24 ಜನವರಿ 2017

ಈಗ ಕನಸುಗಳಿಗೆ ಜೀವ ತುಂಬುವ ಸಮಯ . . .


ಕಾರು ನಿಧಾನವಾಗಿ ಸಾಗುತ್ತಿತ್ತು.........

 ಒಂದು ಕೈಯಲ್ಲಿ ಸ್ಟೇರಿಂಗ್, ಮತ್ತೊಂದು ಕೈಯಲ್ಲಿ ಗೇರ್ ಲಿವರ್. ಕಿವಿಯಲ್ಲಿ ಇಯರ್ ಫೋನ್. ಕಿಸೆಯಲ್ಲಿ ಮೊಬೈಲ್ ಫೋನು. ಪಕ್ಕದಲ್ಲಿ ನನ್ನ ಮಗು. ಕಾರು ಕಿಲೋ ಮೀಟರ್ ಕಲ್ಲುಗಳನ್ನು ದಾಟಿ ಮುಂದೆ ಸಾಗುತ್ತಿತ್ತು. ಆಗಾಗ ಮೊಬೈಲ್ ರಿಂಗಾಗುತ್ತಿತ್ತು, ಕೆಲವು ಕಾಲ್ ಮಾಡುತ್ತಿದ್ದೆ. ಪಕ್ಕದಲ್ಲೇ ಇದ್ದ ಮಗು ತನ್ನದೇ ಕೆಲವು ಕತೆ ಹೇಳುತ್ತಿತ್ತು.
ಸುಮಾರು 15 ಕಿಮೀ ದೂರ ಕ್ರಮಿಸಿತು. ಇನ್ನು  ನಾನು ಕತೆ ಹೇಳಲ್ಲ, ನೀನು ಕತೆಯೇ ಕೇಳಲ್ಲ, ಯಾರಲ್ಲೋ ಮಾತಾಡುತ್ತಿ, ಮತ್ಯಾರಿಗೆ ನಾನು ಕತೆ ಹೇಳಲಿ ಅಂತ ಮಗು ಹೇಳಿತು . .
ಇಲ್ಲ ಹೇಳು,  ಅಂದಾಗ.......  ಮಗು ಅಂದಿತು , ಮೊಬೈಲ್ ಪಕ್ಕಕ್ಕಿಡು. .
ಸರಿ ಅದೂ ಆಯಿತು. .
ಕತೆ ಶುರು ಮಾಡಿತು. .
ಅದು ಕತೆಯಲ್ಲ ಪ್ರಶ್ನೆಗಳು. .  ಮಗುವಿನ ಪ್ರಶ್ನೆ.  . ಕನಸು ಸೃಷ್ಟಿಸುವ ಪ್ರಶ್ನೆ. . ಆ ಪ್ರಶ್ನೆಗಳ  ಒಳಗೆ ನಾನೂ ಮಗುವಾಗಿ   ಹೋಗಬೇಕಿತ್ತು. .  ಪ್ರಶ್ನೆಯ ಆಳ ಅರಿವಾಗುತ್ತಿತ್ತು, ಯಾರಿಗೆ ಗೊತ್ತು .. ಮುಂದೆ, ಮಗುವಿಗೆ ಅದೇ ಅಧ್ಯಯನದ ವಸ್ತುವಾಗಿ ಬಿಡಬಹುದು.
ಆ ಪ್ರಶ್ನೆಗಳ ಒಳಗೆ ನಾನೂ ಹೋಗುತ್ತಿದ್ದಂತೆ , ಉತ್ತರ ನೀಡುತ್ತಿದ್ದಂತೆ ಹೊಸ ಹೊಸ ಪ್ರಶ್ನೆಗಳು, ಉತ್ತರಗಳ ಮೇಲೆ ಮತ್ತೆ ಪ್ರಶ್ನೆ ಮುಂದುರಿಯುತ್ತಾ , ಸುಮಾರು 15 ಕಿಲೋ ಮೀಟರ್ ಸಾಗಿತು. ಕನಸು ತೆರೆದುಕೊಂಡಿತು. . ಸಂದೇಹಗಳಿಗೆ ಕೆಲವೊಮ್ಮೆ ಉತ್ತರವೇ ಇಲ್ಲ ಎನಿಸಿತು.., ಮಗುವಿನ ಜೊತೆ ಆ ಕ್ಷಣ ಮಗುವಾದೆ , ಕುತೂಹಲದ  ಆ ಕಣ್ಣುಗಳು ಮತ್ತೇನೋ ನಿರೀಕ್ಷೆ ಮಾಡುತ್ತಿತ್ತು. . ಎಳೆಯ ಮನಸ್ಸು ಅರ್ಥವಾಯಿತು.

                                         ****

ಅನೇಕ ದಿನಗಳಿಂದ ಮನೆಗೆ ತಲಪುವಾಗ ರಾತ್ರಿಯಾಗುತ್ತಿತ್ತು. ಮಗು ಅದಾಗಲೇ ಮಲಗುತ್ತಿತ್ತು. ಅಂದು ಮನೆಯಲ್ಲಿದ್ದೆ. ಸಂಜೆಯವರೆಗೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಮನೆಯೊಳಗೆ ಸೇರಿದಾಕ್ಷಣ ನಾನೂ ಮಗುವಾದೆ. ಕಳ್ಳ ಪೊಲೀಸ್, ಮರ ಗಿಡ  ಸೇರಿದಂತೆ ಅನೇಕ ಆಟ ಆಡಿದೆ. ಅಂದು ಮಗು ಅಂದಿತು. .  ದಿನವೂ ಇದೇ ಹೊತ್ತಿಗೆ ಮನೆಯಲ್ಲಿರು. . .
ಎಳೆಯ ಮನಸ್ಸು ಅರ್ಥವಾಯಿತು.

                                 *****

ಪ್ರತೀ ದಿನ ಶಾಲೆಗೆ ಹೋಗಿ ಬರುವ ಮಗು , ಶಾಲೆಯ ಕೆಲಸ ಸಂಜೆಯೇ ಮಾಡಿ ಮುಗಿಸಿತ್ತು. ಅಂದು ನಾನೂ ಮಗುವಿನ ಜೊತೆ ಬರೆಯುವ ವೇಳೆ ಕುಳಿತೆ. ಇದು ಅದಲ್ಲ, ಇದು ಹಾಗೆಯೇ  , ಟೀಚರ್ ಹೇಳಿದ್ದಾರೆ ಎಂದು ವಾದ ಮಾಡಿತು.
ಮಗುವಿನ ಮನಸ್ಸು ಅರ್ಥವಾಯಿತು.

                          ******

ಮಗುವಿನ ಮನಸ್ಸಿನಲ್ಲಿ  ಅದೆಷ್ಟು ಕನಸುಗಳು ಇವೆ. ನನಗದು ಅರ್ಥವೇ ಆಗಿರಲಿಲ್ಲ. ನನಗೆ ಸಂಬಂಧವೇ ಪಡದ ಅನೇಕ ವಿಚಾರಗಳಲ್ಲೇ ಮನಸ್ಸು ಓಡಿಸುತ್ತಿದ್ದೆ. ಮಗುವಿನ ಜೊತೆ ಮಗುವಾಗದೇ ಇದ್ದ ನನಗೆ, ಆ ಕನಸುಗಳು ಅರ್ಥವೇ ಆಗಿರಲಿಲ್ಲ. ಈಗ ಅರ್ಥವಾಯಿತು.. . ! ಆ ಕನಸುಗಳಿಗೆ , ಆ ಪ್ರಶ್ನೆಗಳಿಗೆ ಉತ್ತರ ನೀಡದೇ ಹೋದರೆ ಕನಸುಗಳೇ ಬೆಳೆಯಲಾರದು, ಕನಸು ಬೆಳೆಯದೇ ಇದ್ದರೆ ಮನಸ್ಸು ಅರಳದು.
ಈಗ ಅರ್ಥವಾಯಿತು, ಎಲ್ಲೆಲ್ಲೋ ನನ್ನ ಬಗ್ಗೆ ಯಾರೋ ಮಾತನಾಡುತ್ತಿದ್ದರೆ, ನಾನೂ ಯಾರ್ಯಾರೋ ಜೊತೆ ಮಾತನಾಡುತ್ತಿದ್ದರೂ , ಇಲ್ಲಿ  ನನ್ನ ಮಗುವಿನ  ಜೊತೆ  ನಾನು ಮಾತನಾಡದೇ ಇದ್ದರೆ ಕನಸುಗಳು ಅರಳದು.


17 ನವೆಂಬರ್ 2016

ದೇಶದ ಹೈಸ್ಪೀಡ್ ಚಾಲಕನೂ . . . ಹಳ್ಳಿಯ ಎತ್ತಿನ ಗಾಡಿಯೂ. . .


ನಮ್ಮ ದೇಶದ ಚಾಲಕ ಸೂಪರ್ ಫಾಸ್ಟ್. ಅವರಿಗೆ ಬುಲೆಟ್ ರೈಲು ಕೂಡಾ ವೇಗವಾಗಿದೆ ಅಂತ ಅನಿಸೋಲ್ಲ. ಆದರೆ ಅದೇ ವಾಹನದಲ್ಲಿರೋ ಇತರೇ ಮಂದಿ ಇನ್ನೂ ಡ್ರೈವ್ ಕಲಿತಿಲ್ಲ. ಹೀಗಾಗಿ ಅಡ್ಡಾದಿಡ್ಡಿಯಾಗಿದ್ದಾರೆ. ಇಡೀ ದೇಶವನ್ನೇ ಅದೇ ಚಾಲಕ ಕೊಂಡೊಯ್ಯಬೇಕು. ಅವರ ವೇಗಕ್ಕೆ ಯಾರೂ ಸ್ಪಂದಿಸಲೇ ಆಗುತ್ತಿಲ್ಲ. ಅದರ ಸ್ಥಿತಿ ಇಂದಿನದು.

ಮೊನ್ನೆ ಮೊನ್ನೆಯವರೆಗ ಒಂದು ಪರಿಸ್ಥಿತಿ ಇತ್ತು. ನಮ್ಮ ಚಾಲಕ ನಿಧಾನವಾಗಿ ಹೋಗುತ್ತಿದ್ದರು, ಎಲ್ಲರೂ ಅವರನ್ನೇ ಅನುಸರಿಸುತ್ತಿದ್ದರು. ನಿಧಾನವಾಗಿ ಸಾಗುತ್ತಲೇ ಇತ್ತು. ಹೀಗಾಗಿ ಯಾರಿಗೂ ಕಷ್ಟ ಅನಿಸಲೇ ಇಲ್ಲ. ಇದರಿಂದ ಇಂಧನ ಹೆಚ್ಚುವರಿ, ಸಮಯವೂ ಹೆಚ್ಚು. . ಹೀಗೇ ವಿವಿಧ ಸಮಸ್ಯೆ ಇತ್ತು. ಆದರೆ ಈಗ ಹೊಸ ಚಾಲಕ.ಆರಂಭದಿಂದಲೇ ಹೇಳಿದರು, ಗಟ್ಟಿ ಹಿಡಿದುಕೊಳ್ಳಿ, ಹಿಡಿದುಕೊಳ್ಳಿ, ವೇಗ ಪಡೆಯುತ್ತದೆ ಅಂತ. ಆದರೆ ಜನ ಅಂದುಕೊಂಡರು, ಇದೆಲ್ಲಾ ಸಾಧ್ಯನಾ? ಇಲ್ಲಿ ರಸ್ತೆನೇ ಸರಿ ಇಲ್ಲ ಅಂತ ಅಂದು ಕೊಂಡರು. ಚಾಲಕನ ಜೊತೆ ಇರುವವರೂ ಸಿದ್ದವಾಗಲಿಲ್ಲ. ಅಷ್ಟು ಹೊತ್ತಿಗೆ ವೇಗ ಪಡೆಯಿತು, ಚಾಲನೆ. ಈಗ ಇದ್ದದ್ದಿದ್ದಂತೆ ಗೇರ್ ಬದಲಾವಣೆಯಾಯಿತು. ಚಾಲಕನ ಜೊತೆಗೆ ಇರುವವರಿಗೂ ಗೊತ್ತೇ ಆಗಿಲ್ಲ. .!. ಅವರು ಅಲ್ಲೇ ಬಿದ್ದರು, ಅವರ ಜೊತೆಗೆ ಹಿಂಬದಿಯಿಂದ ಬರುವವರೂ ಸಾಲು. .  ಸಾಲು. .  ಗುದ್ದಿ ನಿಂತರು. .!. ಇನ್ನಿರುವುದು  ಕತೆ. . ! ಸಮಸ್ಯೆ ಆರಂಭವಾಗಿದ್ದೇ ಇಲ್ಲಿಂದ. ಇದುವರೆಗೆ ಕತೆ ಕೇಳಲು ಶುಷಿಯಾಗಿತ್ತು. ಮಾತನಾಡಲೂ ಖುಷಿಯಾಯಿತು. ಆದರೆ ಸಮಸ್ಯೆ ಗಂಭೀರವಾಗುತ್ತಿದೆ. ಹಳ್ಳಿಯ ಜನ ಇಂದಿಗೂ ಎತ್ತಿನಗಾಡಿಯಲ್ಲೇ ಇದ್ದಾರೆ. ಇನ್ನು  ಬುಲೆಟ್ ರೈಲು ಮಾತು ಹೇಗೆ ?. ಇದೇ ಈಗ ಸಮಸ್ಯೆಗೆ ಮೂಲ.

                                        **************

ಇದು ದೇಶದ ಕತೆ,
ಈಗ ಕಹಿ ಇದೆ, ಸಿಹಿ ಮುಂದಿದೆ ಎಂಬ ಆಶಾಭಾವ. .

ಪ್ರಧಾನಿಯವರು 500 ಹಾಗೂ 1000 ರೂಪಾಯಿ ನೋಟು ಹಿಂಪಡೆಯುವ ನಿರ್ಧಾರ  ಪ್ರಕಟಿಸಿದರು.
ಇಡೀ ದೇಶವೇ ಒಮ್ಮೆ ಸ್ಥಬ್ದವಾಯಿತು.
ಕಾಳಧನಿಕರಿಗೆ ಇದು  ಪಾಠ ಎಂದೇ ಹೇಳಿಕೊಂಡರು. ಕಷ್ಟವಾದರೂ ಪರವಾಗಿಲ್ಲ ಇದೊಳ್ಳೆ ನಿರ್ಧಾರ ಎಂದರು.
ಇದೀಗ 7 ದಿನ ಕಳೆಯಿತು. ದೇಶದ ಹಳ್ಳಿಯಲ್ಲಿ ಇಂದಿಗೂ ಬ್ಯಾಂಕ್ ಮುಂದೆ ಸಾಲು ಕಡಿಮೆಯಾಗಿಲ್ಲ. ಹಣವಿಲ್ಲದ ಪರದಾಟ ಶುರುವಾಗಿದೆ.

ಆರಂಭದಲ್ಲಿ  ಬ್ಯಾಂಕ್ ಮುಂದೆ ಕ್ಯೂ ನಿಲ್ಲುವುದು, ಎಟಿಎಂ ಮುಂದೆ ಕ್ಯೂ ನಿಲ್ಲುವುದು ಕಷ್ಟ ಎನಿಸಲಿಲ್ಲ. ಈಗಲೂ ಕಷ್ಟ ಎನಿಸದು. ಏಕೆಂದರೆ ದೇಶದ ಬಗ್ಗೆ ಚಿಂತಿಸುವಾಗ, ಭವಿಷ್ಯದ ಬಗ್ಗೆ ಯೋಚನೆ ಮಾಡೋವಾಗ ಇದು ಉತ್ತಮ ನಿರ್ಧಾರವೇ. ಪ್ರಧಾನಿ ಕೈಗೊಂಡ ನಿರ್ಧಾರ ಇಂದಲ್ಲ ಎಂದೋ ಆಗಬೇಕಾದ ಕೆಲಸ. ಆದರೆ ಅವರು ಎಣಿಸಿದಷ್ಟು ಸುಲಭ ಆಗಲಿಲ್ಲ, ಸಂಕಷ್ಟ ನಿವಾರಣೆಗೆ ಕೈಗೊಂಡ ನಿರ್ಧಾರ ಇನ್ನೂ ಸರಿಯಾಗಿ ಜಾರಿಯಾಗಿಲ್ಲ.
ಕಾರಣ ಇಷ್ಟೇ, ಅವರಷ್ಟು ವೇಗದಲ್ಲಿ  ಅಧಿಕಾರಿಗಳು ಓಡಲಿಲ್ಲ, ಚಿಂತಿಸಲಿಲ್ಲ. ಬ್ಯಾಂಕ್ ಸಿಬಂದಿಗಳು, ಅಧಿಕಾರಿಗಳು ಚಿಂತಿಸಲಿಲ್ಲ ಎಂಬುದು ಗೊತ್ತಾಗುತ್ತದೆ. ಹೀಗಾಗಿ, ಈಗ ನಮಗೂ ಎಷ್ಟು ದಿನ ಹೀಗೆ ಬ್ಯಾಂಕ್ ಮುಂದೆ, ಎಟಿಎಂ ಮುಂದೆ ಕ್ಯೂ ಅಂತ ಅನಿಸುವ ದಿನ ಬರುತ್ತದೆ. ಹಾಗಂತ ಈ ನಿರ್ಧಾರವೇ ತಪ್ಪು ಅಂತಲ್ಲ.

ಇಡೀ ದೇಶದ ಅರ್ಥವ್ಯವಸ್ಥೆಯ ಶೇ 84 ರಷ್ಟು ಭಾಗ 500 ಹಾಗೂ 1000 ರೂಪಾಯಿ ನೋಟುಗಳು ಚಲಾಣೆಯಲ್ಲಿತ್ತು ಎನ್ನುತ್ತದೆ ವರದಿ. ಈಗ ಒಮ್ಮೆಲೇ ಈ 84 ಶೇಕಡಾದಷ್ಟು ಹಣ ಪುನ: ಬಂದು ಆ ಜಾಗವನ್ನು  10 ರೂಪಾಯಿಯಿಂದ 2000 ರೂಪಾಯಿವರೆಗಿನ ನೋಟು ತುಂಬಿಕೊಳ್ಳಬೇಕು,. ಇದಕ್ಕೆ ತಗಲುವ ಸಮಯ ಎಷ್ಟು?.

ಈ ದೇಶದ ಗ್ರಾಮೀಣ ಭಾಗದ ಶೇ 60 ರಷ್ಟು ಕೃಷಿಕರು ಸಹಕಾರಿ ಸಂಘವನ್ನು  ಅಲಂಬಿಸಿದ್ದಾರೆ. ಅವರಿಗೆ ಎಟಿಎಂ ಅಂದರೆ ಗೊತ್ತಿಲ್ಲ, ಸೈಪ್ ಅಂದರೆ ತಿಳಿದಿಲ್ಲ, ಆನ್‍ಲೈನ್ ವ್ಯವಹಾರ ಗೊತ್ತಿಲ್ಲ. ಏಕೆಂದರೆ, ಇಂದಿಗೂ ಹಳ್ಳಿಯಲ್ಲಿ ಮೊಬೈಲ್ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ, 2ಜಿ ಸರಿಯಾಗೇ ಸಿಕ್ತಿಲ್ಲ, ಇನ್ನು ಮೊಬೈಲ್ ಬ್ಯಾಂಕಿಂಗ್ ಹೇಗೆ ಸಾದ್ಯ..ಅವರೆಲ್ಲಾ ಸಹಕಾರಿ ಸಂಘವನ್ನೇ ನೆಚ್ಚಿದವರು.  ಇಂದು ಸಹಕಾರಿ ಸಂಘಗಳಿಗೆ ಹಣ ಬರುತ್ತಿಲ್ಲ. ಅವರಿಗೆ ದುಡ್ಡು ಎಲ್ಲಿಂದ?. ಅವರು ಎಷ್ಟು ದಿನ ಅಂತ ಸಹಿಸಿಕೊಳ್ಳಲು ಸಾದ್ಯ. ಹಿಂದೊಮ್ಮೆ ಆರ್ಥಿಕ ಸಂಕಷ್ಟ ಬಂದಾಗ ಸಹಕಾರಿ ಸಂಘಗಳು ಆರ್ಥಿಕ ಶಕ್ತಿ ನೀಡಿದ್ದವು. ಇಂದು ಅದೇ ಸಹಕಾರಿ ಸಂಘಗಳು ಆಚೀಚೆ ನೋಡುತ್ತಿವೆ.
ಆದರೆ ಮತ್ತೊಂದು ಸಂಗತಿ ಎಂದರೆ ಸಹಕಾರಿ ಸಂಘಗಳ ಸ್ಥಾಪಿಸಿ ಕೋಟಿ ಕೋಟಿ ಹಣ ತೊಡಗಿಸಿದ ದೊಡ್ಡ ದೊಡ್ಡ ಕುಳಗಳು ಸಹಕಾರಿ ಹೆಸರಿಗೆ ಕಳಂಕ ತಂದಿವೆ ಎಂಬುದೂ ಸತ್ಯ.
ಈಗಿನ ಸ್ಥಿತಿ ನೋಡಿದರೆ ಮುಂದೆ ಕೃಷಿಕರು ಬ್ಯಾಂಕ್‍ನಿಂದ ಪಡೆದುಕೊಂಡ ಸಾಲಮರುಪಾವತಿ ಹೇಗೆ? ಇದಕ್ಕೊಂದು ಪರ್ಯಾಯ ವ್ಯವಸ್ಥೆಯೂ ಬೇಕಾಗುತ್ತದೆ. ಸಾಲ ಬಿಡಿ , ಬಡ್ಡಿಕಟ್ಟುವುದಾದರೂ ಹೇಗೆ?. ಮುಂದೆ 6 ತಿಂಗಳಲ್ಲಿ  ಈ ವ್ಯವಸ್ಥೆ ಸರಿಯಾಗುವುದಾದರೆ ಮುಂದಿನ ಮಳೆಗಾಲದ ಹೊತ್ತಿಗೆ ವ್ಯವಸ್ಥೆ ಸರಿಯಾಬಹುದು. ಅದುವರೆಗೆ ಕಾಯುತ್ತಾ ಕೂರಲು ಗ್ರಾಮೀಣ ಭಾಗದ ಆ ಕೃಷಿಕನಿಗೆ ಸಾಧ್ಯವಿದೆಯಾ ?. ಬಡ ಕಾರ್ಮಿಕನಿಗೆ ಸಾಧ್ಯವಿದೆಯಾ ?. ಗ್ರಾಮೀಣ ಭಾಗದ ಕೃಷಿಕ ವಸ್ತುಗಳನ್ನು ಮಾರಿ ಹಣ ಪಡೆಯುವುದು ಹೇಗೆ.? ಆತ ಕಾರ್ಮಿಕನಿಗೆ ಹಣ ನೀಡುವುದು ಹೇಗೆ ? ಆತನಿಗೂ ಚೆಕ್ ನೀಡುವುದು  ಸಾಧ್ಯವೇ ?.
ಇದೆಲ್ಲಾ ಪ್ರಶ್ನೆಗಳೇ ವಿನ: ಉತ್ತರಗಳಿಲ್ಲ.

                                        *******

ಈಗೇನಾಯಿತು ಅಂದರೆ,

ಈ ದೇಶದ ಪ್ರತಿಯೊಬ್ಬನೂ  ಹೊಂದಿದ್ದು ಕಪ್ಪಹಣ. ಏಕೆಂದರೆ ಕೃಷಿಕರು ತಮ್ಮ ವಸ್ತು ಮಾರಾಟ ಮಾಡುವಾಗಲೂ ತೆರಿಗೆ ತಪ್ಪಿಸಿ ವ್ಯವಹಾರ ಮಾಡಿದರು. ಕೃಷಿ ವಸ್ತು ಮಾರಾಟದ ವೇಳೆ ಬಿಲ್ ರಹಿತ ವ್ಯವಹಾರ ಮಾಡಿ ಅಂತಹವರಿಗೇ ಬೆಂಬಲ ವ್ಯಕ್ತಪಡಿಸಿದರು.
ಇತ್ತ ನೌಕರರು ಸಂಬಳ ಪಡೆಯುವಾಗ ಹೆಚ್ಚು ಮೊತ್ತಕ್ಕೆ ಸಹಿ ಮಾಡಿ ಕಡಿಮೆ ಸಂಬಳ ಪಡೆದರು. ದಾಖಲೆಯ ಪ್ರಕಾರ ಹೆಚ್ಚು ಪಡೆದು ಉದ್ಯಮಿಯಲ್ಲಿ  ಕಪ್ಪು ಹಣ ತುಂಬಿಸಿದರು.
ಇಲ್ಲಿ  ವ್ಯವಹಾರ ಮಾಡುವಾಗ ಬಿಲ್ ನೀಡದೇ , ತೆರಿಗೆ ಪಾವತಿ ಮಾಡದೆಯೇ  ವ್ಯವಹಾರ ಮಾಡಿದರು.
ತಾನು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಈ ಕಂಪನಿಯು ಕಪ್ಪುಹಣದಲ್ಲೇ ನಡೆಯುತ್ತಾ ಎಂದೂ ಯೋಚಿಸಲಿಲ್ಲ.
ಬದಲಾಗಿ ಎಲ್ಲರಿಗೂ ಬೇಕಾಗಿದ್ದು ಹಣ ಮಾತ್ರಾ. ತನ್ನ ದೈನಂದಿನ ಬದುಕು ಶ್ರೀಮಂತವಾಗಬೇಕು, ತನಗೂ ತನ್ನ ಕುಟುಂಬಕ್ಕೂ, ಮುಂದಿನ ಪೀಳಿಗೆಗೂ ಹಣ ಬೇಕೆಂದು ಸಂಗ್ರಹಿಸಿದ್ದು, ಅದಕ್ಕಾಗಿಯೇ ಕಂಪನಿ ಬದಲಾಯಿಸಿದ್ದು, ಹೆಚ್ಚು ಕೃಷಿ ಮಾಡಿದ್ದು, ಹೆಚ್ಚು ವ್ಯಾಪಾರ ಮಾಡಿದ್ದು ತಾನೆ..  .!

08 ಜೂನ್ 2016

ನಾವು ಮಾಡಿದ್ದೇ ಸರಿಯಲ್ಲ. . ಟೀಕೆ ಮಾಡುವುದೇ ತಪ್ಪಲ್ಲ. .!ಇಂದು ಬೆಳಗ್ಗೆ ಗೆಳೆಯ ಕರೆ ಮಾಡಿದ.ಅನೇಕ ದಿನಗಳ ಬಳಿಕ ಬೆಳಗ್ಗೆಯೇ ಆತ ಕಾಲ್ ಮಾಡಿರುವುದರಿಂದ ಖುಷಿಯಲ್ಲಿದ್ದೆ. ಅವನ ಪತ್ತೆ ಇಲ್ಲದೆ,  ಕರೆ ಮಾಡಿದರೂ ಸ್ವೀಕರಿಸದೇ  ಹಲವು ಸಮಯಗಳೇ ಆಗಿತ್ತು. ಆತನೂ ಬ್ಯುಸಿ , ಜೊತೆಗೆ ನಾನೂ.. . ಆದರೆ ಇಂದು ಬೆಳಗ್ಗೆಯೇ ಕರೆ ಮಾಡಿದ್ದರಿಂದ ಸಂತೋಷದಿಂದ ಕರೆ ಸ್ವೀಕರಿಸಿದೆ.
ಆತ ಮಾತನಾಡುತ್ತಾ ಹೇಳಿದ, ನಾನು ಪತ್ರಿಕೆಗಳಲ್ಲಿ  ಕೆಲಸ ಮಾಡುವುದು  13 ವರ್ಷವಾಯಿತು. . ಇಂತಹ ಅವಸ್ಥೆ ನೋಡಿಲ್ಲಪ್ಪ. .  ಜನರೂ ಹೇಳುತ್ತಾರೆ. .  ಮಾತನಾಡುತ್ತಾರೆ. .  ಸಾಕಪ್ಪ. .  !. ಇಂದೆಂತಹದ್ದು. .  ಪರ್ಯಾಯ ಇಲ್ಲವಲ್ಲಾ.  . ,! ನೀನಾದರೋ ಯಾಕೆ ಮಾತನಾಡುತ್ತಿ. . ಏನಾದರೂ ಪ್ರಯೋಜನ ಆಗಬೇಕಲ್ಲ.  .. ಹೀಗೇ ಆತ ಸುಮಾರು 20 ನಿಮಿಷ ವಿಷಯ ಮಂಡಿಸಿದ. .
ಆತ ಮಾತನಾಡಿದ ಪ್ರತೀ ವಿಷಯದ ಹಿಂದೆ ಸಾಮಾಜಿಕ ಕಳಕಳಿ ಇತ್ತು.ಏಕೆಂದರೆ ಆತ 13 ವರ್ಷಗಳ ಕಾಲ ಪತ್ರಿಕೆಗಳಲ್ಲಿ  ಕೆಲಸ ಮಾಡಿದ್ದಾನೆ. ಆತ ಮಾತನಾಡಿದ 20 ನಿಮಿಷಗಳ ಬಹುಪಾಲು ಭಾಗವೂ, ಮಾತನಾಡಿದ್ದು ಸೋಶಿಯಲ್ ಮೀಡಿಯಾದ ಬಗ್ಗೆಯೇ. .!.


                                                                                ( ಚಿತ್ರ - ಅಂತರ್ಜಾಲ)
ನಾನೂ ಪತ್ರಿಕೆಗಳಲ್ಲಿ  ಬರೆಯುವುದಕ್ಕೆ ಶುರುಮಾಡಿ ಸುಮಾರು 10 ವರ್ಷಗಳು ಕಳೆದುಹೋದವು.ಈ ನಡುವೆ ಟಿವಿ ವಾಹಿನಿಯಲ್ಲಿ,ಆನ್‍ಲೈನ್‍ಗಳಲ್ಲಿ  ಕೆಲಸ ಮಾಡಿದ್ದೂ ಆಗಿದೆ.ಈ ವರ್ಷದಷ್ಟು ಕೆಟ್ಟ ಸ್ಥಿತಿ ನೋಡಿರಲಿಲ್ಲ.ರಾಜ್ಯದ ನಂಬರ್ ವನ್ ಎನಿಸಿಕೊಂಡಿರುವ ಮೀಡಿಯಾಗಳಲ್ಲೂ ಕೆಲಸ ಮಾಡಿದ್ದೆ.ಆದರೆ ಅಲ್ಲಿನ ಹಿರಿಯರಲ್ಲಿ ದರ್ಪ ನೋಡಿರಲಿಲ್ಲ. .!. ಜನರು ಟೀಕೆ ಮಾಡಿದ್ದಾರೆ, ಎಲ್ಲೆಲ್ಲೋ ಏನೇನೋ ಮಾತನಾಡಿದ್ದಾರೆ. . ಆದರೆ ಯಾರಲ್ಲೂ ಜಗಳ ಮಾಡಿಲ್ಲ. . !. ಆ ಟೀಕೆಯನ್ನು  ಸ್ವೀಕರಿಸಿದ್ದಾರೆ. ಸರಿ ಮಾಡಿದ್ದಾರೆ. ಸಮಾಜವನ್ನೂ ಸುಧಾರಿಸಿದ್ದಾರೆ.ಸಮಾಜದ ತಪ್ಪುಗಳನ್ನು  ಎತ್ತಿ ಹೇಳಿದ್ದಾರೆ. ಪದೇ ಪದೇ ಹೇಳಿ ಕಿರಿಕಿರಿ ಎನಿಸಿಕೊಳ್ಳಲಿಲ್ಲ.ತಮ್ಮ ಸಿಬಂದಿಗಳಲ್ಲಿ  ಕೆಲಸ ಮಾಡಿಸಿದ್ದಾರೆ, ಅದಕ್ಕಾಗಿ ಜಗಳವಾಡಿದ್ದಾರೆ.ಆದರೆ ಸಮಾಜದ ಮುಂದೆ ಒಂದಾಗಿ ನಿಂತು ಜನರು ಮಾತನಾಡುವುದನ್ನು  ಕೇಳಿಸಿಕೊಂಡಿದ್ದಾರೆ, ಬೈಗುಳ, ಹೊಡೆತವನ್ನೂ ತಿಂದಿದ್ದಾರೆ.ಮರುದಿನ ಮತ್ತೆ ಅಲ್ಲೇ ನಿಂತು ತಿದ್ದಿದ್ದಾರೆ, ಆಗ ಸಮಾಜಕ್ಕೂ ಅರಿವಾಗಿದೆ, ಸಮಾಜವೂ ಬದಲಾಗಿದೆ.

ಪತ್ರಿಕೆ ಎಂದರೆ ಹೀಗಿರಬೇಕು ಅಂತ ಮಿತ್ರ ಹೇಳುತ್ತಿದ್ದ, 
ಕೃಷಿ ಪತ್ರಿಕೆಯೊಂದು  ಅಂದು ಜಲಾಂದೋಲನ ಮಾಡಿತು.ಆಗ ಜನ ಇದೊಂದು ಹುಚ್ಚು ಎಂದರು.ಜಲದ ಬಗ್ಗೆ ಯಶೋಗಾಥೆಗಳನ್ನು  ನಿರಂತರವಾಗಿ ಬರೆದರು.ಆಗಲೂ ಇದು ನೀರು ಪತ್ರಿಕೆ ಎಂದರೆ.ಆದರೂ ಆ ಪತ್ರಿಕೆ ಸಿಬಂದಿ ಜಗ್ಗಲಿಲ್ಲ, ಬೈಯಲಿಲ್ಲ. .!. ಆ ಟೀಕೆ ಸ್ವೀಕರಿಸಿದರು. ಆದರೆ, ಈಗ ಜನರಿಗೆ ಅಂದು ಹೇಳಿರುವುದು ಸತ್ಯ ಎನಿಸಿದೆ. 10 ವರ್ಷಗಳ ನಂತರ ಜನರು ನೆನಪಿಸಿಕೊಳ್ಳುತ್ತಾರೆ, ಇಂದು ನೀರಿಲ್ಲ. ಅಂದು ಮಾಡಿದ್ದರೆ, ಈಗ ಸಮಸ್ಯೆ ಇರುತ್ತಿರಲಿಲ್ಲ ಅಂತ ಈಗ ಹೇಳುತ್ತಾರೆ. ಜೊತೆಗೆ ಸಿಕ್ಕ ಸಿಕ್ಕಲ್ಲಿ  ಅವರನ್ನು  ಕರೆಯುತ್ತಾರೆ, ನೀರಿನ ಬಗ್ಗೆ ಮಾತನಾಡಿ ಅಂತ ಹೇಳುತ್ತಾರೆ. ಈಗ ಆ ಪತ್ರಿಕೆಯನ್ನು  ಜನ ಪ್ರೀತಿಸುತ್ತಾರೆ.ಬೇರೊಂದು ಕಾರಣಕ್ಕೆ ಪತ್ರಿಕೆ ವಿರೋಧಿಸಿ ಎಂದು ಕರೆ ನೀಡಿದರೂ ಜನ ಮಾತ್ರಾ ಒಪ್ಪುತ್ತಿಲ್ಲ.ಇಂದು ಒಂದು ಪತ್ರಿಕೆ ಮಾಡುವ ಆಂದೋಲನ.ಈಗ ಅದೇ ಪತ್ರಿಕೆ ಹಲಸಿನ ಬಗ್ಗೆ ಆಂದೋಲನ ಮಾಡುತ್ತಿದೆ, ದೇಶದ ವಿವಿದೆಡೆಯಿಂದ ಹಲಸಿನ ಬಗ್ಗೆ ಯಶಸ್ವಿ ಕಥೆಗಳನ್ನು  ಬರೆಯುತ್ತಿದ್ದಾರೆ.ಇದಕ್ಕಾಗಿ ಸಂಪಾದಕರು  ದೇಶ ಸುತ್ತುತ್ತಿದ್ದಾರೆ, ವಿದೇಶಕ್ಕೂ ತೆರಳಿದ್ದಾರೆ. ಅಂದು ಅದೇ ಜನರು  ಹಲಸು-ಹೊಲಸು ಎಂದು ಜರೆದರು,.ಹಾಗಿದ್ದರೂ ಜಗ್ಗಲಿಲ್ಲ.ಇಂದು ಜನರಿಗೆ ಅನಿಸಿದೆ, ಹಲಸು ಕೂಡಾ ಮೌಲ್ಯವರ್ಧನೆ ಮಾಡಿದರೆ ತೀರಾ ಲಾಭದಾಯಕ ಅಂತ.ಕಳೆದ ವರ್ಷ 2 ಲಕ್ಷ ಹಲಸಿನ ಗಿಡ ದೇಶದ ವಿವಿದೆಡೆ ನೆಡುವ ಕೆಲಸವಾಯಿತು. ಮಿತ್ರ ಮುಂದುವರಿಸುತ್ತಾ ಹೇಳಿದ, ಇದಲ್ವಾ ಒಂದು ಪತ್ರಿಕೆ ಮಾಡಬೇಕಿರುವುದು. .!.ಇದಲ್ವಾ ಆಂದೋಲನ. .!.

ಈಗಂತೂ ಸೋಶಿಯಲ್ ಮೀಡಿಯಾ ತೀರಾ ಚುರುಕಾಗಿದೆ.ಇಂದು ಪತ್ರಿಕೆಯಲ್ಲಿ ಬರುವ ಸಂಗತಿಗಳು ನಿನ್ನೆಯೇ ಚರ್ಚೆಯಾಗಿ ಬಿಡುತ್ತದೆ.ವೈಭವೀಕರಣ ಸಾಧ್ಯವೇ ಇಲ್ಲ.ಏಕೆಂದರೆ ಅಂತಹ ವರದಿಗಳನ್ನು  ನೋಡಲು ಪುರುಸೊತ್ತಿಲ್ಲ,ಏಕೆಂದರೆ ಆತ ನಿನ್ನೆಯೇ ಅದನ್ನು  ಸೋಶಿಯಲ್ ಮೀಡಿಯಾದಲ್ಲಿ  ಓದಿ ಮುಗಿಸಿರುತ್ತಾನೆ ಅದೂ ವಿಡಿಯೋ ಸಹಿತ.
ಮೊನ್ನೆ ಮೊನ್ನೆ ಗೆಳೆಯ ಭಾಷಣದಲ್ಲಿ  ಹೇಳುತ್ತಿದ್ದ, ಈಗ ಸೋಶಿಯಲ್ ಮೀಡಿಯಾಗಳೇ ಪವರ್‍ಫುಲ್, ಒಂದೋ ನಾವು ಅದಕ್ಕೆ ಹೊಂದಿಕೊಳ್ಳಬೇಕು, ಅಲ್ಲೇ ಖಂಡಿಸಬೇಕು, ಉತ್ತರಿಸಬೇಕು, ಸ್ವೀಕರಿಸಬೇಕು.ಇಲ್ಲಾ ನಾವು ಅದರ ಬಗ್ಗೆ ಮಾತನಾಡಬಾರದು. .!. ಹೌದು, ಈ ಮಾತು ನಿಜವೇ.ಮೊನ್ನೆ ಹಾಗೆಯೇ ಆಗಿತ್ತು, ನನ್ನ ತೀರಾ ಆಪ್ತರೊಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ  ಗಾಳಿಸುದ್ದಿ ಹರಿಯಬಿಟ್ಟರು, ಅಪಪ್ರಚಾರ ಮಾಡಿದರು.ಅದಕ್ಕೆ ಅವರು ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲೇ ಉತ್ತರಿಸಿದರು.ಮರುದಿನವೇ ಆ ಗಾಳಿಸುದ್ದಿ ತಣ್ಣಗಾಯಿತು. .!.
ಏಕೆಂದರೆ, ಈಗಂತೂ ಯುವಸಮೂಹವೆಲ್ಲಾ ಸೋಶಿಯಲ್ ಮೀಡಿಯಾ ಬಳಕೆಯಲ್ಲಿದೆ.ಮುಂದೆ ಮತ್ತಷ್ಟು ಹೆಚ್ಚಾಗುವುದೂ ನಿಶ್ಚಿತ.ಕ್ಲಾಸ್‍ಗೆ ಒಂದರಂತೆ ಗ್ರೂಪ್‍ಗಳು ಇರುತ್ತದೆ, ಅಲ್ಲೇ ತರಗತಿಯ ಬಗ್ಗೆ ಚರ್ಚೆ ನಡೆಯುತ್ತದೆ, ಶಿಕ್ಷಕರೂ ಅಲ್ಲಿಯೇ ಪರಿಹಾರ, ಉತ್ತರವನ್ನೂ ನೀಡುತ್ತಾರೆ.ಪರಿಸ್ಥಿತಿ ಹೀಗಿರುವಾಗ ನೀವು ಅದನ್ನೆಲ್ಲಾ ಬಳಕೆ ಮಾಡಬಾರದು ಅಂತ ಹೇಳಲು ಆಗುತ್ತಾ ?. ಅದರ ದುರ್ಬಳಕೆ ಮಾಡಬಾರದು ಅಂತ ನಾವು ಹೋರಾಟ ಮಾಡೋಕಾಗುತ್ತಾ ?.ಏಕೆಂದರೆ ಸಿಹಿ-ಕಹಿ ಇದ್ದೇ ಇರುತ್ತೆ. ಜಾಗೃತಿ ಮಾತ್ರಾ ಮಾಡಬಹುದೇ ಹೊರತು , ನಿಷೇಧ ಮಾಡೋಕಾಗುತ್ತಾ ?. ಅದೆಲ್ಲಾ ಕಷ್ಟದ ಮಾತು. ಹಾಸ್ಯಾಸ್ಪದ ಅಷ್ಟೇ.
ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ , ಉತ್ತರ ಅದೆಲ್ಲಾ ಕ್ಷಣಿಕದ್ದು ಮಾತ್ರಾ.ಅದೆಲ್ಲಾ ತಕ್ಷಣದ ಪ್ರತಿಕ್ರಿಯೆ ಅಷ್ಟೇ.ಅದೇ ಉತ್ತರ ಶಾಶ್ವತವೂ ಆಗಿರಲು ಸಾಧ್ಯವಿಲ್ಲ.ಏಕೆಂದರೆ ಆ ಕ್ಷಣದಲ್ಲಿ ಸರಿ ಅಂತ ಅನಿಸಿದ್ದ ನಂತರ ಯೋಚಿಸಿದಾಗ ಅದು ಸರಿಯಲ್ಲ ಅಂತ ಅನಿಸಬಹುದು.ಆ ವಿಷಯದ ಬಗ್ಗೆ ಸುಮ್ಮನಾಗಬಹುದು. ಹಾಗಾಗಿ ಅದರ ಪಾಡಿಗೆ ಬಿಡಬೇಕು ಅಷ್ಟೇ.ಆ ಬಗ್ಗೆ ಚರ್ಚೆ ಮಾಡಿದರೆ ಆತನಿಗೆ ಸರಿ ಅನಿಸದೇ ಇದ್ದರೂ ಕೂಡಾ ಮತ್ತೆ ಸಮರ್ಥನೆಯೇ ಇರುತ್ತದೆ.ಹೀಗಾಗಿ ತಪ್ಪುಗಳೇ ಬೆಳೆಯುತ್ತದೆ .ಆಗ ಸಮಾಜವನ್ನೇ ತಪ್ಪುದಾರಿಗೆ ಎಳೆದಂತಾಗುತ್ತದೆ ಅಂತ ಗೆಳೆಯ ಹೇಳುತ್ತಿದ್ದ.

ಇನ್ನೊಂದು ವಿಷಯ ಎಂದರೆ , ಟ್ವಿಟ್ಟರ್ ಹೊರತುಪಡಿಸಿ ಇತರ ಸೋಶಿಯಲ್ ಮೀಡಿಯಾಗಳಲ್ಲಿ  ಚರ್ಚೆಯಾಗುವ ಬಹುತೇಕ ಸಂಗತಿಗಳು ಪ್ರಬುದ್ಧವಾಗಿರುವುದಿಲ್ಲ. ಒಬ್ಬರು  ಒಂದು ವಿಷಯದ ಬಗ್ಗೆ ಹೇಳಿದರೆ, ಅದೇ ಸಮಯದಲ್ಲಿ  ಮತ್ತೊಬ್ಬರು  ಇನ್ನೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ. ಅದೇ ವೇಳೆ ಇನ್ನೊಬ್ಬ ಲೈಕ್ ಮಾಡುತ್ತಾನೆ.ಆದರೆ ಆತ ಲೈಕ್ ಮಾಡುವುದು  ಮತ್ಯಾವುದೋ ವಿಷಯಕ್ಕೆ.ಹೀಗಾಗಿ ಅಲ್ಲಿ ನಡೆಯುವ ಯಾವುದೇ ಚರ್ಚೆಗಳು ಪ್ರಬುದ್ಧವಾಗಿರುವುದಿಲ್ಲ. ಟ್ವಿಟ್ಟರ್ ಹೊರತುಪಡಿಸಿ ಇತರ ಸೋಶಿಯಲ್ ಮೀಡಿಯಾಗಳಲ್ಲಿ ನೀಡುವ ಪ್ರತಿಕ್ರಿಯೆಯೇ ಪತ್ರಿಕೆಯ ಹೇಳಿಕೆ ಆಗುವುದು  ಸಾಧ್ಯವೇ ಇಲ್ಲ.ಹಾಗೆಂದು ನಾವು ಭಾವಿಸಿದ್ದೇವೆ ಎಂದರೆ ನಮ್ಮ ಮಾನಸಿಕ ಮಟ್ಟವನ್ನು  ಅದು ತಿಳಿಸುತ್ತದೆ.ಹೀಗಾಗಿ ಇದನ್ನು ಒಂದು ವಿಷಯದ ಮಾಧ್ಯಮವಾಗಿ ಸ್ವೀಕರಿಸಬೇಕಷ್ಟೇ ಹೊರತು.ಸತ್ಯಾಸತ್ಯತೆ ಬಗ್ಗೆ ಮರುದಿನದ ಪತ್ರಿಕೆಯ ಮಾಹಿತಿ ಖಚಿತ ಪಡಿಸುತ್ತದೆ ಅಷ್ಟೇ.ಹಾಗಾಗಿ ಒಂದು ಪತ್ರಿಕೆಯೇ ಪ್ರಬುದ್ಧವಾಗಿರುತ್ತದೆ ಎಂದು ಗೆಳೆಯ ಹೇಳುತ್ತಾನೆ.ಆದರೆ ಪತ್ರಿಕೆಯೂ ಸೋಶಿಯಲ್ ಮೀಡಿಯಾದ ಮಟ್ಟಕ್ಕೆ ಇಳಿದರೆ ?

ನಾನು ಸೋಶಿಯಲ್ ಮೀಡಿಯಾ ಬಳಗೆ ಮಾಡುತ್ತೇನೆ.ಹಾಗಂತ ನಾನು ಟೀಕೆ ಮಾಡಲೇ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿಲ್ಲ.ನನಗೆ ಹೇಳಬೇಕು ಅನಿಸಿದ್ದನ್ನು ಹೇಳುತ್ತೇನೆ, ಬೇಕಾದ್ದನ್ನು  ಪಡೆಯುತ್ತೇನೆ. ಪ್ರಬುದ್ದವಾದ ಸಂಗತಿಗಳನ್ನು  ಸ್ವೀಕರಿಸುತ್ತೇನೆ. ಬೇಡದೇ ಇದ್ದ ಸಂಗತಿಗಳನ್ನು  ಅಲ್ಲೇ ಬಿಡುತ್ತೇನೆ. ಆದರೆ ಸೋಶಿಯಲ್ ಮೀಡಿಯಾದ್ದೇ ಸರಿ ಆಗಬೇಕು ಎಂದೇನಿಲ್ಲ.ಅಥವಾ ಅದಕ್ಕೆ ಟೀಕೆಗಳು, ವಿರೋಧವೂ ಇರಬಹುದು.ಅದನ್ನು  ಸ್ವೀಕರಿಸುವ ಮನೋಸ್ಥಿತಿ ನನ್ನಲ್ಲಿದೆ.ನನ್ನ ಬಗ್ಗೆ ಯಾರು ಬೇಕಾದರೂ ಮಾತನಾಡಬಹುದು, ಹೇಗೆ ಬೇಕಾದರೂ ಮಾತನಾಡಬಹುದು.ಮಾತನಾಡಿದರೆ ಮುಗಿಬೀಳುವುದಿಲ್ಲ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ನಾನು ಹೇಗೆಂದು ನನಗೆ ತಿಳಿದಿದೆಯಲ್ಲಾ.  ., ಅಂತ ಗೆಳೆಯ ಹೇಳುತ್ತಾ, ಕೊನೆಗೊಂದು ಮಾತು  ಹೇಳಿದ, ಅಷ್ಟಕ್ಕೂ, ನಿಮಗೆ ಸ್ವಾತಂತ್ರ್ಯ ಇದೆಯಲ್ಲಾ. .  .!


12 ಮೇ 2016

ಮಲೆಯ ಮೇಲೆ ಕುಳಿತು ಮಳೆಯ ಹುಡುಕಾಟ. .!ಅಂದು ಸಂಜೆ, ಮೂಡಣದಿ ಆಗಸವೆಲ್ಲಾ ಕಪ್ಪಾಗಿತ್ತು.ಇನ್ನೇನು ಗುಡುಗು ಸಹಿತ ಮಳೆಯಾಗುತ್ತೆ ಅಂತ ಕಾದು ಕುಳಿತಿದ್ದೆವು. , ದೊಡ್ಡದಾದ ತಣ್ಣನೆಯ ಗಾಳಿಯೊಂದು ಅದೇ ವೇಳೆ ಬಂತು, ಮೈಯೆಲ್ಲಾ ತಂಪಾಯಿತು.  . ಖುಷಿ ಮತ್ತಷ್ಟು ಹೆಚ್ಚಾಯಿತು.  .ಮಳೆ ಹತ್ತಿರದಲ್ಲಿಯೇ ಬಂತು.  . ಕೆಲವೇ ಹೊತ್ತಲ್ಲೂ ಇಲ್ಲೇ ಬರುತ್ತದೆ ಎಂದು ಸಂಭ್ರಮಿಸಿದ್ದೂ ಆಯಿತು. .  .!, ಮತ್ತೆ ಬಾನು ಬೆಳ್ಳಗಾಯಿತು. ., ಮಳೆ ದೂರವಾಯಿತು. . !. ನಿರೀಕ್ಷೆ ಹುಸಿಯಾಯಿತು. ಮಳೆಯ ಹುಡುಕಾಡುತ್ತಾ ಸಾಗುತ್ತಲೇ ಇದ್ದ ನಮಗೆ ಕಂಡದ್ದು ಆ ಮಲೆಯ ಮೇಲೆ ಅಣಕಿಸುತ್ತಿರುವ ಮುಗಿಲು. ಮಲೆಯ ಒಳಗಿದ್ದ ಬಾಡಿದ ಗಿಡ.ನಮಗೆಂದೂ ಆ ಗಿಡ ಬಾಡಿದ ನೆನಪೇ ಇಲ್ಲ.  .!. ಆದರೆ ಇಂದು ಬಾಡಿತ್ತು. ಯಾರನ್ನೋ ಕಳಕೊಂಡ ಭಾವ ಅಲ್ಲಿ ಮನೆ ಮಾಡಿತ್ತು.ಇಡೀ ಕಾಡೇ ಸೂತಕಾಚರಣೆಯಲ್ಲಿತ್ತು. ಹಕ್ಕಿಗಳು ಸದ್ದೇ ಮಾಡುತ್ತಿರಲಿಲ್ಲ. ಆ ಜೀರುಂಡೆಗಳು ನಮ್ಮನ್ನು ಕರೆಯುತ್ತಲೇ ಇರಲಿಲ್ಲ. ಆ ಮರದ ಕೆಳಗೆ ಅಂದಿದ್ದ ಜೇನು ಗೂಡು ಕಾಣಿಸಲೇ ಇಲ್ಲ. .!. ನಿಜ ನಾವು ಅಲ್ಲಿ ಹುಡುಕಲು ಹೊರಟಿದ್ದು ಮಳೆಯನ್ನು. .  .!.

ಮಳೆಯ ಹುಡುಕಾಡುತ್ತಾ ಮತ್ತೆ ಮಲೆ ಏರಿದಾಗ , ಅಂದು ನಾವು ಕುಳಿತಿದ್ದ ದೊಡ್ಡ ಮರ ಕಂಡಿತು. ಆ ಮರವೂ ನಮ್ಮನ್ನು  ಎಂದಿನಂತೆ ಸ್ವಾಗತಿಸಲೇ ಇಲ್ಲ. .!. ಮರದ ಕೆಳಗೆ ಇದ್ದ ಎಲೆಗಳು ದೊಡ್ಡ ಸದ್ದು ಮಾಡುತ್ತಿದ್ದವು. ನಮ್ಮ ಹೆಜ್ಜೆ ಬಿದ್ದೊಡನೆಯೇ ಪರ್. .  ಪರ್ ಅನ್ನುತ್ತಿದ್ದವು. ಅಂದೆಲ್ಲಾ ಹಾಗೆ ಹೇಳಿದ್ದೇ ಇಲ್ಲ. ಆ ಮರದ ಎಲೆಗಳು ನಮಗೆ ತಂಪು ಕೊಟ್ಟಿದ್ದವು,ಸುಸ್ತಾಗಿ ಬಂದ ನಮಗೆ ತಂಪಾಗಿ ಮಲಗಲು ಆಶ್ರಯ ಕೊಟ್ಟಿತ್ತು.ಆದರೆ ಈ ಬಾರಿ ಹಾಗೆ ಅವಕಾಶ ಕೊಟ್ಟಿಲ್ಲ, ಅದೇನೋ ನೋವು ಹೊತ್ತು ಕುಳಿತಿತ್ತು ಆ ಮರ. ಜೊತೆಗೆ ಆ ಮರವೂ ಹೇಳುತ್ತಿತ್ತು, ಮಳೆಯನ್ನು ಕರೆತನ್ನಿ  ಎಂದು ನಮಗೇ ಹೇಳಿತ್ತು, ನಾವು ಕೇಳಿದೆವು, ನಾವಲ್ಲ  ನೀನೇ ಅದರ ಮಿತ್ರ , ನೀನು ಕರೆದರೆ ಈಗಲೇ ಬಂದೀತು ಎಂದಾಗ , ನಕ್ಕಿತು ಮತ್ತು ಒಂದೇ ಮಾತಿನಲ್ಲಿ ಆಗಸ ನೋಡುತ್ತಾ ಹೇಳಿತು, ಆ ಕಾಲ ಕಳೆದು ಹೋಗಿದೆ. . !.

ನಮಗಂತೂ ಅಚ್ಚರಿಯಾಯಿತು.  .! ಆ ಕಾಲ ಕಳೆದು ಹೋಗಿದೆ ಎಂದರೆ ಈಗ ಮತ್ಯಾವುದು ?.

ಮರ ಆಗಸದ ಕಡೆಗೇ ಬಾಡಿದ ಮುಖದೊಂದಿಗೆ ನೋಡುತ್ತಾ ಇದ್ದರೆ, ಇತ್ತ ಕಡೆ ಇದ್ದ ಸಣ್ಣ ಸಣ್ಣ ಗಿಡಗಳೂ ಮೌನವಾಗಿದ್ದವು, ಅವುಗಳೂ ಬಾಡಿ ಮಾತನಾಡುವ ಸ್ಥಿತಿಯಲ್ಲಿರಲೇ ಇಲ್ಲ. ಹಾಗಿದ್ದರೂ ಗಿಡವೊಂದು ಹೇಳಿತು, ಈಚೆಗೆ ನಾವೆಲ್ಲಾ ಬದುಕುವ ಸ್ಥಿತಿಯಲ್ಲಿ ಇಲ್ಲ. . .!, ನೀವೆಲ್ಲಾ ಬದುಕಬಲ್ಲಿರಿ. .!.ಮತ್ತೆ ಬದುಕು ಕಟ್ಟಬಲ್ಲಿರಿ. .!.ನಮಗೊಂದೇ ಬದುಕು, ಅದೆಲ್ಲಾ ಇನ್ನೂ ಅಭದ್ರ, ಹಾಗಿದ್ದರೂ ನಮ್ಮ ಪ್ರಯತ್ನ ನಿರಂತರ ಎನ್ನುತ್ತಾ ಆಗಸ ನೋಡಿತು.

ಆ ಮಾತು ಕೇಳಿ ಮತ್ತಷ್ಟು ಪ್ರಶ್ನೆಗಳೇ ಹೆಚ್ಚಾದವು ಹೊರತು , ಉತ್ತರ ಸಿಕ್ಕಿಲ್ಲ. .  ಮತ್ತೆ ಮಲೆಯ ಏರಿದೆವು. . ಮಳೆಯ ಹುಡುಕಾಡುತ್ತಾ.  .

ಇನ್ನೇನು ಮಲೆಯ ತುದಿ ತಲಪುವವರಿದ್ದೆವು, ಆಗೊಂದು ಸದ್ದು ಕೇಳಿತು. ನೋಡಿದಾಗ, ಅಳಿಲು. ಚೀಂವ್. .ಚೀಂವ್ ಎಂದು ಅತ್ತಿತ್ತ ಓಡಾಡುತ್ತಾ ನಮ್ಮನ್ನು ಕಂಡೊಡನೆ ಮರ ಏರಿತು ಕುಳಿತು ನೋಡಿತು. ಆಗ ಆ ಮರ ಹೇಳಿತು, ಅದು ನೀರಿಗಾಗಿ ಓಡಾಟ ನಡೆಸುತ್ತಿದೆ. ನೀರಿಲ್ಲ, ಆದರೂ ಅದು ಸಣ್ಣದೊಂದು ಪ್ರಯತ್ನ ಮಾಡುತ್ತಿದೆ. . !, ಅಂದೆಲ್ಲಾ ಹೀಗಾಗಲೇ ಇಲ್ಲ, ನಮ್ಮ ಕಾಡಿನಲ್ಲಿ  ನಮ್ಮವರಿಗೆ ಬೇಕಾದ ನೀರು ಸಂಗ್ರಹಿಸುತ್ತಿದ್ದೆವು, ಆದರೆ ಈಗ ಹಾಗಿಲ್ಲ. . !.ಅದ್ಯಾಕೆ ಹೀಗೆ ಎಂದರೆ , ಮತ್ತೆ ಆ ಮರ ಮೌನವಾಯಿತು, ಆಗಸ ನೋಡಿತು. .ಏಕೆಂದರೆ ಅದೂ ಬಾಡಿದೆ. .! ಶಕ್ತಿ ಇಲ್ಲ. .!. ಆದರೆ ಆ ಅಳಿಲಿಗೆ ಆಶ್ರಯ ನೀಡಬೇಕು ಎನ್ನುವ ಹಾಗೂ ಅಳಿಲಿನ ವೇದನೆ ಹೇಳುವ ಮನಸ್ಸು ಅದಕ್ಕಿದೆ ಅಷ್ಟೇ. .!. ನಮ್ಮೊಂದಿಗೆ ಮಾತನಾಡುವ ಶಕ್ತಿ ಆ ಮರಕ್ಕಿಲ್ಲ. . !.

ಮತ್ತೆ ನಮಗೆ ಪ್ರಶ್ನೆಗಳೇ ಹೆಚ್ಚಾದವು ಹೊರತು  ಉತ್ತರ ಸಿಕ್ಕಿಲ್ಲ. .!

ಮಲೆ ಏರಿ ಸುಸ್ತಾಯಿತು, ಮಳೆಯೇ ಸಿಕ್ಕಿಲ್ಲ. .! ಶಾಖದ ಪರಿಣಾಮ ಮೈಯೆಲ್ಲಾ ಸೋತಿತ್ತು. ತಂದಿದ್ದ ಬಾಟಲಿ ನೀರೆಲ್ಲಾ ಖಾಲಿಯಾಯಿತು. .!. ಅಂದು ಬಂದಾಗ , ಅಲ್ಲೊಂದು ಕಡೆ ನೀರಿತ್ತು, ಹುಡುಕಾಡುವ ಪ್ರಯತ್ನ ಮಾಡಿದಾಗ ಅಲ್ಲೂ ನೀರು ಖಾಲಿಯಾಗಿತ್ತು. .!.

ಆಗ ಅಲ್ಲೊಂದು ಕಪ್ಪೆ ಕೂಗುತ್ತಿತ್ತು, ಜೊತೆಗೆ ಹೇಳಿತ್ತು, ನಾನೂ ಮಳೆಯ ಕರೆಯುತ್ತಲೇ ಇದ್ದೇನೆ, ಆತ ಬರುತ್ತಲೇ ಇಲ್ಲ. .!. ಇದುವರೆಗೆ ಆತ ಹೀಗೆ ಮಾಡಿದ್ದೇ ಇಲ್ಲ.ಕರೆದಾಗ ಬರುತ್ತಿದ್ದ. ಇನ್ನೂ ನಾನು ಜಾಗ ಬದಲಿಸುವೆ, ಅಲ್ಲೊಂದು ಕಡೆ ನೀರಿದೆ ಎಂದು  ಹೇಳಿತು.

ನಾವು ತಡ ಮಾಡಿಲ್ಲ , ಆ ಕಡೆ ಹೋದೆವು. .!. ಕಪ್ಪೆಗಿಂತ ಮೊದಲೇ ಅಲ್ಲಿಗೂ ಭೇಟಿ ಇತ್ತಾಯಿತು. .!

ನೀರಿನ ಹುಡುಕಾಟ ಮಲೆಯ ಮೇಲೆ ನಡೆಯಿತು. .!. ಎಲೆಲ್ಲೂ ನೀರಿಲ್ಲ. .!. ಬಾಯಾರಿದೆ.. . ನೀರು ಬೇಕು. .!.

ಅಲೆದಾಟ ಮುಂದುವರಿಯುತ್ತಾ ಮಲೆಯ ಕೆಳಗೆ ಬಂದಾಯಿತು. .!. ಮಳೆ ಸಿಕ್ಕಿಲ್ಲ.  .ನೀರೂ ಸಿಕ್ಕಿಲ್ಲ.  .!.ಉತ್ತರವೂ ಸಿಕ್ಕಿಲ್ಲ.  .!

ಇಲ್ಲಿ ಬಂದಾಗ ಭಾರೀ ಯಂತ್ರವೊಂದು ಭೂಮಿಯ ಕೊರೆಯುತ್ತಿತ್ತು, ನೀರಿಗಾಗಿ ಹೋರಾಟ ಮಾಡುತ್ತಿತ್ತು. .!.ಭೂಮಿ ನಲುಗುತ್ತಿತ್ತು. .! ಮರ ನಗುತ್ತಿತ್ತು. . ! ಮಳೆ ಓಡುತ್ತಿತ್ತು.  .!. ನಾವು ಮಾತ್ರಾ ನೋಡುತ್ತಾ ನಿಂತಿದ್ದೆವು. .!. ಏನೂ ಮಾಡಿಲ್ಲ. .! ಮಾಡುತ್ತಲೂ ಇಲ್ಲ.  .!.ಗಿಡ-ಮರ-ಪ್ರಾಣಿ-ಪಕ್ಷಿಗಳೆಲ್ಲಾ ಮಳೆಗಾಗಿ ಒಂದೊಂದು ಪ್ರಯತ್ನ ಮಾಡುತ್ತಿದ್ದರೆ. . . ನಾವು ಆ ಪ್ರಯತ್ನದಲ್ಲಿ ಮೊದಲ ಪಾಲುದಾರಿಕೆಗೆ ಓಡುತ್ತಿದ್ದೆವು ಅಷ್ಟೆ.. .!

ನನಗನ್ನಿಸಿತು. . .,  ಮಳೆ ಹುಡುಕಾಡಲು ನಾನ್ಯಾರು.  .?. ದಿನ-ವಾರ-ತಿಂಗಳು ಕಾದರೂ ಮಳೆ ಬರಬೇಕಲ್ಲಾ. . !.ಮಳೆ ನನಗಾಗಿ ಕೊಟ್ಟದ್ದು ಎಷ್ಟು. . ! ನಾನು ಮಳೆಗಾಗಿ ಮಾಡಿದ್ದೇನು. . ?

09 ಮೇ 2016

ನಿಮ್ಮ ಊರು ಹಳ್ಳಿಯಲ್ಲಿದೆ ಎನ್ನುವುದೂ ತಾಂತ್ರಿಕತೆಯ ಮೂಲಕ. . .!ನಿಮ್ಮ  ಊರು ಹಳ್ಳಿಯಲ್ಲಿದೆ.  . ನಿಮಗೆ ಸೌಲಭ್ಯ ನೀಡಲು ಸಾಧ್ಯವಿಲ್ಲ.  .!. ಹೀಗೆಂದು  ಎಸಿ ಕಚೇರಿಯಲ್ಲಿ ತಣ್ಣಗೆ ಕುಳಿತು ಹೇಳಿರುವುದು. . . ಹೇಳುವುದು . .  ಹೇಳುತ್ತಲೇ ಇರುವುದು ಅಧಿಕಾರಿಗಳು . ..!.
ಇದೆಲ್ಲಾ ತಾಂತ್ರಿಕತೆ ಮೂಲಕ ನಗರದಲ್ಲಿ  ಕೂತು ಸಾಧ್ಯವಿದೆ.ಆದರೆ ಹಳ್ಳಿಯ ಮಂದಿ ಇದನ್ನೆಲ್ಲಾ ಅಚ್ಚರಿ ಎಂಬಂತೆ ಕಣ್ ಕಣ್ ಬಿಟ್ಟು ನೋಡುತ್ತಲೇ ಇಂದಿಗೂ ಕೂರಬೇಕಿದೆ ಎಂದರೆ, ಇದು  ಬದಲಾಗುತ್ತಿರುವ ಕಾಲ. . !

ನಮ್ಮ ಊರಿಗೆ ಮೊಬೈಲ್ ಟವರ್ ರಚನೆಯಾಗಬೇಕು ಎಂದು ಮನವಿ-ಅಹವಾಲು ಶುರುವಾಯಿತು.ಬರೋಬ್ಬರಿ  6 ವರ್ಷಗಳ ಕಾಲ ಸತತ ಪ್ರಯತ್ನ ನಡೆಯಿತು.ಕೊನೆಗೊಂದು ದಿನ ಇಲಾಖೆಯಿಂದ ಲೆಟರ್ ಬಂತು, "ನಿಮ್ಮ ಊರು ತೀರಾ ಹಳ್ಳಿ. . ನಿಮಗೆ ಮೊಬೈಲ್ ಟವರ್ ನೀಡಲು ಆಗುವುದಿಲ್ಲ. ಇನ್ನೊಂದು ಊರಿನಲ್ಲಿ  ಹೊಸ ಟವರ್ ಆಗುತ್ತಿದೆ, ಅಲ್ಲಿಂದ ನಿಮಗೆ ಸಿಗ್ನಲ್ ಸಿಗುತ್ತದೆ"ಎಂದರು.
ಜನರು ಸುಮ್ಮನೆ ಇರಲಿಲ್ಲ, ಮತ್ತೆ ಜೋರಾದರು. ಇಲಾಖೆ ಮುಂದೆ ಹೋದರು ,ಇಲಾಖೆಯ ಪ್ರಮುಖರನ್ನು  ತಣ್ಣನೆಯ ಕೊಠಡಿಯಲ್ಲಿ  ಕುಂತು ಮಾತನಾಡಿದರು.
ಇಲಾಖೆಯ ಆ ಹಿರಿಯ ಅಧಿಕಾರಿ ಮುಂದೆ ,ತಮ್ಮೂರಿನ ಸಮಸ್ಯೆ ಎಳೆಎಳೆಯಾಗಿ ಹೇಳುತ್ತಾರೆ.ರಾತ್ರಿ ವೇಳೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದರೆ 108 ಕ್ಕೂ ಕರೆ ಮಾಡಲು ವ್ಯವಸ್ಥೆ ಇಲ್ಲ ಎನ್ನುತ್ತಾರೆ. .!,
ಆಗ, ಆ ಅಧಿಕಾರಿ ಹೇಳುತ್ತಾರೆ, ನಿಮ್ಮೂರಿನಲ್ಲಿ  ಟವರ್ ಹಾಕಿದರೆ "ನಮಗೆ ಲಾಭವಾಗಲ್ಲ". . !. ಒಂದು ಟವರ್‍ಗೆ 50 ರಿಂದ 60 ಲಕ್ಷ ರೂಪಾಯಿ ಬೇಕು, ಇಷ್ಟು ಖರ್ಚು ಮಾಡಿದರೆ ನಮಗೆ ಆದಾಯ ಹೇಗೆ? ಎಂದೂ ಕೇಳುತ್ತಾರೆ.
ನಮ್ಮೂರಿನ ಜನ ಇದೆಲ್ಲಾ ಯೋಚನೆ ಮಾಡೋಲ್ಲ, ಲಾಭವೋ ನಷ್ಟವೋ ಎಂದೂ ಯೋಚಿಸದರೆ ಉಪಕಾರ ಮಾಡೋರು."ನಮಗೆ ಲಾಭ ಆಗುತ್ತೆ" ಎಂದು ಯೋಚಿದೋರೇ ಅಲ್ಲ.
ಆದರೆ ಈಗ ಕುಳಿತಿರೋದು  ನಗರದ ತಣ್ಣನೆಯ ಕೊಠಡಿಯಲ್ಲಿ. .!. ನಿಜ, "ನಮಗೆ ಲಾಭ"ದ ಬಗ್ಗೆ ಇದುವರೆಗೆ ಯೋಚಿಸಿಲ್ಲ, ಈಗ ಅದೊಂದು ಯೋಚನೆಯೂ ಬಂತು. .!., ಆಗ ಹೇಳಿದ್ದು, ಈಗ ಮೊಬೈಲ್ ಅನ್ನೋದು  ಅತೀ ಅಗತ್ಯ ಸೇವೆಯಾಗಿದೆ. ಒಂದೇ ಟವರ್‍ನಿಂದ ಲಾಭ-ನಷ್ಟದ ಪ್ರಶ್ನೆ ಬೇಡ, ಇಡೀ ತಾಲೂಕಿನ ಪ್ರಶ್ನೆ ಬರಲಿ ಎಂದೂ ಒತ್ತಾಯಿಸಿದರು. ಮತ್ತೆ ಮೌನವಾದ ಅಧಿಕಾರಿ. . ಮೊಬೈಲ್ ಮೇಲೆ ತೆಗೆದರು,
ಅಂತೂ ಕೊನೆಗೆ ಅದೆಲ್ಲಾ ಮಾತುಕತೆಯಾಗಿ,ನೇರವಾಗಿ ರಾಜಧಾನಿಯಾಗಿ ಇನ್ನಷ್ಟು ತಣ್ಣನೆಯ ಕೊಠಡಿಯಲ್ಲಿ  ಕುಳಿತಿದ್ದ ಮತ್ತೊಬ್ಬರಿಗೆ ಕುಂತಲ್ಲಿಂದಲೇ ಕರೆ ಮಾಡಿದರು.ಅಲ್ಲೊಂದು ಮೊಬೈಲ್ ಅವರ್ ಆಗಬೇಕು ಎಂದರು..
ಬಳಿಕ ಇರೋದೇ ತಾಂತ್ರಿಕತೆಯ ಮೂಲಕ  ದಾರಿತಪ್ಪಿಸಿ-ದಾರಿ ಹುಡಕುವ ಪ್ರಯತ್ನ. .!.
ರಾಜಧಾನಿಯಲ್ಲಿದ್ದವರು  ನಮ್ಮೊಂದಿಗೆ ದೂರವಾಣಿಯಲ್ಲಿ  ಮಾತನಾಡುತ್ತಾ, ಸ್ಥಳ ಕೇಳುತ್ತಾರೆ,  ಅದಕ್ಕೆ ವಿವರಣೆ ಕೊಡುತ್ತಿದ್ದಂತೆ, ಅದು ಇಂತಾ ಕಡೆ, ಅಲ್ಲಿ  ಇಂತಹ ಸ್ಥಳ ಇದೆ, ಅಂಚೆ ಕಚೇರಿ ಇದೆ. .  ..  ..  ಅಲ್ಲಿಂದ ಹೇಳುತ್ತಿದ್ದರು. .  ಇಲ್ಲೆಲ್ಲಾ ಅಚ್ಚರಿ. . .!. ಇದು ಹೇಗಪ್ಪಾ ಸಾಧ್ಯ. . !. ಕೊನೆಗೆ ರಾಜಧಾನಿಯ ಅಧಿಕಾರಿ ತಣ್ಣಗೆ ಅಂದು ಬಿಟ್ಟರು " ನಿಮ್ಮಲ್ಲಿ  ಮನೆಯೇ ಇಲ್ಲಾರಿ . .ಅಲ್ಲೆಲ್ಲಾ ಕಾಡೇ ಇದೆ. . ಮತ್ತೆ ಹೇಗೆ ಟವರ್.  .".
ತಕ್ಷಣವೇ ನಮ್ಮೂರಿನ ಜನ ಹೇಳಿದ್ದು, "ನೀವು ಗೂಗಲ್ ನೋಡಿ ಏನನ್ನೂ ಹೇಳಬೇಡಿ ಇಲ್ಲಿಗೆ ಬನ್ನಿ . .ಸಾಕಷ್ಟು ಮನೆಗಳು ಇವೆ, ಗೂಗಲ್ ನೋಡಿ ದಾರಿ ತಪ್ಪಬೇಡಿ, ದಾರಿ ತಪ್ಪಿಸಬೇಡಿ, ಅಲ್ಲಿಗೇ ಬನ್ನಿ ದಾರಿ ಹುಡುಕಿ.  ."

 ಇಂದು ಆಗಿರುವುದು. . . ಆಗುತ್ತಿರುವುದು. . ಇದೇ. .!. ಎಲ್ಲವನ್ನೂ ಆ ತಣ್ಣನೆಯ ಕೊಠಡಿಯಲ್ಲಿ  ಕುಳಿತು ಮನೆಯೇ ಇಲ್ಲ, ವ್ಯವಸ್ಥೆಯೇ ಸಾಧ್ಯವಿಲ್ಲ ಎಂದು  ವರದಿ ನೀಡಿ ಬಿಟ್ಟರೆ ಓಕೆ ಎಂದೇ ಯೋಚಿಸಿರುವ ಇಂದಿನ ಕಾಲದಲ್ಲಿ  ಹಳ್ಳಿಗಳು ಬದಲಾಗೋದು ಹೇಗೆ ಸಾಧ್ಯ ?. ಇದುವರೆಗೆ ಎಲ್ಲಾ ಕಡೆಯೂ ಆಗಿರೋದು ಇದೆ, ಅದ್ಯಾವುದೋ ಸ್ಯಾಟಲೈಟ್ ಮೂಲಕ ಮೇಲಿನಿಂದಲೇ ನೋಡಿ ಮತ್ಯಾವುದೋ ಯೋಜನೆ ಹಾಕಿ ಕೊನೆಗೆ ಜನರನ್ನೇ ಓಡಿಸುವ ಕೆಲಸ ನಡೆದಿದೆ.
ತಾಂತ್ರಿಕತೆ ಎನ್ನುವುದು  ನಗರದಲ್ಲಿ  ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ಹಳ್ಳಿಗಳಿಗೆ ಅದು  ತಲಪುವ ವೇಳೆ ಎಲ್ಲವೂ ಮುಗಿದಿರುತ್ತದೆ.ಮತ್ತೂ ಕೆಲವು ತಲಪುವುದೇ ಇಲ್ಲ. .!. ಎಂತಹ ಬದಲಾವಣೆ ಈ ದೇಶದಲ್ಲಿ.  .!

ಉದಾಹರಣೆಗೆ ಇಂದಿನ ಮೊಬೈಲ್ ವ್ಯವಸ್ಥೆಯನ್ನೇ ಗಮನಿಸಿ ನೋಡಿ, ಇಂದಿಗೂ ಅನೇಕ ಹಳ್ಳಿಗಳಿಗೆ, ಲಕ್ಷಾಂತರ ಜನರಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ.ಆದರೆ ನಗರದ ಅದೆಷ್ಟೋ ಕಡೆಗೆ 3ಜಿ ಸೇವೆ ಬಂದು ಈಗ 4ಜಿ ಸೇವೆಯೂ ಬಂದಿದೆ.ಆದರೆ ಅದೆಷ್ಟೋ ಹಳ್ಳಿಗಳಲ್ಲಿ  ಇಂದಿಗೂ 2ಜಿ ಸೇವೆಯೇ ಬಂದಿಲ್ಲ. . !. ನಗರಕ್ಕೆ ಹಾಗೆ ಬಂದಿರುವ ಆಧುನಿಕ ಸೇವೆಗಳಿಂದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈಗ ಹೇಳುವುದು  "ಅಲ್ಲಿ  ಮನೆಗಳೇ ಇಲ್ಲ. .  ಕಾಡುಗಳೇ ಎಲ್ಲಾ. . !.". ಇಂತಹ ವಿಪರ್ಯಾಸಕ್ಕೆ ಏನೆನ್ನೋಣ.  . !.

19 ಮಾರ್ಚ್ 2016

ದೇವಸ್ಥಾನ ಮತ್ತು ವಿವಾದ. .
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಈಗ ವಿವಾದವಾಗುತ್ತಿದೆ.
ಕಾರಣ ಇಷ್ಟೇ,
ಇಡೀ ಕಾರ್ಯಕ್ರಮದ ಅತಿಥೇಯರ ಸಾಲಿನಲ್ಲಿ  ಮುಸ್ಲಿಂ ಅಧಿಕಾರಿಯೊಬ್ಬರ ಹೆಸರು ಇದೆ ಎಂಬುದು.ಈಗ ಇದು  ರಾಷ್ಟ್ರೀಯವಾಗಿ ಚರ್ಚೆಯಾಗುತ್ತಿರುವ ವಿಚಾರ.

ಈಗ ಇರುವುದು  ಎರಡು ಪ್ರಶ್ನೆ,
* ಅಧಿಕಾರಿಯ ಹೆಸರು ಇದ್ದರೆ ಏನಾಗುತ್ತದೆ ? ,
* ಹೆಸರೇ ಬೇಕು ಏಕೆ, ಹುದ್ದೆಯ ಹೆಸರು ಮಾತ್ರಾ ಸಾಲದೆ?.

ಎರಡು ಪ್ರತಿಷ್ಟೆ
* ಹೆಸರು ತೆಗೆಯಲೇಬಾರದು
* ಹೆಸರು ತೆಗೆಸಲೇಬೇಕು.

ಇದರ ಜೊತೆಗೆ ರಾಜಕೀಯದ ಆಟ ಆಡುವ ಮೂಲಕ ತಮ್ಮ ಬೇಳೆ ಬೇಯಿಸುವ ಹಾಗೂ ಸೇಡು ತೀರಿಸಿಕೊಳ್ಳುವ ಒಂದು ತಂಡ.
ಇದಿಷ್ಟೇ ಸಂಗತಿಗಳ.
ಈಗ ಬಗೆಹರಿಯದ, ಬಗೆಹರಿಸಲಾಗದ ಸಮಸ್ಯೆ ಇದೆ. ಏಕೆಂದರೆ ಇದೆಲ್ಲಾ ಅತ್ಯಂತ ಸೂಕ್ಷ್ಮ ಸಂಗತಿ.
    * *

ನಾನು ಇತ್ತೀಚೆಗಷ್ಟೇ ಕೇರಳದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದೆ.ಎಲ್ಲಾ ದೇವ್ಥಾನಗಳಲ್ಲಿ  ಕಾಣಿಸಿದ್ದು "ಹಿಂದೂಯೇತರರಿಗೆ ಪ್ರವೇಶವಿಲ್ಲ".ಇದು ಅಲ್ಲಿ ವಿವಾದವೂ ಆಗುವುದಿಲ್ಲ. ನಿಯಮ ಪಾಲಿಸಿದರೆ ಮಾತ್ರವೇ ಒಳಗೆ ಪ್ರವೇಶ.
ಅದು ಬಿಡಿ, ಶಬರಿಮಲೆ ಅಯ್ಯಪ್ಪನಿಗೆ ಅತ್ಯಂತ ಪ್ರಿಯವಾದ ಹರಿವರಾಸನಂ ಹಾಡಿದ ,ಗುರುವಾಯೂರ್ ಕೃಷ್ಣನ ಅತ್ಯಮೂಲ್ಯ ಹಾಡುಗಳನ್ನು  ಹಾಡಿದ ಕೆ.ಜೆ.ಜೇಸುದಾಸ್ ಅವರಿಗೇ ಇದುವರೆಗೆ ದೇವಸ್ಥಾನದ ಒಳಗೆ ಪ್ರವೇಶ ಸಾಧ್ಯವಾಗಿಲ್ಲ.ಆದರೆ ಇಂದಿಗೂ ಅವರು ದೇವರ ಹಾಡು ಹಾಡುತ್ತಲೇ ಇದ್ದಾರೆ. ಇಂದಿರಾಗಾಂಧಿ ಅವರಂತಹವರಿಗೂ ಕೇರಳದಲ್ಲಿ  ದೇವಸ್ಥಾನ ಪ್ರವೇಶ ಸಾಧ್ಯವಾಗಿಲ್ಲ. ಇದೆಲ್ಲಾ ಭಾರೀ ವಿವಾದ ಆಗಿಲ್ಲ.ಕೇರಳದ ಮಾಧ್ಯಮಗಳು ಈ ಬಗ್ಗೆ ಆಗಾಗ್ಗೆ ಹೇಳಿಲ್ಲ. ಅದೂ ಅಲ್ಲದೆ ಕೇರಳ ಅಂದರೆ ಅದು ಕಮ್ಯೂನಿಸ್ಟ್ ರಾಜ್ಯ.ಹಾಗಿದ್ದರೂ ವಿವಾದಗಳು ಆಗಿಲ್ಲ, ಮಾಡುವುದೂ ಇಲ್ಲ.ಕಾರಣ, ಅದು ನಂಬಿಕೆ ಹಾಗೂ ಶ್ರದ್ದೆಯ ಕೇಂದ್ರ.ಒಂದು ವಿವಾದವು  ಅನೇಕ ಮಂದಿಯ ಮೇಲೆ ಪರಿಣಾಮ ಬೀರುತ್ತದೆ.ದೇವಸ್ಥಾನ ಎಂದರೆ ಕಟ್ಟುಪಾಡುಗಳು ಅಗತ್ಯ.ಅಲ್ಲದೇ ಇದ್ದರೆ  ದೇವಸ್ಥಾನ ಭಕ್ತರ ಸಂತೆ ಅಷ್ಟೇ.
ಮುಂದೆ ಬಂದಾಗ,
ಶಬರಿಮಲೆಯಲ್ಲಿ  ಅನೇಕ ಕೇರಳ ಮಾಧ್ಯಮಗಳ ಮಾಹಿತಿ ಕೇಂದ್ರ ಕಾಣುತ್ತಿತ್ತು.ಈ ಬಗ್ಗೆ ಕೇಳಿದಾಗ ಅಲ್ಲಿಯ ಜನ ಹೇಳಿದರು, ಅತ್ಯಂತ ಹೆಚ್ಚು ಭಕ್ತಾದಿಗಳು ಬರುವ ಸಂದರ್ಭ, ಈ ಮಾಧ್ಯಮ ಕೇಂದ್ರಗಳೇ ಬಹಳಷ್ಟು ಸಮಸ್ಯೆ ನಿವಾರಣೆ ಮಾಡುತ್ತಾರೆ, ಭಕ್ತಾದಿಗಳಿಗೆ ಮಾಹಿತಿ ನೀಡುತ್ತಾರೆ.ಎಲ್ಲೂ ಗೊಂದಲ ಆಗದಂತೆ ಮಾಡುತ್ತಾರೆ ಅಂತ ಹೇಳಿದರು.ಹಾಗಂತ ಅಲ್ಲಿ ತಪ್ಪುಗಳು ಇದ್ದರೆ ಜವಾಬ್ದಾರಿಯುತವಾಗಿ ಹೇಳಿ ತೋರಿಸಿದರು, ವಿವಾದ ಮಾಡಲಿಲ್ಲ.ವಾದ ಮಂಡಿಸಲಿಲ್ಲ ಬದಲಾಗಿ ಭಕ್ತರಿಗೆ ಅನುಕೂಲವಾಗುವಂತೆ ಮಾಡಿದರು.ಹಿಂದೊಮ್ಮೆ, ಮಕರಜ್ಯೋತಿ ವಿಚಾರವಾಗಿ ಗೊಂದಲಗಳು,ಕಳೆದ ಬಾರಿ ಮಹಿಳೆಯರು  ಪ್ರವೇಶಿಸುವ ಬಗ್ಗೆ ಇಡೀ ದೇಶದಲ್ಲಿ  ವಿವಾದ ಸೃಷ್ಟಿ ಮಾಡಿದರೂ ಕಮ್ಯೂನಿಸ್ಟ್ ನಾಡಿನ ಮೀಡಿಯಾಗಳು ಎಚ್ಚರ ವಹಿಸಿದ್ದವು ಎಂದು ಶಬರಿಮಲೆಯಲ್ಲಿನ ಜನ ಹೇಳಿದರು.ಕಾರಣ ಇಷ್ಟೇ, ಅದು  ನಂಬಿಕೆಯ ಪ್ರಶ್ನೆ ಎಂದವು.
ನಾನು ಶಬರಿಮಲೆ ಯಾತ್ರೆ ಮಾಡುವ ವೇಳೆ ಗಮನಿಸಿದೆ, ಅಲ್ಲಿ ವಯೋವೃದ್ಧರು, ಅತ್ಯಂತ ಪುಟ್ಟ ಮಕ್ಕಳೂ ಬೆಟ್ಟ ಹತ್ತಿ, ದೇವರ ದರ್ಶನ ಮಾಡಿ ವಾಪಾಸಾಗುತ್ತಿದ್ದರು.ಅಂದರೆ ಅದು ಅವರ ನಂಬಿಕೆ ಪ್ರಶ್ನೆ.ನಡೆದಾಡುವ ಶಕ್ತಿ ಭಗವಂತ ನೀಡುತ್ತಾನೆ ಎಂಬ ನಂಬಿಕೆ, ವಿಶ್ವಾಸವೇ ಅವರನ್ನು ಅಷ್ಟೂ ದೊಡ್ಡ ಬೆಟ್ಟ ಹತ್ತಿಸುವಂತೆ ಮಾಡುತ್ತದೆ.

ಮೂರು ದಿನ ಕೇರಳ ದೇವಸ್ಥಾನ ಭೇಟಿ ನೀಡಿ ನಮ್ಮೂರಿಗೆ ಬಂದಾಗ,

ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ವಿವಾದ ದೊಡ್ಡದಾಗುತ್ತಲೇ ಇತ್ತು.
ಅದಕ್ಕೂ ಮುನ್ನ  ಒಂಚೂರು ಹಿಂದೆ ಹೋಗಿ, ಮೊನ್ನೆ ಮೊನ್ನೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ,ಈಗ ಪುತ್ತೂರು,ಸ್ವಲ್ಪ ಆಚೆ ನೋಡಿ, ತಿರುಪತಿ, ಶಬರಿಮಲೆ, ಕಟೀಲು, ಕೊಲ್ಲೂರು. . . .  ಹೀಗೆ ವಿವಿಧ ದೇವಸ್ಥಾನಗಳ ವಿವಾದ ಕಾಣುತ್ತದೆ.ಎಲ್ಲೂ ಕೂಡಾ ತಾರ್ಕಿಕ ಅಂತ್ಯ ಕಂಡಿಲ್ಲ.ಕಾಣುವುದೂ ಇಲ್ಲ.ವರ್ಷಕ್ಕೊಮ್ಮೆ ವಿವಾದಗಳ ಸೃಷ್ಟಿ.ಜನರಲ್ಲಿ  ಗೊಂದಲ ಅಷ್ಟೇ.ನಂಬಿಕೆ ಮೂಲ ಅಸ್ಥಿರ ಮಾಡುವ ಕೆಲಸ ಅಷ್ಟೇ.
ದೇವಸ್ಥಾನದ ಅಂದರೆ ಅದೊಂದು ನಂಬಿಕೆಯ ಪ್ರಶ್ನೆ.ಅಲ್ಲಿ ಕಂದಾಚಾರಗಳು ಇದ್ದರೆ ಎತ್ತಿ ತೋರಿಸಬೇಕು ನಿಜ.ಆದರೆ ಮಾಡಲೇಬಾರದು ಎಂದು ನಮ್ಮ ಅಭಿಪ್ರಾಯ ಅವರ ಮೇಲೆ ಹೇರುವ ಸ್ವಾತಂತ್ರ್ಯ ಯಾರಿಗಿದೆ ?. ಒಂದಷ್ಟು ಜನರಿಗೆ ಇಷ್ಟ ಇಲ್ಲದೇ ಇರಬಹುದು, ನಂಬಿಕೆ ಇಲ್ಲದೇ ಇರಬಹುದು.ಆಧರೆ ಅದಕ್ಕಿಂತ ಸಾವಿರ ಪಾಲು ಮಂದಿ ನಂಬುತ್ತಾರಲ್ಲಾ, ಅವರಿಗೆ ಮಾನಸಿಕ ನೆಮ್ಮದಿ  ಸಿಕ್ಕಿದೆಯಲ್ಲಾ, ಅದಕ್ಕೆ ಗೌರವ ನೀಡಬೇಡ್ವೇ ?.ಅವರವರ ಧಾರ್ಮಿಕ ನಂಬಿಕೆ ಅವರವರಿಗೆ ಅಷ್ಟೇ.

ಇಲ್ಲೂ ಪುತ್ತೂರಿನಲ್ಲೂ ಅದೇ ಆಗಿರುವುದು.
ಜಿಲ್ಲಾಧಿಕಾರಿ ಹೆಸರು ಹಾಕುವುದುಕ್ಕೆ ಯಾರದ್ದೂ ವಿರೋಧ ಇಲ್ಲ, ಆದರೆ ಅಲ್ಲಿ ಅಧಿಕಾರಿ ಮುಸ್ಲಿಂ ಆಗಿರುವುದರಿಂದ ದೇವಸ್ಥಾನದ ಪ್ರಸಾದ ಸೇರಿದಂತೆ ಇತರ ಕಾರ್ಯಗಳಲ್ಲಿ  ತೊಡಗಿಸಿಕೊಳ್ಳದೇ ಇರುವುದರಿಂದ ಅವಶ್ಯಕತೆ ಇದೆಯೇ ? ಎಂಬುದು  ಪ್ರಶ್ನೆ. ಈ ಹಂತದಲ್ಲಿಯೇ ಆಮಂತ್ರಣ ಪತ್ರಿಕೆ ಮರುಮದ್ರಣ ಮಾಡಿಬಹುದಿತ್ತಲ್ಲಾ ?. ಏಕೆಂದರೆ ಅದೊಂದು ಶ್ರದ್ದೆಯ ಕೇಂದ್ರ ಹಾಗಾಗಿ ಭಕ್ತಾದಿಗಳ ಶ್ರದ್ದೆ, ನಂಬಿಕೆಯ ಮೇಲೆ ಹೊಡೆತ ನೀಡಬಾರದು ಎಂದು ಅಧಿಕಾರಿಗಳಿಗೆ ಅನಿಸಲಿಲ್ವೇ? ಎಂಬುದೇ ಮೂಲಪ್ರಶ್ನೆ.
ಜಾತ್ರಾ ಉತ್ಸವಕ್ಕೆ ಆಮಂತ್ರಣ ಪತ್ರಿಕೆ ಏಕೆ ಬೇಕು ಹಾಗೂ ಮುಸ್ಲಿಂ ಅಧಿಕಾರಿ ಜಾತ್ರೆಗೆ ಆಹ್ವಾನಿಸಿದರೆ ತಪ್ಪೇನು ಎಂದು ಅನೇಕರು ಪ್ರಶ್ನಿಸುತ್ತಾರೆ.
ನಿಜ, ಆದರೆ ,ಇಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಆಡಳಿತಾಧಿಕಾರಿಗಳು ಇರುತ್ತಾರೆ ಎಂದಾದ ಮೇಲೆ ಅವರೇ ಜಾತ್ರೆಗೆ ಆಹ್ವಾನಿಸಿದರೆ  ಆಗಬಹುದಲ್ಲಾ ?. ಈ ವಿವಾದ ಮಾಡಿಸಬೇಕಾ ?. ಈಗ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ಕಾರ್ಯನಿರ್ವಹಣಾಧಿಕಾರಿ ಕಳೆದ ಬಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದ್ದಾಗ ಇಂತಹ ಕೆಲಸ ಮಾಡಿದ್ದಾರೆ, ಆಗಲೇ ವಿರೋಧ ವ್ಯಕ್ತವಾದ ಮೇಲೂ ಈಗ ಎಚ್ಚರಿಕೆ ವಹಿಸಿಕೊಂಡಿದ್ದರೆ  ಈಗ ಸಮಸ್ಯೆಯೇ ಬರುತ್ತಿರಲಿಲ್ಲ.ವಿವಾದಗಳು ಆಗುತ್ತಿರಲಿಲ್ಲ. ಅದೆಷ್ಟೋ ಜನರ ನಂಬಿಕೆಯ ಕ್ಷೇತ್ರದಲ್ಲಿ  ಇಂತಹ ವಿವಾದಗಳು ನಡೆಯಲೇಬಾರದು.ಏಕೆಂದರೆ ಇಡೀ ಜಗತ್ತು ನಿಂತಿರುವುದು  ನಂಬಿಕೆಯ ಮೇಲೆ.ಈಗಂತೂ ಇಂತಹ ನಂಬಿಕೆಗಳ ಕೇಂದ್ರವನ್ನೇ ಅಲ್ಲಾಸಿ ಇಡೀ ಸಮಾಜವನ್ನೇ ಅಸ್ಥಿರ ಮಾಡುವ ಕೆಲಸ ನಡೆಯುತ್ತಿದೆ.ಇದರಲ್ಲಿ  ಕೆಲವು ಮೀಡಿಯಾಗಳ ಪಾತ್ರವೇ ಹೆಚ್ಚು.
ಇನ್ನು  ಎಲ್ಲದಕ್ಕೂ ಕಾನೂನು ಕಡೆಗೇ ಗಮನ ನೀಡಲಾಗುತ್ತದೆ.ಇಲ್ಲಿಯೂ ಕೂಡಾ ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ. ಗೌರವಾನ್ವಿತ ನ್ಯಾಯಾಲಯದ ಎಲ್ಲಾ ತೀರ್ಪುಗಳಿಗೆ ತಲೆಬಾಗಿ, ಅವರ ಸಲಹೆಯನ್ನೂ ಗೌರವಿಸುತ್ತಾ, ಧಾರ್ಮಿಕ ಸಂಗತಿಗಳ ವಿಚಾರಕ್ಕೆ ಬಂದಾಗ ಧರ್ಮದ ಒಳಗೂ ಕೆಲವೊಂದು ಕಾನೂನು, ನಿಯಮಗಳು ಇದೆಯಲ್ಲಾ, ಅದುವೇ ದೇವಸ್ಥಾನದಲ್ಲಿ ಪರಮಶ್ರೇಷ್ಟವಾಗಬೇಕಲ್ಲಾ ?.ಗಮನಿಸಿ,ಬೇರೆ ಧರ್ಮಗಳಲ್ಲಿ  ದೇವಸ್ಥಾನಕ್ಕೆ ನೀಡುವ ಬಾಕಿ ಇದ್ದರೆ ಧಫನ ಮಾಡಲೂ ಬಿಡುವುದಿಲ್ಲ, ಧರ್ಮದ ಕಾನೂನೇ ಅಲ್ಲಿ ಮುಖ್ಯವಾಗುತ್ತದೆ.ಕೆಲವು ಧರ್ಮಗಳಿಗೆ ಅವರದೇ ಆದ ಕಾನೂನುಗಳೂ ಇದೆ.ಇದೆಲ್ಲಾ ತಪ್ಪು ಎನ್ನಲು ಆಗದು.ಹಾಗಿದ್ದರೂ ಇಲ್ಲಿ ಮಾತ್ರವೇ ಏಕೆ ವಿವಾದ ?

ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ, ಜನರು  ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ, ಸಮಾಜ ಅಸ್ತಿರವಾಗುತ್ತಿದೆ ಅಷ್ಟೇ.
ಸಮಾಜವನ್ನು ಬದಲಾಯಿಸುವ ಓಘದಲ್ಲಿ  ,ನಂಬಿಕೆ ಕಳಚಿಕೊಳ್ಳುವ ಈ ಹೊತ್ತಿನಲ್ಲಿಯೂ ಕನಸುಗಳು ಕಮರಿಹೋಗಿಲ್ಲ.- - - -  - - - - ------------------------------------------------------------------18 ಸೆಪ್ಟೆಂಬರ್ 2015

ನದಿ ಮೂಲ ಸೃಷ್ಟಿಸೋಣ. . ನದಿ ತಿರುಗಿಸೋಣ. .!                                                           (ಚಿತ್ರ - ಇಂಟರ್ನೆಟ್ ))

ಮೊನ್ನೆ ಮಿತ್ರನೊಬ್ಬ ಸಿಕ್ಕಿದ, ಆತ ಕೇಳಿದ ಪ್ರಶ್ನೆ ಇಷ್ಟೇ, ಅಲ್ಲಾ ಮಾರಾಯ, ಎತ್ತಿನಹೊಳೆ ಯೋಜನೆಯಾದ್ರೆ ನಿನಗೇನು ನಷ್ಟ?, ನಮಗೂ ಬೇರೆ ಬೇರೆ ಕಡೆಯಿಂದ ನೀರು ಬರುತ್ತಲ್ಲಾ. . .

ಪರಿಚಯಸ್ಥರೊಬ್ಬರು  ಮೊನ್ನೆ ಮಾತನಾಡುತ್ತಿದ್ದರು, ಒಂದು ಹೊಸ ನದಿಯನ್ನು ನಮಗೆ ಸೃಷ್ಟಿಸಲು ಸಾಧ್ಯವಿದೆಯಾದರೆ ನದಿ ತಿರುಗಿಸಬಹುದು, ನೀರಿನ ಮೂಲವನ್ನು  ಮರುಸೃಷ್ಟಿ ಮಾಡಬಹುದಾದರೆ ಇನ್ನೊಂದು ಯೋಜನೆ ಹಾಕಿಕೊಳ್ಳಬಹುದು, ಇದೆರಡೂ ಅಸಾಧ್ಯ ಎಂದಾದರೆ ನದಿ ತಿರುವು ಅಥವಾ ಪರಿಸರದ ಇಚ್ಚೆಗೆ ವಿರುದ್ದವಾದ ಕೆಲಸ ಮಾಡಲೇಬಾರದು.

ಮತ್ತೊಬ್ಬ ಗೆಳೆಯ ಹೇಳಿದ, ಅಲ್ಲಾರೀ, ಇಷ್ಟೊಂದು ದೊಡ್ಡ ಗಲಾಟೆ ಮಾಡೋ ಅವಶ್ಯಕತೆ ಇದಿಯಾ, ಕುಡಿಯಲು ನೀರಿಲ್ಲ, ಅನೇಕ ವರ್ಷಗಳಿಂದ ನಮ್ಮ ಗಂಟಲು ಒಣಗಿದೆ, ಕಲುಷಿತ ನೀರೇ ಗತಿಯಾಗಿದೆ, ಕ್ಲೋರೈಡ್‍ಯುಕ್ತ ನೀರೇ ಗತಿ, ಕೊಳವೆ ಬಾವಿ  700 ಅಡಿ ಹೋದರೂ ಸರಿಯಾಗಿ ನೀರಿಲ್ಲ, ಕೃಷಿ ಮಾಡಿ ಬದುಕು ಸಾಗಿಸೋದೇ ಕಷ್ಟವಾಗಿದೆ, ನಮ್ಮದೇ ನಾಡಿನ ಜನ, ಅವರಿಗೆ ನೀರು ಕೊಟ್ಟರೆ ಏನಾಗುತ್ತೆ, ಅದೇಗೋ ಮಳೆ ನೀರು ತಾನೆ?. .

ಇದೆಲ್ಲಾ ಪ್ರಶ್ನೆಗಳ ಬಳಿಕ ಎತ್ತಿನಹೊಳೆ ಯೋಜನೆ ಕಡೆಗೇ ಮನಸ್ಸು ಇಳಿಯಿತು. ಮೌನದಿಂದಲೇ ಉತ್ತರ ಹುಡುಕಹೊರಟಾಗ, ಕುಡಿಯುವ ನೀರು ವಿತರಣೆಗೆ, ಅಲ್ಲಿನ ಜನರಿಗೆ ನೀರು ನೀಡುವುದಕ್ಕೆ ವಿರೋಧ ಇಲ್ಲವೇ ಇಲ್ಲ, ಅಲ್ಲಿನ ಜನರ ಸಂಕಷ್ಟ ನೋಡಿದರೆ ಖಂಡಿತವಾಗಿಯೂ ನೀರು ನೀಡಲೇಬೇಕು. ಆದರೆ ಈ ಯೋಜನೆಯ ಬಗ್ಗೆ ಮಾತ್ರವೇ ವಿರೋಧ.ಏಕೆಂದರೆ ಇದು ಯಶಸ್ಸು ಹೇಗೆ ಸಾಧ್ಯ. .?

ಈಗ ಅವರು ಹೇಳುವುದು  ಮಳೆಗಾಲದ ನೀರು ಸರಬರಾಜು ಮಾತ್ರಾ. . !, ಆದರೆ ಈ ಯೋಜನೆಯ  ಸಮಗ್ರ ವರದಿಯಲ್ಲಿ  ಅದಕ್ಕಿಂತ ಭಿನ್ನವಾಗಿದೆ. ಈ ಬಗ್ಗೆ ಅಧಿಕೃತವಾಗಿ ಮಾತನಾಡಲು ಇನ್ನೂ ಕಾಲಾವಕಾಶ ಬೇಕು, ಏಕೆಂದರೆ ಆ ವರದಿಯ ಅಧ್ಯಯನ ನಾನಿನ್ನೂ ಮಾಡಿಲ್ಲ, ಇನ್ನೂ ಕಾಲಾವಕಾಶ ಬೇಕು. ಏಕೆಂದರೆ ವರದಿಯ ಆಳಕ್ಕೆ ಇಳಿಯಲು ಸಮಯ ಬೇಕು.ಆದರೆ ಮೇಲ್ನೋಟದ ಸಂಗತಿಯೇ ಈ ಯೋಜನೆ ಯಶಸ್ಸು ಕಾಣದು ಎಂದು ಹೇಳುತ್ತದೆ.ಮಳೆಗಾಲದ ನೀರು ಎಂದು ಹೇಳುವ ಆಳುವ ಮಂದಿ, ಅಲ್ಲಿನ ಜನರಿಗೆ 24 ಟಿಎಂಸಿ ನೀರು ಕೊಡುತ್ತೇವೆ ಎನ್ನುತ್ತಾರೆ.ಮಳೆಗಾಲ ಇಲ್ಲಿನ ಪರ್ವತದಲ್ಲಿ  ಬಿದ್ದ ನೀರನ್ನು  ಪಿಲ್ಟರ್ ಮಾಡಿ ಚಿಕ್ಕ ಅಣೆಕಟ್ಟು ಕಟ್ಟಿ ರವಾನೆ ಮಾಡುತ್ತಾರೆ.ಇದೆಲ್ಲಾ ಒಪ್ಪುವ ಮಾತೇ, ಏಕೆಂದರೆ ತಾಂತ್ರಿಕವಾಗಿ ಭಾರತ ಮುಂದುವರಿದಿದೆ.

ಈಗ ಆಳುವ ಮಂದಿ ಹೇಳುವ ಉತ್ತರ ಇಷ್ಟೇ, ನದಿ ತಿರುವು  ಮಾಡುವುದಿಲ್ಲ, ಮಳೆಗಾಲದ ಬಿದ್ದ ನೀರನ್ನು  ಮಾತ್ರವೇ ಹಾಯಿಸುವುದು, ಈ ವಿರೋಧ ಅನಗತ್ಯ ಎಂದು.ಆದರೆ ನನಗೆ ಕಾಡುವ ಪ್ರಶ್ನೆ ಎಂದರೆ, ಒಂದು ವೇಳೆ ಮಳೆ ಕಡಿಮೆಯಾದರೆ ?.ನೀರು ಸರಬರಾಜು ಹೇಗೆ ?.ಆಗ ಅಲ್ಲಿನ ಜನ ಸುಮ್ಮನಿರುತ್ತಾರೆಯೇ, ಕೆಲವು ದಿನಗಳು ಮಾತ್ರವೇ ನೀರು ಸರಬರಾಜು ಮಾಡಿ ನಂತರ ನೀರಿಲ್ಲ ಎಂದರೆ ಹೇಗೆ, ಅಲ್ಲಿನ ಜನ ಎಲ್ಲಿಗೆ ಹೋಗುವುದು ?, ಆಗ ಆಳುವ ಮಂದಿ ಮಾಡುವ ಕೆಲಸ ಏನು ?. ಈಗಾಗಲೇ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ,ಇಲ್ಲಿಯೇ ನೀರು ಇಂಗುವುದು  ಸಾಕಾಗುವುದಿಲ್ಲ  ಎಂದು ಜಲತಜ್ಞರು  ಹೇಳುತ್ತಾರೆ, ಹೀಗಾಗಿ ಬೇಸಗೆಯಲ್ಲಿ  ನೀರಿಮಟ್ಟ ತೀರಾ ಕೆಳಕ್ಕೆ ಹೋಗುತ್ತದೆ ಎನ್ನುವುದು  ಇಲ್ಲಿನ ಎಲ್ಲರಿಗೂ ಈಗ ಅನುಭವಕ್ಕೆ ಬಂದಿದೆ. ಇನ್ನೂ ಒಂದು ಮುಖ್ಯವಾದ ಅಂಶ ಎಂದರೆ, ಎತ್ತಿನ ಹೊಳೆ ಅಥವಾ ಪಶ್ಚಿಮಘಟ್ಟ ಪ್ರದೇಶದಲ್ಲಿ  ಮಳೆ ನಿರಂತರವಾಗಿರುತ್ತದೆ ಎಂದು  ಆಳುವ ಮಂದಿ ಯೋಚಿಸಿದ್ದಾರೆ, ದೂರಾಲೋಚನೆ ಮಾಡಿದ್ದಾರೆ, ನಿಜ, ಅದಕ್ಕೆ ಕಾರಣ ಇಲ್ಲಿನ ಅರಣ್ಯ ಪ್ರದೇಶ ಎಂಬುದೂ ಅವರು ಒಪ್ಪಿಕೊಳ್ಳಬೇಕಾಗುತ್ತದೆ, ಇಂತಹ ಅಲ್ಲದೇ ಇದ್ದರೂ ಕೃತಕವಾಗಿ ಅಲ್ಲೂ ಅರಣ್ಯ ಬೆಳೆಸುವ ಕೆಲಸ ಏಕೆ ಮಾಡಬಾರದು ?.ಅಲ್ಲೂ ನೀರು ಇಂಗಿಸುವ, ಕೆರೆಗಳ ಅಭಿವೃಧ್ಧಿ ಏಕೆ ಮಾಡಬಾರದು ?.ಇದನ್ನೇ ನಾನು ನದಿ ಮೂಲದ ಸೃಷ್ಟಿ ಎಂದು ಕರೆಯುತ್ತೇನೆ.
ಇದೆಲ್ಲಾ ಬಿಟ್ಟು, ಇಷ್ಟು ದೊಡ್ಡ ಮಟ್ಟದ ಅಂದರೆ ಕೋಟಿ  ಕೋಟಿಗೂ ಅಧಿಕ ಮೊತ್ತದ ಈ ಯೋಜನೆಯ ಉದ್ದೇಶ ಏನು, ಮಳೆ ಕಡಿಮೆಯಾಗುವ ಇಂದಿನ ಸಂದರ್ಭ ಇಂತಹ ಯೋಜನೆ ಏಕೆ? ಎಂಬ ಪ್ರಶ್ನೆಗೆ ಉತ್ತರಿಸಲು ಯಾರಿದ್ದಾರೆ ?.

ಹೀಗಾಗಿ ಈಗ ಈ ಯೋಜನೆಗೆ ಸಮ್ಮತಿ ಇಲ್ಲ ಏಕೆಂದರೆ, ಭವಿಷ್ಯದಲ್ಲಿ  ಎತ್ತಿನಹೊಳೆ ಮಾತ್ರವಲ್ಲ, ಇತರ ನದಿಗಳ ಮೂಲಗಳೂ, ಇತರ ಬೆಟ್ಟಗಳ ಮಳೆಗಾಲದ ನೀರೂ, ಬೇಸಗೆಯಲ್ಲಿ  ನದಿ ಮೂಲದ ನೀರೂ ಬೇಕಾಗುವುದು ನಿಶ್ಚಿತ.ಹೀಗಾದರೆ, ನಮ್ಮ ಊರಿನ ಪ್ರಮುಖ ನದಿಗಳೂ ಬೇಗನೆ ಬತ್ತಿ ಹೋಗುವುದೂ ಸತ್ಯ. ಈ ನದಿಗಳೂ ಬೇಗನೆ ಬತ್ತಿದರೆ ಅದಕ್ಕೆ ಸೇರುವ ಹೊಳೆ, ನದಿ ಪಕ್ಕದ ಬಾವಿ, ಕೆರೆಗಳಲ್ಲೂ ನೀರು ಕಡಿಮೆಯಾಗುತ್ತದೆ ಎಂದು ಹೇಳಬೇಕಾಗಿಲ್ಲ. ಕೆರೆ, ಬಾವಿಗಳಲ್ಲಿ  ನೀರು ಕಡಿಮೆಯಾದಂತೆ ಕೊಳವೆ ಬಾವಿಯ ಒಳಕ್ಕೆ ಇಳಿಯಲೇ ಬೇಕಾಗುತ್ತದೆ, ಮತ್ತಷ್ಟು ಕೊಳವೆ ಬಾವಿ ಬೇಕಾಗುತ್ತದೆ.ಆಗ ಅಂತರ್ಜಲ ಮಟ್ಟ ಇಳಿಕೆಯಾಗುತ್ತದೆ, ಸಮುದ್ರಕ್ಕೆ ಸೇರುವ ನೀರೂ ಕಡಿಮೆಯಾಗುತ್ತದೆ, ಹಿನ್ನೀರು  ಬರಲಾರಂಭಿಸುತ್ತದೆ. . .  ಹೀಗೇ ಸಮಸ್ಯೆಗಳ ಮೇಲೆ ಸಮಸ್ಯೆ ಬರಲಿದೆ. . ಇದೆಲ್ಲಾ ಭವಿಷ್ಯದ ಯೋಚನೆ ಅಷ್ಟೇ.

ಇಲ್ಲಿ  ಈಗ ಮೊದಲು ಸಂಕಷ್ಟ ಅನುಭವಿಸುವವರು  ನಗರದಮಂದಿ. ಕುಡಿಯುವ ನೀರಿಗೇ ಸಂಕಷ್ಟ ಬಂದೀತು.ಅದಕ್ಕೇ ಮೊನ್ನೆ ಮಿತ್ರರೊಬ್ಬರು ಅಣಕಿಸುತ್ತಿದ್ದರು, ಈಗ ನದಿಗಾಗಿ ಹೋರಾಟ ಮಾಡುತ್ತಿದ್ದಾರೆ,ಅಂದು ಪರಿಸರದ ಹೆಸರಿನಲ್ಲಿ  ಕೃಷಿಕರಿಗೆ, ಗ್ರಾಮೀಣ ಜನರಿಗೆ ಕಸ್ತೂರಿರಂಗನ್ ಭಯ ಇದ್ದಾಗ, ನಗರದ ಮಂದಿ ದೂರವೇ ಇದ್ದರು, ಪರಿಸರ ಉಳಿಯಬೇಕು, ಕಸ್ತೂರಿರಂಗನ್ ವರದಿ ಜಾರಿಯಾಗಬೇಕು ಎಂದು ಹೇಳಿದ್ದರು.ಈಗ ಅವರಿಗೇ ಸಂಕಷ್ಟ ಬಂದಿದೆ ಎಂದು ಹೇಳುತ್ತಿದ್ದರು.  .!,

16 ಸೆಪ್ಟೆಂಬರ್ 2015

ಗಣೇಶ ಬರುತ್ತಾನೆ. . . ಸಿದ್ದವಾಗು ಮನಸ್ಸೇ. .


                                                             (ಚಿತ್ರ- ಇಂಟರ್ನೆಟ್)

ನಾಡಿನೆಲ್ಲೆಡೆಗೆ ಗಣೇಶ ಬಂದೇ ಬಿಟ್ಟ.. . . .
ಜನರೆಲ್ಲಾ ಪೂಜೆ ಮಾಡಿದರು,ಸಂಭ್ರಮದಿಂದ ಓಡಾಡಿದರು.ಸಿಹಿ ಹಂಚಿದರು. .. .
ಮತ್ತೆ ನೀರೊಳಗೆ ಸೇರಿ ಮರೆಯಾಗಿಯೇ ಬಿಟ್ಟ.  .!.
ನಮ್ಮ ಬದುಕಿನೊಳಗೆ ಆತ ಪ್ರವೇಶಿಸಲೇ ಇಲ್ಲ. . !.

ಗಣೇಶನ ಹಬ್ಬ ಬಂದಾಗ ನನಗೆ ಯಾವಾಗಲೂ ಕಾಡುತ್ತಿದ್ದ ಮತ್ತು ಕಾಡುವ ಪ್ರಶ್ನೆ ಅದೇ , ಆತ ಏಕೆ ನಮ್ಮ ಬದುಕಿನ ಒಳಗೆ ಪ್ರವೇಶಿಸಲಿಲ್ಲ ?. ಒಂದು. . ಎರಡು. . ಮೂರು. . .ನಾಲ್ಕು. . . . ,ವಾರಗಳ ಕಾಲ ಆತನಿಗೆ ಪೂಜೆ ನಡೆಯುತ್ತದೆ,  ಜನ ಓಡಾಡುತ್ತಾರೆ, ಸಂಭ್ರಮಿಸುತ್ತಾರೆ. ಆದರೆ ಆತ ಬದುಕಿನೊಳಗೆ ಪ್ರವೇಶಿಸುವುದೇ ಇಲ್ಲ..  .!.

ಅಂದು ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಗಣೇಶ ಉತ್ಸವವನ್ನು  ಸಂಘಟನೆಗಾಗಿ ಬಳಸಿಕೊಂಡರು, ಉತ್ಸವದ ಮೂಲಕ ಸಮಾಜದ ಸಾಮರಸ್ಯದ ಕಡೆಗೆ   ಗಮನಹರಿಸಿದರು, ಬದುಕಿಗೆ ಅರ್ಥ ಕೊಡುವ ರೀತಿಯಲ್ಲಿ  ಯೋಜಿಸಿದರು. ಅಂದು ಯಶಸ್ವಿಯಾಯಿತು. ಆ ಬಳಿಕವೂ  ನಡೆದು ಬಂತು. ಇತ್ತೀಚೆಗೆ ಕೆಲವು ಸಮಯಗಳಿಂದ ಅಲ್ಲಲ್ಲಿ  ಗಣೇಶ ಬರುತ್ತಾನೆ. ಪೂಜೆ ನಡೆಯುತ್ತದೆ. ನಂತರ ಅದೇ ಜಾಗದಲ್ಲಿ  ನೋಡಿದರೆ ಸಾಮರಸ್ಯವೂ ಇಲ್ಲ, ಸಂಘಟನೆಯೂ ಇಲ್ಲ. . .!. ಆತ ಏಕೆ ಹೀಗೆ ಮಾಡಿದ?.ಅಥವಾ ಆಚರಣೆಯ ಹಿಂದೆ ಲೋಪ ಇದೆಯಾ ?.

ಗಣೇಶನ ಪ್ರತಿಷ್ಟಾಪನೆಯಾದ ಬಳಿಕ ಅಲ್ಲಿ ಅನೇಕ ಪೂಜೆ, ಆಚರಣೆ, ಕಾರ್ಯಕ್ರಮಗಳು ನಡೆಯುತ್ತದೆ, ಕೊನೆಗೆ ಗಣೇಶನ ಶೋಭಾಯಾತ್ರೆ ನಡೆಯುವ ವೇಳೆ ಅಬ್ಬರ ಶುರುವಾಗುತ್ತದೆ. ಆ ಅಬ್ಬರ ಅಗತ್ಯವೂ ಸಕಾಲಿಕವೂ ಹೌದಾದರೂ ಕೆಲವೊಮ್ಮೆ ಅಲ್ಲಿಂದಲೇ ಅಶಾಂತಿ ಉಂಟಾಗುತ್ತದೆ, ಅಂದೊಂದು  ಮೆರವಣಿಗೆ ನೋಡಿದ್ದೆ, ಅಲ್ಲಿ  ಓಡಿದ ಸ್ಥಭ್ತ ಚಿತ್ರವೊಂದು ಸಮಾಜದ ನಡುವೆಯೇ ಬಿರುಕು ಮೂಡಲು ಕಾರಣವಾಯಿತು, ಮತ್ತೊಂದು ಮೆರವಣಿಗೆಯಲ್ಲಿ  ನಡೆದ ಸಣ್ಣ ವಿಚಾರ ಇಡೀ ಊರಿನಲ್ಲಿ  ಅನೇಕ ದಿನಗಳ ಕಾಲ ಚರ್ಚೆಯಾಯಿತು, ಪೊಲೀಸ್ ಠಾಣೆಯವರೆಗೂ ಸಾಗಿತು. ಹೀಗಾಗಿ ಗಣೇಶನ ಆಚರಣೆಯನ್ನು  ಈಗ ಬದುಕಿಗೆ ಸಮೀಕರಿಸುವ ಕೆಲಸ ಮಾಡಬೇಕು.

ಗಣೇಶನ ಬಗ್ಗೆ ಆತನ ಮೊಗದ ಬಗ್ಗೆ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖ ಇದೆ.ಗಣೇಶನ ದೇಹದ ಆಕಾರವೇ ಅತ್ಯಂತ ವಿಕಾರ. ನಾವು ಈಗ ನಮ್ಮ ಬದುಕಿಗೆ ಹೊಂದಿಸಿಕೊಂಡು ನೋಡಿದರೆ, ನಮ್ಮೊಳಗೂ ವಿವಿಧ ವಿಕಾರಗಳು ಇರುತ್ತವೆ, ಭಾವನೆಗಳಲ್ಲಿ  ಶುದ್ದತೆ ಇಲ್ಲ, ಮಾತುಗಳಲ್ಲಿ ವಿಶ್ವಾಸಾರ್ಹತೆ ಇಲ್ಲ, ಅಂತರಾತ್ಮದಲ್ಲಿ ಕಶ್ಮಲಗಳು ಇವೆ, ಇದೆಲ್ಲಾ ನಮ್ಮ ಆಕಾರ.ಈ ವಿಕಾರಗಳು ನಮ್ಮಿಂದ ದೂರವಾಗುವ ಹೊತ್ತಿಗೆ ಆತ್ಮಶುದ್ದತೆ, ಪರಿಪೂರ್ಣತೆ ಒದಗುತ್ತದೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಈ ಆಕಾರಕ್ಕೆ ಶಾಂತತೆಯಿಂದ ಪೂಜೆ ನಡೆದು ,ಅಂದರೆ ಇದೆಲ್ಲಾ ವಿಕಾರಗಳ ಸಂಗ್ರಹ ಮಾಡಿ ಗಣೇಶನ ಪೂಜೆಯ ಬಳಿಕ ಮೂರ್ತಿ ವಿಸರ್ಜನೆ ಕಾರ್ಯ ನಡೆದಂತೆ , ನಮ್ಮೊಳಗಿನ ಎಲ್ಲಾ ವಿಕಾರಗಳೂ ಇದರ ಜೊತೆಗೇ ತೊಲಗಬೇಕು.ಆಗ ಬದುಕು ಪರಿಪೂರ್ಣವಾಗುತ್ತದೆ ಎಂಬುದು ಇದರ ಸಂದೇಶ ಎಂದು ನಾನು ನಂಬಿದ್ದೇನೆ.ಇನ್ನು ಗಣೇಶನ ಮೂರ್ತಿಯನ್ನು ನಮ್ಮ ಶರೀರ ಎಂದು ತಿಳಿದುಕೊಂಡರೆ. ಅದಕ್ಕೆ ಪೂಜೆ ನಡೆದು  , ಆರಾಧನೆ ನಡೆದರೂ ಅದುವೇ ಶಾಶ್ವತವಲ್ಲ, ಅದರೊಳಗೆ ಇರುವ ತತ್ತ್ವ, ಉತ್ತಮ ಕಾರ್ಯಗಳೇ ಶಾಶ್ವತ ಎನ್ನುವುದು  ಮತ್ತೊಂದು ಸಂದೇಶ. ಆಧ್ಯಾತ್ಮಿಕವಾಗಿ ತೆಗೆದುಕೊಂಡರೆ, ಕಾಲ ಉರುಳಿದಂತೆ ಮನುಷ್ಯ ರೂಪ ಬದಲಾಗುತ್ತದೆ, ಹಳೆಯ ಶರೀರ ವಿಸರ್ಜನೆಯಾಗುತ್ತದೆ, ಕೊನೆಗೆ ಉಳಿಯುವುದು  ಚೇತನ, ಜೀವಾತ್ಮ ಮಾತ್ರಾ ಎಂದು ನಾನು ನಂಬಿದ್ದೇನೆ.
ಮೌನವಾಗಿ ಯೋಚಿಸಿದಾದ,ನಾನೂ ಸೇರಿದಂತೆ ಎಲ್ಲೂ ಕೂಡಾ ಶುದ್ದತೆ ಕಾಣಿಸುತ್ತಿಲ್ಲ, ಹೀಗಾಗಿ ಗಣೇಶ ಈ ಬಾರಿ ನನ್ನ ಬದುಕಿನೊಳಗೆ ಪ್ರವೇಶಿಸಲಿ, ಎಲ್ಲರಿಗೂ ಶುಭ ಸಂದೇಶವನ್ನೇ ನೀಡುವಂತಾಗಲಿ.


07 ಸೆಪ್ಟೆಂಬರ್ 2015

ಮೆಸೇಜ್ ಮಾತಿಗೆ ಜಗಳ ಏಕೆ. .?


                                                                ( Net Photo )
ಅವರಿಬ್ಬರೊಳಗೆ ಮಾತುಕತೆಯೇ ನಿಂತು ವಾರಗಳೇ ಕಳೆದುಹೋಗಿತ್ತು, ಕಾರಣ ಕೇಳಿದರೇ ಇಬ್ಬರದೂ ಉತ್ತರ ಇಲ್ಲ.  .!. ಬಳಿಕ ತಿಳಿಯಿತು, ಅದೊಂದು ಮೆಸೇಜ್‍ನಿಂದ ಮನಸ್ಸು ಒಡೆಯಿತು. . !. ಆದರೆ ಇಬ್ಬರೂ ನಂತರ ಹೇಳುತ್ತಾರೆ. ನಾನು ಹೇಳಿದ್ದು ಒಂದು ಆತ ಅರ್ಥೈಸಿದ್ದು ಇನ್ನೊಂದು. . !. ವಿಷಯ ತಿಳಿಯಾದಾಗ ಇಬ್ಬರೂ ಮತ್ತೆ ಒಂದಾದರು.
ಅಲ್ಲಿ  ಇಬ್ಬರೂ ಚರ್ಚೆ ಮಾಡುತ್ತಿದ್ದರು, ಆ ಘಟನೆಗೆ ಹೇಗೆ ಸಹಾಯ ಮಾಡುವುದು? , ಇದು ಕೂಡಾ ಒಂದು ಮೆಸೇಜ್ ಬಗ್ಗೆ ನಡದ ಚರ್ಚೆ. ಒಂದು ಗಲಾಟೆಗೆ ಕಾರಣವಾದರೆ ಮತ್ತೊಂದು ಒಂದಾಗಿ ಸಾಗುವ ಬಗ್ಗೆ ಮಾತುಕತೆ.
ಇಂದು ಹೆಚ್ಚಿನ ಸಂದರ್ಭ ನಡೆಯುವುದೇ ಇದೇ. ಒಳ್ಳೆಯ ಉದ್ದೇಶದಿಂದ ಒಂದು ಮೆಸೇಜ್ ಕಳುಹಿಸಿದರೆ ಅದು ಮತ್ತೊಂದು ರೂಪ ಪಡೆದುಕೊಳ್ಳುತ್ತದೆ. ಆಗ ಮನಸ್ಸುಗಳು ಒಡೆಯುತ್ತದೆ. ಈಗಂತೂ ವಾಟ್ಸಪ್‍ನಲ್ಲಿ ಮೆಸೇಜ್ ಫಾರ್ವರ್ಡ್ ಕೂಡಾ ಮಾಡುತ್ತೇವೆ, ಅದು ಇನ್ನೊಂದು ಅವಾಂತರವನ್ನೇ ಸೃಷ್ಟಿಸುತ್ತದೆ. ಮೊನ್ನೆ ನನ್ನ ಮಿತ್ರ ಹೇಳುತ್ತಿದ್ದ , ಅದ್ಯಾವುದೋ ಮೆಸೇಜ್ ಫಾರ್ವರ್ಡ್ ಮಾಡಿದ್ದನಂತೆ, ಅದೇ ವಿಷಯದಿಂದ ಎರಡು ಮನೆಯವರು  ಹೊಡೆದಾಟ ಮಾಡುವ ಸ್ಥಿತಿಗೆ ಬಂದಿದ್ದರಂತೆ. ವಾಸ್ತವವಾಗಿ ಈ ಮೆಸೇಜ್ ಏನು ಎಂದು  ಓದದೇ ಫಾರ್ವರ್ಡ್ ಮಾಡಿದ್ದ. .!, ಅದೇ ದೊಡ್ಡ ಗಲಾಟೆಗೂ ಕಾರಣವಾಯಿತು. ಆದರೆ ಆ ಬಳಿಕ ನೋಡಿಲ್ಲ ಎನ್ನುವುದು ಉತ್ತರವಾಗುವುದಿಲ್ಲ, ಉದ್ದೇಶಪೂರ್ವಕವಾಗಿಯೇ ಎಂಬುದು  ಗಟ್ಟಿಯಾಗುತ್ತದೆ.ಹೀಗಾಗಿ ಈಗ ಮೆಸೇಜ್ ಮಾಡುವಾಗಲೂ ಎಚ್ಚರಿಕೆ ಬೇಕು.ಕೆಲವೊಮ್ಮೆ ನಮ್ಮ ನಿಲುವಿಗೂ, ಆ ಮೆಸೇಜ್‍ಗೂ ಯಾವುದೇ ಸಂಬಂಧ ಇರುವುದೇ ಇಲ್ಲ, ಹಾಗಿದ್ದರೂ ಮೆಸೇಜ್ ಫಾರ್ವರ್ಡ್ ಮಾಡುತ್ತೇವೆ, ಅದೊಂದು ಖುಷಿ ಅಷ್ಟೇ.
ಮೊನ್ನೆ ಹೀಗೆಯೇ ಆಯಿತು, ಅದ್ಯಾವುದೋ ವಾಟ್ಸಪ್ ಗುಂಪಿನಲ್ಲಿ  ಚರ್ಚೆ ನಡೆಯುತ್ತಿತ್ತು, ಅದನ್ನು  ಮತ್ತೊಬ್ಬ ಫೋಟೊ ತೆಗೆದು ಇನ್ನೂ ಹಲವರಿಗೆ ಕಳುಹಿಸಿದ, ತಮಾಷೆಗಾಗಿ ಗುಂಪಿನಲ್ಲಿ  ಮಾಡಿದ ಚರ್ಚೆ ಗಂಭೀರ ಸ್ವರೂಪ ಪಡೆಯಿತು. ಮಿತ್ರರೊಳಗೇ ಅಪನಂಬಿಕೆ ಶುರುವಾಯಿತು.ಹೀಗಾಗಿ ಗುಂಪು ಚರ್ಚೆ ಕೂಡ ಕಷ್ಟ, ಇನ್ನೊಂದು ಕಡೆ ಗುಂಪು ಚರ್ಚೆ ನಡೆಯುವ ವೇಳೆ ಒಬ್ಬನಿಗೆ ಕಿರಿಕಿರಿಯಾಯಿತು, ಆತ ಎಲ್ಲರಿಗೂ ಕಿರಿಕಿರಿ ನೀಡಿದ, ಬೇಕಾದು ಬೇಡದ್ದು ಎಲ್ಲವನ್ನೂ ಗುಂಪಿಗೆ ಹಾಕಿದ ಅಲ್ಲೂ ಒಡಕು ಶುರುವಾಯಿತು.. .!.
ಹೀಗೇ.  . ಈಗ ಸಮಾಜದ ಎಲ್ಲೇ ಹೋಗಲಿ ಬಿರುಕುಗಳು. ಒಬ್ಬನ ತಪ್ಪುಗಳು ಬೇಡವೆನಿಸಿದರೂ ಬೇಗ ಸಿಕ್ಕಿಬಿಡುತ್ತದೆ, ಅದಕ್ಕೆ ತೀರ್ಮಾನ ಕೂಡಾ ಆಗಿ ಬಿಡುತ್ತದೆ.ಆದರೆ ವಾಸ್ತವದಲ್ಲಿ  ಆತನ ಉದ್ದೇಶವೇ ಬೇರೆಯದೇ ಇರುತ್ತದೆ, ಮಿತ್ರನೇ ಆಗಿರುತ್ತಾನೆ, ಆದರೆ ವೇಗದ ತಂತ್ರಜ್ಞಾನ ಆತನದೇ ತಪ್ಪು  ಅಂತ ಅಂತ ಹೇಳುತ್ತದೆ, ಮನಸ್ಸು ಒಪ್ಪಿಕೊಳ್ಳುತ್ತದೆ. ವಿಶ್ಲೇಷಿಸುವ ಹಾಗೂ ಮತ್ತೆ ಪರಾಮರ್ಶಿಸುವ ಬಗ್ಗೆ ಯೋಚಿಸುವುದಿಲ್ಲ ಈಗ ಮನಸ್ಸು. . .!

03 ಸೆಪ್ಟೆಂಬರ್ 2015

ಸಂದೇಶ ಕೃಷಿ ಪರವೂ ಇರಲಿ. .ಪಕ್ಕದ ಮನೆಯಲ್ಲಿ  ಈರುಳ್ಳಿ ದಾಸ್ತಾನು,ತೆರಿಗೆ ಇಲಾಖೆ ಧಾಳಿ. .  ., ಈರುಳ್ಳಿಯೇ ಸ್ಪರ್ಧೆಗೆ ಬಹುಮಾನ. . . , ಈರುಳ್ಳಿ ಮಾಲೆಗೆ ಡಿಮ್ಯಾಂಡ್ . . .. ಹೀಗೇ ವಿವಿಧ ಮೆಸೇಜ್ ನಮಗೆಲ್ಲಾ ಬಂದೇ ಇದೆ. ಮೊನ್ನೆ ಮೊನ್ನೆ ಈರುಳ್ಳಿ ರೇಟ್ ಸಿಕ್ಕಾಪಟ್ಟೆ ಏರಿಕೆಯಾಯಿತು.ಎಲ್ಲರ ಮೊಬೈಲ್‍ಗೂ ಒಂದೊಂದು ಥರದ ಮೆಸೇಜ್, ವಿವಿಧ ಕಾರ್ಟೂನ್. ಎಲ್ಲವೂ ಧಾರಣೆ ಏರಿಕೆಯಾದ ಬಗ್ಗೆಯೇ ಇತ್ತು, ಅದರೊಳಗೆ ಒಂದು ವ್ಯಂಗ್ಯ, ತಮಾಷೆ ಅಷ್ಟೇ. ಆದರೆ ಅದರಾಚೆಗೆ ಸ್ವಲ್ಪ ಇಣುಕಿ. .  ಇದೆಲ್ಲಾ ಗ್ರಾಹಕ ಪರವಾಗಿಯೇ ಇದೆ. ರೈತರ ಪರವಾದ ಒಂದೇ ಒಂದು ಮೆಸೇಜ್ ಇತ್ತಾ. . ?.ನನ್ನೊಳಗೇ ನಾನು ಪ್ರಶ್ನೆ ಮಾಡುತ್ತಾ ಸಾಗಿದಾಗ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಈರುಳ್ಳಿ ಧಾರಣೆ ಏರಿಕೆಯಾದಾಗಂತೂ ಕೆಲವರು  ಹೇಳಿದರು , ಖರೀದಿಯೇ ಮಾಡಬೇಡಿ.. ವಿದೇಶದಲ್ಲಿ  ಹೀಗೆಯೇ ಮಾಡಿ ಧಾರಣೆ ಇಳಿಕೆ ಮಾಡಿದ್ದಾರೆ ಎಂದೂ ಹೇಳಿದ್ದರು.ಒಂದು ಕಡೆ  ನಾವು ವಿದೇಶದ ವ್ಯವಸ್ಥೆಯನ್ನು ವಿರೋಧಿಸಿತ್ತೇವೆ, ಮೋದಿ ಸರ್ಕಾರದ ನಡೆಯನ್ನು  , ರಾಜ್ಯ ಸರ್ಕಾರದ ನೀರಿಉನ್ನು ಖಂಡಿಸುತ್ತೇವೆ. ಮತ್ತೊಂದು ಕಡೆ ಅದೇ ವಿದೇಶಿ ನೀತಿ ಜಾರಿ ಮಾಡೋಣ ಅನ್ನುತ್ತೇವೆ.ಒಂದು ಕಡೆ 10 ರೂಪಾಯಿಗೆ 3 ಕೆಜಿ ಟೊಮೊಟೋ ಬೇಕು ಅನ್ನುತ್ತೇವೆ, ಇನ್ನೊಂದು ಕಡೆ ನಾವು ಬೆಳೆಯುವ ಅದ್ಯಾವುದೋ ವಸ್ತುವಿಗೆ ಎಷ್ಟೇ ರೂಪಾಯಿ ಸಿಕ್ಕರೂ ಸಾಲದು ಅನ್ನುತ್ತೇವೆ. ರೈತ ಬದುಕುಬೇಕು, ಬೆಳೆಯಬೇಕು ಅಂತ ಹೇಳುತ್ತೇವೆ , ಈ ಕಡೆ ರೇಟು ಸಿಕ್ಕಾಪಟ್ಟೆ ಅನ್ನುತ್ತೇವೆ. ಹಾಗಿದ್ದರೆ ನಮ್ಮ  ಕಾಳಜಿ ಯಾವುದು ?.

ಮೊನ್ನೆ ಈರುಳ್ಳಿ ರೇಟು ಹೆಚ್ಚಾದಾಗ ಅದನ್ನು  ಬೆಳೆಯುವ ರೈತನಿಗೆ ಇದೆಲ್ಲಾ ದಕ್ಕಿರಲಾರದು , ಆದರೆ ಕೊಂಚ ರೇಟು ಹೆಚ್ಚು ಸಿಕ್ಕಿರಬಹುದು. ಇಲ್ಲಿ ಏನನ್ನೂ ಬೆಳೆಯದ , ಕೇವಲ ಮದ್ಯವರ್ತಿಯಾದ ವ್ಯಕ್ತಿ ಸಾಕಷ್ಟು ಲಾಭ ಮಾಡಿದ್ದಾನೆ. ಇದಕ್ಕೆ ನಾವು ಈರುಳ್ಳಿ ಖರೀದಿ ಮಾಡುವುದಿಲ್ಲ ಎಂದರೆ ರೈತನಿಗೆ ಈ ರೇಟೂ ದಕ್ಕದು. ಆ ಬಳಿಕ ಸರ್ಕಾರವು  ಈ ವಿಚಾರದಲ್ಲಿ ಭಾರೀ ಕ್ರಮಕೈಗೊಂಡಂತೆ ಕಾಣಲಿಲ್ಲ.ಎಲ್ಲೇ ಆದರೂ ಮದ್ಯವರ್ತಿಗಳಿಗೆ ಲಾಭ ಮಾಡುವುದು ಇರುವುದೇ. ಆದರೆ ಅದರಲ್ಲಿ ನೇರ ಮಾರಾಟದ ವ್ಯವಸ್ಥೆ ಬಂದರೆ ಇದೆಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕೀತು, ಅದುವರೆಗೆ ಕಾಯೋಣ.
ಅಂದು ನನಗೂ ಹಾಗೆಯೇ ಆಗಿತ್ತು, ನಾನು ಬಾಳೆಗೊನೆ ಮಾರಾಟ ಮಾಡುತ್ತಿದೆ, ಅದೊಂದು ವ್ಯಾಪಾರಿಗೆ, ಅದೇ ವೇಳೆಗೆ ಖರೀದಿ ಮಾಡಲು ಒಬ್ಬರು ಬಂದರು, ನನ್ನೆದುರೇ ವ್ಯಾಪಾರವೂ ನಡೆಯಿತು. ನನ್ನ  ವಾಹನದಿಂದ ಖರೀದಿ ಮಾಡಿದ ವ್ಯಕ್ತಿಯ ವಾಹನಕ್ಕೇ ನೇರವಾಗಿ ಲೋಡ್ ಮಾಡಲಾಯಿತು. ಕೊನೆಗೆ ಎಲ್ಲಾ ವ್ಯವಹಾರ ಮುಗಿದ ಬಳಿಕ ಮತ್ತೊಂದು ಕಡೆ ಆತ ಸಿಕ್ಕಾಗ ಕೇಳಿದೆ, ಆಗ ತಿಳಿಯಿತು ಅಲ್ಲಿ  ವ್ಯಾಪಾರಿಗೆ ಸಿಕ್ಕಿದ್ದು  8 ರೂಪಾಯಿ.ಆದರೆ ನನಗೆ ನಷ್ಟವಾಗಿರಲಿಲ್ಲ.ಹೀಗಾಗಿ ಸಮಧಾನವಿತ್ತು. ಹಾಗಿದ್ದರೂ ನಾವು ಬೆಳೆದು ಕಷ್ಟಪಟ್ಟದ್ದು  ,ಆತ ಮದ್ಯವರ್ತಿಯಾಗಿದ್ದಕ್ಕೆ 8 ರೂಪಾಯಿ. ಮುಂದಿನ ಬಾರಿ ನಾನು ಈ ಬಗ್ಗೆ ಕೇಳಿದಾಗ ಆತ ಹೇಳಿದ್ದು, ನನಗೆ ಬಾಳೆಗೊನೆ ಬೇಡ. . !. ಅಂದರೆ ಮದ್ಯವರ್ತಿಗಳ ಶೋಷಣೆ ಇದ್ದದ್ದೆ.ಹಾಗೆಂದು  ಕೃಷಿಕನಿಗೆ ತಾನು ಬೆಳೆದ ಉತ್ಪನ್ನದ ಖರ್ಚು ಹಾಗೂ ಲಾಭಾಂಶ ಸಿಕ್ಕರೆ ಸಾಕು ಎಂದಷ್ಟೇ ಯೋಚಿಸಬೇಕಷ್ಟೇ.

ಧಾರಣೆ ಏರಿಕೆಯಾದಾಗ ಅದರ ಪಾಲು ಕೃಷಿಕನಿಗೂ ಲಭ್ಯವಾಗುತ್ತದೆ ನಿಜ. ಗ್ರಾಹಕರಿಗೆ ತೀರಾ ಹೊರೆಯಾಗುತ್ತದೆ ನಿಜ. ಆದರೆ ಖರೀದಿಯೇ ಮಾಡದೇ ಇದ್ದರೆ ಕೃಷಿಕನಿಗೆ ಕಹಿಯೇ. ಹಾಗಾಗಿ ನಮ್ಮ  ಸಂದೇಶ ಗ್ರಾಹಕರ ಪರ ಮಾತ್ರವಲ್ಲ  ಕೃಷಿಕರ ಪರವೂ ಇರಲಿ ಅಷ್ಟೇ.