ದಂತೆ.ಯಾಕೆಂದು ಎಲ್ಲರಿಗೂ ಗೊತ್ತು. ರೇವಣ್ಣ ಅವರ ಭಾಷೆಯಲ್ಲೇ ಹೇಳುವುದಾದರೆ " ಏನು ಮಾಡೋಣರೀ ನಮ್ಮ್ ಸರ್ಕಾರ ಇಲ್ವಲ್ಲರೀ... ನಿಮ್ಮ್ ಸಹಕಾರ ಇರ್ಲಿ...ಶಾಸಕ್ರೂ ಆ ಕಡೆ ಈ ಕಡೆ ಹೋಗ್ತಾರ್ರೀ..."18 ಆಗಸ್ಟ್ 2008

ಹೀಗೊಬ್ಬ ಅಜ್ಜ...ಕ್ಯಾಮಾರ ಕಂಡರೆ ಯಾರು ತಾನೆ ಎಲರ್ಟ್ ಆಗಲ್ಲ ಹೇಳಿ.ನಾಳೆ ಪೇಪರಲ್ಲಿ ಟೀವಿಯಲ್ಲಿ ಬರತ್ತೆ ಅಂತ ಹೇಳಿ ಮುಂದೆ ಬರುತ್ತಾರೆ.ಅಂತಹುದೇ ಒಂದು ಘಟನೆ ನಡೆಯಿತು. ಆತ 94ರ ಮುದುಕ ಅವನ ಬಳಿಗೆ ಒಂದು ವರದಿಯನ್ನು ಮಾಡುವುದಕ್ಕಾಗಿ ತೆರಳಿದ್ದೆವು. ಆತ ಯೋಗಿ, ಸಾಧು ಅಂತಲ್ಲೇ ನಮಗೆ ಬಂದ ಮಾಹಿತಿ ಆದರೆ ೯೪ರ ಮುದುಕನಿಗೂ ಕ್ಯಾಮಾರ ಕಂಡಾಗ ಯೋಗಿ ಅಂತ ಅನ್ನಿಸಲೇ ಇಲ್ಲ. ಪಕ್ಕಾ ರಾಜಕಾರಣಿಗಳ ಥರಾನೇ ಫೋಸು ನೀಡಿದ. ಬಟ್ಟೆ ಬೇರೆ ಹಾಕಿಕೊಂಡ. ಮುಂದೆ ನೋಡಿ....

ಹೊಟ್ಟೆ ಹೊರೆಯಲು ವಿವಿಧ ಅವತಾರಗಳನ್ನು ಮಾಡುವುದು ನೋಡಿದ್ದೇವೆ. ಅದಕ್ಕಾಗಿ ಜನರನ್ನು ಮೋಸಗೊಳಿಸಲೂ ಸಿದ್ಧರಿರುತ್ತಾರೆ. ಆದರೆ ಇಲ್ಲೊಬ್ಬ ಅಜ್ಜ ಹೊಟ್ಟೆ ಹೊರೆಯಲು ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಓಂ ನಮ: ಶಿವಾಯ ಅವರ ಮಂತ್ರ.ಹತ್ತಿರದ ಮಠ ನೀಡುವ ಆಹಾರವೇ ಜೀವನೋಪಾಯಕ್ಕೆ ದಾರಿ. ಇದು ಒಂದೆರಡು ವರ್ಷದ ಪುರಾಣವಲ್ಲ ಬರೊಬ್ಬರಿ ೬೪ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗತಿ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಲ್ಲಿರುವ ಅಗ್ರಹಾರ ದೇವಸ್ಥಾನದಲ್ಲಿರುವ ಕುಮಾರಸ್ವಾಮಿ ಎಂಬ 94 ವೃದ್ಧನ ಕತೆ. ಅಗ್ರಹಾರದಲ್ಲಿ ಹಿರಿಯ ಸ್ವಾಮೀಜಿಗಳ ಬೃಂದಾವನವೂ ಇದೆ. ಅಲ್ಲೇ ಸನಿಹದಲ್ಲಿ ವಾಸವಾಗಿರುವ ವ್ಯಕ್ತಿಯೇ ಕುಮಾರಸ್ವಾಮಿ.ಇವರು ಮೂಲತ: ಕೇರಳದ ಕೊಚ್ಚಿ ಪ್ರದೇಶದವರು. ತಮ್ಮ 16 ನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಪಳನಿ ದೇವಾಲಯಕ್ಕೆ ಏಕಾಂಗಿಯಾಗಿ ತೆರಳಿದರು. ಅಲ್ಲಿದ ನೇಪಾಳಕ್ಕೆ ಹೋದರು. ಬಳಿಕ ಅಲ್ಲಿ ಯುದ್ಧ ಶುರುವಾದಾಗಾ ಹೊರಟೆ ಎನ್ನುವ ಕುಮಾಸ್ವಾಮಿ ನಂತರ ಬಂದದ್ದು ಕೊಲ್ಲೂರು ಅಲ್ಲಿಂದ ಮುಂದಿನ ಪಯಣವೇ ಸುಬ್ರಹ್ಮಣ್ಯದ ಅಗ್ರಹಾರ ದೇವಸ್ಥಾನ. ಸುಬ್ರಹ್ಮಣಕ್ಕೆ ಬಂದು ಇಂದಿಗೆ 64 ವರ್ಷಗಳಾದವು ಎನ್ನುವ ಈ ಅಜ್ಜ ನನಗೆ ಮನೆಗೆ ಹೋಗಲು ಮನಸ್ಸಿಲ್ಲ ಇಲ್ಲೇ ವಾಸವಾಗಿರುತ್ತೇನೆ ಎನ್ನುತ್ತಾನೆ. ಬೆಳಗ್ಗೆ ಎದ್ದು ದೇವರಿಗೆ ಹೂ ತುಳಸಿಯನ್ನು ಸಂಗ್ರಹಿಸಿದ ಬಳಿಕ ಅಲ್ಲಿ ಹಾಗೂ ಸನಿಹದ ಮನೆಯಲ್ಲಿ ಸಿಗುವ ಒಂದಿಷ್ಟು ಕೂಳನ್ನು ಪಡೆಯುತ್ತಾರೆ.ನಂತರ ಓಂ ನಮ: ಶಿವಾಯ ಜಪ ಮಾಡುತ್ತಾರೆ.

ಈ ಅಜ್ಜ ಸೂರಿನ ಎಲ್ಲರಿಗೂ ಪರಿಚಿತ. ಈ ಅಜ್ಜನ ಬಗ್ಗೆ ಆಧ್ಯಾತ್ಮಿಕ ಜನರನ್ನು ಕೇಳಿದರೆ ಮನುಷ್ಯನಿಗೆ 5 ಕೋಶಗಳು ಅನ್ನಮಯ , ಪ್ರಾಣಮಯ, ಜ್ಞಾನಮಯ, ಹೀಗೆ ಕೋಶಗಳು ಎಲ್ಲರಿಗೂ ಲಭ್ಯವಾಗುತ್ತದೆ. ಆದರೆ ಈ ಅಜ್ಜನಿಗೆ 5 ನೇ ಕೋಶ ಅಂದರೆ ಆನಂದಮಯ ಪ್ರಾಪ್ತಿಯಾಗಿದೆ ಎನ್ನುತ್ತಾರೆ. ಆದರೆ ನಿಜ ಸಂಗತಿಯನ್ನು ಏನು ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇಲ್ಲಿ ಆಧ್ಯಾತ್ಮದ ವೈಬ್ರೇಶನ್ ಇದೆ ಹಾಗಾಗಿ ಈ ಅಜ್ಜನಿಗೆ ಏನೋ ಒಂದು ಸಿದ್ಧಿಸಿದೆ ಅಂತ ಹೇಳುತ್ತಾರೆ. ನಿಜಕ್ಕೂ ಸಿದ್ಧಿಸಿದೆಯೋ ಅಂತ ಗೊತ್ತಿಲ್ಲ.

ಅಂತೂ ಕಳೆದ 64 ವರ್ಷಗಳಿಂದ ಇಲ್ಲೇ ವಾಸವಾಗಿರುವ ಈತನ ಮುಂದೆ ನಮ್ಮ ಕ್ಯಾಮಾರಾವು ಬೆಳಕು ಚೆಲ್ಲಬೇಕಿತ್ತಾ ಅಂತ ಮತ್ತೆ ಅನ್ನಿಸಿತು. ಆದರೆ ಇನ್ನೊಂದು ರೀತಿಯಲ್ಲಿ ಬೇಕು ಅಂತಲೂ ಅನಿಸಿತು.ಜನ ಹೇಗೆಲ್ಲಾ ಮೊಸ ಮಾಡಿ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ. ಕುಳಿತಲ್ಲಿಗೇ ಹೊಟ್ಟೆ ಹೊರೆಯುತ್ತಾರೆ. ಇದು ಜಗತ್ತಿಗೆ ಅರಿವಾಗಬೇಕು. ಆದರೆ ನಾವು ಯಾವಾಗ ಸ್ವಾಮಿ ಇಂತಹ ಮೋಸಗಳಿಂದ ಹೊರಬರೋದು. ಅಲ್ಲಾ ಜನಾ ಇನ್ನು ಕೂಡಾ ಅದು ಯಾವುದೋ ಸಿದ್ದಿ ಅಂತೆಲ್ಲಾ ನಂಬಿಕೊಂಡು ಅವರನ್ನು "ಪೂಜೆ" ಮಾಡುತ್ತಾರಲ್ಲಾ ಎನಿದು ಅವಸ್ಥೆ?.

17 ಆಗಸ್ಟ್ 2008

ಒಂದು ದೇಗುಲದ ಸುತ್ತ...ಇದು ಧರ್ಮ , ಚರ್ಚೆ , ವಿರೋಧ ಮತ್ತು ಸ್ವಾಗತದ ವಿಷಯ. ಆದರೆ ಇದು ಎಷ್ಟು ಪ್ರಸ್ತುತ ಅಂತ ನನಗೆ ಗೊತ್ತಿಲ್ಲ. ಇಂದು ಮಾಧ್ಯಮಗಳಲ್ಲಿ ಬರುತ್ತಿರುವ ಸಂಗತಿಗಳ ಮೇಲೆ ಮತ್ತು ಆಗಿನ ನನ್ನ ಭಾವನೆಗಳ ಅಕ್ಷರ ರೂಪ.

ನಾನು ಆರಂಭದಲ್ಲಿ ಹೇಳಿದಂತೆ ಇದು ಪ್ರಸ್ತುತವಾ ಅಂತ ಗೊತ್ತಿಲ್ಲ ಮತ್ತು ಇತರ ಮಾಧ್ಯಮಗಳಂತೆಯೋ ಅಂತಲೂ ಗೊತ್ತಿಲ್ಲ. ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಒಂದು "ವಿವಾದ" ಎದ್ದಿದೆ. ಪ್ರತಿಭಟನೆಯೂ ನಡೆಯುತ್ತಿದೆ, ಮಾಧ್ಯಮಗಳಲ್ಲೂ ಕಾಣುತ್ತಿದೆ. ಅದು ಶ್ರೀ ರಾಮಚಂದ್ರಾಪುರ ಮಠಕ್ಕೆ ಗೋಕರ್ಣದ ದೇವಸ್ಥಾನವನ್ನು ಹಸ್ತಾಂತರ ಮಾಡಿದ್ದರ ಕುರಿತಾದ ವಿವಾದ ಎಂದು ಕರೆಯಬಹುದಾದ ಒಂದು ಸಂಗತಿ. ಬಹುಷ: ಇದು ಇಷ್ಟು ದೊಡ್ಡ ಮಟ್ಟದ ಸುದ್ದಿಯಾಗಬೇಕಾಗಿರಲಿಲ್ಲ.

ಒಂದು ಧಾರ್ಮಿಕ ಕೇಂದ್ರ ಸರಕಾರದ ಹಿಡಿತದಲ್ಲಿರುವುದಕ್ಕಿಂತ ಹೆಚ್ಚು ವ್ಯವಸ್ಥಿತವಾಗಿ ಒಂದು ಸಂಸ್ಥೆ ಅಥವಾ ಒಂದು ಮಠ ಅಧೀನದಲ್ಲಿದ್ದರೆ ಹೆಚ್ಚು ವ್ಯವಸ್ಥಿತವಾಗಿರುತ್ತದೆ. ಅದಕ್ಕೆ ಉದಾಹರಣೆ ಧರ್ಮಸ್ಥಳ. ಇಂದು ಗೋಕರ್ಣಕ್ಕೆ ಹೋದ ಬಹುತೇಕರಿಗೆ ಗೊತ್ತಿದೆ ಅಲ್ಲಿನ ಈಗಿನ ನಿಜರೂಪ. ಆದರೆ ಇದರ ಸುಧಾರಣೆ ಅಗತ್ಯವಾಗಿತ್ತು. ಸರಕಾರ ಯಾವ ಉದ್ದೇಶಕ್ಕಾಗಿ ರಾಮಚಂದ್ರಾಪುರ ಮಠಕ್ಕೆ ಈ ದೇಗುಲವನ್ನು ಹಸ್ತಾಂತರಿಸಿದೆ ಎನ್ನುವುದು ಗೊತ್ತಿಲ್ಲ. ಆದರೆ ಮಠದ ಪರಂಪರೆಯನ್ನು ಗಮನಿಸಿದಾಗಲು ಅದು ಗೋಕರ್ಣ ಮಂಡಲದ ಅಧೀನದಲ್ಲಿದೆ ಎನ್ನುವುದು ತಿಳಿಯುತ್ತದೆ ಹಾಗಾಗಿ ದೇಗುಲ ಹಸ್ತಾಂತರದ ಕ್ರಮ ಸರಿಯಾಗಿಯೇ ಇದೆ.

ಇನ್ನು ಸರಕಾರದ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಯಾವಾಗಲೂ ಸರಿಯಾದ ವ್ಯವಸ್ಥೆಗಳಿರುವ ಉದಾಹರಣೆಗಳಿಲ್ಲ. ಮಾತ್ರವಲ್ಲ ಎಲ್ಲಾ ದೇವಾಲಯಗಳನ್ನು ಖಾಸಗಿಯವರಿಗೆ ಅಥವಾ ಮಠ ಮಂದಿರಗಳೇ ಜವಾಬ್ದಾರಿ ನೀಡಬೇಕು. ಆಗ ಮಾತ್ರಾ ನಮ್ಮ ವ್ಯವಸ್ಥೆಗಳು ಸರಿಯಾದೀತು. ಇಲ್ಲವಾದಲ್ಲಿ ಆ ದೇಗುಲಗಳಲ್ಲಿರುವ ಕೆಲವು "ಕುಳ"ಗಳು ಹಣವನ್ನು ಮಾಡುತ್ತಾ ಸಿರಿವಂತರಾಗುತ್ತಾರೆ. ಹಾಗೆಂದು ಇಲ್ಲೂ ಒಂದು ಸಮಸ್ಯೆ ಏರ್ಪಡುತ್ತದೆ. ದೇಗುಲಗಳ ಆಡಳಿತವನ್ನು ಸಂಪೂರ್ಣವಾಗಿ ಖಾಸಗಿಯವರು ನಿರ್ವಹಿಸಿದರೆ ಅವರ "ಕಿಸೆ" ತುಂಬಬಲ್ಲುದಲ್ಲವೇ?. ಈಗಲೂ ಅತ್ಯಂತ ಜಾಗೃತ ಕೆಲಸವಾಗಬೇಕು. ಅದಕ್ಕೆ ಅಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಸಾರ್ವಜನಿಕರ ಸಮಿತಿಯೊಂದು ಲೆಕ್ಕ ಪತ್ರವನ್ನು ಗಮನಿಸಬೇಕು.

ಯಾವುದಕ್ಕೂ ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆ ಇರಬೇಕಲ್ಲಾ. ದೇವಸ್ಥಾನಗಳೆಂದರೆ ಹಣ ದೋಚುವ ಕೇಂದ್ರಗಳಲ್ಲ ಅಲ್ವಾ. ಅದು ಶ್ರದ್ಧಾ ಕೇಂದ್ರಗಳಲ್ವಾ. ಅದರಿಂದಲೇ ವಿವಾದಗಳನ್ನು ಮಾಡುವ ಜನ ಹೇಗೆ ನೆಮ್ಮದಿಯನ್ನು ಕಾಣಲು ಸಾಧ್ಯ. ಅಥವಾ ಹಾಗೆ ವಿವಾದಗಳನ್ನು ಮಾಡುವುದೇ ನೆಮ್ಮದಿ ಅಂತ ಅಂದುಕೊಂಡಿದ್ದಾರಾ?. ಗೊತ್ತಿಲ್ಲ. ಹಾಗಾಗಿ ಮತ್ತೆ ಕೆದಕುವುದು ಬೇಡ. ಆಗ ಮಾಧ್ಯಮದಲ್ಲಿ ಬಂದ ವರದಿಯೊಂದಕ್ಕೆ ತಕ್ಷಣದ ಅಭಿಪ್ರಾಯವನ್ನು ಇಲ್ಲಿ ಪೋಣಿಸಿದ್ದೇನೆ.ಅಭಿಪ್ರಾಯ ಬೇದವಿರಬಹುದು.ಎಲ್ಲರಲ್ಲೂ ಒಂದೇ ಅಭಿಪ್ರಾಯ ಇರಬೇಕು ಎಂದೇನೂ ಇಲ್ಲವಲ್ಲ.

Flash News...

ಹಾ.. ಈಗ ಗೋಕರ್ಣದ "ವಿವಾದ" ಬಗೆಹರಿದಿದೆಯಂತೆ.ದೇಗುಲದ ಕೀಲಿ ಹಸ್ತಾಂತರವಾಗಿದೆಯಂತೆ.

16 ಆಗಸ್ಟ್ 2008

ಬಾಳಿಗೆ ಶಾಪವಾದ "ಪ್ರಗತಿ ಪರ" ಕೃಷಿ..


ರಾಜ್ಯದಲ್ಲಿ ಕೆಲ ಸಮಯಗಳ ಹಿಂದೆ ರಸಗೊಬ್ಬರಕ್ಕಾಗಿ ಗಲಭೆ , ದೊಂಬಿ , ಸಾವು , ನೋವುಗಳು ಸಂಭವಿಸಿತ್ತು. ಜನ ವಿವಿಧ ಆಯಾಮಗಳಿಂದ ಚರ್ಚೆ ನಡೆಸುತ್ತಲೇ ಇದ್ದರು.ಮಾಧ್ಯಮಗಳೂ ಹಾಗೆಯೇ."ಗೊಬ್ಬರ ಗಲಾಟೆ"ಯನ್ನೇ ಬಿಂಬಿಸಿದ್ದವು. ಆದರೆ ಆ ರಸಗೊಬ್ಬರಕ್ಕೆ ಪರ್ಯಾಯವಾದ ಇನ್ನೊಂದು ಯಾವುದಿದೆ ಎನ್ನುವುದರ ಹಿಂದೆ ಕೃಷಿಕರು ಬಿದ್ದಿರಲಿಲ್ಲ. ಹೀಗೆ ತಲತಲಾಂತರದಿಂದ ರಸಗೊಬ್ಬರ ಕೃಮಿ ನಾಶಕವನ್ನು ಬಳಸಿ ಈಗ ಪಶ್ಚಾತ್ತಾಪ ಪಡುತ್ತಿರುವ ರೈತನೊಬ್ಬನ ಕತೆಯಿಲ್ಲಿದೆ. ಆ ಕಡೆ ಒಮ್ಮೆ ಹೋಗಿ ಬರೋಣ.

ಇತ್ತೀಚೆಗೆ ಮಿತ್ರ ದೂರವಾಣಿಯಲ್ಲಿ ಹೇಳಿದ "ಏ ಮಹೇಶ್ ನಾನು ಒಬ್ಬರನ್ನು ಮೊನ್ನೆ ಭೇಟಿಯಾಗಿದ್ದೆ ,ಅವರು ಕಳೆದ 15 ವರ್ಷದ ಹಿಂದಿನಿಂದ ಗದ್ದೆಗೆ [ಹೊಲಕ್ಕೆ] ಕೀಟಗಳ ನಿಯಂತ್ರಣಕ್ಕೆ ಎಂಡೋಸ್ಫಾನ್ ಸಿಂಪಡಿಸುತ್ತಿದ್ದರಂತೆ ಈಗ ಅದರ ಪರಿಣಾಮ ಗೊತ್ತಾಗಿದೆ.ಮೈ ಮೈಮೇಲೆಲ್ಲಾ ಒಂಥರಾ ಗುಳ್ಳೆಗಳಿವೆ...." ಅಂತ ವಿವರಿಸಿದ್ದರು. ಸರಿ ಅಂತ ಎರಡು ದಿನಗಳ ಬಳಿಕ ಅತ್ತ ಕಡೆ ಹೋಗುವ ವೇಳೆಗೆ ಆ ಮನೆಗೆ ಭೇಟಿ ನೀಡಿದೆವು.
ಇದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಮೊಯಿದು ಎಂಬ ಕೃಷಿಕರ ಕತೆ. ಹೈಸಿರು ಕ್ರಾಂತಿಯ ಫಲವಾಗಿ ಇವರು ತಮ್ಮ ಹೊಲದಲ್ಲಿ ವಿವಿಧ ತಳಿಗಳ ಭತ್ತವನ್ನು ಬೆಳೆದಿದ್ದರು ಮಾತ್ರವಲ್ಲ, ಭತ್ತದ ಕೃಷಿಯಲ್ಲಿ ಇವರು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನೂ ಪಡೆದಿದ್ದರು. ಆದರೆ ಇದಕ್ಕೆ ಅವರು ಅನುಸರಿಸಿದ ಮಾರ್ಗ ಮಾತ್ರಾ ರಾಸಾಯನಿಕ ಕೃಷಿ. ಹೊಲಕ್ಕೆ ಯಥೇಚ್ಚವಾಗಿ ಗೊಬ್ಬರ ಸುರಿದರು ಸಾಲದೆಂಬಂತೆ ಕೀಟಗಳ ನಿವಾರಣೆಗೆ ಎಂಡೋಸಲ್ಫಾನ್ ಎರೆದರು. ಗರಿಷ್ಠ ಪ್ರಮಾಣದಲ್ಲಿ ಭತ್ತವನ್ನೂ ಪಡೆದರು.ಹೀಗೆಯೇ ಅವರು ಬೆಳೆದದ್ದು 15 ವರ್ಷಗಳ ಕಾಲ. ಆಮೇಲೆ ಅವರಿಗೆ ಅರಿವಾಯಿತು ಇದರ ದುಷ್ಪರಿಣಾಮ. ನಂತರ ಈ ಪರಂಪರೆಗೆ ವಿದಾಯ ಹೇಳಿ ಸಾವಯವ ಕೃಷಿಯತ್ತ ಬಂದರು. ಆದರೆ ಕಾಲ ಮಿಂಚಿತ್ತು. ನಂತರದ ಒಂದೆರಡು ವರ್ಷದಲ್ಲಿ ಅವರಿಗೆ ಕಾಣಿಸಿಕೊಂಡದ್ದು ಎಂಡೋಸಲ್ಫಾನ್ ಪರಿಣಾಮ. ಮೈ ಹಾಗೂ ಕೈಯಲ್ಲಿ ಒಂಥರಾ ಬೊಬ್ಬೆಗಳ ರೀತಿಯಲ್ಲಿ ಕಜ್ಜಿಗಳು ಕಾಣಿಸಿಕೊಂಡಿತು. ವೈದ್ಯರಲ್ಲಿಗೆ ಹೋದರೂ ಕಡಿಮೆಯಾಗಿಲ್ಲ. ನಂತರ ಅರಿವಾಯಿತು ಇದು ಎಂಡೋಸಲ್ಫಾನ್ ಪರಿಣಾಮ ಎಂದು. ಆದರೆ ಕಾಲ ಮಿಂಚಿತ್ತು.

ಇದು ಇವರ ಒಬ್ಬರ ಕತೆಯಲ್ಲ ಅನೆಕ ಕೃಷಿಕರು ಇಂದು ಒಂದಿಲ್ಲೊಂದು ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ. ಅದು ಮಾತ್ರವಲ್ಲ ಹೀಗೆ ರಾಸಾಯನಿಕ ಮತ್ತು ವಿಷಪೂರಿತ ಔಷಧಿಗಳನ್ನು ಹೊಲಗಳಿಗೆ ಸಿಂಪಡಿಸುವುದರಿಂದ ಆ ವಸ್ತುವನ್ನು ತಿನ್ನುವ ಜನರಿಗೂ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಇಂದು ಮಣ್ಣಿನ ಗುಣಮಟ್ಟ ಕಾಪಾಡಲು ಮತ್ತು ಇಡೀ ಜನರ ಬದುಕನ್ನು ಹಾಗೂ ತನ್ನ ಆರೋಗ್ಯವನ್ನು ಕಾಪಾಡಲು ರೈತರು ಸಾವಯವ ಕೃಷಿಯತ್ತ ಬರಬೇಕಾಗಿದೆ. ಗೊಬ್ಬರ ಗಲಾಟೆಗೆ ವಿದಾಯ ಹೇಳಬೇಕಾಗಿದೆ.

15 ಆಗಸ್ಟ್ 2008

ಈ ಯೋಜನೆಗಳು ಎಷ್ಟು ಸುರಕ್ಷಿತ...ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯಲ್ಲಿರುವ ನೀರಕಟ್ಟೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಿದ್ಯುತ್ ಉತ್ಪಾದನಾ ಕೇಂದ್ರದಿಂದಲ್ಲಿ ಭಾರೀ ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಈಗ ಕರಾವಳಿ ಜಿಲ್ಲೆಯ ಇತರ ವಿದ್ಯುತ್ ಯೋಜನೆಗಳು ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಗಮನಹರಿಸಬೇಕಾಗಿದೆ. ಈ ಸ್ಥಾವರಗಳ ಬಳಿಯಲ್ಲಿರುವ ಹಾಗೂ ನದಿಯ ಪಕ್ಕದಲ್ಲಿ ವಾಸಿಸುತ್ತಿರುವ ಜನರ ದೈನಂದಿನ ಜೀವನವು ಭಯದಿಂದ ಕೂಡಿದೆ.ಈ ಬಗ್ಗೆ ಒಂದು ಅವಲೋಕನ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯ ನೀರಕಟ್ಟೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿರು ವಿದ್ಯುತ್ ಘಟಕವು ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಆಗಷ್ಟ್ 15 ರಂದು ಪ್ರಾಯೋಗಿಕವಾಗಿ ಉದ್ಘಾಟನೆಯಾಗಬೇಕಿತ್ತು. ಈ ಘಟಕವನ್ನು ಆಂಧ್ರ ಮೂಲದ ಸಾಗರ್ ಪವರ್ ಪ್ರಾಜೆಕ್ಟ್ ಸುಮಾರು 100 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಡೆಸಿತ್ತು.ಇಲ್ಲಿ ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿತ್ತಲ್ಲದೆ ಇಲ್ಲಿ ತಯಾರಾಗುವ ವಿದ್ಯುತ್ ಇಲ್ಲಿನ ಆಸುಪಾಸಿನ ಪ್ರದೇಶಗಳಿಗೆ ವಿತರಿಸಲಾಗುವುದು ಎಂಬ ವಿಚಾರವನ್ನು ಹೇಳಲಾಗಿತ್ತು. ಆದರೆ ಅದಕ್ಕೂ ಮುನ್ನ ಸುರಿದ ಭಾರೀ ಮಳೆಯಿಂದ ನೇತ್ರಾವತಿ ನದಿ ತುಂಬಿ ಹರಿದು ಮಿನಿ ವಿದ್ಯುತ್ ಸ್ಥಾವರದ ಅಣೆಕಟ್ಟು ತುಂಬಿದ ಕಾರಣ ಕ್ರೆಸ್ಟ್ ಗೇಟನ್ನು ತೆರೆಯಲು ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕ ತೆರಳಿದ.ಇದರಿಂದಾಗಿ ಹೊರಬಂದ ನೀರಿನ ರಭಸಕ್ಕೆ ಅಣೆಕಟ್ಟು ಬಿರುಕು ಬಿಟ್ಟು ನೀರು ಒಮ್ಮೆಲೇ ಹೊರಚೆಲ್ಲಿ ಅಲ್ಲೆ ಕೆಲಸ ಮಾಡುತ್ತಿದ್ದ 6 ಮಂದಿ ನೀರುಪಾಲಾದರು. ಈ ಘಟನೆಗೆ ಅಣೆಕಟ್ಟಿನ ಕಳಪೆ ಕಾಮಗಾರಿಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು. ಹೀಗಾಗಿ ಇಂತಹ ಯೋಜನೆಗಳ ಕಳಪೆ ಕಾಮಗಾರಿಯಿಂದಾಗಿ ನೀರಿನ ಒತ್ತಡಕ್ಕೆ ಒಂದು ವೇಳೆ ಇಡೀ ಅಣೆಕಟ್ಟು ಬಿರುಕು ಬಿಟ್ಟರೆ ನದಿ ಪಾತ್ರದ ಜನತೆಯ ಬದುಕಿನ ಮೇಲೆ ಪರಿಣಾಮ ಬೀರಲಿದೆ.ಈ ಕಾಮಗಾರಿಯನ್ನು ಆರಂಭಿಸುವಾಗಲೇ ಇಲ್ಲಿನ ಜನರ ವಿರೋಧವಿತ್ತು. ಆಗ ಇದೇ ಕಂಪೆನಿಯು ಅನೇಕರಿಗೆ ಕಿರು ಪರಿಹಾರವನ್ನು ನೀಡಿ ಕೈಚೆಲ್ಲಿ ಕುಳಿತಿತ್ತು. ನಂತರ ಊರಿನ ಯಾವೊಬ್ಬನಿಗೂ ಅಲ್ಲಿಗೆ ಪ್ರವೇಶ ಇದ್ದಿರಲಿಲ್ಲ.ಹಾಗಾಗಿ ಸ್ಥಳೀಯರಾರೂ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಮಾತ್ರಾ ಇಂತಹ ಕಿರು ಜಲ ವಿದ್ಯುತ್ ಘಟಕಗಳನ್ನು ಮತ್ತೆ ನೋಡುವಂತೆ ಮಾಡಿದೆ. ಇದೇ ನೇತ್ರಾವತಿ ನದಿಯ ಪಕ್ಕದಲ್ಲಿ ಅಣೆಕಟ್ಟಿನ ಕೆಳಭಾಗದಲ್ಲಿ ಸಾವಿರಾರು ಮನೆಗಳಿವೆ ,ನೂರಾರು ಎಕ್ರೆ ಕೃಷಿ ಭೂಮಿಯಿದೆ ಒಂದು ವೇಳೆ ಮುಂದೆಯೂ ಇಂತಹ ಘಟನೆ ನಡೆದರೆ ನದಿ ಭಾಗದ ಜನತೆ ಆತಂಕವನ್ನು ಎದುರಿಸಬೇಕಾಗಿದೆ.ಹಾಗೆ ನೋಡಿದರೆ ನೀರಕಟ್ಟೆ ಜಲವಿದ್ಯುತ್ ಘಟಕವನ್ನು 1976ರಲ್ಲಿ ಕರ್ನಾಟಕ ಪವರ್ ಕಾರ್ಪೋರೇಷನ್ ಸರ್ವೆ ನಡಿಸಿತ್ತು ನಂತರ 1998-1999 ರ ಸುಮಾರಿಗೆ ಈ ಯೋಜನೆಯನ್ನು ಖಾಸಗಿ ಕಂಪನಿಯಾದ ಸಾಗರ್ ಪವರ್ ಕಾರ್ಪೋರೇಷನ್ ಗೆ ಹಸ್ತಾಂತರಿಲಾಗಿತ್ತು.ನಂತರ 2004ರಲ್ಲಿ ಇಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.ಇಂದು ವಿದ್ಯುತ್ ಅನಿವಾರ್ಯವಾಗಿದೆ. ಆದರೆ ಇಂತಹ ಕಿರುಜಲವಿದ್ಯುತ್ ಘಟಕಗಳ ಮೇಲೆ ಅತ್ಯಂತ ನಿಗಾ ಅಗತ್ಯವಾಗಿದೆ. ವಿದ್ಯುತ್ ಹೆಸರಿನಲ್ಲಿ ನಡೆಯಬಹುದಾದ ಅನಾಹುತಗಳಿಗೆ ಹೊಣೆಗಾರರಾಗಲೂ ಯಾರೂ ತಯಾರಿರದೆ ಸಂತ್ರಸ್ತ ಜನರು ಅತಂತ್ರ ಸ್ಥಿತಿ ಎದುರಿಸುತ್ತಿರುವುದರಿಂದ ಇಂದು ಇಂತಹ ಜಲವಿದ್ಯುತ್ ಗಳಿಗೆ ಸಾರ್ವಜನಿಕರಿಮ್ದ ವಿರೋಧ ಬರುತ್ತಿದೆ.ಇಂದು ಇಂತಹ ಕಂಪನಿಗಳು ನದಿಯಲ್ಲಿ ಜಲವಿದ್ಯುತ್ ನಿರ್ಮಾಣ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್ ಗಳಿಂದ ಅನುಮತಿ ಪಡೆದರೆ ಸಾಕು.ನಂತರ ಆ ಪ್ರದೇಶಗಳಿಗೆ ಯಾರೊಬ್ಬನಿಗೂ ಪ್ರವೇಶವೇ ಇಲ್ಲ.ಕಾಮಗಾರಿಯ ಪರಿಶೀಲನೆಗೂ ಅವಕಾಶವಿಲ್ಲ.ಕೊನೆಗೆ ನದಿಯ ನೀರನ್ನು ಅಣೆಕಟ್ಟೆಯಲ್ಲಿ ಸಂಗ್ರಹಿಸುವ ವಿಚಾರದಲ್ಲೂ ಕಂಪನಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ , ನೀರನ್ನು ಬಿಡಲೂ ಅಷ್ಟೇ ಯಾವುದೆ ಸೂಚನೆಯೂ ಬೇಕಾಗಿಲ್ಲ. ಇದರಿಂದಾಗಿ ನದಿಯ ಇಕ್ಕೆಲೆಗಳಲ್ಲಿ ಕೃತಕ ನೆರೆ ಹಠಾತ್ ಆಗಿ ಕಾಣಿಸಿಕೊಳ್ಳುತ್ತದೆ.ಜನಜೀವನ ಅಸ್ತವ್ಯಸ್ಥಗೊಳ್ಳುತ್ತದೆ.ಇತ್ತೀಚೆಗೆ ಗುಂಡ್ಯ ನದಿಗೆ ಕಟ್ಟಲಾಗಿರುವ ಗುಂಡ್ಯ ಜಲವಿದ್ಯುತ್ ಘಟಕದ ಕತೆಯೂ ಇದೆ. ಅಲ್ಲಿ ಹಠಾತ್ ಆಗಿ ನೀರನ್ನು ಬಿಡುವ ಕಾರಣದಿಂದಾಗಿ ಪುತ್ತೂರು ಸಮೀಪದ ಹೊಸಮಠ ಸೇತುವೆ ಜವಾವೃತವಾಗಿ 3 -4 ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಇಂತಹ ತೊಂದರೆಗಳಿಗೆ ಕಂಪನಿಗಳು ಬಾದ್ಯರಾಗದೇ ಇರುವುದು ಇಂದಿನ ದುರಂತಗಳಿಗೆ ಕಾರಣವಾಗಿದೆ. ಇಂದು ವಿದ್ಯುತ್ ಅನಿವಾರ್ಯವಾಗಿರುವ ಸಂದರ್ಭದಲ್ಲಿ ಸರಕಾರವು ಇಂತಹ ಕಿರುಜಲವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ನಿಯಮಗಳನ್ನು ಹಾಕಬೇಕಾಗಿದೆ.


ಇಂದು ಕರಾವಳಿ ಜಿಲ್ಲೆಯಲ್ಲಿ ನೀರಕಟ್ಟೆಯಂತಹ ಹಲವಾರು ಕಿರು ಜಲವಿದ್ಯುತ್ ಯೋಜನೆಗಳು ತಲೆ ಎತ್ತುತ್ತಿವೆ. ಆದರೆ ಅವುಗಳಿಗಾವುದಕ್ಕೂ ಗುಣಮಟ್ಟ ಪರೀಕ್ಷೆಯ ಕಾರ್ಯಾವಿಧಾನಗಳೇ ಇಲ್ಲ. ಈಗಾಗಲೇ ನೀರಕಟ್ಟೆಯ ದುರಂತವು ಇಂತಹ ಅಣೆಕಟ್ಟಿನ ಇಕ್ಕೆಲಗಳಲ್ಲಿರುವ ಜನತೆಗೆ ಆತಂಕವಾಗಿದೆ.ಕೇವಲ ವಿದ್ಯುತ್ ಉತ್ಪಾದನೆಯ ಹೆಸರಲ್ಲಿ ಕಾನೂನು , ನಿಯಮಗಳನ್ನು ಗಾಳಿಗೆ ತೂರಿ ಜನಸಾಮಾನ್ಯರ ನೆಮ್ಮದಿಗೆ ಭಂಗ ತರುವ ಕೆಲಸ ತರವಲ್ಲ. ಅಲ್ವೇ?

14 ಆಗಸ್ಟ್ 2008

ಮಾನವೇ ಇವರು ದಾನವರೇ...ಭಾವನೆಗಳಿಗೆ ಅಕ್ಷರ ರೂಪ ಕೊಡಲು ಅನೇಕ ದಿನಗಳಿಂದ ಸಾಧ್ಯವಾಗಿರಲಿಲ್ಲ.ಪ್ರತಿ ದಿನ ಒಂದಿಲ್ಲೊಂದು ಸುದ್ದಿಯ ಸುತ್ತ ತಿರುಗುತ್ತಲೆ ಇರುವಾಗ ಗಣಕಯಂತ್ರ ಮುಂದೆ ಕುಳಿತುಕೊಳ್ಳುವಾಗ ಸಮಯದ "ಗಣಕ" ಆರಂಭವಾಗುತ್ತದೆ.ಗಡಿಯಾರದ ಮುಳ್ಳು 12ಕ್ಕೆ ಬಂದ ಬಳಿಕವೇ ಹಾಸಿಗೆ ತೆರೆದುಕೊಳ್ಳುತ್ತದೆ. ಅನುದಿನದ ಎಲ್ಲಾ ಘಟನೆಗಳ ನಡುವೆ ಇದೊಂದು ಸಂಗತಿ ಮನಸ್ಸಿನೊಳಗೆ ಒಂದು ಸಂಚಲನವನ್ನು ಮೂಡಿಸಿದೆ.ಅಷ್ಟುಕ್ಕೂ ಅದು ಮಾನವರ ದಾನವ ಗುಣದ ಕತೆ. ಮೂಕ ಪ್ರಾಣಿಯ ನೋವಿನ ದುರಂತ ವೇದನೆ.

ನನಗೊಂದು ಪ್ರಶ್ನೆಗೆ ಯಾವಗಲೂ ಉತ್ತರ ಸಿಗುತ್ತಲೆ ಇಲ್ಲ. ಮನುಷ್ಯ ಯಾಕೆ ಇಷ್ಟು ಸ್ವಾರ್ಥಿ?.ಆತನಿಗೆ ಇನ್ನೊಬ್ಬನ ವೇದನೆ ,ಇನ್ನೊಂದು ಪ್ರಾಣಿಯ ವೇದನೆ ಅರ್ಥವಾಗೊಲ್ಲ?. ಅರ್ಥವಾಗುತ್ತಿದ್ದರೆ ಆತ ನಡೆದುಕೊಳ್ಳುವ ,ವರ್ತಿಸುವ ರೀತಿ ಇದಾ?.ಅದಕ್ಕೆ ನಾನು ಉದಾಹರಣೆಯನ್ನು ಕೊಡುತ್ತಾ ಮತ್ತೆ ಅದನ್ನೇ ನೆನಪಿಸಿಕೊಳ್ಳುವುದರ ಬದಲು ಒಂದು ಪ್ರಾಣಿಯ ಕತೆಯನ್ನು ವಿವರಿಸುತ್ತೇನೆ. ಇದನ್ನು ಧಾರ್ಮಿಕವಾಗಿ ಹೇಳುವುದಾದರೆ "ಗೋವು". ಸಾಮಾನ್ಯವಾಗಿ ಹೇಳುವುದಾದರೆ ದನ. ಅದರಾಚೆಗೆ ನೋಡುವುದಾದರೆ ಒಂದು ಮುಗ್ದ ಪ್ರಾಣಿ. ಆದರೆ ಅದು ರಸ್ತೆ ಬದಿಯಲ್ಲಿ ಕುತ್ತಿಗೆ ಮತ್ತು ಕಾಲನ್ನು ಬಳ್ಳಿಯಿಂದ ಬಿಗಿದು ಬಿದ್ದಿರುವ ಸ್ಥಿತಿಯಲ್ಲಿತ್ತು. ಅದಾಗಲೆ ಅಸು ನೀಗಿತ್ತು. ಆ ಪ್ರಕರಣ ಹಿಂದೆ ಹೋದಂತೆ ವಿವಿಧ ಸತ್ಯಗಳು ಹೊರಬರುತ್ತದೆ. ಈಗ ದನಕಳ್ಳರ ಸಂಖ್ಯೆ ಹೆಚ್ಚಿದೆ.ಅದಕ್ಕೆ ಕಾರಣಗಳು ಹಲವಾರು. ಅಂದು ಕೂಡಾ ಆ ದನವನ್ನು ಮನೆಯೊಂದರ ಹಟ್ಟಿಯಿಂದ ರಾತ್ರಿ ವೇಳೆ ಕಳ್ಳತನ ಮಾಡಲಾಗಿತ್ತು. ಆದರೆ ಕೆಲ ತರುಣರು ಇತ್ತೀಚೆಗೆ ಕೆಲ ಸ್ಥಳಗಳಲ್ಲಿ ದನ ಕದ್ದು ಸಾಗಿಸುವವರನ್ನು ಹಿಡಿಯಲೆಂದು ತಂಡಗಳನ್ನು ರಚಿಸಿಕೊಂಡಿರುತ್ತಾರೆ.ಅಂತಹ ತಂಡವೊಂದಕ್ಕೆ ಈ ಕಳ್ಳತನಗೈದು ಸಾಗಾಟ ಮಾಡುತ್ತಿದ್ದ ವಾಹನ ಕಣ್ಣಿಗೆ ಬಿತ್ತು.ಕೂಡಲೇ ಓಡಿಸಿಕೊಂಡು ಹೋದಾಗ ಸುಮಾರು 20 - 30 ಕಿಮಿ ದೂರದಲ್ಲಿ ದನವನ್ನು ವಾಹನದಿಂದ ಹೊರಗೆ ಎಸೆದು ಕಳ್ಳರು ಪರಾರಿಯಾದರು. ದನ ಸ್ಥಳದಲ್ಲೇ ಅಸು ನೀಗಿತ್ತು. ಅದು ವಾಹನದಲ್ಲೆ ಅಂತಹ ಸ್ಥಿತಿಯಲ್ಲಿತ್ತಾ ಅಥವಾ ಎಸೆಯುವಾಗ ಆ ಸ್ಥಿತಿಗೆ ಬಂದಿತ್ತಾ ಗೊತ್ತಿಲ್ಲ. ಆದರೆ ಒಂದು ಹಿಂಸಾತ್ಮಕ ರೂಪದಲ್ಲಿ ಆ ದನದ ಜೀವ ಕೊನೆಗೊಂಡಿತ್ತು. ಅದಕ್ಕೆ ಸಾಯುವುದಕ್ಕೂ ನೆಮ್ಮದಿಯನ್ನು ಕೊಡಲಿಲ್ಲ.

ಮನುಷ್ಯ ನೋಡಿ ಎಷ್ಟು ಕ್ರೂರಿ. ಹಿಂಸೆಯನ್ನು ತಡೆದುಕೊಂಡ ದನ ಹೇಗೆ ಇದ್ದಿರಬಹುದು?. ಮನುಷ್ಯನಿಗೆ ಒಂದು ಉಗುರು ತುಂಡಾದರೆ 10 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾನೆ. ಹಾಗೆಯೇ ದನವೂ ಒಂದು ಪ್ರಾಣಿಯಲ್ವಾ?. ಆ ದನ ಹಾಗೆ ಸಾಯುವುದಕ್ಕೆ ಯಾರು ಕಾರಣರು? ಓಡಿಸಿಕೊಂಡು ಹೋದ ತರುಣರೇ? ಅಥವಾ ದಾನವ ಗುಣದ ಮಾನವರೇ?. ಈ ಬಗ್ಗೆ ವಿಶ್ಲೇಷಣೆಯು ನನಗೆ ಅಗತ್ಯವಿಲ್ಲ ಮತ್ತು ನನಗೆ ಸಂಬಂಧಿಸಿದ್ದಲ್ಲ ಎಂದು ಅಂದು ಕೊಂಡ ಕಾರಣ , ಅಲ್ಲಿ ನನಗೆ ಅನ್ನಿಸಿದ್ದು ನಮ್ಮಂತೆ ಅದಕ್ಕೂ ಜೀವವಿದೆ , ಅದಕ್ಕೂ ಬದುಕುವ ಸ್ವಾತಂತ್ರ್ಯವಿದೆ. ಹಾಗಾಗಿ ಆ ಸ್ವಾತಂತ್ರ್ಯವನ್ನು ನಾವು ಕಸಿದುಕೊಳ್ಳುವುದು ತರವಲ್ಲ. ಸಾವು ಬರುದಾದರೆ ನೆಮ್ಮದಿ ಸಾವು ಬರಲಿ ಎಂದು ಮನುಷ್ಯರಿಗಿರುವಂತೆ ಪ್ರಾಣಿಗೂ ಇರಬಹುದಲ್ವಾ?.

ಮಳೆ .... ಹಾನಿ.... ನೋವು....ಮಳೆಯೇ ಏನು ನಿನ್ನ ಲೀಲೆ?.

ಬಡವರ ಮೇಲೂ ನಿನಗೆ ಕರುಣೆಯಿಲ್ಲವೇ..?? ಅಂತ ಪ್ರಶ್ನಿಸಿಬಿಡಬೇಕು ಎಂದು ನನ್ನ ಮಿತ್ರ ಅತ್ಯಂತ ಆವೇಶಭರಿತನಾಗಿ ಹೇಳುತ್ತಾ , ದೇವರಿದ್ದಾರಾ.. ಅವನಿದ್ದರೆ ಹೇಗೆ ಮಾಡುತ್ತಿದ್ದನಾ ..... ಅಂತ ಮಿತ್ರ ನನ್ನ ತಲೆ ತಿನ್ನುತ್ತಲೆ ಇದ್ದ. ಆತ ಹಾಗೆ ಕೇಳುವುದಕ್ಕೂ ಕಾರಣವಿತ್ತು. ಆ ಘಟನೆ ನೋಡಿದ ಯಾರಾದರೂ ವಿಷಾದಿಸದೇ ಇರಲಾರರು. ಚಿತ್ರದಲ್ಲಿ ನೋಡಿದಾಗ ಇದೇನು ಅಂತ ನಾವೆಲ್ಲಾ ಕೇಳಿದರೂ ಅಚ್ಚರಿಯಿಲ್ಲ. ಆದರೆ ಅಲ್ಲಿನ ನಿಜ ಸಂಗತಿ ಮಾತ್ರಾ ಭಯಾನಕ.

ಆ ಘಟನೆಯನ್ನು ವಿವರಿಸುತ್ತಾ ಸಾಗುವುದಾದರೆ ..., ಬೆಳ್ತಂಗಡಿಯ ನೆರಿಯ ಸಮೀಪದ ಇಟ್ಯಡ್ಕದಲ್ಲಿ ಸಂಭವಿಸಿದ ಭಾರೀ ಕುಸಿತದಿಂದ ಇಲ್ಲಿನ ಕೃಷಿಕ ಜನಾರ್ಧನ ಶೆಟ್ಟಿಯವರಿಗೆ ಈಗ ಉಳಿದಿರುವುದು ಕೇವಲ ಒಂದು ತೆಂಗಿನ ಮರ ಮಾತ್ರಾ.ಉಳಿದೆಲ್ಲವೂ ಮಣ್ಣಿನಿಂದ ಆವೃತವಾದ ಅತ್ಯಂತ ದುರಂತದ ಸಂಗತಿ.

ಇಟ್ಯಡ್ಕದ ಜನತೆಗೆ ರಾತ್ರಿ ಬೆಳಗಾಗುವುದರಲ್ಲಿ ಅಲ್ಲೋಲಕಲ್ಲೋಲವಾದ ಅನುಭವ.ಸಂಜೆಯವರೆಗೆ ನಡೆದಾಡಿದ ತೋಟ ಮರುದಿನ ಮುಂಜಾನೆ ನೋಡುತ್ತಿರುವಾಗ ಎಲ್ಲವೂ ಮಾಯ.ಅಲ್ಲಿ ಮಣ್ಣಿನ ರಾಶಿ ಮಾತ್ರ ಕಂಡುಬಂದಿತ್ತು.ರಾತ್ರಿ ಸುಮಾರು 12 ರಿಂದ 1 ಗಂಟೆಯ ಸುಮಾರಿಗೆ ಭಾರೀ ಸದ್ದು ನಂತರದ 10 ನಿಮಿಷದಲ್ಲಿ ಎಲ್ಲವೂ ನಡೆದು ಬಿಟ್ಟಿದೆ.ಹಲವರ ತೋಟಗಳು ಇಲ್ಲವಾಯಿತು.ಅಲ್ಲಿನ ನಿವಾಸಿ ಜನಾರ್ಧನ ಶೆಟ್ಟಿಯವರಿಗೆ 1.8 ಎಕ್ರೆ ಅಡಿಕೆ ತೋಟದ ಕೃಷಿ. ಆದರೆ ಈ ಕುಸಿತದಿಂದಾಗಿ ಈಗ ಉಳಿದಿರುವುದು ಕೇವಲ ಒಂದು ತೆಂಗಿನ ಮರ ಮತ್ತು ಮನೆ ಮಾತ್ರಾ.ಉಳಿದ ಎಲ್ಲಾ ಅಡಿಕೆ ತೋಟ, ಕೃಷಿಯೆಲ್ಲವೂ ಇಲ್ಲವಾಗಿದೆ.ಅವರ ದನ ಹಾಗೂ ಎಮ್ಮೆಯನ್ನು ಅತ್ಯಂತ ಕಷ್ಟದಿಂದ ರಕ್ಷಿಸಿದ್ದಾರೆ.ಹಟ್ಟಿ ಇತ್ಯಾದಿ ಎಲ್ಲವೂ ನಾಪತ್ತೆಯಾಗಿದೆ. ಇದಲ್ಲದೆ ಅವರೊಬ್ಬ ಕೂಲಿ ಕಾರ್ಮಿಕ. ಈಗ ಮುಂದಿನ ಬದುಕಿನ ಬಗ್ಗೆ ಅವರಿಗೆ ಚಿಂತೆ ಶುರುವಾಗಿದೆ.

ಇದು ಕೇವಲ ಒಬ್ಬರ ಕತೆಯಲ್ಲ.ಇಲ್ಲಿನ ಹಲವಾರು ಕೃಷಿಕರ ಅಡಿಕೆ ತೋಟಗಳು ಗುಡ್ಡ ಕುಸಿದದಿಂದಾಗಿ ನೀರಿನೊಂದಿಗೆ ಮಣ್ಣು ಕೂಡಾ ಮಿಶ್ರವಾಗಿ ತೋಟದೊಳಕ್ಕೆ ಹರಿದುಬರುತ್ತಿರುವ ಕಾರಣ ತೋಟಗಳೆಲ್ಲವೂ ಮಣ್ಣಿನಿಂದ ಆವೃತವಾಗುತ್ತಿದೆ.ಹೀಗಾಗಿ ಆ ತೋಟಗಳೂ ನಾಶದ ಭೀತಿಯಲ್ಲಿದೆ. ಈ ಘಟನೆಯನ್ನು ನೋಡಿದಾಗಿನ ಅನುಭವ ಅತ್ಯಂತ ದಿಗ್ಭ್ರಮೆ ಮೂಡಿಸುತ್ತದೆ.

ಇಲ್ಲಿ ನೋಡಿ.ಈ ಘಟನೆಯನ್ನು ನೋಡಲು ಬಂದ ಅಷ್ಟೂ ಜನ ಸಂತ್ರಸ್ತ ಜನರಿಗೆ ಸಮಾಧಾನ ಹೇಳುವುದರ ಬದಲು ಅಬ್ಬಾ ನೀವು ಬದುಕಿದ್ದೇ ಪುಣ್ಯ.. ನಿಮ್ಮ ತೋಟವೆಲ್ಲಾ ಹೋಯಿತಲ್ಲಾ ... ಎಷ್ಟು ಕಷ್ಟ ಪಟ್ಟು ಕೃಷಿ ಮಾಡಿದ್ದೀರಲ್ಲಾ... ಇಂತಹ ಮಾತುಗಳು ಅಲ್ಲಿ ಹರಿಯುತ್ತಲೆ ಇತ್ತು. ಜನ ಯಾವ ರೀತಿ ಯೋಚಿಸುತ್ತಾರಲ್ಲಾ..?.

ಕೊನೆಗೆ ನಾನು ಕೂಡಾ. ಯಾಕೆಂದ್ರೆ ನಮ್ಮಲ್ಲಿ ಆ ವ್ಯಕ್ತಿ ಮಾತನಾಡುತ್ತಾ ನನಗೆ ಕೃಷಿ ಎಂದರೆ ಇನ್ನು ಒಂದು ತೆಂಗಿನ ಮರ ಮಾತ್ರಾ ಅಂತ ಅಳುತ್ತಾ ಹೇಳಿದರು. ಆದರೆ ಆಗ ನಾನು ಮೈಕ್ ಅವರಿಗೆ ಹಿಡಿದಿರಲಿಲ್ಲ. ಅದೇ ಮಾತನ್ನು ಮತ್ತೆ ಕ್ಯಾಮರಾ ಮುಂದೆ ಹೇಳಿಸಿದೆ. ಅವರ ನೋವನ್ನು ಮತ್ತೆ ನೆನಪಿಸಿದೆ. ನಾನು ಕೂಡಾ ಅವರಿಗೆ ಮಾನಸಿಕವಾದ ನೋವನ್ನು ನೀಡಿರಬಹುದು. ಅದಕ್ಕೆ ನಾನು ವಿಷಾದಿಸಬೇಕಾಗಿದೆ.