22 ಜೂನ್ 2008

ಅವರ ನೋವಿನಲ್ಲಿ......
ಮನುಷ್ಯ ಜನ್ಮವೆ ಹಾಗೆಯೇ ಏನೋ ?. ಇನ್ನೊಬ್ಬರ ಬದುಕಿನಲ್ಲಿ ಮೂಗು ತೂರಿಸಿ ಏನೋ ಒಂದು ಸಂತಸ ಪಡುವ ಹುಂಬತನ. ಆದರೆ ನಿಜವಾಗಲೂ ಅಂತಹವರು ತಮ್ಮ ಬದುಕಿನ ಒಳಗೊಮ್ಮೆ ಇಣುಕಿದಾಗ ಪರಿಸ್ಥಿತಿಯ ಸೂಕ್ಷತೆ ಅರಿವಾಗುತ್ತದೆ.

ದೇಶದಲ್ಲಿ ಅದೇನೋ ಸಮಸ್ಯೆಯಿಂದ ಬಳಲುವವರಿದ್ದಾರೆ,ಆರ್ತರಿದ್ದಾರೆ,ಅನೇಕ ಸಾವುಗಳು ದಿನಂಪ್ರತಿ ಸಂಭವಿಸುತ್ತಲೇ ಇರುತ್ತದೆ.ಇಲ್ಲಿ ಅನೇಕ ಸಾವುಗಳು ಅನ್ಯಾಯವಾಗಿ ನಡೆದುಹೋಗುತ್ತದೆ.ಅಂತಹುದಕ್ಕೆ ಧ್ವನಿಯಾಗುವವರು ಯಾವೊಬ್ಬನೂ ಕಾಣಿಸಿಲಾರ. ಎಲ್ಲೋ ಒಂದು ಅನಗತ್ಯವಾದ ಆ ಸಾವು ಔಚಿತ್ಯವೇ ಆಗಿದ್ದರೂ ಅದು ಇಡೀ ಜಗತ್ತನ್ನು ಕೇಂದ್ರೀಕರಿಸುತ್ತದೆ.ಆದರೆ ಅನೆಕ ಜನ ಅದು ಸರಿ , ... ಸಾವು ನಡೆಯಬೇಕಿತ್ತು ಅಂತ ಒಳಗೊಳಗೇ ಮಾತನಾಡುತ್ತಾರೆ.ಆದರೆ ಸಾಮಾಜಿಕವಾಗಿ ಗದ್ದಲ , ಗಲಭೆಗಳು ನಡೆಯುತ್ತದೆ. ಅನ್ಯಾಯವಾಗಿ ನಡೆದ ಸಾವು ನ್ಯಾಯವಾಗಿಯೂ , ನ್ಯಾಯವಾಗಿ ನಡೆದ ಸಾವು ಅನ್ಯಾಯವಾಗಿಯೂ ಈ ಜಗತ್ತಿನಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದೆ.ಇದಕ್ಕೆ ಕಾರಣರಾರು?. ಇಂತಹ ಘಟನೆಗಳ ಬಗ್ಗೆ ಇಲ್ಲಿ ಉದಾಹರಿಸಬೇಕಾದ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುವುದಿಲ್ಲ.

ಇದರ ಹೊರತಾಗಿ ಸಮಾಜಕ್ಕೆ ಸಂಬಂಧಿಸಿರದ ಖಾಸಗೀ ಬದುಕಿನಲ್ಲಿ ಮೂಗುತೂರಿಸುವ ಔಚಿತ್ಯ ಏನಿದೆ?.ಕುಟುಂಬದ ಒಳಗೆ ಸಾಮಾನ್ಯವಾಗಿ ಇರುವ ಕಲಹಗಳು ಬೀದಿಗೆ ಬರಲು ಕಾರಣ ಮೂರನೆ ಒಬ್ಬ ವ್ಯಕ್ತಿಯ ಕೈವಾಡ ಇದ್ದೇ ಇರುತ್ತದೆ.ಅದಕ್ಕೆ ಕಾರಣಗಳು ಹಲವಾರು. ಹಾಗೆ ಒಂದು ವೇಳೆ ಬೀದಿಗೆ ಬಂದರೆ ಅದು ಉಲ್ಪಣಿಸಿದ ಉದಾಹರಣೆಗಳೇ ಹೆಚ್ಚು. ಕೊನೆಗೆ ಅದರ ಅಂತ್ಯವಾಗುವುದು ಹೇಗೆ ಎಂದು ಈಗ ಗೊತ್ತೇ ಇದೆ. ಒಂದು ವೇಳೆ ಮೂರನೆ ವ್ಯಕ್ತಿಯ ಕೈವಾಡವನ್ನು ಇಡೀ ಸಮಾಜವೇ ಬಹಿರಂಗವಾಗಿಯೇ ಹೇಳಿಕೊಂಡು ತಿರುಗಾಡಿದರೆ ಮತ್ತೆ ಮಾನದ ಪ್ರಶ್ನೆ......!!?. " ಸಾವು "...!!??.

ಹಾಗಾಗಿ ಒಂದು ಕುಟುಂಬದ ಒಳಗೆ ಗಂಡ - ಹೆಂಡತಿ, ಸೇರಿದಂತೆ ಮನೆಯೊಳಗೆ ಸಾಮಾನ್ಯವಾಗಿ ಒಂದು ರೀತಿಯ ಕಲಹ ಇದ್ದೇ ಇರುತ್ತದೆ. ಎಲ್ಲಿ ಇಲ್ಲ ಹೇಳಿ. ಆದರೆ ಅದು ಬೀದಿಗೆ ಬರುವುದು ಅಪರೂಪ. ಕೆಲವೊಮ್ಮೆ ಬಂದರೂ ಶಮನವಾಗುತ್ತದೆ. ಅದಾಗುವ ಮುನ್ನ ಸಮಾಜವು ಛೇ... ಥೂ.... ಎಂದರೆ ಆ ಕುಟುಂಬವಿಡೀ ಬೀದಿಗೆ ಬೀಳುವುದು ಖಚಿತ.ಅದರ ಪರಿಣಾಮ ಇನ್ನೂ ವಿಪರೀತ. ಆ ಸಾಮಾನ್ಯ ವಿಚಾರ ಅದರ ಪಾಡಿಗೆ ಅದಿದ್ದರೆ ಅಲ್ಲೇ ಶಮನವಾಗುತ್ತದೆ.ಮತ್ತೆ ಒಂದಾಗಿ ಕುಟುಂಬದ ನೊಗ ಸುಲಲಿತವಾಗಿ ಸಾಗುತ್ತದೆ.ಅದಕ್ಕೂ ಮುನ್ನ ಜನಕ್ಕೆ ಏಕೆ ಆ ಕುಟುಂಬದ ಬಗ್ಗೆ ಆಸಕ್ತಿ.?. ತಮ್ಮ ಸಂಸಾರದ ನೊಗವನ್ನು ಮೊದಲು ಸರಿ ಪಡಿಸುವ ಚಿಂತನೆ ಏಕೆ ಬರಲ್ಲ ಎಂಬುದೇ ತಿಳಿಯದ ಪ್ರಶ್ನೆ.

11 ಜೂನ್ 2008

ಆರೋಗ್ಯ ಸಚಿವರು 68 ಕೆ ಜಿ...!!??ಚಿಕೂನ್ ಗುನ್ಯಾ ಪೀಡಿತ ಪ್ರದೇಶಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಬುಧವಾರದಂದು ಆಗಮಿಸಿ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಮಾಹಿತಿ ಕೇಳಿದರು.ವೈದ್ಯರ ಸಮಸ್ಯೆಗಳ ಬಗ್ಗೆ ವಿಚಾರಿಸಿದರು.

ಹೀಗೆ ಸಾಗುವ ವೇಳೆ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿದರು. ಚಿಕೂನ್ ಗುನ್ಯಾ ಮಾರಿ ಹೋಗಲೆಂದು ದೇವರ ಮೊರೆ ಹೋದರೋ ಗೊತ್ತಿಲ್ಲ. ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅನೇಕ ಕಾರ್ಯಗಳ ಬಗ್ಗೆ ತಿಳಿಸಿದರು.

ಚಿಕೂನ್ ಗುನ್ಯಾದ ಬಗ್ಗೆ ಸರಕಾರವು ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿದೆ ಎಂದರು.ಆರೋಗ್ಯ ಅಧಿಕಾರಿಗಳು ಮಾತ್ರಾ ಸಚಿವರ ದಾರಿ ತಪ್ಪಿಸಿದ್ದು ಇಲ್ಲಿ ಕಂಡುಬಂದಿತ್ತು.ಜಿಲ್ಲೆಯಲ್ಲಿ ಒಟ್ಟಾರೆಯಾಗಿ 9800 ಮಂದಿಗೆ ಮಾತ್ರಾ ಚಿಕೂನ್ ಗುನ್ಯಾ ಬಂದಿದೆ , ಯಾರೂ ಕೂಡಾ ಅದರಿಂದಾಗಿ ಸತ್ತಿಲ್ಲ ಎಂದು ಹೇಳಿ ವರದಿ ಒಪ್ಪಿಸಿತ್ತು. ಮಾಧ್ಯಮದ ಮಂದಿ ಮತ್ತೆ ಮತ್ತೆ ಕೇಳಿದಾಗಲೂ ಸಚಿವರು ಹೇಳಿದ್ದು ಅದನ್ನೆ.

ಹೀಗೆ ಅಲ್ಲಲ್ಲಿ ಆಸ್ಪತ್ರೆಗೆ ಬೇಟಿ ನೀಡುತ್ತಿರುವ ವೇಳೆ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೂಕದ ಯಂತ್ರವನ್ನು ಕಂಡಾಗ ಸಚಿವರಿಗೆ ಏನು ಮನಸಾಯಿತೋ ತಮ್ಮ ತೂಕವನ್ನು ನೋಡಿಕೊಂಡರು. ಸಚುವರು ತೂಗಿದ್ದು 68 ಕೆ.ಜಿ. ಅವರ ಪ್ರಕಾರ ಅದು ಕಡಿಮೆಯಾಗಿತ್ತಂತೆ....

ಹೀಗೆ ಸಚಿವರ ಪ್ರಯಾಣದಲ್ಲಿ ಒಂದಷ್ಟು ಮಜವೂ ಇತ್ತಂತೆ ಹಾಗೆಂದು ಅಧಿಕಾರಿಯೊಬ್ಬರು ಪಿಸುಗುಟ್ಟುತ್ತಿದ್ದರೆ, ಪೊಲೀಸರಿಗೆ ದಾರಿ ತಪ್ಪಿತ್ತು.ಸಚಿವರು ಒಮ್ಮೆ ಒಂದು ದಾರಿ ಹೇಳಿದರೆ ಇನ್ನೊಮ್ಮೆ ಬೇರೆ ದಾರಿಯ ಮೂಲಕ ಹೋಗಲು ಹೇಳುತ್ತಿದ್ದರು. ಸಚಿವರಿಗೆ ದಾರಿ ಹೇಳುವವರು ಶಾಸಕರು...!

10 ಜೂನ್ 2008

ಆ ಭಾವನೆಗಳು...."ನೋ ಮೋರ್"
ಅಂದು ಸಮುದಾಯವೊಂದರ ಖಾಸಗೀ ಸಮಾರಂಭವೊಂದು ದೇವಸ್ಥಾನದ ವಠಾರದಲ್ಲಿ ಏರ್ಪಾಡಗಿತ್ತು. ಸಮಯ ಬೆಳಗ್ಗೆ 9.30 ರ ಆಜುಬಾಜು. ಅಲ್ಲಿದ್ದ ಕಾಯಿನ್ ಫೋನ್ ಬೂತಿಗೆ ಕರೆಯೊಂದು ಬಂತು.ಅದು ಆ ದೇವಸ್ಥಾನದ ಅರ್ಚಕರ ಮನೆಯಿಂದ ಬಂದ ಕರೆ.ಅತ್ತ ಕಡೆಯಿಂದ ಅಳು ಮಿಶ್ರಿತ ಧ್ವನಿ,ತಕ್ಷಣವೇ ಅರ್ಚಕರು ಮನೆಗೆ ಬರುವಂತೆ ಬುಲಾವ್ , ಆ ಕ್ಷಣದ ಮಾಹಿತಿ " ಮಗುವಿನ ಮೇಲೆ ಬಿಸಿನೀರು ಬಿದ್ದಿದೆ".

ತಕ್ಷಣವೇ ಫೋನ್ ಕುಕ್ಕಿ ಅತ್ತಿತ್ತ ನೋಡಿದಾಗ ,ಕಾರ್ಯಕ್ರಮ ಸಂಘಟಕರೊಬ್ಬರ ಕಾರು ಕಾರ್ಯಕ್ರಮದ ಸಿದ್ಧತೆಗಾಗಿ ಬೇರೆಲ್ಲಿಗೋ ಹೊರಡಲು ಸಿದ್ಧವಾಗಿತ್ತು. ಕಾರು ತಕ್ಷಣವೆ ಅರ್ಚಕರ ಮನೆಯ ಕಡೆ ಹೊರಟಿತು. ದಡ ದಡನೆ ಕಾರಿನಿಂದ ಇಳಿದು ಮನೆಯೊಳಗೆ ಹೊರಡಲು ಸಿದ್ಧವಾಗುತ್ತಿರುವಂತೆಯೇ 3 ವರ್ಷದ ಮಗುವಿನ ಚೀರಾಟ ಕೇಳುತ್ತಿತ್ತು.ಒಳ ಹೋಗಿ ನೋಡಿದಾಗ ಮಗುವನ್ನು ನೀರತೊಟ್ಟಿಯಲ್ಲಿ ಕುಳ್ಳಿರಿಸಲಾಗಿತ್ತು ಅಲ್ಲಿಂದಲೇ ಮಗು ಚೀರಾಡುತ್ತಲೇ ಇತ್ತು.
ತಕ್ಷಣವೇ ಸಮೀಪದ ಪೇಟೆಯ ವೈದ್ಯರಿಗೆ ಕರೆ ಮಾಡಲಾಯಿತು. ಆ ವೈದ್ಯರ ದೂರವಾಣಿ ರಿಂಗಿಣಿಸಿದರೂ ಆವರು ಫೋನ್ ತೆಗೆಯಲೇ ಇಲ್ಲ.ಹಕ್ಕದ ಅಂಗಡಿಗೆ ಕೇಳಿದಾಗ ಅವರು ರಜೆಯಲ್ಲಿರುವ ಸುದ್ಧಿ ಬಂತು ಅತ್ತ ಕಡೆಯಿಂದ. ಆ ಸಂದರ್ಭದಲ್ಲೇ ಅರ್ಚಕರ ಮನೆಗೆ ಹಿತೈಷಿಯೊಬ್ಬರು ಬೇರೆ ವೈದ್ಯರೊಬ್ಬರನ್ನು ಮಾತನಾಡಿ ತಕ್ಷಣವೇ ಹೊರಡುವಂತೆ ವಿನಂತಿಸಿದ್ದರು. ಆದರೆ ಅದು ಹಳ್ಳಿಯಾದ್ದರಿಂದ ಅಷ್ಟು ಸುಲಭದಲ್ಲಿ ಅಲ್ಲಿಗೆ ತಲಪುವಂತಿರಲಿಲ್ಲ ಪೇಟೆಯಿಂದ ಏನಿಲ್ಲವೆಂದರೂ 4 - 5 ಕಿ ಮೀ ದೂರವಿದೆ.ತಕ್ಷಣಕ್ಕೆ ವಾಹನವೂ ದೊರೆಯದು. ಆದರೂ ವೈದ್ಯರು ಪ್ರಯತ್ನಿಸುವೆ ಎಂದಿದ್ದರು. ಇದೇ ವೇಳೆ ಅಲ್ಲಿಗೆ ಮೊದಲಿಗೆ ಬಂದಿದ್ದ ಕಾರ್ಯಕ್ರಮದ ಸಂಘಟಕರು ತಮ್ಮ ವಾಹನದಲ್ಲಿ ಇನ್ನೊಬ್ಬ ನುರಿತ ಚಾಲಕರನ್ನು ಸಂಪರ್ಕಿಸಿ ದೂರದ ಆಸ್ಪತ್ರೆಗೆ ಮುಂಜಾಗ್ರತೆಗಾಗಿ ಸಾಗಿಸುವ ಬಗ್ಗೆ ಯೋಚಿಸಿ ಹೊರಡಲು ಹೇಳಿ ಸಮೀಪದ ವೈದ್ಯರನ್ನು ಕರೆತರಲು ಹೊರಟರು. ಆದರೆ ಪೇಟೆ ತಲಪಲು 5 ರಿಂದ 7 ನಿಮಿಷ ಬೇಕು. ಆ ವೇಳೆಗೆ ವೈದ್ಯರು ಇನ್ನೊಂದು ಜೀಪಿನಲ್ಲಿ ಹೊರಟು ಬರುತ್ತಿದ್ದರು. ಆ ಕ್ಷಣವೇ ಕಾರಿನಲ್ಲಿ ದೇವಸ್ಥಾನದಲ್ಲಿ ನಡೆಯಬೇಕಾಗಿರುವ ಸಭಾಕಾರ್ಯಕ್ರಮಕ್ಕೆ ಅಗತ್ಯ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಖರೀದಿಸಿ ಮತ್ತೆ ಮನೆಯತ್ತ ಕಾರು ಹೊರಟಿತು.ನುರಿತ ಚಾಲಕರೂ ಜೊತೆ ಸೇರಿದರು.ವೇಗವಾಗಿ ಸಾಗಿದ ಕಾರು ದೇವಸ್ಥಾನದಲ್ಲಿ ವಸ್ತುಗಳನ್ನು ಇಳಿಸಿ ಮತ್ತೆ ಮನೆಯತ್ತ ಸಾಗಿದಾಗ ವೈದ್ಯರು ಮಗುವನ್ನು ಬಾಳೆ ಎಲೆಯಲ್ಲಿ ಮಲಗಿಸಿ ಶುಶ್ರೂಷೆ ಮಾಡುತ್ತಿದ್ದರು, ಮಗು ಆಳು ನಿಲ್ಲಿಸಿರಲೇ ಇಲ್ಲ. ಹೊಟ್ಟೆಯ ಭಾಗಶ:, ಹೊಟ್ಟೆಯಿಂದ ಕೆಳಗೆ ಮೂತ್ರ ನಾಳ , ಕಾಲು ..... ಬಿಸಿನೀರು ಬಿದ್ದು ಬೊಬ್ಬೆಗಳಾಗಿ ಚರ್ಮ ಎದ್ದು ಬಂದಿತ್ತು.

ಆದದ್ದೇನು ? ಆ ಮಗುವಿಗೆ ಇನ್ನೂ 3 ವರ್ಷ ಪ್ರಾಯ. ಆಟದ ಸಮಯ,ತುಂಟಾಟದ ಹೊತ್ತು.ಅತ್ಯಂತ ಜಾಗ್ರತೆ ಇರಬೇಕಾದ ಸಂದರ್ಭ. ಮಗುವಿನ ಅಮ್ಮ ಒಲೆಯ ಮೇಲಿನಿಂದ ನೀರಿ ಬಿಸಿಯಾದದ್ದನ್ನು ಕೆಳಗಿರಿಸಿ ಇನ್ನೊಂದು ಪಾತ್ರವನ್ನು ಸ್ಟೌವ್ ಮೇಲೆ ಇಡುವ ತಯಾರಿಯಲ್ಲಿದ್ದರು , ಅದುವರೆಗೆ ಹೊರಗಡೆ ಇದ್ದ ಮಗು ಒಳಗಡೆ ಬಂದ ತಕ್ಷಣ ಬಿಸಿನೀರಿನ ಪಾತ್ರವನ್ನು ಎಳೆದುಕೊಡಿತು.ಬಿಸಿನೀರು ಮಗುವಿನ ಮೇಲೆಲ್ಲಾಚೆಲ್ಲಿತು.

ವೈದ್ಯರು ತಕ್ಕ ಮಟ್ಟಿನ ಚಿಕಿತ್ಸೆ ಮಾಡುತ್ತಿದ್ದಾಗಲೇ ಮಗು ಅಳು ನಿಲ್ಲಿಸಿರಲೇ ಇಲ್ಲ ಹೊರಗಡೆ ಕೆಲ ಜನ ಜಮಾಯಿಸಿ ಹಳ್ಳಿ ಔಷಧಿಯ ಬಗ್ಗೆ ಮಾತನಾಡುತ್ತಾ "ಬೆಂಕಿ ತೆಗೆಸುವ" ಬಗ್ಗೆ ಚಿಂತಿಸುತ್ತಿದ್ದರು.ಚಿಕಿತ್ಸೆಯ ಸಂದರ್ಭದಲ್ಲೇ ಅರ್ಚಕರ ಬಳಿಗೆ ಬಂದ ವೈದ್ಯರು ನಿಮಗೆ ಧೈರ್ಯ ಇದ್ದರೆ ನಾನೆ ಚಿಕಿತ್ಸೆ ನೀಡುವೆ , ಪ್ರಾಣಕ್ಕೆ ಅಪಾಯವೇನಿಲ್ಲ..... ಬೇಕುಂತಲೆ ಇದ್ದರೆ ಒಂದು ದಿನ ಎಡ್ಮಿಟ್ ಆಗಿ ಅಂತ ಹೇಳಿ ಮತ್ತೆ ಚಿಕಿತ್ಸೆಯ ಕಡೆಗೆ ಹೋದರು , ಆಗ ಬಂದ ಜನ ಅವರು ಒಮ್ಮೆ ಹೋಗಲಿ , ನಂತರ ನಾವು ನೋಡೋಣ ಅಂತ ಅರ್ಚಕರಲ್ಲಿ ಹೇಳತೊಡಗಿದರು... ಈ ನಡುವೆ ಮಗುವಿಗೆ ಸಿಯಾಳವನ್ನೂ ನೀಡಲಾಯಿತು. ಕೊನೆಗೆ ವೈದ್ಯರು ಚಿಕಿತ್ಸೆಯನ್ನು ಮುಗಿಸಿ ಸಂಜೆಯವರೆಗೆ ಮೂತ್ರ ಹೋಗಿಲ್ಲವಾದರೆ ತಿಳಿಸಿ , ಕ್ಲಿನಿಕಿಗೆ ಮತ್ತೆ ಬನ್ನಿ ಮಾತ್ರೆ ಕೊಡುತ್ತೇನೆ ಎಂದು ಹೋದರು.

ನಂತರ ಮಾತನಾಡಿದ ಅರ್ಚಕರು ಮತ್ತು ಬಂದ ಜನ ಬೆಂಕಿ ತೆಗೆಯುವ ಪರಿಣಿತರತ್ತ ಸಾಗಿದರು....

ಈ ನಡುವೆ ಕಾರ್ಯಕ್ರಮ ನಡೆಯುವುದಿತ್ತು.... ಅರ್ಚಕರನ್ನು ಬಿಟ್ಟೂ ಎಲ್ಲರೂ ಅಲ್ಲಿಗೆ ತೆರಳಿದರು.

ಮಧ್ಯಾಹ್ನದ ವೇಳೆಗೆ "ಬೆಂಕಿ ತೆಗೆಯುವ" ಪರಿಣಿತರು ಬಂದು ಅದೇನೋ ಮಾಡಿ ಬೆಂಕಿ ತೆಗೆದರು.... ಕಾಕ ತಾಳೀಯವೋ ಗೊತ್ತಿಲ್ಲ ಮಗು ನಂತರ ಚೆನ್ನಾಗಿ ನಿದ್ದೆ ಮಾಡಿತಂತೆ..... ಆ ಬಳಿಕ ಔಷಧಿಯನ್ನೂ , ಲೇಪವನ್ನೂ ಮಗುವಿಗೆ ಹಚ್ಚಲಾಯಿತು. ಸಂಜೆ ಮತ್ತೆ ಅರ್ಚಕರಲ್ಲಿ ಕೇಳಿದಾಗ "ಈಗ ಮಗು ಪರವಾಗಿಲ್ಲ" ಎಂಬ ಉತ್ತರ.

ಆದರೆ ಅರ್ಚಕರ ಆತ್ಮವಿಶ್ವಾಸವೋ ಗೊತ್ತಿಲ್ಲ.. ಬೇರೆ ವೈದ್ಯರಲ್ಲಿಗೂ ಹೋಗಿಲ್ಲ..... ಬಂದ ವೈದ್ಯರಲ್ಲಿಂದ ಔಷಧಿಯನ್ನೂ ತಂದಿಲ್ಲ..... ಅದು.. ಇದು ಅಂತ ಔಷಧಿಯನ್ನು ಮಾಡಿದರು....

ಆದಾಗಿ ಸರಿಯಾಗಿ 3 ದಿನ ಕಳೆದು 4ನೇ ದಿನದ ಬೆಳಗ್ಗೆ ಮಗು ಹುಷಾರಾಗಿತ್ತು.ಅರ್ಚಕರು ಪೂಜೆ ಮುಗಿಸಿ ಮನೆಗೆ ಬಂದಿದ್ದರು ಇನ್ನೇನು ಊಟ ಮಾಡಬೇಕು ಅಂತ ಕುಳಿತಿರುವಾಗ ಮಗುವನ್ನು ಕೊಂಛ ನೋಡಿ ಬರುವುದಾಗಿ ಹೋದಾಗ ಅನುಮಾನ ಬಂದು ವೈದ್ಯರಿಗೆ ರಿಂಗಿಸಲಾಯಿತು.ವೈದ್ಯರು ಬಂದು ನೋಡುವಾಗಲೆ ಅನುಮಾನ ಹುತ್ತ ಕಾಡಿತ್ತು.... ಮಗುವನ್ನು ನೋಡಿದ ವೈದ್ಯರು ವಿಷಾದದ ಭಾವದಿಂದ ಹೇಳಿದರು No more.....

ಶಾಕ್.... ಅಯ್ಯೋ....... ಮತ್ತೆ ಆಕ್ರಂದನ......

ಊರೆಲ್ಲಾ ಛೆ.. ಹೀಗಾಗಬಾರದಾಗಿತ್ತು ಎಂಬ ವಿಷಾದದ ಮಾತು.

ಆದರೆ ಏನು ಪ್ರಯೋಜನ...!?. ತಪ್ಪು ಯಾರದ್ದು?.ಏನು ಮಾಡಬೇಕಿತ್ತು?. ಏನಾಯಿತು? .ಮತ್ತೆ ವಿಶ್ಲೇಷಣೆ ಶುರುವಾಯಿತು. ಅನಗತ್ಯ.....!?

ಈ ಘಟನೆ ನನ್ನನ್ನು ಅನೇಕ ದಿನಗಳ ಕಾಲ ಕಾಡಿತ್ತು.... ಅದನ್ನು ಇಂದಾದರೂ ಹೊರಹಾಕಿಬಿಡೋಣ ಅಂತ ಅನ್ನಿಸಿತು.ಇನ್ನು ಆ ಭಾವನೆಗಳೂ No more....

08 ಜೂನ್ 2008

ಗೃಹಸಚಿವರು ಬಂದರು.....
ಗೃಹ ಸಚಿವ ವಿ ಎಸ್ ಆಚಾರ್ಯ...

ಕುಕೆ ಸುಬ್ರಹ್ಮಣ್ಯಕ್ಕೆ ಭಾನುವಾರದಂದು ಅಂದರೆ ಖಾತೆ ಹಂಚಿಕೆಯಾಗಿ ತಮಗೆ ಜವಾಬ್ದಾರಿ ಸಿಕ್ಕಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು.

"ಎಲ್ಲಿ ಪ್ರಾಮಾಣಿಕತೆ ,ಸಂಕಲ್ಪ ಶುದ್ಧತೆ ಇರುತ್ತದೋ ಅಲ್ಲಿ ಪರಮಾತ್ಮನ ಅನುಗ್ರಹ ಇರುತ್ತದೆ" ಎಂದು ಆಚಾರ್ಯರ ಮನದಾಳದ ಮಾತನ್ನು ಬಿಚ್ಚಿಟ್ಟ ರೀತಿ.ಹಾಗಾಗಿ ರಾಜ್ಯದ ಬಿ ಜೆ ಪಿ ಸರಕಾರದಲ್ಲಿ ನೀವು ಇದೆರಡನ್ನೂ ಕಾಣ ಬಹುದು ಎನ್ನುತ್ತಾ ಪೀಠಿಕೆಯಿಡುವ ಆಚಾರ್ಯ ಮಾತನಾಡಿದ್ದು ಇಷ್ಟು......

ಪಕ್ಷದ ತೀರ್ಮಾನದಂತೆ ಒದಗಿದ ಗೃಹ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುವೆ.ಅಭಿವೃದ್ಧಿಯೇ ನಮ್ಮ ಪ್ರಣಾಳಿಕೆ,ಮುಂದಿನ 5 ವರ್ಷಗಳ ಕಾಲ ಸಮೃದ್ಧಿ - ಸುಖಿ ರಾಜ್ಯ ನಿರ್ಮಾಣ ಮಾಡುವುದರೊಂದಿಗೆ ಎದ್ದು ಕಾಣುವ ಸಕಾರಾತ್ಮಕವಾದ ಬದಲಾವಣೆಯನ್ನು ತರುವುದೇ ನಮ್ಮ ಸಂಕಲ್ಪ ಆ ನಿಟ್ಟಿನಲ್ಲಿ ಸುಗಮ ಆಡಳಿತಕ್ಕೆ ಅಗತ್ಯವಾದ ಕಾನೂನು ಸುವ್ಯವಸ್ಥೆ,ಸೌಹಾರ್ದತೆಯನ್ನು ಕಾಪಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿ ಆಧುನೀಕರಣಗೊಳಿಸಲಾಗುವುದು.ಭಯೋತ್ಪಾದನೆ ,ನಕ್ಸಲ್ ಮತ್ತು ಸಮಾಜದಲ್ಲಿ ಶಾಂತಿ ಕದಡುವವರನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗುವುದು ಎನ್ನುವ ಮೂಲಕ ಪರೋಕ್ಷವಾಗಿ ಕೆಲ ಸಂಘಟನೆಗಳಿಗೆ ಎಚ್ಚರಿಕೆಯನ್ನು ನೀಡಿದರು.ಬಿ ಜೆ ಪಿಯು ಯಾವುದೇ ಕಾರಣಕ್ಕೂ ಸೇಡಿನ ರಾಜಕಾರಣ ಮಾಡುವುದಿಲ್ಲ ಜನ ಸೇವೆ ಮತ್ತು ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ ಎಂದರು. ಮಾಧ್ಯಮ ಮತ್ತು ಜನರ ಮುಂದೆ ಇಡುವ ಎಂಜೆಂಡಾದ ಹೊರತಾಗಿ ಗುಪ್ತವಾದ ಯಾವುದೇ ಎಜೆಂಡಾಗಳು ನಮ್ಮ ಮುಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವಸ್ಥಾನಕ್ಕೆ ಬೇಟಿ ನೀಡುವುದರ ಜೊತೆಗೆ ಸಂಪುಟ ನರಸಿಂಹ ಸ್ವಾಮಿ ಮಠಕ್ಕೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
03 ಜೂನ್ 2008

ಶಾಲೆ ಹೊರೆಟೆವು ನಾವು...ಶಾಲೆಗಳೆಲ್ಲಾ ಮತ್ತೆ ಶುರುವಾಗಿದೆ.

ಅತ್ಯಂತ ಉತ್ಸಾಹದಿಂದ ಮಕ್ಕಳೆಲ್ಲಾ ಶಾಲೆಗೆ ಹೊರಟಿದ್ದಾರೆ.ಶಾಲಾ ಬಸ್ಸುಗಳಿಗೆ ಇನ್ನು ಬಿಡುವಿಲ್ಲದ ಕೆಲಸ ಆರಂಭವಾಗಿದೆ.ಅಧ್ಯಾಪಕರಿಗೂ ಹೊಸ ವಿಷಯಗಳತ್ತ ನೋಡುವ ಸಮಯ ಬಂದಿದೆ.

ಸರಿ... ,ಇದೆಲ್ಲಾ ನಗರ ಪ್ರದೇಶಗಳಲ್ಲಿ ಅಂದಿನಿಂದಲೂ ನಡೆದುಕೊಂಡು ಬರುತ್ತಿತ್ತು,ಗ್ರಾಮೀಣ ಭಾಗಗಳಲ್ಲಿ ಶಾಲಾ ವಾಹನ,ಶಾಲಾ ಆರಂಭಕ್ಕೆ ಮುನ್ನ ಅತ್ಯಂತ ಭರದ ಸಿದ್ಧತೆ ಇದ್ದಿರಲೇ ಇಲ್ಲ.ಆದರೆ ಇಂದು ನೋಡಿದರೆ ನಗರಕ್ಕಿಂತ ಮುನ್ನವೇ ಗ್ರಾಮೀಣ ಭಾಗಗಳಲ್ಲಿ ಶಾಲೆಯ ತಯಾರಿ ನಡೆಯುತ್ತದೆ.ಯಾವ ಶಾಲೆ,ಯಾವ ಶಾಲಾ ಬಸ್ಸು ನಮ್ಮ ಮನೆಯ ಪಕ್ಕ ಬರುತ್ತದೆ,ಇಂಗ್ಲಿಷ್ ಎಲ್ಲಿ ಚೆನ್ನಾಗಿ ಕಲಿಸುತ್ತಾರೆ, ಯಾವ ಬಟ್ಟೆ....... ಹೀಗೆ ಹತ್ತಾರು ವಿಷಯಗಳು ಚರ್ಚೆಯಾಗುತ್ತದೆ.ನಗರದ ಭಾಗಗಳಲ್ಲಿ ಇಂತಹ ಪ್ರಸಂಗ ನಡೆಯುವಾಗ ನಗಾಡುತ್ತಿದ್ದ ಹಳ್ಳಿಯಲ್ಲೇ ಈಗ ಅಂತಹದೊಂದು ಬೆಳವಣಿಗೆ ಶುರುವಾಗಿ ಬಿಟ್ಟಿದೆ..
ಕಾಲ ಬದಲಾದಾಗ ಕೋಲವೂ ಬದಲಾಗಬೇಕು ಅಂತಾರಲ್ಲಾ ಅದಕ್ಕಾಗಿ ಈ ಬದಲಾವಣೆಯೇ?. ಅಥವಾ ನಿಜವಾದ ಜೀವನ ಶೈಲಿ ಬದಲಾವಣೆಗಾಗಿಯೋ ಎಂಬುದು ಅರ್ಥವಾಗದ ಸಂಗತಿಯಾಗಿದೆ.

ಒಂದೆರಡು ದಶಕಗಳ ಹಿಂದೆ ನೋಡಿದರೆ... ಶಾಲೆ ಆರಂಭವೆಂದರೆ ಮಳೆಗಾಲದ ಮುನ್ನುಡಿ.ಮೊದಲ ದಿನವೇ ಶಾಲೆಗೆ ಹೋಗುವಾಗ ಮಳೆ. ಶಾಲಾ ಬಸ್ಸುಗಳಿಲ್ಲ.ಬೆಳಗ್ಗೆ 7 ರಿಂದ 8 ಗಂಟೆಯ ಹೊತ್ತಿಗೆ ಶಾಲೆಗೆ ಹೊರಡಲು ಅಣಿಯಾಗಬೇಕು ನಂತರ ಕೊಡೆ ಹಿಡಿದು ಪ್ಲಾಸ್ಟಿಕ್ ಚೀಲವನ್ನು [ಆ ಚೀಲ ಈಗ ಮಾರುಕಟ್ಟೆಯಲ್ಲೇ ಇಲ್ಲ] ಹೆಗಲಿಗೆ ಹಾಕಿ ಕೈಯಲ್ಲಿ ಬುತ್ತಿ ಹಿಡಿದು ನಾಲ್ಕಾರು ಮಂದಿ ಊರಿನ ಮಿತ್ರರೊಂದಿಗೆ ಒಂದು ಮೂರ್ನಾಕು ಕಿ ಮೀ ನಡೆದುಕೊಂಡು 9 ರಿಂದ 9.30 ರಳೊಳಗಾಗಿ ಸೇರುವ ಆ ಖುಷಿ ನೀಡುತ್ತಿತ್ತು. ಶಾಲೆಗೆ ಬಿಡಲು ಜೊತೆಯಲ್ಲಿ ಅಮ್ಮ ಅಥವಾ ಇನ್ನಾರು ಕೂಡಾ ಬರುತ್ತಿರಲಿಲ್ಲ ಮನೆಯಿಂದಲೆ ಒಂಟಿ ಪ್ರಯಾಣ. ರಸ್ತೆಯಲ್ಲಿ ಮಿತ್ರರೊಂದಿಗೆ ಮತ್ತೆ ನಡಿಗೆ.ಸಂಜೆ ಬಂದು ಮನೆಯಲ್ಲಿ ಆ ದಿನದ ವರದಿಯನ್ನು ಅಮ್ಮನಲ್ಲಿ ಒಪ್ಪಿಸುವುದು, ಟಿ ವಿ ಸೇರಿದಂತೆ ಇನ್ನಾವುದೇ ಆಟಿಕೆಗಳಿಲ್ಲದ ಕಾರಣ ಮಣ್ಣೀನಲ್ಲೇ ಆಟ. ಸೂರ್ಯ ಮುಳುಗಿದ ನಂತರ ಸ್ನಾನಾದಿಗಳನ್ನು ಮುಗಿಸಿ ಅಮ್ಮನೊಂದಿಗೆ ಪಾಠ, ವಾರಗಳ ಹೆಸರನ್ನು ಹೇಳುವುದು ,ಲೆಕ್ಕ ಹೇಳುವುದು, ಹಿಂದು ವಾರ ,ನಕ್ಷತ್ರಗಳನ್ನು ಹೇಳುವುದು...... ಹೀಗೇ ತರಗತಿಯಲ್ಲೂ ಮೊದಲಿಗನಾಗಿರುವುದು ನಡೆದುಕೊಂಡು ಬರುತ್ತಿದ್ದ ಸಂಗತಿ.ಬಾಲ್ಯ ಕಳೆದುಹೋಗಿ ಈಗ ನೆನಪಾಗಿ ಉಳಿದಿದೆ.

ಆದರೆ ಕಾಲ ನೋಡಿ ಹೇಗೆ ಬದಲಾಯಿತು...!

ಒಮ್ಮೊಮ್ಮೆ ದಿಗಿಲು ಹುಟ್ಟಿಸುತ್ತದೆ...!. ಇಂದು ಮನೆಯಿಂದ ಅಂಗಳಕ್ಕೆ ಇಳಿದೊಡನೆ ವಾಹನದಲ್ಲಿ ಸಾಗಿ ರಾಜ ರಸ್ತೆಯಿಂದ ಶಾಲಾ ಬಸ್ಸಿಗೆ ಮನೆಯಿಂದ ಬಿಟ್ಟು ಆ ಬಸ್ಸಿನಲ್ಲಿ ನಿಗದಿತವಾದ ಒಂದು ಆಸನದಲ್ಲಿ ಕೂತು ಶಾಲೆಯ ಬಾಗಿಲಿನಲ್ಲಿ ಇಳಿದು ಸಂಜೆ ಯಥಾಪ್ರಕಾರ ಹಾಗೆಯೇ ಮನೆಗೆ...!. ಅಲ್ಲಿ ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ. ಶಾಲಾ ಬಸ್ಸಿನಲ್ಲೊಮ್ಮೆ ಸುಮ್ಮನೆ ನೀವು ಹೋಗಿ ನೋಡಿ ಮಕ್ಕಳೆಲ್ಲಾ ಅವರದೇ ಲೋಕದಲ್ಲಿರುತ್ತಾರೆ. ಪಕ್ಕದ ಮಿತ್ರನೊಂದಿಗೆ ಕೆಲಕಾಲ ಮಾತನಾಡಿ ಮತ್ತೆ ಮೌನ..!.ಹಾಗೆಂದು ಅಂಕ ಉತ್ತಮವಾಗಿರುತ್ತದೆ.ಎಲ್ಲರಿಗೂ 70 ರಿಂದ 99 ಶೇಕಡಾ.

ನಗರ ಪ್ರದೇಶಗಳಲ್ಲಿ ಅಂದಿನಿಂದಲೇ ಈ ಪದ್ಧತಿಯಿತ್ತು ನಿಜ.ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ವಿಪರೀತ ಮಟ್ಟಕ್ಕೆ ಹೋಗಿದೆ.ಹೀಗಾಗಿ ನಾವು ಗಮನಿಸಬಹುದು. ಇಂದಿನ ಗ್ರಾಮೀಣ ಮಕ್ಕಳು ಎಲ್ಲೋ ಒಂದು ಕಡೆ ಸಾಮೂಹಿಕವಾದ ಚಿಂತನೆಯನ್ನು ಮರೆತು ಬಿಡುತ್ತಿದ್ದಾರೆ.ನಾನು ನನ್ನದು ಬಿಟ್ಟರೆ ಬೇರೆ ಯಾವುದು ಕೂಡಾ ಅವರ ಅರಿವಿಗೆ ಬರುವುದೇ ಇಲ್ಲ.ನಡೆದು ಕೊಂಡು ನಾಲ್ಕಾರು ಕಿ ಮೀ ಹೋಗುವ ವೇಳೆ ಹತ್ತಾರು ಮಂದಿ ಮಿತ್ರರು ದಾರಿ ಮಧ್ಯೆ ಸಿಗುತ್ತಾರೆ.ಅವರೊಂದಿಗೆ ಹರಟುತ್ತಾ ಸಾಗಿ ಅವರ ಸುಖ-ದು:ಖಗಳು ಅರಿಗಾಗಿ ಮನಸ್ಸಿನ ಒಂದು ಮೂಲೆಯಲ್ಲಿ ಕನಿಕರದ ಭಾವ ಜಾಗೃತವಾಗುತ್ತಿತ್ತು ಮಾತ್ರವಲ್ಲ ಹತ್ತು ಹಲವು ವಿಚಾರಗಳು ಅವರದೇ ಲೋಕದಲ್ಲಿ ಚರ್ಚೆಯಾಗುತ್ತಿತ್ತು ಅದು ಸೃಜನಾತ್ಮಕ ರೂಪ ಪಡೆದು ಹೊಸದೊಂದು ಚಿಂತನೆಗೆ ಅವಕಾಶ ಮಾಡಿಕೊಡುತ್ತಿತ್ತು.ಜಾತಿಯ ಬೇದವಿಲ್ಲ ,ಕೂಡಿ ಬಾಳುವ ಚಿಂತನೆಯಿತ್ತು,ಹಂಚಿ ತಿನ್ನುವ ಗುಣ ಬೆಳೆಯುತ್ತಿತ್ತು. ಈಗ ಇಲ್ಲ ಅಂತಲ್ಲ.ಅಂದಿನ ಮಟ್ಟಕೆ ಹೋಲಿಸಿದರೆ ಇದೆಲ್ಲವೂ ಅತ್ಯಂತ ನಗಣ್ಯ..

ಕಾಲ ಬದಲಾಗಿದೆ.ಕೆಲವೊಂದು ಮಾರ್ಪಾಡುಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ. ಆದರೆ ಇದೆಲ್ಲದರ ನಡುವೆ ಎಳೆಯರಿಗೆ ಸಾಮಾಜಿಕವಾದ ಒಂದಷ್ಟು ಚಿಂತನೆಯ ಅರಿವು ಬೆಳೆದರೆ ಚೆನ್ನಾಗಿರುತ್ತದಲ್ವಾ.ಇಲ್ಲವಾದರೆ ಅವರು ಅವರದೇ ಲೋಕದಲ್ಲಿರುತ್ತಾರೆ ಎಲ್ಲರಿಂದ ದೂರವಾಗಿರುತ್ತಾರೆ ಅಲ್ಲವೇ.

ಇದೆಲ್ಲಾ ನೆನಪಾದದ್ದು ಶಾಲಾ ಬಸ್ಸೊಂದನ್ನು ನೋಡಿ. ಹಾಗೆ ಸುಮ್ಮನೆ ನಮ್ಮ ಬಾಲ್ಯ ನೆನಪಾಯಿತು.ತುಲನೆ ಮಾಡಿದೆ.ಇಲ್ಲಿ ದಾಖಲಿಸಿದೆ.ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲವಲ್ಲ........

02 ಜೂನ್ 2008

ಶಿರಾಡಿ ರೆಡಿ.....!ಅಬ್ಬಾ ಇನ್ನು ಶಿರಾಡಿ ತಲೆ ಬಿಸಿ ಇಲ್ಲ...!.

ಅಂತ ಬಸ್ಸು ಚಾಲಕರೊಬ್ಬರು ಹೇಳುತ್ತಿದ್ದುದು ನೋಡಿದರೆ ಅವರಿಗೆ ಸ್ವರ್ಗವೇ ಸಿಕ್ಕಂತಾಗಿತ್ತು.ಅಲ್ಲ ಅದಲ್ಲ ,ಮೊನ್ನೆಯಿಂದಲೇ ಅದೇ ದಾರಿಯಲ್ಲಿ ಬರುತಿದ್ರಲ್ಲಾ, ಅಂತ ಕೇಳಿದ್ರೆ ಇನ್ನು ಅಧಿಕೃತ ಅಲ್ವಾ ಅಂತಾರೆ.....

ಹೌದು ಶಿರಾಡಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ... ಸೋಮವಾರದಿಂದ ಶಿರಾಡಿ ಘಾಟ್ ರಸ್ತೆಯನ್ನು ಅಧಿಕೃತವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.ಕೇಂದ್ರ ಭೂಸಾರಿಗೆ ಮಂತ್ರಿ ಎಚ್.ಮುನಿಯಪ್ಪ ಈ ವಿಷಯವನ್ನು ತಿಳಿಸಿದರು.

ಅವರೇ ಸ್ವತ: ಕಾಮಗಾರಿಯನ್ನು ಪರಿಶೀಲಿಸಿದರಂತೆ ಹಾಗೆಂದು ಸುದ್ದಿಗಾರರೆದುರು ಹೇಳಿದರು.ಹಾಗೆ ಪರಿಶೀಲನೆಗೆಂದು ಬಂದವರು [ ಕುಟುಂಬ ಸಮೇತರಾಗಿ ] ಧರ್ಮಸ್ಥಳ , ಸುಬ್ರಹ್ಮಣ್ಯ , ಅಳಿಕೆ ಶಾಲೆಗಳಿಗೆ ಹೋದರು.ನಂತರ ಇನ್ನೊಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳುವರಂತೆ.

ಹಾಗೆ ಮಾತನಾಡಿದ ಅವರು, ಶಿರಾಡಿಯಲ್ಲಿ ಇನ್ನು ಚರಂಡಿ ವ್ಯವಸ್ಥೆ , ಇಂಟರ್ ಲಾಕ್ ಅಳವಡಿಕೆ ವ್ಯವಸ್ಥೆಯಾಗಬೇಕಿದೆಯಷ್ಟೆ, ಅದನ್ನು 15 ದಿನಗಳೊಳಗಾಗಿ ಮಾಡಿಮುಗಿಸುವಂತೆ ಸೂಚಿಸಲಾಗಿದೆ ಅಂತ ಹೇಳಿದರು.

ನಂತರ ಎಂದಿನಂತೆ ಈ ಕಾಮಗಾರಿಗೆ ಒಟ್ಟು 33.5 ಕೋಟಿ ಬಿಡುಗಡೆಯಾಗಿದೆ,ನಂತರ ಗುಂಡ್ಯ - ಬಿ ಸಿ ರೋಡ್ ಅಭಿವೃಧಿಗೆ 25.5 ಕೋಟಿ ರೂ ಬಿಡುಗಡೆಯಾಗಿದೆ ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಆರಂಬವಾಗುತ್ತದೆ ಅಂದಾಗ " ಇನ್ನು ಮಳೆಗಾಲವಲ್ಲ ಸಾರ್" ಎಂಬ ಪ್ರಶ್ನೆಗೆ ಹೌದು ... ಮಳೆಗಾಲದ ಮುನ್ನ ಮುಗಿಸಬೆಕು ಅಂದಿದ್ದೆ ಎಂದು ಸಚಿವರು ಹೇಳಿ ಮಾತು ಬದಲಿಸಿ ಚತುಷ್ಪಥ ರಸ್ತೆಯತ್ತ ಹೊರಟರು ಕರಾವಳಿ ತೀರದ ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ತಿ ಚತುಷ್ಪಥ ರಸ್ತೆಯನ್ನಾಗಿಸಲಾಗುವುದು ಎಂದರು.ಈಗಾಗಲೆ ಒಟ್ಟಾಗಿ 650 ಕಿಮೀ ರಸ್ತೆಯನ್ನು ಚತುಷ್ಪಥಕ್ಕೆ ಚಾಲನೆ ನೀದಲಾಗಿದೆ ಮುಂದೆ 650 ಕಿ ಮೀ ಗೆ ಸರ್ವೆ ಆಗಿದೆ ಅಂತ ಹೇಳಿದರು.

ರಾಜಕೀಯದ ಬಗ್ಗೆ ಮಾತನಾಡಿದಾಗ ಕರ್ನಾಟಕದ ಸರಕಾರಕ್ಕೆ ಸ್ನಾವು ಅಭಿವೃದ್ಧಿಯ ದೃಷ್ಠಿಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಒಟ್ಟಿನಲ್ಲಿ ಅನೇಕ ದಿನಗಳ ಬಳಿಕ ಶಿರಾಡಿ ರೆಡಿಯಾಯಿತು.

ಗದ್ದಲಗಳು ಇಲ್ಲದೆ ನೆಮ್ಮದಿಯಾಗಿದ್ದ ಶಿರಾಡಿಯಲ್ಲಿ ಇಂದಿನಿಂದ ಅಧಿಕೃತವಾಗಿ ಹಕ್ಕಿಗಳ ಕಲರವದ ನಡುವೆ ವಾಹನಗಳ ಸದ್ದು ಮೊಳಗಲಿದೆ. ಸೈಲೆಂಟ್ ವ್ಯಾಲಿಯಂತಿದ್ದ ಶಿರಾಡಿಯಲ್ಲಿನ್ನು ಹಾಗಿರುವುದಿಲ್ಲ ಚಿರಿ ಚಿರಿ ಆರಂಭವಾಗುತ್ತದೆ, ಡಾಬಾಗಳಿಗೆ , ಗೂಡಂಗಡಿಗಳಿಗೆ , ಹೂಮಾರುವ ಮಂದಿಗೆ ಮತ್ತೆ ವ್ಯಾಪಾರ ಆರಂಭವಾಗುವ ಸಂತಸದ ಕ್ಷಣ ಶುರುವಾಗಿದೆ. ಮಳೆಗಾಲದ ತಯಾರಿಯೂ ನಡೆಯುತ್ತಿದೆ.

ಇನ್ನು ಇದೇ ರಸ್ತೆ ಅದಿರು ಲಾರಿಗಳ "ಹೆದ್ದಾರಿ"ಯಾಗಬಹುದೇ....??