03 ಜುಲೈ 2018

ಘಟನೆ ನಾಲ್ಕು ........ ಬದುಕಿಗೆ ನೂರು ಪಾಠ.....!!
ಘಟನೆ 1:
ಅವರಿಗೆ ಅಂದು ರಾಜ್ಯದಲ್ಲೇ ಅತ್ಯುನ್ನುತ ಹುದ್ದೆ ದಕ್ಕಿತ್ತು. ಇಡೀ ರಾಜ್ಯದಲ್ಲಿ ಅಂತಹ ಅವಕಾಶ ಸಿಕ್ಕಿದ್ದು ಕೇವಲ ಇಬ್ಬರಿಗೆ. ಅದರಲ್ಲಿ ಇವರೂ ಒಬ್ಬರು.  ಅದಾಗಿ ಸರಿಯಾಗಿ 4 ವರ್ಷ ಕಳೆದಿತ್ತು. ಅವರದು ಕೃಷಿ ಕುಟುಂಬ. ಅವರ ತಂದೆಗೆ ಅನಾರೋಗ್ಯ ಕಾಡಿತು. ಕೃಷಿ ನೋಡಲು, ಕೆಲಸ ಮಾಡಿಸಲು ಜನರಲಿಲ್ಲ.  ಇಬ್ಬರು ಸಹೋದರರಲ್ಲಿ ಯಾರೂ ಮನೆ ನಡೆಸಲು ಒಪ್ಪಲಿಲ್ಲ. ತಂದೆಯ ಬಳಿಗೆ ಬರಲು ಸಿದ್ಧರಿರಲಿಲ್ಲ. ಒಂದು ವಾರ ಕಾದರು. ಆ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡಿದರು. ಕೃಷಿ ನಡೆಸಿದರು. ತಂದೆ-ತಾಯಿಯ ಅಂತ್ಯ ಕಾಲದವರೆಗೂ ಚೆನ್ನಾಗಿ ನೋಡಿಕೊಂಡರು. ಸಮೃದ್ಧ ಕೃಷಿ ನಡೆಸಿದರು. ಇಂದಿಗೂ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಸದ್ಯ ಅದೇ ಸ್ಥಿತಿ ಇದೆ.
ಈಗ ಈ ತಂದೆ ವೃದ್ಧರಾಗುತ್ತಿದ್ದಾರೆ. ಮಕ್ಕಳು ಸದ್ಯ ನಗರದಲ್ಲಿದ್ದಾರೆ. ಈ ಮಕ್ಕಳಿಗೆ ತಮ್ಮ ತಂದೆಯ ಕತೆ ತಿಳಿದಿದೆ. ಸಾಧನೆ ತಿಳಿಸಿದೆ. ಈಗ ಆದರ್ಶವಾಗಬೇಕಾದ್ದು ಯಾವುದು? ಎಂಬ ಬಹುದೊಡ್ಡ ಪ್ರಶ್ನೆ ಈಗ ಮುಂದಿದೆ....!. ಸಾಮಾಜಿಕ ಪರಿಸ್ಥಿತಿ ಈಗ ಕಣ್ಣಮುಂದೆ ಇದೆ.

ಘಟನೆ 2:
ಗ್ರಾಮೀಣ ಭಾಗವಾದರೂ ಎಲ್ಲಾ ಸೌಲಭ್ಯ ಹೊಂದಿದ ಕೃಷಿ ಭೂಮಿ ಇದೆ. ಮನೆಯಲ್ಲೇ ಎಲ್ಲಾ ವ್ಯವಸ್ಥೆ ಮಾಡಿಸಿದ್ದಾರೆ. ಮಕ್ಕಳಿಗೆ ಯಾವುದೂ ಕಡಿಮೆಯಾಗಬಾರದು ಎಂದು ಸಣ್ಣವರಿಂದಲೇ ಬೆಳೆಸಿದ್ದಾರೆ. ಮಕ್ಕಳು ಕಲಿತು ದೊಡ್ಡವರಾಗಿ ಹೆಸರಿನಿಂದ ಮುಂದೆ ಡಿಗ್ರಿ ಸೇರಿಸಿಕೊಂಡು ನಗರ ಸೇರಿದರು. ದೂರವಾದರು.
ಈಗ ತಂದೆ ಹಾರ್ಟ್ ಪೇಶೇಂಟ್ , ಶುಗರ್ ಇದೆ. ಸರಿಯಾಗಿ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ತಾಯಿಗೂ ಅನಾರೋಗ್ಯ ಇದೆ. ಇತ್ತೀಚೆಗೆ ತಾಯಿಗೆ ತನ್ನ ತಾಯಿಯ ವೈಕುಂಠ ಸಮಾರಾಧನೆಗೆ ಹೋಗಬೇಕಿತ್ತು. ಹಾಗೋ ಹೀಗೋ ಪೇಟೆಗೆ ಬಂದರು. ಯಾರದ್ದೋ ಕಾರಲ್ಲಿ ಏರಿದರು. ಮಕ್ಕಳ ಬಗ್ಗೆ ಹೇಳುತ್ತಾ.... ಅವನು ದೊಡ್ಡ ಕೆಲಸದಲ್ಲಿ ಇದ್ದಾನೆ ಎಂದೂ ಹೇಳುತ್ತಿದ್ದರು. ಮನೆಯ ಸುದ್ದಿ ಹೇಳುತ್ತಾ, ಸಂಜೆಯವರೆಗೆ "ಅವರನ್ನು" ನೋಡಲು ಪಕ್ಕದ ಮನೆಗೆ ಹೇಳಿದ್ದೇನೆ ಎಂದೂ ಹೇಳಿಕೊಂಡರು. ಆಗಾಗ ಏನೋ  ತನ್ನ ಸಂಕಟ ಹೇಳಿಕೊಂಡರು, ಮಕ್ಕಳಿದ್ದರೂ ಯಾರದೋ ಬೇರೆಯವರ  ಜೊತೆ....... !

ಘಟನೆ 3:
ಅದು ಕೃಷಿ ಕುಟುಂಬ. ಆತ ಉನ್ನತ ವ್ಯಾಸಾಂಗ ಮಾಡಿ ತಂದೆಯ ಜೊತೆಗೆ ಕೃಷಿಗೆ ಇಳಿದ. ಸಾಕಷ್ಟು ಭೂಮಿ, ಕೃಷಿಯೂ ಇತ್ತು. ಕೃಷಿಯಲ್ಲಿ ಆಧುನಿಕತೆಗೆ ಒತ್ತು ನೀಡಿದ. ಅದೃಷ್ಠವಶಾತ್  ವಿದ್ಯಾವಂತ ಹುಡುಗಿಯೊಂದಿಗೆ ಮದುವೆಯೂ ಆಯ್ತು. ಇಬ್ಬರಿಗೂ ಒಪ್ಪಿಗೆ ಇತ್ತು. ಎರಡೂ ಮನೆಯವರೂ ಈ ಬಗ್ಗೆ ಸಾಕಷ್ಟು ಮಾತುಕತೆ ಮಾಡಿಯೂ ಆಗಿತ್ತು. ಸ್ವತ: ಹುಡುಗಿಯ ತಂದೆ, ತಾಯಿ ಹಾಗೂ ಹುಡುಗಿಯ ಜೊತೆ ಮಾತುಕತೆ ನಡೆಸಿ,  ಕೃಷಿಯೇ ನನ್ನ ಬದುಕು ಎಂದೂ ಆ ಹುಡುಗ ಹೇಳಿದ. ಎಲ್ಲವೂ ಓಕೆ ಆದ ಬಳಿಕ ಮದುವೆಯೂ ಆಗಿತ್ತು.
ಈಗ ಎಲ್ಲಾ ಕಾರ್ಯಕ್ರಮಕ್ಕೆ ಹೋದಾಗ, ಜನರೆಲ್ಲಾ ಕೇಳುತ್ತಿದ್ದ ಪ್ರಶ್ನೆ..." ಇಷ್ಟು ಓದಿ ನೀನ್ಯಾಕೆ ಹಳ್ಳಿಗೆ ಬಂದೆ..." , " ಹಳ್ಳಿಯಾ..." , "ಕೃಷಿ ಕಷ್ಟ ಆಗಲ್ವಾ..." , " ಇನ್ನು ಯಾರಿಗೆ ಈ ಕೃಷಿ...".....!.  ಹೀಗೇ ಹತ್ತಾರು ಪ್ರಶ್ನೆಯ ನಂತರವೂ ಆ ಹುಡುಗಿ ಧೈರ್ಯಗೆಡಲಿಲ್ಲ. ತಾನು ನಂಬಿ ಬಂದ ಕೃಷಿಯನ್ನೇ , ಕೃಷಿಕನನ್ನೇ ನೆಚ್ಚಿಕೊಂಡಳು.

ಘಟನೆ 4:
ಆ ಕುಟುಂಬದ ಏಕೈಕ ಗಂಡು ಆತ. ಸಾಕಷ್ಟು ಓದಿದ್ದಾನೆ. ಸದ್ಯ ನಗರದಲ್ಲಿ ಕೈತುಂಬಾ ಸಂಬಳವೂ ಪಡೆಯುತ್ತಾನೆ. ಇತ್ತ ಹತ್ತಾರು ಎಕರೆ ಕೃಷಿ ಭೂಮಿ ಇದೆ. ಮನೆಯಲ್ಲಿ ಎಲ್ಲಾ ಸೌಲಭ್ಯ ಇದೆ. ಎಲ್ಲಾ ನೆಟ್ವರ್ಕ್ ಲಭ್ಯವಿದೆ. ಇಂಟರ್ನೆಟ್ ಸಹಿತ ಕೇಬಲ್ ಟಿವಿ ವ್ಯವಸ್ಥೆಯೂ ಇದೆ. ಕೃಷಿ ವರಮಾನವು ಆತ ಪಡೆಯುವ ಸಂಬಳದಷ್ಟೇ ಇದೆ. ಈಚೆಗೆ ಆ ಹುಡುಗನಿಗೆ ಮದುವೆ ಮಾಡಿಸುವ ಪ್ರಯತ್ನಕ್ಕೆ ಮನೆಯವರು ಮುಂದಾದಾಗ ಬಂದ ಪ್ರಶ್ನೆ " ಆತ ಕೆಲ ವರ್ಷದ ನಂತರ ಕೃಷಿಗೆ ಬರುತ್ತಾನಾ " . ಸಹಜವಾಗಿಯೇ ಬಂದ ಉತ್ತರ "ಹೌದು, ಆತ ಒಬ್ಬನೇ ಇರುವುದು , ಇಲ್ಲೂ ಅಷ್ಟೇ ಆದಾಯ ಇದೆ.". ಅಲ್ಲಿಗೇ ಆ ಮದುವೆ ಪ್ರಸ್ತಾಪ ಮುರಿದು ಬಿತ್ತು.


                                                  ********

ಇದಿಷ್ಟು ಇಂದಿನ ವಾಸ್ತವ ಸಂಗತಿ.
ಈಗ ಇರುವ ಪ್ರಶ್ನೆ, ಪಾಠ ಮಾಡಬೇಕಿರುವುದು  ಯಾರಿಗೆ ?. ಎರಡು ಸಂಗತಿಗಳು ಇಂದು ಪ್ರಮುಖವಾಗಿ ಚರ್ಚೆಯಾಗಬೇಕು. ಬದುಕಿಗೆ ಶಿಕ್ಷಣ ನೀಡುವ ಒಂದು ಸರಿಯಾದ ಪಾಠ ಬೇಕು. ಅದು ಯಾರಿಗೆ ? ಈ ಸಮಾಜಕ್ಕಾ ? ಚಿಕ್ಕ ಮಕ್ಕಳಿಗಾ ?.
ಕೃಷಿ ಎಂದಾಗ, ಹಳ್ಳಿ ಎಂದಾಗ, ಗ್ರಾಮೀಣ ಭಾರತ ಎಂದಾಗ ಮಹಿಳೆಯರಲ್ಲಿ, ಹೆತ್ತವರಲ್ಲಿ ಇರುವ ಮನಸ್ಥಿತಿ ಏಕೆ ಅಷ್ಟೊಂದು ಕೀಳಾಗಿದೆ, ಏಕೆ ಬದಲಾಗಲಿಲ್ಲ ?  ಎಲ್ಲವೂ ಈಗ ಯಾಂತ್ರೀಕೃತ ಆಗಿರುವಾಗ ಕೆಲಸವೂ ಕಷ್ಟವೇನಿಲ್ಲ. ನನ್ನ ಮಕ್ಕಳು ಚೆನ್ನಾಗಿರಬೇಕು ಎಂಬ ಕಲ್ಪನೆ, ಯೋಚನೆ ಎಂದೂ , ಯಾರದ್ದೂ ತಪ್ಪಲ್ಲ. ಆದರೆ ಮೈಮುರಿಯದೇ ತಿನ್ನಬೇಕು ಎಂಬ ಮನಸ್ಥಿತಿ ದೂರವಾಗಲು ಪಾಠ ಬೇಕಿರುವುದು ಯಾರಿಗೆ ಎಂಬುದು ಪ್ರಶ್ನೆ. ಯಾವುದೋ ಒಬ್ಬ ಮಗಳು ಕೃಷಿಯ ಕಡೆಗೆ ಆಸಕ್ತರಾದರೆ ಇನ್ನೊಂದು ಮನೆಯವನಿಗೆ ಏಕೆ ಚಿಂತೆ ? ಎಂಬ ಬಗ್ಗೆಯೂ ಪ್ರಶ್ನೆಯಾಗಬೇಕು.
ಈ ಭೂಮಿ ಹಸಿರಾಗಿಯೇ ಇರಬೇಕಾದರೆ ಈಗಲೇ ಚಿಂತನೆ ನಡೆಯಬೇಕು. ಇಲ್ಲದೇ ಇದ್ದಲ್ಲಿ ಇಲ್ಲಿ ವೃದ್ಧಾಶ್ರಗಳೂ ಕಾಣಸಿಗದು....!

13 ಏಪ್ರಿಲ್ 2018

ಈ ಸಂಘರ್ಷ ಭವಿಷ್ಯದ ಅಪಾಯ...
                                                                 ( ಅಂತರ್ಜಾಲ ಚಿತ್ರ )

ಇತ್ತೀಚೆಗೆ ಯಾಕೋ ಭಯ ಶುರುವಾಗಿದೆ. ಹೀಗಿರಲಿಲ್ಲ ಈ ವ್ಯವಸ್ಥೆ. ಜಾತಿ ಮೂಲಕ ಗುರುತಿಸದೇ ಇದ್ದರೂ ಅದರೊಳಗೇ ತಂದು ದೂಡುವ ಸ್ಥಿತಿ ಬಂದಿದೆ. ಯಾವುದೋ ಒಂದು ಆದರ್ಶ, ಸಿದ್ಧಾಂತ , ತತ್ತ್ವ ನಂಬಿ ಬಹುದೂರ ಬಂದ ಬಳಿಕ ಈ ಆತಂಕ ಶುರುವಾಗುತ್ತಿದೆ. ಅದೂ ಈ ಚುನಾವಣೆಗೇ ಮುಗಿದರೆ ಅಡ್ಡಿ ಇಲ್ಲ, ಅಲ್ಲದೇ ಇದ್ದರೆ ಭವಿಷ್ಯದಲ್ಲಿ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷದ ಭಯ ಕಾಡಿದೆ.
ಕಳೆದ ಅನೇಕ ವರ್ಷಗಳಿಂದ ಚುನಾವಣೆಯ ನೋಡುವ, ಮತ ಚಲಾವಣೆ ಮಾಡುವ ಅವಕಾಶ ಸಿಕ್ಕಿದೆ. ಆದರೆ ಈ ಬಾರಿಯ ಚುನಾವಣೆ ಹೊಸತೊಂದು ಸಂಘರ್ಷದ ವಾತಾವರಣವನ್ನು ಸದ್ದು ಗದ್ದಲವಿಲ್ಲದೆ  ತೆರೆದಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಎಂದು ಭಾವಿಸಲೇಬೇಕಾಗುತ್ತದೆ. ಇಂತಹ ಸಂಘರ್ಷ ಇಲ್ಲವೆಂದು ಮಾತಿನ ನಡುವೆ ಹೇಳಿಕೊಳ್ಳಬಹುದು. ಆದರೆ ಅಂತರ್ಯದಲ್ಲಿ ಚರ್ಚೆ ಶುರುವಾಗಿದೆ.
ವಿಶೇಷವಾಗಿ ಕರಾವಳಿ ಜಿಲ್ಲೆಯಲ್ಲಿ ಧರ್ಮ-ಮತ ಸಂಘರ್ಷ ಹಾಗೂ ಇದೇ ಸೂಕ್ಷ್ಮ ಸಂಗತಿಯಾಗಿ ಚುನಾವಣೆಯಲ್ಲಿ ಕಂಡುಬಂದು ಮತ ಗಳಿಕೆಯ ದಾರಿಯೂ ಆಗಿದ್ದರೆ ಈ ಬಾರಿ ಜಾತಿಯೂ ಸೇರಿಕೊಂಡಿದೆ. ಇತ್ತೀಚೆಗಂತೂ ಇದು ವಿಪರೀತವಾಗುತ್ತಿದೆ. ಭವಿಷ್ಯದಲ್ಲಿ ಈ ರಾಜಕೀಯ ವ್ಯವಸ್ಥೆ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷವನ್ನೂ ತಂದಿಡುವುದು ನಿಶ್ಚಿತ. ಇದ್ದಂತಹ ಕೆಲವು ಆಶಾಕಿರಣಗಳು, ಸಮಾಜವನ್ನು ಸುಧಾರಣೆ ಮಾಡುವ ಬೆಳ್ಳಿ ರೇಖೆಗಳೂ ಮಸುಕಾಗುತ್ತದೆ. ಎಲ್ಲೇ ಸುತ್ತಾಡಿದರೂ ಅದು ಕೊನೆಗೆ ಬಂದು ನಿಲ್ಲುವುದು , ನಿಲ್ಲಿಸುವುದು  ಅದೇ ಜಾತಿ ವ್ಯವಸ್ಥೆ ಸುತ್ತ. ಹೀಗಾಗಿ ಈ ಜಾತಿ ಸಂಘರ್ಷ  ಭವಿಷ್ಯದಲ್ಲಿ ಸಣ್ಣ ಸಣ್ಣ ಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಬಂದಬಹುದು. ಇಂತಹ ಸನ್ನಿವೇಶ ರಾಜ್ಯದ ಬೇರೆ ಕಡೆಗಳಲ್ಲಿ ಕಂಡುಬಂದಿತ್ತು. ಆದರೆ ಇದೀಗ ಕರಾವಳಿ ಜಿಲ್ಲೆಯಲ್ಲೂ ಕಾಣುತ್ತಿದೆ.

ಕೆಲವು ಸಮಯಗಳ ಹಿಂದೆ ರಾಜ್ಯದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪರ-ವಿರೋಧ ಅಭಿಪ್ರಾಯ ಬಂದಾಗ  ಧರ್ಮವನ್ನು ವಿಭಜನೆ ಮಾಡಲಾಗುತ್ತಿದೆ, ಈ ಸರಕಾರ ಹಿಂದೂ ವಿರೋಧಿ ಎಂಬೆಲ್ಲಾ ಅಭಿಪ್ರಾಯ ಬಂದವು. ಈ ಅಭಿಪ್ರಾಯ ಸತ್ಯವಾಗಿಯೂ ಕಂಡಿತ್ತು. ಹಾಗೆ ನೋಡಿದರೆ ಧರ್ಮ, ಮತ ಸಂಘರ್ಷ ಈ ಹಿಂದೆಯೂ ಇತ್ತು. ಆದರೆ ಈಗ ಜಾತಿ ಸಂಘರ್ಷದ ಜೊತೆಗೆ ಜಾತಿಯ ಒಳಗೆ ಸಂಘರ್ಷ ಉಂಟು ಮಾಡಿರುವುದು  ಈ ರಾಜಕೀಯ ವ್ಯವಸ್ಥೆ.  ಇಡೀ ರಾಜ್ಯದಲ್ಲಿಯೇ ಜಾತಿ ರಾಜಕಾರಣ ಹೆಚ್ಚುತ್ತಲೇ ಇದೆ. ಒಂದು ಧರ್ಮ ಅದರೊಳಗೆ ಇರುವ ಜಾತಿ ವ್ಯವಸ್ಥೆ ಹೊಗಲಾಡಿಸಬೇಕು ಎಂದು ಒಂದು ಕಡೆ ಜಾಗೃತಿ ಮೂಡಿಸುತ್ತಿದ್ದರೆ ಈ ಕಡೆಗೆ ಅದಕ್ಕಿಂತ 10 ಪಟ್ಟು ವೇಗದಲ್ಲಿ ಜಾತಿ ಆಧಾರಿತ ಟಿಕೆಟ್ ಕೊಡಲಾಗುತ್ತಿದೆ.

ಹೀಗಾಗಿ ಒಂದು ಸಿದ್ದಾಂತದ ಮೂಲಕ ರಾಜಕೀಯ ವ್ಯವಸ್ಥೆ ಶುದ್ದೀಕರಣವಾಗುತ್ತದೆ ಎಂಬ ಭಾವ ಇತ್ತು. ಅದೀಗ ಮರೆಯಾಗುತ್ತಿದೆ.  ರಾಜಕೀಯ ಕ್ಷೇತ್ರ ಏಕೆ  ಶುದ್ದೀಕರಣವಾಗಬೇಕು ಎಂದರೆ , ಮುಂದೆ ಆಳುವ ಮಂದಿ ಅದೇ ಜಾತಿ ವ್ಯವಸ್ಥೆಯಿಂದ ದೂರವಾಗಲೇಬೇಕಾದರೆ ಬಿತ್ತುವ  ಬೀಜವೇ ಶುದ್ದವಾಗಬೇಡವೇ ? ಧರ್ಮ - ಜಾತಿಯ ವಿಷ ಬೀಜವೇ ಬಿತ್ತಿದರೆ ಫಲವೂ ಅದೇ ಸಿಗುವುದು ಖಚಿತ. ಹೀಗಾಗಿ ರಾಜಕೀಯ ಕ್ಷೇತ್ರದ ಶುದ್ದೀಕರಣದ ಹಂತದಲ್ಲಿ ಗೆಲುವೇ ಮುಖ್ಯವೆಂದು ಮತ್ತೆ ಜಾತಿಯ ನಡುವೆ ಬಿದ್ದರೆ ಈ ಸಮಾಜದ ಉಳಿವು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಆತಂಕ ಇದೆ. ಈ ಸಂಘರ್ಷ , ಈ ಕಂದಕ ಇನ್ನಷ್ಟು ಹೆಚ್ಚಾಗುವುದು ನಿಶ್ಚಿತ.

ಕೆಲವು ಸಮಯದ ಹಿಂದೆ ಮನಸ್ಸು ಓಡುತ್ತದೆ.
ಒಂದು ಚಿಂತನೆಯ ಅಡಿಯಲ್ಲಿ ಬೆಳೆಯುತ್ತಾ ಅದೇ ಸತ್ಯವೆಂದು ನಂಬಿದ್ದಾಯಿತು. ಅದೇ ಕಾರಣದಿಂದ ಪ್ರಮುಖವಾದ ಮೆಟ್ಟಿಲಿನಿಂದ ಇಳಿದದ್ದೂ ಆಯಿತು. ಸಂಘರ್ಷ ಮಾಡಿದ್ದೂ ಆಯಿತು. ಅನೇಕರಿಂದ ಕೇಳಿಸಿಕೊಂಡದ್ದೂ ಆಯ್ತು. ಮಗುವಿನ ಓದಿಗೂ ಅದೇ ಚಿಂತನೆಯ ದಾರಿ ಹಿಡಿದದ್ದೂ ಆಯಿತು. ಸಾಮಾಜಿಕ ಕೆಲಸದಲ್ಲೂ ಅದೇ ದಾರಿಯನ್ನೂ ಹಿಡಿದಾಯಿತು. ಎಲ್ಲಾ ಆಗಿ ಕೊನೆಗೆ ಬಂದು ನಿಂತಿರುವುದು ದೂರದಲ್ಲಿ. ಮಾತನಾಡಿದ್ದೇ ತಪ್ಪಾಯ್ತೇ ಎಂಬಷ್ಟರ ಮಟ್ಟಿಗೆ ವ್ಯವಸ್ಥೆ ಬಂದು ನಿಂತಿತು. ಯಾವುದು ಸತ್ಯವೆಂದು ಭಾವಿಸಿದ್ದೆವೋ ಅದೇ ನಾವಾಗಲಿಲ್ಲ...!. ನಾವು ನಾವಾಗಲೂ ಇಲ್ಲ...!. ಅವಕಾಶವಾದಿಗಳು ಮೇಲೆದ್ದು ಬಿಟ್ಟರು, ಜಾತಿ ಹಿಡಿದರು ಗೆದ್ದರು..!. ಸತ್ಯ ಸೋತಿತು....!.
“ಹಲಸು” ಕೇರಳ ರಾಜ್ಯದ ಹಣ್ಣು. . . ರೈತನಿಗೆ ಸಂದ ಗೌರವ !

ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು, ಆತ್ಮಹತ್ಯೆಯ ಹಿಂದೆ ಬಿದ್ದಿದ್ದರು. ದೂರದ ಇಸ್ರೇಲ್‍ನಲ್ಲಿ ಅದರ ತದ್ವಿರುದ್ಧ. ಎಲ್ಲರೂ ಯಶೋಗಾಥೆಯ ಹಿಂದೆ ಬಿದ್ದರು. ಆತ್ಮಹತ್ಯೆ ತಡೆಗೆ ಏನು ಮಾಡಬಹುದು ಎಂದು  ತಂಡ ರಚನೆ ಮಾಡಿದರು. ರೈತರು ಬೆಳೆಯುವ ಕೆಲವು ಉತ್ಪನ್ನಗಳನ್ನು ಕಡ್ಡಾಯ ಬಳಕೆ ಮಾಡಬೇಕು ಎಂದರು. ರೈತರೂ ಗೆದ್ದರು, ಆತ್ಮಹತ್ಯೆಯೂ ಕಡಿಮೆಯಾಯಿತು. ಪಕ್ಕದ ಕೇರಳವೂ ಅದೇ ಹಾದಿಯಲ್ಲಿದೆ. ಹಲಸು ತನ್ನ ರಾಜ್ಯದ ಹಣ್ಣು ಎಂದು ಘೋಷಿಸಿದರು. ರೈತರೂ ಈ ಹಣ್ಣಿನ ಮೂಲಕ ಆದಾಯ ಸೃಷ್ಠಿ ಮಾಡಿಕೊಂಡರು.
ಇಡೀ ದೇಶದಲ್ಲಿ ಆಗಾಗ ಸುದ್ದಿಯಾಗುವ ಸಂಗತಿ ರೈತರ ಆತ್ಮಹತ್ಯೆ. ಆದರೆ ಪಕ್ಕದ ಕೇರಳದಲ್ಲಿ ಇಂತಹ ಸುದ್ದಿಗಳೇ ಅಪರೂಪ. ಇಲ್ಲವೇ ಇಲ್ಲ ಎಂದಲ್ಲ. ರೈತರ ಆತ್ಮಹತ್ಯೆಯ ಸರಾಸರಿ ತೆಗೆದರೆ ತೀರಾ ಕಡಿಮೆ. ಏಕೆ ಹೀಗೆ ಎಂದು ಪಾಸಿಟಿವ್ ಆಗಿ ಯೋಚಿಸಿದರೆ ಇಲ್ಲಿನ ಸರಕಾರಗಳು ಯಾವುದೇ ಬರಲಿ ರೈತರ ಬೇಡಿಕೆಗೆ ತಕ್ಷಣವೇ ಸ್ಪಂದಿಸುತ್ತವೆ, ರೈತ ಪರವಾದ ಯಾವುದೇ ಹೋರಾಟಕ್ಕೆ, ನ್ಯಾಯಯುತ ಬೇಡಿಕೆಗೆ ಪಕ್ಷಬೇಧವಿಲ್ಲದೆ ಹೋರಾಟ ನಡೆಯುತ್ತದೆ, ಸರಕಾರ ಸ್ಪಂದಿಸುತ್ತದೆ. ಅದರ ಜೊತೆಗೆ ಹೊಸ ಸಾಧ್ಯತೆಯತ್ತಲೂ ಸರಕಾರ ಹೇಳುತ್ತದೆ. ಈಗಲೂ ಅಂತಹದ್ದೇ ಪ್ರಯತ್ನ ಕೇರಳದಲ್ಲಾಗಿದೆ. ಹಲಸಿನ ಹಣ್ಣನ್ನು ರಾಜ್ಯದ ಹಣ್ಣು ಎಂದು ಸರಕಾರ ಘೋಷಿಸಿದೆ. ಅನೇಕ ಸಮಯಗಳಿಂದ ಹಲಸಿನ ಬಗ್ಗೆ ಕೇರಳದಲ್ಲಿ ಆಂದೋಲನ, ಚಳುವಳಿಯೇ  ನಡೆಯುತ್ತಿತ್ತು. ರಬ್ಬರ್, ತೆಂಗು ಮೊದಲಾದ ಕೃಷಿಯಿಂದಲೇ ಕಂಗೊಳಿಸುತ್ತಿದ್ದ ಕೇರಳದಲ್ಲಿ ಹಲಸಿನ ಆಂದೋಲನ ಶುರುವಾಗಿ ಸುಮಾರು 10 ವರ್ಷಗಳಾಗಿದೆ. ಹಲಸು ಮೇಳದಿಂದ ತೊಡಗಿ ವಿವಿಧ ಚಳುವಳಿ ನಡೆಯಿತು. ಇದರ ಪರಿಣಾಮ ವಿವಿಧ ಸಣ್ಣ ಸಣ್ಣ ಉದ್ಯಮಗಳು ಹುಟ್ಟಿಕೊಂಡಿದೆ.ಈಗ ಹಲಸು ಬೆಳೆಸುವ ಮೂಲಕ ರೈತನಿಗೆ ಆದಾಯ ತರಲು ಸಾಧ್ಯವಿದೆ ಎಂದು ಅನಿಸಿದೆ. ಹೀಗಾಗಿ ಕೇರಳದ ಸರಕಾರವೇ ರೈತರ ನೆರವಿಗೆ ಬಂದಿದೆ. ಕೇರಳದ ಕೃಷಿ ಸಚಿವರು ಈ ಬಗ್ಗೆ ಕಳೆದ ಕೆಲವು ಸಮಯಗಳಿಂದ ಅಧ್ಯಯನ ಮಾಡಿದರು, ಸಾಧ್ಯತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಇಡೀ ರಾಜ್ಯದಲ್ಲಿ ಸರಕಾರದ ವತಿಯಿಂದ ಹಲಸಿನ ವಾಹನ ಓಡಿಸಿದರು. ಜನರಲ್ಲಿ, ಕೃಷಿಕರಲ್ಲಿ ಜಾಗೃತಿ ಮೂಡಿಸಿದರು. ಹೊಸ ಹೊಸ ತಳಿಯ ಹಲಸನ್ನು ಪರಿಚಯಿಸಿದರು. ಇದೀಗ ಹಲಸು ರಾಜ್ಯದ ಹಣ್ಣು ಎಂಬ ಘೋಷಣೆ ಮಾಡಿದರು. ಇಡೀ ಕೇರಳದ ರೈತರಿಗೆ ಇಷ್ಟು ಸಾಕು. ಈಗ ಹಲಸಿನ ಮೂಲಕವೂ ಆದಾಯವನ್ನು ಹೆಚ್ಚಿಸಿಕೊಳ್ಳಲು, ಉಪಬೆಳೆಯಾಗಿ ಬೆಳೆಯಲೂ, ಉದ್ಯಮಗಳು ಬೆಳೆಯಲು ಸಾಧ್ಯವಾಯಿತು.
ಹಾಗೆ ನೋಡಿದರೆ ಕೇರಳ ಮಾತ್ರವಲ್ಲ ಕರ್ನಾಟಕದಲ್ಲೂ ಹಣ್ಣು ಬೆಳೆಯುವ ಅನೇಕ ಕೃಷಿಕರು ಇದ್ದಾರೆ. ಆದರೆ ಮಾರುಕಟ್ಟೆ ಸಮಸ್ಯೆಯ ಕಾರಣದಿಂದ , ಈ ಬಗ್ಗೆ ಸಾಕಷ್ಟು ಜಾಗೃತಿ ಅರಿವು ಇಲ್ಲದ ಕಾರಣದಿಂದ ಸರಕಾರದ ಸಹಾಯವೇ ಇಲ್ಲದ ಕಾರಣದಿಂದ ಸೊರಗುತ್ತಿರುವುದು  ಕಂಡುಬರುತ್ತದೆ. ಮೂಲತ: ಕೇರಳದವರಾಗಿ ಪುತ್ತೂರು ತಾಲೂಕಿನ ಕಬಕ ಬಳಿಯ ನರ್ಸರಿ ನಡೆಸುತ್ತಿರುವ ಅನಿಲ್ ಪ್ರತೀ ವರ್ಷ ಸುಮಾರು 75 ಸಾವಿರದಿಂದ 1 ಲಕ್ಷ ಹಲಸು ಗಿಡವನ್ನು ಮಾಡಿ ದೇಶದ ವಿವಿದೆಡೆಗೆ ಮಾರಾಟ ಮಾಡುತ್ತಾರೆ.ಕೇರಳದಲ್ಲಿ ಹಲಸಿನ ಜಾಗೃತಿ ಆರಂಭವಾದ ಬಳಿಕ ಪ್ರತೀ ವರ್ಷ ಗಿಡಗಳಿಗೆ ಬೇಡಿಕೆ ವ್ಯಕ್ತವಾಯಿತು. ಇಂದಿಗೂ ಈ ಬೇಡಿಕೆ ಕಡಿಮೆಯಾಗಿಲ್ಲ. ಇದರ ಪ್ರಭಾವ ಪಕ್ಕದ ತಮಿಳುನಾಡಿನಲ್ಲೂ ಕಂಡಿತು. ಹೀಗಾಗಿ ಹಲಸಿನ ಗಿಡಕ್ಕೆ ಬೇಡಿಕೆ ಹೆಚ್ಚಾದಾಗ ಹೊಸತಂತ್ರವನ್ನು ಅನಿಲ್ ಕಂಡುಕೊಂಡರು. ಈಗ ಸಾಕಷ್ಟು ಗಿಡ ಮಾರಾಟಕ್ಕೂ ಅನಿಲ್ ಶಕ್ತವಾದರು. ಇದು ಅನಿಲ್ ಒಬ್ಬರ ಕತೆಯಲ್ಲ ಕೇರಳದಲ್ಲಿ ಸಾಕಷ್ಟು ನರ್ಸರಿಗಳಲ್ಲಿ ಇಂದು ಹಲಸಿನ ಗಿಡಕ್ಕೆ, ಹೊಸ ಹೊಸ ತಳಿಯ ಗಿಡಕ್ಕೆ ಬೇಡಿಕೆ ವ್ಯಕ್ತವಾಗುತ್ತಲೇ ಇದೆ.
 ಕೇರಳದ ಮೂಲದಿಂದ ಆಗಮಿಸಿ ಸುಮಾರು 5 ಎಕ್ರೆಯಲ್ಲಿ ಜಾರ್ಜ್ ಎಂಬ ಕೃಷಿಕ ರಂಬುಟಾನ್ ಹಣ್ಣಿನ ತೋಟ ಮಾಡುತ್ತಾರೆ. ರಂಬುಟಾನ್ ಬೇಡಿಕೆಯನ್ನು ಗಮನಿಸಿ 5 ಎಕ್ರೆ ಜಾಗ ಖರೀದಿ ಮಾಡಿ ಅಲ್ಲಿ ಸಂಪೂರ್ಣವಾಗಿ ಹಣ್ಣಿನ ಗಿಡವನ್ನು  ಬೆಳೆಸಿದರು. ಈಗ ಹಣ್ಣು ಕಟಾವು ಮಾಡುತ್ತಿದ್ದಾರೆ. ಹೀಗೆ ಹತ್ತಾರು ಮಂದಿ ಹಣ್ಣಿನ ತೋಟ ಮಾಡಿ ಕೇರಳದಲ್ಲೇ ಮಾರುಕಟ್ಟೆ ಹುಡುಕುತ್ತಾರೆ.
ಕರ್ನಾಟಕದಲ್ಲೇ ಇರುವ ಅನೇಕರು ಹಣ್ಣಿನ ತೋಟ ಮಾಡಿ ಮಾರುಕಟ್ಟೆಗಾಗಿ ಪರದಾಟ ಮಾಡುತ್ತಾರೆ. ಎಲ್ಲೋ ಕೆಲವರು ಸಾಹಸಪಟ್ಟು ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾರೆ. ಹಣ್ಣಿನ ತೋಟವೂ ಆದಾಯ ತರಬಲ್ಲುದು ಎಂಬ ಕಲ್ಪನೆ ಇದ್ದರೂ ಇಂದಿಗೂ ತೋಟಗಾರಿಕಾ ಬೆಳೆಯಾಗಿ ಸಾಕಷ್ಟು ಪ್ರೋತ್ಸಾಹ ರಾಜ್ಯದಲ್ಲಿ ಸಿಗುವುದಿಲ್ಲ. ಮಾವು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳೂ ಸಾಕಷ್ಟು ಇದ್ದರೂ ರಾಜ್ಯದ ಹಣ್ಣು ಎಂಬ ಘೋಷಣೆ ಇಲ್ಲಿಲ್ಲ. ಇದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಾಣುತ್ತಿಲ್ಲ. ಹೀಗಾಗಿ ರೈತನಿಗೆ ಆದಾಯ ಹೆಚ್ಚುವುದು ಕೂಡಾ ಕಷ್ಟವಾಗಿದೆ, ಯಶೋಗಾಥೆಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತದೆ, ಹೊಸ ಬಗೆಯ ಕಲ್ಲಂಗಡಿ ಬೆಳೆಯಲಾಗುತ್ತದೆ. ರೈತನಿಗೆ ಯಾವತ್ತೂ ಉಪಬೆಳೆಗಳು ಆದಾಯ ದ್ವಿಗುಣಕ್ಕೆ ಕಾರಣವಾದರೆ, ಸರಕಾರದ ಸಣ್ಣ ಪ್ರೋತ್ಸಾಹ ಕೂಡಾ ದೊಡ್ಡದಾಗಿ ಕಾಣುತ್ತದೆ. ರಾಜ್ಯದಲ್ಲೂ ಯಾವುದಾದರೊಂದು ಹಣ್ಣನ್ನು ರಾಜ್ಯದ ಹಣ್ಣು ಎಂದು ಘೋಷಿಸಿದರೆ ಸಹಜವಾಗಿಯೇ ಮಾರುಕಟ್ಟೆ ಹೆಚ್ಚುತ್ತದೆ, ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತದೆ, ರೈತನಿಗೂ ಆದಾಯ ಹೆಚ್ಚಾಗುತ್ತದೆ. ಸರಕಾರಗಳು ಈ ದಿಸೆಯಲ್ಲಿ ಏಕೆ ಆಲೋಚಿಸಬಾರದು ಇಲ್ಲಿ ?. ಇಂತಹ ಸಣ್ಣ ಸಣ್ಣ ಮೆಟ್ಟಿಲುಗಳೇ ರೈತನ ಆದಾಯಕ್ಕೆ ದೊಡ್ಡ ಮೆಟ್ಟಿಲುಗಳೇ ಆಗುತ್ತದೆ.

17 ಮಾರ್ಚ್ 2018

ಕೃಷಿಕರೇ ಕಂಡುಹಿಡಿಯಬೇಕಾದ "ಇ" ಕೃಷಿ ಮಾರುಕಟ್ಟೆ ವ್ಯವಸ್ಥೆಕಳೆದ ಕೆಲವು ದಿನಗಳ ಹಿಂದೆ ಕಾಳುಮೆಣಸು ದರ ಇಳಿಕೆಯ ಹಾದಿಯಲ್ಲಿತ್ತು. ಹಾಗಿದ್ದರೂ ಕೃಷಿಕ ಶಂಕರ ಭಟ್ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಮಾತನಾಡುತ್ತಾ, "ಇಂದಿಗೂ ನಾನು ಕಾಳುಮೆಣಸನ್ನು ಕನಿಷ್ಠ 800 ರೂಪಾಯಿಗೆ ಮಾರಾಟ ಮಾಡುತ್ತಿದ್ದೇನೆ" ಎನ್ನುತ್ತಿದ್ದರು. ಅದು ಹೇಗೆ ಎಂದು ಕೇಳಿದಾಗ ಅವರು ಹೇಳಿದ್ದು "ಆನ್‍ಲೈನ್" ಮಾರುಕಟ್ಟೆ, ಇ ಮಾರುಕಟ್ಟೆಯ ಹೆಸರು. ಹಾಗಿದ್ದರೆ, ಕೃಷಿಕರಿಗೂ ಆನ್‍ಲೈನ್ ಮೂಲಕ ತಾವೇ ಬೆಳೆಯುವ ಕೃಷಿ ವಸ್ತುಗಳ ಮಾರಾಟ ಸಾಧ್ಯವೇ ಎಂಬ ಪ್ರಶ್ನೆ ಬಂದಾಗ, ಬಹುತೇಕ ಕೃಷಿಕರ ಮಕ್ಕಳು ಇರುವುದು ನಗರದಲ್ಲಿ. ಹಾಗಿದ್ದರೆ ಏಕೆ ಕಷ್ಟ ಎಂಬ ಮರುಪ್ರಶ್ನೆ...!.

ಭಾರತ ಕೃಷಿ ದೇಶ, ಭಾರತದ ಆರ್ಥಿಕ ವ್ಯವಸ್ಥೆ ನಿಂತಿರುವುದೇ ಕೃಷಿ ಮೇಲೆಯೇ. ಹೀಗಿರುವಾಗ ಕೃಷಿಯ ಲೆಕ್ಕಾಚಾರ , ಕೃಷಿ ಉತ್ಪಾದನೆಯ ವ್ಯವಹಾರ, ಕೃಷಿ ಮಾರುಕಟ್ಟೆಯನ್ನು ಲೆಕ್ಕ ಹಾಕುವುದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ಇಂದು ವಿಶೇಷ ಕೋರ್ಸ್‍ಗಳೂ ಆರಂಭವಾಗುತ್ತಿದೆ. ಕೃಷಿಗೆ ಬೇಕಾದ ಎಲ್ಲಾ ಸವಲತ್ತು, ಬೆಂಬಲ ಬೆಲೆ, ಸಬ್ಸೀಡಿ ಎಲ್ಲವೂ ಸಿಗುತ್ತಿದ್ದರೂ ಮತ್ತೆ ಮತ್ತೆ ಚರ್ಚೆಯಾಗುವುದು ಕೃಷಿ ಮಾರುಕಟ್ಟೆ ವ್ಯವಸ್ಥೆ. ಕೃಷಿಕ ತಾನೇ ಬೆಳೆದ ಟೊಮೊಟೋ ರಸ್ತೆ ಬದಿ ಚೆಲ್ಲಿದಾಗ ದೂರದ ಎಲ್ಲೋ ಇರುವ ಕೃಷಿಕನಿಗೂ ನೋವಾಗುತ್ತದೆ. ಎಲ್ಲೋ ಜೋಳದ ಬೆಲೆ ಕುಸಿತವಾದಾಗ ಇನ್ನೆಲ್ಲೋ ಇರುವ ಕೃಷಿಕನಿಗೂ ಬೇಸರವಾಗುತ್ತದೆ. ಒಂದು ಕಡೆ ರೈತ ಟೊಮೊಟೋ ರಸ್ತೆ ಬದಿ ಎಸೆದರೆ ಇನ್ನೊಂದು ಕಡೆ ಟೊಮೊಟೋಗೆ 15 ರೂಪಾಯಿ ಕೊಟ್ಟು ಖರೀದಿ ಮಾಡುವ ಸ್ಥಿತಿ ಇರುತ್ತದೆ. ಹೀಗಿರುವಾಗಲೂ ರೈತ ಟೊಮೊಟೋ ಏಕೆ ರಸ್ತೆ ಬದಿ ಚೆಲ್ಲುತ್ತಾನೆ ಎಂಬ ಪ್ರಶ್ನೆಗೆ ಉತ್ತರ "ಮಾರುಕಟ್ಟೆ ವ್ಯವಸ್ಥೆ". ಹೀಗಾಗಿ ಕೃಷಿ ಮಾರುಕಟ್ಟೆಯ ವ್ಯವಸ್ಥೆ ಸುಧಾರಣೆ ಹೇಗೆ ಎಂಬ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುತ್ತದೆ. ಈಗ ಕೃಷಿ ಆರ್ಥಿಕತೆ ಬಗ್ಗೆ ಸಾಕಷ್ಟು ಅಧ್ಯಯನವಾಗಬೇಕು. ಈ ಮೊದಲು ನಡೆಸಿದ ಸಮೀಕ್ಷೆ ಹಾಗೂ ಕೃಷಿ ಕ್ಷೇತ್ರದಲ್ಲಿ ಆರ್ಥಿಕತೆಯ ನಿರ್ವಹಣೆಯ ಸಿದ್ಧಾಂತಗಳ ಅಳವಡಿಕೆಯನ್ನು ಅಧ್ಯಯನ ಮಾಡಿದಾಗ ಭವಿಷ್ಯದಲ್ಲಿ ಇ- ಬಿಸಿನೆಸ್ ಅಥವಾ ಇ ಕೃಷಿ ಮಾರುಕಟ್ಟೆ ಎನ್ನುವ ಪರಿಕಲ್ಪನೆಗೆ ಹೆಚ್ಚು ಅವಕಾಶ ತೆರೆದುಕೊಂಡಿದೆ.
ಭಾರತದ ಆರ್ಥಿಕ ತಜ್ಞರು ಕೃಷಿ ಕಡೆಗೆ ಹೆಚ್ಚಿನ ಗಮಹರಿಸುತ್ತಿದ್ದಾರೆ. ಕೃಷಿ ಮಾರುಕಟ್ಟೆಗಾಗಿಯೇ ವಿಶೇಷ ಕೋರ್ಸ್ ರಚನೆಯಾದರೆ ಅದರಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ. ಆಹಾರದ ಉತ್ಪಾದನೆ, ಸರಬರಾಜು ಮತ್ತು ಬಳಕೆಯ ಬಗ್ಗೆ, ಕೃಷಿ ಸರಕುಗಳು ಮತ್ತು ಸೇವೆಗಳ ಬಗ್ಗೆ ವಿಶೇಷ ತರಬೇತಿ ಅಗತ್ಯವಾಗುತ್ತದೆ. ಹಾಗೂ ಅಂಗಡಿ ಮಾಲಕರು ಯಾವ ರೀತಿಯ ಆಹಾರವನ್ನು ಖರೀದಿ ಮಾಡುತ್ತಾರೆ. ಪ್ರಸಕ್ತ ಜನರ ಆಹಾರ ಪದ್ಧತಿಯಲ್ಲಾದ ಬದಲಾವಣೆ, ಡಯೆಟ್, ಮಾರುಕಟ್ಟೆ ಅವಶ್ಯಕತೆಗಿಂತ ಹೆಚ್ಚುವರಿ ಬೆಳೆ ಬೆಳೆಯಲಾಗುತ್ತದೆಯೇ ಇತ್ಯಾದಿ ವಿವರಗಳನ್ನು ಅಧ್ಯಯನ ಬೇಕಾಗುತ್ತದೆ ಎಂಬ ಸಲಹೆ ಬಂದಿದೆ. ಈ ಟ್ರೆಂಡ್ ಈಗಾಗಲೇ ಶುರುವಾಗುತ್ತಿದ್ದು ಪೇಸ್‍ಬುಕ್‍ನಂತಹ ಜಾಲತಾಣಗಳಲ್ಲಿ ಕೃಷಿಕರು ತಾವೇ ಬೆಳೆದ ವಸ್ತುಗಳನ್ನು  ಮಾರಾಟ ಮಾಡುತ್ತಿದ್ದಾರೆ, ಈ ಬಗ್ಗೆ ಆಸಕ್ತ ವಿದ್ಯಾರ್ಥಿಗಳು ಅಧ್ಯಯನ ಆರಂಭಿಸಿದ್ದಾರೆ. ಕೃಷಿ ಗ್ರೂಪುಗಳಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ಇದ್ದರೆ ಅದರಲ್ಲಿ ಶೇ.50 ಕ್ಕಿಂತ ಹೆಚ್ಚು ಕೃಷಿಕರು ಇರುವುದು  ಕೃಷಿಕರೂ ಸಾಮಾಜಿಕ ತಾಲತಾಣಗಳ ಬಳಕೆಯ ಅಭ್ಯಾಸವನ್ನು ಕೃಷಿಗೆ ಸಹಕಾರಿಯಾಗುವಂತೆ ಮಾಡಬಹುದಾಗಿದೆ.
ಪುತ್ತೂರು ಕಬಕ ಬಳಿಯ ಕೃಷಿಕ ಶಂಕರ ಭಟ್ ವಡ್ಯ ಇ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ. ರಾಜ್ಯದ ವಿವಿದೆಡೆ ಕೃಷಿಕರು, ಯುವಕೃಷಿಕರು ಈ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಶಂಕರ ಭಟ್ ಅವರು ಕೆಲ ವರ್ಷದ ಹಿಂದೆ ಬಾಳೆ ಬೆಳೆದಾಗ ಧಾರಣೆ ಕುಸಿತ ಕಂಡಿತು. 1 ಕೆಜಿ ಬಾಳೆಗೆ 8 ರೂಪಾಯಿಗೆ ಮಾರಾಟ ಮಾಡಬೇಕಾದ ಸಂದರ್ಭ ಬಂತು. ಹಾಗೆಂದು ಮಾರುಕಟ್ಟೆ ಧಾರಣೆ ಗಮನಿಸಿದರೆ 20 ರೂಪಾಯಿ ಇತ್ತು. ಈ ವ್ಯತ್ಯಾಸ ಗಮನಿಸಿದ ಶಂಕರ್ ಭಟ್ ತಾವೇ ಬೆಳೆದ ಬಾಳೆಯನ್ನು ಮೌಲ್ಯವರ್ಧನೆ ಮಾಡಬೇಕು ಎಂದು ನಿರ್ಧರಿಸಿದ್ದರು. ಇದಕ್ಕಾಗಿ ಬಾಳೆಹಣ್ಣು ಹಲ್ವ ಮಾಡಲು ನಿರ್ಧರಿಸಿದರು. ಬಳಿಕ ಮಾರುಕಟ್ಟೆಗೆ ತಂದಾಗ ಕೆಜಿಗೆ 120 ರೂಪಾಯಿ ಲಭ್ಯವಾಯಿತು. ಬಳಿಕ ಬಾಳೆಗೊನೆ ಮಾರಾಟದ ಬದಲಾಗಿ ಮೌಲ್ಯವರ್ಧನೆ ಮಾಡಿಯೇ ಮಾರಾಟ ಮಾಡುವ ಪ್ರಕ್ರಿಯೆ ನಡೆಸಿದರು. ನಿಧಾನವಾಗಿ ಪೇಸ್‍ಬುಕ್, ವ್ಯಾಟ್ಸಪ್ ಸೇರಿದಂತೆ ಇತರ ಮಾಧ್ಯಮ ಉಪಯೋಗಿಸಿ ಇ ಮಾರುಕಟ್ಟೆಗೆ ಇಳಿದರು. ಈಗ ಮನೆಯಿಂದಲೇ ನೇರವಾಗಿ ಗ್ರಾಹಕರ ಕೈಗೆ ಕೃಷಿ ವಸ್ತುಗಳು ಸಿಗುತ್ತಿದೆ. ಇತ್ತೀಚೆಗೆ ಕಾಳುಮೆಣಸು ಧಾರಣೆ ಕುಸಿತವಾದ ಸಂದರ್ಭದಲ್ಲೂ ಶಂಕರ ಭಟ್ ಅವರಿಗೆ ಸುಮಾರು 800 ರೂಪಾಯಿಯಿಂದ 1000 ರೂಪಾಯಿವರೆಗ ಲಭ್ಯವಾಗಿದೆ. ಇ ಮಾರುಕಟ್ಟೆ ಮೂಲಕ ಗ್ರಾಹಕರ ಕೈಗೆ ತಲಪಿದೆ. ಈಗ ಅಡಿಕೆ, ರುದ್ರಾಕ್ಷಿ, ಕಾಳುಮೆಣಸು, ಬಾಳೆಹಣ್ಣು ಹಲ್ವ ಇತ್ಯಾದಿಗಳ ಮಾರಾಟ ಆನ್ ಲೈನ್‍ನಲ್ಲಿ. ಇಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ ಕೃಷಿಕ ಬೆಳೆದ ವಸ್ತುಗಳ ಮೇಲೆ ಆತನಿಗೆ ಮೊದಲಾಗಿ ನಂಬಿಕೆ ಇರಬೇಕು ಎನ್ನುವುದು  ಶಂಕರ ಭಟ್ ಅವರ ಅಭಿಮತ. ಮಾರಾಟದ ಸಂದರ್ಭ ಅದರಲ್ಲಿ ಕಲಬೆರಕೆ ಇತ್ಯಾದಿಗಳು ನಡೆದರೆ ವಿಶ್ವಾಸಾರ್ಹತೆ ಕಡಿಮೆಯಾಗಿ ಮಾರುಕಟ್ಟೆ ಕುಸಿತವಾಗಬಹುದು ಎನ್ನುವ ಸತ್ಯ ಅರಿತಿರಬೇಕು.
ಹಾಗಿದ್ದರೆ ಈಗ ಪ್ರಶ್ನೆ ಇರುವುದು, ಸಾಮಾನ್ಯ ಅದರಲ್ಲೂ ಗ್ರಾಮೀಣ ಭಾಗದ ಅದರಲ್ಲೂ ಇ ಮಾರುಕಟ್ಟೆ ವ್ಯವಸ್ಥೆ ಅರಿಯದ ಕೃಷಿಕರಿಗೆ ಇದೆಲ್ಲಾ ಸಾಧ್ಯವೇ ಎಂಬುದು. ಇಂದು ಬಹುತೇಕ ಕೃಷಿಕರ ಮಕ್ಕಳು ಪೇಸ್‍ಬುಕ್, ವ್ಯಾಟ್ಸಪ್‍ಗಳಲ್ಲಿ ಸಕ್ರಿಯ. ಅದರ ಜೊತೆಗೆ ಇನ್ನೂ ಹಲವಾರು ಮಂದಿ ನಗರ ಪ್ರದೇಶದಲ್ಲೇ ಉದ್ಯೋಗ ಮಾಡುವವರು. ಹೀಗಾಗಿ ಇಂದಲ್ಲ ನಾಳೆಯಾದರೂ ಹಂತ ಹಂತವಾಗಿ ಅನುಷ್ಠಾನ ಸಾಧ್ಯವಿದೆ ಎಂಬುದು ಅಭಿಮತ. ಆದರೆ ಎಲ್ಲಾ ಕೃಷಿ ವಸ್ತುಗಳನ್ನು ಇ ಮಾರುಕಟ್ಟೆ ಮೂಲಕ ಅಸಾಧ್ಯ. ಅದಕ್ಕಾಗಿ ಮತ್ತೊಂದು ದಾರಿ ಕಂಡುಹಿಡಿಯಬೇಕಾಗುತ್ತದೆ. ಕೃಷಿಕರು ಬೆಳೆದ ವಸ್ತುಗಳಿಗೆ ಕೃಷಿಕರೇ ಮಾರುಕಟ್ಟೆ ಹುಡುಕಿಕೊಂಡರೆ ಕೃಷಿ ಕ್ಷೇತ್ರದಲ್ಲಿನ ಬದಲಾವಣೆಗೆ ದೂರವಿಲ್ಲ. 2020 ರ ಹೊತ್ತಿಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಇದೂ ಸಹಕಾರಿಯಾಗಬಲ್ಲುದು. ರಾಷ್ಟ್ರದ ಆಹಾರ ಭದ್ರತೆಯ ಜೊತೆಗೆ ಕೃಷಿಕರ ಆದಾಯದ ಭದ್ರತೆಯಾಗಬಹುದು.


( ಮಣ್ಣಿಗೆ ಮೆಟ್ಟಿಲು - ಹೊಸದಿಗಂತ)


04 ಮಾರ್ಚ್ 2018

ಅಸಹಾಯಕತೆಯಲ್ಲ....... ನೋವೂ ಅಲ್ಲ...... ಭರವಸೆಯ ಪ್ರಶ್ನೆ.....!ಸುಮಾರು 4 ವರ್ಷಗಳ ಹಿಂದೆ.
 ಯಾವುದೋ ವಿಡಿಯೋ ಹೀಗೇ ಗಮನಿಸುತ್ತಿದೆ, ಮಾತು ಕೇಳಿಸುತ್ತಿದ್ದಂತೆಯೇ ಆಸಕ್ತಿ ಮೂಡಿತು. ಮತ್ತೊಮ್ಮೆ ಕೇಳಿದೆ. ಅದು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ. ಈ ದೇಶ ಹೇಗೆ ಬದಲಾಗಬೇಕು, ನಾವು ಹೇಗೆ ಅದರ ಭಾಗವಾಗಬೇಕು ಎಂಬುದರ ಸಂಕ್ಷಿಪ್ತ ರೂಪ ಅಷ್ಟೇ. ಅದರ ಜೊತೆಗೆ ಈ ದೇಶ ವಿಶ್ವದಲ್ಲೇ ನಂಬರ್1 ಆಗುವ ಕನಸು ಸೇರಿದಂತೆ ವಿವಿಧ ವಿಚಾರಗಳು ಇದ್ದವು. ಮತ್ತೊಮ್ಮೆ ಆಲಿಸಿದೆ.. ಮಗದೊಮ್ಮೆ ಕೇಳಿದೆ... ಆಗಾಗ ಕೇಳಿದೆ. ಭರವಸೆ ಮೂಡಿತು.

ಹೌದು ಈ ದೇಶ ಬದಲಾಗಬೇಕು.
ಈ ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ಇವೆ... ಎಲ್ಲಾ ಸಮಸ್ಯೆಗಳೂ ಒಂದೇ ಕ್ಷಣದಲ್ಲಿ , ಒಮ್ಮೆಲೇ ಬದಲಾಗಲು ಸಾಧ್ಯವೇ ಇಲ್ಲ. ಹೀಗಾಗಿ ನಾವು ನಮ್ಮೂರಿನಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದರ ಕಡೆಗೆ ಯೋಚನೆ ಮಾಡುತ್ತಿದ್ದೆ, ಅದಕ್ಕೂ ಅವರೇ ಹೇಳಿದ್ದರು.
ನಮ್ಮೂರಿನ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುವುದು, ಸರಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಪ್ರಯತ್ನ ಮಾಡುವುದು, ಆಗದೇ ಇದ್ದರೆ ಮಾಡಿಸುವುದು. ಜನನಾಯಕರು ಭ್ರಷ್ಟರಾಗದಂತೆ ಆಗಾಗ ಎಚ್ಚರಿಸುವುದು, ಊರಿನ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ಹಾಕಿಕೊಳ್ಳುವುದು  ಸೇರಿದಂತೆ ಹತ್ತಾರು ಸಂಗತಿಗಳನ್ನು ಅಂದು ಗಮನಿಸಿದ್ದೆ.

ಅದಾದ ಬಳಿಕ ಆ ಮಾತು ಕೃತಿಗೆ ಇಳಿದಾಗಲೇ ತಿಳಿದದ್ದು, ಅನೇಕ ಸತ್ಯಗಳು...!
ಈ ಭ್ರಷ್ಟ ವ್ಯವಸ್ಥೆಯಲ್ಲಿ ಸತ್ಯವೂ ಸುಳ್ಳಾಗುತ್ತದೆ.... ಸುಳ್ಳು ಸತ್ಯವಾಗುತ್ತದೆ.  ಸತ್ಯ ಹೇಳಿದಾಗ ವಿರೋಧ ಹೆಚ್ಚಾಗುತ್ತದೆ. ಗುಂಪುಗಾರಿಕೆ ಶುರುವಾಗುತ್ತದೆ, ಕೊನೆ ಕೊನೆಗೆ ಇದೊಂದು ಕಾಟ ಎನ್ನುವುದು  ಶುರುವಾಗುತ್ತದೆ. ಅಪಪ್ರಚಾರ ಶುರುವಾಗುತ್ತದೆ....!. ಕನಸು ನನಸಾಗುವುದು ಇಷ್ಟವಿಲ್ಲವಾಗುತ್ತದೆ....!
ಹೀಗೆ ಆರಂಭವಾಗುತ್ತದೆ.......

 ಒಂದು ಗ್ರಾಮೀಣ ರಸ್ತೆ. ಕಳೆದ ಅನೇಕ ವರ್ಷಗಳಿಂದ ಇದು ದುರಸ್ತಿಯಲ್ಲಿ ಇಲ್ಲ. ಎಲ್ಲರಿಗೂ ಪತ್ರ ಬರೆದು, ಪದೇ ಪದೇ ಸಂಬಂಧಿತರಿಗೆ ಮನವಿ ಮಾಡಿಯೂ ಆಗಿತ್ತು. ರಸ್ತೆ ಮಾತ್ರಾ ಸರಿಯಾಗಲೇ ಇಲ್ಲ. ಈಗ ಸ್ವಲ್ಪ ಸ್ವಲ್ಪ ದುರಸ್ತಿಯಾಗುತ್ತಿದೆ. ಕಳೆದ ಬಾರಿ ಒಂಚೂರು ದುರಸ್ತಿ ಮಾಡಿದ್ದರೆ ,  ಈ ಬಾರಿ ಇನ್ನೊಂದು ಚೂರು ದುರಸ್ತಿಯಾಗುತ್ತಿದೆ. ಕಳೆದ ಬಾರಿ ಮಾಡಿರುವ ರಸ್ತೆ ಕಾಮಗಾರಿಯಲ್ಲಿ ಅಲ್ಲಲ್ಲಿ ಹೊಂಡ ಗುಂಡಿ...!. ತೇಪೆಯೂ ಈಗಿಲ್ಲ. ಮತ್ತೆ ಯಥಾ ಸ್ಥಿತಿಯ ರಸ್ತೆ. ಈ ಬಾರಿ ಹಾಗಾಗಬಾರದು ಎಂದು ಎಚ್ಚರಿಕೆ ವಹಿಸಲಾಯಿತು.  ಅದು ಸಾಮಾನ್ಯ ಜನರ ಕೆಲಸ ಅಲ್ಲದೇ ಇದ್ದರೂ ಅಂದು ಪ್ರಧಾನಿಗಳು ಹೇಳಿದ ಮಾತು ಇಲ್ಲಿ ಕಾರ್ಯರೂಪಕ್ಕೆ ಬಂದಿತ್ತು.  ಕಾಮಗಾರಿ ಮೇಲೆ ನಿಗಾ ಇರಿಸಲಾಗಿತ್ತು.

ಕಳೆದ 4 ವರ್ಷಗಳಿಂದ ಅಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದನೆ ಬರುತ್ತದೆ, ಪ್ರತ್ರಿಕ್ರಿಯೆ ಬರುತ್ತದೆ. ಏನಿಲ್ಲ ಎಂದರೂ ದೂರುಗಳ ವಿಚಾರಣೆಯಾಗುತ್ತದೆ, ಸಮಸ್ಯೆ ಇತ್ಯರ್ಥಕ್ಕೆ ಕ್ರಮವಾಗುತ್ತದೆ. ಯಾವಾಗಲೋ ಶಿರಾಡಿ ಘಾಟಿ ಬಗ್ಗೆ ಆನ್ ಲೈನ್ ನಲ್ಲಿ ನೀಡಿರುವ ದೂರಿಗೆ  ಉತ್ತರ  ಬಂದದ್ದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ...!

ಹಾಗೆಯೇ ಈ ಗ್ರಾಮೀಣ ರಸ್ತೆಯ ಕಾಮಗಾರಿಯಲ್ಲಿ  ಯಾಕೋ ಸ್ವಲ್ಪ ಸಂದೇಹ ಬಂತು. ಇಲ್ಲಿ ಯಾರೊಬ್ಬರೂ ಮಾತನಾಡುವುದು ಕಂಡಿಲ್ಲ. ಅಧಿಕಾರಿಗಳು ನೋಡೋಣ ನೋಡೋಣ ಎಂದರು. ಆದರೆ ಕಾಲ ಮಿಂಚುವ ಮುನ್ನ ಎಚ್ಚೆತ್ತುಕೊಂಡಾಗ ಮಾಧ್ಯಮಗಳು ಸಹಕಾರ ನೀಡಿದವು. ಅದರ ಜೊತೆಗೇ ಪ್ರಧಾನಿಗಳ ಕಾರ್ಯಾಲಯಕ್ಕೂ ಮಾಹಿತಿ ನೀಡಲಾಯಿತು. ಆ ಬಳಿಕದ ಸಂಗತಿ ನಿಜಕ್ಕೂ ಅಚ್ಚರಿ ತಂದಿದೆ. ಹೀಗೂ ನಡೆಯುತ್ತಾ ಅಂತ ಅನಿಸಿತು...!.

ಸ್ಥಳೀಯ ಜನನಾಯಕರಿಂದ ಉತ್ತರ, ಪ್ರತಿಕ್ರಿಯೆ ಬಾರದೇ ಇದ್ದರೂ ಪ್ರಧಾನಿ ಕಾರ್ಯಾಲಯದಿಂದ ತಕ್ಷಣದ ಪ್ರತಿಕ್ರಿಯೆ ಬಂತು. ರಾಜ್ಯ ಸರಕಾರದಿಂದ ಪ್ರತಿಕ್ರಿಯೆ ಬಂತು. ಈ ಬಗ್ಗೆ ರಾಜ್ಯದ ಇಲಾಖೆಗೂ ಮಾಹಿತಿ ಬಂತು. ತನಿಖೆಗೆ ನಡೆಸಿ ಸಮಂಜಸ ಉತ್ತರ ನೀಡುವಂತೆಯೂ ಸೂಚನೆ ಬಂತು.
ಆಗ ಅನೇಕರು ಮಾತನಾಡಿದ್ದು...  ಕಾಮಗಾರಿ ಇಷ್ಟಾದರೂ ಆಗುತ್ತಲ್ಲ...!, ಹೀಗೇ ಮಾತನಾಡಿದರೆ ಮುಂದೆ ಯಾವುದೇ ಗುತ್ತಿಗೆದಾರ ಸಿಗಲಾರ..!, ಗುತ್ತಿಗೆದಾರನಿಗೆ ತೀರಾ ಬೇಸರವಾಗಿದೆ...!, ಇವರು ಯಾವಾಗಲೂ ಕಾಟ ಕೊಡುತ್ತಾರೆ...! ಎಂದು. ಯಾರೊಬ್ಬರೂ ಸರಿಯಾದ ಕೆಲಸ ಮಾಡಬೇಕು, ನಮ್ಮದೇ ಹಣದಲ್ಲಿ ನಡೆಯುವ ನಮ್ಮೂರಿನ ಕೆಲಸ ಚೆನ್ನಾಗಿ ಆಗಬೇಕೆಂದು ಮಾತನಾಡಿದ್ದು ಕೇಳಿಸಲಿಲ್ಲ..!. ಯಾವುದೇ ಪೂರ್ವಾಗ್ರಹ ಇಲ್ಲದೆ ಈ ಮಾತು ಆಡಿದ್ದು ಕೇಳಿಸಲಿಲ್ಲ...!. ಮುಂದೆ 5 ವರ್ಷಗಳ ಕಾಲ ಈ ರಸ್ತೆಯ ನಿರ್ವಹಣೆ ಇದೆ. ಹೀಗಾಗಿ ತೊಂದರೆ ಇಲ್ಲ ಎನ್ನುವುದು ಸಮಜಾಯಿಷಿಕೆ. ಸರಿಯಾದ ಕೆಲಸ ಆಗದೇ ಇದ್ದರೆ 5 ವರ್ಷದ ನಂತರ ಯಾರು ಎಂಬ ಪ್ರಶ್ನೆ ಈಗಲೂ ಉಳಿದುಕೊಂಡಿದೆ. ಊರಿನ ಕಾಮಗಾರಿ ಸರಿಯಾಗಿ ನಡೆಯಬೇಕು ಎಂಬ ಧ್ವನಿ ಅಡಗಿಸುವ ಪ್ರಯತ್ನ ನಡೆಯಿತು ಎನ್ನುವುದು ವಿಷಾದ.

ಇದಾದ ನಂತರ ಮತ್ತಷ್ಟು ಆಸಕ್ತಿ ಇದೆ...
ಪ್ರಧಾನಿ ಕಾರ್ಯಾಲಯಕ್ಕೆ ಉತ್ತರ ನೀಡಬೇಕಾದ ಅನಿವಾರ್ಯತೆ. ಹೀಗಾಗಿ ಕಾಮಗಾರಿಯಲ್ಲಿ ಯಾವುದೇ ಲೋಪ ಇಲ್ಲ ಎಂಬ ವರದಿ ಸಿದ್ಧ ಮಾಡಿ ಅದಕ್ಕೆ ಬೇಕಾದ ತಾಂತ್ರಿಕವಾದ ವರದಿಯೂ ಸಿದ್ದವಾಗಿ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿಗೆ ಇಡೀ ಘಟನೆ ಮುಗಿಯುತ್ತದೆ. ಈ ಕಡೆ ಅಲ್ಲಲ್ಲಿ ಡಾಮರು ಏಳುವುದು, ಬಿರುಕುಗಳು ಕಂಡುಬರುತ್ತದೆ...!. 5 ವರ್ಷಗಳ ನಂತರ ಏನು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ....!.

ಈ ದೇಶ ಬದಲಾಗಲು ಇಷ್ಟು ಸಾಕು....!

ಇಲ್ಲಿ ಪ್ರಾಮಾಣಿಕವಾದ ಗುತ್ತಿಗೆದಾರನಿಗೂ ತೀರಾ ಮುಜುಗರ ಹಾಗೂ ನೋವಾಗುತ್ತದೆ ನಿಜ.  ಆ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಲು ಕಾರಣ ಏನು ? ಪಾರದರ್ಶಕತೆ ಏಕೆ ಇಲ್ಲವಾಗಿದ್ದು ಏಕೆ ?   ಏಕೆ ಯಾವುದೋ ಜನನಾಯಕರ ಹಿಂದೆ ಅಲೆದಾಟ ಮಾಡುತ್ತಾರೆ ? ಎಂಬಿತ್ಯಾದಿ ಪ್ರಶ್ನೆಗಳಿಗೂ ಉತ್ತರ ಇಲ್ಲವಾಗುತ್ತದೆ.

ಇದೆಲ್ಲಾ ಆದ ಬಳಿಕ ಅನಿಸಿದ್ದು ಇಷ್ಟು,
ಈ ದೇಶದಲ್ಲಿ ಬದಲಾವಣೆ ಬೇಕು ನಿಜ. ಆದರೆ ಆ ಬದಲಾವಣೆಗೆ ನಾವು ಒಗ್ಗಿಕೊಳ್ಳಲು ತಯಾರಿಲ್ಲ. ಸರಕಾರ ಬದಲಾವಣೆಯಾಗಬೇಕು ಎನ್ನುತ್ತಾರೆ , ಆದರೆ ಆ ಬದಲಾವಣೆಯ ಜೊತೆಗೆ ಜನಪರವಾದ, ಜನರೊಂದಿಗೆ ಸಂವಹನ ಮಾಡುವುದಕ್ಕೆ , ನಿಜವಾದ ಸಮಸ್ಯೆ ಏನು ಎಂದು ತಿಳಿದುಕೊಳ್ಳುವುದಕ್ಕೆ ಮುಂದಾಗದೇ ಇರುವುದು ಇನ್ನೊಂದು ವಿಪರ್ಯಾಸ.
 ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮೂಲಕ ಇಡೀ ದೇಶದಲ್ಲಿ ಬದಲಾವಣೆಯಾಗಬೇಕಾದರೆ ಅವರ ಆಶಯದಂತೆಯೇ ಗ್ರಾಮೀಣ ಭಾಗದಲ್ಲಿಯೂ ಕನಿಷ್ಟ ಶೇ.50 ರಷ್ಟಾದರೂ ಬದಲಾಗುವ ಮನಸ್ಥಿತಿ ಆ ಬದಲಾವಣೆ ಬಯಸುವ ಮಂದಿಯಲ್ಲೂ ಇರಬೇಕು. ಆಧುನಿಕ ವ್ಯವಸ್ಥೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಬೇಕು. ಗ್ರಾಮಿಣ ಭಾಗದ ಅಭಿವೃದ್ಧಿಯ, ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ ಇರಬೇಕು. ಕನಿಷ್ಟ , ಸಮಸ್ಯೆಯನ್ನು ಹೊತ್ತು ತರುವ ಜನರಿಗೆ ಸ್ಪಂದಿಸುವ, ಪ್ರತಿಕ್ರಿಯೆ ನೀಡುವ ಮನಸ್ಥಿತಿಯಾದರೂ ಇರಬೇಕು. ಅಲ್ಲದೇ ಇದ್ದರೆ ಆ ಹೆಸರಿನ ಮೂಲಕ ನಡೆಯುವ ಬದಲಾವಣೆಯೂ ಫಲ ನೀಡದು. ಇನ್ನೊಮ್ಮೆ ಇಡೀ ಜನರಿಗೆ ಭ್ರಮನಿರಸನವಷ್ಟೇ....!.

ಹೀಗಾದರೂ, ಇಷ್ಟಾದರೂ...

 "ಈ ದೇಶ ಬದಲಾಗುತ್ತದೆ, ಬದಲಾಗಲಿದೆ " ಎನ್ನುವ ಭರವಸೆ ಯಾವತ್ತೂ ಕಳೆದುಕೊಳ್ಳಬಾರದು ಎನ್ನುವ ಭಾಷಣ ಮತ್ತೆ ಮತ್ತೆ ಕೇಳುತ್ತಿದೆ....!. ಅಸಹಾಯಕತೆ ಇಲ್ಲ. ನೋವೂ ಇಲ್ಲ....
ಈಗಲೂ ಭರವಸೆ ಇದೆ..  ಕಾದು ನೋಡಬೇಕು...!.

ಹಳ್ಳಿಯಲ್ಲೇ ಆರಂಭವಾದ ಕೃಷಿ ವಸ್ತುಗಳ ಮೌಲ್ಯವರ್ಧನೆ.....


ಇತ್ತೀಚೆಗೆ ದಕ್ಷಿಣ ಕನ್ನಡ ಸೇರಿದಂತೆ ಸುಮಾರು 5 ಜಿಲ್ಲೆಗಳಲ್ಲಿ ಸಂಚಲನ ಮೂಡಿತು. ಕಾರಣ ಇಷ್ಟೇ, ಅಡಿಕೆಯನ್ನು ನಿಷೇಧ ಮಾಡಲಾಗುತ್ತದೆ ಎಂಬ ಗುಲ್ಲು. ಬಹುತೇಕ ಅಡಿಕೆ ಬೆಳೆಗಾರರು ಇದೇ ಸತ್ಯ ಎಂದು ನಂಬಿದರು. ಅದರಾಚೆಗೆ ಎಲ್ಲೂ ನೋಡಿಲ್ಲ. ವಾಸ್ತವವಾಗಿ ಅಡಿಕೆ ಬೆಳೆಯನ್ನು ನಿಷೇಧ ಮಾಡುವುದಕ್ಕೆ ಅಷ್ಟು ಸುಲಭ ಇಲ್ಲ. ಹಾಗೆಂದು ಸುಮ್ಮನೆ ಕೂರುವ ಸ್ಥಿತಿಯೂ ಇಲ್ಲ. ಆದರೆ ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಇಂದಿಗೂ ಹೆಚ್ಚಾಗಿ ಯೋಚನೆ ನಡೆಯಬೇಕಿದೆ. ಅಡಿಕೆ ಪರ್ಯಾಯ ಬಳಕೆಯತ್ತ ಚಿತ್ತ ಮಾಡಬೇಕಿದೆ. ಅದರ ಜೊತೆಗೆ ಉಪಬೆಳೆಯತ್ತಲೂ ಗಮನಹರಿಸಬೇಕಿದೆ.

ಹಾಗೆ ನೋಡಿದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇದೇ ಸಮಸ್ಯೆ. ಅಡಿಕೆಗೆ ನಿಷೇಧದ ಭೀತಿಯಾದರೆ ಉಳಿದ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗೆ ಧಾರಣೆ ಕುಸಿತ. ಇದೇ ಕಾರಣದಿಂದ ಮಾನಸಿಕ ಧೈರ್ಯ ಕಳೆದುಕೊಂಡು ರೈತರು ಕಾಣದ ಲೋಕಕ್ಕೆ ಸಾಗುತ್ತಿದ್ದಾರೆ. ಸುಮಾರು 3000 ಕ್ಕೂ ಅಧಿಕ ಸಂಖ್ಯೆಯ ಪಟ್ಟಿ ಈಗ ಇದೆ. ಇದಕ್ಕೆಲ್ಲಾ ಕಾರಣ ಕೇಳಿದರೆ ಹತ್ತಾರು ಪಟ್ಟಿ. ಇದೆಲ್ಲಾ ಸರಕಾರಗಳಿಗೆ ಅರ್ಥವೇ ಆಗುವುದಿಲ್ಲ. ರಾಜಕೀಯವೇ ಮೇಳೈಸುವ ಈ ಕಾಲದಲ್ಲಿ ರೈತನ ಭಾಷೆ ಅರ್ಥವಾಗದು.ರೈತನ ಬೆಳೆಗೆ ಧಾರಣೆಯೂ ಏರದು, ಆತನ ಸ್ಥಿತಿಯೂ ಉತ್ತಮವಾಗದು. ಅನ್ನ ನೀಡುವ ಮಣ್ಣು ಕೈಕೊಟ್ಟಾಗ ರೈತನಿಗೆ ನಿರಾಸೆ ಸಹಜ. ಬೆಳೆಸಿದ ಬೆಳೆಗೆ ಧಾರಣೆ ಸಿಗದೇ ಇದ್ದಾಗ, ಬೆಳೆದ ಬೆಳೆಯೇ ನಿಷೇಧವಾಗುವ ಸಂದರ್ಭ ಬಂದಾಗ ಆಕ್ರೋಶ, ಅಸಮಾಧಾನ ಸಹಜ. ಹಾಗಾಗಿ ಈಗ ನಡೆಯಬೇಕಿರುವುದು ಸಮಾಧಾನದಿಂದ ಭವಿಷ್ಯದ ಚಿಂತನೆ. ಪರ್ಯಾಯದ ಆಲೋಚನೆ, ಮೌಲ್ಯವರ್ಧನೆಯ ಯೋಚನೆ. ಅನೇಕ ವರ್ಷಗಳಿಂದ ಬೆಳೆದ ಬೆಳೆಯನ್ನು ಏಕಾಏಕಿ ಬದಲಾಯಿಸುವುದು ಕಷ್ಟದ ಮಾತು. ಹಾಗಿದ್ದರೂ ಮಾನಸಿಕ ಸ್ಥಿತಿ ಬದಲಾಯಿಸಬೇಕಿದೆ. ಆ ಮಣ್ಣಿಗೆ ಹೊಂದುವ ಬೆಳೆಯತ್ತ ಮನಸ್ಸು ಮಾಡಬೇಕಾಗುತ್ತದೆ. ಈ ಬಗ್ಗೆ ಯೋಚನೆ ಮಾಡಿ ಕಾರ್ಯಗತ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರೊಬ್ಬರ ಕತೆ ಇಲ್ಲಿದೆ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯೇ ಪ್ರಮುಖ.ಅದರಲ್ಲೂ ಅಡಿಕೆ ,ರಬ್ಬರ್, ಕಾಳುಮೆಣಸು ಕೃಷಿಯ ಭರಾಟೆ.ಆದರೆ ಧಾರಣೆಯಲ್ಲಿ  ಸದಾ ಏರುಪೇರು  ಮಾಮೂಲು.ಈ ಹಂತದಲ್ಲಿ ಪುತ್ತೂರಿನ ಬಲ್ನಾಡಿನ ಕೃಷಿಕ ವೆಂಕಟಕೃಷ್ಣ ಮನಸ್ಸು ಮಾಡಿದ್ದು ಗೇರುಕೃಷಿಯತ್ತ.ಈಗ ಇಳುವರಿ ಆರಂಭವಾಗಿದೆ.ಯಶಸ್ಸು ನೋಡಿ ಈಗ ಗೇರುಕೃಷಿಯನ್ನು ವಿಸ್ತರಣೆಯೂ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕಾವಿನಲ್ಲಿರುವ ಮಧುಮಲ್ಟಿಪಲ್ಸ್ ಎಂಬ ಸಂಸ್ಥೆಯ ಮಾಲಕರೂ ಆಗಿರುವ ವೆಂಕಟಕೃಷ್ಣ ಅವರು ಪುತ್ತೂರಿನ ಬಲ್ನಾಡಿನಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಸುಮಾರು 600 ಗೇರು ಗಿಡಗಳನ್ನು  ನೆಟ್ಟಿದ್ದರು.ಮನೆಯ ಹಿಂಬದಿಯ ಗುಡ್ಡದಲ್ಲಿ  ರಬ್ಬರ್ ಮಾತ್ರವೇ ಬೆಳೆಯಬಹುದಾದ ಪ್ರದೇಶ ಅದಾಗಿತ್ತು. ಒಂದಷ್ಟು ಭಾಗದಲ್ಲಿ  ರಬ್ಬರ್ ಕೂಡಾ ನಾಟಿ ಮಾಡಿದ್ದರು. ಅದರ ಜೊತೆಗೆ ಗೇರು ಗಿಡಗಳನ್ನೂ ಆಸಕ್ತಿಯಿಂದ ಕೃಷಿ ಮಾಡಿದ್ದರು. ಮಿಶ್ರ ಬೆಳೆಯ ಕಲ್ಪನೆಯನ್ನು  ಹೊಂದಿದ್ದ ವೆಂಕಟಕೃಷ್ಣ ಆರಂಭದಲ್ಲಿ  600 ಗೇರುಗಿಡಗಳನ್ನು  ಆಧುನಿಕ ರೀತಿಯಲ್ಲಿ 10 ಅಡಿ ಅಂತರದಲ್ಲಿ ಅಂದರೆ ಅಲ್ಟ್ರಾ ಡೆನ್ಸಿಟಿಯಲ್ಲಿ  ಗಿಡ ನೆಟ್ಟಿದ್ದರು. ಗಿಡದ ಬೆಳವಣಿಗೆ ನೋಡಿ ಖುಷಿಯಾದ ಬಳಿಕ ಮುಂದಿನ ವರ್ಷ ಮತ್ತೆ 300 ಗೇರು ಗಿಡಗಳನ್ನು  ಈ ವರ್ಷ 200 ಗೇರು ಗಿಡಗಳನ್ನು  ನೆಟ್ಟಿದ್ದಾರೆ.ಅಂದರೆ ಈಗ ಒಟ್ಟು 1100 ಗೇರು ಗಿಡಗಳು ಅವರ ತೋಟದಲ್ಲಿ  ಇದೆ. ಇಳುವರಿ ಆರಂಭವಾಗಿದೆ. ರಬ್ಬರ್, ಅಡಿಕೆ ಧಾರಣೆ ಕುಸಿತವಾದಾಗಲೂ ವೆಂಕಟಕೃಷ್ಣ ಅವರಿಗೆ ಕೃಷಿ ನಷ್ಟ ಎಂದೆನಿಸಲಿಲ್ಲ. ಗೇರು ಅವರಿಗೆ ಆಧಾರವಾಯಿತು.
ಇಲ್ಲಿ ಗಮನಿಸಬೇಕಾದ್ದು ಎಂದರೆ ವೆಂಕಟಕೃಷ್ಣ ಅವರು ತಮ್ಮದೇ ಉದ್ಯಮ ಹೊಂದಿದ್ದಾರೆ. ಅಲ್ಲಿ ಅವರು ಹೊಸ ಪ್ರಯೋಗ ಮಾಡಿದರು. ಗೇರು ಹಣ್ಣಿನ ಸೋಡಾ ತಯಾರು ಮಾಡಿದರು. ಗೇರು ಹಣ್ಣನ್ನು ಸಂಸ್ಕರಣೆ ಮಾಡಿ ಅದನ್ನು ಪೇಯವಾಗಿ ಬಳಸಿದರು.  ಈಗಾಗಲೇ ರಾಜ್ಯದ ವಿವಿದೆಡೆಯಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.ಕಳೆದ ವರ್ಷ ಆಸುಪಾಸಿನ ತೋಟಗಳಿಂದ ಗೇರು ಹಣ್ಣುಗಳನ್ನು ಖರೀದಿ ಮಾಡುತ್ತಿದ್ದರು.ಈ ವರ್ಷವೂ ತಮ್ಮದೇ ಜಮೀನಿನ ಗೇರು ಹಣ್ಣನ್ನು  ಬಳಕೆ ಮಾಡುವುದರ ಜೊತೆಗೆ ಖರೀದಿ ಕೂಡಾ ಮಾಡಿದ್ದಾರೆ. ಈಗ ಗೇರು ಹಣ್ಣು ಕೂಡಾ ಮೌಲ್ಯವರ್ಧನೆಯಾಗುತ್ತಿದೆ. ಈ ಮೂಲಕ ರೈತನಿಗೆ ಆದಾಯವೂ ಹೆಚ್ಚಾಗುತ್ತದೆ.
ಒಂದು ಪುಟ್ಟ ಹಳ್ಳಿಯನ್ನು ಗೇರುಹಣ್ಣಿನ ಸೋಡಾ ತಯಾರು ಆದಾಗ ಆ ಊರಿನ ಒಂದಷ್ಟು ಕೃಷಿಕರ ತೋಟದ ಹಣ್ಣುಗಳೂ ಖರೀದಿಯಾದವು. ಮಾರುಕಟ್ಟೆಯೂ ಉತ್ತಮವಾಯಿತು. ರೈತನ ಬದುಕಿಗೆ ಆಧಾರವಾಯಿತು.
ಬಿಜಾಪುರ ಜಿಲ್ಲೆಗೆ ಪ್ರವಾಸ ಹೋಗಿದ್ದಾಗ ಕೃಷಿಕರೊಬ್ಬರು ತಮ್ಮ ಅನುಭವ ಬಿಚ್ಚಿಡುತ್ತಾ ಅಲ್ಲಿನ 5 ಎಕರೆ ಜಾಗದಲ್ಲಿ ನಿಂಬೆ, ಮಾವು, ಚಿಕ್ಕು, ಬೆಟ್ಟದ ನೆಲ್ಲಿ, ತೆಂಗು, ಅಂಜೂರ, ಬಳವಕಾಯಿ, ಹಲಸು, ಸರ್ವಋತು ಮಾವು, ಜೋಳ ಮೊದಲಾದ ಕೃಷಿ ವೈವಿಧ್ಯಗಳಿವೆ. ಎಪ್ಪತ್ತು ನಿಂಬೆ ಮರಗಳಲ್ಲಿ ನಿರಂತರ ಇಳುವರಿಯೂ ಇದೆ ಅಂದರೆ ಆದಾಯವೂ ನಿರಂತರ.
ಇಂದು ಬಹುಪಾಲು ಕಡೆಯೂ ಆಗಬೇಕಾಗಿರುವುದು, ರೈತನ ಬದುಕಿಗೆ ಆಧಾರವಾಗಬೇಕಾದ್ದು ಇಂತಹ ಪುಟ್ಟ ಪುಟ್ಟ ದಾರಿಯ ಮೌಲ್ಯವರ್ಧನೆಗಳು, ಉಪಬೆಳೆಗಳು.  ಇತ್ತೀಚೆಗೆ ದಕ್ಷಿಣ ಕನ್ನಡ ಸೇರಿದಂತೆ ಸುಮಾರು 5 ಜಿಲ್ಲೆಗಳ ಕೃಷಿಕರ ಆತಂಕಕ್ಕೂ ಪರಿಹಾರವೂ ಇದೆ. ಅಡಿಕೆಯ ಮೌಲ್ಯವರ್ಧನೆಯ ಜೊತೆಗೆ ಉಪಬೆಳೆಯತ್ತ ದೃಷ್ಟಿ. ಈ ಕ್ಷಣವೇ ಬರುವ ಪ್ರಶ್ನೆ ಅಡಿಕೆ ಮೌಲ್ಯವರ್ಧನೆ ಹೇಗೆ?. ಇದಕ್ಕೆ ವಿಟ್ಲ ಬಳಿಯ ಬದನಾಜೆ ಶಂಕರ ಭಟ್ ಅವರು ದಾರಿ ತೋರುತ್ತಾರೆ, ಶಿವಮೊಗ್ಗದ ನಿವೇದನ್ ಪರಿಹಾರ ಸೂಚಿಸುತ್ತಾರೆ. ಬೆಳ್ತಂಗಡಿಯಲ್ಲಿ ತಯಾರಾಗುವ ಅಡಿಕೆ ಸಿಪ್ಪೆಯ ಹೊಗೆಬತ್ತಿ ಮಾದರಿಯಾಗುತ್ತದೆ. ಹೀಗಾಗಿ ದಾರಿ ಕಾಣದೇ ಇರುವ ಪ್ರಮೇಯ ಈಗಿಲ್ಲ. ಹಾಗೆಂದು ಅಡಿಕೆ ಏಕಾಏಕಿ ನಿಷೇಧವಾಗದು, ನಿಷೇಧದ ಭೀತಿಯೂ ಇಲ್ಲ. ಸರಕಾರವೂ ನಿಷೇಧ ಮಾಡುತ್ತದೆ ಎಂದೂ ಹೇಳಿಲ್ಲ ಎಂದು ಸುಮ್ಮನೆ ಕೂರುವ ಹಾಗಿಲ್ಲ. ಹುಡುಕಾಟ, ಪರ್ಯಾಯದ ಬಗ್ಗೆ ನಿರಂತರ ಚರ್ಚೆಯಾಗಲೇಬೇಕಿದೆ.


( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )26 ಫೆಬ್ರವರಿ 2018

ಕಾಡುಪ್ರಾಣಿ ಹಾವಳಿ ತಡೆಯ ಕೃಷಿಕನ ಸಂಶೋಧನೆಗೆ ಇಲಾಖೆಯ ಮನ್ನಣೆ...


ಹಂದಿಗಳ ವಿಪರೀತ ಕಾಟ, ಕಾಡುಕೋಣದಿಂದ ಕೃಷಿಯೇ ನಾಶ, ಆನೆಗಳ ಧಾಳಿಯಿಂದ ಭಯಗೊಂಡ ಕೃಷಿಕ.... ಪರಿಹಾರ ಇಲ್ಲದ ಕೃಷಿಕ...!. ಗ್ರಾಮೀಣ ಭಾಗದ ಕೃಷಿಕರ ಈ ಗೋಳಿಗೆ ಉತ್ತರ ಎಲ್ಲೂ ಇಲ್ಲ. ಇಲಾಖೆಯೂ ಕೈಚೆಲ್ಲಿ ಕುಳಿತಿರುತ್ತದೆ. ಆದರೆ ಕೃಷಿಕನೇ ಸಂಶೋಧಿಸಿದ ತಂತ್ರಜ್ಞಾನಕ್ಕೆ ಈಗ ಇಲಾಖೆಯೇ ಭೇಷ್ ಎಂದಿದೆ. ಮನ್ನಣೆ ನೀಡಿದೆ.


ಇಡೀ ದೇಶದಲ್ಲಿ ಗಮನಿಸಿದರೆ ಸುಮಾರು 400 ರಿಂದ 500 ಕೋಟಿ ರೂಪಾಯಿಯ ಕೃಷಿ ವಸ್ತುಗಳು ಕೇವಲ ಕಾಡು ಪ್ರಾಣಿಯ ಹಾವಳಿಯಿಂದ ನಾಶವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ವಿಪರೀತ. ಇಲ್ಲಿ ಕೃಷಿಗೆ ಕಾಡು ಪ್ರಾಣಿಗಳ ಹಾವಳಿಯಾದರೆ ಒಂದು ಕಡೆಯಾದರೆ ಪರಿಹಾರ ಕಾಣದೆ ಕಂಗಾಲಾದ ಕೃಷಿಕರು ಮತ್ತೊಂದು ಕಡೆ. ಹಾಗಂತ ಕಾಡು ಪ್ರಾಣಿಗಳನ್ನು ಕೃಷಿಕರು ಕೊಲ್ಲುವ ಹಾಗಿಲ್ಲ. ಅದೂ ಪರಿಸರದ ಒಂದು ಭಾಗ. ಕಾಡು ಪ್ರಾಣಿಯೂ ಉಳಿಯಬೇಕು, ಕೃಷಿಯೂ ಉಳಿಯಬೇಕು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೃಷಿಕರು ಸೋತು ಹೋದದ್ದೇ ಹೆಚ್ಚು. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿ ವಿವಿಧ ಪ್ರಯತ್ನ ಮಾಡಿ ಗೆಲುವು ಸಾಧಿಸಿದ ಕೃಷಿಕರು ಕಡಿಮೆ. ಅಂತಹ ಅಪರೂಪದ ಕೃಷಿಕ, ಸವಾಲನ್ನು ಸ್ವೀಕರಿಸಿದ ಕೃಷಿಕ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಸಮೀಪದ ಕೈಪಂಗಳ ರಾಜಗೋಪಾಲ ಭಟ್. ಈಗ ಇವರ ಪ್ರಯತ್ನ ಯಶಸ್ಸು ಕಂಡು ಕೇರಳ ಅರಣ್ಯ ಇಲಾಖೆಯೇ ಈಗ ಪುರಸ್ಕಾರ ನೀಡಿದೆ. ಇಲಾಖೆಯೇ ಈ ತಂತ್ರ ಬಳಸಿದೆ.

ಏನಿದು ಪ್ರಯತ್ನ ?
ರಾಜಗೋಪಾಲ ಕೈಪಂಗಳ ಇಲೆಕ್ಟ್ರಾನಿಕ್ಸ್ ಪದವಿಧಾರರಾಗಿದ್ದು, ಕೆಲವು ವರ್ಷ ರಾಷ್ಟ್ರದ ವಿವಿಧಡೆ ಮತ್ತು ವಿದೇಶದಲ್ಲಿ ಮಾರುಕಟ್ಟೆ ವಿಭಾಗಕ್ಕೆ ಸಂಬಂಧಿಸಿ ದುಡಿದಿದ್ದರು. ಉದ್ಯೋಗಕ್ಕೆ ತಿಲಾಂಜಲಿ ನೀಡಿ ಊರಿಗೆ ಮರಳಿ ಕೃಷಿ ಮಾಡುತ್ತಿರುವ ಇವರು ಸದಾ ಹೊಸತು ಹಾಗೂ ಸವಾಲನ್ನು ಸ್ವೀಕರಿಸುವ ಗುಣ ಉಳ್ಳವರು.
ಕೃಷಿ ಗದ್ದೆ-ತೋಟಗಳಿಗೆ ಕಾಡು ಪ್ರಾಣಿಗಳು ನುಗ್ಗಿ ಕೃಷಿ ಹಾಳುಮಾಡುವ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಎಲ್.ಇ.ಡಿ. ಬಲ್ಬ್ ಉಪಕರಣದ ಮೂಲಕ ಯಶಸ್ಸು ಕಂಡಿರುವ ರಾಜಗೋಪಾಲ ಭಟ್ ಕೈಪಂಗಳ ತಮ್ಮ ಅನುಭವವನ್ನು ಅತ್ಯಂತ ಆಸಕ್ತಿಯಿಂದ ವಿವರಣೆ ನೀಡುತ್ತಾರೆ.
ಕಾಡಿನಲ್ಲಿ ನೀರು, ಆಹಾರಗಳು ಲಭಿಸದಿರುವಾಗ ಅರಣ್ಯದಂಚಿನ ಪ್ರದೇಶದ ಕೃಷಿಭೂಮಿಗೆ ಧಾಳಿಯಿಡುವ ಪ್ರಾಣಿಗಳಿಂದ ಕೃಷಿಭೂಮಿಯನ್ನು ರಕ್ಷಿಸಲು ಅನ್ಯಮಾರ್ಗವಿಲ್ಲದೇ ಈ ಪ್ರಯೋಗವನ್ನು ನಡೆಸಬೇಕಾಯಿತು ಎನ್ನುತ್ತಾರೆ.
ಕೃಷಿ ತೋಟಗಳಿಗೆ ನುಗ್ಗುವ ಹಂದಿ, ಕಾಡಾನೆ ಮೊದಲಾದವುಗಳು ಅಧಿಕ ಪ್ರಭೆ ಬೀರುವ ಬೆಳಕಿಗೆ ಹೆದರಿ ಹಿಂದಕ್ಕೆ ಓಡುತ್ತದೆ. ಈ ಬೆಳಕಿಗೆ ತಮ್ಮ ದಾರಿಯನ್ನು ಬದಲಿಸುತ್ತದೆ. ಆದರೆ ಬೆಳಕನ್ನು ಎತ್ತರದಲ್ಲಿ ಹಾಕಿದರೆ ಅದು ಪ್ರಯೋಜನ ಸಿಗದು. ಈ ಪ್ರಖರ ಬೆಳಕು ಪ್ರಾಣಿಗಳ ಕಣ್ಣಿಗೆ ನೇರವಾಗಿ ಸಿಗುವಂತೆ ಆಗಬೇಕು. ಈ ಹಿಂದೆ ಮಂಗನ ಓಡಿಸಲು ಲೇಸರ್ ಬೆಳಕು ಉಪಯೋಗ ಮಾಡುತ್ತಿದ್ದರು. ಅದೇ ಮಾದರಿಯಲ್ಲಿ ಎಲ್‍ಇಡಿ ಕೂಡಾ ಬಳಕೆಯಾಗುತ್ತದೆ.
ಸುಮಾರು ಎರಡೂವರೆ ವರ್ಷಗಳಿಂದ ಕ್ರಿಯಾಶೀಲ ತಂತ್ರಜ್ಞಾನಗಳ ಅಳವಡಿಕೆಗೆ ಪ್ರಯತ್ನಿಸಿದ ಕೈಪಂಗಳದ ರಾಜಗೋಪಾಲ ಭಟ್ ಈಗ ಉಪಕರಣವನ್ನು ತಯಾರಿಸಿದ್ದಾರೆ.  ಕಾಡು ಹಂದಿಗಳು ಸಾಮಾನ್ಯವಾಗಿ ತಲೆಬಗ್ಗಿಸಿ ಲಕ್ಷ್ಯದತ್ತ ಮುನ್ನುಗುತ್ತಿರುವ ಕಾರಣ 29 ಸೆಂಟಿಮೀಟರ್ ಎತ್ತರದಲ್ಲಿ ನಿಲ್ಲುವಂತೆ ನಾಲ್ಕೂದಿಕ್ಕುಗಳಿಗೂ ಬೆಳಕು ಬೀಳುವ ಪೋಕಸ್ ಆಗುವ ಬಲ್ಬ್ ಇರುವಂತೆ ಈ ಬಲ್ಬ್ ಇಡಬೇಕಾಗುತ್ತದೆ. ರಾತ್ರಿ ಇಡೀ ಬೆಳಕು ಹರಿಯುತ್ತಲೇ ಇರಬೇಕು. 50 ಮೀಟರ್‍ಗಳಷ್ಟು ಪ್ರಭೆ ನೀಡುವ ಈ ಲೈಟ್‍ಗಳನ್ನು ತಮ್ಮ ಅಡಿಕೆ ತೆಂಗು, ಬಾಳೆ ಸಹಿತ ಇತರ ಕೃಷಿ ಭೂಮಿಯ ಸುತ್ತಲೂ ಕಳೆದ ಒಂದೂವರೆ ವರ್ಷಗಳಿಂದ ಅಳವಡಿಸಿ ಯಶಸ್ವಿಯಾಗುತ್ತಿದೆ. ಇಲ್ಲಿ ಪ್ರಾಣಿಗಳ ಕಣ್ಣಿನ ಅಂದಾಜು ಮೂಲಕ ಬಲ್ಭ್ ಅಳವಡಿಕೆ ಮಾಡಬೇಕು ಎನ್ನುವ ರಾಜಗೋಪಾಲ ಭಟ್ 8 ಅಡಿ ಎತ್ತರದಲ್ಲಿ ಕಾಡಾನೆಗಳಿಗೆ 7 ಅಡಿ ಎತ್ತರದಲ್ಲಿ ಕಾಡುಕೋಣಗಳ ಹಾವಳಿ ತಡೆಗೆ ಬಲ್ಬ್ ಅಳವಡಿಕೆ ಮಾಡಬೇಕಾಗುತ್ತದೆ ಎಂದು ವಿವರಣೆ ನೀಡುತ್ತಾರೆ.
ಇವರ ಈ ತಂತ್ರಜ್ಞಾನ ಪ್ರಚಾರ ಪಡೆಯುತ್ತಲೇ ಕೇರಳದ ಅರಣ್ಯ ಇಲಾಖೆಯು ಆನೆಗಳ ಹಾವಳಿ ತಡೆಗೆ ಪ್ರಯತ್ನ ಮಾಡಿತು.ಯಶಸ್ಸು ಕಂಡಿತು, ಇಂದು ಅರಣ್ಯ ಇಲಾಖೆಯೇ ಈ ಕೃಷಿಕನಿಗೆ ಭೇಷ್ ಎಂದಿದೆ. ಇದೆಲ್ಲಾ ಒಬ್ಬ ಕೃಷಿಕನಿಗೆ ಹೆಮ್ಮೆಯಾಗುವುದು  ಒಂದು ಕಡೆಯಾದರೆ ಸಮಸ್ತ ಕೃಷಿಕರಿಗೂ ಹೆಮ್ಮೆಯ ಸಂಗತಿ.
ಇಲ್ಲೊಂದು ವಿಶೇಷ ಇದೆ, ಈ ಹೊಸದಾದ ಸಂಶೋಧನೆ ತನ್ನ ಸ್ವತ್ತಲ್ಲ ಕೃಷಿಕರದ್ದೇ ಸೊತ್ತೆಂದು ಹೇಳುವ ರಾಜಗೋಪಾಲ ಭಟ್ ಯಾರಿಗೆ ಬೇಕಾದರೆ ಈ ತಂತ್ರವನ್ನು ಹೇಳಿಕೊಡುತ್ತಾರೆ. ಹೀಗಾಗಿ ಸಮಸ್ತ ಕೃಷಿಕರಿಗೂ ಮಾದರಿಯಾಗಿದ್ದಾರೆ. ಯಾರು ಬೇಕಾದರೂ ಸಂಪರ್ಕ ಮಾಡಿದರೆ ಮಾಹಿತಿ ಕೊಡುತ್ತೇನೆ ಎಂದೂ ಹೇಳುತ್ತಾರೆ.

ಅನೇಕ ಸಂದರ್ಭದಲ್ಲಿ ಕೃಷಿಕರು ಸೋಲುವುದಕ್ಕಿಂತ ವ್ಯವಸ್ಥೆ ಸೋಲುವಂತೆ ಮಾಡುತ್ತದೆ. ಸವಾಲುಗಳನ್ನು ಸ್ವೀಕರಿಸಲು ಕಷ್ಟವಾಗಿ , ಪರಿಹಾರ ಕಾಣದೇ ಕೃಷಿಯೇ ನಷ್ಟ ಎನ್ನುವುದು  ಕಾಣುತ್ತದೆ. ಯುವ ಕೃಷಿಸಮುದಾಯಕ್ಕೆ ಇದೇ ಕಾಣಿಸುತ್ತದೆ. ಆದರೆ ಸವಾಲುಗಳನ್ನು ಸ್ವೀಕರಿಸಿ ಸಂಶೋಧಿಸಿ, ಸತತ ಪ್ರಯತ್ನ ಮಾಡಿ ಇಡೀ ಕೃಷಿಕ ಸಮುದಾಯಕ್ಕೆ ಸಿಗುವ ಇಂತಹ ಕೊಡುಗೆ ಮತ್ತೆ ಭರವಸೆ ಮೂಡಿಸುತ್ತದೆ. ಹೀಗಾಗಿ ರಾಜಗೋಪಾಲ ಕೈಪಂಗಳ ಭಿನ್ನ ಕೃಷಿಕರಾಗಿ ಕಾಣುತ್ತಾರೆ. ಕೃಷಿಗೆ, ಕೃಷಿಕರಿಗೆ ಭರವಸೆ ಮೂಡಿಸುವ ಕೃಷಿರಾಗಿ ಕಾಣುತ್ತಾರೆ.
(ರಾಜಗೋಪಾಲ ಭಟ್ ಸಂಪರ್ಕ - 09061674679 )


( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

28 ಜನವರಿ 2018

ಉದ್ಯೋಗಗಳ ಹುಡುಕಾಟದ ಹುಡುಗರಿಗೆ ಕೃಷಿ ಹುಡುಗಾಟ..!
ಕೃಷಿ ಲಾಭದಾಯಕ ಅಲ್ಲ ಅಂತ ನಾನು ಓದಿದ್ದೆ. ಅನೇಕ ಹಿರಿಯರೂ ಹೇಳುವುದನ್ನು  ಕೇಳಿದ್ದೆ. ಆದರೆ ಈಗ ತಿಳಿಯಿತು, ಕೃಷಿಯೂ ಒಂದು ಲಾಭದಾಯಕ, ಅದಕ್ಕಿಂತಲೂ ಹೆಚ್ಚು ಖುಷಿ ಕೊಡುತ್ತದೆ, ನೆಮ್ಮದಿ ನೀಡುತ್ತದೆ ಎನ್ನುವುದು  ಅರಿಯುವ ಹೊತ್ತು ತಡವಾಯಿತು ಎಂದು ಶ್ಯಾಮ ಪ್ರಕಾಶ್ ಹೇಳುವಾಗ ಇಡೀ ಕೃಷಿ ಬದುಕಿನ , ಕೃಷಿ ಕ್ಷೇತ್ರದ ಕತೆ ತೆರೆದಿಟ್ಟಿತು.
 ಒಂದೇ ಒಂದು ಕಡೆ ಕೃಷಿಯೂ ಒಂದು ಲಾಭದಾಯಕ ಎನ್ನುವುದನ್ನು  ನಿಜಾರ್ಥಲ್ಲಿ ತಿಳಿಸುವ ಕೆಲಸ ಆಗದೇ ಇರುವುದು ಕಂಡಿತು.
ಇದೇ ಕಾರಣದಿಂದ ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೇ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರು ಕೆಲವೇ ಕೆಲವು ಮಂದಿ. ಅವರೂ ಈಗ ಮಾದರಿಯಾಗುತ್ತಿದ್ದಾರೆ. ಈ ಯಶೋಗಾಥೆಗಳ ಕಡೆಗೆ ಬೆಳಕು ಏಕೆ ಚೆಲ್ಲಲಾಗುತ್ತಿಲ್ಲ. ರೈತರ ಯಶೋಗಾಥೆ ಧಾರಾವಾಹಿಗಳು ಏಕೆ ಆಗಬಾರದು ? ಧಾರಾವಾಹಿಗಳ ರೂಪದಲ್ಲಿ ರೈತರ ಯಶೋಗಾಥೆಗಳನ್ನೇ ತೋರಿಸಿ ಅವರಲ್ಲಿ ಸ್ಥೈರ್ಯ ತುಂಬಬಾರದು ಎಂಬ ಪ್ರಶ್ನೆ ಇದೆ. ಏಕೆಂದರೆ ಇಂದಿಗೂ ಉದ್ಯೋಗ ಬಿಟ್ಟು ಕೃಷಿ ಮಾಡುವ ನೂರಾರು ಯುವಕರು ಇದ್ದಾರೆ, ಇವರಿಗೆ ಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಏಕೆಂದರೆ ರೈತರು ಪತ್ರಿಕೆಗಳಿಂದ, ಟಿ.ವಿ. ವಾಹಿನಿಗಳಿಂದ  ನಿರೀಕ್ಷಿಸುವುದು ಕೂಡಾ ಇದೇ ಸಂಗತಿಯನ್ನು. ಯುವಕರಿಗೆ ಧೈರ್ಯ ಕೊಡಬಲ್ಲ ಅನೇಕ ಘಟನೆಗಳು ಇವೆ ಅಂತಹವುಗಳು ಸ್ಫೂರ್ತಿಯಾಗಬೇಕಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಕಾಮನಹಳ್ಳಿಯ ಯುವ ರೈತ ಮುತ್ತಣ್ಣ ಅವರೂ ಒಬ್ಬರು. ಇವರ ಕೃಷಿ ಯಶೋಗಾಥೆ ಎಲ್ಲಾ ರೈತರಿಗೂ ಮಾದರಿ. ಕುರಿ ಕಾಯುತ್ತಾ ನೂರಾರು ಕಿಮೀ ಸುತ್ತುತ್ತಿದ್ದ ಇವರು ಕುರಿ ಮಾರಾಟ ಮಾಡುತ್ತಾ ಉಳಿತಾಯ ಮಾಡುತ್ತಾ ಬಂಜರು ಭೂಮಿಯನ್ನು ಖರೀದಿಸಿದರು. ಬಳಿಕ ಈ ಭೂಮಿಯಲ್ಲಿ ಗೋವಿನಜೋಳ, ಹಲಸಂದಿ, ರಾಗಿ, ಉದ್ದು ಮುಂತಾದ ಬೆಳೆಗಳನ್ನು ಬೆಳೆದರು. ಧೈರ್ಯ ತಂದುಕೊಂಡರು. ಬಂಜರು ಭೂಮಿ ಹದವಾದ ಬಳಿಕ ಮಾವಿನ ಕೃಷಿ ಮಾಡಿದರು. ಅಲ್ಲಿಂದ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಬಂಜರು ಭೂಮಿ ಬಂಗಾರದ ಭೂಮಿಯಾಯಿತು. ಅಲ್ಲಿಂದ ಕೃಷಿಯನ್ನು ಬದಲಾಯಿಸುತ್ತಾ, ಇದ್ದ ಕೃಷಿ ಬೆಳೆಸಿಕೊಳ್ಳುತ್ತಾ ಸಾಗಿದ ಮುತ್ತಣ್ಣ ಇಂದು ಲಕ್ಷ ಸಂಪಾದನೆ ಮಾಡುತ್ತಾರೆ. ಅಂದರೆ ಕುರಿ ಕಾಯುವಲ್ಲಿಂದ ತನ್ನ ಧೈರ್ಯ ಹಾಗೂ ಪ್ರೋತ್ಸಾಹದಿಂದ ಯಶಸ್ಸು ಕಂಡರು.
28 ವರ್ಷದ ಸಾಫ್ಟ್‍ವೇರ್ ಉದ್ಯೋಗಿ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಿಗುಡಿ ಗ್ರಾಮದ ಸೌರಭ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಹೊಲವೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಂದು ಎಳವೆಯಲ್ಲಿ ಹಿರಿಯರ ಜೊತೆ ಹೊಲದಲ್ಲಿ ಓಡಾಡಿದ ನೆನಪು ತ್ತೆ ಮಣ್ಣಿನ ಕಡೆಗೆ ಸೆಳೆಯಿತು. ಹಣಕ್ಕಾಗಿ ಕೃಷಿಯಲ್ಲ, ಬದುಕಿಗಾಗಿ ಕೃಷಿ ಎನ್ನುವುದನ್ನು ರೈತರಿಗೆ ಮನದಟ್ಟು ಮಾಡಬೇಕೆಂದು ನಿಶ್ಚಿಯಿಸಿಯೇ ಕೃಷಿ ಆರಂಭಿಸಿ ಯಶಸ್ಸು ಕಂಡರು.

ಕೃಷಿಯಿಂದ ಯುವ ಸಮೂಹ ವಿಮುಖವಾಗುತ್ತಿದೆ ಎನ್ನುವ ಸಾರ್ವತ್ರಿಕ ಅಭಿಪ್ರಾಯ ಅನೇಕ ಬಾರಿ ಸುಳ್ಳೂ ಆದದ್ದಿದೆ. ಬಹುತೇಕ ಸಂದರ್ಭ ಕೃಷಿಯೇ ಕಷ್ಟ ಎನ್ನುವ ಸಾರ್ವತ್ರಿಕ ಅಭಿಪ್ರಾಯವೇ ಉದ್ಯೋಗದ ಹುಡುಕಾಟದಲ್ಲಿ ನಮ್ಮೂರಿನ ಹುಡುಗರಿಗೆ ಕೃಷಿ ಉದ್ಯೋಗವೇ ಅಲ್ಲ ಎನಿಸಿಬಿಡುತ್ತದೆ. ಇತ್ತೀಚೆಗೆ ಕೃಷಿ ಕಡೆಗೆ ಆಸಕ್ತಿ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆ ನಡೆಸಿದ ಸಮೀಕ್ಷೆ ಒಂದರಲ್ಲಿ ಸುಮಾರು 1200 ಮಂದಿ ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಕೃಷಿ ಕಡೆಗೆ ಬಂದವರಿದ್ದಾರೆ. ಇನ್ನೂ ಹಲವಾರು ಆಸಕ್ತರಿದ್ದಾರೆ. ಓದಿದ ಅನೇಕರು ಈಗಲೂ ಕೃಷಿ ಕಡೆಗೆ ಆಸಕ್ತರಾಗಿದ್ದಾರೆ. ಇದು ಕೃಷಿಗೆ ಮತ್ತೊಂದು ಮೆಟ್ಟಿಲಾಗುತ್ತಿದೆ. ಈಗ ಕೃಷಿ ಒಂದು ಉದ್ಯೋಗ, ಖುಷಿ ನೀಡುವ ಕಾಯಕ ಎಂದು ಮನವರಿಕೆ ಮಾಡುವ ಕೆಲಸ ಆಗಬೇಕಿದೆ. ಇದಕ್ಕಾಗಿ ಶ್ಯಾಮ ಪ್ರಕಾಶ್ ಹೇಳುವ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

04 ಜನವರಿ 2018

ಬತ್ತಿ ಹೋದ ನದಿ ಮತ್ತೆ ಹರಿದ ಕತೆ....
ಬೆಂಗಳೂರಿನ ಆ ಪ್ರದೇಶದ ಕೊಳವೆಬಾವಿಯಲ್ಲಿ 200 ಅಡಿಯಲ್ಲಿದ್ದ ನೀರು ಬರಿದಾಗಿದೆ. ಈಗ 1 ಸಾವಿರ ಅಡಿ ಕೊರೆದರೂ ನೀರು ಅಷ್ಟಕ್ಕಷ್ಟೆ....!, ಎಂದು ರಜನಿ ಹೇಳುವಾಗ ಮನಸ್ಸಿನಲ್ಲಿ ಆತಂಕ ಇತ್ತು. ಅನೇಕ ವರ್ಷಗಳಿಂದ ಕೊಳವೆಬಾವಿಯಿಂದ ನೀರು ತೆಗೆದಿದ್ದೇ ಹೊರತು ತುಂಬಿಸಿ ಗೊತ್ತಿರಲಿಲ್ಲ ಎನ್ನುವಾಗ ವಿಷಾದ ಇತ್ತು.

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಕೇಂದ್ರದ ಅಧಿಕಾರಿಯೊಬ್ಬರು, "ನದಿ ನೀರು ಬರಿದಾದರೆ ಭಯ ಇಲ್ಲ, ನಮ್ಮಲ್ಲಿ 700 ಕೊಳವೆಬಾವಿ ಇದೆ" ಎನ್ನುವಾಗ ಧೈರ್ಯ ಇತ್ತು. ಆದರೆ ನಗರದ ಪ್ರತೀ ಮನೆಯಲ್ಲೂ ಇರುವ ಕೊಳವೆಬಾವಿಗೆ, ಬಾವಿ ಜಲಮರುಪೂರಣ ಕಡ್ಡಾಯ ಮಾಡುತ್ತೇವೆ ಎನ್ನುವ ಒಂದೇ ಒಂದು ಮಾತೂ ಹೊರಡಲಿಲ್ಲ..!. ಇಂದಿನ ವಾಸ್ತವ ಸ್ಥಿತಿ ಇದು. ಮಣ್ಣಿನಲ್ಲಿರುವ ನೀರು ಬರಿದಾಗಿ, ಆಳಕ್ಕೆ ಬಗೆದು ತೆಗೆಯುವ ಕೆಲಸದ ನಡುವೆಯೂ ಎಲ್ಲೋ ಅಲ್ಲಿ ಇಲ್ಲಿ ನೀರು ಉಳಿಸುವ, ಭೂಮಿ ಹಸನು ಮಾಡುವ  ಕಾರ್ಯವಾಗುತ್ತದೆ. ಅಂತಹ ಯಶೋಗಾಥೆಯೇ ಇಲ್ಲಿ ಮಾದರಿಯಾಗಬೇಕು. ನೀರಿಗಾಗಿ ನಡೆಯುವ, ಕೃಷಿ ಉಳಿಸಲು ನಡೆಯುವ ಕದನ ನಿಲ್ಲಬೇಕು.

ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ.18 ರಷ್ಟು ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಕೇವಲ ಶೇಕಡಾ 4 ಮಾತ್ರಾ. ಹೀಗಿರುವಾಗ ನೀರು ಉಳಿಸಲೇಬೇಕಿದೆ. ಏಕೆಂದರೆ ಭಾರತದ ಆರ್ಥಿಕತೆ ಕೃಷಿಯನ್ನೇ ಅವಲಂಬಿಸಿದೆ. ಈಗ ಕಾಡುವ ನೀರಿನ ಕೊರತೆ, ಹಾಗೂ ಕಾಡುವ ಬರಗಾಲ, ಇಂದು ಪರಿಸ್ಥಿತಿಯನ್ನು ವಿಕೋಪಕ್ಕೆ ತಂದು ನಿಲ್ಲಿಸಿದೆ. ಇದು ದೇಶದ ಆರ್ಥಿಕ ಪ್ರಗತಿ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲೇ ಗಮನಿಸಿದರೆ ಸುಮಾರು 2500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ. ಇಂತಹ ಸಮಸ್ಯೆ ಗಮನಿಸಿಯೇ ದೇಶದ ಕೆಲವು ಸ್ವಯಂಸೇವಾ ಸಂಘಟನೆಗಳು ನೀರು ಉಳಿಸುವ ಕಾರ್ಯಕ್ಕೆ, ಇಡೀ ಗ್ರಾಮವನ್ನು ಜಾಗೃತಿ ಮಾಡುವ ಕೆಲಸ ಮಾಡುತ್ತಿದೆ. ಇಂತಹ ಕಾರ್ಯದಲ್ಲಿ ರಾಜಸ್ತಾನದ ಹಳ್ಳಿಯೊಂದು ನಮಗೂ ಮಾದರಿ ಎನಿಸಿದೆ.

ರಾಜಸ್ತಾನದ ಸಣ್ಣ ಗ್ರಾಮ ನಾಂಡೂ. ಕೃಷಿ ಇಲ್ಲಿನ ಜನರಿಗೆ ಪ್ರಧಾನ ಕಸುಬು. ಈ ಗ್ರಾಮದಲ್ಲಿ ಹರಿಯುವ ನಾಂಡೂವಾಲೀ ಎಂಬ ನದಿಯೊಂದು ಬತ್ತಿಹೋಗಿತ್ತು. ಹೀಗಾಗಿ ಇಲ್ಲಿನ ಕೃಷಿಕರಿಗೆ ಕೃಷಿಯೇ ಕಷ್ಟವಾಯಿತು. ನೀರಿಗಾಗಿ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಕೆಲವು ಮಂದಿ ಕೃಷಿ ಬಿಟ್ಟು ಬದುಕಿಗಾಗಿ ಬೇರೆ ಕಡೆಗೆ ತೆರಳಬೇಕಾಯಿತು. ಆದರೆ ಅಲ್ಲಿದ್ದ ಕೆಲವು ಕೃಷಿಕರು ಸರಕಾರದ ಸಹಾಯಕ್ಕೆ ಕಾಯದೆ ತಾವೇ ಪ್ರಯತ್ನ ನಡೆಸಿದರು, ನದಿ ಮತ್ತೆ ಹರಿಯುವಂತೆ ಮಾಡಲು ಪ್ರಯತ್ನ ಆರಂಭಿಸಿದರು. ಇದರ ಫಲವಾಗಿ ನದಿ ಮತ್ತೆ ಹರಿಯಿತು, ಕೆರೆ, ಬಾವಿ ತುಂಬಿದವು ಸಮೃದ್ಧ ಕೃಷಿ ಸಾಧ್ಯವಾಯಿತು. ನೀರಿಗಾಗಿ ಗಲಾಟೆಗಳೂ ಕಡಿಮೆಯಾದರೂ. ದೂರ ಹೋಗಿದ್ದ ಕೃಷಿಕರು ಮತ್ತೆ ಮಣ್ಣಿಗೆ ಬಂದರು. ರಾಜಸ್ತಾನದಲ್ಲಿ ಲಾಪೆÇೀಡಿಯಾ ಎಂಬ ಹಳ್ಳಿಯಿದೆ. ಇಲ್ಲಿ ಮೂರ್ನಾಲ್ಕು ವರ್ಷ 400 ಮಿ.ಮೀ. ಗಿಂತಲೂ ಕಡಿಮೆ ಮಳೆ ಸುರಿದ ಉದಾಹರಣೆ ಇದೆ. ಹಾಗಿದ್ದರೂ ಅಲ್ಲಿನ ಕೃಷಿಕರು ಭಯಗೊಂಡಿಲ್ಲ.

ಇಷ್ಟಕ್ಕೂ ಅಲ್ಲಿ ಆದದ್ದು ಏನು ? ಪ್ರಶ್ನೆ ಸಹಜ. ನಾಂಡೂ ಪ್ರದೇಶದಲ್ಲಿದ್ದ ಕಾಡನ್ನು ಜನರು ಸ್ವಂತ ಲಾಭಕ್ಕಾಗಿ ನಾಶ ಮಾಡಿದ ಪರಿಣಾಮ ಮಳೆ ಕಡಿಮೆಯಾಯಿತು, ನೀರಿನ ಒರತೆ ಕಡಿಮೆಯಾಯಿತು. ನದಿ ಬರಿದಾಯಿತು..!. ಇಂತಹ ಸಂದರ್ಭದಲ್ಲಿ ಅಲ್ಲಿನ ಪ್ರತಿಷ್ಠಾನವೊಂದು ಜನರನ್ನು ಪ್ರೇರೇಪಣೆ ಮಾಡಿ ಜನರನ್ನು ಒಂದು ಸೇರಿಸಿ ನಾಯಕತ್ವ ನೀಡಿ ಗ್ರಾಮದ ಅಂಚಿನಲ್ಲಿ ಅರಣ್ಯ  ಬೆಳೆಸಲಾಯಿತು. ನದಿಯ ಉಗಮ ಸ್ಥಳದಲ್ಲೂ ಕಾಡು ಬೆಳೆಯಿತು. ಜಲಸಂರಕ್ಷಣೆಯಲ್ಲಿ ಅರಣ್ಯದ ಪಾತ್ರ ಅತಿ ಮಹತ್ವದ್ದು ಎಂಬ ಅರಿವು ಜನರಿಗೆ ಮೂಡಿಸಲಾಯಿತು. ಇದಕ್ಕಾಗಿ ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಅರಣ್ಯ ಕಡಿದವರಿಗೆ ಊರವರೇ ಶಿಕ್ಷೆ, ದಂಡ ವಿಧಿಸುವ ನಿರ್ಧಾರ ಮಾಡಿದರು. ಇದರ ಜೊತೆಗೇ ಮಳೆ ಬರುವಾಗ ನೀರು ಇಂಗಲು ಕೆರೆಗಳ ನಿರ್ಮಾಣ, ನೀರು ಇಂಗಲು ವ್ಯವಸ್ಥೆ, ಮದಕಗಳ ನಿರ್ಮಾಣ ಸೇರಿದಂತೆ ನೀರು ಅಲ್ಲಲ್ಲಿ ಇಂಗಲು ವಿವಿಧ ಪ್ರಯತ್ನ ಮಾಡಿದರು. ಇದರ ಪರಿಣಾಮವಾಗಿ ನದಿ ಮತ್ತೆ ಪುನರ್ ಜನ್ಮ ತಾಳಿತು, ನಿಧಾನವಾಗಿ ಮತ್ತೆ ಹರಿಯಲು ಆರಂಭಿಸಿತು. ಹೀಗಾಗಿ ನಾಂಡೂ ಗ್ರಾಮದ ಜನತೆಯ ಒಗ್ಗಟ್ಟಾದ ಪ್ರಯತ್ನ ಇತರ ಊರುಗಳಿಗೂ ಮಾದರಿಯಾಯಿತು. ಇದರ ಪರಿಣಾಮ ರಾಜಸ್ತಾನದ ಕೆಲವು ಹಳ್ಳಿಗಳಲ್ಲಿ ಬತ್ತಿದ ನದಿ ಮತ್ತೆ ಪುನರುಜ್ಜೀವಗೊಂಡಿತು. ಹಾಗೆ ನೋಡಿದರೆ ರಾಜಸ್ತಾನದಲ್ಲಿ ಇತ್ತೀಚೆಗಿನವರೆಗೆ ಸುಮಾರು 7 ಸಾವಿರ ಕೆರೆಗೆಳು ಮರುಜೀವಗೊಂಡಿದೆ. ಇದರಿಂದ ವಿವಿಧ ಗ್ರಾಮಗಳಲ್ಲಿ ನೀರಿನ ಮಟ್ಟವೂ ಏರಿದೆ. ಎಲ್ಲಾ ಕಡೆ ಗ್ರಾಮದ ಜನರ ಸಹಭಾಗಿತ್ವ, ಆಸಕ್ತಿ ಕಂಡಿದೆ.

ಹಾಗೆ ನೋಡಿದರೆ ಮಹಾರಾಷ್ಟ್ರದಲ್ಲಿರುವ ವನರಾಯ್ ಎನ್ನುವ ಟ್ರಸ್ಟ್ ಕಳೆದೆರಡು ದಶಕದಲ್ಲಿ ಮಹಾರಾಷ್ಟ್ರದಲ್ಲಿ ಅನೇಕ ಕಟ್ಟಗಳನ್ನು ಮರಳಿನಲ್ಲಿ ನಿರ್ಮಿಸಿ ಅಲ್ಲಿನ ಜನರ ಮನಗೆದ್ದಿವೆ. ಹೀಗಾಗಿ ಅಲ್ಲಿನ ಸರಕಾರವೂ ಈ ರಚನೆಯನ್ನು ಅಂಗೀಕರಿಸಿದೆ. ಹೀಗೆ ಕಟ್ಟಗಳನ್ನು ನಿರ್ಮಿಸುವುದರಿಂದ ಭೂಮಿಯಲ್ಲಿ ನೀರು ಇಂಗಿ ಅಂತರ್ಜಲ ಮಟ್ಟವು ಸೇರುವುದಲ್ಲದೆ ನೀರು ರಿಸರ್ವ್ ಆಗಿಯೇ ಇರುತ್ತದೆ ಎಂಬುದನ್ನೂ ಜನರಿಗೆ ಮನವರಿಕೆ ಮಾಡಿದೆ. ಚೆನ್ನೈನಲ್ಲಿ ಮಳೆ ನೀರಿಂಗಿಸುವುದು ಕಡ್ಡಾಯ ಮಾಡಲಾಗಿದೆ. ಆ ಬಳಿಕ ಗಮನಿಸಿದರೆ ಅಲ್ಲಿನ ಜಲಮಟ್ಟ ಏರಿಕೆ ಕಂಡಿದೆ.

ರಾಜ್ಯದಲ್ಲಿರುವ ಕೆರೆಗಳ ಹೂಳೆತ್ತುವ ಹಾಗೂ ಒತ್ತುವರಿಯಾದ ಕೆರೆಗಳು ಪುನರುಜ್ಜೀವನಗೊಂಡರೆ ರಾಜ್ಯದ ವಿವಿಧ ಹಳ್ಳಿಗಳಲ್ಲಿನ ನೀರಿನ ಸಮಸ್ಯೆ ಪರಿಹಾರದ ಆಶಾಭಾವನೆ ಇದೆ. ಅದರ ಜೊತೆಗೆ ಅಲ್ಲಲ್ಲಿ ಕಾಡು ಬೆಳೆಸುವ ಪ್ರವೃತ್ತಿಯೂ ನಡೆಯಬೇಕಿದೆ. ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘಟನೆಗಳು ಸಮಾಜಮುಖಿಯಾಗಿ ಚಿಂತಿಸುತ್ತಾ ಕೆರೆಗಳ ಹೂಳೆತ್ತುವಿಕೆ ಸೇರಿದಂತೆ ಜಲಸಂರಕ್ಷಣೆಯತ್ತ ಕಾಳಜಿ ವಹಿಸುತ್ತಿದೆ. ಇದು ಇನ್ನು ಸಾಮೂಹಿಕ ಆಂದೋಲನವಾಗಬೇಕಿದೆ. ಇದಕ್ಕಾಗಿ ಸರಕಾರವನ್ನು ಕಾಯುವ ಬದಲು ಜನರೇ ಆಸಕ್ತಿ ವಹಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಇಂದು ನೀರ ಉಳಿವಿಗೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗುತ್ತದೆ. ಅದರ ಜೊತೆಗೆ ಜನ ಸಾಂಪ್ರದಾಯಿಕ ಕಟ್ಟಗಳತ್ತವಾದರೂ ಯೋಚಿಸಬೇಕಾದ ಅನಿವಾರ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲದಂತಹ ಪುಟ್ಟ ಗ್ರಾಮದಲ್ಲಿ ಸಾಮೂಹಿಕ ಕಟ್ಟಗಳನ್ನು ಜನರೇ ಆಸಕ್ತಿಯಿಂದ ನಿರ್ಮಾಣ ಮಾಡುವ ಮೂಲಕ ನೀರನ್ನು ಉಳಿಸುವ ಹಾಗೂ ಇಂಗಿಸುವ ಕೆಲಸ ಮಾಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಏತಡ್ಕ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಲೇ ಸಾಮೂಹಿಕ ಕಟ್ಟಗಳನ್ನು ಜನರೇ ಉತ್ಸಾಹದಿಂದ ನಿರ್ಮಾಣ ಮಾಡಿದ್ದರ ಫಲವಾಗಿ ಜನವರಿಯಲ್ಲಿಯೇ ಬತ್ತಿಹೋಗುತ್ತಿದ್ದ ನದಿ, ಕೆರೆ ಈಗ ಮಾರ್ಚ್-ಎಪ್ರಿಲ್‍ವರೆಗೆ ಜೀವಕಳೆಯಿಂದ ಕೂಡಿರುತ್ತದೆ. ಇದೆಲ್ಲಾ ನಾಳೆಯ ನೀರಿನ ನೆಮ್ಮದಿಗೆ ಮೆಟ್ಟಿಲುಗಳೇ ಆಗಿವೆ.

ಹಳ್ಳಿಯ ಮಂದಿ ನಾಳೆಯ ನೀರಿನ ನೆಮ್ಮದಿಗೆ ನಡೆಸುವ ಪ್ರಯತ್ನದ ಸಣ್ಣ ಪಾಲು ನಗರದ ಕೊಳವೆಬಾವಿಗಳಿಗೂ ನಡೆದರೆ , ಅದು ಕಡ್ಡಾಯವಾದರೆ, ಅಧಿಕಾರಿಗಳು ಆಸಕ್ತರಾದರೆ ನಾಳೆಗಳು ಸುಂದರವಾಗುವುರದಲ್ಲಿ ಸಂದೇಹವಿಲ್ಲ. ಇಲ್ಲದೇ ಇದ್ದರೆ ನೀರಿಗಾಗಿ ನಡೆಯುವ ಹೋರಾಟವೂ ತಾರ್ಕಿಕ ಅಂತ್ಯ ಕಾಣದು.

( ಹೊಸದಿಗಂತ - ಮಣ್ಣಿಗೆಮೆಟ್ಟಿಲು )